ಕಥೆ: ಪರಿಭ್ರಮಣ..(02)
(ಮುಂದುವರೆದದ್ದು)
(ಪರಿಭ್ರಮಣ..01 : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಸುತ್ತಲೂ ನಿಂತವರನ್ನೆ ನೋಡಿದ ಶ್ರೀನಾಥನಿಗೆ, ಇಂದು ಆಫೀಸಿಲ್ಲದ ಕಾರಣ ಬರಿಯ ಗಂಡು ಮುಖಗಳೆ ಹೆಚ್ಚಾಗಿ ಕಂಡವು. ಬಹುಶಃ ಅದೆ ಕಾರಣಕ್ಕೊ ಏನೊ ಗುಂಪೂ ಕೂಡಾ ವಾರದ ದಿನದ ಹಾಗೆ ದೊಡ್ಡದಿರಲಿಲ್ಲ. ಅವರೆಲ್ಲಾ ಅಲ್ಲೆ ಸುತ್ತ ಮುತ್ತಲಲ್ಲಿ ಕೆಲಸ ಮಾಡುವ ಕೆಲಸಗಾರರೊ, ಅಥವಾ ಟ್ರೈನು ಹಿಡಿಯಲು ಬಂದವರೊ ಇದ್ದಂತೆ ಕಂಡಿತು. ಅನತಿ ದೂರದಲ್ಲೆ ನಿಂತಿದ್ದವನೊಬ್ಬ ಇವನನ್ನು ನೋಡಿ ಮುಗುಳ್ನಕ್ಕು - 'ಬಿಗ್..ಬಿಗ್..ರಯಿನ್ ' ಎಂದ. ತಾನು ನಕ್ಕು, ' ಯೆಸ್...ಹೇವಿ ರೈನ್...' ಅನ್ನುತ್ತಿದ್ದ ಹಾಗೆ ಆ ವ್ಯಕ್ತಿ ಇನ್ನು ತುಸು ಪಕ್ಕಕ್ಕೆ ಬಂದು ನಿಂತು 'ಪೊಮ್ ಸೊಮ್ಚಾಯಿ..' ಎಂದು ಪರಿಚಯ ಮಾಡಿಕೊಂಡ. ಅಷ್ಟು ದಿನಗಳ ಒಡನಾಟದಲ್ಲಿ 'ಪೊಮ್' ಎಂದರೆ 'ನಾನು' ಮತ್ತು 'ಕುನ್' ಎಂದರೆ 'ನೀನು' ಎನ್ನುವಷ್ಟು ಸರಳ ಥಾಯ್ ಅರ್ಥವಾಗುತ್ತಿತ್ತು. ಶ್ರೀನಾಥ ಉತ್ತರಿಸುವ ಮೊದಲೆ ಅವನೆ, 'ಮೀ ಟ್ಯಾಕ್ಸಿ ಡ್ರೈವರ...ಯೂ ಸೀ ಥೈಲ್ಯಾಂಡ್ , ಗೊ ಮೈ ಟ್ಯಾಕ್ಸಿ...' ಎನ್ನುತ್ತ ಅವನ ಫೋನು ನಂಬರಿದ್ದ ಕಾರ್ಡೊಂದನ್ನು ಕೈಗಿತ್ತ.
ಹಾಗೆ ಅವನ ಎಡದ ಕೈಯಲ್ಲಿ ತುಸು ದಪ್ಪನೆಯ ರಟ್ಟಿನ ಹಾಗಿದ್ದ ಮಡಿಸಿದ, ಪ್ಲಾಸ್ಟಿಕ್ಕಿನ ಹೊದಿಕೆ ಹೊದ್ದ ಕಡತವನ್ನು ಕಂಡು ಶ್ರೀನಾಥನ ತುಟಿಯಂಚಲೂ ಕಿರುನಗೆಯುಕ್ಕಿ ಬಂತು. ಬ್ಯಾಂಕಾಕಿನ ಬಹುತೇಕ ಎಲ್ಲಾ ಟ್ತ್ಯಾಕ್ಸಿ ಡ್ರೈವರುಗಳ 'ಸೈಡ್ ಬಿಜಿನೆಸ್..' ಅಥವ 'ಅಡ್ಡ ಕಸುಬು' ಎಂದೆ ಕರೆಯಬಹುದಾದ ಮತ್ತೊಂದು ಅನಧಿಕೃತ ಉದ್ಯೋಗವೆಂದರೆ ಇದೆ. ಇಲ್ಲಿಗೆ ಬರುವ ಟೂರಿಸ್ಟುಗಳೆ ಇಲ್ಲಿನ ಪ್ರವಾಸೋದ್ಯಮ ವಾಣಿಜ್ಯದ ಒಂದು ಪ್ರಮುಖ ಅಂಗ - ಹೀಗಾಗಿ ಅವರು ಸಾಮಾನ್ಯವಾಗಿ ಓಡಾಡುವ ಟ್ಯಾಕ್ಸಿಗಳಲ್ಲಿ, ಅಥವಾ ಟ್ರೈನು ಸ್ಟೇಷನ್ನಿನಂತಹ ಜನಸಂದಣಿಯ ಸ್ಥಳಗಳ ಸುತ್ತ ಮುತ್ತ ಈ 'ಕಡತ' ಹಿಡಿದ 'ಏಜೆಂಟರು' ಬೇಕಾದಷ್ಟು ಸಿಗುತ್ತಾರೆ. ಈ ಇಡಿ ವ್ಯವಸ್ಥೆಯೆ ಕಮೀಶನ್ನಿನ ಮೇಲೆ ಕೆಲಸ ಮಾಡುತ್ತದೆಂದು ಕಾಣುತ್ತದೆ - ಹೀಗಾಗಿ ಅಲ್ಲಿ ಯಾರೂ ಪೂರ್ಣಕಾಲೀನ ಕಾರ್ಮಿಕರನ್ನು ನೇಮಿಸುವ ಅಗತ್ಯವಿಲ್ಲ. ಸಮಯವಿರುವ ಯಾವನಾದರೂ - ಕೆಲಸವಿಲ್ಲದ ಉಢಾಳನಿಂದ ಹಿಡಿದು ಕೆಲಸದ ಮಧ್ಯೆ ಬಿಡುವಿನ 'ಸದುಪಯೋಗ' ಪಡಿಸಿಕೊಳ್ಳಬಯಸುವ ಉದ್ಯೋಗಿಯಾದರೂ ಸರಿ, ಈ ಸೈಡು ಬಿಜಿನೆಸ್ಸಿನಲ್ಲಿ ಪಾಲ್ಗೊಂಡು ಅಷ್ಟಿಷ್ಟು ಕಾಸು ಮಾಡಿಕೊಳ್ಳಬಹುದು. ಇದೇನೂ ಥಾಯಿಲ್ಯಾಂಡಿಗೆ ಮಾತ್ರ ವಿಶೇಷವೆಂದೇನೂ ಅಲ್ಲ, ಎಲ್ಲಾ ಕಡೆಯೂ ಇದ್ದದ್ದೆ. ಆದರೆ ಇಲ್ಲಿನ ವಿಶೇಷವೆಂದರೆ ಇದರ ಉದ್ದಗಲದ ವ್ಯಾಪ್ತಿ - ಅದೂ ಈ ರೀತಿಯ ಅನಧಿಕೃತ ಜಾಲದ ರೂಪದಲ್ಲಿ. ಟ್ಯಾಕ್ಸಿಯವರೂ, ನಮ್ಮ ಆಟೋ ರಿಕ್ಷಾಗಳ ರೂಪಾಂತರವಾದ 'ಟುಕ್ ಟುಕ್' ನಡೆಸುವವರೂ, ಹಾಗೆಯೆ ಇಲ್ಲಿನ ವಿಶೇಷವಾದ 'ಮೋಟಾರು ಬೈಕು ಆಟೊ' ಡ್ರೈವರುಗಳು - ಹೀಗೆ ಜನ ಸಾಗಾಣಿಕೆ ಉದ್ಯಮದ ಪ್ರತಿ ಕೊಂಡಿಯಲ್ಲೂ ವಿದೇಶಿ ಪ್ರವಾಸಿಗನನ್ನು ಕಂಡ ತಕ್ಷಣವೆ, ಈ ಕಡತ ಒಳಗಿನಿಂದ ಹೊರಬರುತ್ತದೆ.. ಶ್ರೀನಾಥನಿಗಂತೂ ಎದುರಿಗೆ ಸಿಕ್ಕ ಗಂಡಸರೆಲ್ಲಾ ಹಿನ್ನಲೆಯಲ್ಲಿ ಈ ಸೈಡ್ ಬಿಜಿನೆಸ್ಸು ಹಿಡಿದವರೆಂದು ಅನುಮಾನ - ಆಫೀಸಿಗ್ಹೋಗುವ ಜನಗಳನ್ನು ಬಿಟ್ಟು..! ಇದೆಲ್ಲವೂ ಆ ಕಡತದಿಂದ ನೆನಪಾಗಿಯೆ ಅವನಲ್ಲಿ ಮುಗುಳ್ನಗೆ ಮೂಡಿಸಿದ್ದು :-)
ಬ್ಯಾಂಕಾಕಿನಲ್ಲಿ ಟ್ಯಾಕ್ಸಿ, ಟುಕ್ ಟುಕ್, ಟ್ರೈನುಗಳಲ್ಲಿ ಓಡಾಡಲು ತುಂಬಾ ಅಗ್ಗ..ಅಲ್ಲಿನ ನಿಜವಾದ ಸಮಸ್ಯೆ ದರವಲ್ಲ, ಬದಲಿಗೆ ಸಮಯದ ಪರಿವೆಯಿಲ್ಲದೆ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಳ್ಳುವ ಬಗೆ. ಶ್ರೀನಾಥನೂ ಟ್ಯಾಕ್ಸಿ ಬಳಸುತ್ತಾನಾದರೂ ಈಗ ಮೊದಲಿಗಿಂತ ಸ್ವಲ್ಪ ಹೆಚ್ಚು ಚಾಲೂಕಾಗಿದ್ದಾನೆ. ಬಂದ ಹೊಸದರಲ್ಲಿ ' ಹಲೊ , ಹೌ ಆರ ಯೂ? ಪ್ಲೀಸ್ ಕಮ್ ಟೇಕ್ ಮೈ ಟ್ಯಾಕ್ಸಿ' ಅಂತ ಕೇಳುತ್ತಿದ್ದ ಹಾಗೆ ಸದ್ಯ, ಇಂಗ್ಲೀಷು ಮಾತಾಡುವ ಡ್ರೈವರು ಸಿಕ್ಕಿದನೆಂದು ಖುಷಿಯಾಗಿ ಹೋಗಿ ಕೂತವನಿಗೆ, ಆ ಡ್ರೈವರುಗಳ ಬಂಡವಾಳ ಅಷ್ಟೇ ಎಂದೂ, ಅದಕ್ಕಿಂತ ಮುಂದೆ ಕೊಂಚವೂ ಇಂಗ್ಲೀಷು ಬರದೆಂದು ಗೊತ್ತಿರಲಿಲ್ಲ. ಅಲ್ಲಿಂದ ಮುಂದೆ ಎಲ್ಲಿಗೆ, ಹೇಗೆ ಹೋಗುವುದೆಂದು ಹೇಳಲೂ ಗೊತ್ತಾಗದೆ, ಎಡ, ಬಲ, ನೇರಕ್ಕೂ ಡೈರೆಕ್ಷನ್ನು ಕೊಡಲಾಗದ ತನ್ನ ಭಾಷಾ ಸೀಮಿತತೆಗೆ ಕೊರಗುತ್ತ ಅವನನ್ನು ಮತ್ತೆ ಹೊರಟ ಜಾಗಕ್ಕೆ ತಂದು ಬಿಡುವಂತೆ ಮಾಡುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಅಷ್ಟೂ ಸಾಲದೆಂಬಂತೆ ಇಳಿಯುವ ಮುನ್ನ ಆ ಡ್ರೈವರು ತನ್ನ ಕಡತ ಬಿಚ್ಚಿ ತೋರಿಸುತ್ತ, 'ಮಸಾಜ್ ?ಹ್ಯಾವ್ ಬ್ಯೂಟಿಫುಲ್ ಲೇಡಿ' ಎಂದಾಗ ಪೂರ್ತಿ ರೇಗಿಯೆ ಹೋಗಿತ್ತು. ಆದರೆ ಬೈಯಾಲೂ ಕೂಡಾ ಆ ಭಾಷೆಯನ್ನೆ ಉಪಯೋಗಿಸಬೇಕಾಗಿ, ಆ ಸಾಧ್ಯತೆಯಿಲ್ಲದೆ ಉರಿದುಕೊಂಡೆ ಇಳಿದಿದ್ದ. ಹಾಗೆ ಇಳಿಯುತ್ತಲೆ ಮನದಲ್ಲಿ ನಿರ್ಧರಿಸಿಕೊಂಡುಬಿಟ್ಟಿದ್ದ - ಕನಿಷ್ಠ ಕೆಲವು ಸರಳ ಪದಗಳನ್ನಾದರೂ ಕಲಿತುಕೊಳ್ಳಬೇಕೆಂದು. ಹಾಗೆಯೆ ಮುಂದೆಂದೂ ಥಾಯ್ ಭಾಷೆಯಲ್ಲಿ ಬರೆದ ಚೀಟಿಯಿಲ್ಲದೆ ಟ್ಯಾಕ್ಸಿ ಹತ್ತುವ ಸಾಹಸ ಮಾಡುತ್ತಿರಲಿಲ್ಲ !
