DLI ಪುಸ್ತಕನಿಧಿ‍ - ‍ ‍‍ ಮಾಸ್ತಿಯವರ‌ ಭಾರತತೀರ್ಥ‌ ‍ (ಮಹಾ)ಭಾರತದ‌ ಸಾರಸಂಗ್ರಹ‌

DLI ಪುಸ್ತಕನಿಧಿ‍ - ‍ ‍‍ ಮಾಸ್ತಿಯವರ‌ ಭಾರತತೀರ್ಥ‌ ‍ (ಮಹಾ)ಭಾರತದ‌ ಸಾರಸಂಗ್ರಹ‌

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು "ಆದಿಕವಿ ವಾಲ್ಮೀಕಿ" ಪುಸ್ತಕದಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಪ್ರಯತ್ನ ಮಾಡಿರುವಂತೆ "ಭಾರತತೀರ್ಥ" ಪುಸ್ತಕದಲ್ಲಿ ಮಹಾಭಾರತದ ಸಾರವನ್ನು ಸಂಗ್ರಹಿಸಲು ಪ್ರಯತ್ನಮಾಡಿದ್ದಾರೆ.  ಈ ಎರಡೂ ಸಂದರ್ಭಗಳಲ್ಲಿ ವಿಚಾರಯುಕ್ತವಾದ ಶೃದ್ಧೆ ಮತ್ತು  ವಿಚಾರದಿಂದ ಹುಟ್ಟಿದ  ಭಕ್ತಿ ಮನೋಧರ್ಮ ಅವರದು. ಇದರಿಂದ ನಮ್ಮ ಜನಾಂಗದ ಮುಂಬರಿವಿಗೆ ಸಾಧಕವಾದೀತು ಎಂಬುದು ಅವರ ಆಶೆ.

ಅವರ ಅಭಿಪ್ರಾಯದಲ್ಲಿ ಭರತ ವರ್ಷದ ಪೂರ್ವಾರ್ಜಿತ ಸಂಪತ್ತಿನಲ್ಲಿ ರಾಮಾಯಣ ಮತ್ತು ಮಹಾಭಾರತಗಳು ಬಹುಮುಖ್ಯವಾದ ಸಂಪತ್ತುಗಳು. ರಾಮಾಯಣ ಈಗ ಧರ್ಮಗ್ರಂಥವಾಗಿದೆ . ಅದು ಹುಟ್ಟಿದಾಗ ಅದು ಬಹುಶ: ಕಾವ್ಯ ಮಾತ್ರ ಆಗಿದ್ದಿತು.  ಕೃತಿಯು ಉನ್ನತ ತತ್ತ್ವಗಳನ್ನು ಉಪದೇಶಿಸಿದ ಕಾರಣದಿಂದಲೂ ಅದರ  ನಾಯಕನು ಉನ್ನತ ಜೀವನದಿಂದ ಒಬ್ಬ ಅವತಾರಪುರುಷನೆಂದು ಪರಿಗಣಿತನಾದದ್ದರಿಂದಲೂ ಗ್ರಂಥವು ಕಾವ್ಯತ್ವದಿಂದ ಒಂದು ಮತಗ್ರಂಥದ ಸ್ಥಾನಕ್ಕೆ ಏರಿತು ಅಥವಾ ಇಳಿಯಿತು. ಏಕೆಂದರೆ ಕೆಲವರು ಮತಗ್ರಂಥವೆಂದು ಅದಕ್ಕೆ ಹೆಚ್ಚಿನ ಮರ್ಯಾದೆಯನ್ನು ಕೊಟ್ಟಂತೆ ಅದು ಗ್ರಂಥವೇ ಅಲ್ಲ ಎಂದು ಅನೇಕರು ಕಡೆಗಣಿಸಿದರು. ಆದರೆ ಮಹಾಭಾರತವು ಮತ್ತೊಬ್ಬ ಅವತಾರಪುರುಷ-ಕೃಷ್ಣನ ಕತೆಯನ್ನು ಒಳಗೊಂಡಿರುವುದಾದರೂ  ಕೇವಲ ಅವನ ಚರಿತ್ರೆ ಆಗಲಿಲ್ಲ , ಅನೇಕ ವ್ಯವಹಾರ ಜ್ಞಾನದ ಸಂಗತಿಗಳಿರುವುದರಿಂದ ಎಷ್ಟೇ ಧರ್ಮವನ್ನು ಉಪದೇಶಿಸಿದರೂ ಲೌಕಿಕ ಗ್ರಂಥವೆಂಬಂತೆ ಜನರಿಗೆ ಪ್ರಿಯವಾಗಿದೆ.

