ಆವಲಕೊಂಡ ಅಥವ ಆವಲಬೆಟ್ಟ
ಆವಲಕೊಂಡ ಅಥವ ಆವಲಬೆಟ್ಟ
ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ ಕೊಡುವ ಸಲಹೆಗಳೆಂದರೆ, ಕೇರಳ, ಮಂಗಳೂರು ಎಂದು ಬೇರೆ ಬೇರೆ ಹೆಸರುಗಳು.
ಆದರೆ ಅಲ್ಲಿಗೆಲ್ಲ ಹೋಗಿಬರಲು ಸಾಕಷ್ಟು ತಯಾರಿ ಇರಬೇಕು. ರಜಾ, ಹಣ ಎಲ್ಲ ಹೊಂದಿಸಿಕೊಳ್ಳಬೇಕು. ಬೆಂಗಳೂರಿನ ಸುತ್ತಮುತ್ತಲೂ ಒಂದೇ ದಿನದಲ್ಲಿ ಹೋಗಿಬರಬಹುದಾದ ಜಾಗ ಹುಡುಕಲು ಹೊರಟರೆ ಅಲ್ಲಿರುವ ಜನಪ್ರವಾಹದ ಭಯ.
ಕಳೆದ ಶುಕ್ರವಾರ ಹೀಗೆ, ತಕ್ಷಣಕ್ಕೆ ಎಂಬಂತೆ ಹೊರಟಿದ್ದು ಬೆಂಗಳೂರಿನ ಹತ್ತಿರವೇ ಇರುವ ಸ್ಥಳ ಆವಲಬೆಟ್ಟ, ಅಥವ ಆವಲಕೊಂಡ.
ಅಲ್ಲಿ ಏನಿರಬಹುದು ,
ಒಂದುದೇವಾಲಯ
ಎನ್ನುವ ಭಾವದಲ್ಲಿಯೆ ಹೊರಟಿದ್ದೆ, ಹೀಗೆ ಕರೆದವರ ಜೊತೆ. ಅವರು ಅಲ್ಲಿಗೆ ಪ್ರತಿವರ್ಷ ಹೋಗಿಬರುವವರು , ನನಗಾದರೋ ಹೊಸದು. ಆದರೆ ಅಲ್ಲಿಗೆ ಹೋದಮೇಲಷ್ಟೆ ನನ್ನ ಭಾವ ಬದಲಾಯಿತು.
ಬೆಂಗಳೂರಿಗೆ ಇಷ್ಟು ಹತ್ತಿರದಲ್ಲಿ ಇಷ್ಟು ಪ್ರಶಾಂತವಾದ, ಬೆಟ್ಟಗುಡ್ಡಗಳು, ವನಸಿರಿ ಇರಬಹುದೆಂದು ಕಲ್ಪಿಸಿಯೆ ಇರಲಿಲ್ಲ. ಹೆಚ್ಚು ತಯಾರಿ ಇಲ್ಲದೆ ಹೋಗಿ ಬರಬಹುದಾದ ಜಾಗ. ಆದರೆ ಬಂಡೆಗಳನ್ನು ಹತ್ತುವ ಸಾಹಸ ಮಾಡಬೇಕಿದ್ದಲ್ಲಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು.