ಹಾಗೆಯೆ ಆಫೀಸಿನ ಸಹೋದ್ಯೋಗಿಯೊಬ್ಬರ ಹತ್ತಿರ ಕೆಲ ಸರಳ ವಾಕ್ಯ, ಮಾತುಗಳನ್ನು ಕಲಿಯತೊಡಗಿದ್ದ ಶ್ರೀನಾಥ ಈಚೆಗೆ ಕೆಲವು ಸಣ್ಣಪುಟ್ಟ ಸಂಭಾಷಣೆಯಾಡಲು ಕಲಿತಿದ್ದಾನೆ. ಅವರ ಹಾಗೆ ಇಂಗ್ಲಿಷಿನಲ್ಲಿ 'ನೋ ಹ್ಯಾವ್', 'ಈಟ್ ವಾಟರ' ಮಾತ್ರವಲ್ಲದೆ, ಜ್ಯೂಸಿಗೆ 'ಜೂಯಿಸ್' ಎಂದು ಅವರಿಗೆ ಅರ್ಥವಾಗುವ ಹಾಗೆ ಹೇಳುತ್ತಾನೆ. ಥಾಯಿ ಭಾಷೆಯಲ್ಲೆ 'ಸವಾಡಿ ಕಾಪ್ (ನಮಸ್ಕಾರ)' , 'ಅರಾಯ್ (ರುಚಿಯಾಗಿದೆ)', 'ಅನ್ನಿ ತವರಾಯ್ ( ಎಷ್ಟಿದರ ಬೆಲೆ)', 'ಸಿಪ್ ಬಾತ್ (ಹತ್ತು ಬಾತ್)' ಅನ್ನುವುದನ್ನೂ ಕಲಿತಿದ್ದಾನೆ. ಆಗ್ಗಾಗ್ಗೆ ಅಲ್ಲಿನ ಕೋಲೀಗ್ಸನ್ನೆ ಛೇಡಿಸುವ 'ಕುನ್ ಸುವೈ ಮಾಕ್ ( ನೀನು ತುಂಬಾ ಸುಂದರಿ)', 'ಪೊಮ್ ಜಾನ್ ಕುನ್ ರುವೈ (ನಾನು ಬಡವ ನೀನು ಶ್ರೀಮಂತ)','ಕೆಂಗ್ ಮಾಕ್ (ಬುದ್ದಿವಂತ)' ಇತ್ಯಾದಿ ಸರಳ ವಾಕ್ಯಗಳನ್ನೆ ಬಳಸಿ ಅವರ ಕೈಲೂ ಭೇಷ್ ಅನಿಸಿಕೊಂಡಿದ್ದಾನೆ. ಈಗ ಮಳೆಯ ನಡುವಲ್ಲಿ ಕಡತ ಹಿಡಿದ ಟ್ಯಾಕ್ಸಿಯವನ ಜತೆ ಮಾತಾಡುವಾಗಲೂ ಅದೆ ಹೊದರಿನಲ್ಲಿ 'ಕುನ್ ಕೆಂಗ್ ಮಾಕ್ (ನೀನು ತುಂಬಾ ಬುದ್ದಿವಂತ )' ಎಂದ. ಇವನ ಬಾಯಲ್ಲಿ ಥಾಯ್ ಭಾಷೆ ಕೇಳಿ ಅವನಿಗೆ ಕೊಂಚ ಅಚ್ಚರಿಯಾದರೂ ಹಲ್ಲೆಲ್ಲಾ ಕಾಣುವಂತೆ ನಕ್ಕ. ಮಳೆ ಇನ್ನೂ ಜೋರಾಗಿ ಸುರಿಯುತ್ತಲೆ ಇತ್ತು, ಶ್ರೀನಾಥನಿಗೂ ಕೊಂಚ ಬೋರಾದಂತೆನಿಸಿ ಕಾಲದೂಡಲು, ಅವನ ಕಡತವನ್ನೆ ದಿಟ್ಟಿಸುತ 'ಮಸಾಜ್..?' ಎಂದ. ಅದನ್ನು ಕೇಳುತ್ತಲೆ ಆತ ಹೌಹಾರಿದವನಂತೆ ನೆಗೆದೆದ್ದು, ' ಮೆಯ್ ಮೆಯ್..ನೊ..ನೊ..ನೊ ಮಸಾಜ್...' ಎಂದವನೆ ಆ ಕಡತ ರೂಪದ ಹೊತ್ತಗೆಯನ್ನೆ ಶ್ರೀನಾಥನ ಕೈಗಿತ್ತ. ಅವನ ಹೌಹಾರಿಕೆಯಿಂದ ಚಕಿತಗೊಂಡ ಶ್ರೀನಾಥ ಕಡತ ಬಿಚ್ಚಿ ನೋಡಿದರೆ - ಈಗ ಬೇಸ್ತು ಬೀಳುವ ಸರದಿ ಅವನದಾಗಿತ್ತು! ಸಾಧಾರಣವಾಗಿ ಇಂತದ್ದನ್ನು ತೆಗೆದ ತಕ್ಷಣ ಅಲ್ಲಿ ಕಾಣುವುದು ರೋಚಕ, ಉದ್ರೇಕಕಾರಿ ಭಂಗಿಗಳಲ್ಲಿರುವ ಅರೆಬರೆ ವಸ್ತ್ರದ ಅಥವ ಪೂರ್ತಿ ಬೆತ್ತಲೆಯ ಬೆಲೆವೆಣ್ಣುಗಳ ರಂಗುರಂಗಿನ ಚಿತ್ರ...ನಿಜದಲ್ಲಿಯೂ ಚಿತ್ರದ ಅದೆ ಹೆಣ್ಣೇ ಅಥವಾ ಅದು ಬರಿಯ ಜಾಹೀರಾತಿನ ಆಕರ್ಷಣೆಗೆ ಬಳಸಿದ ಚಿತ್ರವೊ, ಒಟ್ಟಾರೆ ಅದರಿಂದ ಗಿರಾಕಿ ಸೆಳೆಯುವ ತಂತ್ರ ಈ ವ್ಯಾಪಾರದ ಮೊದಲ ಹೆಜ್ಜೆ. ಗಿರಾಕಿ ಬಲೆಗೆ ಬಿದ್ದ ಮೇಲೆ ಉಳಿದೆಲ್ಲಾ ಮಿಕ್ಕ ವಿಚಾರ. ಆದರೆ, ಈ ಕಡತ ಆ ಮಸಾಜಿನ ಜಗತ್ತಿನದಾಗಿರದೆ ಸ್ವಚ್ಚ ಪ್ರವಾಸಿ ಚಿತ್ರದ್ದಾಗಿತ್ತು - ಸುಂದರ ಪ್ರೇಕ್ಷಣೀಯ ಸ್ಥಳಗಳ ಮನಮೋಹಕ ಚಿತ್ರಗಳು ಮತ್ತು ಅಲ್ಲಿಗೆ ಹೋಗಲಿಕ್ಕೆ ತಗಲೊ ವೆಚ್ಚದ ಪಟ್ಟಿಯಷ್ಟೆ ಅಲ್ಲಿದ್ದುದ್ದು. ಅಲ್ಲಿಯತನಕ ಅದನ್ನು ಬೇರೆಯದೆ ರೀತಿಯಾಗಿ ಭಾವಿಸಿ ಯೋಚಿಸಿದ್ದಕ್ಕೆ ಅವನಿಗೇ ನಾಚಿಕೆಯಾಗಿ ಅವನಲ್ಲಿ ' ಸಾರಿ' ಹೇಳಿ ಅವನ ಹೆಸರನ್ನು ಮತ್ತೊಮ್ಮೆ ಕೇಳಿ ನೆನಪಿಟ್ಟುಕೊಂಡ. ಒಮ್ಮೆಯಾದರೂ ಅವನ ಟ್ಯಾಕ್ಸಿಯನ್ನು ಬಳಸುವ ಉದ್ದೇಶದಿಂದ.
