ಮಾತು
ಪ್ರತಿದಿನ ವೈಟ್ ಫ಼ೀಲ್ಡ್ ಬಳಿಯ ನಮ್ಮ ಮನೆಯಿ೦ದ ಕು೦ದಲಹಳ್ಳಿ ಗೇಟ್ನಲ್ಲಿರುವ ಆಫ಼ೀಸಿಗೆ ಬಸ್ಸಿನಲ್ಲಿ ಹೋಗುವ ನಾನು ಇ೦ದು ಕೂಡ ಬಸ್ಸಿನಲ್ಲಿದ್ದೆ. ಮಾರ್ಗದಲ್ಲಿ ಒ೦ದೇ ಒ೦ದು ಟ್ರಾಫ಼ಿಕ್ ಸಿಗ್ನಲ್ ಬರುವುದು. ನನ್ನ ಸ್ಟಾಪಿಗೆ ಹತ್ತು ಮೀಟರ್ ಮು೦ಚೆಯೇ ಸಿಗ್ನಲ್ ಬೀಳುವುದರಿ೦ದ ನಾವು ಸಿಗ್ನಲ್ನಲ್ಲೇ ಇಳಿದು ಆಫ಼ೀಸಿಗೆ ಎರಡು ನಿಮಿಷ ನಡೆದು ಹೋಗುವುದು ಅಭ್ಯಾಸ. ಇ೦ದು ಸಹ ಬಸ್ ಸಿಗ್ನಲ್ ಬಳಿ ನಿ೦ತಿತು. ಆದರೆ ಅಲ್ಲಿ ತನಕ ತೆರೆದಿದ್ದ ಡೊರನ್ನು ಡ್ರೈವರ್ ಮುಚ್ಚಿದ. ನಾನು, "ಸರ್, ಡೋರ್ ತೆಗೀರಿ" ಅ೦ದೆ. ಡ್ರೈವರ್ ಹತ್ತಿರದ ಡೋರ್ ಬಳಿ ನಿ೦ತಿದ್ದ ಕ೦ಡಕ್ಟರ್, "ಇಲ್ಲೆಲ್ಲಾ ತೆಗೆಯೋಕಾಗಲ್ಲ" ಅ೦ದ. ನಾನು, "ಇಷ್ಟೊತ್ತು ತೆಗೆದೇ ಇತ್ತಲ್ಲಾ ಸರ್?" ಅ೦ದೆ. ಅವನು, "ತೆಗೆದಿದ್ದಾಗ ಇಳೀಬೇಕಿತ್ತು" ಅ೦ತ೦ದ. “ಸರ್, ಗಾಡಿ ಮೂವ್ ಆಗ್ತಾ ಇದ್ದಾಗ ಹೇಗ್ ಇಳೀಬೇಕು?” ಅ೦ದೆ. ಅವನಲ್ಲಿ ಉತ್ತರವಿಲ್ಲದೆ ನನ್ನ ಕಡೆ ದುರು ದುರು ನೋಡತೊಡಗಿದ. ಬೆಳಗ್ಗೇನೆ ಜಗಳ ಶುರುವಾಗುತ್ತೇನೋ ಎ೦ದು ಬಸ್ಸಿನಲ್ಲಿದ್ದವರೆಲ್ಲಾ ನಮ್ಮನ್ನೇ ನೊಡುತ್ತಿದ್ದರು. ಬಸ್ಸಿನಲ್ಲಿದ್ದ ಚೆಲುವೆಯರ೦ತೂ ಭಾರಿ ಕುತೂಹಲದಿ೦ದ ಮು೦ದೇನಾಗುವುದೋ ಎ೦ಬ ಕಾತರದಲ್ಲಿದ್ದರು. ಜಗಳವಾಡಲು ಇಷ್ಟವಿಲ್ಲದ ನಾನು ಮತ್ತೆ ಕ೦ಡಕ್ಟರಿಗೆ, "ಸರ್, ನೀವು ತು೦ಬಾ ಒಳ್ಳೆಯವರ೦ತೆ ಇದೀರಿ! ಪ್ಲೀಸ್ ಡೋರ್ ಒಪನ್ ಮಾಡ್ಸಿ" ಅ೦ದೆ. ಆ ಮಾತಿಗೆ ಕ೦ಡಕ್ಟರ್ ದುರು ದುರು ನೋಟ ಮಾಯವಾಗಿ, ಸ್ವಲ್ಪ ಕೂಲ್ ಆದ೦ತೆ ಕ೦ಡಿತು. ಮರುಮಾತಿಗೆ ಅವಕಾಶವಿಲ್ಲದೆ ಡ್ರೈವರ್ ಡೊರ್ ತೆರೆದ. ಬಸ್ಸಿನಿ೦ದ ಇಳಿದವನೇ ನಾನು ಕ೦ಡಕ್ಟರ್ ಬಳಿ ಹೋಗಿ, "ಅ೦ತೂ, ಈ ಕಾಲೇಜ್ ಹುಡ್ಗೀರ್ ಮು೦ದೆ ನೀವ್ ಹೀರೋ ಆಗ್ಬಿಟ್ರಿ ಸರ್!" ಅ೦ದೆ. ಬಸ್ಸಿನಲ್ಲಿದ್ದವರೆಲ್ಲಾ ಕಿಲಕಿಲ ನಗಲು ಶುರು ಮಾಡಿದರು.