ಸಾಗರ ಪ್ರವಾಸ : ತಲಕಲಲೇ ಬೋಟಿಂಗ್ , ಜೋಗ್ , ವರದಹಳ್ಳಿ ಮತ್ತು ಇಕ್ಕೇರಿ

ಸಾಗರ ಪ್ರವಾಸ : ತಲಕಲಲೇ ಬೋಟಿಂಗ್ , ಜೋಗ್ , ವರದಹಳ್ಳಿ ಮತ್ತು ಇಕ್ಕೇರಿ

ಚಿತ್ರ

ಸಾಗರ ಪ್ರವಾಸ :  ತಲಕಲಲೇ ಬೋಟಿಂಗ್ , ಜೋಗ್ , ವರದಹಳ್ಳಿ ಮತ್ತು  ಇಕ್ಕೇರಿ

ಮೂರನೇ ದಿನ ೧೮ ನೇ ಜನವರಿಯಂದು ಯಥಾಪ್ರಕಾರ ಬೆಳಗ್ಗೆ ಎಂಟಕ್ಕೆ ಸಿದ್ದ ನಮ್ಮ ಗುಂಪು. 
ಇಂದು ಹೆಚ್ಚು ಕಾಯಿಸದೆ ಬಂದಿಳಿಯಿತು ನಮ್ಮ ವಾಹನ. ಎಲ್ಲರೂ ಏರಿದೊಡನೆ, ಹೊಟೆಲಿಗೆ ಎಂದು ಹೊರಟೆವು,  
ಆದರೆ ನಮ್ಮ ಡ್ರೈವರ್ ಕುಮರಸ್ವಾಮಿಯವರು ನಮ್ಮ  ಹತ್ತಿರದಲ್ಲಿಯೇ ಇದ್ದ ಒಂದು ಗಣೇಶ ದೇವಾಲಯಕ್ಕೆ ಕರೆದು ಒಯ್ದರೂ.
ಅಲ್ಲಿ ಎಲ್ಲರೂ ನಮಿಸಿದೆವು,   ಮಾರಿಕಾಂಭ ಗುಡಿ ಇದೆಯಂತೆ ನಾವು ಹೋಗಲಾಗಲಿಲ್ಲ.
ಯಥಾಪ್ರಕಾರ ಮೈಸೂರುಕೆಫೆ ಹೋಟೆಲಿನಲ್ಲಿ ತಿಂಡಿ ಮುಗಿಸಿ, ಇವತ್ತು ಯಾವ ದಾರಿಗೆ ನಮ್ಮ ಪಯಣ ಎನ್ನುವಾಗ , ಡ್ರೈವರ್, 
"ನೀವು ಒಪ್ಪುವದಾದರೆ ಮೊದಲಿಗೆ ತಲಕಲಲೇ ಕೆರೆಗೆ ಬೋಟಿಂಗ್ ಹೋಗೋಣ, ಸರಿ ಎನ್ನುವದಾದರೆ ಪೋನ್ ಮಾಡುವೆ, ಅಲ್ಲಿಂದ ಜೋಗ್ ಫಾಲ್ಸ್ ' ಎಂದರು ಡ್ರೈವರ್ ಕುಮಾರಸ್ವಾಮಿ. 
ನಾವು ಸರಿ ಎಂದೆವು. 

ತಲಕಲಲೇ ಕೆರೆಗೆ (ಡ್ಯಾಮ್)

ಅವರು ದಾರಿಯಲ್ಲಿ ಯಾರು ಯಾರಿಗೋ ಫೋನ್ ಮಾಡುತ್ತಿದ್ದರು, ಇನ್ನು ಒಂದು ಘಂಟೆಯಲ್ಲಿ ಅಲ್ಲಿರುತ್ತೇವೆ , ಎಂದು ಹೇಳುತ್ತಿದ್ದರು. 
ನಮಗೆ ಅರ್ಥವಾಗಲಿಲ್ಲ ಬೋಟಿಂಗ್ ಗೆ ಹೋಗಲು ಅಷ್ಟು ಸಾರಿ ಫೋನ್ ಮಾಡಬೇಕೇಕೆ ಎಂದು. 