ಈ ಕಡತ ಕರಪತ್ರದ ಹಾವಳಿಯ ಅನುಭವ ಶ್ರೀನಾಥನಿಗೆ ಬಂದ ಮೊದಲ ದಿನಗಳಲೆ ಆದದ್ದು - ಹೀಗಾಗಿ ಅದು ಗಟ್ಟಿಯಾಗಿ ಮನದಲ್ಲೆ ನೆಲೆನಿಂತುಬಿಟ್ಟಿತ್ತು. ಬಂದಿಳಿದ ಮೊದಲ ವಾರಗಳಲಿನ್ನು ಇಳಿದುಕೊಳ್ಳುವ ವ್ಯವಸ್ಥೆ ಅಪೂರ್ಣವಾಗಿದ್ದ ಕಾರಣ ಮೊದಲ ವಾರದಲ್ಲಿ ಆಫೀಸಿನ ಹತ್ತಿರದ ಹೋಟೆಲೊಂದರಲ್ಲಿ ಇರಿಸಿದ್ದಾಗಿನ ಮಾತು. ಓಡಾಟಕ್ಕೆ ಹತ್ತಿರವಾಗಲೆಂದು ಹತ್ತಿರದ ಹೋಟೆಲಲ್ಲೆ ಬುಕ್ ಮಾಡಿದ್ದರೂ, ಅದರ ಸಿಲೋಮ್ ರಸ್ತೆಗೆ ಸಮನಾಂತವಿದ್ದ ಭೌಗೋಳಿಕತೆಯಿಂದಾಗಿ ಅಲ್ಲಿಂದ ಆಫೀಸಿಗೆ ಬರಬೇಕಾದರೆ ಪಾಟ್ಪೋಂಗ್ ರಸ್ತೆಯನ್ನು ದಾಟಿಯೆ ಬರಬೇಕಿತ್ತು. ಬೆಳಗಿನ ಹೊತ್ತಿನ ನಿರ್ಜನ ವಾತಾವರಣದಲ್ಲಿ ಇದೇನೊ ಸಲೀಸಾಗಿಯೆ ಸಾಗುತ್ತಿತ್ತು. ಆದರೆ ತೊಂದರೆಯಿದ್ದದ್ದು ಸಂಜೆಯೆ! ಅಷ್ಟು ಹೊತ್ತಿಗೆಲ್ಲ ಮೊದಲೆ ರಸ್ತೆಯ ನಾಲ್ಕು ಕಾಲುವೆಗಳಲ್ಲಿ 'ರಾತ್ರಿಯ ಸಂತೆ' ಅಂಗಡಿ ಬಿಚ್ಚಿ ಕೂತಿರುತ್ತಿತ್ತು; ಜತೆಗೆ ರಾತ್ರಿ ರಾಣಿಯರು ಅರಳುವ ಸಮಯವಾಗಿ ರಂಗುರಂಗಿನ ದೀಪಗಳೊಡನೆ 'ಎಂಟರ್ಟೈನ್ಮೆಂಟು ಇಂಡಸ್ಟ್ರಿ' ಸಹ ತನ್ನ ದಿನ ಗರತಿಯ ಮುಸುಕೆಸೆದು ಇರುಳ ಸರತಿಯ ವರ್ಣಮಯ ಸೆರಗೊದ್ದು ಮೈಮುರಿದೇಳುವ ಸಮಯ. ಹೋಟೆಲಿನಲ್ಲಿ ತಂಗಿದ್ದ ಈ ಗುಂಪು ಆ ಮಳಿಗೆಗಳ ಕಾಲುದಾರಿಯಲ್ಲೆ, ನೈಟ್ ಶೋ, ಮಸಾಜ್ , ಲೈವ್ ಶೋ, ಡಿಸ್ಕೊ ಜಗತ್ತಿನ ತೆರೆದ ಹೆಬ್ಬಾಗಿಲುಗಳ ಮುಂದೆಯೆ ಸಾಗಿ ನಡೆಯಬೇಕಿತ್ತು. ಬರಿ ನಡೆಯುವುದೆಂದರೆ ಅದೇನೂ ದೊಡ್ಡ ವಿಷಯವಲ್ಲ; ಆದರಲ್ಲಿ ಪ್ರತಿ ಹೆಜ್ಜೆಗೂ ಪ್ರತಿ ಹೆಬ್ಬಾಗಿಲಿನ ಮುಂದೆ ಕುಳಿತ ಅರೆಬರೆ ವಸ್ತ್ರಧಾರಿಣಿಯರ ಗುಂಪಿನ ಮೂಲಕವೆ ಸಾಗಬೇಕಾದ ಅನಿವಾರ್ಯ. ಧೈರ್ಯವಾಗಿ ತಲೆಯೆತ್ತಿ ನೋಡಿಕೊಂಡು ಆಸ್ವಾದಿಸುತ್ತ ನಡೆಯುವ ಹಾಗೂ ಇಲ್ಲ - ಒಂದೆಡೆ ಹಾಗೆ ನೋಡಿದ್ದನ್ನೆ ನೆಪ ಮಾಡಿಕೊಂಡು ಮುಗುಳ್ನಗೆಯ ಅಂಬೆಸೆದು ವಯ್ಯಾರ ಮಾಡುತ್ತ ಸೆಳೆಯಲೆಣಿಸಿದರೆ ಎಂಬ ಕಾತರ, ಭೀತಿ; ಇನ್ನೊಂದೆಡೆ ಜತೆಗಾರರಲ್ಲಿರುವ ಸಭ್ಯಸ್ಥನ ಮುಖವಾಡಕ್ಕೆ ಚ್ಯುತಿ ಬರದ ಹಾಗೆ ಅವರರಿವಿಗೆ ಬರದ ಹಾಗೆ ಕದ್ದು ಕಣ್ಣಂಚಲೆ ನೋಡುತ್ತಾ, ಇಷ್ಟವಿರದಿದ್ದರೂ ದಾಪುಗಾಲಿಕ್ಕಿಸುತ ಬೇಗನೆ ಆ ರಸ್ತೆ ದಾಟಿಸುವ ಹುನ್ನಾರ; ದಾಟಿದ ಮೇಲೆ ಇನ್ನೂ ನಿಧಾನಕ್ಕೆ ಬರಬಹುದಿತ್ತೇನೊ ಎಂಬ ಅಂತರಾಳದ ನಿರಾಸೆಯನ್ನು ಹತ್ತಿಕ್ಕುವ ಮತ್ತದೆ ಸಭ್ಯಸ್ತ ಸೋಗು!
