ಅಕ್ಕ ಪತಿ - ನಾ ಶರಣ ಸತಿ

ಅಕ್ಕ ಪತಿ - ನಾ ಶರಣ ಸತಿ

ಚಿತ್ರ

 

 

 

ಶರಣ ಚಳವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ನಿಮ್ಮದು, ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯಗಳಿಂದ  ತುಂಬಿದೆ. ವೈಚಾರಿಕ, ಅಸಾಮಾನ್ಯವಾದ ಜೀವ ಅನುಭವಪೂರ್ಣವಾದ, ನುಡಿ,ನಡೆಗಳೊಂದಾದ ಪರಿಯನ್ನು ಕಂಡೆ ನಾ ಸೋತಿದ್ದು. ಕುಟುಂಬದ ಒತ್ತಡಕ್ಕೊ ಅಥವಾ ಸಮಾಜದ ಒತ್ತಡಕ್ಕೊ ಮಣಿದು ಕೌಶಿಕ ಮಹಾರಾಜರನ್ನು ಲಗ್ನವಾಗಿ ಬಿಟ್ಟಿರಿ ಆದರೆ  ಚನ್ನ ಮಲ್ಲಿಕಾರ್ಜುನನಿಗೆ ಮೋಹಿತರಾಗಿದ್ದ ಕಾರಣ ಎಲ್ಲಿಯೂ ಕೂಡ ತನ್ನ ತನವನ್ನು ಬಿಟ್ಟು ಕೊಡದೆ ಶೀಲವಂತಿಕೆಯನ್ನು ಕಾಪಾಡಿಕೊಂಡು ಬಂದಿರಿ. ಅದಕ್ಕೆ ವ್ಯತಿರಿಕ್ತವಾಗಿ ಕೌಶಿಕ ನಡೆದುಕೊಂಡ ವರ್ತನೆಗೆ ಬೇಸರದಿಂದ ದಿಗಂಬರೆಯಾಗಿ ಹೊರ ನೆಡೆದು ವೈರಾಗ್ಯಳಾಗಿ ಇಡೀ ಜೀವಮಾನವನ್ನೆ ಮುಡುಪಾಗಿಟ್ಟುಕೊಂಡು  ಚನ್ನ ಮಲ್ಲಿಕಾರ್ಜುನನ್ನೆ ಪರಿತಪಿಸುತ್ತಾ ಬದುಕಲಾರಂಬಿಸಿದ್ದು ಒಂದು ಅಗ್ನಿ ದಿವ್ಯ ಭಾವನೆ. ವಿಚಾರ ಸ್ವಾತಂತ್ರ ಮತ್ತು ಗಂಡು ಇವೆರಡು ನಿಮ್ಮೆದುರು ನಿಂತಾಗ ಗಂಡನ್ನು ಧಿಕ್ಕರಿಸಿ ವಿಚಾರ ಸ್ವಾತಂತ್ರವನ್ನು ಆಯ್ದುಕೊಂಡ ಈ ನೆಲದ ಹೆಣ್ಣು ನೀವೆ ಎಂದು ಭಾವಿಸಿಕೊಂಡುದ್ದೇನೆ.

ಮನುಷ್ಯ ಅತಿಯಾಗಿ ಬಯಸುವುದು ಅಧಿಕಾರ, ಸಂಪತ್ತು, ವೈಭವ, ಆಡಂಬರ ಆದರೆ ಆ ಭೊಗ ಜೀವನಗಳೆಲ್ಲ ಅನುಭವಿಸಬಹುದಿದ್ದರೂ ಕೂಡ ಅದೆಲ್ಲವನ್ನು ತಿರಸ್ಕರಿಸಿ ಎಲ್ಲಾ ಬಂಧನಗಳಿಂದ ಬಿಡುಗಡೆ ಪಡೆದು ಸಾಮಾನ್ಯರಾಗಿ ಜನ ಜೀವನದಲ್ಲಿ ಬೆರೆತು, ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದುದ್ದು, ಶರಣ ಚಳವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ ಅನುಭವ ಮಂಟಪ ಸೇರಿದುದು, ಮುಂತಾದವು ಸೇರಿದಂತೆ ನೀವು ಮಾಡಿದ್ದು ದೊಡ್ಡ ಕ್ರಾಂತಿ ಅದರಲ್ಲಿ ಎರಡು ಮಾತಿಲ್ಲ. 

