ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ !

ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ !

ನಾನೂ ಹುಟ್ಟಿದೂರ ಬಿಟ್ಟು ಸುಮಾರು ಹದಿಮೂರು ವರ್ಷಗಳಾಗುತ್ತಾ ಬಂತು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಹದಿಮೂರು ವರ್ಷ ಕೂಡ ಪೂರ್ತಿಯಾಗುತ್ತದೆ. ಹಾಗಂತ ನಾನು ಊರನ್ನ ಸಂಪೂರ್ಣ ಮರೆತವರಲ್ಲಿ ಒಬ್ಬನಂತೂ ಆಗಿರಲಿಲ್ಲ. ರಜೆ ಇದ್ದಾಗ ಆಗಾಗ ಹೋಗಿ ಬರುತ್ತಿದ್ದೇನೆ. ಈಗ ಒಂದು ವರ್ಷದಲ್ಲಂತೂ ಕನಿಷ್ಟ ಆರೇಳು ಭಾರಿ ಹೋಗಿ ಬಂದಿದ್ದೆ. ನನ್ನ ಸಂಪೂರ್ಣ ಸಂಸಾರ ಅಲ್ಲಿದ್ದುದು ಒಂದು ಕಾರಣ ಇರಬಹುದೇನೋ. ಹಾಗಂತ ನನ್ನ ಊರೇನು ಒಂದೆರಡು ಗಂಟೆಯ ಪ್ರಯಾಣವೇನಲ್ಲ. ಕನಿಷ್ಟ ಹತ್ತು ಗಂಟೆಗಳ ಪ್ರಯಾಣ. ಬೆಂಗಳೂರಿಂದ ಐದುನೂರಾ ಐವತ್ತು ಕಿಲೋ ಮೀಟರ್ ದೂರದಲ್ಲಿ ಸಹ್ಯಾದ್ರಿಯ ತಪ್ಪಲಲ್ಲಿರುವ, ಉತರ ಕನ್ನಡ ಜಿಲ್ಲೆಯ ಅಂಕೋಲಾ ತಾಲುಖಿನ ಒಂದು ಚಿಕ್ಕ ಹಳ್ಳಿ. ಅದಕ್ಕೆ ಹಿಚ್ಕಡ್ ಅಂತಾ ಎಲ್ಲರೂ ಕರೆಯುತ್ತಿದ್ದರಿಂದ, ನಾವು ಹಿಚ್ಕಡ ಅಂತಾನೇ ಕರೆಯುತ್ತಿದ್ದವು. ಯಾಕೆ ಆ ಹೆಸರು ಬಂತು ಅನ್ನುವುದು, ಇದುವರೆಗೂ ಯಾರಿಗೂ ತಿಳಿಯದ ವಿಷಯ. ನಾನೂ ಕೂಡ ಈ ಊರಿಗೆ ಹಿಚ್ಕಡ ಅಂಥಾ ಬರಲು ಕಾರಣಗಳೇನು ಎಂದು ಹಲವರನ್ನು ಕೇಳಿದ್ದೇನೆ. ಕೆಲವರ ಪ್ರಕಾರ ಒಂದು ಕಾಲದಲ್ಲಿ ಬಹಳಷ್ಟು ಕಾಡಿದ್ದರಿಂದ ಹೆಚ್ಚು ಕಾಡು ಅಥವಾ ನಾಡವರ ಭಾಷೆಯಲ್ಲಿ ಹಿಚ್ಚು ಕಾಡು ಎಂದು ಕರೆಯುತ್ತಿದ್ದುದು ಮುಂದೆ ಹಿಚ್ಕಡ ಅಂಥಾ ಆಗಿರಬೇಕು. ಒಂದು ಕಾಲದಲ್ಲಿ ಇಲ್ಲಿ ಬೆಟ್ಟ ಇದ್ದುದರಿಂದ ಕಡವೆಗಳು ಯಥೇಚ್ಚವಾಗಿ ಓಡಾಡಿಕೊಂಡಿದ್ದವು. ಇಲ್ಲಿ ವಾಸಿಸುವ ಬಹುತೇಕ ಜನ ನಾಡವರೇ ಆಗಿದ್ದ ಅವರು ಕಡವೆಗಳಿಗೆ ಕಡ ಅಂಥಾನು ಕರೆಯುತ್ತಿದ್ದರು. ಹಾಗಾಗಿ ಹೆಚ್ಚು ಕಡವೆ ಎನ್ನುವ ಪದ ಹಿಚ್ಚುಕಡವಾಗಿ ಮುಂದೆ ಹಿಚ್ಕಡ ಅಂಥಾ ಆಗಿರಬಹುದು. ಇವೆಲ್ಲ ಕೇವಲ ಗಾಳಿ ಮಾತುಗಳೇ ವಿನಃ ಐತಿಹಾಸಿಕ ಪುರಾವೆಗಳು ಯಾವುದು ಇಲ್ಲ. ಹಾಗಂತ ಹಿಚ್ಕಡಕ್ಕೆ ಇತಿಹಾಸವೇ ಇಲ್ಲವೇ ಅಂತಲ್ಲ. ಅದಕ್ಕೆ ತನ್ನದೇ ಆದ ಇತಿಹಾಸವನ್ನ ಹೊಂದಿದೆ. ಇದಕ್ಕೆ ಇಲ್ಲಿರುವ ಪ್ರದೇಶಗಳಲ್ಲಿರುವ ಐತಿಹಾಸಿಕ ಕುರುಹುಗಳೇ ಸಾಕ್ಷಿ.