ಗೂಗಲ್, ಅಥವ ಆಪಲ್ ಇವೆಲ್ಲ ಏನು ಬೇಡ ಬಿಡಿ, ನೇರ ನೇರ ಹಾಗೆ ಹೇಳಿಬಿಡುವೆ, ಬೆಂಗಳೂರು ಹೈದರಬಾದ ಹೆದ್ದಾರಿಯಲ್ಲಿ, ೫೦-೫೨ ಕಿ.ಮೀ ಸಾಗುತ್ತ ಹೋದರೆ ಚಿಕ್ಕಬಳ್ಳಾಪುರ ಸಿಗುವುದು, ನಂತರ ೧೪ ಕಿ.ಮಿ ಮುಂದೆ ಬಂದು ಸ್ವಲ್ಪ ಎಡಬಾಗ ನೋಡುತ್ತ ನಡೆಯಿರಿ (ಕಾರಿನಲ್ಲಿಯಾದರೆ) , ಹೆದ್ದಾರಿ ಬಿಟ್ಟು ಸರ್ವೀಸ್ ರೋಡಿಗೆ ಬರಬೇಕಾಗುತ್ತೆ, ಅಲ್ಲಿ ’ಪೆರೇಸಂದ್ರ’ ಕ್ರಾಸ್ ಅಂತ ಭೋರ್ಡ್ ಇರುತ್ತೆ, ಸರ್ವಿಸ್ ರೋಡ್ ಗೆ ಬಂದರೆ, ಎಡಬಾಗಕ್ಕೆ ಒಂದು ರಸ್ತೆ ಹೋಗುತ್ತೆ, ಮಂಡಿಕಲ್ ಕಡೆಗೆ, ಮಂಡಿಕಲ್ ನಲ್ಲಿ ಮತ್ತೆ ಎಡಕ್ಕೆ ಹೊರಳಿ ರಸ್ತೆಯಲ್ಲಿಯೆ ಹೋದರೆ ನೇರ ಆವಲ ಬೆಟ್ಟದ ಬುಡಕ್ಕೆ ಹೋಗುವೆವು. ಪೆರೇಸಂದ್ರ ದಾಟಿದ ನಂತರ ಅಲ್ಲಲ್ಲಿ ’ಆವಲಬೆಟ್ಟಕ್ಕೆ ದಾರಿ’ ಎಂದು ಕಣ್ಣಿಗೆ ಕಾಣುವ ಹಾಗೆ ಭೋರ್ಡ್ ಕಾಣುತ್ತದೆ. ಪೆರೇಸಂದ್ರದಿಂದ ಆವಲಬೆಟ್ಟ ಸುಮಾರು ಹತ್ತು ಹನ್ನೆರಡು ಕಿ.ಮೀ ಆಗಬಹುದು ಅಷ್ಟೆ. ಬೆಂಗಳೂರಿನಿಂದ ಮಂಡಿಕಲ್ ಗೆ ಬಸ್ ಸೌಕರ್ಯವಿದೆ. ಅಲ್ಲಿಂದ ನಡೆಯಬೇಕಾಗಿರುತ್ತೆ, ಸ್ವಂತ ವಾಹನವಾದರೆ ಬೆಟ್ಟದ ಬುಡದವರೆಗೂ ಹೋಗಿ ಇಳಿದು ಅಲ್ಲಿಂದ ನಡೆಯಬಹುದು
ವಾಹನದಲ್ಲಿ ಹೋದರೆ ಬೆಟ್ಟದಬುಡದಲ್ಲಿ ಕಾರು ನಿಲ್ಲಿಸಿದ ನಂತರ ವಾಹನದ ಎಲ್ಲ ಕಿಟಕಿ ಗಾಜುಗಳನ್ನು ಮುಚ್ಚಲು ಮರೆಯದಿರಿ ಕಾರಣ
’ಕೋತಿಗಳು’. ಮರೆತರೆ ಏನನ್ನು ಉಳಿಸುವದಿಲ್ಲ. ಈಗ ತಲೆಯಿತ್ತಿ ನೋಡಿದರೆ ಆವಲ ಬೆಟ್ಟದ ಮೆಟ್ಟಿಲುಗಳು ಕಾಣುವುವು.
ಕೆಳಗೆ ಒಂದು ನೀರಿನ ದೊಣೆ ಇದೆ, ಅಲ್ಲಿ ಸ್ನಾನ ಮಾಡಿದರೆ ಚರ್ಮದ ವ್ಯಾದಿಗಳೆಲ್ಲ ವಾಸಿಯಾಗುವದಂತೆ. ನೀರಂತು ತಣ್ಣಗೆ ಐಸ್ ವಾಟರ್ ನಂತೆ ಇರುತ್ತದೆ, ಹಸಿರುಬಣ್ಣ. ನಾವೆಲ್ಲ ತಲೆಗೆ ಸ್ವಲ್ಪ ಪ್ರೋಕ್ಷಣೆ ಮಾಡಿ ಚುಮುಕಿಸಿಕೊಂಡೆವು. ಶುದ್ದವಾದ ಗಾಳಿ ಮೈಮನವೆಲ್ಲ ತಂಪಾಗಿಸುತ್ತದೆ. ಬೆಂಗಳೂರಿನ ಹತ್ತಿರ ಇಂತಹ ಪ್ರಶಾಂತ ಜಾಗವಿದೆಯ ಅನ್ನಿಸುತ್ತದೆ.