ಇಂದು ಪ್ರೇಮ ಪ್ರಸಂಗಗಳು ನಾನಾ ರೀತಿಯಲ್ಲಿ ಜರುಗುತ್ತಿವೆ ಯಾರೂ ಕೂಡ ಮನುಷ್ಯರನ್ನಲ್ಲದೆ ಬೇರೆ ಯಾರನ್ನು ಪ್ರೇಮಿಸುತಿಲ್ಲ. ಆದರೆ ನಿಮ್ಮ ಆಧ್ಯಾತ್ಮಿಕ ಪ್ರಣಯವೇ ಬೇರೆ ರೀತಿಯಾಗಿದೆ. ನಿಮ್ಮ ಜೀವನ ಸಾಧನೆಯ ಎಲ್ಲಾ ಹಂತದ ಭಾವ ಲಹರಿಗಳು ವಚನಗಳಲ್ಲಿ ಜೀವಂತ ಅಭಿವ್ಯಕ್ತಿಯನ್ನು ಪಡೆದಿವೆ. ಚನ್ನ ಮಲ್ಲಿಕಾರ್ಜುನನೊಂದಿಗೆ ಆದ್ಯಾತ್ಮಿಕ ಪ್ರೇಮದ ನಿಲುವು ಭಾವಗೀತಾತ್ಮಕವಾದ ಅಭಿವ್ಯಕ್ತಿಯ ವೈಶಿಷ್ಟ್ಯವಾಗಿದೆ. " ಶರಣ ಸತಿ - ಲಿಂಗ ಪತಿ " ಭಾವವನ್ನು ಸ್ಥೂಲವಾಗಿ ಹಿಡಿದು ಬರೆದ ವಚನಗಳಲ್ಲಿ ಒಂದು ಬಗೆಯ ಔನ್ನತ್ಯವಿದ್ದರೆ, ಜೀವನದುದ್ದಕ್ಕೂ ಅನುಭವಿಸಿದ ಸಂಕಷ್ಟಗಳ ನಿರೂಪಣೆಯಲ್ಲಿ ಇನ್ನೊಂದು ಬಗೆಯ ಔನ್ನತ್ಯವನ್ನು ಕಾಣಬಹುದು " ಬೆಳದಿಂಗಳು ಬಿಸಿಲಾಯ್ತು " " ಸುಡಲೀ ವಿರಹದ ನಾನಾರಿಗೆ ಧೃತಿಗೆಡುವೆ " " ಕಿಚ್ಚಿಲ್ಲಾದ ಬೇಗೆಯಲ್ಲಿ ಬೆಂದೆನವ್ವಾ " ಮೊದಲಾದ ವಚನಗಳಲ್ಲಿ ವಿವಿಧ ಆಯಾಮಗಳಿವೆ. "ವನವೆಲ್ಲ ನೀನೆ, ವನದೊಳಗೂ ದೇವತರುವೆಲ್ಲ ನೀನೆ" ಎಂಬಂತಹ ವಚನಗಳು ನಿನ್ನ ಸೃಷ್ಟಿಯಲ್ಲಿ ಅನುಭವಿಸಿದ್ದು ಶಿವದರ್ಶನಕ್ಕೆ ಸಾಕ್ಷಿಯಾಗಿವೆ.