ಮೂಲ ಭಾರತವು ೨೪೦೦೦ ಶ್ಲೋಕಗಳದ್ದು , ಇದ್ದು ಮಹಾಭಾರತದ ಅನೇಕ ಪಾಠಗಳೂ ಇದ್ದು , ಮೂಲ ಭಾರತಕ್ಕೆ  ನಂತರ ಇತರರು  ಸೇರಿಸಿದ ಭಾಗಗಳನ್ನು ಗುರುತಿಸಬಹುದಾಗಿದೆ, ಮಹಾಭಾರತದ ಸಾರವನ್ನು  ಗ್ರಹಿಸಬೇಕಾದರೆ ಇವನ್ನು  ಬಿಟ್ಟು ಬಿಡಬೇಕು ಎನ್ನುತ್ತಾರೆ ಮಾಸ್ತಿಯವರು.
ಮೊದಲಿಗೆ ಮಹಾಭಾರತದ ಕತೆಯನ್ನು ಸಂಕ್ಷಿಪ್ತವಾಗಿ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ’ಯಾವ ಕಾರಣಕ್ಕೂ ಧರ್ಮವನ್ನು ಮೀರಿ ನಡೆಯತಕ್ಕದ್ದಲ್ಲ’ ಎಂದು ವ್ಯಾಸಮಹರ್ಷಿಯು ಕೊನೆಯಲ್ಲಿ ಹೇಳಿದ್ದಾನೆ.  ಆದರೆ ಧರ್ಮ ಎನ್ನುವುದು ಅನೇಕ ಜೀವನಗಳಲ್ಲಿ ಬೇರೆ ಬೇರೆ ಪದಾರ್ಥ ಆಗುತ್ತದೆ. ಭಾರತದ ಕಥೆ ಬಹುರೀತಿಯ ಜನ ಬಹುರೀತಿಯ ಸನ್ನಿವೇಶಗಳಲ್ಲಿ ಹೇಗೆ ನಡೆದುಕೊಂಡರು ಎನ್ನುವುದನ್ನು ಚಿತ್ರಿಸಿದೆ. ಬೇರೆ ಬೇರೆ ಜನಕ್ಕೆ ಯಾವುದು ಧ್ಯೇಯ, ಯಾವುದು ಸರಿಯಾದ ನಡತೆ ಎಂಬುದನ್ನು ಚಿತ್ರಿಸಿದ್ದಾನೆ.

ಭಾರತ ಉಪದೇಶಿಸುವ ಧರ್ಮದ ಮುಖ್ಯ ಸೂತ್ರಗಳು :
(ಯಯಾತಿಯ ಕಥೆಯಿಂದ)
೧) ನಿನ್ನ ಜೊತೆಯವರನ್ನಾಗಲೀ , ನಿನಗಿಂತ ಶ್ರೇಷ್ಠರಾದವರನ್ನಾಗಲೀ  , ನಿನಗಿಂತ ಕಡಿಮೆಯಾದವರನ್ನಾಗಲೀ , ಅಂದರೆ ಯಾರನ್ನೂ ಕೂಡ  ನೀನು ಕಡಿಮೆ ಎಂದು ಎಣಿಸಕೂಡದು; ಅಹಂಕಾರ ಪಡಕೂಡದು.
೨)  ಹೆಚ್ಚಿನ ಹಿತದ ಸಾಧನೆಗಾಗಿ , ಕಡಿಮೆಯದರ ತ್ಯಾಗ ಮಾಡಬೇಕಾದರೆ ಮಾಡಲೇಬೇಕು.  ( ಮನೆತನಕ್ಕಾಗಿ ಒಬ್ಬ ವ್ಯಕ್ತಿಯನ್ನೂ , ಊರಿಗಾಗಿ  ಮನೆತನವನ್ನೂ , ನಾಡಿಗಾಗಿ ಊರನ್ನೂ , ಅತ್ಮಕ್ಕಾಗಿ ಇಡೀ ಜಗತ್ತನ್ನೇ ತ್ಯಜಿಸಬೇಕು) .  
೩)  ತೃಪ್ತಿ ಪಡಿಸುವುದರಿಂದ ಆಸೆ ಶಮನವಾಗುವುದಿಲ್ಲ ; ಆಸೆಯನ್ನು ತೊರೆಯುವುದೇ  ಸರಿ.