 

ಮಡಿವಾಳರ ಮೆನೆಯ ಪಕ್ಕದಲ್ಲಿರುವ ಜಟಕನ ದೇವಸ್ಥಾನದ ಸ್ಥಳ ಒಂದು ಕಾಲದಲ್ಲಿ ಜೈನರ ಬಸದಿಯಾಗಿದ್ದು, ಇಲ್ಲಿರುವ ಅನೇಕ ಜೈನ ಭಾವಿಗಳು (ಕಿರಿದಾದ ಭಾವಿಗಳು) ಒಂದು ಕಾಲದಲ್ಲಿ ಹಿಚ್ಕಡದಲ್ಲಿ ಜೈನಧರ್ಮ ಪ್ರಚಲಿತದಲ್ಲಿತ್ತು ಎನ್ನುವುದನ್ನ ತೋರಿಸುತ್ತದೆ. ಮುಂದೆ ಇದೇ ಜೈನ ಧರ್ಮವನ್ನ ಅನುಸರಿಸುತ್ತಿದ್ದ ನಮ್ಮ ಪೂರ್ವಜರು ಮತ್ತೆ ಹಿಂದೂ ಧರ್ಮವನ್ನ ಸ್ವಿಕರಿಸಿ ಮುಂದೆ ಹಿಂದೂಗಳಾಗಿ ಪರಿವರ್ತನೆಯನ್ನ ಹೊಂದಿರುವುದು ಎದ್ದು ಕಾಣುತ್ತದೆ. ಹಾಗೆ ಹಿರೇಗದ್ದೆ ಪ್ರದೇಶವು ನಮ್ಮ ಪೂರ್ವಿಕರ ವಾಸಸ್ಥಳವಾಗಿದ್ದು ನಂತರ ಈಗ ವಾಸಿಸುತ್ತಿರುವ ಸ್ಥಳಗಳಿಗೆ ತಮ್ಮ ವಾಸಸ್ಥಳವನ್ನ ವಿಸ್ಥರಿಸಿಕೊಂಡಿರಬಹುದು. ಆಗಿನ ಕಾಲಕ್ಕನುಗುಣದ ಇತಿಹಾಸವನ್ನ ಹೋಲಿಸಿದರೆ ಹಿರೇಗದ್ದೆ ಜನ ಜೀವನಕ್ಕೆ ವಾಸಕ್ಕೆ ಯೋಗ್ಯವಾದ ಸ್ಥಳವಾಗಿತ್ತು. ಮೂರು ಕಡೆಗಳಿಂದಲೂ ಬೆಟ್ಟಗುಡ್ಡಗಳಿಂದ ಆವ್ರತ್ತವಾಗಿದ್ದ ಕಣಿವೆ ಪ್ರದೇಶ, ವರ್ಷಕ್ಕೆ ಮೂನ್ನೂರಾ ಅರವತೈದು ದಿನವು ನೀರು ಹರಿಸುತ್ತಿದ್ದ, ಎರಡೆರಡು ಅಬ್ಬಿಗಳು (ನೀರಿನ ಬುಗ್ಗೆಗಳು). ಒಂದು ಇವತ್ತಿಗೂ ಜೀವಂತವಾಗಿದ್ದು, ಗಾಂವಕರ ಮನೆಯ ಒಡೆತನದ ಜಾಗದಲ್ಲಿದ್ದು. ಇನ್ನೊಂದು ಕರನ ಮನೆಯ ಒಡೆತನದಲ್ಲಿರುವ ಜಾಗದಲ್ಲಿತ್ತು. ಆದರೆ  ಇವತ್ತು ಮಣ್ಣು ಮುಚ್ಚಿಯೋ ಅಥವಾ ವಾತಾವರಣದ ಬದಲಾವಣೆಯಿಂದಾಗಿಯೋ ಕರನಮನೆಯವರ ಜಾಗದಲ್ಲಿರುವ ಅಬ್ಬಿ ಮುಚ್ಚಿ ಹೋಗಿದ್ದೆ. ಇನ್ನೂ ಅಲ್ಲಿ ಆಯಾ ಮನೆತನದ ಒಡೆತನದಲ್ಲಿರುವ ತೋಟ ಗದ್ದೆಗಳು ಇವತ್ತಿಗೂ ಇವೆ. ಇವೆಲ್ಲ ಸನ್ನಿವೇಶಗಳನ್ನ ನೋಡಿದರೆ ಒಂದು ಕಾಲದಲ್ಲಿ ನಾಡವರ ಹಿರೆಗದ್ದೆ ಪ್ರದೇಶದಲ್ಲಿ ವಾಸವಾಗಿದ್ದರೂ ಅನ್ನುವುದನ್ನು ಸೂಚಿಸುತ್ತದೆ. ಹಾಗೆಯೇ ಹೆಸರೂ ಕೂಡ ಅದನ್ನೇ ಹೇಳುತ್ತದೆ. ಹಿರೇಗದ್ದೆ ಅಂದರೆ ಹಿರಿಯರ ಗದ್ದೆ ಅಥವಾ ಹಿರೀಯರು ಸಾಗುವಳಿ ನಡೆಸಿದ್ದ ಗದ್ದೆ ಅಂಥಾ.