ಸರಿ ನಮ್ಮಲ್ಲಿ ಕೆಲವರಿಗೆ ಅನುಮಾನ ಶುರು, ಅದೋ ನೀನೆ ಎನ್ನುವರಿಲ್ಲದ ಜಾಗ ನಮ್ಮ ವಾಹನ ಹೊರತುಪಡಿಸಿ ಮತ್ತೊಂದು ವಾಹನಕಾಣುತ್ತಿಲ್ಲ. ನಮ್ಮನ್ನು ಹೊರತುಪಡಿಸಿ ಮತ್ತೆ ಜನರು ಇಲ್ಲ. ಅಲ್ಲಿ ಇಲ್ಲಿ ಓದುವ ಕೆಟ್ಟಸುದ್ದಿಗಳ ಪರಿಣಾಮ  ಕೆಲವರ ಮೇಲೆ ಸರಿಯಾಗಿಯೆ ಆಗಿತ್ತು,  ಆದರೋ ನಾನಂತು ನಿರಾಳವಾಗಿದ್ದೆ. 
ಕಾರ್ಗಲ್ ಸಮೀಪ ಚೌಡೇಶ್ವರಿ ಹಾಗು ಹನುಮಂತ ಒಟ್ಟಾಗಿ ಇರುವ  ಗುಡಿ ಒಂದಿತ್ತು. ಅಲ್ಲಿ ಇಳಿದು ನಮಿಸಿದೆವು, 
ಮತ್ತೆ ಒಳಗಿನ ರಸ್ತೆ, ಕಡೆಗೊಮ್ಮೆ ವಿಶಾಲ ಕೆರೆಯ ಪಕ್ಕದಲ್ಲಿ ಗಾಡಿ ನಿಂತಾಗ ನಮ್ಮನ್ನು ಕಾಯುತ್ತ ವ್ಯಕ್ತಿ ಒಬ್ಬ ನಿಂತಿದ್ದ.