ನಂತರ ಸಾದ್ಯವಾದರೆ ಅಲ್ಲಿಯೆ ಒಂದು ಕೋಲನ್ನು ಸಂಪಾದಿಸಿ ಹತ್ತಲು ಅಂತ ಅಲ್ಲ ಕೈಯಲ್ಲಿ ಕೋಲುಗಳಿದ್ದರೆ ಕೋತಿಗಳು ನಿಮ್ಮ ಬಗ್ಗೆ ಸ್ವಲ್ಪ ಗೌರವ ಭಾವದಿಂದಿರುತ್ತವೆ.
ಬೆಟ್ಟ ಹತ್ತಲು ಪ್ರಾರಂಬಿಸಿ. ಮೆಟ್ಟಿಲುಗಳು ಜಾಸ್ತಿಯೇನು ಇಲ್ಲ. ೪೦-೫೦ ಒಳಗೆ ಅನ್ನಿಸುತ್ತೆ ಎಣಿಸಲಿಲ್ಲ. ಮೇಲೆ ಹೋಗುತ್ತಿರುವಂತೆ , ದೇವಾಲಯದ ಗೋಪುರ ಕಾಣುತ್ತದೆ, ದೇವಾಲಯದ ಮುಂದಿನ ಜಾಗದಲ್ಲಿ ನಿಂತು ನೋಡಿದರೆ, ಸುತ್ತಲ ಕಣಿವೆ. ಹಳ್ಳಿಗಳು, ದೂರದಲ್ಲಿ ಎಲ್ಲೋ ಇರುವ ಕೆರೆಗಳು ಎಲ್ಲವೂ ಗೋಚರ. ಆ ಬಿಸಿಲಮಂಜನ್ನು ಕಣ್ಣಿಗೆ ತುಂಬಿಕೊಳ್ಳುತ್ತ, ದೇವಾಲಯದ ಒಳಗೆ ಹೋದರೆ,
ಅದು ದೊಡ್ಡ ಬಂಡೆಯ ಕೆಳಗಿರುವ ಗುಹೆಯಂತಿದೆ. ಗವಿ ಗಂಗಾದರದೇವಾಲಯ ನೆನಪಿಸುವಂತೆ ಇದೆ. ಅಲ್ಲಿರುವುದು ಉದ್ಭವ ನರಸಿಂಹ. ಅವನ ಎದುರಿಗೆ ಚಂಚಲಕ್ಷ್ಮೀ ಯ ಆವಾಸಸ್ಥಾನ. ಇದು ಮೊದಲಿಗೆ ಹಸುಗಳಿಗೆ ಆವಾಸಸ್ಥಾನ ಹಾಗಾಗಿ ಆವಲ(ತೆಲುಗುವಿನಲ್ಲಿ ಹಸು)ಕೊಂಡ ಎನ್ನುವ ಹೆಸರು.
ಒಳಗೆ ತಂಪನೆಯ,ಪ್ರಶಾಂತ ಮನ ತುಂಬುವ ವಾತವರಣ. ಹೋದವರಿಗೆ ನೇರ ಗರ್ಭಗುಡಿಗೆ ಪ್ರವೇಶ ಬಹುಶಃ ಬೇರೆ ಯಾವದೇವಾಲಯದಲ್ಲು ಇಂತಹ ಅನುಕೂಲವಿಲ್ಲ. ದೊಡ್ಡಬಂಡೆಯ ಅಡಿಯಲ್ಲಿ ನಿಂತಿರುವ ಉದ್ಭವರೂಪಿನ ನರಸಿಂಹ. ಇಲ್ಲಿಂದ ಒಳಗಿನ ಸುರಂಗಮಾರ್ಗವೊಂದು ಮೇಲಿನ ಬೆಟ್ಟದ ಮಹಾಲಕ್ಷಿ ದೇವಾಲಯಕ್ಕೆ ಹೋಗುವ ದಾರಿಯಾಗಿತ್ತಂತೆ ಈಗ ಮುಚ್ಚಲಾಗಿದೆ. ತಣ್ಣನೆಯ ವಾತವರಣದಲ್ಲಿ ಕುಳಿತು ಹೊರಬನ್ನಿ.