ನೀವು ಹೆಣ್ಣಾಗಿ ೧೨ನೇ ಸತಮಾನದಲ್ಲಿ ಬಂಡಾಯವೆಂದರೇನು ಎಂದು ತೋರಿಸಿಕೊಡುವುದರ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ನಿಮ್ಮನ್ನು ಮೋಹಿಸದೆ ಇರಲು ನನ್ನಿಂದ ಸಾದ್ಯವಾಗುತಿಲ್ಲ. ಚನ್ನ ಮಲ್ಲಿಕಾರ್ಜುನನ್ನು ನೀವೆಷ್ಟು ಆಧ್ಯಾತ್ಮಿಕವಾಗಿ ಮೋಹಿಸಿದ್ದೀರಿ, ಅಷ್ಟೆ ಆಧ್ಯಾತ್ಮಿಕ ಮೋಹವನ್ನು ನಾನು ನಿಮ್ಮ ಮೇಲಿರಿಸಸಿಕೊಂಡಿದ್ದೀನಿ, ಪುರುಷ ಪ್ರಧಾನ ಸಮಾಜದಲ್ಲಿ ೨೧ನೇ ಶತಮಾನದಲ್ಲಿಯು ಕೂಡ ಯಾವ ಹೆಣ್ಣು ಮಾಡದ ಕಾರ್ಯವನ್ನು ನೀವು ಅಂದೇ ಮಾಡಿ ಮುಗಿಸಿದ್ದೀರಾ ಆಗಾಗಿ ನಿಮ್ಮನ್ನಲ್ಲದೆ ಬೇರೆಯಾರನ್ನು ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ.

ಅಯ್ಯಾ, ನೀನೆನ್ನ ಮೊರೆಯನಾಲಿಸಿದರಾದಿಸು

ಆಲಿಸದದಿರ್ಪಡೆ ಮಾಣು,

ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು

ನೋಡದಿರ್ದಡೆ ಮಾಣು!

ನೀನೊಲ್ಲದಡೆ ಆನೋಲಿಸುವ ಪರಿಯೆಂತಯ್ಯ

ಮನವಳಿಸಿ ಮಾರವೋಗಿ ಮರೆವೊಕ್ಕಡೆ

ಕೇಂಬ ಪರಿಯೆಂತಯ್ಯ 

- ಚನ್ನ ಮಲ್ಲಿಕಾಜುನ

ಸುಖವನ್ನಾಗಲಿ,ದುಖವನ್ನಾಗಲಿ ಪ್ರತಿಯೊಂದನ್ನು ಹೇಳುತ್ತೀಯ ನಿನ್ನೆಲ್ಲ ಭಿಜ್ಞಾಸೆಗಳನ್ನು ತೋರಿಸತ್ತೀಯ, ನಿನ್ನ ಚನ್ನ ಮಲ್ಲಿಕಾರ್ಜುನನಿಗೆ ತೋಡಿಕೊಂಡಾಗಲೆ ಒಂದಿಷ್ಟು ಸಮಾಧಾನ ತಂದುಕೊಳ್ಳುತ್ತೀಯ ಆದರೆ ನನ್ನ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುಲು ನನ್ನನ್ನು ನಾ ಸಂತೈಸಿಕೊಳ್ಳಲು ನಿನ್ನೊಲುಮೆ ಬಿಟ್ಟರೆ ಬೇರೇನು ಇಲ್ಲ.  ಪ್ರಸ್ತುದಲ್ಲಿ ನಿನ್ನ ವಚನ ಕಲ್ಪನೆಯಲ್ಲಿಯೆ ಬದುಕುತ್ತಿದ್ದೆನೆ ಮುಂದೊಂದು ದಿನ ಅನನ್ಯ ಭಕ್ತಿಯ ನಂತರ ಸೇರೆ ಸೇರುತ್ತೇನೆ. ನನ್ನದೆಲ್ಲವನ್ನು ಕೇಳಿಕೊ, ಚಲನವಲನಗಳೆಲ್ಲವನ್ನು ನೋಡಿಕೊ ಮುಚ್ಚಿಟ್ಟುಕೊಂಡು ಬದುಕುವ ಔದಾರ್ಯ ನನ್ನದಲ್ಲ. ಕೋಪ ಬಂದರೆ ಕಪಾಳಕ್ಕೆರಡು ಬಿಗಿದು ಬಿಡು ಅದನ್ನು ಕೂಡ ಪ್ರೇಮವೆಂದೆ ಭಾವಿಸುತ್ತೇನೆ.

ಒಮ್ಮೆ ಕಾಮನ ಕಾಲ ಹಿಡಿವೆ

ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡುವೆ

ಸುಡಲೀ ವಿರಹವ

ನಾನಾರಿಗೆ ಧೃತಿಗೆಡುವೆ?