ಅವನು ಬೋಟ್ ನಡೇಸುವ ವ್ಯಕ್ತಿ. ಬೋಟ್ ನಲ್ಲಿ ಮತ್ತೆ ನಾಲ್ವರು ಕಾಯುತ್ತಿದ್ದರು ನಮಗಾಗಿ. 
'ತಲಕಲಲೇ'  ಕೆರೆ ಲಿಂಗನ ಮಕ್ಕಿ ಜಲಾಶಯಕ್ಕೆ  ಜೊತೆಗೆ ಕಟ್ಟಿರುವ ಜಲಾಶಯ ಅಲ್ಲಿನ ನೀರಿನ ಮಟ್ಟ ಕಾಪಾಡಲು. ಕೆರೆ ಎಂದರೆ ಅದು ಚಿಕ್ಕ ಕೆರೆಯೇನು ಅಲ್ಲ. ವಿಶಾಲವಾಗಿ ಗುಡ್ಡಗಳ ನಡುವೆ, ಕಾಡಿನ ನಡುವೆ ಹರಡಿರುವ ವಿಶಾಲ ಸರೋವರ. 
ಬೋಟ್ ಹೊರಟಂತೆ ನಮಗೆಲ್ಲ ಒಂದು ಹೊಸ ಲೋಕ ತೆರೆದುಕೊಂಡಿತು. ನ್ಯಾಶನಲ್ ಜಿಯೋಗ್ರಫಿಕ್ ಚಾನಲ್ ನಲ್ಲಿ ನೋಡುವ ದೃಷ್ಯಗಳನ್ನು ಅನುಭವಿಸುತ್ತಿರುವ ಭಾವ. 
ನಡು ನಡುವೆ ಕಾಣುವು ಪುಟ್ಟ ದ್ವೀಪಗಳನ್ನು ನೋಡುವಾಗ ನನ್ನ ಮಗಳಿಗೆ ಸಿನಿಮಾ  'ಲೈಫ್ ಆಫ್ ಪೈ '  ನೆನಪು. 
ಸುಮಾರು ಒಂದು ಘಂಟೆಯಷ್ಟು ಪ್ರಯಾಣ . ನಮ್ಮ ಬೋಟ್ ನಲ್ಲಿದ್ದ ನಾಲ್ವರು ಪ್ರಯಾಣಿಕರು, ಕೆರೆಯ ಮತ್ತೊಂದು ಬದಿಗೆ ಬೆಟ್ಟದ ಬುಡದಲ್ಲಿರುವ ಗುಡಗುಂಜಿ ಎನ್ನುವ ಗ್ರಾಮಕ್ಕೆ ಹೋಗುತ್ತಿರುವರು, ಅದು ನೀರಿನಿಂದ ಆವರಿಸುವರ ಪುಟ್ಟ ಗ್ರಾಮ. ಹತ್ತು ಮನೆಗಳಿದ್ದರೆ ಹೆಚ್ಚು, ಹೊರಬರಲು ಇದ್ದ ಒಂದೇ ಒಂದು ಮಾರ್ಗ , ಇದೇ ಬೋಟ್ . ವಾರಕ್ಕೆ ಒಮ್ಮೆ ಅಥವ ಎರಡು ಬಾರಿ ಹೊರಬಂದರೆ ಅಗತ್ಯ ವಸ್ತುಗಳನ್ನು ಖರೀದಿಸಿ ಹೋಗುವರು. ಅಂತ ಕುಗ್ರಾಮ. 

ಬೋಟಿಂಗ್ ಎಂದರೆ ಸಾಮಾನ್ಯ ಒಂದು ಸುತ್ತು ಸುತ್ತಿಸಿ ಕಳಿಸುವ ಅವ ಆದರೆ ಗ್ರಾಮಸ್ಥರಿಂದಾಗಿ ನಮಗೆ ದೀರ್ಘ ಪಯಣ ಸಾಕಷ್ಟು ಖುಷಿ ಕೊಟ್ಟಿತು. 

ಬೋಟಿಂಗ್ ಮುಗಿಸಿ ಹೊರಬರುವಾಗ ನೀರಿನ ಪರಿಣಾಮ ಮನವನ್ನು ಒಂದು ಶೂನ್ಯ ಆವರಿಸಿತ್ತು. ಅಲ್ಲಿಂದ ಪುನಃ ಹೊರಟಿದ್ದು, ಜೋಗ್ ಫಾಲ್ಸ್ ಕಡೆಗೆ. 

ಜೋಗ್ ಫಾಲ್ಸ್ 

ಮಾನವನಾಗಿ ಹುಟ್ಟಿದ ಮೇಲೆ ಜೋಗದ ಗುಂಡಿ ನೋಡು ಎನ್ನುವ ರಾಜಕುಮಾರರ ಹಾಡನ್ನು ನೆನೆಯುತ್ತ, ಜೋಗ್ ಫಾಲ್ಸ್ ಸುತ್ತಾಡಿದೆವು. 
ಅಲ್ಲಿನ ರಾಜಾಪಾಯಿಂಟ್,  
ಸಪ್ಪಗಾಗಿರುವ ರಾಜಾ ರಾಣಿ, 
ಅಡಗಿರುವ ರೋರರನ ಅರ್ಭಟ, 
ಅಂದ ಹಾಗೆ ರಾಕೆಟ್ ಎಲ್ಲಿ ?  
ಎಲ್ಲವನ್ನು ನೋಡಿ ಹೊರಡೋಣವೆಂದರೆ, ಕುಮಾರಸ್ವಾಮಿ ಬಿಡಲೊಲ್ಲರು. ಮುಂಗಾರುಮಳೆಯ ಶೂಟಿಂಗ್ ಜಾಗವಂತೆ ಅದನ್ನು ತೋರಿಸಿದರು ಕರೆದೋಯ್ದು. 
ರಸ್ತೆ ಬದಿಯಲ್ಲಿ ಸೌತೆಕಾಯಿ, ಪುರಿ ಇಂತವನ್ನು ಸ್ವಲ್ಪ ತಿಂದೆವು. 

