ಮನುಷ್ಯ ಜಾತಿ ತಾನೊಂದೆ ವಲಂ

ಮನುಷ್ಯ ಜಾತಿ ತಾನೊಂದೆ ವಲಂ

ಚಿತ್ರ

ಜಾತಿ - ಪದ್ದತಿಯೆಂಬುದು ಮಾನವನ ಜೀವವೃಕ್ಷಕ್ಕೆ  ಅಂಟಿಕೊಂಡಿರುವ ಒಂದು ದೊಡ್ಡ ಪಿಡುಗಾಗಿದೆ. ಒಂದೇ ಭೂಮಿತಾಯಿಯ ಕರುಳ ಬಳ್ಳಿಯ ಮಕ್ಕಳಾಗಿ ಹುಟ್ಟಿದ ನಮ್ಮ ನಡುವೆ ಎದ್ದಿರುವ ಜಾತಿಯ ಗೋಡೆಗಳು ಇಂದು ನಾವು ಕೆಡುವಲಾಗದ ರೀತಿಯಲ್ಲಿ ಗಟ್ಟಿಯಾಗಿಬಿಟ್ಟಿವೆ. ಮಾನವೀಯ ಮನುಷ್ಯರನ್ನು ಜಾತಿಯ ಅಡಿಯಲ್ಲಿ ಗುರುತಿಸುತ್ತಿರುವುದು ಜೀವ ವಿರೋಧಿ ಎಂದು ಕರೆಯಬೇಕಾಗುತ್ತದೆ. ಮೇಲು - ಕೀಳು ಎಂಬ ಸಾಮಾಜಿಕ ಅಸಮಾನತೆಯು ಉಂಟಾಗುವ ಮೂಲಕ ಜಾತಿ ಅಪಮಾನದಿಂದ ತಳ ಸಮುದಾಯಗಳು ಕೀಳರಿಮೆಯಿಂದ ಬಳಲುವಂತಾಗಿರುವುದು ಸಹಿಸಲಾಗದ ವಿಚಾರ.

ಸಾಮಾಜಿಕ ಮಲವಾಗಿರುವ ಜಾತಿಪದ್ದತಿಯು ಅನಾದಿಕಾಲದಿಂದಲೂ ಅಂಟಿಕೊಂಡಿದ್ದು ಅದರ ವಿರುದ್ದ ಈ ನೆಲದಲ್ಲಿ ಹಲವಾರು ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಇದಕ್ಕೆ ನಮ್ಮ ಸಂಸ್ಕೃತಿ ಚರಿತ್ರೆಯಲ್ಲಿ ಸಾಕಷ್ಟು ದಾಖಲೆಗಳಿವೆ. ಕಾಲಘಟ್ಟದಿಂದ ಕಾಲಘಟ್ಟಕ್ಕೆ ಬುದ್ದ, ಬಸವ, ಅಂಬೇಡ್ಕರ್‍ ಮುಂತಾದ ಸಾಮಾಜಿಕ ಚಿಂತಕರು ಈ ಜಾತಿಯ ಪೆಡಂಭೂತವನ್ನು ಸುಡಲು ತಮ್ಮದೇ ಹಾದಿಯಲ್ಲಿ ಹೋರಾಡಿದ್ದಾರೆ. ಅಂತರ ಜಾತಿಯ ವಿವಾಹದ ಮೂಲಕ ಒಂದು ರೀತಿಯಲ್ಲಿ ಜಾತಿ ವಿನಾಶವನ್ನು ಕೈಗೊಂಡರೆ, ಸಹಭೋಜನದ ಮೂಲಕ ಮತ್ತೊಂದು ರೀತಿಯಲ್ಲಿ ಮಹನೀಯರು ಹಲವಾರು ಮಾರ್ಗಗಳನ್ನು ಅನುಸರಿಸಿದರು, ಇಡೀ ಜಾತಿ ಭೇದದ ಪರಂಪರೆಯನ್ನು ಹೊಡೆಯುವ ಮೂಲಕ ತಾಯಿ ಬೇರಿಗೆ ಮರಳಬೇಕೆನ್ನುವುದನ್ನು  ಸಮಾಜದಲ್ಲಿ ಮೂಡಿಸಲು ಅವಿರತವಾಗಿ ಹಗಲಿರುಳು ಪ್ರಯತ್ನಿಸಿದ್ದಾರೆ.

