ನಮ್ಮೂರಿನ ಮಾಸ್ತಿಕಲ್ಲು ಹಾಗೂ ಅದರ ಮೇಲಿನ ಬರಹಗಳು...

ನಮ್ಮೂರಿನ ಮಾಸ್ತಿಕಲ್ಲು ಹಾಗೂ ಅದರ ಮೇಲಿನ ಬರಹಗಳು...

ಮೊನ್ನೆ ನಮ್ಮೂರು ಹಿಚ್ಕಡಕ್ಕೆ ಹೋಗಿದ್ದೆ. ನಮ್ಮೂರಿನ ಉತ್ತರದಿಕ್ಕಿನಲ್ಲಿ ಒಂದು ದೊಡ್ಡ ಮರವಿದ್ದು (ಗೊಂಬಳಿ ಮರ) ಅದರ ಕೆಳಗೆ ಒಂದು ಮಾಸ್ತಿಕಲ್ಲು ಇದ್ದು, ಅದನ್ನು ನಾನು ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೆನಾದರೂ ಅದರ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ. ಆದರೆ ಮೊನ್ನೆ ಊರಿಗೆ ಹೋದಾಗ ಅದನ್ನು ಮತ್ತೊಮ್ಮೆ ನೋಡುವ ಉದ್ದೇಶದಿಂದ ಮತ್ತೆ ಆ ಕಲ್ಲನ್ನು ನೋಡಲು ಹೋಗಿದ್ದೆ. ಈ ಬಾರಿ ಹೋದಾಗ ಅದನ್ನು ಸ್ವಲ್ಪ ಹತ್ತಿರದಿಂದಲೇ ನೋಡಿದ್ದೆ. ಹತ್ತಿರದಿಂದ ಗಮನಿಸಿದಾಗ ನನಗೆ ಒಮ್ಮೇಲೆ ಆಶ್ಚರ್ಯ. ಅದರ ಮೇಲ್ಬಾಗದಲ್ಲಿ ಇತರೆ ವೀರಗಲ್ಲಿನಂತೆ ಒಂದು ಲಿಂಗ,ಆ ಲಿಂಗಕ್ಕೆ ಹಾಲೆರೆಯುವ ಹೆಂಗಸು, ಲಿಂಗದ ಪಕ್ಕದಲ್ಲಿ ನಂದಿ, ನಂದಿಯ ಮೇಲ್ಬಾಗದಲ್ಲಿ ಜೈನ ಸ್ಥಂಬವಿದ್ದು. ಆದರ ಕೆಳಗೆ ಒಂದು ಶಾಸನವಿದೆ. ಶಾಸನ ಅರ್ದಂಬರ್ದ ಅಳಿಸಿ ಹೋಗಿದ್ದರಿಂದ ಅದನ್ನು ಓದಲು ಸಾದ್ಯವಾಗಲಿಲ್ಲ. ಆ ಮಾಸ್ತಿಕಲ್ಲಿನ ಮಧ್ಯಭಾಗದಲ್ಲಿ ಏಳು ಹೆಂಗಸಿನ ಕೆತ್ತನೆಯಿದ್ದು, ಬಹುತೇಕ ಇವು ಸಪ್ತ ಕನ್ನಿಕೆಯರಿರಬಹುದೆನ್ನುವುದು ನನ್ನ ಅನಿಸಿಕೆ. ಅ ಕಲ್ಲಿನ ಕೆಳಭಾಗದಲ್ಲಿ ಯೋಧ ಹಾಗೂ ಆತನ ಪತ್ನಿಯರ ಕೆತ್ತನೆಯಿರಬಹುದು. ನಮ್ಮ ಭಾಗದಲ್ಲಿ ಇತರೆ ಕೆಲವು ಕಡೆ ದೊರೆತ ಬಹಳಷ್ಟು ವೀರಗಲ್ಲುಗಳಲ್ಲಿಯ ಶಾಸನಗಳ ಪ್ರಕಾರ ಆ ಕಲ್ಲುಗಳು ವಿಜಯನಗರದ ಕಾಲಕ್ಕೆ ಸಂಬಂಧಿಸಿದ್ದು, ನಮ್ಮೂರಿನ ವೀರಗಲ್ಲು ಕೂಡ ಆ ಇತರೆ ವೀರಗಲ್ಲಿನಂತೆಯೇ ಇರುವುದರಿಂದ ಬಹುಷಃ ನಮ್ಮೂರಿನ ವೀರಗಲ್ಲು ಕೂಡ ಆ ಕಾಲದ್ದೇ ಇರಬಹುದು. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾಕಷ್ಟು ಮಹಾಸತಿ ವೀರಗಲ್ಲುಗಳು ಇವೆ, ಕೆಲವು ವೀರಗಲ್ಲುಗಳು ಸಿಕ್ಕಿವೆ, ಕೆಲವು ವೀರಗಲ್ಲುಗಳು ಭೂಮಿಯಲ್ಲಿ ಹುದುಗಿ ಹೋಗಿವೆ. ಅಂತಹ ವೀರಗಲ್ಲುಗಳನ್ನು ಅಭ್ಯಸಿಸಿದರೆ ಬಹುಷಃ ನಮ್ಮ ಹಳ್ಳಿಗಳ ಇತಿಹಾಸದ ಮಾಹಿತಿಯನ್ನು ಸಂಗ್ರಹಿಸುವುದು ಕಷ್ಟವಾಗಲಾರದು ಎನ್ನುವುದು ನನ್ನ ಅನಿಸಿಕೆ.