 

ರಾಜರಾಮ ಮೋಹನರಾಯರು ಸತಿಸಹಗಮನ ಪದ್ದತಿಯನ್ನ ನಿಷೇಧಿಸುವುದಕ್ಕೆ ಮೊದಲೇ ಇಲ್ಲಿ ವಾಸವಾಗಿರುವ ಒಂದು ಕಾಲದಲ್ಲಿ ಯೋಧರಾಗಿದ್ದ ನಾಡವರಲ್ಲೂ ಆ ಪದ್ದತಿ ಇಲ್ಲಿರುವ ಮಾಹಾಸತಿ ಮನೆಯೇ ಸಾಕ್ಷಿ. ದಕ್ಷಿಣದಿ ಹರಿಯುವ ಗಂಗಾವಳಿಯ ತಟದಲ್ಲಿ ಯುದ್ಧದಲ್ಲಿ ಮಡಿದ ತಮ್ಮ ಪೂರ್ವಿಕರ ನೆನಪಿಗಾಗಿ ಕಟ್ಟಿದ ಬೊಮ್ಮಯ್ಯ, ಬೀರ ದೇವರುಗಳು ಒಂದು ಕಾಲದಲ್ಲಿ ಇಲ್ಲಿಯ ನಾಡವರು ಯೋಧರಾಗಿದ್ದರು ಎನ್ನುವುದನ್ನ ಇನ್ನಷ್ಟು ದೃಡ ಪಡಿಸುತ್ತದೆ. ಹಾಗಿದ್ದರೆ ಈ ದೇವಾಲಯಗಳೆಲ್ಲವೂ ನದಿಯ ತೀರದಲ್ಲಿರುವ ಕಾರಣವೇನು? ಸುತ್ತಲು ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದ್ದ ಹಿಚ್ಕಡಕ್ಕೆ ಅಂದು ಪೂರ್ವ ಹಾಗೂ ಉತ್ತರ ದಿಕ್ಕುಗಳಿಂದ ವೈರಿಗಳಿಂದ ದಾಳಿ ನಡೆಸುವ ಸಾಧ್ಯತೆಗಳು ಕಡಿಮೆ ಇದ್ದು, ಅದಕ್ಕೆ ಅನೂಕೂಲಕರವಾದ ಪ್ರದೇಶವೆಂದರೆ ದಕ್ಷಿಣದಲ್ಲಿ ಹರಿಯುವ  ಗಂಗಾವಳಿ ನದಿಯ ಪ್ರದೇಶ ಹಾಗೂ ನದಿಯ ಮುಖಜವಾದ ಭೂಮಿ ಸಮತಟ್ಟಾಗಿದ್ದುದರಿಂದ ರಣರಂಗಕ್ಕೂ ಸೂಕ್ತವಾದ ಸ್ಥಳ. ಬಹುಷಃ ಇದೇ ಕಾರಣಕ್ಕೆ ಇಲ್ಲಿ ಬಹುತೇಕ ಯುದ್ಧಗಳು ಇದೇ ನದಿ ಮುಖಜ ಪ್ರದೇಶದಲ್ಲಿ ನಡೆದು, ಇಲ್ಲಿಯೇ ನಾಡವರ ಹಿರಿಯರು ತಮ್ಮ ವೀರ ಮರಣಗೈದಿರಬಹುದು. ಹಾಗೆಯೇ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದಂತಹ ಪೋರ್ಚುಗಿಸರು ಹಿಂದು ದೇವಾಲಯಗಳ ಮೇಲೆ ದಾಳಿ ಮಾಡಿತ್ತಿದ್ದರಿಂದ, ಅವರನ್ನು ಎದುರಿಸಲು ನಾಡವರು ನದಿ ಮುಖಜ ಪ್ರದೇಶಗಳಲ್ಲಿ ಬಂದು ವಾಸಿಸಿ, ಅವರೋಡನೆ ಇಲ್ಲಿಯೂ ಸೆಣೆಸಾಟ ನಡೆಸಿರಬಹುದು.