ಸಾಮಾಜಿಕ ನ್ಯಾಯಕ್ಕಾಗಿ ನಡೆದಿರುವ ಹೋರಾಟಗಳ ಹಿನ್ನೆಲೆಯಲ್ಲಿ ಗುರುತಿಸಿದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಭವ್ಯ ಕೊಡುಗೆ ಇದೆ. ಕನ್ನಡ ಹೆಸರಾಂತ ಆದಿಕವಿ ಪಂಪ ೧೦ನೇಯ ಶತಮಾನದಲ್ಲಿಯೇ ಮನುಷ್ಯಜಾತಿ ತಾನೊಂದೆ ವಲಂ ಎಂದು ಹೇಳುವ ಮೂಲಕ ಕನ್ನಡಿಗರ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಮೊದಲ ಮುನ್ನುಡಿ ಬರೆದಿದ್ದಾರೆ. ಇದಾದ ನಂತರ ೧೨ನೇಯ ಶತಮಾನದಲ್ಲಿ ವಚನಕಾರರು ಸಾಮಾಜಿಕ ಸುಧಾರಣೆಯ ಹರಿಕಾರರಾಗಿ ಹೊರಹೊಮ್ಮಿದ್ದಾರೆ. ಅಲ್ಲಮ ಪ್ರಭು, ಬಸವಣ್ಣ, ಅಕ್ಕ ಮಹಾದೇವಿ, ಇತ್ಯಾದಿ ಶರಣರು ಕೆಳವರ್ಗದ ಜನರ ಕಾಯಕವನ್ನು ಗೌರವಿಸುವುದರ ಮೂಲಕ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಇತ್ಯಾದಿ ಸುಧಾರಕರು ಅನುಭವ ಮಂಟಪದಲ್ಲಿ ಎಲ್ಲರ ಜೊತೆಗೆ ಸರಿಸಮಾನವಾದ ಸ್ಥಾನಮಾನ ಕಲ್ಪಿಸಿರುವುದು ಇತಿಹಾಸದಲ್ಲಿದೆ. ಸಾಮಾಜಿಕ ನ್ಯಾಯದ ಅರಿವು ಮೂಡಿಸುವಲ್ಲಿ ಶರಣರ ವಚನಗಳು, ದಾಸರ ಕೀರ್ತನೆಗಳು, ಸೂಫಿ ಸಂತರ ತತ್ವಪದಗಳು ಅದ್ಭುತ ಯಶಸ್ಸು ಸಾಧಿಸಿವೆ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೆ ಎಂದು ಸರ್ವಜ್ಞ ಹೇಳಿದರೆ, ಕುಲ ಕುಲವೆಂದು ಹೊಡೆದಾಡುವಿರಿ ನಿಮ್ಮ ಕುಲದ ನೆಲೆಯನ್ನೆನಾದರು ಬಲ್ಲಿರಾ ಎನ್ನುತ್ತಾರೆ ಕನಕದಾಸರು, ಸೋರುತಿಹುದು ಮನೆಯ ಮಾಳಿಗಿ ಅಜ್ಞಾನದಿಂದ ಎಂಬ ಶಿಶುನಾಳ ಶರೀಫರ ತತ್ವಪದ ಇಂದಿಗೂ ನಮ್ಮ ನಾಲಿಗೆಗಳ ಮೇಲೆ ಹೊರಳಾಡುತ್ತಿರುವುದು ಅವುಗಳ ಸತ್ವಯುತ ಸಂದೇಶಕ್ಕೆ ಸಾಕ್ಷಿಯಾಗಿದೆ.