ನಂತರ ಅಲ್ಲಿಂದ ಸಾಗರದ ಸಮೀಪದ ವರದಳ್ಳಿಯ ಆಶ್ರಮಕ್ಕೆ ನಮ್ಮ ಪಯಣ. 

ವರದಳ್ಳಿ ಆಶ್ರಮ
==========
ವರದಳ್ಳಿ ಶ್ರೀದರಸ್ವಾಮಿಗಳ ಆಶ್ರಮವೆಂದರೆ ಸಾಕಷ್ಟು ಪ್ರಸಿದ್ದ. ಬೆಂಗಳೂರಿನಿಂದ ಹೊರಡುವಾಗಲೆ ಕೆಲವರು ಹೇಳಿದ್ದರು ತಪ್ಪಿಸದೆ ಹೋಗಿಬನ್ನಿ ಎಂದು. 
ಎತ್ತರದ ಬೆಟ್ಟದ ಮೇಲೆ ರೂಪಗೊಂಡಿರುವ ಆಶ್ರಮ. ಒಳಗೆ ಹೋಗುವಾಗಲೆ ನಡುಮಧ್ಯಾನಃ ಎರಡು ಗಂಟೆ ದಾಟಿತ್ತು. ಅಲ್ಲಿದ್ದವರು ಹೇಳಿದರು , ಮೊದಲು ಊಟ ಮುಗಿಸಿ ಎಂದು. ಸರಿ ಎಂದು ಒಳಹೋದೆವು. 
ಮನಸಿಗೆ ದೇಹಕ್ಕೆ ಸಮಾದಾನ ಕೊಡುವ ಸರಳ ಅಹಾರ, ಅನ್ನ ಸಾರು ಸಾಂಬರ್ ಮಜ್ಜಿಗೆ ಅಂತ . ಹೊಟ್ಟೆಗೆ ಬಿದ್ದಿದ್ದು ದೇಹ ಬಾರವೆನಿಸಿತ್ತು. ಕುಡಿಯುವ ನೀರು ಅಷ್ಟೆ ಗುಡ್ಡದ ಮೇಲಿನಿಂದ ಬರುವ ಶುದ್ದ ಜಲ. 
ಮೇಲೆ ಹತ್ತಿದ್ದರೆ ಅಲ್ಲಲ್ಲಿ ಕೇಳಿಬರುತ್ತಿರುವ ವೇದಪಾಠಗಳ ಅಭ್ಯಾಸದ ದ್ವನಿ, ಹಿಂದಿನ ಕಾಲದ ಋಷಿಮುನಿಗಳ ಆಶ್ರಮದ ನೆನಪು ತಂದಿತು. 

ಅಲ್ಲಿನ ಗುಡಿಯ ಒಳಹೊಕ್ಕಾಗ ನೀರವ ಮೌನ ಅದೆಂತದೋ ಶಾಂತಿಯನ್ನು ಮನಸಿಗೆ ತುಂಬಿತ್ತು. ಮೌನವಾಗಿಯೇ ಕುಳಿತು  ಅದೇ ಮೌನವನ್ನು ಮನಸಿಗೆ ತುಂಬಿಕೊಂಡು ಕೆಳಗಿಳಿದೆವು. 

ಅಲ್ಲಿಂದ ಹೊರಟಿದ್ದು ಇಕ್ಕೇರಿ. 

