ಸರ್ವೈವಲ್ ಆಫ್ ದಿ ಫೀಟ್ಟೆಸ್ಟ್

ಸರ್ವೈವಲ್ ಆಫ್ ದಿ ಫೀಟ್ಟೆಸ್ಟ್

ಈ ಕಥೆಯನ್ನು ನಿಮಗೆ ಹೇಳಲೇಬೇಕಾಗಿದೆ. ಯಾಕೆಂದರೆ ಇದು ಉಳಿವಿಗಾಗಿ ಹೋರಾಡಿದ ಕಥೆ. ಡಾರ್ವಿನ್ ಹೇಳಿದಂತೆ ಇದು ಯುದ್ಧ ಮಾಡಿ ಬಲಹೀನ ಪ್ರಾಣಿಯನ್ನು ಕೊಂದು ಪ್ರತಿದಿನ ಆಹಾರ ತಿಂದ ಕಥೆಯಲ್ಲ. ತುರ್ತಾಗಿ ನಾನು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಈ ಆಧುನಿಕ ಯುಗದಲ್ಲಿ ‘ಉಳಿವಿಗಾಗಿ ಹೋರಾಟ’ವೆಂದರೇನು? ಇಂದಿನ ತುರ್ತಿಗೆ ಅದರರ್ಥವನ್ನು ಬದಲಿಸಿಕೊಳ್ಳಬೇಕೇ? ಉಳಿದ ಸಂತತಿಯನ್ನು ಕ್ಷೀಣಿಸುವುದರ ಮೂಲಕ ಎಲ್ಲವನ್ನೂ ಮೀರುತ್ತಿರುವ ಮನುಷ್ಯನೊಬ್ಬನೇ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾನೆ ಎಂದುಕೊಳ್ಳುವುದೇ? ಅಥವಾ ಆತನೇ ತಾನೇ ಹೆಣೆದ ಬಲೆಯೊಳಗೆ ಸಿಲುಕಿಕೊಂಡು ಹೋರಾಡುತ್ತಿರುವನೇ? ಪ್ರಾಣಿಗಳಂತೆ ಇವನದೂ ದೈಹಿಕ ಹೋರಾಟವೇ? ಪ್ರಾಣಿಸಹಜವಾಗಿ ಮನುಷ್ಯ ಬೆಳೆದಿದ್ದರೆ ಇಂದು ಯಾವ ಅಭಿಲಾಶೆಯೂ ಇಲ್ಲದೇ ಉಳಿವಿಗಾಗಿ ಹೋರಾಟವೆನ್ನುವುದು ಕೇವಲ ಶರೀರದ ಸಾಮಥ್ರ್ಯಕ್ಕೆ ಸಂಬಂಧಪಡುತ್ತಿತ್ತು. ಈಗ ಅದು ದೇಶದಾಢ್ರ್ಯಕ್ಕೆ ಸಂಬಂಧಪಟ್ಟಿಲ್ಲವೇ? ಉಳಿವಿಗಾಗಿ ಹೋರಾಟವೆಂದು ಆಧುನಿಕ ಯುಗದ ನಾಗರೋಟದಲ್ಲಿ ಕೇವಲ ಮನಸ್ಸಿಗೆ ಸಂಬಂಧಪಟ್ಟಿದ್ದೆ?

ಕಳೆದ ವಾರ ನನ್ನ ಮೊಬೈಲಿಗೆ ಒಂದು ಸಂದೇಶ ಬಂದಿತ್ತು. ‘ಪ್ರೀತಿಯ ಭಾರದ್ವಾಜ್‍ರವರಿಗೆ ವಂದನೆಗಳು. ಅನೇಕ ಬಾರಿ ಪ್ರಯತ್ನಿಸಿದರೂ ತಾವು ಕರೆ ಸ್ವೀಕರಿಸದ ಕಾರಣ ಈ ಸಂದೇಶ.  ಕೂಡಲೇ ತಾವು ಮೈಸೂರು ಜಿಲ್ಲೆಯ ನರಸಿಪುರಕ್ಕೆ ಹೊರಡಬೇಕಾಗಿ ವಿನಂತಿ. ತಮಗೆ ಪರಿಚಯಸ್ಥರಾದ ರಮಾನಂದರವರು ತೀವ್ರ ಅಸ್ವಸ್ಥರಾಗಿ ಅನ್ನ ನೀರು ಬಿಟ್ಟಿದ್ದಾರೆ.  ರಮಾನಂದ ಎಂದರೆ ತಮ್ಮ ನೆನಪಿಗೆ ಬಂದಿರಬಹುದು. ಆದರೂ ಹೇಳಿಬಿಡುತ್ತೇನೆ. ತಮ್ಮ ಆಪ್ತ ಗೆಳೆಯ ಲಕ್ಷ್ಮಿಕಾಂತ ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದವರು. ಅವರು ತಮ್ಮನ್ನು ಕೂಡಲೇ ಕಾಣಬೇಕೆಂದು ಬಯಸಿದ್ದಾರೆ. ಕೂಡಲೇ ಹೊರಡಲು ವಿನಂತಿ’.

ರಮಾನಂದರವರು ನನಗೆ ಅಷ್ಟು ಪರಿಚಯಸ್ಥರಲ್ಲ.  ಒಮ್ಮೆ ನೋಡಿ ಹಲ್ಲು ಕಿರಿದು ಕೈ ಕುಲುಕಿದ್ದೆ ಅಷ್ಟೇ. ಸಾವಿನ ದವಡೆಯಲ್ಲಿರುವಾಗ ನನ್ನನ್ನು ಬರಮಾಡಿಕೊಳ್ಳುವುದರ ಉದ್ದೇಶವೇನು?  ತಮ್ಮ ಜೀವನದಲ್ಲಿ ಹಣ ಸಂಪಾದಿಸಿದಂತೆ ಜನವÀನ್ನೂ ಸಂಪಾದಿಸಿದ್ದಾರೆ.  ಅವರೆಲ್ಲರ ಮುಂದೆ ನಾನೆಷ್ಟರನೆಯವನು?  ನನ್ನ ಬಗ್ಗೆ ಈ ಲಕ್ಷ್ಮಿಕಾಂತ ಹೇಳಿರಬಹುದು.  ಆದರೂ ಈ ಕೋರಿಕೆಯಲ್ಲಿ ಸಾವಿನ ತಳುಕಿದ್ದುದರಿಂದ ಹೊರಟೇಬಿಟ್ಟಿದ್ದೆ. ನಾನಿರುವ ಬೀದರ್‍ನಿಂದ ನರಸಿಪುರಕ್ಕೆ ತಲುಪುವುದರಲ್ಲಿ ರಾತ್ರಿ ಹತ್ತಾಗಿತ್ತು.  ಮುಂಜಾನೆಯೇ ಊರು ಬಿಟ್ಟಿದ್ದೆ.  ರಮಾನಂದರವರು ಮೈಸೂರು ಜಿಲ್ಲೆಯ ನರಸಿಪುರ ತಾಲ್ಲೂಕಿನಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿ ಒಂದು ತೋಟ ಮಾಡಿಕೊಂಡು, ಅಲ್ಲಿಯೇ ಒಂದು ಏಕಾಂಗಿ ಮನೆ ಕಟ್ಟಿಕೊಂಡು ಜೀವನವನ್ನು ಕಳೆಯುತ್ತಿದ್ದರು. ಸ್ವಯಂ ನಿವೃತ್ತಿ ಪಡೆದುಕೊಂಡು, ಒಳ್ಳೆಯ ಸಂಬಳ ಬರುವ ಕೆಲಸ ತೊರೆದು ಎಲ್ಲರಿಂದಲೂ ಒಬ್ಬ ಆದರ್ಶ ರೈತನೆನಿಸಿಕೊಂಡು ಏಕಾಂಗಿಯಾಗಿ ಉಳಿದವರು.