 

ಚಿತ್ರಗಳಿಗಾಗಿ ಈ ಕೆಳಗಿನ ಲಿಂಕ್ ಅನ್ನು ನೋಡಿ.

http://www.hichkadmanju.in/2014/02/blog-post_9674.html

 

--ಮಂಜು ಹಿಚ್ಕಡ್ 

Rating
No votes yet

Comments

Submitted by H A Patil Fri, 02/07/2014 - 14:27

ಮಂಜು ಹಿಷ್ಕಡರವರಿಗೆ ವಂದನೆಗಳು
ನಿಮ್ಮ ಊರ ಹತ್ತಿರದ ಮಾಸತಿಕಲ್ಲಿನ ಬಗೆಗೆ ನಿಮಗಿರುವ ಆಸಕ್ತಿ ನನಗೆ ಸಂತಸ ತಂದಿದೆ, ಈ ವಿಷಯವನ್ನು ನಿಮ್ಮ ಸಮೀಪದ ವಿಶ್ವ ವಿದ್ಯಾಲಯದ ಗಮನಕ್ಕೆ ತಂದರೆ ಅದರ ಬಗೆಗೆ ಹೆಚ್ಚು ತಿಳಿಯಲು ಸಾಧ್ಯವಾಗಬಹುದು ಎಂದು ನನ್ನ ಅನಿಸಿಕೆ. ಸಪ್ತ ಮಾತೃಕೆಯರಿರುವ ಆ ಮಾಸತಿಕಲ್ಲು ನಿಮ್ಮೂರ ಗತ ಇತಿಹಾಸದ ಅರಿಯುವಿಕೆಗೆ ಸಹಾಯವಾಗಬಹುದು. ಈ ಸಂಧರ್ಭದಲ್ಲಿ ಕುವೆಂಪುರವರ ಶಿಲಾಭೇರಿ ಎನ್ನುವ ಕವನ ನೆನಪಿಗೆ ಬರುತ್ತಿದೆ. ಕೂಗುತಿದೆ ಕಲ್ಲು ಕಿವಿಯಾರೆ ಕೇಳಿದಿರಾ ಎಂದೇನೂ ಪ್ರಾರಂಭವಾಗುವ ಈ ಕವನ ತನ್ನೆಲ್ಲ ಓಘ ದೊಡನೆ ಮೈದುಂಬಿ ಕೊಳ್ಳುತ್ತ ....ಇಲ್ಲಿ ನಾ ಬಲಿಯಾದೆ ಹೆಬ್ಬಲಿಯೊಡನೆ ಕಾದೆ ತಬ್ಬಲಿತನವ ತಡೆದು ಕರುಗೆ ತಾಯ್ವೋದೆ, ಹಗೆಯಿರಿಯುತಿಲ್ಲಿ ಬಿದ್ದೆ ಮಿತ್ತವನು ಗೆದ್ದೆ ಇಲ್ಲಿ ನಾಡಿಂಗಾಗಿ ಅಲ್ಲಿ ದೇಶಕ್ಕಾಗಿ ಎಲ್ಲಿ ಕಣ್ಣಿಡಲಲ್ಲಿ ಎಲ್ಲಿ ಕಿವಿಯಿಡಲಲ್ಲಿ ಭೋರಿಡುತಿದೆ ಶಿಲಾಭೇರಿ ಪ್ರಾಣ ಸಂಚಾರಿ ಎನ್ನುವ ಕವನ ನೆನಪಿಗೆ ಬಂತು. ನಿಮ್ಮ ಬರಹ ಅದನೆಲ್ಲ ಜ್ಙಾಫಿಸಿತು. ಧನ್ಯವಾದಗಳು.

ನಿಮ್ಮ ಪ್ರೋತ್ಸಾಹಕ ಮಾತುಗಳಿಗೆ ಧನ್ಯವಾದಗಳು. ನೀವು ಹೇಳಿದ ಹಾಗೆ ಅದರ ಬಗ್ಗೆ ಪ್ರಯತ್ನಿಸುತ್ತೇನೆ.

Submitted by ಗಣೇಶ Sat, 02/08/2014 - 00:02

ಮೂಲೆಯಲ್ಲಿದ್ದ ಮಾಸ್ತಿಕಲ್ಲು ..ಹಳ್ಳಿಹಳ್ಳಿಯ ಜನವೂ ಹೀಗೇ ತಮ್ಮೂರಿನಲ್ಲಿರುವ ಮಾಸ್ತಿಕಲ್ಲಿನ ಮಾಹಿತಿ ಸಂಗ್ರಹಿಸುವುದು ಒಳ್ಳೆಯದು.http://karnatakaitihasaacademy.org/karnataka-epigraphy/