ಚನ್ನ ಮಲ್ಲಿಕಾರ್ಜುನ ಕಾರಣ

ಎಲ್ಲರಿಗೆ ಹಂಗುಗಿತ್ತಿಯಾದೆನವ್ವ.

ನಿನ್ನೊಳಗೆ ಹಲವಾರು ಆಸೆ-ಆಕಾಂಕ್ಷೆಗಳು, ಬಯಕೆಗಳು ತುಂಬಿಕೊಂಡಿದ್ದಾಗ ಅದನ್ನೆಲ್ಲ ಅದುಮಿಟ್ಟುಕೊಂಡು ಸುಡುವ ಕಾಮವನ್ನು ಜಹಿಸಿದೆ. ಆದರೂ ಎಲ್ಲರ ಹಂಗಿನಲ್ಲು ಬದುಕುವಂತಹ ಸ್ಥಿತಿ ನಿಮಾರ್ಣವಾದಾಗಲು ನೀ ಧೃತಿಗೆಡಲಿಲ್ಲ. ಎಲ್ಲದಕ್ಕು ಚನ್ನ ಮಲ್ಲಿಕಾರ್ಜುನನೆ ಕಾರಣವೆಂದು ಅದರಲ್ಲು ಪ್ರೇಮು ಕಂಡುಕೊಂಡತೆ. ನಾನು ಕೂಡ ನಿನ್ನ ಭಕ್ತಿ ಪ್ರೇಮದ ಹಣತೆಯ ಬೆಳಕಿನ ಕಿಡಿಯೊಂದನ್ನು ಬಿಟ್ಟು ಉಳಿದೆಲ್ಲಾ ದೈಹಿಕ ಕಾಮನೆಗಳ ತೃಷೆಗಳಿಗೆಲ್ಲ ತಣ್ಣೀರೆರಚಿ ನಾಶ ಮಾಡಿಬಿಟ್ಟಿದ್ದೇನೆ, ಯಾಕೆಂದರೆ ಭಕ್ತಿ ಭಾವ ಮನಸ್ಸು ನಿನ್ನಿಂದೆ ಓಡಿದ ಮೇಲೆ, ಕಾಮವನ್ನು ಇನ್ನೊಬ್ಬರ ಕಡೆಗೆ ಕಳುಹಿಸಿದರೆ ಪ್ರೇಮಕ್ಕೆ ಎಲ್ಲಿ ಬೆಲೆ ತಂದಂತಾಯಿತು?

ನಮ್ಮ ಭಾರತೀಯ ಸಮಾಜದಲ್ಲಿ ಬಂಡಾಯವೆದ್ದ ಸ್ವಾಭಿಮಾನಿ ಮಹಿಳೆಯರಿಗೆ ಬೇರೆ ಬೇರೆ ರೀತಿಯ ಒರೆಗಲ್ಲುಗಳ ಸಂಕಷ್ಟಗಳು ಎದುರಿಸಿ ನಿಲ್ಲಬೇಕಾಗುತ್ತದೆ. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ" "ಚಂದನವ ಕಡಿದು ಕೊರೆದು ತೇದೆಡೆ ನೊಂದನೆಂದು ಕಂಪಬಿಟ್ಟಿತೆ" "ಮನೆಮನೆದಪ್ಪದೆ ಕೈಯೊಡ್ಡಿ ಬೆಡುವಂತೆ ಮಾಡಯ್ಯ" "ಹಸಿವಾದೊಡೆ ಊರೊಳಗೆ ಭಿಕ್ಷಾನ್ನಗಳುಂಟು, ತೃಷೆಯಾದಡೆ ಕೆರೆ ಬಾವಿಗಳುಂಟು" ಎಂದು ಇಡೀ ಲೌಕಿಕ ಜೀವನವನ್ನೆ ತ್ಯಜಿಸಿ ಸಮಾಜವನ್ನು ಭೇದಿಸಿ ನಿಂತಿದ್ದು ಒಂದು ದೊಡ್ಡ ಪವಾಡ.