ನರಸಿಪುರವನ್ನು ತಲುಪಿ ಯಾವುದೋ ಲಾರಿ ಹಿಡಿದು ಮದ್ಯೆ ಎಲ್ಲೋ ಇಳುಗಿ ಒಂದೆರಡು ಕಿಲೋಮೀಟರ್ ನಡೆಯುವಾಗ ಒಂದು ರೀತಿಯ ಗೊಂದಲ ಮತ್ತು ಭಯ ನನ್ನನ್ನು ಆವರಿಸಿತ್ತು. ನಾನೇಕೆ ಹೋಗಬೇಕು? ನನಗೂ ಅವರಿಗೂ ಎಲ್ಲಿಯ ಸಂಬಂಧ? ಹಿಂದಿರುಗಿಬಿಡಲೇ ಎನಿಸಿತು. ನನ್ನನ್ನೇ ನಾನು ದೂಡಿಕೊಂಡು ಹೊರಟೆ. ಓಣಿಯಲ್ಲಿ ನಡೆಯುವಾಗ ಬೀದಿ ದೀಪದ ಚೂರಿಲ್ಲ. ನನ್ನ ಮೊಬೈಲ್ ಟಾರ್ಚ್ ಹಿಡಿದು ಆ ನಿರ್ವಾತದಲ್ಲಿ ನಡೆದೆ. ನಿರ್ಭಿಡೆಯಿಂದಲ್ಲ! ಹಾಗೂ ಹೀಗೂ ತೋಟದ ಮನೆ ತಲುಪಿದಾಗ ಮನೆಯೊಳಗೂ ಮಂದಬೆಳಕು. ಕತ್ತಲೆಗಿಂತಲೂ ದಪ್ಪದಾದ ಅಚಲ ಮೌನ ಆ ಮನೆಯನ್ನು ಆವರಿಸಿತ್ತು. ಬರಮಾಡಿಕೊಳ್ಳಲು ಒಬ್ಬರೂ ಇಲ್ಲ. ನನಗೇ

ಒಂದೇ ಸಮನೆ ಆ ಮನೆಯಲ್ಲಿ ಸಾವು ಕಂಡಂತೆ ಭಾಸವಾಯಿತು. ಬಹುಶಃ ರಮಾನಂದರವರು ತೀರಿಕೊಂಡಿರಬಹುದೆಂಬ ಗುಮಾನಿಯೊಂದಿಗೆ ಮನೆಯೊಳಗೆ ತೆರಳಿದೆ. ಅಷ್ಟಕ್ಕೇ ‘ಯಾರದು?’ ಎಂಬ ದ್ವನಿ ನನ್ನ ಬೆನ್ನನ್ನು ಗುದ್ದಿತು.  ಯಾಕೋ ನನ್ನ ದೇಹ ಆ ಕತ್ತಲೆಯಲ್ಲಿ ಇದ್ದಕ್ಕಿದ್ದಂತೆ ಬೆಚ್ಚಿತು.  ದೇವರು ದೆವ್ವವನ್ನು ತಿರಸ್ಕರಿಸಿದರೂ ಆಕಸ್ಮಿಕ ಘಟನೆಗಳಿಗೋಸ್ಕರ ಹೊಂಚು ಹಾಕುವ ಮನುಷ್ಯನನ್ನು ತಿರಸ್ಕರಿಸಲು ಸಾಧ್ಯವಿಲ್ಲ ಅಲ್ಲವೇ?  ‘ನಾನು ಭಾರದ್ವಾಜ್. ಲಕ್ಷ್ಮಿಕಾಂತ...’ ಎನ್ನುವಷ್ಟರಲ್ಲಿ ‘ಓಹೋ ಬನ್ನಿ ಬನ್ನಿ’ ಎಂದ ಧ್ವನಿ ನನ್ನನ್ನು ಸಮೀಪಿಸಿತ್ತು.  ತೆಳು ಬೆಳಕಿನಲ್ಲಿ ಕಂಡ ಆ ಮೊಗದಲ್ಲಿ ನನ್ನನ್ನು ಕಂಡ ಖುಷಿಯಿತ್ತು.  ಸ್ವಲ್ಪ ವಯಸ್ಸಾಗಿದೆ.  ಕೂಡಲೇ ‘ನೀವು?’ ಎಂದೆ. ‘ನಾನು ರಮಾನಂದರ ಹೆಂಡತಿ’ ಎಂದರು.

ನನ್ನನ್ನು ಅವರು ಒಂದು ಚಾಪೆ ಹಾಸಿ ಕೂರಿಸಿದರು.  ಆ ಮನೆಯ ಆಕಾರವೇ ತಿಳಿಯದಂತೆ ಒಂದು ಬಗೆಯ ಕತ್ತಲು ಬೆಳಕಿನಾಟ ಅಲ್ಲಿ ನಡೆದಿತ್ತು.  ನಾನು ಏಕಾಂಕಿಯಾಗಿ ಕುಳಿತೆ.  ನನ್ನನ್ನು ಅಲ್ಲಿ ಕೂರಿಸಿದ ರಮಾನಂದರ ಹೆಂಡತಿ ಇದ್ದಕ್ಕಿದ್ದಂತೆ ಮಾಯವಾದರು.  ಸ್ವಲ್ಪ ಸಮಯದ ನಂತರ ಮತ್ತೆ ಪ್ರತ್ಯಕ್ಷವಾಗಿ ಕೈಯಲ್ಲೊಂದು ಚೊಂಬು ನೀರನ್ನು ಹಿಡಿದು ‘ಮೊದಲು ಕೈ ತೊಳೆಯಿರಿ, ಊಟ ಮಾಡುವಿರಂತೆ’ ಎಂದರು. ‘ಊಟವಿರಲಿ, ರಮಾನಂದರು’ ಎಂದೆ. ಹಳ್ಳಿ ಸಂಸ್ಕøತಿಯಲ್ಲಿಯೇ ಸಮೃದ್ಧವಾಗಿ ಬೆಳೆದಾಕೆ ಮೊದಲು ಊಟ ಮಾಡಿ ಎಂದು ಹಠ ಹಿಡಿದರು. ಊಟವಾಯಿತು. ಮನೆ ಮುಂದಿನ ಪಡಸಾಲೆಯಲ್ಲಿ ಕುಳಿತ ನನಗೆ ಆಕೆ ಎಲೆ ಅಡಿಕೆಯನ್ನು ನೀಡಿ ಮತ್ತೆ ಮಾಯವಾದರು.  ಆ ಕತ್ತಲಿನಲ್ಲಿ ನನ್ನ ಪಾದವೂ ನನಗೆ ಕಾಣುತ್ತಿರಲಿಲ್ಲ.  ಅದು ಕತ್ತಲಿನ ಮಿತಿ. ಮನುಷ್ಯ ಬೆಳಕಿಗೆ ಒಗ್ಗಿಕೊಂಡೇ ಎಲ್ಲವನ್ನೂ ಅಪರಿಮಿತಿಗೊಳಿಸಿಬಿಟ್ಟ ಎನಿಸುತ್ತಿದೆ.  ಇದೇ ತೋಟದಲ್ಲಿ ಕೆಲಸ ಮಾಡುವ ಎಷ್ಟೋ ಜನ ಈ ತೋಟವನ್ನು ಅಥವಾ ಇಲ್ಲಿಯ ಬೆಟ್ಟ ಗುಡ್ಡಗಳನ್ನು ದಾಟಿ ಹೋಗಲಾರರು. ಸಾಕಲ್ಲವೇ? ಬೆಟ್ಟ ಗುಡ್ಡದಾಚೆಗಿನ ಹೋರಾಟ, ನೀತಿ ರೀತಿ ಆಧುನಿಕತೆಗಳು ಇಲ್ಲಿಗಿಣುಕಿ ಈ ವ್ಯವಸ್ಥೆಯನ್ನು ಅಲುಗಾಡಿಸುವುದನ್ನು ಒಪ್ಪಿಕೊಳ್ಳುವುದೋ ಬೇಡವೋ?