 

ನಮ್ಮೂರ ಸರ್ವೋಧಯ ಒಂದು ಕಾಲದಲ್ಲಿ ಅರಬ್ ಇಂದ ಭಾರತಕ್ಕೆ ಬರುತ್ತಿದ್ದ ಕುದುರೆ ವ್ಯಾಪಾರಿಗಳಿಗೆ ಅರವಟ್ಟಿಗೆಯ ಕೇಂದ್ರವಾಗಿತ್ತು. ವಿಜಯನಗರದ ಅರಸರ ಕಾಲದಲ್ಲಿ ಅಂಕೋಲಾದ ವಾಸರೆ ಮತ್ತು ಕುದ್ರಿಗೆಗಳು ಅರಬ್ ದಿಂದ ಬಂದ ಕುದುರೆ ಮತ್ತು ಕತ್ತೆಗಳ ವ್ಯಾಪಾರ ಕೇಂದ್ರವಾಗಿತ್ತು. ಸಮುದ್ರದಿಂದ ಆಮದು ಮತ್ತು ರಪ್ತುಗಳಾಗುವ ವಸ್ತುಗಳು ಹಿಚ್ಕಡದ ಮೂಖಾಂತರವೇ ಸಾಗಾಟವಾಗುತ್ತಿದ್ದವು ಎನ್ನುವುದಕ್ಕೆ ನಮ್ಮೂರ ಮುಳ್ಳಾಕೇರಿ ಗುಡ್ಡದ ಮೇಲೆ ಪಾಳು ಬಿದ್ದ ರಸ್ತೆಯಾಕಾರದ ಸುಮಾರು ಉದ್ದದ ಸಮತಟ್ಟದ ಪ್ರದೇಶವನ್ನ ಇಂದಿಗೂ ಕಾಣಬಹುದು.[ನಮ್ಮ ತಂದೆಯವರು ಒಮ್ಮೆ ಹೇಳುತ್ತಿದ್ದರು, ಅವರು ಒಂದು ಕಾಲದಲ್ಲಿ ಹಿಲ್ಲೂರಲ್ಲಿ ವಾಸವಾಗಿದ್ದ ಸಮಯದಲ್ಲಿ, ಆಗಿನ್ನೂ ಹಿಲ್ಲೂರಿಗೆ ಬಸ್ಸಿನ ಸೌಕರ್ಯಗಳು ಅಷ್ಟಾಗಿರದ ಕಾಲದಲ್ಲಿ, ಆಗ ಹಿಚ್ಕಡದಿಂದ ಹಿಲ್ಲೂರಿಗೆ ನಡೆದುಕೊಂಡು ಹೋಗಲು ಒಂದು ಮಾರ್ಗವಿತ್ತಂತೆ, ಅಲ್ಲಿ ಒಂದು ಎತ್ತಿನ ಗಾಡಿ ಸಾಗುವಷ್ಟು ಅಗಲದ ರಸ್ತೆ ಇತ್ತು ಅಂತೆ. ಬಹುಷಃ ಸಮುದ್ರದಿಂದ ಆಮದಾಗುವ ವಸ್ತುಗಳು ಇದೇ ದಾರಿಯಲ್ಲಿ ಸಾಗಿ, ಸಿರಸಿಯ ಮುಖಾಂತರ ವಿಜಯನಗರವನ್ನ ಸೇರುತ್ತಿರಬೇಕು]. ಇವೆಲ್ಲವೂ ನನ್ನ ಅನಿಸಿಕೆಗಳೇ ಹೊರತು, ಇವಕ್ಕೆ ಯಾವುದೇ ಪುರಾವೆಗಳು, ಸಾಕ್ಷಾಧಾರಗಳು ಕಡಿಮೆ ಇದ್ದುದರಿಂದ ಇದು ಸದ್ಯಕ್ಕೆ ಅನಿಸಿಕೆಗಳೆಂದು ಕರೆಯುವುದೇ ವಾಸಿ.