ನೀವು ಜೀವನದ ಉತ್ತರಾರ್ಧದಲ್ಲಿ ಮಲ್ಲಿಕಾರ್ಜುನನ ವಶವರ್ತಿಯಾಗಿ ಲೋಕವನ್ನೆಲ್ಲಾ ಸುತ್ತಿ ಕಲ್ಯಾಣವನ್ನು ಪ್ರವೇಶಿಸಿದ್ದು ಮತ್ತೊಂದು ಮುಖ್ಯ ಘಟನೆ. ಅನುಭವ ಮಂಟಪದಲ್ಲಿ ಎದುರಿಸಿದ ಪ್ರಶ್ನೆ, ಕೊಟ್ಟ ಉತ್ತರಗಳು ಚಿಂತನೆಯ ಔನ್ನತ್ಯವನ್ನು ಸಾರುತ್ತವೆ. ಅಲ್ಲಿ ಪ್ರಭುದೇವ, ಬಸವಣ್ಣ, ಚನ್ನ ಬಸವಣ್ಣ ಮೊದಲಾದವರ ಮಧ್ಯೆ ಎದ್ದು ಕಾಣುವಂತೆ ನಿಮ್ಮದೆ ಜಗತ್ತನ್ನು ತೆರೆದುಕೊಂಡದ್ದು ನನಗೆ ಹಾಗಾಗ ಹೊಸ ಹುರುಪುಗಳನ್ನು ತುಂಬುತ್ತವೆ. ನೀವು ಆಧ್ಯಾತ್ಮಿಕವಾಗಿ ಚನ್ನ ಮಲ್ಲಿಕಾರ್ಜುನನನ್ನು ಎಷ್ಟು ಪ್ರೇಮಿಸುತ್ತೀರಿ ಎನ್ನುವುದನ್ನನು ನಾನು ಕಂಡುಕೊಂಡಿದ್ದೇನೆ. ಆದರೆ ನನ್ನಲ್ಲಿಯೂ ಕೂಡ ಒಂದು ಆಧ್ಯಾತ್ಮಿಕ ಜಗತ್ತಿದೆ, ಅಲ್ಲಿಗೆ ನಿಮ್ಮನ್ನು ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ. ಅಲ್ಲಿ ನೀವೆ ನನ್ನ ಪತಿ - ನಾ ನಿನ್ನ ಸತಿ. ಯಾಕೆಂದರೆ ನೀವೆ ಹೇಳಿದ್ದೀರಿ " ನಾಮದಲ್ಲಿ ಹೆಂಗುಸೆಂಬ ಹೆಸರಾದಡೇನು ಭಾವಿಸಲು ಗಂಡು ರೂಪ " ಎಂದು ಅದೇ ನಿಟ್ಟಿನಲ್ಲಿ ನಾನೂ ಕೂಡ ಭಾವಿಸಿಕೊಂಡಿದ್ದೇನೆ.

ಭೂತದಲ್ಲಿಯೂ

ವರ್ತಮಾನದಲ್ಲಿಯೂ

ಭವಿಷ್ಯದಲ್ಲಿಯೂ

ಅಕ್ಕ ಪತಿ - ನಾ ಶರಣ ಸತಿ...........................

 

 

Rating
Average: 4.3 (3 votes)

Comments

Submitted by kavinagaraj Sat, 02/15/2014 - 08:52

ಅಕ್ಕನ ವ್ಯಕ್ತಿತ್ವವನ್ನು ತೋರಿಸುವುದರೊಂದಿಗೆ, ಪೂರಕವಾಗಿ ಅಕ್ಕ ಪತಿ-ಶರಣ ಸತಿ ಎಂಬ ಭಾವದ ಸುಂದರ ಕಲ್ಪನೆ ಸೊಗಸಾಗಿದೆ.

Submitted by ಗಣೇಶ Mon, 02/17/2014 - 00:33

ಹಾರೋಹಳ್ಳಿ ರವೀಂದ್ರರೆ, ವ್ಯಾಲಂಟೈನ್ಸ್ ಡೇ ದಿನವೇ ನಿಜವಾದ‌ ಪ್ರೀತಿ, ಭಕ್ತಿಯ‌ ರೂಪ‌ ತೋರಿಸಿದಿರಿ. ಧನ್ಯವಾದ‌.