ತುಂಬಾ ಘಳಿಗೆಯ ನಂತರವೂ ರಮಾನಂದರ ಹೆಂಡತಿ ಸುಳಿಯದ ಕಾರಣ ನಾನೇ ಒಳ ಹೋಗಬೇಕಾಯಿತು. ಎಂಟು ಕಂಬಗಳಿರುವ ತೊಟ್ಟಿಯ ಹಟ್ಟಿ. ನಾಲ್ಕು ದಿಕ್ಕುಗಳಿಂದಲೂ ಇಳಿಬಿಟ್ಟ ಸೀಮೆಹೆಂಚಿನ ಮನೆ. ಹಜಾರಕ್ಕೆ ಹೊಂದಿಕೊಂಡಂತೆ ಒಂದಷ್ಟು ಕೋಣೆಗಳಿದ್ದವು.  ಯಾವುದೋ ಕೋಣೆಯಲ್ಲಿ ಬೆಳಕು ಮಿಣುಕಾಡುತ್ತಿತ್ತು. ಅಲ್ಲಿಯೇ ರಮಾನಂದರು ಮಲಗಿರಬಹುದೆಂದು ಬಳಿ ದಾವಿಸಿದಾಗ ನನ್ನ ಊಹೆ ನಿಜವಾಗಿತ್ತು.  ರಾಗಿ ಅಂಬಲಿ ಬಟ್ಟಲು ಹಿಡಿದುಕೊಂಡಿದ್ದ ರಮಾನಂದರ ಹೆಂಡತಿ ಚಮಚವನ್ನು ತುಟಿಯ ಬಳಿ ಹಿಡಿಯುತ್ತಿದ್ದರು. ಮಾತನಾಡಲು ಶಕ್ತಿಯಿಲ್ಲದ ರಮಾನಂದರು ಎರಡೂ ಕೈ ಮೇಲಕ್ಕೆತ್ತಿ ಬೇಡ ಬೇಡ ಎನ್ನುತ್ತಿದ್ದರು. ಅವರನ್ನು ನೋಡಿ ನನಗೆ ಅಯ್ಯೋ ಎನಿಸಿತ್ತು. ಯವ್ವನಾವಸ್ಥೆಯಲ್ಲಷ್ಟೇ ಬದಲಾವಣೆಯಲ್ಲವೇ? ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಅದೇ ಬಾಲ್ಯಾವಸ್ಥೆ, ಅಸಹಾಯಕತೆ, ಹಠ, ಅಭದ್ರತೆ ಕಾಡುತ್ತದೆ. ಇಲ್ಲೂ ಕೂಡ. ಹತ್ತಿರ ಧಾವಿಸಿದ ನನ್ನನ್ನು ಕಂಡ ಕೂಡಲೇ ರಮಾನಂದರ ಕಣ್ಣರಳಿತು, ತುಟಿಗಳು ಬಿರಿದವು. ತಿರುಗಿ ನೋಡಿದ ರಮಾನಂದರ ಹೆಂಡತಿಗೂ ಇದು ಆಶ್ಚರ್ಯ.

‘ಎಷ್ಟೋ ದಿನಗಳ ನಂತರ ಇದೇ ಮೊದಲ ಬಾರಿಗೆ ನಕ್ಕಿದ್ದು’ ಎಂದ ರಮಾನಂದರ ಹೆಂಡತಿ ತಾವೂ ನಕ್ಕು ಸೆರಗಿನಲ್ಲಿ ಕಣ್ಣೀರೊರೆಸಿಕೊಂಡರು.  ಮೊದಲಿಗೇ ಅವರೇ ರಮಾನಂದರು ಎಂಬುದು ಮೇಲ್ನೋಟಕ್ಕೆ ನನಗೆ ತಿಳಿಯಲೇ ಇಲ್ಲ.  ಕಪ್ಪಗಿದ್ದರೂ ಎಷ್ಟು ವಿಶಾಲ ಮತ್ತು ಗಟ್ಟಿ ದೇಹ ಹೊಂದಿದ್ದ ವ್ಯಕ್ತಿ.  ಅವರು ನಡೆದು ಬರುತ್ತಿದ್ದರೆ ಪುಷ್ಠಗೊಂಡಿದ್ದ ಅವರ ಭುಜಗಳು ಲಯಬದ್ಧವಾಗಿ ನೆಗೆಯುತ್ತಿದ್ದವು.  ಬೀಪಿ, ಶುಗರ್ ಇತ್ಯಾದಿ ಕಾಯಿಲೆಯಿಲ್ಲದೇ ಮುದ್ದೆ ತಿಂದು ಬೆಳೆದ ದೇಹ.  ಆದರೆ, ಈಗ, ಕೃಶವಾಗಿ ಹಾಸಿಗೆಗೆ ಭಾರವಲ್ಲದೇ ಬಿದ್ದಿತ್ತು. ಅಂಬಲಿ ಬೇಡ ಬೇಡ ಎಂದು ಕೈಯೆತ್ತುವಾಗ ಅವರ ಕೈಕಾಲುಗಳು ಗಡ ಗಡನೆ ನಡುಗುತ್ತಿದ್ದವು. ನನ್ನನ್ನು ನೋಡಿದಾಗ ಒಂದೆಡೆ ಖುಷಿ ಕಾಣಿಸಿದರೂ ಮತ್ತೊಂದೆಡೆ ಅವರೊಳಗೆ ಏನೋ ಅವ್ಯಕ್ತ ಭಯ ಗೆದ್ದಲು ಕಟ್ಟಿರುವಂತೆ ಭಾಸವಾಯಿತು.  ಅವರ ಕಣ್ಣುಗಳಲ್ಲಿ ಭಯದ ನೀರಿತ್ತು. ರೆಪ್ಪೆಗಳು ಅಲುಗುತ್ತಿದ್ದವು. ತಾವೇ ಇಚ್ಛಿಸಿ ನಿವೃತ್ತಿ ಪಡೆದ ಮೇಲೆ ಇಲ್ಲೆಲ್ಲಾ ಲವಲವಿಕೆಯಿಂದ ಅಡ್ಡಾಡಬೇಕಾದವರು ಈ ರೀತಿಯಾಗಿ ಬಿದ್ದಿರುವುದು ಸೋಜಿಗ.  ಯಾವುದೇ ವ್ಯಕ್ತಿಯ ನಿಜಬರಹವನ್ನು ಹತ್ತಿರದಿಂದಲೇ ಕಾಣಬೇಕು, ದೂರಕ್ಕೆ ಹೊಳೆವ ನಕ್ಷತ್ರಗಳು ಸಮೀಪದಲ್ಲಿ ಯಾರನ್ನೂ ಕೂಡದ ಒಂಟಿ ನಿರ್ಜೀವಗಳಲ್ಲವೇ?

