ಸಾಗರ ಪ್ರವಾಸ : ಸೋಂದೆ ಮಠ , ಸಹಸ್ರಲಿಂಗ

ಸಾಗರ ಪ್ರವಾಸ : ಸೋಂದೆ ಮಠ , ಸಹಸ್ರಲಿಂಗ

ಚಿತ್ರ

ಸಾಗರ ಪ್ರವಾಸ : ಸೋಂದೆ ಮಠ , ಸಹಸ್ರಲಿಂಗ

ನಾವು ಮಾಡಿದ ಬಲವಂತಕ್ಕೊ ಏನೊ,. ಕೋಪವೋ, ಅಂತೂ ವಾಹನವನ್ನು ಸಾಕಷ್ಟು ನಿಧಾನವಾಗಿ ಓಡಿಸಿದ. ಅವನು ಹೇಗಾದರು ಓಡಿಸಲಿ, ಮಾರ್ಗವಂತು ತುಂಬಾ ಚೆನ್ನಾಗಿತ್ತು, ನಾವು ಚೆನ್ನಾಗಿಯೆ ಎಂಜಾಯ್ ಮಾಡಿದೆವು.
ಸೋಂದೆ ತಲುಪುವಾಗ ಎರಡುಗಂಟೆ ದಾಟಿತ್ತು. ದೇವಾಲಯ ಬಾಗಿಲಂತು ಹಾಕಿರುತ್ತದೆ, ಊಟಸಿಗುವುದೋ ಇಲ್ಲವೋ ಗೊತ್ತಿಲ್ಲ ಎಂಬ ಸಂಶಯದಲ್ಲಿಯೆ ವಾಹನದಿಂದ ಇಳಿದು ನಡೆದೆವು. 

ಸೋಂದೆ ಮಠ, 

ಒಳಗೆ ನಿರೀಕ್ಷೆಯಂತೆ ಬಾಗಿಲುಗಳು ಮುಚ್ಚಿದ್ದವು. ಆದರೆ ಊಟವನ್ನಂತು ಹಾಕುತ್ತಿದ್ದರು , ನಾವು ಮೊದಲೆ ಬರೆಸಿರಲಿಲ್ಲ, ಹೇಗೆ ಕೇಳುವುದು ಅನ್ನುವಾಗ ಅವರೇ ಕರೆದರು, ಕಡೆಯ ಪಂಕ್ತಿ ಊಟ ಆಗುತ್ತಿದೆ, ಬನ್ನಿ ಕುಳಿತುಕೊಳ್ಳಿ. ಎಂದು. ನಮಗಂತು ಸಮಾದಾನ ಹೋಗಲಿ ಹೊರಗೆ ಹೋಟೆಲಿನಲ್ಲಿ ಊಟಮಾಡುವುದು ತಪ್ಪಿತಲ್ಲ ಎಂದು. ದೂರದಿಂದ ಪ್ರಯಾಣ ಮಾಡಿ ಹೋಗಿದ್ದು, ಬೆಳಗಿನ ತಿಂಡಿ ಆಗಿ ಬಹಳ ಸಮಯವಾಗಿದ್ದು, ಸಾಕಷ್ಟು ಹಸಿವೂ ಆಗಿತ್ತು. ರುಚಿಕರವೆನಿಸುವ ಊಟ. ಮುಗಿಸಿದೆವು. 