 

ಇನ್ನೂ ಸ್ವಾತಂತ್ಯ್ದದ ಹೋರಾಟದ ವಿಷಯಕ್ಕೆ ಬಂದರೆ, ಹಿಚ್ಕಡದ ಮನೆ ಮಂದಿಯಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೋರಾಡಿ ತಮ್ಮದೇ ಆದಂತಹ ಕಾಣಿಕೆಯನ್ನ ನಿಡಿದ್ದು ಕೂಡ ಇಂದು ಇತಿಹಾಸ.

 

ಭೌಗೋಳಿಕವಾಗಿಯೂ ನನ್ನೂರು ಒಂದು ಸುಂಧರವಾದ ಊರು, ವರ್ಷಕ್ಕೆ  ಮೂನ್ನೂರಾ ಅರವತ್ತೈದು ದಿನವೂ ತುಂಬಿ ಹರಿಯುವ ಗಂಗಾವಳಿ ನದಿ. ಅದರ ನಡುವಿನ ನಡುಗಡ್ಡೆ ಕೂರ್ವೆ. ದೂರದ ಮುಳ್ಳಾಕೇರಿ ಗುಡ್ಡದ ತುದಿಯಲ್ಲಿ ನಿಂತು ನೋಡಿದರೆ, ತೆಂಗಿನ ಮರಗಳನ್ನ ತುಂಬಿಕೊಂದು ಬಂದ ಹಡಗು ನದಿಯ ನಡುಭಾಗದಲ್ಲಿ ನಿಶ್ಚಲವಾಗಿ ನಿಂತಂತೆ ತೋರುತ್ತದೆ. ಇನ್ನೂ ಕೂರ್ವೆಯ ಒಳ ಭಾಗವನ್ನ ಪ್ರವೇಶಿಸಿದರೆ, ಸೂರ್ಯ ರಶ್ಮಿಗಳು ನೆಲ ಪ್ರವೇಶಿಸದ ರೀತಿಯಲ್ಲಿ ಬೆಳೆದು ನಿಂತ ತೆಂಗಿನ ಮರಗಳು, ಅವುಗಳ ನಡುವಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಡಿಸಲು ಮನೆಗಳು, ಅಲ್ಲಲ್ಲಿ ವಿರಳವಾಗಿ ಕಾಣ ಸಿಗುವ ಇತರ ಗಿಡಗಳಾದ ಬಾಳೆ, ಅಡಿಕೆಗಳು. ಸೂತ್ತಲೂ ಉಪ್ಪು ನೀರಿನಿಂದಾವೃತ್ತವಾದರೂ ನಡುವಲ್ಲಿ ಸಿಹಿ ನೀರಿನ ಭಾವಿಗಳು.ಆಗಾಗ ಕೂರ್ವೆಗೆ ಹೋಗಿ ಬರುವಂತೆ ಮಾಡುತ್ತಲೇ ಇರುತ್ತದೆ. ಗಂಗಾವಳಿ ನದಿ ದಂಡೆಯ ಮೇಲಿರುವ ಜುಗಾದೇವಿ ದೇವಸ್ಠಾನ, ಆ ಜುಗಾದೇವಿ ದೇವಸ್ಠಾನದ ಹಿಂಬಾಗದಿಂದ ಸೂರ್ಯೋಧಯವನ್ನೂ, ಮುಂಬಾಗದಿಂದ ಸೂರ್ಯಾಸ್ಥವನ್ನೂ ನೋಡುವುದೇ ಎಲ್ಲಿಲ್ಲದ ಸೊಗಸು. ಜುಗಾದೇವಿ ದೇವಸ್ಠಾನದ ಪ್ರಾಂಗಣದಲ್ಲಿ ಕುಳಿತು ಸುತ್ತಲ ನಿಸರ್ಗವನ್ನು ನೋಡುವುದೆಂದರೆ ನನಗೆ ಎಲ್ಲಿಲ್ಲದ ಸಂತೋಷ.