ಇಕ್ಕೇರಿ

ಇಕ್ಕೇರಿ ಕೆಳದಿಯ ಅರಸರ ಮತ್ತೊಂದು ರಾಜದಾನಿ. ಅಲ್ಲಿ ನಾಣ್ಯಗಳನ್ನು ಮುದ್ರಿಸುತ್ತಿದ್ದ ಜಾಗವೆಲ್ಲ ಇದೆ, ದೇವಾಲಯ ಸಂಪೂರ್ಣ ಹೊಯ್ಸಳ ಶೈಲಿ. ದೊಡ್ಡ ಬಸವ ಈಶ್ವರನ ಗುಡಿ. ಎಲ್ಲವು ಇದೆ ಬಸವ ಕಾಲು ಇಟ್ಟಿರುವ ಸ್ಥಳದಲ್ಲಿ ಕೆಳಗೆ ಒಂದು ಮಗು ನುಗ್ಗಬಹುದಾದಷ್ಟು ಜಾಗವಿದೆ. ಕರ್ನಾಟಕದ ಅರಸರುಗಳ, ರಾಜರುಗಳ ಗತ ವೈಭವವನ್ನು ಸಾರುವ ಸ್ಥಳಗಳು ಇವು. 
ಇಕ್ಕೇರಿಯಲ್ಲಿ ಚಿನ್ನದ ಹಾಗು ಬೆಳ್ಳಿಯ ನಾಣ್ಯಗಳು ಅಚ್ಚು ಹಾಕಲ್ಪಡುತ್ತಿದ್ದವು, ಒಂದು ಬದಿಯಲ್ಲಿ ಶಿವ ಪಾರ್ವತಿಯರಿದ್ದರೆ, ಮತ್ತೊಂದು ಬದಿಯಲ್ಲಿ ದೇವನಾಗರಿಯಲ್ಲಿ ಸದಾಶಿವ ಎಂದು ಇರುತ್ತಿತ್ತು ಎನ್ನುತ್ತದೆ, ವಿಕಿಪೀಡಿಯ.
ವರಹ, ಗದಾಣ್ಯ, ಮುಂತಾದವು ನಾಣ್ಯದ ಅಳತೆಗಳು.

ಇಕ್ಕೇರಿಯಿಂದ ಸಾಗರಕ್ಕೆ ಹೊರಟೆವು , ರಾತ್ರಿ ಬೆಂಗಳೂರಿಗೆ ಮರಳುವ ಕಾರ್ಯಕ್ರಮವಿತ್ತು. ಸಾಗರ ತಲುಪುವದರಲ್ಲಿ ಎಲ್ಲರೂ ಗಾಡಿಯಲ್ಲಿ ಒಂದು ನಿದ್ರೆ ಮಾಡಬಹುದು ಎಂದು ಯೋಚಿಸುತ್ತ ಹೊರಡುವದರಲ್ಲಿ ಸಾಗರ ಸಿಕ್ಕೆ ಬಿಟ್ಟಿತು. ಅಯ್ಯೋ ನಮ್ಮ ಅರಿವಿನಲ್ಲೆ ಇಲ್ಲ, ಇಕ್ಕೇರಿಯಿಂದ ಸಾಗರ ಬರೀ ಐದೇ ಕಿ.ಮಿ.  
ಗಾಡಿ ನಾವು ಇಳಿದಿದ್ದ ಹೋಟೆಲ್ ವರದಶ್ರೀಯ ಒಳಗೆ ಇತ್ತು. ಸಮಯ ಇನ್ನು ನಾಲಕ್ಕೂವರೆ.

ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು.

ಕೊನೆಯ ಬಾಗ :  ನಂಜುಂಡಭಟ್ಟರ ಜೊತೆ !