ಶಕುಂತಲೆ ಮತ್ತು ದುಷ್ಯಂತರ ಕತೆಯಿಂದ (  ಮಹಾಭಾರತದ ಕತೆಯಲ್ಲಿ ಉಂಗುರದ ಪ್ರಸ್ತಾಪ ಇಲ್ಲ )
೪) ಸತ್ಯಕ್ಕಿಂತ ಹಿರಿದಾದದ್ದು ಯಾವದೂ ಇಲ್ಲ ,  ಅನೃತಕ್ಕಿಂತ ಕೀಳಾದುದು ಯಾವದೂ ಇಲ್ಲ . ಆದಕಾರಣ ಸತ್ಯವನ್ನು ಬಿಡಬೇಡ.

ಭೀಷ್ಮನು ಕೂಡ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುತ್ತಾನೆ. ಆತನಿಂದ ಪ್ರತಿಜ್ಞೆ ಮಾಡಿಸಿದ ಸತ್ಯವತಿಯೇ ಅವನನ್ನು ಬೇಡಿಕೊಂಡರೂ ಆ ಮಾತನ್ನು ಮೀರಲೊಲ್ಲನು.  ಮೂರುಲೋಕಗಳನ್ನು ತೊರೆದೇನು , ಸ್ವರ್ಗವನ್ನು ಕಳೆದುಕೊಂಡೇನು  ಆದರೆ ಸತ್ಯವನ್ನು ಮಾತ್ರ ಬಿಡಲಾರೆ ಎನ್ನುತ್ತಾನೆ.  

ಮಾಸ್ತಿಯವರು ಮುಂದೆ ಒಂದೊಂದೇ ಪಾತ್ರವನ್ನು ಕೈಗೆತ್ತಿಕೊಂಡು ಅವರ ಕತೆಯನ್ನು ಹೇಳುತ್ತ , ಅವರ ಹೆಚ್ಚುಗಾರಿಕೆಯನ್ನು ಗುರುತಿಸುತ್ತಾ  , ಅವರು ಧರ್ಮವನ್ನು ಆಚರಿಸಿದ ಬಗೆಯನ್ನು ತೋರುತ್ತಾರೆ.

ಪಾಂಡವರು ವಿದುಲ ,ಯಯಾತಿ, ದುಷ್ಯಂತ-ಶಕುಂತಲೆ,  ನಳ , ಹರಿಶ್ಚಂದ್ರ , ಸತ್ಯವಾನ-ಸಾವಿತ್ರಿ , ರುರು-ಪ್ರಮದ್ವರೆ , ಧರ್ಮವ್ಯಾಧ ,  ಮುಂತಾದವರ  ಕತೆಗಳನ್ನು ಕೇಳಿದರು, ಈ ಕತೆಗಳ  ಪರಿಣಾಮ  ಅವರ ಮೇಲಾಯಿತು.  ಭಾರತ ಗ್ರಂಥದ ನೀತಿಯ ಕಲ್ಪನೆ ಎಂಥದ್ದು ಎಂದು ತಿಳಿಯಲು ಈ ಕತೆಗಳು ಉತ್ತಮ ಸಾಮಗ್ರಿ ಎನ್ನುತ್ತಾರೆ ಮಾಸ್ತಿ. ಈ ಕತೆಗಳನ್ನು ಮಾಸ್ತಿಯವರು ಮತ್ತೆ ಹೇಳಿದ್ದಾರೆ. ಯುಧಿಷ್ಠಿರನು ಶತ್ರುವಿನೊಂದಿಗೂ ತೋರಿಸುವ ಕ್ಷಮಾಗುಣದ್ದೂ   ಇತರರಿಗಿಲ್ಲದ ಸ್ವರ್ಗ ನನಗೆ ಬೇಡ ಎಂಬ ಉದಾತ್ತ  ಮನೋಧರ್ಮದ್ದೂ  ಮೂಲ ಈ ಕತೆಗಳಲ್ಲಿದೆ .  ಇದರಲ್ಲಿನ ಕೆಲವು ಕತೆಗಳು  ಆದರ್ಶ ಅನುರೂಪ ದಾಂಪತ್ಯದ ರೀತಿಯನ್ನು ತೋರುತ್ತವೆ.