ಮತ್ತೆ ಕತ್ತಲನ್ನು ಆಸ್ವಾದಿಸುತ್ತ ಪಡಸಾಲೆಯಲ್ಲಿ ಕುಳಿತಿದ್ದೆ.  ನಾನೂರಿದ ಪಾದಗಳ ಮುಂದಿನ ಲೋಕವನ್ನು ಅದು ನನಗೆ ತೋರಿಸುತ್ತಿಲ್ಲವೆಂಬುದೇ ನನಗೆ ಆಗಿನ ಖುಷಿ.  ಅಷ್ಟಕ್ಕೇ ರಮಾನಂದರು ಮೆಟ್ಟಿಲು ಇಳುಗುತ್ತ ಬರುತ್ತಿರುವುದು ಕಂಡಿತು. ಜೊತೆಯಲ್ಲಿದ್ದ ರಮಾನಂದರ ಹೆಂಡತಿ ಭುಜ ನೀಡಿದ್ದರು.  ‘ಕಳೆದೊಂದು ತಿಂಗಳಿಂದ ನಡಿಗೆ ಸಂಪೂರ್ಣವಾಗಿ ನಿಂತುಹೋಗಿತ್ತು, ನೀವು ಬಂದಿದ್ದೇ ಚುರುಕಾಗಿದ್ದಾರೆ’ ಎಂದ ರಮಾನಂದರ ಹೆಂಡತಿ ಅವರನ್ನು ನನ್ನ ಬಳಿ ಕುಳ್ಳಿರಿಸಿ ರಮಾನಂದರ ಸನ್ನೆಯ ಮೇರೆಗೆ ಮನೆಯೊಳಕ್ಕೆ ಹೊರಟಹೋದರು. ನನ್ನ ಪಕ್ಕ ಚಡ್ಡಿ ಮತ್ತು ಬನಿಯನ್‍ನಲ್ಲಿ ಕುಳಿತಿದ್ದ ಕೃಶ ದೇಹದ ಮುಖ ಬಾಗಿ ನೆಲವನ್ನೇ ನೋಡುತ್ತಿತ್ತು.  ಉಸಿರಾಡಲು ಕಷ್ಟ ಪಡುತ್ತಿತ್ತು.  ನನ್ನ ತೊಡೆಯ ಮೇಲೆ ಕೈ ಹಾಕಿ ‘ಲಕ್ಷ್ಮಿಕಾಂತ...’ ಎಂದರು. ‘ಲಕ್ಷ್ಮಿಕಾಂತ! ಅವನ ವಿಚಾರ ಮರೆಯಿರಿ, ಆತ ಹೋಗಿ ಎಷ್ಟೋ ವರ್ಷ ಆಯಿತಲ್ಲ, ಕೊನೆಗಳಿಗೆಯಲ್ಲಿ ನನಗೊಂದು ಮಾತು ಹೇಳಿದ್ದರೆ ಆತನನ್ನು ಉಳಿಸಿಕೊಳ್ಳಬಹುದಿತ್ತು, ಆದರೆ...’ - ನಾನಂದೆ. ‘ಆತನನ್ನು ನನ್ನ ಮಗನೆಂದೇ ಭಾವಿಸಿದ್ದೆ. ಪ್ರತಿರಾತ್ರಿ ಹೆಂಡತಿಯ ಬಳಿ ಆತನ ಬಗ್ಗೆ ಮಾತನಾಡುತ್ತಿದ್ದೆ. ಆದರೆ ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್’ ಎಂಬ ಮಾತನ್ನುದ್ಗರಿಸಿದರು. ಎಲ್ಲೋ ಒಂದು ಕಡೆ ನನಗೆ ಇನ್ನಿಲ್ಲದ ಕೋಪ ಬಂದರೂ ಸಾವಧಾನಿಸಿಕೊಂಡು ‘ಇರಲಿ, ಸ್ವಲ್ಪ ನಿದ್ದೆ ಮಾಡಿ, ಮುಂಜಾನೆಗೆ ಮಾತನಾಡೋಣ’ ಎಂದು ಅವರನ್ನು ಅವರ ಕೋಣೆಗೆ ಬಿಟ್ಟು ಬಂದೆ. ಅವರನ್ನು ಅವರ ಕೋಣೆಯಲ್ಲಿ ಮಲಗಿಸುವಾಗ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಏನನ್ನೋ ಹೇಳಲು ಮುಂದಾದರು. ಮುಂಜಾನೆಯವರೆವಿಗೂ ಬದುಕುವ ಖಾತರಿ ಅವರಲ್ಲಿರಲಿಲ್ಲ.  ಮೆತ್ತಗೆ ಕೈ ಬಿಡಿಸಿಕೊಂಡು ‘ಟೈಮಾಗಿದೆ, ಮೊದಲು ಮಲಗಿ’ ಎಂದು ಹೇಳಿ ಅವರ ನಿರ್ಭಾವುಕ ಮುಖವನ್ನೇ ನೋಡಿಕೊಂಡು ಹೊರ ನಡೆದೆ.