ಹೊರಬಂದು ಅರ್ದಚಕ್ರಾಕಾರವಾಗಿರುವ ಸ್ಥಳದಲ್ಲಿ ನಿಂತರೆ ಕಣ್ಣು ಹಾಯುವಷ್ಟು ದೂರಕ್ಕು ಕಾಣುವ ಸುತ್ತಲ ಹಳ್ಳಿಗಳು, ಕೆರೆ, ಕಾಡು ಕಣ್ತುಂಬಿಕೊಳ್ಳಬಹುದು. ಪಕ್ಕದಲ್ಲಿಯೆ ಚಿಕ್ಕದೊಂದು ಹನುಮನ ಗುಡಿ ಇದೆ.
ಇಲ್ಲಿ ಸ್ವಲ್ಪ ಕಾಲ ಕುಳಿತಿದ್ದು, ಮತ್ತೆ ಎಡಗಡೆಯ ಪಕ್ಕದಿಂದ ಹೊರಟರೆ ಮೇಲೆ ಹತ್ತಲು ಮೆಟ್ಟಿಲುಗಳು. ಕಡಿದಾದ ಬಹುಹಿಂದೆ ನಿರ್ಮಾಣವಾದ ಮೆಟ್ಟಿಲು , ಅಕ್ಕಪಕ್ಕದಲ್ಲಿ ಬೆಳೆದುನಿಂತಿರುವ ಮರಗಿಡ ಬಂಡೆಗಳ ನಡುವೆ ಸಾಗಿದರೆ ಮೇಲಿನ ಮಹಾಲಕ್ಷ್ಮೀ ದೇವಾಲಯಕ್ಕೆ ಕರೆದೊಯ್ಯುತ್ತದೆ ನಮ್ಮನ್ನು.
ಸುತ್ತಲೂ ತಲೆ ಎತ್ತಿ ನೋಡಬೇಕಾದ ಕೋಡುಗಲ್ಲುಗಳು. ಚಾರಣದ ಅಭ್ಯಾಸವಿದ್ದವರಿಗೆ ಪಕ್ಕದಲ್ಲಿಯೆ ಇರುವ ಬಂಡೆಗಳು ಹತ್ತಲು ಅಹ್ವಾನ ನೀಡುತ್ತವೆ. ಸುತ್ತಲಿನ ದೃಷ್ಯ ಮನತುಂಬುತ್ತದೆ. ನಾವು ಹೋದಾಗ ಚಿಕ್ಕಬಳ್ಳಾಪುರದ ವರ್ಣಚಿತ್ರ ಕಲಾವಿದರ ಒಂದು ಕ್ಯಾಂಪ್ ಅಲ್ಲಿದ್ದು, ಸುಮಾರು ಇಪ್ಪತ್ತು ಮಂದಿ ಕುಳಿತು, ಎದುರಿನ ದೃಷ್ಯಗಳನ್ನು ಅವರ ಮುಂದಿದ್ದ ಬಿಳಿಬಣ್ಣದ ಕಾಗದದ ಮೇಲೆ ವರ್ಣಗಳಲ್ಲಿ ಮೂಡಿಸುತ್ತಿದ್ದರು. ಆಶ್ಚರ್ಯವೆಂದರೆ ಮೇಲೆ ಇರುವ ನೂರಾರು ಕೋತಿಗಳು ಅವರನ್ನು ಕಾಡದೆ ಗಂಭೀರವಾಗಿದ್ದು, ಕೆಲವು ಕೋತಿಗಳು ಅವರು ಬರೆಯುವ ಚಿತ್ರಗಳನ್ನು ಹತ್ತಿರದಿಮ್ದ ಗಮನಿಸುತ್ತ ಕುಳಿತಿದ್ದವು !!