ಊಟ ಮುಗಿಸಿದ ನಂತರ ಸುತ್ತಲೂ ಓಡಾಟ. ಅಲ್ಲಿಯ ವನಸಿರಿಯ ನಡುವೆ ಅರಳಿದ್ದ ಸುಂದರವೆನಿಸುವ ರಚನೆ ದೇವಾಲಯ. ನಡುವೆ ಇದ್ದ ನೀರಿನ ಕೋಳ . ಅದರಲ್ಲಿದ್ದ ಆಕಾಶ ಹಾಗು ಮರಗಳ ಪ್ರತಿಬಿಂಬ. ಪಕ್ಕದಲ್ಲಿಯೇ ಇದ್ದ ಬಾವಿ, ಅದಕ್ಕೆ ಇದ್ದ ಮರದ ರಾಟೆ. ಹೀಗೆ ಎಲ್ಲವನ್ನೂ ನೋಡುತ್ತ ಓಡಿಯಾಡಿದೆವು. ಮುಂದೆ ಮತ್ತೊಮ್ಮೆ ನೇರವಾಗಿ ಇಲ್ಲಿಗೇ ಬಂದು, ಒಂದೆರಡು ದಿನ ಅಲ್ಲಿ ತಂಗಿರಬೇಕೆಂದು ಮನಸಾಯಿತು. ಪ್ರಕೃತಿಯ ನಡುವೆ ಇರುವ ಸುಂದರ ಸ್ಥಳ ಸೋಂದೆ. 

ಧ್ವೈತಮತದ ಪ್ರತೀಪಾದಕ ಮದ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠ. ಸೋದೆಯಲ್ಲಿ ಈ ಮಠವನ್ನು ಕಟ್ಟಿ ಬೆಳೆಸಿದವರು ಶ್ರೀ ವಾದಿರಾಜ ತೀರ್ಥರು. ಇಲ್ಲಿ ಅವರು ನಿರ್ವಾಣಹೊಂದಿದ ಬೃಂದಾವನವೂ ಇದೆ. ಭೂವರಹಾ ದೇವಾಲಯ ಹಾಗು ಹಯಗ್ರೀವರ ದೇವಾಲಯಗಳಿದ್ದು.  
ಇಲ್ಲಿ ಭೂತರಾಜನ ಗುಡಿಯೂ ಇದ್ದು ಇಲ್ಲಿ  ನಡೆಯುವ ಭೂತಾರಾಧನೆಯು  ಪ್ರಸಿದ್ದ .

ಸಮೀಪದಲ್ಲಿ ಜೈನರ ಮಠವೂ ಇದ್ದು ಅದು ದಿಗಂಬರ ಜೈನ ಮಠವಾಗಿದೆ. ಅಲ್ಲಿ ಹೋಗದ ಕಾರಣ ಹೆಚ್ಚು ವಿವರ ತಿಳಿಯಲಿಲ್ಲ.

ಅಲ್ಲಿಂದ ಮುಂದೆ ನಮ್ಮ ಪಯಣ ಸಾಗಿದ್ದು. ಸಹಸ್ರಲಿಂಗ.

ಸಹಸ್ರಲಿಂಗ:  
ಸಿರಸಿ ತಾಲೋಕಿನ ಸಹಸ್ರಲಿಂಗ , ಶಾಲ್ಮಲ ನದಿಯ  ಪಾತ್ರದಲ್ಲಿ ಹರಡಿಹೋಗಿರುವ ಕಪ್ಪುಶಿಲೆಗಳಲ್ಲಿ ನೂರಾರು ಲಿಂಗಗಳನ್ನು ಕೆತ್ತಲಾಗಿದೆ. ದೊಡ್ಡದೊಂದು ಬಸವನನ್ನು ಸಹ ನಿಲ್ಲಿಸಲಾಗಿದೆ. 
ಆದರೆ ಎಲ್ಲವೂ ನದಿಯಲ್ಲಿ ಬಿದ್ದಿರುವ ಬಂಡೆಗಳು, ಅವಕ್ಕೆ  ಲಿಂಗ ಹಾಗು ಬಸವನ ರೂಪ ಕೊಡಲಾಗಿದೆ.
ಎಣಿಸಲು ಹೋದರೆ ನಮಗೆ ಸಿಕ್ಕಿದ್ದು ನೂರಕ್ಕೂ ಕಡಿಮೆ ಆದರೆ ಸಹಸ್ರಲಿಂಗ ಅನ್ನುತ್ತಾರಲ್ಲ ಎನ್ನುವ ಕುತೂಹಲ,ಆದರೆ ಉತ್ತರ ಹೇಳುವರು ಯಾರು ಇಲ್ಲ. 
ಮೇಲೆ ಮುದುಕನೊಬ್ಬರು ಕಲ್ಲಿನ ಬೆಂಚಿನಲ್ಲಿ ಮಲಗಿದ್ದರು.   ನಮ್ಮನ್ನೆಲ್ಲ ಕಂಡು ಎದ್ದು ಕುಳಿತರು.  
ಅಲ್ಲಿಗೆ ಬಂದ ಪ್ರಯಾಣಿಕರೊಬ್ಬರು ಅವರನ್ನು ಕೇಳುತ್ತಿದ್ದರು,