ಸರ್ಕಾರಿ ಉದ್ಯೋಗವೆಂಬುದು ಕನಸಾಗಿದ್ದ ಸಂದರ್ಭದಲ್ಲಿ ಪ್ರಪ್ರಥಮ ಬಾರಿಗೆ ಮೀಸಲಾತಿ ಪರಿಕಲ್ಪನೆಯನ್ನು ಅನುಷ್ಟಾನಗೊಳಿಸಿದ ಕೀರ್ತಿ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಓಡೆಯರ್‍ ರವರಿಗೆ ಸಲ್ಲುತ್ತದೆ. ವೈಚಾರಿಕ ಸಾಹಿತ್ಯದ ಮೂಲಕ ಕೆಳವರ್ಗದ ಜನರಲ್ಲಿ ಸ್ವಾಭಿಮಾನ ಹಾಗೂ ಸ್ವ ಪ್ರಜ್ಞೆಯನ್ನು ಮೂಡಿಸಿದ ಕುವೆಂಪುರವರ ಸಾಹಿತ್ಯದ ಪ್ರಭಾವ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಅನನ್ಯವಾಗಿದೆ.

ಕರ್ನಾಟಕದಲ್ಲಿ ಸಮಾನತೆಯ ಪರಿಕಲ್ಪನೆ ಹಾಗೂ ಸಾಮಾಜಿಕ ನ್ಯಾಯ ವಿತರಣೆಗೆ ನಿರಂತರವಾಗಿ ಸಾತ್ವಿಕ ಹೋರಾಟ, ಪ್ರತಿಭಟನೆಗಳ ನೋಟ ನಿಜಕ್ಕೂ ನಮ್ಮೆಲ್ಲರಲ್ಲಿ ಮತ್ತೆ ಕ್ರಿಯಾಶೀಲತೆಯನ್ನುಂಟು ಮಾಡಿವೆ. ಸ್ವಾತಂತ್ರ ನಂತರದಲ್ಲಿ ತಳವರ್ಗದ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸಿದ ಯೋಜನೆಗಳು ಅನುಷ್ಟಾನಗೊಳಿಸಿರುವ ಕಾರ್ಯಕ್ರಮಗಳು ಕೆಳ ಸಮುದಾಯದ ಜನರ ಬದುಕಿನಲ್ಲಿ ಸಾಕಷ್ಟು ಸುಧಾರಣೆ ತಂದಿವೆ ಎನ್ನುವುದರಲ್ಲಿ ಯಾವುದೇ ಆಕ್ಷೇಪಣೆ ಇಲ್ಲ. ಇತಿಹಾಸ ಹಾಗೂ ವರ್ತಮಾನದಲ್ಲಿ ಕನ್ನಡಿಗರೂ ಸಾಧಿಸಿರುವ ಈ ಸಾಮಾಜಿಕ ನ್ಯಾಯದ ಸಾಧನೆಯ ಅಪರೂಪದ ಚಿತ್ರಪಟಗಳು ಅಲ್ಲಲ್ಲೆ ಚದುರಿ ಹೋಗಿವೆ. ಅವೆಲ್ಲವನ್ನು ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಜನರ ನೋಟಕ್ಕೆ ಪರಿಣಾಮಕಾರಿಯಾಗಿ ಇಡುವುದು ಇಂದಿನ ಅಗತ್ಯವಾಗಿದೆ.