Rating
No votes yet

Comments

Submitted by ಗಣೇಶ Mon, 02/03/2014 - 23:42

ನಾನು ಇನ್ನೂ ಜೋಗದ‌ ಗುಂಡಿ ನೋಡಿಲ್ಲ‌ :( ಎರಡು ಮೂರು ಬಾರಿ ಹೊರಟಾಗ‌ ಅಲ್ಲಿ ನೀರಿಲ್ಲ‌, ಹೋಗುವುದು ವೇಸ್ಟ್ ಅಂತ ಕೆಲವರು ಹೇಳಿ ಜೋಗದ‌ ಭೇಟಿ ಮುಂದಕ್ಕೆ ಹೋಗುತ್ತಲೇ ಇದೆ. ಪಾರ್ಥರೆ, ಜೋಗದ‌ ಎದುರು ನಿಂತ‌ ಜೋಡಿಯ‌ ಚಿತ್ರ‌ ಚೆನ್ನಾಗಿದೆ.
"ಇಕ್ಕೇರಿ ವರಹ‌"ದ‌ ಬಗ್ಗೆ ಟಿಪ್ಪು ಕಾಲದ‌ ನಾಣ್ಯಗಳ‌ ಬಗ್ಗೆ ಹುಡುಕುವಾಗ‌ ಓದಿದ್ದೆ ( http://www.indian-coins.com/tipusultancoins/index.php/tipusultancoins/ti... ) http://www.classicalkannada.org/DataBase/KannwordHTMLS/CLASSICAL%20KANNA... ನೀವು ಇಕ್ಕೇರಿ ನಾಣ್ಯಗಳ‌ ಬಗ್ಗೆ ಹೇಳಿದಾಗ‌ ಕೊಂಡಿ ನೆನಪಾಯಿತು.

ಗಣೇಶರೆ ನಮಸ್ಕಾರ
ಜೋಗದ ಗುಂಡಿಯನ್ನು ನೋಡಿ.
ಇಕ್ಕೇರಿ ವರಹಗಳ ಬಗ್ಗೆ ವಿವರ ವಿಕಿಪೀಡಿಯದಲ್ಲಿದೆ
ಕೆಳದಿ ನಾಯಕರು ವಿಜಯನಗರದ ನಾಣ್ಯ ಪಧ್ಧತಿಯನ್ನೇ ಅನುಕರಿಸಿದ್ದಾರೆ. ನಮೂನೆ, ಚಿಹ್ನೆ ಮತ್ತು ತೂಕಗಳಲ್ಲಿ ಸಾಮ್ಯತೆಯು ಕಂಡುಬರುತ್ತದೆ. ಕೆಳದಿ ರಾಜ್ಯದ ಟಂಕಶಾಲೆಯು ಬಿದನೂರು ಮತ್ತು ಇಕ್ಕೇರಿ ಗಳಲ್ಲಿ ಇದ್ದೀತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶಾಸನಗಳು ಮತ್ತು ಬರೆಹಗಳನ್ನು ಆಧರಿಸಿ ನಾಯಕರ ಕಾಲದ ನಾಣ್ಯ ಪದ್ಧತಿಯ ಕೋಷ್ಟಕವನ್ನು ಹೀಗೆ ರಚಿಸಲಾಗಿದೆ.
ವರಹ = ಗದ್ಯಾಣ =೫೨ ಗ್ರೈನ್ = ೨ ಹೊನ್ನು
೧ ಹೊನ್ನು = ೨ ಧರಣ = ೨೬ ಗ್ರೈನ್ = ೫ ಹಣ
೩/೪ ಹಣ = ಮುಪ್ಪಾಗ = ೩.೫ ಗ್ರೈನ್
೧ ಹಣ =೨ ಅಡ್ಡ = ೫ ಗ್ರೈನ್
೧ ಅಡ್ಡ = ೨ ಹಾಗ = ೨.೫ ಗ್ರೈನ್
೧ ಹಾಗ = ೨ ಬೇಳೆ = ೧.೨೫ ಗ್ರೈನ್
೧ ಹಾಗ = ೪ ವೀಸ = ೧.೨೫ ಗ್ರೈನ್
೧ ವೀಸ = ೨ ಅರೆವೀಸ = ೦.೬ ಗ್ರೈನ್
೧ ಹಾಗ = ೧೬ ಕಾಸು = ೧.೨೫ ಗ್ರೈನ್
೧ ತಾರ = ೪ ಕಾಸು
೧ ಅರೆವೀಸ = ೨ ಕಾಸು
ಕೆಳದಿ ನಾಯಕರ ಚಿನ್ನದ ನಾಣ್ಯಗಳು ಹೆಚ್ಚು ದೊರೆತಿಲ್ಲವಾದರೂ ಪ್ರಸಿದ್ಧವಾದ ಇಕ್ಕೇರಿ ವರಹವನ್ನು ಸದಾಶಿವ ನಾಯಕನು ಅಚ್ಚುಮಾಡಿಸಿದನೆಂದು ಹೇಳಲಾಗಿದೆ. ಈ ನಮೂನೆಯ ನಾಣ್ಯದ ಒಂದು ಬದಿಯಲ್ಲಿ ಶಿವ-ಪಾರ್ವತಿಯರ ಚಿತ್ರವಿದ್ದು ಇನ್ನೊಂದು ಬದಿಯಲ್ಲಿ ಶ್ರೀ ಸದಾ/ಶಿವ ಎಂದು ನಾಗರಿ ಯಲ್ಲಿ ಬರೆಯಿಸಲಾಗಿದೆ. ಹಾಗೆಯೇ ಗಂಡಭೇರುಂಡ, ನಂದಿಯ ಚಿತ್ರಗಳೂ ನಾಣ್ಯಗಳಲ್ಲಿ ಕಂಡುಬರುತ್ತದೆ.
-
ವಂದನೆಗಳೊಡನೆ ಪಾರ್ಥಸಾರಥಿ