ಆದರೆ ಆ ರೀತಿ ಪಾಟ್ಪೋಂಗಿನ ಮೂಲಕ ಹಾದು ಹೋಟೆಲಿಗೆ ಬರಬೇಕಾದಾಗ ಆದ ಮತ್ತೊಂದು ಅನುಭವ ಶ್ರೀನಾಥ ಮತ್ತಿತರರ 'ಕಡತ ಜ್ಞಾನ'ವನ್ನು ಹೆಚ್ಚಿಸಿದ್ದು. ಅಲ್ಲಿಯತನಕ ಜ್ಞಾನೋದಯವಾಗದ ಸಿದ್ದಾರ್ಥರಂತೆ ಓಡಾಡಿಕೊಂಡಿದ್ದವರಿಗೆ, ಬ್ಯಾಂಕಾಕಿನ ಹೊಚ್ಚ ಹೊಸ ಬಗೆಯ ವಿಶ್ವವೊಂದನ್ನು ಪರಿಚಯ ಮಾಡಿಸಿದ್ದು ಈ ಸಂಘಟನೆಯೆ. ಮೊದಲೆರಡು ದಿನ ಎಲ್ಲ ಬೇಗನೆ, ಸಂಜೆಗೂ ಮುನ್ನವೆ ಹೋಟೆಲಿಗೆ ಹಿಂದಿರುಗಿದ್ದರಿಂದ ಈ ಬಿಸಿ ತಾಗದೆ ತಪ್ಪಿಸಿಕೊಂಡಿದ್ದರು. ಆದರೆ ಯಾವಾಗ ಮೂರನೆ ದಿನದಿಂದ ಮಾಮೂಲಿನ ಹೊತ್ತಿಗೆ ಆಫೀಸು ಬಿಡುವಂತಾಯ್ತೊ , ಆಲ್ಲಿಂದ ಚುರುಕಿನ ಬಿಸಿ ತಾಗತೊಡಗಿತ್ತು. ಇವರು ಬರುವ ಹೊತ್ತಿಗೆ ಕತ್ತಲಾಗಿ ಆ ಬೀದಿಯಲ್ಲಾಗಲೆ ದಟ್ಟ ಜನಸಂದಣಿ ಸೇರಿ ನುಗ್ಗಿ, ನುಗ್ಗಿ ದಾರಿ ಮಾಡಿಕೊಂಡೆ ಹೋಗಬೇಕಿತ್ತು, ಆ ಇಕ್ಕಟ್ಟಲಿ ಗಿಜಿಗುಟ್ಟುವ ಜನಗಳ ನಡುವೆ. ಅಲುಗಾಡದೆ ಅಂಗಡಿಗಳ ಮುಂದೆ ನಿಂತ ಶಾಪಿಂಗ್ ನಿರತ ಗಿರಾಕಿಗಳು ದಾರಿ ಬಿಡುವ ತನಕ ಕಾಯಲಾಗದೆ ಮಧ್ಯದ ಹಾದಿ ಬಿಟ್ಟು ಎರಡೂ ಬದಿಯ ತುದಿಗಳಲ್ಲಿ ಅಂಗಡಿಗಳ ಮುಂದೆ ಸಾಗದೆ ಬೇರೆ ದಾರಿಯೆ ಇರುತ್ತಿರಲಿಲ್ಲ. ಆದರೆ ಈ ಪ್ರತಿ 'ದೂಕಾನು' ಗಳೂ 'ಮನರಂಜನಾ ನಿಮಿತ್ತ' ತೆರೆದ ಸೇವ ಕೇಂದ್ರಗಳಾಗಿದ್ದುದರಿಂದ ಅದರ ಮುಂದೆ ಛೇರು ಹಾಕಿಕೊಂಡೊ , ಬಾಗಿಲಿಗೆ ಒರಗಿಕೊಂಡೊ ವೈಯಾರದಿಂದ ನಿಂತ ಬೆಡಗಿಯರ ಕಣ್ಬಾಯ್ ಸನ್ನೆಗೊ ಮಾತಿನ ಚಾಲೂಕಿಗೊ ಸಿಕ್ಕಿಕೊಳ್ಳದೆ ಹೋಗಲಿಕ್ಕೆ ಸಾಧ್ಯವೆ ಇರುತ್ತಿರಲಿಲ್ಲ. ಇದೊಂದೆ ಆಗಿದ್ದರೆ ನಿಭಾಯಿಸುವುದೇನು ಅಷ್ಟು ಕಷ್ಟವಿರಲಿಲ್ಲ - ಆದರೆ ನಿಜವಾದ ಕಷ್ಟ ಬರುತ್ತಿದ್ದುದ್ದು ಅವರ ಜತೆಗೆ ನೇರ ರಸ್ತೆಯ ಮೇಲೆ ಕಾದು ನಿಂತಿರುತ್ತಿದ್ದ ಏಜೆಂಟರಿಂದ! ಅವರೆಲ್ಲರ ಕೈಯಲ್ಲೂ ಒಂದೊಂದು ಮಡಿಸುವ ಕಾರ್ಡಿನ ರೀತಿಯ ಈ ಕಡತ ಸದಾ ಸಿದ್ದವಿರುತ್ತಿತ್ತು. ಅವರ ಕಣ್ಣಿಗೆ ಅಲ್ಲಿ ಹಾದು ಹೋಗುವ ಯಾವುದೆ ವಿದೇಶಿ ಗಂಡು ಪ್ರಾಣಿ ಕಣ್ಣಿಗೆ ಬಿದ್ದರೆ ಸಾಕು,ಪಕ್ಕನೆ ಆ ಕಾರ್ಡನ್ನು ಮುಖದ ಮುಂದೆಯೆ ಬಿಚ್ಚಿ ಹಿಡಿದು ಶುರು ಹಚ್ಚಿಕೊಳ್ಳುತ್ತಿದ್ದರು - ' ಬ್ಯೂಟಿಪುಲ್ ಯಂಗ್ ಲೇಡಿ ಸರ್, ಮಸಾಜು ಟೂ ಹಂಡ್ರೆದ್ ಬಾತ್ ಒನ್ಲಿ'! ಅವರನ್ನು ತಪ್ಪಿಸಿಕೊಂಡು ಮುಂದೆ ಮುಂದೆ ಹೋಗುತ್ತಿದ್ದರೂ ಬಿಡದೆ ಹಿಂದಿಂದೆಯೆ ಬಂದು ಕಾಡುವ ಅವರಿಂದ ತಪ್ಪಿಸಿಕೊಳ್ಳಲೆ ಆಗದೆ ತಬ್ಬಿಬ್ಬಾಗುವ ಪರಿ ಇವರೆಲ್ಲರದಾಗಿತ್ತು.