ಮಹಾಲಕ್ಷ್ಮೀ ದೇವಾಲಯದ ಒಳಹೋಗಿ ನಮಿಸಿ, ಕೆಳಗಿಳಿಯುವಾಗ ಮಾರ್ಗಮದ್ಯೆ ಮೆಟ್ಟಿಲ ಮೇಲೆ ಸರ್ಪವೊಂದು ಹರಿದುಹೋಯಿತು.
ಅಲ್ಲಿಯೆ ಊಟ ಏರ್ಪಾಡು ಮಾಡಿದ್ದರು, ಆದರೆ ನಮಗಾಗಿ ಮಾಡಿದ ಪುಳಿಯೋಗರೆಯನ್ನು ಬಡಿಸುವರು ಪಾತ್ರೆಯಲ್ಲಿ ತರುವಾಗ ಒಂದು ಬಕೆಟ್ ಪೂರ ಪುಳಿಯೋಗರೆಯನ್ನು ಒಂದು ಕಪಿ ನಾಯಕತ್ವ ವಹಿಸಿ, ದಾಳಿ ನಡೆಸಿತು, ಕೈಬಿಟ್ಟ ತಕ್ಷಣ ಅನ್ನವೆಲ್ಲ ನೆಲದ ಮೇಲೆ, ಕಪಿಸೈನ್ಯ ದಾಳಿಮಾಡಿ ಬೇಗ ಬೇಗ ಬಾಯಿಗೆ ತುಂಬಿಕೊಂಡವು.
ಊಟಮುಗಿಸಿ ನಂತರ ಕೆಳಗಿಳಿದರೆ ಬೆಟ್ಟದ ಬುಡಕ್ಕೆ ,
ತಣ್ಣನೆಯ ಗಾಳಿಯಲ್ಲಿ ಸ್ವಲ್ಪ ಕಾಲ ಕುಳಿತು ಅಲ್ಲಿಂದ ಬೆಂಗಳೂರಿಗೆ ಹೊರಡಬಹುದು.
ಚಿತ್ರಗಳು : ಆವಲಬೆಟ್ಟದಲ್ಲಿ ತೆಗೆದವು, ಕಡೆಯ ಎರಡು ಚಿತ್ರಗಳು ಒಂದು ಪೈಂಟಿಂಗ್ ಒಂದು ನಿಜ ದ್ಱುಷ್ಯದ ಪೋಟೊ
Comments
ಉ: ಆವಲಕೊಂಡ ಅಥವ ಆವಲಬೆಟ್ಟ
ಆಸಕ್ತಿ ಇರುವವರು ವೀಡಿಯೋದಲ್ಲಿ ದೇವಾಲಯದ ಒಳಗಿನ ದ್ಱುಷ್ಯಗಳನ್ನು ಸಹ ನೋಡಬಹುದು, ಮೇಲಿನ ಬರಹದಲ್ಲಿ ಸೇರಿಸುವ ಮುನ್ನ ಸೇವ್ ಒತ್ತಿಬಿಟ್ಟಿದ್ದೆ, ಹಾಗಾಗಿ ಇಲ್ಲಿ ನೋಡಿಆವಲಗುಡ್ಡದ ವೀಡಿಯೋ
ಉ: ಆವಲಕೊಂಡ ಅಥವ ಆವಲಬೆಟ್ಟ
ಪಾರ್ಥರೆ,
ಸಾಗರ, ಕೆಳದಿ, ಬನವಾಸಿ..ಪ್ರವಾಸ ಸುತ್ತಿಸಿ ಸುಧಾರಿಸಿಕೊಳ್ಳುವುದರೊಳಗೆ ಆವಲಬೆಟ್ಟ! ಚಿತ್ರ ಲೇಖನ ಎರಡೂ ಸೂಪರ್. ವಿಡಿಯೋದಿಂದ ದೇವರ ಪೂಜೆ ನೋಡುವ ಭಾಗ್ಯವೂ ಸಿಕ್ಕಿತು. ಧನ್ಯವಾದಗಳು.
>>ಕೆಲವು ಕೋತಿಗಳು ಅವರು ಬರೆಯುವ ಚಿತ್ರಗಳನ್ನು ಹತ್ತಿರದಿಮ್ದ ಗಮನಿಸುತ್ತ ಕುಳಿತಿದ್ದವು !!
