ನಿರಾಕರಣ

ನಿರಾಕರಣ

ಚಿತ್ರ

ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ
ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ
ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ
ರವಿಕೆಯೊಂದಂದಂಚು ಸೀಳುತಿರುವನುಭವಕ್ಕೇನ ಮಾಡಲಿ ಗೆಳತಿಯೆ?

ಸಂಸ್ಕೃತ ಮೂಲ (ಅಮರುಶತಕ, ಅರ್ಜುನ ದೇವನ ಸಂಗ್ರಹದಿಂದ - ಪದ್ಯ ೧೧) :

ತದ್ವಕ್ತ್ರಾಭಿಮುಖಮ್ ಮುಖಮ್ ವಿನಮಿತಮ್ ದೃಷ್ಟಿಃ ಕೃತಾ ಪಾದಯೋಃ
ತಸ್ಯಾಲಾಪ ಕುತೂಹಲಾಕುಲತರೇ ಸ್ರೋತೇ ನಿರುದ್ಧೇ ಮಯಾ
ಪಾಣಿಭ್ಯಾಂ ಚ ತಿರಸ್ಕೃತಃ ಸಪುಲಕಃ ಸ್ವೇದೋಗಮೋ ಗಂಡಯೋಃ
ಸಖ್ಯಃ ಕಿಂ ಕರವಾಣಿ ಯಾಂತಿ ಶತಧಾ ಯತ್ಕಂಚುಕೇ ಸಂಧಯಃ

- ಹಂಸಾನಂದಿ

ಕೊ: ಅನುವಾದವು ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ. ಪ್ರತಿಸಾಲಿಲಲ್ಲೂ ೫।೫।೫।೫।೫।೨ ಈ ರೀತಿ ಗಣವಿಭಾಗವಿದೆ. ಕೊ.ಕೊ: ಮೂಲದ  ಪ್ರತಿಪದವನ್ನೂ ಹಾಗೇ ಉಳಿಸಿಕೊಂಡಿಲ್ಲವಾದರೂ ಒಟ್ಟಾರೆ ಭಾವವು ಉಳಿದುಕೊಂಡಿದೆ ಎಂದುಕೊಂಡಿದ್ದೇನೆ!

ಚಿತ್ರ ಕೃಪೆ: ಬಲದೇವ್ ಮಹಾರಥ ಅವರ ವರ್ಣಚಿತ್ರ - ಅಶೋಕ್ ನಾಯಕ್ ಅವರ ಬ್ಲಾಗ್ ನಿಂದ ತೆಗೆದುಕೊಂಡದ್ದು
(Picture courtesy: http://ashokartgallery.blogspot.com/2010_12_01_archive.html)
 

Rating
No votes yet