ಮಾಸ್ತಿಯವರು ಈ ಉಪಾಖ್ಯಾನಗಳಲ್ಲಿ , ಈ ವ್ಯಕ್ತಿಚಿತ್ರಗಳಲ್ಲಿ ರೂಪುಗೊಂಡಿರುವ ಜೀವನಧರ್ಮ, ಮಾನವಧ್ಯೇಯ, ಲೋಕನೀತಿ , ಕ್ಷಮೆ , ಸತ್ಯ , ಅಂತಸ್ಸಾಕ್ಷಿ, ತ್ಯಾಗ , ಅಹಿಂಸೆ, ಮನಸ್ಥೈರ್ಯ   ಮುಂತಾದವುಗಳನ್ನು  ಮತ್ತು  ಮನುಷ್ಯನ ಶತ್ರುಗಳಾದ ಮದ, ಕೋಪ, ಲೋಭಗಳನ್ನು    ಸಂಕ್ಷೇಪವಾಗಿ ಪರಿಶೀಲಿಸಿದ್ದಾರೆ.      ಹಾಗೆಯೇ ವ್ಯವಹಾರಜ್ಞಾನವನ್ನು ಬೋಧಿಸುವ ಅನೇಕ ವಾಕ್ಯಗಳನ್ನು ಸಂಗ್ರಹಿಸಿದ್ದಾರೆ. ಸಮಾಜಧರ್ಮದ ಅಡಿಯಲ್ಲಿ ಸಮಾಧಾನ , ದಾನ, ನಿಯಮಪಾಲನೆ , ಸುಳ್ಳು ಸಾಖ್ಶಿ , ವಿನಯ , ದಾಕ್ಷಿಣ್ಯ , ಉದಾತ್ತವರ್ತನ , ತನಗಿಂತ ಕಡಿಮೆಯವರನ್ನು ಹೇಗೆ ನಡೆಸಿಕೊಳ್ಳಬೇಕು , ರಾಶ್ಟ್ರ- ರಾಜ- ಮಂತ್ರಿ-ಸೇವಕರು , ಒಳ್ಳೆಯ ಆಡಳಿತ, ಪ್ರಜಾರಕ್ಷಣೆ, ಸ್ತ್ರೀಸ್ವಾತಂತ್ರ್ಯ , ರಾಜನು ಎಲ್ಲಿ ಕಠಿಣವಾಗಿ ವರ್ತಿಸಬೇಕು ,  ಸಮಾಜದಲ್ಲಿ ಒಕ್ಕಟ್ಟು , ರಾಷ್ಟ್ರಜೀವನ , ಆದರ್ಶಮಾನವ, ಮತಗಳ ನಡುವೆ ಸಮನ್ವಯ , ಸಂದೇಹ ನಿವಾರಣೆ , ಧರ್ಮವು ಧರ್ಮಿಷ್ಠನನ್ನು ರಕ್ಷಿಸುವುದೇ?  ಇವೇ ಮುಂತಾದ ವಿಚಾರಗಳನ್ನು ಚರ್ಚಿಸಿದ್ದಾರೆ.

ಒಟ್ಟಿನಲ್ಲಿ ವ್ಯಾಸಮಹರ್ಷಿಯು ಇಲ್ಲಿ ಶಾಶ್ವತ ಧರ್ಮವನ್ನು ಹೇಳಿದ್ದಾನೆ, ಭಾರತ ಗ್ರಂಥವು ತುಂಬ ವಿಸ್ತಾರವಾದ ಜ್ಞಾನಭಂಡಾರ , ನಮ್ಮ ಜೀವನವನ್ನು ಪರಿಷ್ಕರಿಸುವುದಕ್ಕೆ ಬೇಕಾದ ಸಾವಿರ ಸೂತ್ರ ಇಲ್ಲಿವೆ, ಆತ್ಮದ , ಸಮಜದ , ಲೋಕಕಲ್ಯಾಣದ  ಮಾರ್ಗ ಇಲ್ಲಿದೆ,  ಹೀಗಾಗಿ ಈ ಗ್ರಂಥವು ಒಂದು ಪುಣ್ಯತೀರ್ಥವೇ ಸೈ ಎಂದು ಮಾಸ್ತಿಯವರು ತೋರಿಸುತ್ತಾರೆ.