ಪೇಪರ್ ಹಾಗೂ ಬಣ್ಣಗಳನ್ನು ಕೊಟ್ಟರೆ ಅವೂ ಚಿತ್ರ ಬಿಡಿಸಿಯಾವು. :)
In reply to ಉ: ಆವಲಕೊಂಡ ಅಥವ ಆವಲಬೆಟ್ಟ by ಗಣೇಶ
ಉ: ಆವಲಕೊಂಡ ಅಥವ ಆವಲಬೆಟ್ಟ
ಗಣೇಶರೆ ವಂದನೆಗಳು
ಮೆಚ್ಚುಗೆಗೆ. ಪ್ರವಾಸದ ವರದಿಗಳಿಗೆ ನಿಮ್ಮ ಬರಹಗಳೇ ಸ್ಪೂರ್ತಿ !
ಉ: ಆವಲಕೊಂಡ ಅಥವ ಆವಲಬೆಟ್ಟ
ಪಾರ್ಥಾ ಸಾರ್, ಜಾಗ ಬರಹ ಎರಡೂ ಚೆನ್ನಾಗಿವೆ ! ನೀವು ಗಣೇಶರೂ ಕರ್ನಾಟಕ ಟೂರಿಸಂನಿಂದ ಸ್ವಲ್ಪ ರಾಯಲ್ಟಿ ವಸೂಲ್ ಮಾಡಿಕೊಳ್ಳಬಹುದು - ಮಾರ್ಕೆಟಿಂಗ್ ಸರ್ವೀಸ್ ಹೆಸರಲ್ಲಿ :-)
In reply to ಉ: ಆವಲಕೊಂಡ ಅಥವ ಆವಲಬೆಟ್ಟ by nageshamysore
ಉ: ಆವಲಕೊಂಡ ಅಥವ ಆವಲಬೆಟ್ಟ
ರಾಯಲ್ಟಿ ಆಗಲೇ ಸಿಗುತ್ತಿದೆಯಲ್ಲ ನಾಗೇಶ್ ಸಾರ್, ನಿಮ್ಮ ಮೆಚ್ಚುಗೆಯ ರೂಪದಲ್ಲಿ !
ಉ: ಆವಲಕೊಂಡ ಅಥವ ಆವಲಬೆಟ್ಟ
ಪ್ರವಾಸ ನನಗೂ ಇಷ್ಟವಾದ ಸಂಗತಿ. ಹಲವಾರು ಕಾರಣಗಳು ಅಡ್ಡಿಯಾಗುತ್ತವೆ. ನೀವು, ನಿಮ್ಮಂತಹವರು ಪ್ರವಾಸ ಮಾಡಿ ಸಂತೋಷ ಹಂಚಿಕೊಳ್ಳುತ್ತಿರುವುದು ನನಗೂ ಸಂತಸ ನೀಡುತ್ತಿದೆ. ಧನ್ಯವಾದ, ಪಾರ್ಥಸಾರಥಿಯವರೇ.
In reply to ಉ: ಆವಲಕೊಂಡ ಅಥವ ಆವಲಬೆಟ್ಟ by kavinagaraj
ಉ: ಆವಲಕೊಂಡ ಅಥವ ಆವಲಬೆಟ್ಟ
ಹೌದು ಕವಿನಾಗರಾಜ ಸಾರ್, ಪ್ರವಾಸಕ್ಕೆ ದಿನ ರಜಾ ಎಲ್ಲವನ್ನು ಹೊಂದಿಸುವುದು ನನಗೂ ಕಷ್ಟವೇ ಆಗುತ್ತಿದೆ, ಮೊದಲು ಹೋಗುತ್ತಿದ್ದಂತೆ ಹೋಗಲು ಆಗುತ್ತಿಲ್ಲ. ಎಲ್ಲೋ ವರುಷ/ಎರಡು ವರುಷಕ್ಕೊಂದು ಸಾರಿ ಹೋಗುತ್ತಿರುವೆ ಅಷ್ಟೆ. ನಿಮಗೆ ಸಂತಸವಾದರೆ ಅದೇ ಸಂತಸ