ನಿಮಗೆ ಮತ್ತೊಂದು ಕಥೆ ಹೇಳುತ್ತೇನೆ ಕೇಳಿ.  ಈ ಕಥೆ ಹೇಳಲು ಅವರು ಹೇಳಿದ ‘ಸರ್ವೈವಲ್ ಆಫ್ ದ ಫಿಟ್ಟೆಸ್ಟ್’ ಅಂದರೆ ‘ಉಳಿವಿಗಾಗಿ ಹೋರಾಟ’ ಎಂಬ ಮಾತೇ ಕಾರಣವಾಗಿತ್ತು.  ನಾಗರಿಕತೆಯ ಗದ್ದಲವಿಲ್ಲದ, ಕೇವಲ ಪ್ರಕೃತಿಯ ಶಬ್ದವಿರುವ ಇಂತಹ ಸ್ಥಳಗಳಲ್ಲಿ ಕಥೆಯೊಳಗೆ ಕಥೆ ಹುಟ್ಟಿಕೊಳ್ಳುವುದು ಅನಾದಿಕಾಲದ ಅಳಿಸಲಾಗದೊಂದು ಪ್ರಾಕೃತಿಕ ಸತ್ಯ.  ಈ ಕಥೆ ನಿಜವಾಗಿಯೂ ನಡೆದದ್ದು.  ನಮ್ಮ ಲಕ್ಷ್ಮಿಕಾಂತನಿಗೆ ಸಂಬಂಧಪಟ್ಟದ್ದು. ಆತ ಈಗ ಇಲ್ಲ. ಐದು ವರ್ಷಗಳೀಚೆ ನೇಣುವಿಗೆ ಕತ್ತು ಕೊಟ್ಟು ತೀರಿಹೋದವನು. ಸಾಯುವಾಗ ಆತ ಬರೆದಿಟ್ಟಿದ್ದ ಒಂದು ಒಕ್ಕಣೆ ಹೀಗಿತ್ತು - ‘‘ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್’ ಎಂಬ ಯುದ್ಧದಲ್ಲಿ ನಾ ಸೋತೆ, ನನ್ನ ಈ ಸಾವಿನಿಂದ ವೈಯಕ್ತಿಕವಾಗಿ ಯಾರಿಗೂ ನಷ್ಟವಿಲ್ಲ, ಯಾಕೆಂದರೆ ಏಕಾಂಗಿಯಾಗಿ ಬೆಳೆದ ನಾನು ನನ್ನ ಸಾವನ್ನೂ ಏಕಾಂಗಿಗೊಳಿಸಿದ್ದೇನೆ.  ನನ್ನನ್ನು ನಂಬಿಕೊಂಡವರು ಅಥವಾ ಹಚ್ಚಿಕೊಂಡವರು ಯಾರೂ ಇಲ್ಲದ ಕಾರಣ ಈ ಸಾವು ಏಕಾಂಗಿಯಲ್ಲದೇ ಮತ್ತೇನು? ಆದರೆ, ನನ್ನನ್ನು ಕಂಡ, ಅಭ್ಯಸಿಸಿದ ಎಷ್ಟೋ ವ್ಯಕ್ತಿಗಳು, ನನ್ನ ವಿದ್ಯಾರ್ಥಿಗಳು ಈ ಪ್ರಪಂಚಕ್ಕೆ ನಿಮ್ಮಿಂದ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಭಾವಿಸಿದ್ದು ಮಾತ್ರ ಯಾಕೋ ಹುಸಿಯಾಗಿಹೋಗಿತ್ತು. ಸತ್ಯವಾಗಬೇಕಿದ್ದ ವಿಚಾರವೊಂದು ಹಠಾತ್ತನೆ ಭ್ರಮೆಯಾದದ್ದು ಮಾತ್ರ ನನ್ನ ಸಾವನ್ನೂ ಮೀರಿಸುವ ನೋವು. ನನ್ನ ಬಳಿ ಇದ್ದ ಆ ಯಾವತ್ತೂ ಸಾಮಥ್ರ್ಯಗಳು ನನ್ನ ಸಾವಿನ ಘಳಿಗೆಯಲ್ಲಿ ಕ್ಷೀಣಿಸಿಹೋದವು, ಸಾವು ಮನಸ್ಸನ್ನು ಸೋಲಿಸಿ ದೇಹವನ್ನು ಗೆದ್ದುಕೊಳ್ಳುತ್ತದೆ. ಎಲ್ಲರ ಬಳಿ ಕ್ಷಮೆ ಕೋರುತ್ತೇನೆ. ನನ್ನನ್ನು ಯಾರೂ ಹೇಡಿಗಳೆಂದು ಕರೆಯಬೇಡಿ, ಈ ಭೂಮಿ ಮೇಲೆ ನನ್ನ ಗುರುತನ್ನು ಸಂಪೂರ್ಣವಾಗಿ ಅಳಿಸಲು ಹೊರಟಿರುವ, ಇಲ್ಲಿಗೆ ನೀ ಮುಗಿದೆ ಎಂದು ನನ್ನನ್ನು ಯಾವುದೋ ಸುಪ್ತ ಭಾವನೆಯೊಂದು ಎಚ್ಚರಿಸುತ್ತಿದ್ದರೂ ಸಾವಿನ ಮನೆಯನ್ನು ನಾನು ತಟ್ಟುತ್ತಿದ್ದೇನೆ ಎಂದರೆ ನಾ ನಿಜಕ್ಕೂ ಧೈರ್ಯಶಾಲಿ, ನನ್ನ ಸಾವಿಗೆ ನಾನೇ ಕಾರಣ’.

‘ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ ಯುದ್ಧದಲ್ಲಿ ನಾ ಸೋತೆ’ ಎಂಬ ಮಾತು ಡಾರ್ವಿನ್ ಥಿಯರಿಗೆ ಹೋಲಿಕೆಗೊಂಡು, ಈ ಜೀವನದಲ್ಲಿ ಆತನಿಗೆ ಜಿಗುಪ್ಸೆ ಉಂಟಾಯಿತು, ಈತ ಸೋತ, ಜೀವನ ಗೆದ್ದುಕೊಂಡಿತು ಎಂಬ ಕಲ್ಪನೆ ಅಥವಾ ಅಲ್ಲಲ್ಲಿ ಹರಿಬಿಟ್ಟ ಮಾತುಗಳೊಂದಿಗೆ ಆ ಪ್ರಕರಣ ಪೋಲೀಸ್ ಮೆಟ್ಟಿಲು ಹತ್ತಲಿಲ್ಲ. ನಿಜಕ್ಕೂ ಆ ಸಾವು ಏಕಾಂಗಿಯಾಯಿತು. ಅಂದು ಅದೇ ಸಾವಿಗೆ ಇದೇ ರಮಾನಂದರು ಬಂದು ಒಳಗೊಳಗೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಒಂದು ಗಟ್ಟಿ ಧಡೂತಿ ದೇಹವೂ ಈ ಪರಿಯಾಗಿ ಅಳುತ್ತಿರುವುದು ನನಗೆ ಸೋಜಿಗವೆನಿಸಿತ್ತು(ನಾಟಕೀಯವಾಗಿದ್ದರೂ ಇದ್ದಿತೇನೋ). ಒಂದಷ್ಟು ನಿಗೂಢಗಳು ಅಲ್ಲಲ್ಲಿ ಇಣುಕಿದರೂ ಪುಷ್ಠೀಕರಿಸುವ ಅಥವಾ ಪುಷ್ಠೀಕರಿಸಲಾಗದ ಸಾಕ್ಷಿಗಳು ಅಲ್ಲಿರಲಿಲ್ಲ.  ಗೆಳೆಯ ಲಕ್ಷ್ಮಿಕಾಂತ ಇದೇ ರಮಾನಂದ ಪ್ರಾಂಶುಪಾಲನಾಗಿದ್ದ ಕಾಲೇಜೊಂದರಲ್ಲಿ ಅಧ್ಯಾಪಕನಾಗಿ ಸೇರಿಕೊಂಡವನು. ಚಿಗುರು ಮೀಸೆಯ ಹುಡುಗ, ಮುಖದಲ್ಲಿ ಬೆಳಕನ್ನು ಹೊರಸೂಸುವ ಕಾಂತಿ ತುಂಬಿಕೊಂಡಿದ್ದವನ ತುಟಿಗಳು ಎಲ್ಲಾ ಘಳಿಗೆಯಲ್ಲೂ ನಗುವಿನ ದಾರಕ್ಕೆ ನೇತುಕೊಳ್ಳುತ್ತಿದ್ದವು. ಕಡಿಮೆ ವಯಸ್ಸಿಗೆ ಅಪಾರ ಬುದ್ಧಿಮತ್ತೆ ಉಳ್ಳವನಾಗಿದ್ದ. ಆತ ಅಧ್ಯಾಪನಾಗಿ ಬಂದ ಮೇಲೆ ಅವನನ್ನು ಕಂಡವರು ಆತನ ಬುದ್ಧಿವಂತಿಕೆಗೆ ಸರಿಸಮರೇ ಇಲ್ಲವೆಂಬಂತೆ ತೊಡೆ ತಟ್ಟಿ ಹೇಳುತ್ತಿದ್ದರೆ, ಅವನನ್ನು ಬಾಲ್ಯದಿಂದಲೂ ಬಲ್ಲ ನನಗೆ ಅವನು ನನ್ನ ಮುಷ್ಠಿಯಲ್ಲಿ ಹಿಡಿಯಲಾಗದ ಅಪರಿಮಿತ. ಆತನಿಗೆ ಈ ಪ್ರಪಂಚದ ನಿಗೂಢಗಳನ್ನು, ಸೂಕ್ಷ್ಮಗಳನ್ನು, ಒಂದು ಸಿದ್ಧಾಂತದ ಉಗಮ, ಕಾರಣ ಮತ್ತು ಅಲ್ಲಿರುವ ಶಿಸ್ತು, ಬೆಳವಣಿಗೆಗಳನ್ನು ನಿರಾಯಾಸವಾಗಿ ಗ್ರಹಿಸಿಕೊಳ್ಳುವ ಶಕ್ತಿಯಿತ್ತು. ಅವನು ನಡೆವಾಗ ಕಾಲುಗಳಷ್ಟೇ ನೆಲದ ಮೇಲಿರುತ್ತಿತ್ತು. ಮನಸ್ಸು, ಆಲೋಚನೆಗಳು ಸುತ್ತಲ ಚಿತ್ರಣವನ್ನು, ವೈಚಿತ್ರಗಳನ್ನು, ಸಮತೋಲನಗಳನ್ನು ಒಳಗೊಳಗೆ ತುಂಬಿಕೊಂಡು ಗ್ರಹಿಕೆ ದಟ್ಟವಾಗುತ್ತಿತ್ತು.

