ಕ್ಯಾನ್ಸರ್ - ಮುಕುತಿ ಎಂದೋ ತಂದೇ?

ಕ್ಯಾನ್ಸರ್ - ಮುಕುತಿ ಎಂದೋ ತಂದೇ?

ನೀ ಕರಿಯರ ನಾಡಲ್ಲಿ ಕರಿಯನಲ್ಲ
ನೀ ಬಿಳಿಯರ ನಾಡಲ್ಲಿ ಬಿಳಿಯನಲ್ಲ
ಕಂದು ಇರಬಹುದೋ ಎನಗರಿವಿಲ್ಲ

ನೀ ಬಂಧುವಲ್ಲ, ನೀ ಬಳಗವಲ್ಲ
ನಿನ್ನ ಬಂಧು-ಬಳಗಕ್ಕೆ ಲೆಕ್ಕವೇ ಇಲ್ಲ
ನಿನ್ನ ಜಾತಿ ಮತವೋ ಭಗವಂತನೇ ಬಲ್ಲ

ನಿನಗಿಲ್ಲ ಕಂಗಳು, ಹೃದಯವಂತೂ ದೂರ
ನಿನಗಿರುವುದೇ ಕೈ-ಕಾಲ್ಗಳು ಹೀರಲು ಸಾರ
ನೀ ಬಂದೆಯಾದರೆ ಜನ ಹೆದರುವರು ಅಪಾರ

ನಿನಗಾಗಿ ಯಾರೂ ಬೇಡುವವರಿಲ್ಲ
ನೀ ಬಂದರಾರೂ ಸಹಿಸುವುದಿಲ್ಲ
ಹೇಗೆ ಬರುವೆಯೋ ಯಾರಿಗೂ ಅರಿವಿಲ್ಲ

ಕರೆಯದೇ ಬರುವ ಬೇಡದ ಅತಿಥಿ ನೀನು
ಉಪ್ಪುಂಡು ಎರಡು ಬಗೆಯುವವ ನೀನು
ಕರೆಯದೇ ಬಂದು ಕರೆದೊಯ್ಯುವವ ನೀನು

ಕೆಡುಕು ಬುದ್ದಿಯಿಂದ ಅಪ್ಪುವೆಯೇಕೆ ಸುಜನರ
ಅಪ್ಪಲಾರೆ ಏಕೋ ಕೆಡುಕೇ ತುಂಬಿಹ ಕುಜನರ
ತೊರೆದು ತೊಲಗುವೆಯೆಂದು ನಮ್ಮೀ ಭೂಜನರ

ನಿನ್ನ ಮನದಲ್ಲೇನೋ ಮನುಕುಲವೆಲ್ಲ ಒಂದೇ
ನೀ ಹೊಕ್ಕ ಮನೆಯ ಅಂಗಾಂಗಗಳೆಲ್ಲವೂ ನಿಂದೇ
ಇವನಿಂದ ನಮಗೆಲ್ಲ ಮುಕುತಿ ಎಂದೋ ತಂದೇ?
ಮುಕುತಿ ಎಂದೋ ತಂದೇ?

ಇಂದು ಫೆಬ್ರುವರಿ ನಾಲ್ಕು. ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಎಂಬ ಕ್ರೂರ ರಕ್ಕಸನಿಗೆ ಬಲಿಯಾದವರನ್ನು ನೆನೆವುದು ಒಂದಾದರೆ, ನಮ್ಮ ಜವಾಬ್ದಾರಿಯನ್ನು ಅರಿತು, ಅರಿಯದವರಿಗೆ ಅರಿವನ್ನು ಮೂಡಿಸಿ ಈ ಅರಿಯನ್ನು ಮಣಿಸುವುದು ನಮ್ಮ ಮುಂದಿರುವ ಮುಖ್ಯ ಕೆಲಸವಾಗಿದೆ.

 

Comments

Submitted by bhalle Wed, 02/05/2014 - 07:42

In reply to by kavinagaraj

ಧನ್ಯವಾದಗಳು ಕವಿಗಳೇ ... ಹೌದು, ಕ್ಯಾನ್ಸರ್'ನಿಂದ ಬೇಗ ಮುಕ್ತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ :-) ಹೊಸ ಅವಿಷ್ಕಾರಗಳನ್ನು ಎದುರುನೋಡೋಣ.

