Snow-Sochi--ಸುಯೋಧನ
ನೀ ಹುಟ್ಟಿ ಬರುವ ಮುನ್ನ ಸೂಚನೆಯಾಗಿ ಮೂಡಿಸುವೆ ಚಳಿ
ನೋಡಲು ಚೆಂದ ನೀ ಮೇಲಿಂದ ಉದುರಿಸುವ ತಂಪನೆಯ ಬಿಳಿ
ನಿನ್ನ ಹುಟ್ಟೇ ಹಾಗೆ, ಅದಕ್ಕೇ ನೀ ಶೋಭಾಯಮಾನ
ಕಣ್ಣು ಕೋರೈಸುವಂತೆ ಕಂಗೊಳಿಸುವುದೇ ನಿನ್ನ ಜಾಯಮಾನ
ನೀನುದುರಿ ನೆಲಕ್ಕೆ, ಹರಡಿ ಬಿಳಿಯ ಪಲ್ಲಂಗ ಭುವಿಗೆ ತಂಪನ್ನೆರೆವೆ
ಕೆಂಪು ಸೂರ್ಯನಿಗೆ ಸೋಲುವೆ, ಬಿಳಿಯ ಚಂದ್ರನ ಕಂಡು ಹೆಪ್ಪುಗಟ್ಟುವೆ
ಕೊರೆವ ಥಂಡಿಯಲ್ಲೂ ಪಾಠ ಬಿಟ್ಟು ನಿನ್ನೊಡನಾಡುವರು ನಲಿಯುತ ಮಕ್ಕಳು
ಪೈಪೋಟಿಯ ಜಗದಲ್ಲಿ sochiಯಲ್ಲೆಲ್ಲೆಲ್ಲೂ ನಿನ್ನೊಡನಾಡುವರು ಪಟುಗಳು
ಚೆಂದದಿ ಹುಟ್ಟಿ, ಅಂದದಿ ಬೆಳಗಿ, ಗಟ್ಟಿಯಾಗಿ ಕರಕಲಾಗಿ ನೀ ಬೆಳೆವೆ
ಮೈಮೇಲೋಡಾಡುವವರನು ಜಾರಿಸುವೆ, ಬೀಳಿಸುವೆ, ಕೆಲವೊಮ್ಮೆ ಕೊಲ್ಲುವೆ !
ಪುರಾಣ ಪುರುಷರು ಮರುಜನ್ಮ ತಾಳಿಹರಂತೆ ಕಲಿಯುಗದಲ್ಲಿ ನಾನಾ ವೇಷದಿ
ಜಾರಿ ಬೀಳಿಸಿ ನಗುವ ನೀನು ಸೇಡಿನಹಕ್ಕಿ ದುರ್ಯೋಧನನೇ ಇರಬಹುದೇ ಈ ಜಗದಿ?
ಅಂದು ಪಾಂಚಾಲಿ ನಕ್ಕಳೆಂದು ಇಂದು ನೀ ನಮ್ಮನ್ನಳಿಸಿ ನಗುವುದು ಧರ್ಮವೇ?
ಓಲೈಸುವಾಗ ಸುಯೋಧನನಾಗಿ, ಕೆಡುಕು ಮಾಡಿ ದುರ್ಯೋಧನನಾಗುವುದು ತರವೇ?
ನಂಬಿ ಕಾಲಿಟ್ಟದ್ದು ಹುಸಿಯಾಗಿ ನೀ ಅಂದು ಆಗಿದ್ದೆ ಕಾಲು ಜಾರಿ ಬಿದ್ದ ಕೋಣ
’ನಂಬಿದವರಿಂದಲೇ ಬೀಳು’ ಎಂದರಿಯದೆ ಹೋದ ನೀನೊಂದು ಧೂಳಿನ ಕಣ
ಚಿತ್ರಕೃಪೆ: ಗೂಗಲ್’ನಿಂದ ಹೆಕ್ಕ ಚಿತ್ರಗಳ ಜೋಡಣೆ
Comments
ಉ: Snow-Sochi--ಸುಯೋಧನ
ಭಲ್ಲೆ ಜೀ, ಮಂಜಿನ ಅವತಾರ ಅವಾಂತರಗಳ ಜತೆಗೆ ರಷ್ಯಾದಿಂದ ಸೋಚಿಯನ್ನು ತಂದು ಸುಯೋಧನನ ಸೇಡನ್ನು ಕೊಲೇಜ್ ಮಾಡಿ ....ಏನೆಲ್ಲಾ ಕನೆಕ್ಷನ್ನಿನ ಕಸರತ್ತು :-) ಓದುತ್ತಿದ್ದಂತೆ, ಹಿಮದಲ್ಲಿ ಜಾರಿ ಬಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿರುವ ಶುಮಾಕರನ ನೆನಪಾಯ್ತು!
In reply to ಉ: Snow-Sochi--ಸುಯೋಧನ by nageshamysore
ಉ: Snow-Sochi--ಸುಯೋಧನ
ಧನ್ಯವಾದಗಳು ನಾಗೇಶ್
ಕವಿತೆ ಬರೆದು ಅದಕ್ಕೆ ಚಿತ್ರಗಳನ್ನು ಕೊಲಾಜ್ ಮಾಡುವ ಒಂದು ಹೊಸ ಪ್ರಯೋಗ ಈ ಬಾರಿ :-)
ರಷ್ಯಾದಲ್ಲಿ ಜಾರಿ ಬೀಳುವ ಜಾಣರ ಆಟವೋ ಆಟ. ಆದರೆ ಅಲ್ಲಿ ಭಾರತೀಯರ ಸುಳಿವೇ ಇಲ್ಲ ... ನಿಜ, ಇಂತಹ ಆಟಗಳು ಭಾರತದಲ್ಲಿಲ್ಲ. ಒಪ್ಪಿಕೊಳ್ಳೋಣ. ಹಾಗಾಗಿ, ಅಮೇರಿಕದಲ್ಲಿ ಸ್ನೊ-ಐಸ್'ನಿಂದ ಆಗುವ ಬೀಳುವಿಕೆಯನ್ನು ಕಂಡೂ, ರಷ್ಯಾದಲ್ಲಿ ಹೇಗಿರಬಹುದೆಂದು ಊಹಿಸಿ, ಸು(ದುರ್)ಯೋಧನನ ಎರಡು ಗುಣಗಳನ್ನು ಲಿಂಕ್ ಹೊಡೆದು, ಭಾರತೀಯರು ಎಂದೋ ಈ ಆಟ ಆಡಿದ್ದಾರೆ ಎಂದು ತೋರಿಸುವ ಯತ್ನ :-)