 

ಇನ್ನೂ ಕಾನಮೂಲೆ ಪ್ರದೇಶವಂತೂ ಎಷ್ಟು ಹೊಗಳಿದರೂ ಸಾಲದು. ಗಂಗಾವಳಿ ನದಿ ಮತ್ತು ಕಾನ ಮೂಲೆ ಗುಡ್ಡೆಗಳೆರಡು ಸಂಧಿಸುವ ಸುಂದರ ಪ್ರದೇಶ. ಆ ಪ್ರದೇಶದಲ್ಲಿ ಇರುವ ಬೊಮ್ಮಯ್ಯ ದೇವರ ಗುಡಿ, ಅದರ ಮುಂದೆ ಜುಳು ಜುಳು ಹರಿಯುವ ಗಂಗಾವಳಿ ನದಿ. ಹಿಂದೊಮ್ಮೆ ಕಾನ ಮೂಲೆ ಗುಡ್ಡದ ಪ್ರದೇಶ ದಟ್ಟ ಕಾನನದ ಪ್ರದೇಶವಾಗಿತ್ತು. ಇಂದು ಅದು ಬರೀ ಕುರುಚಲ ಗಿಡಗಳ ಗುಡ್ಡವಾಗಿ ಉಳಿದು ಕೊಂಡಿದೆ. ಹಿಚ್ಕಡದ ಕಣಿವೆ ಪ್ರದೇಶಗಳಾದ ಹಿರೇಗದ್ದೆ ಮತ್ತು ಮೋಡುಕಟ್ಟೆ ಪ್ರದೇಶಗಳು ಯಾವತ್ತು ಹರಿಧ್ವರ್ಣದಿಂದ ತುಂಬಿ ತುಳುಕುತ್ತಿರುತ್ತವೆ. ನನ್ನ ನೆಚ್ಚಿನ ಮುಳ್ಳಾಕೇರಿ ಗುಡ್ಡವನ್ನು ಎಷ್ಟು ಹೊಗಳಿದರು ಸಾಲದು. ಚಿಕ್ಕವರಿದ್ದಾಗ ಆಗಾಗ ಈ ಗುಡ್ಡವನ್ನು ಏರಿ, ಅಲ್ಲಿ ಸಿಗುವ ಮುಳ್ಳು ಹಣ್ಣುಗಳನ್ನು ಆರಿಸಿ ತಿನ್ನುವುದೆಂದರೆ ಅದೆನೋ ಸಂತೋಷ. ಗುಡ್ಡದ ತುದಿಯಲ್ಲಿರುವ ಬಂಡೆಯ ಮೇಲೆ ಕುಳಿತು ಸುತ್ತಲೂ ಕಾಣುವ ಮನೆಗಳನ್ನೂ, ಸುಂದರ ಬಯಲನ್ನೂ, ನದಿಯನ್ನೂ ದೂರದಲ ಕ್ಷಿತಿಜದಲ್ಲಿ ಕಾಣುವ ಅರಬ್ಬೀ ಸಮುದ್ರವನ್ನೂ ನೋಡುವುದೆಂದರೆ ಅದೇನೋ ಸಂತೋಷ. ಈಗಲೂ ಊರಿಗೆ ಹೋದಾಗ ಎರಡು ಮೂರು ಸಾರಿಯಾದರೂ ಗುಡ್ಡವೇರಿ ಬರುತ್ತೇನೆ. ಪ್ರಕೃತಿಯ ತುದಿಯಲ್ಲಿ ಕುಳಿತು ಪ್ರಕೃತಿಯನ್ನು ನೋಡುವಾಗ ಸಿಗುವ ಸುಖ ಬೇರೆಲ್ಲೂ ಸಿಗಲಾರದು.