"ಇಲ್ಲಿ ಸಾವಿರ ಲಿಂಗ ಇದೆಯಾ? ಅಷ್ಟೊಂದು ಕಾಣುವುದೇ ಇಲ್ಲ" 
"ಇದೇ ಸಾರ್" ಎಂದವರು ಕನ್ನಡ ಬಿಟ್ಟು ಇಂಗ್ಲೀಶ್ ನಲ್ಲಿ ಪ್ರಾರಂಬಿಸಿದರು,
"ಎಕ್ಸಾಟ್ಲಿ ಸಾರ್ , ಐ ಹಾವ್ ಕೌಂಟೆಡ್, ಥೌಸೆಂಡ್ ಲಿಂಗಾಸ್ ಆರ್ ದೇರ್, ಐ ಆಮ್ ಶೂರ್ " 
ಹಳ್ಳಿಯ ಮುಗ್ದನಂತೆ ಕಾಣುತ್ತಿದ್ದ ಅವರನ್ನು   ಮತ್ತೆ ಕೆಣಕಿದರು, 
'ಆದರೆ ಇಲ್ಲಿ ಕಾಣೋದೆ ನಲವತ್ತು ಐವತ್ತು ಅಷ್ಟೇ ,   ಸಾವಿರ ಹೇಗೆ ಆಗುತ್ತೆ?" ಎಂದು
"ಸಾರ್, ಇಟ್ ಇಸ್ ಅಂಡರ್ ವಾಟರ್ ಸಾರ್, ೩೬೫ ಡೇಸ್ ಸೇಮ್ ವಾಟರ್, ಸೇಮ್ ಲೆವೆಲ್,  ವಾಟರ್ ನಾಟ್ ಕಮಿಂಡ್ ಡಾನ್, ಸೋ, ಯೂ ಕಾಂಟ್ ಕೌಂಟ್, ಕಮ್ ವಿತ್ ಮಿ, ಐ ಶೋ ಯೂ" 
ಎಂದರು ಆ ವಯಸ್ಸಾದ ಮುದುಕ
ಆ ಪ್ರಯಾಣಿಕರು ಗಾಭರಿಯಾದರು ಅನಿಸುತ್ತೆ, ಇವನ ಜೊತೆ ಹೊರಟರೆ ಇನ್ನು ನೀರಿನಲ್ಲಿ ಮುಳುಗಿಸಿಯಾನು ಎಂದು, ಅವರು ಸುಮ್ಮನೆ ಮುಂದೆ ಹೊರಟರು. 

ಪಕ್ಕದಲ್ಲಿಯೆ , ಹೊಸ ತಾಂತ್ರಿಕತೆಯಲ್ಲಿ ನಿರ್ಮಿಸಿರುವ  ಒಂದು ತೂಗು ಸೇತುವೆ ಇದೆ, ಅದರೆ ಮೇಲೆ ನಾವೆಲ್ಲ ಹೋಗಿ ನಿಂತರೆ, ಅದು ಸ್ವಲ್ಪ ಮಟ್ಟಿಗೆ ತೂಗಾಡುತ್ತಿತ್ತು , ಎಲ್ಲರಿಗೂ ಹೆದರಿಕೆ, ತುಕ್ಕು ಹಿಡಿಯುತ್ತಿರುವ ಕಂಬಿಗಳನ್ನು ಕಂಡಾಗ, ಎಲ್ಲಿಯಾದರು ಬಿದ್ದರೆ ಎಂದು.  ಸಹಸ್ರಲಿಂಗದಲ್ಲಿ ಫೋಟೋ ತೆಗೆಯಲು ಇದ್ದ ತೊಂದರೆ ಎಂದರೆ , ಬಿಸಿಲು ನಮಗೆ ವಿರುದ್ದವಾಗಿತ್ತು. 