ನಮ್ಮ ಜೀವನವನ್ನು ಪರಿಷ್ಕರಿಸಿಕೊಳ್ಳಬೇಕು ಮತ್ತು  ಉದಾತ್ತ ಜೀವನವನ್ನು ಸಾಧಿಸಬೇಕು ಎಂಬ ಬಯಕೆ ಇದ್ದವರು ಈ ಪುಸ್ತಕವನ್ನು ತಪ್ಪದೇ ಓದಬೇಕು. ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಲ್ಲಿ  ಇಲ್ಲಿ  ಇದೆ.    

 

Rating
No votes yet

Comments

Submitted by partha1059 Thu, 02/13/2014 - 12:05

ಶ್ರೀಕಾಂತ‌ ರವರೆ DLI ನಲ್ಲಿ ಒಂದು ಒಂದೇ ಪುಟ‌ ತೆರೆದು ಓದಲು ತೊಂದರೆ ಆಗುತ್ತಿದೆ, ಓದಿನ‌ ಓಘವೇ ಇಲ್ಲವಾಗುತ್ತದೆ, ಹಿಂದೊಮ್ಮೆ ತಿಳಿಸಿದ್ದೀರಿ ಅನ್ನಿಸುತ್ತೆ, ಪುಸ್ತಕವನ್ನು ಒಮ್ಮೆಲೆ ಇಳಿಸಿಕೊಂಡು ಓದುವುದು ಹೇಗೆ ಎಂದು . ದಯಮಾಡಿ ಮತ್ತೊಮ್ಮೆ ವಿವರಿಸುವಿರ‌. ಅಥವ‌ ಮೇಲ್ ಮಾಡಿದರು ಚಿಂತಿಯಿಲ್ಲ partha1059@gmail.com
ತೊಂದರೆಗಾಗಿ ಕ್ಷಮಿಸಿ.

Submitted by ಶ್ರೀನಿವಾಸ ವೀ. ಬ೦ಗೋಡಿ Thu, 02/13/2014 - 17:46

In reply to by partha1059

ಪಾರ್ಥರೆ, ಪುಸ್ತಕವನ್ನು ಇಳಿಸಿಕೊಳ್ಳುವದಕ್ಕೆ ಮಿಶ್ರಿಕೋಟಿಯವರ ಈ ಕೊಂಡಿಯನ್ನು ನೋಡಿ.http://sampada.net/blog/shreekantmishrikoti/18/12/2008/14836
ಅಥವ, ಈ ಕೊಂಡಿಯಲ್ಲಿರುವ ತಂತ್ರಾಶವನ್ನಾದರು ಇಳಿಸಿಕೊಳ್ಳಿ.https://code.google.com/p/dli-downloader/downloads/list
ಇದು ಹೇಗೆ ಕೆಲಸ ಮಾಡುತ್ತದೆಯೆಂದು ಇಲ್ಲಿ ಕೊಟ್ಟಿದ್ದಾರೆ.https://code.google.com/p/dli-downloader/

Submitted by partha1059 Thu, 02/13/2014 - 22:44

In reply to by ಶ್ರೀನಿವಾಸ ವೀ. ಬ೦ಗೋಡಿ

ಸಾರ್
ವಂದನೆಗಳು
ಕೊಂಡಿಗಳನ್ನು ಇನ್ನು ಮರೆಯುವದಿಲ್ಲ
ಮಾರ್ಕ್ ಮಾಡಿರುವೆ
ಉಪಯೋಗಿಸುವೆ
dli ಇರುವ‌ ಪುಸ್ತಕಗಳು ಕವನಗಳು ನಿಜಕ್ಕೂ ಆಸಕ್ತಿ ಹುಟ್ಟಿಸುತ್ತವೆ :‍)