Submitted by nageshamysore Tue, 02/04/2014 - 17:42

ಭಲ್ಲೆ ಜಿ, ವಿಶ್ವ ಕ್ಯಾನ್ಸರ ದಿನದ ನೆನಪಿಗೆ ಸೂಕ್ತ ಕವನ. ಈಗೆಲ್ಲ ಆರಂಭಿಕ ಹಂತದಲ್ಲಿ ಗೊತ್ತಾದರೆ ಪರಿಹಾರಕ ಚಿಕಿತ್ಸೆ ಸಾಧ್ಯವಿದೆಯಾದರೂ, ಇದು ಇನ್ನೂ ನಂಬರ್ ಒನ್ ಕಿಲ್ಲರ್ ಅನ್ನುವುದರಲ್ಲಿ ಸಂಶಯವಿಲ್ಲ. ಪೂರ್ಣ ಪರಿಹಾರದ ಔಷದಿಯನ್ನು ಇಅಂಡು ಹಿಡಿಯುವ ದಿನ ಬಹಳ ಬೇಗ ಬರಲಿ ಎಂದು ಆಶಿಸೋಣ.

Submitted by bhalle Wed, 02/05/2014 - 08:01

In reply to by nageshamysore

ಧನ್ಯವಾದಗಳು ನಾಗೇಶರೇ
ಹಲವು ಪುಣ್ಯಾತ್ಮರು ಈ ಖಾಯಿಲೆಯಿಂದ ಗುಣಮುಖರಾಗಿದ್ದಾರೆ. ನಿಜಕ್ಕೂ ಇದು ಸಮಾಧಾನಕರ ಸುದ್ದಿ. ಶ್ರೀಘ್ರದಲ್ಲೇ ಈ ಖಾಯಿಲೆ ಭುವಿಬಿಟ್ಟು ತೊಲಗಲಿ ಎಂದು ಆಶಿಸೋಣ

Submitted by ಗಣೇಶ Tue, 02/04/2014 - 23:58

>>>ಕೆಡುಕು ಬುದ್ದಿಯಿಂದ ಅಪ್ಪುವೆಯೇಕೆ ಸುಜನರ
ಅಪ್ಪಲಾರೆ ಏಕೋ ಕೆಡುಕೇ ತುಂಬಿಹ ಕುಜನರ
ಭಲ್ಲೇಜಿ, ನನಗೂ ನಿಮ್ಮ ಹಾಗೇ ಈ ಯೋಚನೆ ಬಂದಿದೆ. ಒಳ್ಳೆಯವರಿಗೆ ಯಾಕೀ ಕಾಯಿಲೆ ಬರುವುದು?ಕೆಟ್ಟ ಜನರಿಗೆ ಮಾತ್ರ ಬರಬಾರದೇಕೆ..ಅಂತ. ಮರುಕ್ಷಣವೇ(ತೊರೆದು ತೊಲಗುವೆಯೆಂದು ನಮ್ಮೀ ಭೂಜನರ) "ದೇವ್ರೇ ಯಾರಿಗೂ ಈ ಕಾಯಿಲೆ ಬರುವುದು ಬೇಡ" ಅಂತಾಲೋಚಿಸುವೆ. ಈ ರೋಗ ಮಾತ್ರವಲ್ಲ, ಯಾವರೋಗವೂ ಬರದೇ ಸರ್ವೇ ಜನಾಃ ಸುಖಿನೋ ಭವಂತು.

Submitted by bhalle Wed, 02/05/2014 - 08:04

In reply to by ಗಣೇಶ

ಗಣೇಶ್'ಜಿ ಅನಂತ ಧನ್ಯವಾದಗಳು
ಗುಣಶೇಖರರಿಗೆ ಪ್ರತಿಕ್ರಿಯಿಸದಂತೆ ಒಂದು ಕೆಟ್ಟ ಅನುಭವ ಆ ಸಾಲು ಬರೆಸಿತು. ನಿಜ, ನಮ್ಮ ಶತ್ರುಗಳಿಗೂ ಈ ಖಾಯಿಲೆ ಬೇಡ ...