ನಂತರ ಮೇಲೆ ಬಂದು ಸಮೀಪದಲ್ಲಿಯೆ ಇದ್ದ ಹೋಟೆಲಿನಲ್ಲಿ ಕಾಫಿ/ಟೀ/ ತಂಪುಪಾನೀಯಗಳು/ ಐಸ್ ಕ್ರೀಮ್ ಎಂದು ಕೈಗೆ ಸಿಕ್ಕಿದ್ದನ್ನೆಲ್ಲ ಕುಡಿದು ತಿಂದು ಕಾರ್ ಹತ್ತಿ 
"ಸಿದಾ ಸಾಗರಕ್ಕೆ " ಎಂದೆವು .

ಸಾಗರ ತಲುಪಿದಾಗ ಸಂಜೆ ಯಾಗಿತ್ತು. ನಾವು ಸ್ವಲ್ಪ ಕಾಲ ರೆಸ್ಟ್ ಪಡೆದು. ನಡೆದೇ ಹೋಗಿ ಊಟಮಾಡಿ ಬರೋಣ ಎಂದು ಹೊರಟರೆ ಕರೆಂಟ್ ಹೋಯಿತು. 
ನಾಡಿಗೆ ಕರೆಂಟ್ ಕೊಡುವ ತಾಲೋಕಿನಲ್ಲಿ ದಿನಪ್ರತಿದಿನವೂ ಬೆಳಗ್ಗೆ ಸಂಜೆ ಕರೆಂಟ್ ಹೋಗುತ್ತಲೇ ಇರುತ್ತದೆ 

ಹಾಗೆ ನಡೆಯುತ್ತ ಸುಮಾರು ಎರಡು ಕಿ.ಮೀ ದೂರವಿರುವ ಹೋಟೆಲ್ ಪವಿತ್ರ ತಲುಪಿದೆವು. 

ಅದೇನೊ ಅಲ್ಲಿ ಸಪ್ಲೈರ್‌ಗಳ ಕಿರಿಕಿರಿ, ಊಟಕ್ಕೆ ಎಂದು ಕುಳಿತ ನಮ್ಮ ಜೊತೆ ಅನಗತ್ಯ ವಾದಕ್ಕೆ ಬರುತ್ತಿದ್ದನು. ಅವನಲ್ಲಿ ಅದೇನೊ ಅಸಹನೆ ಏಕೆ ಎಂದೆ ಅರ್ಥವಾಗಲಿಲ್ಲ.

 . 

ಊಟಮುಗಿಸಿ, ಮುಖ್ಯರಸ್ತೆಯಲ್ಲಿ ಯಾವುದೋ ಪ್ರವೇಟ್ ಬಸ್ ಕಂಡೆಕ್ಟರ್ ಹತ್ತಿರ ಕೇಳಿ, ಮತ್ತೆ  ಲಾಡ್ಜ್  ಮುಂದೆ ಬಂದು ಇಳಿದೆವು. ಮರುದಿನದ ಕಾರ್ಯಕ್ರಮ ನೆನೆಸುತ್ತ, ನಿದ್ದೆಗೆ ಜಾರಿದಾಗ ಕನಸಿನಲ್ಲಿಯೂ ಬೆಳಗಿನಿಂದ ಓಡಿಯಾಡಿದ ಜಾಗಗಳೆ  ಕಣ್ಣೆದುರು ಬರುತ್ತಿದ್ದವು. 
ಪಂಪನ  ನುಡಿ ನೆನಪಿಗೆ ಬಂದಿತು ...

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ!

ಹಾಗೆಯೆ ನಿದ್ದೆ.

ಇನ್ನೂ ಇದೆ .......

ಚಿತ್ರಗಳೆಲ್ಲ : ಸೋಂದೆ ಹಾಗು ಸಹಸ್ರಲಿಂಗ ಎಂಬ ಸ್ಥಳದಲ್ಲಿ ತೆಗೆದಿರುವುದು.

Rating
No votes yet