ನಾನೋ ಆತನ ವಿಶೇಷ ಆಲೋಚನೆಗಳನ್ನು ತಿಳಿದುಕೊಳ್ಳಲೆಂದೇ ಕೆಲವು ಅಸ್ವಾಭಾವಿಕ ಪ್ರಶ್ನೆಗಳನ್ನು ಹುಟ್ಟುಹಾಕಿ ಅವನನ್ನು ಚಿಂತನೆಗೀಡುಮಾಡತ್ತಿದ್ದೆ.

‘ದೇವರು ಎಲ್ಲವನ್ನೂ ಹುಟ್ಟುಹಾಕಿದ್ದಾನೆ ಎಂದು ಅನೇಕರು ಸಾರುತ್ತಾರೆ, ಆದರೆ ಮನುಷ್ಯ ಮಾಡಿದ್ದು ದೇವರ ಶಕ್ತಿಯಿಂದ ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ?’ ಎಂದು ಒಮ್ಮೆ ಅವನನ್ನು ಕೇಳಿದ್ದೆ. ‘ಶಕ್ತಿಯಿಂದ ಏನೂ ಸಾಧ್ಯವಿಲ್ಲ, ಯುಕ್ತಿಯಿಂದ ಸಾಧನೆಯ ಹೊಸ್ತಿಲಿಗೆ ನಿಲ್ಲಬಹುದು. ಸಾಧನೆಯ ಹೊಸ್ತಿಲಿಗೆ ನಿಲ್ಲಬಹುದು ಅಂದೆ ಅಷ್ಟೇ, ಆದರೆ ಸಾಧನೆಯೊಳಗೆ ನಡೆವ ಘಟನೆಗಳ ಪ್ರೇರಣೆಗಳಿಗೆ ನಾವೂ ಕಾರಣರಲ್ಲ, ನಾವು ಕಲ್ಪಿಸಿದ್ದಷ್ಟೇ, ನಡೆವುದು ಮೊದಲಿನಿಂದಲೂ ನಡೆಯುತ್ತಿದೆ’ - ಹೀಗೆ ಹೇಳಿ ನನ್ನನ್ನು ತೀವ್ರಾಲೋಚನೆಗೆ ಒಡ್ಡಿದ್ದ. ‘ಒಂದು ತ್ರಿಭುಜಕ್ಕೆ ಮೂರು ಸಾಲುಗಳು ಬೇಕು, ಮೂರು ಸಾಲುಗಳನ್ನು ಕೂಡಿಸಿ ತ್ರಿಭುಜ ಮಾಡಿದ್ದು ಸಾಧನೆಯಾದರೆ, ಆ ತ್ರಿಭುಜದೊಳಗೆ ನಡೆವ ಎಷ್ಟೋ ಸಾರ್ವತ್ರಿಕ ವಿಚಾರಗಳರಿವು ನಮಗಿರುವುದೇ ಇಲ್ಲ, ಅಂದರೆ ಅವೆಲ್ಲಾ ಮೊದಲೇ ಉದ್ಭವಿಸಿದ್ದವು. ಮೂರು ಸಾಲನ್ನು ಒಟ್ಟಿಗೆ ಸೇರಿಸಿ ತ್ರಿಭುಜ ಎಂದು ಕರೆದದ್ದು ನಮ್ಮ ಸಾಧನೆಯಾದರೆ, ಅದೇ ತ್ರಿಭುಜದಿಂದ ಮೂಡುವ ಬೇರೆ ಬೇರೆ ಪ್ರಮೇಯಗಳು ಮೊದಲೇ ಸುಪ್ತವಾಗಿ ಅಡಗಿದ್ದವು. ತ್ರಿಭುಜಕ್ಕೆ ಸಂಬಂಧಪಟ್ಟ ಯಾವುದೇ ಮೂರು ರೇಖೆಗಳು ಏಕೀಭವಿಸುತ್ತವೆ. ಯಾವುದಾವುದೋ ಕೋನದಿಂದ ಮೂಡಲ್ಪಡುವ ರೇಖೆಗಳು ಎಲ್ಲೆಲ್ಲೋ ಹರಿದು ಸಾಗದೇ ಏಕೀಭವಿಸುವುದೆಂದರೆ ಸಾಮಾನ್ಯವೇ?, ನಾವು ಕಂಡು ಹಿಡಿದೆವು ಎಂದು ಬೀಗಿದ ತ್ರಿಭುಜದೊಳಗೆ ನಡೆವ ಈ ಗತಿಗಳು ಮೊದಲಿನಿಂದಲೂ ನಡೆದುಕೊಂಡೇ ಬಂದಿತ್ತು.  ಮಾವಿನ ಮರದ ಕೆಳಗೆ ಹಣ್ಣುಗಳು ಮೊದಲೇ ಉದುರಿಬಿದ್ದಿವೆ. ನಾವದನ್ನು ಹುಡುಕಿ ಹೆಕ್ಕಬಹುದು, ಆದರೆ ಆ ಹಣ್ಣಿನೊಳಗೆ ಮೊದಲೇ ಬೀಜವನ್ನಿಡಲಾಗಿದೆ’ – ಈ ರೀತಿ ಮಾತನಾಡಿ ವಿಚಾರಗಳನ್ನು ಸಾರ್ವತ್ರಿಕಗೊಳಿಸುವುದಲ್ಲದೇ ಆ ವಿಚಾರದೊಳಗೆ ಸುಪ್ತವಾಗಿ ಅಡಗಿರುವ ಕೇವಲ ತೀವ್ರಾಲೋಚನೆಗಷ್ಟೇ ನಿಲುಕುವ ವಿಚಾರಗಳನ್ನು ಬಾಳೆಹಣ್ಣಿನಿಂದ ಸಿಪ್ಪೆಯನ್ನು ಬಿಡಿಸಿದಷ್ಟು ಸುಲುಭವಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸುತ್ತಿದ್ದ.  ಯಾವುದೇ ವಿಚಾರವಿದ್ದರೂ ಅದನ್ನು ಯಾಂತ್ರಿಕವಾಗಿ ಮುಂದಿನವರಿಗೆ ಮುಟ್ಟಿಸುವುದು ಅವನಿಗೆ ಒಗ್ಗಿರಲಿಲ್ಲ.  ಆತ ಬಿಡಿಸುತ್ತಿದ್ದ ಸೂತ್ರಗಳಲ್ಲಿ, ಥಿಯರಿಗಳಲ್ಲಿ ಸೂಕ್ಷ್ಮಗ್ರಹಿಕೆಗಳಿರುತ್ತಿತ್ತು! ಆ ವಿಚಾರಗಳನ್ನು ಮೊದಲಿಗೆ ಮಂಡಿಸಿದವನಿಗೂ ಆ ಸೂಕ್ಷ್ಮಗಳರಿವಿರಲಿಲ್ಲವೇನೋ!