ಅದು ಅಷ್ಟಕ್ಕೂ ನಿಲ್ಲದೆ, ಹೇಗೊ ತಪ್ಪಿಸಿಕೊಂಡು ಓಡುತ್ತಲೆ ನಡೆದರೂ, ಮುಂದಿನ ಅಂಗಡಿಯ, ಪೂರ್ಣ ಸನ್ನದ್ದನಾಗಿ ಕಾಯುವ ಇನ್ನೊಬ್ಬ ಏಜೆಂಟು...ಕೊನೆಗೆ ಈ ಎಲ್ಲಾ ಏಜೆಂಟರನ್ನು ದಾಟಿ ಸುರಕ್ಷಿತವಾಗಿ ಹೋಟೆಲ್ಲು ಸೇರುವ ಹೊತ್ತಿಗೆ ಹತ್ತು ನಿಮಿಷದ ಹಾದಿಗೆ ಮುಕ್ಕಾಲು ಗಂಟೆ ಹಿಡಿದಿರುತ್ತಿತ್ತು. ಮೊದಲ ದಿನ ಹಾಗಾದಾಗ ಇದೊಂದು ರೀತಿ ಕಲ್ಚರಲ್ ಶಾಕ್ ಆದಂತೆ ಫೀಲಾಗಿ, ರೂಮು ಸೇರುವ ಮುನ್ನವೆ ಒಂದು ಪುಟ್ಟ 'ದುಂಡು ಮೇಜಿನ ಪರಿಷತ್' ನಡೆಸಿಬಿಟ್ಟಿದ್ದರು - ಈ ತಲೆನೋವಿಂದ ಹೇಗೆ ಪಾರಾಗುವುದೆಂದು. ಬರುವಾಗಲೆ ಟೈಯೆಲ್ಲಾ ಬಿಚ್ಚಿ ತೆಗೆದು ಸಾಧಾರಣ ಜನರ ಹಾಗೆ ಕಾಣುತ್ತಿದ್ದವರನ್ನು ನೋಡುತ್ತಲೆ ಶ್ರೀನಾಥನಿಗೊಂದು ಪ್ರಚಂಡ ಐಡಿಯ ಹೊಳೆದಿತ್ತು. ಟೈ ವಗೈರೆ ಹಾಕಿಕೊಂಡು ಟಾಕು-ಠೀಕಾಗಿ ದೊಡ್ಡ ಆಫೀಸರುಗಳ ಹಾಗೆ ಬಂದರೆ ಬಹುಶಃ ಅವರೆಲ್ಲಾ ಕಾಡಲು ಹಿಂದೇಟು ಹಾಕಬಹುದೆಂದು ಎಣಿಸಿ, ಮುಂದಿನ ದಿನದಿಂದ ಎಲ್ಲರೂ ಟೈ ತೆಗೆಯದೆ ಹಾಗೆ ಆಫೀಸರ ಗತ್ತಲ್ಲಿ ಬರುವಂತೆ ತಾಕೀತು ಮಾಡಿದ್ದ. ಆದರೆ ಆ ದಿನವಂತೂ ತೀರಾ ಬೇರೆಯದೆ ಆದ ಅಚ್ಚರಿ ಕಾದಿತ್ತು.ಆ ಆಫೀಸಿಗರ ಗುಂಪಿಗೆ ಹಿಂದೆಗೆಯದ ಏಜೆಂಟರು ಮೊದಲಿಗಿಂತ ಹೆಚ್ಚು ಪೀಡಿಸಲು ಆರಂಭಿಸಿದ್ದೆ ಅಲ್ಲದೆ, ಇವರ ಡ್ರೆಸ್ಸೆಲ್ಲಾ ನೋಡಿ, ' ಹೈ ಕ್ಲಾಸ್ ಲೇಡೀಸ್ , ಓನ್ಲಿ ವನ್ ಥೌಸಂಡ್ ಬಾತ್ ವನ್ ಹವರ' ಎಂದು ತೀರಾ ಹೊಸರಾಗವನ್ನೆ ಆರಂಭಿಸಿಬಿಟ್ಟಿದ್ದರು! ತನ್ನ ಭಾರತೀಯ ಮೆದುಳಿನ ಗ್ರೇಟ್ ಪ್ಲಾನು ಇಲ್ಲಿ ಉಲ್ಟಾ ಹೊಡೆಯುವ ರೀತಿ ಕಂಡು ವಿಪರೀತ ಗಾಬರಿಯೆ ಆಗಿತ್ತು - ಇಂಥಹ ಜಾಗದಲ್ಲಿ ಪ್ರಾಜೆಕ್ಟು ಮಾಡುವುದು ಹೇಗಪ್ಪಾ ? ಎಂದು. ಈ ಪ್ಲಾನು ಪ್ಲಾಪ್ ಆದ ಮೇಲೆ ಮತ್ತೆ ಸೇರಿದ ಗುಂಪು ಟೈಯಿಲ್ಲದ ಹಿಂದಿನ ದಿನವೆ ಎಷ್ಟೊ ವಾಸಿಯಿತ್ತೆಂದು ಒಕ್ಕೊರಲಿನಿಂದ ತೀರ್ಪಿತ್ತಾಗ ಮತ್ತೆ ಹೊಸ ದಾರಿ ಹುಡುಕುವ ಅನಿವಾರ್ಯವುಂಟಾಗಿತ್ತು... ಕೊನೆಗೆ ಪಾಟ್ಪೊಂಗ್ ರಸ್ತೆಯ ಗಡಿಗಳಾಗಿದ್ದ ಆರೇಳು ಬೀದಿಗಳನ್ನು ಬಿಟ್ಟು, ದೊಡ್ಡದೊಂದು ಸುತ್ತು ಹಾಕಿಕೊಂಡು ಮತ್ತೊಂದು ಕಡೆಯಿಂದ ಬಳಸಿಕೊಂಡು ಬರುವ ಸಲಹೆ ಮರುದಿನದ ಪ್ರಯೋಗಕ್ಕೆ ಅಂಗೀಕೃತವಾಯಿತು. ಅದೃಷ್ಟವಶಾತ್ ಈ ಬಾರಿ ಮುಕ್ಕಾಲು ಪಾಲು ಏಜೆಂಟರ ಹೊಡೆತದಿಂದ ತಪ್ಪಿಸಿಕೊಂಡರೂ ಕಡೆಯ ನೂರಡಿ ದಾಟುವಾಗ ಅದೆ ಗುಂಪಿನ ಮೂಲಕ ಸಾಗಲೆಬೇಕಿತ್ತು. ಆದರೆ ಹಿಂದಿನ ದಿನಗಳಿಗ್ಹೋಲಿಸಿದರೆ, ಇದು ಎಷ್ಟು ಸಹನೀಯವಾಗಿತ್ತೆಂದರೆ, ಮಿಕ್ಕ ದಿನಗಳಿಗೆ ಬೇರೇನನ್ನೂ ಪ್ರಯತ್ನಿಸದೆ ಈ ಹಾದಿಯನ್ನೆ ಹಿಡಿಯುವುದೆಂದು ಸರ್ವಾನುಮತದಿಂದ ತೀರ್ಮಾನಿಸಿಬಿಟ್ಟಿದ್ದರು!