 

ಊರ ನಡುಬಾಗ ಬೆಳೆದ ತೆಂಗು, ಮಾವು, ಆಡಿಕೆ, ಹಲಸು ಇತ್ಯಾದಿ ಮರಗಳಿಂದ ಆವೃತ್ತವಾಗಿದ್ದು, ಎತ್ತರದ ಪ್ರದೇಶದಿಂದ ನೋಡಿದರೆ ಯಾರ ಮನೆ ಎಲ್ಲಿದೆ ಎಂದು ಗುರುತಿಸುವುದು ಕಷ್ಟ. ಊರ ನಡುವಿರುವ ಬಾಣಸ ಕೆರೆಯಂತೂ, ಸಹರದ ಈಜು ಕೊಳವಿದ್ದಂತೆ. ಊರ ಬಹು ಜನ ಯುವಕರು, ಮಕ್ಕಳು ಈಜು ಕಲಿಯುವುದು ಇದೇ ಕೆರೆಯಲ್ಲಿ. ಮಳೆಗಾಲ ಬಂತೆಂದರೆ ತುಂಬಿ ಹರಿಯುವ ಕೆರೆ. ನಾವೆಲ್ಲಾ ಚಿಕ್ಕವರಿರುವಾಗ ಯಾವಾಗ ಮಳೆ ಪ್ರಾರಂಭವಾಗುತ್ತದೋ ಆಗಿನಿಂದ ದಿನಾ ಬಾಣಸಕೆರೆಗೆ ಹೋಗಿ, ಕೆರೆ ಎಷ್ಟು ತುಂಬಿದೆ ಎಂದು ನೋಡಿ ಬರುವುದು. ಒಮ್ಮೆ ಕೆರೆ ತುಂಬಿದ್ದು ಗೊತ್ತಾದರೆ ಸಾಕು, ನಾವು ನಮ್ಮ ವಯಸ್ಸಿನ ಹುಡುಗರನ್ನೆಲ್ಲ ಕರೆದುಕೊಂಡು ಬಾಣಸಕೆರೆಗೆ ಈಜಾಡಲು ಹೋಗುತ್ತಿದ್ದೆವು. ಅದೂ ಶನಿವಾರ ಭಾನುವಾರಗಳೆಂದರೆ ನಮಗೆ ಎಲ್ಲಿಲ್ಲದ ಸಡಗರ. ಬೆಳಿಗ್ಗೆ ಎಂಟು ಗಂಟೆಗೆ ಹೋದವರು ಮನೆ ತಲುಪುವುದು ಮಧ್ಯಾಹ್ನ ಎರಡು ಗಂಟೆ ನಂತರವೇ. ಎಷ್ಟೋ ಸಾರಿ ನಮ್ಮ ಪಾಲಕರು ನಮ್ಮನ್ನು ಹುಡುಕಿಕೊಂಡು ಬಂದು ನಮ್ಮನ್ನ ಊಟಕ್ಕೆ ಕರೆದೊಯ್ದಿದ್ದೂ ಇದೆ. ಹಾವಸೆಗಳು ಬೆಳೆದು ದೊಡ್ಡದಾಗಿ, ನೀರ ಮೇಲ್ಮೈ ಮೇಲೆ ತೇಲಾಡುವವರೆಗೂ ನಮ್ಮ ಈಜಾಟ ಮುಂದುವರೆಯುತ್ತಿತ್ತು. ಅಪರೂಪಕ್ಕೊಮ್ಮೆ ಬೆಂಗಳೂರಲ್ಲಿ ಈಜು ಕೊಳಕ್ಕೆ ಹೋದರೂ ನನಗೆ ಆ ಬಾಣಸಕೆರೆಯಲ್ಲಿ ಈಜಾಡಿದಷ್ಟು ಸಂತೋಷ ಸಿಗುವುದಿಲ್ಲ. ಇವೆಲ್ಲಾ ಕಾರಣಕ್ಕೇ ಏನೋ ನನಗೆ ನಾನು ಹುಟ್ಟಿದ ಊರೆಂದರೆ ಎಲ್ಲಿಲ್ಲದ ಪ್ರೀತಿ. ಅಲ್ಲಿ ನಾ ಪಡೆದ ಅನುಭವಗಳು ನನಗೆ ಜಗತ್ತಿನ ಯಾವ ಮೂಲೆಗೆ ಹೋದರೂ ಸಿಗಲಾರದು. ಹಾಗಾಗಿ ನನಗೆ ನಾನು ಹುಟ್ಟಿದ ಹಿಚ್ಕಡವು ನನಗೆ ಸ್ವರ್ಗಕ್ಕಿಂತ ಮಿಗಿಲಾದ್ದುದ್ದು ಹಾಗೂ ಪವಿತ್ರವಾದುದ್ದು.