ಮನುಷ್ಯಜಾತಿ ತಾನೊಂದೆ ವಲಂ ಎಂಬ ಪ್ರಬುದ್ದ ನಾಟಕವು ರೂಪುಗೊಂಡು ಅದು ಮೈಸೂರಿನ ಬಯಲು ರಂಗ ಮಂದಿರದಲ್ಲಿ ನಡೆಯಿತು. ಅದರ ಪರಿಕಲ್ಪನೆ-ಎನ್.ಆರ್‍. ವಿಶುಕುಮಾರ್‍ ರವರದು, ಸಾಹಿತ್ಯ ರಚನೆ-ಕೊಟಾಗನಳ್ಳಿ ರಾಮಯ್ಯ, ಗೀತೆ ರಚನೆ-ಕೆ.ವೈ.ನಾರಾಯಣ ಸ್ವಾಮಿ, ಸಂಗೀತ-ಹಂಸಲೇಖ, ನಿರ್ದೆಶನ-ಸಿ.ಬಸವಲಿಂಗಯ್ಯ ಇವರೆಲ್ಲರೂ ಬಹಳ ಶ್ರಮವಹಿಸಿ ಈ ನಾಟಕವನ್ನು ತೆರೆಯ ಮೇಲೆ ತಂದಿದ್ದು ನಿಜಕ್ಕೂ  ಹೆಮ್ಮೆಯ ಸಂಗತಿ. ಆದರೆ ಪೂರಕವಾಗಿ ಸಹಾಯಕರಾದವರು ಕರ್ನಾಟಕ ವಾರ್ತಾ ಇಲಾಖೆಯವರು, ಜಾತಿಯ ಗೋಡೆಗಳು ಒಂದು ಕೂಡ ಬಿರುಕುಗೊಳ್ಳದೆ ಬಿಗಿಯುತ್ತಿರುವ ಸಂದರ್ಭದಲ್ಲಿ ಜಾತಿಯ ಅಸಮಾನತೆಯನ್ನೊಡೆಯಲು ಮಾಡುತ್ತಿರುವ ಸಾಂಸ್ಕೃತಿಕ ಕೊಡುಗೆಗೆ ಅವರನ್ನು ನೆನೆಯಲೇ ಬೇಕಾಗುತ್ತದೆ. ಸಾವಿರಾರು ವರ್ಷದಿಂದ ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸಿದವರಿಗೆ ಈ ಸಮಾಜದಲ್ಲಿ ಏನೆಲ್ಲಾ ಶಿಕ್ಷೆಯಾಗಿದೆ, ಅದರ ನೋವೆಷ್ಟು ಎಂಬುದನ್ನು ಮನುಷ್ಯಜಾತಿ ತಾನೊಂದೆ ವಲಂ ಎಂಬ ರಂಗ ಪ್ರಯೋಗದಲ್ಲಿ ತಂದು ಕೊಟ್ಟಿದ್ದಾರೆ. ಅದಕ್ಕಿಂತ ದೊಡ್ಡ ಸಾಹಸ ಬೇರೊಂದಿಲ್ಲ ಎಂದು ಕೊಂಡಿದ್ದೇನೆ.

ಪ್ರಸ್ತುತ ಈ ಧ್ವನಿ ಮತ್ತು ಬೆಳಕು; ಸಂಗೀತ ದೃಶ್ಯ ವೈಭವಗಳ ಕಾರ್ಯಕ್ರಮವು ಸುಮಾರು ಎರಡು ಸಾವಿರ ವರ್ಷಗಳಿಂದ ಜಾತಿ ಪದ್ದತಿಯ ವಿರುದ್ದ ಅವಿರತವಾಗಿ ಹೋರಾಟ ನಡೆಸುತ್ತಾ ಬಂದಿರುವ ಕನ್ನಡ ಸಂವೇದನೆಯ ಭವ್ಯ ಪರಂಪರೆಯನ್ನು ನಿರ್ದಿಷ್ಟವಾಗಿ ಗುರುತಿಸುವ ಹಾಗೂ ನಿಚ್ಚಳವಾಗಿ ಬಿಂಬಿಸುವ ಪ್ರಯತ್ನವಾಗಿದೆ. ಹಾಗೆಯೆ ಸರ್ವರೂ ಜಾತಿ ಮತ ತೊರೆದು ಒಂದುಗೂಡಬೆಕೆನ್ನುವ ಸಾಮಾಜಿಕ ವಿವೇಕವನ್ನು ನಮ್ಮ ಆಧುನಿಕ ವರ್ತಮಾನಕ್ಕೆ ಮರುಪೂರಾಣ ಮಾಡುವ ಆಶಯವನ್ನು ಸಹ ಹೊಂದಿದೆ.

Rating
Average: 4.1 (12 votes)