ಇದೆಲ್ಲಾ ಅನುಭವವಾದ ಮೇಲೆ, ಇದು ಅ ರೀತಿಯ ಜಾಗದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯೆಂದರಿವಾಗಿ ಈಗದು ಅಭ್ಯಾಸವಾಗಿಹೋಗಿತ್ತು - ಕಂಡರೂ ಕಾಣದಂತೆ ತನ್ನ ಪಾಡಿಗೆ ತಾನು ಹೋಗಲಿಕ್ಕೆ. ಆದರು ತೀರಾ ಬೇರೆಯದೆ ಆದ ಹಲವಾರು ಜಗಗಳು ಅಲ್ಲಿ ಒಟ್ಟಾರೆ ಸಹಬಾಳ್ವೆ, ಸಹಯೋಗ, ಸಮನ್ವಯದಲ್ಲಿ ಸಮಾನಾಂತರವಾಗಿ ಬದುಕಿರುವುದನ್ನು ಕಂಡಾಗ - ಇದೇನು ಈ ಜನಗಳ ಉಢಾಳ ಸರಳತೆಯ ಸ್ವರೂಪವೊ ಅಥವಾ ನೂತನ ಬದುಕಿನ ಒತ್ತಡ, ಜಂಜಾಟಗಳು ಜನಪದರ ಮೇಲೆ ಒತ್ತಾಯದಿಂದ ಹೇರುವ ಅನಿವಾರ್ಯತೆಯ ಕೊರಗೊ - ಅರ್ಥವಾಗದೆ ಸೋಜಿಗಪಟ್ಟಿದ್ದ. ಈಗ ಈ ಟ್ಯಾಕ್ಸಿಯವನನ್ನು ನೋಡಿದರೆ ಇದುವರೆವಿಗಿಂತ ತೀರಾ ವಿರುದ್ದದ ಅನುಭವ. ತೀರಾ ಆಳಕ್ಕಿಳಿಯದೆ ಯಾವ ಸಂಸ್ಕೃತಿಯನ್ನು ಹೊರನೋಟದಲ್ಲೆ ಮೌಲ್ಯಮಾಪನ ಮಾಡಿದರೆ, ತಪ್ಪು ನಿರ್ಧಾರಕ್ಕೆ ಬರುವ ಸಾಧ್ಯತೆಯೆ ಹೆಚ್ಚೆಂದು ಅವನಿಗೀಗೀಗ ಅನಿಸತೊಡಗಿತ್ತು...
ಆದರೆ ಸ್ವಾಭಾವಿಕವಾಗಿ ಹುಟ್ಟು, ಬೆಳವಣಿಗೆಯ ಜತೆಯೆ ಬಂದಿದ್ದ ಈ ಮಡಿವಂತಿಕೆ, ಸಂಸ್ಕಾರ, ಸಂಯಮಗಳೆಲ್ಲ ಕೇವಲ ತಾನು ಹುಟ್ಟಿ ಬೆಳೆದಿದ್ದ ಪರಿಸರದಲಷ್ಟೆ ಸಂಗತ, ಅದೂ ಎಲ್ಲಾಕಡೆ ಎಲ್ಲರಿಗೂ ಎಲ್ಲಾ ಕಾಲದಲ್ಲೂ ಅನಿವಾರ್ಯವಾಗುವ ಬಿಗಿ ಹಿಡಿತದ ಕಟ್ಟಲ್ಲವೆಂದು ಅರಿವಾದಾಗ ಒಂದೆಡೆ ದಿಗ್ಬ್ರಮೆಯೂ ಮತ್ತೊಂದೆಡೆ ಭ್ರಮನಿರಸನವೂ ಆಗಿತ್ತು. ಅದರಲ್ಲೂ ಬಾಸಿನ ಜತೆಗೆಂದು ಗುಂಪಲ್ಲಿ ಹೋದಾಗ ಲೈವ್ ಶೋನಲ್ಲಿ ನಡದೆ ಪ್ರಸಂಗ ಅವನ ನೆನಪಿನ ಕನ್ನಡಿಯಲ್ಲಿ ಅಚ್ಚಳಿಯದ ಹಾಗೆ ನಿಂತುಬಿಟ್ಟಿತ್ತು. ತನ್ನ ಜತೆಯವರೆಲ್ಲ ಹಿಂದಿನಿಂದ ತನಗೆ ತಿಳಿಯದ ಹಾಗೆ, ತಾನೇನು ಕೆಲಸಕ್ಕೆ ಬಾರದವನೆಂದು ಹಂಗಿಸುತ್ತಿರಬೇಕೆಂದು ಸದಾ ಅನಿಸುತ್ತಿತ್ತು. ಹೇಗಾದರೂ ಸರಿ, ತಾನೇನು ಅವರಂದುಕೊಂಡ ಹಾಗೆ 'ಎಳಸಿನ ಗೊಡ್ಡು' ಅಲ್ಲವೆಂದು ಸಾಧಿಸಿ ತೋರಿಸುವ ಹಂಬಲ, ಅಂತರ್ದಾಹ ಪದೆ ಪದೆ ಚಿತ್ತದ ಭಿತ್ತಿಯಲ್ಲಿ ಪ್ರಕ್ಷೇಪಿಸಿ ಕಾಡುತ್ತಲೆ ಇರುತ್ತಿತ್ತು. ಒಂದೆರಡು ಬಾರಿ ಏಕಾಂತದಲಿ ಕುಳಿತಾಗ ಉತ್ಕರ್ಷಗೊಂಡ ಭಾವೋನ್ಮಾದಕ್ಕೆ ಬೇಲಿ ಕಟ್ಟಲೆ ಆಗದೆ, ಏನಾದರೂ ಸರಿ ತಾನೊಬ್ಬನೆ ಪಾಟ್ಪೊಂಗಿಗೆ ಹೋಗಿ, ಅಂದು ಅಸಾಧ್ಯವಾದದ್ದನ್ನು ಇಂದು