ತನ್ನ ಭೋದನಾವಿಷಯದ ಮಟ್ಟಿಗೆ ಲಕ್ಷ್ಮಿಕಾಂತನನ್ನು ಮಟ್ಟಹಾಕುವ ಮತ್ತೊಂದು ಜೀವ ಈ ಪ್ರಪಂಚದಲ್ಲೇ ಇಲ್ಲ ಎಂಬ ಮಾತು ಬಾಯಿಯಿಂದ ಬಾಯಿಗೆ, ಹಳ್ಳಿಯಿಂದ ಹಳ್ಳಿಗೆ, ತಾಲ್ಲೂಕು ಜಿಲ್ಲೆಗಳಿಗೆ ಹಬ್ಬಿತ್ತು. ರಮಾನಂದರಿಗೆ ಲಕ್ಷ್ಮಿಕಾಂತನ ಪರಿಚಯ ಈ ಮೊದಲೇನಿರಲಿಲ್ಲ. ಹೀಗೇ, ಸ್ವಾಭಾವಿಕವಾಗಿ ಕೆಲಸ ಕೇಳಿಕೊಂಡು ಬಂದಾತ. ಸ್ವಾಭಾವಿಕವಾಗಿಯೇ ಆತನಿಗೆ ಕೆಲಸ ದಕ್ಕಿತು.  ಕೆಲವೇ ದಿನಗಳಲ್ಲಿ ಲಕ್ಷ್ಮಿಕಾಂತ್ ಬಾಯಿ ಮಾತಾದದ್ದು, ರಮಾನಂದನ ‘ಸೃಷ್ಟಿ’ ಕಾಲೇಜನ್ನು ಎಲ್ಲರೂ ಹುಡುಕಿಕೊಂಡು ಬಂದದ್ದು, ಕಾಲೇಜಿನ ನಿರ್ವಾಹಕರ ದುಡ್ಡಿನ ಜೋಳಿಗೆ ತುಂಬಿ ತುಳುಕಿದ್ದು, ಕೇವಲ ನಾಲ್ಕು ಸಾವಿರ ಸಂಬಳಕ್ಕೆ ಬಂದ ಲಕ್ಷ್ಮಿಕಾಂತ್ ಕೆಲವೇ ತಿಂಗಳುಗಳಲ್ಲಿ ಮೂವ್ವತ್ತು ಸಾವಿರ ದಾಟಿದ್ದು ಈಗ ಇತಿಹಾಸ.

ಹಣ ಮತ್ತು ವಿದ್ಯಾರ್ಥಿಗಳಿಂದ ತುಂಬಿ ತುಳುಕಿದ್ದ ಸೃಷ್ಟಿ ಕಾಲೇಜಿನ ಬುಡ ಅಲುಗಾಡುವ ಕಾಲವೂ ಬಂದುಬಿಟ್ಟಿತ್ತು.  ಭಾರ ಜಾಸ್ತಿಯಾದಾಗ ಗಟ್ಟಿತನ ದಿನದಿಂದ ದಿನ ಕ್ಷೀಣಿಸುವುದು ಸ್ವಾಭಾವಿಕವಲ್ಲವೇ? ಲಕ್ಷ್ಮಿಕಾಂತನನ್ನು ಎದುರು ಹಾಕಿಕೊಳ್ಳಲಾಗದ ಮತ್ತು ಆತನನ್ನು ಬಿಟ್ಟು ಕಾಲೇಜು ಭಣಗುಟ್ಟಿಸಿಕೊಳ್ಳುವ ಪರಿಸ್ಥಿತಿಯಲ್ಲಿ ರಮಾನಂದರಿರಲಿಲ್ಲ. ಲಕ್ಷ್ಮಿಕಾಂತನನ್ನು ಉಳಿಸಿಕೊಳ್ಳುವ ಇರಾದೆ ಬಾಯಿಮಾತಿನಲ್ಲಿದ್ದರೂ ರಮಾನಂದರ ಆಂತರ್ಯವೇಕೋ ಆತ ಇಲ್ಲಿಂದ ಹೊರಟುಹೋದರೆ ಸಾಕು ಎಂಬಂತಿತ್ತು ಎನಿಸುತ್ತದೆ. ‘ಲಕ್ಷ್ಮಿಕಾಂತನಂತ ವಿಶಿಷ್ಟ ವಿವೇಚನೆ ಉಳ್ಳವರು ಇಂಥಹ ಹಳ್ಳಿಗಳಲ್ಲಿದ್ದರೆ ದೇಶಕ್ಕೇನು ಉಪಯೋಗ’ ಎಂಬಂರ್ಥ ಬರುವ ಮಾತನ್ನು ಅವರು ನನ್ನ ಮೊದಲ ಭೇಟಿಯಲ್ಲಿ ತಿಳಿಸಿದ್ದರು.

ಅಷ್ಟಕ್ಕೆ ರಮಾನಂದರು ಮೆಟ್ಟಿಲಿಳಿದು ಕೆಳಕ್ಕೆ ಬಂದರು.  ಈಗ ಆಕೆಗೆ ಭುಜವಾಗಿರುವುದು ರಮಾನಂದರ ಹೆಂಡತಿಯಲ್ಲ. ಮತ್ತೊಬ್ಬಳು ಹೆಂಗಸು.  ಹತ್ತಿರ ಬಂದವರೇ ‘ನಾನು ರಮಾನಂದರ ಒಬ್ಬಳೇ ಮಗಳು, ಯಾಕೋ ಅವರು ನಿಮ್ಮನ್ನು ನೋಡಬೇಕಂತೆ, ಅವರಿಗೆ ನಿದ್ದೆ ಹತ್ತುತ್ತಿಲ್ಲ’ ಎಂದರು. ‘ಸರಿ ಕೂರಿಸಿ’ ಎಂದೆ. ಅವರು ಸುಮ್ಮನೆ ಕುಳಿತಿದ್ದರು.  ಎಲ್ಲಾ ದಿಕ್ಕುಗಳಿಂದಲೂ ಒತ್ತರಿಸಿಕೊಂಡು ಬಂದ ಗಾಳಿ ರಮಾನಂದರ ಮನೆಗೆ ಬಡಿಯಿತು. ರಮಾನಂದರು ಮೌನವಾಗಿಯೇ ಕುಳಿತಿದ್ದರು. ಕೊನೆಗೆ ನಾನೇ ‘ಏನ್ ಸಮಾಚಾರ ಹೇಳಿ’ ಎಂದೆ. ‘ಅವಳು ವಿಧವೆ, ಮಕ್ಕಳಿಲ್ಲ, ಹೆಂಡತಿಗೂ ಕ್ಯಾನ್ಸರ್’ ಎಂದರು. ‘ಓಹ್! ಹೌದೆ’ ಎಂದೆ ಅಷ್ಟೇ. ಮತ್ತೇನನ್ನೂ ಮಾತನಾಡಲಿಲ್ಲ. ಬೀಸುತ್ತಿದ್ದ ಗಾಳಿ ಇದ್ದಕ್ಕಿದ್ದಂತೆ ಮರಗಟ್ಟಿತೋ ಏನೋ. ಅಲ್ಲೆಲ್ಲಾ ನಿರ್ವಾತವೊಂದು ತನ್ನಿಂತಾನೇ ಎದ್ದಂತೆ ಭಾಸವಾಯಿತು. ಇದ್ದಕ್ಕಿದ್ದಂತೆ ‘ತೊಟ್ ತೊಟ್’ ಎಂಬ ಹನಿ ಶಬ್ದ ಸ್ವಲ್ಪ ಜೋರಾಗಿಯೇ ಕೇಳಿತು. ಹನಿಮಳೆಯಾಗುತ್ತಿಲ್ಲ, ಆದರೂ ಈ ಹನಿ ಎಲ್ಲಿಂದ ಬರುತ್ತಿದೆ ಎಂದು ಅದರ ಜಾಡನ್ನು ಹುಡುಕಲು ಹೋದಾಗ ಅದು ರಮಾನಂದರ ಕಣ್ಣೀರಿನಿಂದ ಧುಮ್ಮಿಕ್ಕುತ್ತಿತ್ತು. ನಾನವರ ಕೈಯನ್ನು ಹಿಡಿದುಕೊಂಡೆ. ಯಾವುದೋ ಆಲೋಚನೆಯಲ್ಲಿದ್ದವರು ಕೂಡಲೇ ಬೆಚ್ಚಿದರು. ಅವರ ಮೈ ಇನ್ನಿಲ್ಲದಂತೆ ಸುಡುತ್ತಿತ್ತು. ‘ಮಾತ್ರೆ ತೆಗೆದುಕೊಂಡಿರಾ?’ ಎಂಬ ಪ್ರಶ್ನೆಗೆ ಅಷ್ಟಕ್ಕೇ ಬಂದ ರಮಾನಂದರ ಮಡದಿಯಿಂದ ಉತ್ತರ ದೊರಕಿತ್ತು.