Submitted by kavinagaraj Tue, 02/04/2014 - 08:35

ಇಕ್ಕೇರಿಯಲ್ಲಿರುವುದು ಅಘೋರೇಶ್ವರ ದೇವಾಲಯ. ಸಾಗರದಿಂದ 4 ಕಿ,ಮೀ, ದೂರದ ಇಕ್ಕೇರಿಯಲ್ಲಿ ಮೊಲವೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋದದ್ದನ್ನು ಕಂಡು ಅದು ಗಂಡುಮೆಟ್ಟಿನ ಸ್ಥಳವೆಂದೆಣಿಸಿ ಅಲ್ಲಿ ಅರಮನೆ, ಕೋಟೆಗಳನ್ನು ಕ್ರಿ.ಶ. 1500ರ ಸುಮಾರಿನಲ್ಲಿ ಕಟ್ಟಲಾಯಿತೆಂದು ಕೆಳದಿ ನೃಪ ವಿಜಯ ಹೇಳುತ್ತದೆ. ಬಿದನೂರಿಗೆ ಕ್ರಿ.ಶ.1639ರ ಸುಮಾರಿಗೆ ಕೆಳದಿ ರಾಜಧಾನಿ ಬದಲಾವಣೆಯಾದಾಗ ಇಕ್ಕೇರಿಗೆ ಪ್ರಾಶಸ್ತ್ಯ ಕಡಿಮೆಯಾಯಿತು. ಹೈದರನ ವಶಕ್ಕೆ ಇಕ್ಕೇರಿ ಬಂದ ನಂತರದಲ್ಲಿ ಅದರ ಪ್ರಾಶಸ್ತ್ಯ ಸಂಪೂರ್ಣ ಉಡುಗಿಹೋಯಿತು.

