ಗೋಲಿ ಹೊಡೆದು ನೋಡಿ ಟೀನೇಜ್ಗೆ...!
ಒಂದು ದೊಡ್ಡ ಮಾರ್ಕೆಟ್. ಮಾರ್ಕೆಟ್ನಲ್ಲಿ ನಾಲ್ವರು ಹುಡುಗರು. ಮೀಸಿ ಇನ್ನೂ ಚಿಗುರಿಲ್ಲ. ದಿನವೂ ಮೂಟೆ ಎತ್ತಿ ಹಾಕಿದ್ರೇ ದುಡ್ಡು. ಅಪ್ಪ ಇಲ್ಲ. ಅಮ್ಮ ಇಲ್ಲ. ಮನೆಯಂತೂ ಮೊದಲೇ ಇಲ್ಲ. ಮಾರುಕಟ್ಟೇನೆ ಎಲ್ಲ. ನೆಟ್ಟಗೆ ಹೆಸರೂ ಇಲ್ಲ. ಅಡ್ರೆಸ್ ಪ್ರೂ ಕೂಡ ಇಲ್ಲ. ಆದರೆ, ಯಾಚಿ ಎಂಬ ಮಹಿಳೇನೆ ಈ ಹುಡುಗರಿಗೆ ಜೀವನಾಧಾರ. ಹದಿಹರೆಯದ ಆಸು-ಪಾಸು ಇರೋ ಈ ಹುಡುಗರು ‘ಗೋಲಿ ಸೋಡಾ’ ಒಡೆದಾಗ ಬರೋ ಸೌಂಡ್ನಷ್ಟು ಜೋರು. ಇವರ ನೈಜತೆಯ ಹತ್ತಿರಕ್ಕೆ ಇರೋ ಸಿನಿಮಾ ಬದುಕನ್ನ ಕಂಡ ಸೂಪರ್ ಸ್ಟಾರ್ ರಜನಿಕಾಂತ್, ಬೇಷ್ ಎಂದಿದ್ದಾರೆ. ಕನ್ನಡಿಗ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತದಿಂದ ಈ ಹುಡುಗರ ಆಂತರ್ಯವನ್ನ ಇನ್ನಷ್ಟು ಕಾಡುವಂತೆ ಮಾಡಿದ್ದಾರೆ. ಕನ್ನಡದ ಅಟ್ಟಹಾಸಕ್ಕೆ ಕ್ಯಾಮೆರಾ ವರ್ಕ್ ಮಾಡಿರೋ ವಿಜಯ್ ಮಿಲ್ಟನ್ ತಮ್ಮ ಮೊದಲ ನಿರ್ದೇಶನದ ತಮಿಳು ಚಿತ್ರ ‘ಗೋಲಿ ಸೋಡಾ’ ದಲ್ಲಿ ಈ ಒಂದು ನೈಜ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸೂಪರ್ ಸಿನಿಮಾ ಮೆಚ್ಚುಗೇನೂ ಈಗ ವ್ಯಕ್ತವಾಗಿದೆ.
ಹಿಟ್ ಚಿತ್ರದ ಕತೆ ಏನೂ; ಕತೆ ತುಂಬಾ ಗಟ್ಟಿಯಾಗಿದೆ. ನಾವು ನೀವು ಇಲ್ಲಿವರೆಗೂ ಹಲವು ಭಾರಿ ಮಾರುಕಟ್ಟೆಗೆ ಹೋಗಿದ್ದೇವೆ. ದೊಡ್ಡ ಮಾರುಕಟ್ಟೆಗೆ ಹಬ್ಬ-ಹರಿದಿನಗಳಲ್ಲೂ ಹೋಗುತ್ತವೆ. ಆದರೆ, ಎಂದೂ ಅಲ್ಲಿ ಮೂಟೆ ಹೊರೋ ಹುಡುಗರ ಬಗ್ಗೆ ತೆಲೆ ಕೆಡಸಿಕೊಳ್ಳುವುದಿಲ್ಲ. ಅವರ ಮನಸ್ಸಿನ ಭಾವನೆಯನ್ನ ತಿಳಿದುಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡೋದಿಲ್ಲ. ‘ಗೋಲಿ ಸೋಡಾ’ ಆ ಒಂದು ಕೆಲಸ ಮಾಡಿದೆ. ಪುಲ್ಲಿ, ಸೇತು, ಸಿತ್ತಪ್ಪ, ಕುಟ್ಟಿಮಣಿ ಎಂಬ ನಾಲ್ಕು ಪಾತ್ರಗಳ ಗಟ್ಟಿ ಅಭಿನಯದಿಂದ ಯಾರೂ ನೋಡದ ನೈಜ ಜೀನವದ ಮೇಲೆ ಬೆಳಕು ಚೆಲ್ಲಲಾಗಿದೆ. ಹದಿಹರೆದಯ ಈ ಹುಡುಗರ ಮನಸ್ಸಿನಲ್ಲೂ ಪ್ರೀತಿಯ ಭಾವ ಮೂಡುತ್ತದೆಂಬ ಸತ್ಯವನ್ನೂ ಹೇಳೋ ಕೆಲಸವೂ ಆಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಪ್ರೀತಿಯ ಸನ್ನಿವೇಶವನ್ನೂ ಇಡಲಾಗಿದೆ. ಹಾಗಂತ ಇಲ್ಲಿ ಡುಯೆಟ್ ಹಾಡುಗಳಿಲ್ಲ. ಮರಸುತ್ತೋ ಸೀನ್ಗಳಿಲ್ಲ. ಬದಲಿಗೆ ನಿಜ ಜೀನವದಲ್ಲಿ ಅನಕ್ಷರಸ್ತ ಹುಡುಗರು ಮಾಡೋ ಒಲವಿನ ಯಡವಟ್ಟುಗಳೇ ‘ಗೋಲಿ ಸೋಡಾ’ ಚಿತ್ರದ ನವೀರು ಲವ್ ಸ್ಟೋರಿಸ್..
ನೈಜತೆಗೆ ತುಂಬಾ ಹತ್ತಿರ; ‘ಗೋಲಿ ಸೋಡಾ’ ತುಂಬಾ ರಾ ಫೀಲ್ ನಲ್ಲಿದೆ. ಎಲ್ಲೂ ಆಡಂಬರದ ಅಬ್ಬರವಿಲ್ಲ. ಕೃತಕ ಸಂಭಾಷಣೆಯ ಸೋಗೂ ಇಲ್ಲ. ಎಲ್ಲವೂ ಎದೆಯಿಂದ ಬಂದ ಆಗಿದೆ. ಅದರಲ್ಲೂ ಚೆನ್ನೈನ ‘ಕೋಯೆಂಬೀಡ್ ’ ಮಾರುಕಟ್ಟೇಯಲ್ಲಿಯೇ ಇಡೀ ಚಿತ್ರ ಶೂಟ್ ಆಗಿದೆ. ಆದರೆ, ಕ್ಯಾಮೆರಾ ಎಲ್ಲಿಟ್ಟಿದ್ದಾರೆಂಬ ಪರಿವೂ ಅಲ್ಲಿದ್ದ ಯಾರೊಬ್ಬರಿಗೂ ಇಲ್ಲವೇ ಇಲ್ಲ. ಹಾಗೆ ಸಿನಿಮಾ ಶೂಟ್ ಮಾಡಲಾಗಿದೆ. ವಿಜಯ್ ಮಿಲ್ಟ್ ಮೊದಲೇ ಕ್ಯಾಮೆರಾಮನ್. ತಮಗೆ ಹೇಗೆಬೇಕೋ. ಹಾಗೆ ನೈಜವಾಗಿಯೇ ತೆಗೆದಿದ್ದಾರೆ. ಕತೆ ಮೇಲೂ ಅಷ್ಟೇ ವರ್ಕ್ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿಯೇ ಕಂಡಿತ ಗೋಲಿ ಸೋಡಾ ನಿಮ್ಮನ್ನ ಕಾಡುತ್ತದೆ...
ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ; ಅನೂಪ್ ಸೀಳಿನ್ ಕನ್ನಡಿಗರು. ಸಿದ್ಲಿಂಗು ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ಪಡೆದವ್ರು. ಇದೇ ಚಿತ್ರಕ್ಕೆ ಇತ್ತೀಚಿಗೆ ರಾಜ್ಯ ಪ್ರಶಸ್ತಿನೂ ಪಡೆದಿದ್ದಾರೆ. ‘ಗೋಲಿ ಸೋಡಾ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡೋದ್ರೊಂದಿಗೆ ಈಗ ತಮಿಳು ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಕತೆಗೆ ಸೂಕ್ತವೆನ್ನಿಸೋ ರೀತಿಯಲ್ಲಿಯೇ ಅನೂಪ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ನಿಶಬ್ದ ಮತ್ತು ಶಬ್ದತೆಯ ಸಮ್ಮಿಳಿತವೇ ಆಗಿರೋ ‘ಗೋಲಿ ಸೋಡಾ’ ಹಿನ್ನೆಲೆ ಸಂಗೀತದಿಂದಲೂ ಹತ್ತಿರವಾಗುತ್ತದೆ. ಯಾಕೆಂದ್ರೆ, ಅಷ್ಟು ಪರಿಣಾಮಕಾರಿ ದೃಶ್ಯಗಳು ಇಲ್ಲಿವೆ. ಪ್ರತಿ ದೃಶ್ಯವೂ ನಿಮ್ಮನ್ನ ಹಿಡಿದು ಕೂರಿಸುತ್ತದೆ. ಎಲ್ಲೂ ಬೋರ್ ಹೊಡೆಯೋದಿಲ್ಲ. ಮುಂದೇನಾಗುತ್ತದೆಂಬ ಕುತೂಹಲ ಉಳಿಸಿಕೊಂಡೇ ಹೋಗುತ್ತದೆ...
ಬಾಲಾಪರಾಧಕ್ಕೆ ಇಲ್ಲಿ ಇಲ್ಲ ಪ್ರಚೋದನೆ; ಗೋಲಿ ಸೋಡಾ ಚಿತ್ರದ ಅಷ್ಟೂ ಹುಡುಗರು ಬಾಲಕರೇ. 16 ವಯಸ್ಸಿನ ಒಳಗೇ ಇರೋ ಟೀನೇಜ್ ಹುಡುಗರು. ಅನಾಥ ಮಕ್ಕಳು ಇದೇ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿಯೋದು. ನಿರ್ದೇಶಕ ವಿಜಯ್ ಮಿಲ್ಟನ್. ಇದನ್ನ ಗಮನದಲ್ಲಿಟ್ಟುಕೊಂಡೇ ಚಿತ್ರ ಮಾಡಿದಂತಿದೆ. ಅದೆಷ್ಟೇ ಸಂಕಷ್ಟದ ಕ್ಷಣಗಳೂ ಬಂದರೂ, ಈ ಹುಡುಗರು ಎಲ್ಲೂ ಕೊಲೆ ಮಾಡೋದಿಲ್ಲ. ಸುಲಿಗೇನೂ ಮಾಡೋದಿಲ್ಲ. ಕಷ್ಟ ಪಡೋದು. ಬಂದ ದುಡ್ಡಿನಲ್ಲಿಯೇ ಪ್ರಾಮಾಣಿಕವಾಗಿ ಇರುತ್ತಾರೆ.. ಇದು ಚಿತ್ರದ ಮೊದಲ ಪ್ಲಸ್ ಪಾಯಿಂಟ್. ಕ್ಲೈಮ್ಯಾಕ್ಸ್ ಹತ್ತಿರ ಬರೋ ಹೊತ್ತಿಗೆ ಹುಡುಗರು ಕಂಡಿತ ಖಳನಾಯಕನನ್ನ ಹೊಡೆದೇ ಬಿಡ್ತಾರೆಂಬ ನಂಬಿಕೆ ಪ್ರೇಕ್ಷಕರಲ್ಲಿ ಬಲವಾಗುತ್ತದೆ. ಆದರೆ, ಅದ್ಯಾವುದು ಇಲ್ಲಿ ಆಗೋದೇಯಿಲ್ಲ. ಎಲ್ಲವೂ ಸುಖಾಂತವಾಗುತ್ತದೆ. ಒಂದು ರೀತಿ ‘ಗೋಲಿ ಸೋಡಾ’ ಒಡೆಯೋವಾಗ ಬರೋ ಸೌಂಡ್ನಷ್ಟೇ ಈ ಹುಡುಗರು ಜೋರ್ ಆಗಿರುತ್ತಾರೆ. ಹೊಟ್ಟೆಯೊಳಗೆ ಹೋದ್ಮೇಲೆ ಸೋಡಾ ಕೊಡುವ ಹಿತ ಇದೆ ನೋಡಿ. ಹಾಗಿದೆ ಈ ಚಿತ್ರದ ಕ್ಲೈಮ್ಯಾಕ್ಸ್. ಒಮ್ಮೆ ನೋಡಿ...ಖುಷಿ ಆಗುತ್ತದೆ..
-ರೇವನ್ ಪಿ.ಜೇವೂರ್