 

--ಮಂಜು ಹಿಚ್ಕಡ್

 

Rating
Average: 5 (1 vote)

Comments

Submitted by ಗಣೇಶ Mon, 02/10/2014 - 23:53

ಹಿಚ್ಕಡ‌ ಮಂಜು ಅವರೆ, ಸ್ವರ್ಗಾದಪಿ ಗರೀಯಸಿ ನಿಮ್ಮ‌ ಹಿಚ್ಕಡ‌. ಒಮ್ಮೆ ಬಂದು ನೋಡಬೇಕು ಅನ್ನುವಷ್ಟು ಚೆನ್ನಾಗಿ ಬರೆದಿದ್ದೀರಿ. ಹಾಗೇ ಗೂಗ್ಲ್ ಹತ್ತಿ ಅಂಕೋಲ‌ ಬಳಿ ಇಳಿದು, ಗಂಗಾವಳಿ ನದಿಯುದ್ದಕ್ಕೂ ಸ್ಯಾಟಲೈಟ್ ಚಿತ್ರ‌ ನೋಡಿಕೊಂಡು ಹೋದೆ. ಬಹಳ‌ ಸುಂದರವಾಗಿದೆ. ಕೆಲ‌ ಚಿತ್ರಗಳನ್ನಾದರೂ ಹಾಕಬೇಕಿತ್ತು.

Submitted by nageshamysore Tue, 02/11/2014 - 03:07

In reply to by ಗಣೇಶ

ಊರಿನ ಬಗೆಗಿನ ಎಲ್ಲಾ ಭಾವಗಳು ಬರಹದುದ್ದಕ್ಕೂ ಕಾವ್ಯ ರೂಪಕದಂತೆ ಅಭಿವ್ಯಕ್ತವಾಗಿವೆ. ಗಣೇಶರು ಹೇಳಿದಂತೆ ಬಂದು ನೋಡಬೇಕೆನಿಸುವ ಮಟ್ಟಿಗೆ 'ಪ್ಯಾಶನೆಟ್' ಆಗಿ ಬಂದಿದೆ ಬರಹ. ಅಭಿನಂದನೆಗಳು.:-)

Submitted by manju.hichkad Tue, 02/11/2014 - 09:49

In reply to by ಗಣೇಶ

ಓಹ್. ಅಂತೂ ಕುಳಿತಲ್ಲಿಂದಲೇ ನಮ್ಮೂರಿಗೆ ಹೋಗಿ ಬಂದಿದ್ದಿರಾ. ಕೆಲವು ಚಿತ್ರಗಳನ್ನು ಹಾಕಬೇಕಿತ್ತು ಅಂತ ನನಗೂ ಈಗ ಅನ್ನಿಸುತ್ತಿದೆ. ಚಿತ್ರಗಳಿಗಾಗಿ ಈ ಕೆಳಗಿನ ಕೊಂಡಿಯನ್ನು ನೋಡಿ. ಗಣೇಶ್ ಅವ್ರೇ ನಿಮ್ಮ ಪ್ರೊತ್ಸಾಹಕ ಮಾತುಗಳಿಗೆ ನಾನು ಸದಾ ಚಿರರುಣಿ.
https://www.facebook.com/manjunath.nayak.9843/media_set?set=a.5896333977...https://www.facebook.com/manjunath.nayak.9843/media_set?set=a.6324054901...https://www.facebook.com/manjunath.nayak.9843/media_set?set=a.1703435763...