ನಾಗರಾಜ್ ಸರ್
ಮೊಲ ನಾಯಿಯ ಕತೆ ದೇವಾಲಯದಲ್ಲಿ ಸಹ ಬರೆದಿದೆ ಓದಿದೆ, ನಾವು ಅಲ್ಲಿ ಹೋಗಿದ್ದ ಸಮಯ ಮಧ್ಯಾನಃ ಮೂರು ಘಂಟೆಯಾಗಿತ್ತು. ಹಾಗಾಗಿ ವಿವರವಾಗಿ ನೋಡಲು ಆಗಲಿಲ್ಲ. ಬಾಗಿಲು ಹಾಕಿದ್ದರು ಸಹ ಅಘೋರೇಸ್ವ್ಹರನನ್ನುನೋಡಲು ಅಡ್ಡಿಯಾಗಲಿಲ್ಲ :-)
ಮತ್ತೊಂದು ಕಡೆ ಓದಿದೆ. ಅಲ್ಲಿ ಈಗ ಅಘೋರೇಶ್ವರ ಮೂರ್ತಿ ಇಲ್ಲ. ಪೀಠ ಮಾತ್ರ ಉಳಿದಿದ್ದು, ಅದರ ಮೇಲೆ ಲಿಂಗವನ್ನು ಸ್ಥಾಪಿಸಲಾಗಿದೆ ಎಂದು.
ಇತಿಹಾಸದ ಜಾಗಗಳನ್ನು ವಿದೇಶಗಳಲ್ಲಿ ಕಾಪಡಿದಷ್ಟು ಜಾಗೃತಿಯಿಂದ ಭಾರತದಲ್ಲಿ ಕಾಪಾಡಲಾರೆವು ಅದಕ್ಕೆ ಕಾರಣ ಮೊದಲಿನಿಂದಲೂ ಇಲ್ಲಿ ಇರುವ ರಾಜಕೀಯ ಸಾಮಾಜಿಕ ಸ್ಥಿಥಿಗಳು. :-(

Submitted by Dattatri H M Tue, 02/04/2014 - 09:37

ಇಕ್ಕೇರಿಯ ದೇವಸ್ಥಾನದಲ್ಲಿ ಕೊಂಚ ಹೆಚ್ಚು ಹೊತ್ತು ನೀವು ಇರಬೇಕಿತ್ತು. ನೀವು ಒಂದೆರಡು ನಿಮಿಷ ಅಲ್ಲಿ ಧ್ಯಾನಕ್ಕೆ ಕುಳಿತರೆ, ನೀವು ಆ ಕ್ಷಣಗಳನ್ನು ಎಂದೂ ಮರೆಯುವುದಿಲ್ಲ. ಇದು ಅಲ್ಲಿ ನಾನು ಗಮನಿಸಿದ ವಿಶೇಷ. ಸಾಗರ ಸಮೀಪ ಅನೇಕ ಪ್ರಾಚೀನ ದೇವಾಲಯಗಳಿವೆ. ಆದರೆ ಇಂತಹ ಅನುಭವ ನನಗೆಲ್ಲೂ ಆಗಿಲ್ಲ. ಮತ್ತೆ ಹೋಗಲು ಸಾಧ್ಯವಾದರೆ ನೀವೂ ಗಮನಿಸಿ.

ದತ್ತಾತ್ರಿಯವರೆ ವಂದನೆಗಳು
ನಿಜ ದೇವಾಲಯ ಅತ್ಯಂತ್ಯ ಪ್ರಶಾಂತವಾಗಿತ್ತು.
ಮಧ್ಯಾನಃದ ಕಾರಣ ಜನವೂ ಇರಲಿಲ್ಲ.
ಆದರೆ ನಮ್ಮವರದೇ ಗಲಾಟೆ ಇತ್ತು :-)
ನಿಮ್ಮ ಅನುಭವ ನಿಜ, ಕೆಲವು ಜಾಗಗಳಲ್ಲಿ ಮಾತ್ರ ಮನಸಿಗೆ ವಿಶೇಷ ಅನುಭವಗಳಾಗುತ್ತವೆ. ಅದು ಆಯಾ ಸ್ಥಳದ ವಿಶೇಷ.