ಸಾಧ್ಯವಾಗಿಸಿ ತಾನೇನು ಅಂತ ತೋರಿಸಿಯೆಬಿಡಬೇಕೆಂಬ ಅದಮ್ಯ ಮನದೊತ್ತಡಕ್ಕೆ ಸಿಕ್ಕಿ ಉಟ್ಟ ಬಟ್ಟೆಯಲ್ಲೆ ಹೋಗಿಬಿಟ್ಟಿದ್ದು ನಡೆದಿತ್ತು. ಆದರೇನು ಪರಿಯೊ, ಚಿತ್ತದಲಷ್ಟು ಲಂಕಾದಹನಕಿಡುತ್ತಿದ್ದ ಬೇಗುದಿ ಪಾಟ್ಪೋಂಗಿನ ಹತ್ತಿರ ಬಂದು ಆ ಬೆಡಗಿಯರು, ಲಲನೆಯರ ಏಜೆಂಟರನ್ನು ನೋಡುತ್ತಿದ್ದಂತೆ ಇದ್ದಬದ್ದ ಧೈರ್ಯವೆಲ್ಲ ಉಡುಗಿಹೋದಂತಾಗಿ ಬಂದ ಉದ್ದೇಶದ ಬಿರುಸೆಲ್ಲ ಜರ್ರನೆ ತಲೆಯಿಂದಿಳಿದು ಪಾದ ಸೇರಿ, ತಗ್ಗಿಸಿದ ತಲೆಯನ್ನೂ ಮೇಲೆತ್ತದೆ ರಾತ್ರಿ ಸಂತೆಯ ಅಂಗಡಿಗಳ ಮಧ್ಯೆ ಮುಖ ಮುಚ್ಚಿಸಿಕೊಂಡು ವಾಪಾಸ್ಸು ಬರುವಂತಾಗಿತ್ತು. ಎರಡು ಮೂರು ಬಾರಿಯೂ ಹಾಗೆ ಆದಾಗ , ತಾನು ತೀರ ನಿಷ್ಪ್ರಯೋಜಕ, ಕೈಲಾಗದವ ಎನ್ನುವ ಭಾವ ಇನ್ನಷ್ಟು ಕುಗ್ಗಿಸಿ ಪಾತಾಳಕ್ಕಿಳಿಯುವಂತೆ ಮಾಡಿಬಿಟ್ಟಿತ್ತು. ಅಂದಿನಿಂದ ರಸ್ತೆಯಲ್ಲಿ ನಡೆಯಬೇಕಾದರೂ , ಯಾರೊ ತನ್ನನ್ನು ಗಮನಿಸುತ್ತಿದ್ದಾರೆನ್ನುವ ರೀತಿ ತಲೆ ಬಗ್ಗಿಸಿಕೊಂಡೆ ನಡೆಯುತ್ತಿದ್ದ!
(ಇನ್ನೂ ಇದೆ)
______
Comments
ಉ: ಕಥೆ: ಪರಿಭ್ರಮಣ..(02)
ಪರಿಭ್ರಮಣ 3, 4 ಆಗಲೇ ಪ್ರಕಟವಾಗಿದ್ದರೂ ನಾನೀಗ 2 ಮುಗಿಸಿದೆ. ತಿರುವುಗಳೊಂದಿಗೆ ಕತೆ ಆಸಕ್ತಿದಾಯಕವಾಗಿದೆ.
In reply to ಉ: ಕಥೆ: ಪರಿಭ್ರಮಣ..(02) by ಗಣೇಶ
ಉ: ಕಥೆ: ಪರಿಭ್ರಮಣ..(02)
ಗಣೇಶ್ ಜಿ, ಒಂದು ಪ್ರಲೋಭನಾತ್ಮಕ ವಾಸ್ತವಿಕ ಪರಿಸರದ ಚಿತ್ರಣದ ಜತೆ ಪಾತ್ರವೊಂದರ ತುಮುಲ, ಗೊಂದಲ, ದೌರ್ಬಲ್ಯ, ಬಲಹೀನತೆಯನ್ನು ಸಮೀಕರಿಸಲು ಯತ್ನಿಸಿದ್ದೇನೆ. ಪರಿಸರದ ಪ್ರಭಾವ ಏನೆಲ್ಲಾ ಪ್ರಲೋಭನೆ ಬೀರುವುದು ಮತ್ತು ಅದಕ್ಕೆ ಶರಣಾಗಿ ಸೋಲುವ / ಧಿಕ್ಕರಿಸಿ ಗೆಲ್ಲುವ ಹೋರಾಟದ ಪರಿ, ಕಥೆಗೆ ಹೂರಣ. ಪ್ರತಿ ತಿರುವು ಒಂದು ವಿಧದಲ್ಲಿ ಪಾತ್ರದ ಹೋರಾಟದ ಸಂಕೇತ - ತನ್ನ ಸುತ್ತಲ ವಾತಾವರಣದ ಪ್ರಭಾವಳಿಯಿಂದ ತಪ್ಪಿಸಿಕೊಳ್ಳಲೊ ಅಥವಾ ಜಯಿಸಲೊ ಎಂಬಂತೆ. ಇದರ ನಡುವೆ ಪೂರಕವಾಗಿ ಅಂತರ್ಗತವಾಗಿ ಇಣುಕುವ ದೈನಂದಿನ ಜೀವನ ಚಿತ್ರದ ತುಣುಕುಗಳು. ಇವೆಲ್ಲ ಎಷ್ಟರಮಟ್ಟಿಗೆ ಕಥಾನಕದಲ್ಲಿ ಸಮೀಕರಿಸಿಕೊಳ್ಳುವುದೊ ಎನ್ನುವುದು ಪೂರ್ತಿ ಮುಗಿದಾಗಲಷ್ಟೆ ಗೊತ್ತಾಗುವುದು. ಕಥೆಯಾಗಿ ಮೊದಲ ಪ್ರಯೋಗವಾದ್ದರಿಂದ ಕಾದು ನೋಡೋಣ :-)