‘ಅವರಿಗೆ ಯಾವ ರೋಗ ಬಂದಿದೆ ಎಂದು ಪತ್ತೆ ಹಚ್ಚುವಲ್ಲಿ ಎಲ್ಲಾ ವೈದ್ಯರೂ ಸೋತಿದ್ದಾರೆ, ನಮ್ಮ ತಾಲ್ಲೂಕಿಗೆ ಫೇಮಸ್ ಆದ ಚೆನ್ನಪ್ಪನೂ ಏನೂ ತೊಂದರೆ ಕಾಣುತ್ತಿಲ್ಲವೆಂದುಬಿಟ್ಟ, ಕೊರಗಿ ಕೊರಗಿ ದಿನದಿಂದ ದಿನಕ್ಕೆ ತೂಕದಲ್ಲಿ ಇಳುಗುತ್ತಿದ್ದಾರೆ, ದಿನಗಳನ್ನು ಎಣಿಸುತ್ತಿದ್ದಾರೆ’ ಎಂದರು. ಸ್ವಲ್ಪ ಕೋಪ ಹೆಚ್ಚಾದವರಂತೆ ಕಂಡ ರಮಾನಂದರು ಹೆಂಡತಿಯನ್ನು ಅಲ್ಲಿಂದ ತೊಲಗುವುಂತೆ ಬೆರಳು ಮಾಡಿ ಮೂರು ಬಾರಿ ಕೈಯಾಡಿಸಿದರು.

ಕೂಡಲೇ ನನ್ನ ಕೈಯನ್ನು ಹಿಡಿದುಕೊಂಡ ರಮಾನಂದರಿಗೆ ಹೆಚ್ಚೆಂದರೆ ಐವತ್ತೈದು ವರ್ಷವಾಗಿರಬಹುದು.  ಆದರೂ ಕೈ ಚರ್ಮ ಸುಕ್ಕುಗಟ್ಟಿ ತೊಂಬತ್ತು ದಾಟಿದ ಮುದುಕನಂತೆ ಕಾಣುತ್ತಿದ್ದರು. ಅವರು ಕೇಳಿದ ಪ್ರಶ್ನೆ ನನ್ನನ್ನು ಕೂಡಲೇ ಬೆಚ್ಚಿಸಿತು. ‘ಲಕ್ಷ್ಮಿಕಾಂತ ಇನ್ನೂ ಸತ್ತಿಲ್ಲ ಅಲ್ಲವೇ?’ ಎಂದುಬಿಟ್ಟರು. ಇವರಿಗೆ ಮತಿಭ್ರಮಣೆಯಾಗಿರಬಹುದೇನೋ ಎಂದೆನಿಸಿತು. ‘ಇಲ್ಲ ಸಾರ್, ಮರೆತುಬಿಟ್ಟಿರ, ನೀವೆ ಹೆಣ ನೋಡಿಕೊಂಡು ಎದೆಯ ಮೇಲೆ ಹೂವಿನ ಹಾರವೊಂದನ್ನು ಇಟ್ಟು ಬಂದದ್ದು. ‘ಇಲ್ಲ ನೀವೆಲ್ಲ ಸುಳ್ಳು ಹೇಳುತ್ತಿದ್ದೀರಿ, ಆತ ಇನ್ನೂ ಬದುಕಿದ್ದಾನೆ, ಆತನನ್ನು ಈ ಪ್ರಪಂಚವೇ ಕೊಂಡಾಡುತ್ತಿದೆ, ನಾನು ನೋಡಿದ್ದೇನೆ, ನೀವೆಲ್ಲಾ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದೀರಿ, ಸತ್ಯ ಹೇಳು, ಸತ್ಯ ಏನೆಂದು ಗೊತ್ತಾಗ್ಲೇಬೇಕು’ ಎಂದು ಕುತ್ತಿಗೆಯ ಪಟ್ಟಿ ಹಿಡಿದುಕೊಂಡರು.  ಅಷ್ಟಕ್ಕೆ ಅವರ ಹೆಂಡತಿ ಮಗಳು ಬಂದು ಬಿಡಿಸಿ ರಮಾನಂದರನ್ನು ಕೋಣೆಗೆ ಎಳೆದುಕೊಂಡು ಹೋದರು. ನನಗೆ ಇದೆಲ್ಲಾ ಒಗಟಾಗಿ ಕಂಡಿತ್ತು. ಲಕ್ಷ್ಮಿಕಾಂತನನ್ನು ಮಣ್ಣು ಮಾಡುವ ಘಳಿಗೆಯಲ್ಲಿ ರಮಾನಂದರು ಇದ್ದರೋ ಇಲ್ಲವೋ ಅರಿಯೆ. ನಾನಂತೂ ಇದ್ದೆ. ಒಂದು ಹಿಡಿ ಮಣ್ಣನ್ನು ಗೆಳೆಯನೆದೆ ಮೇಲೆ ಉದುರಿಸಿದ್ದೆ.

ಇರಲಿ, ನಾನು ನಿಮಗೆ ಲಕ್ಷ್ಮಿಕಾಂತನ ಕಥೆ ಹೇಳುತ್ತಿದ್ದೆ ಅಲ್ಲವೇ? ‘ಸೃಷ್ಟಿ’ ಕಾಲೇಜಿನ ಬುಡ ಅಲುಗಾಡುವ ಸ್ಥಿತಿಗೆ ಬಂದದ್ದು ಲಕ್ಷ್ಮಿಕಾಂತ ತನ್ನ ಹುದ್ದೆಗೆ ರಾಜೀನಾಮೆ ಕೊಡಲು ಮುಂದಾದಾಗ. ಏಕ್‍ದಂ ಆತ ರಾಜಿನಾಮೆಗೆ ಮುಂದಾದವನಲ್ಲ. ಒಂದು ವೃತ್ತದೊಳಗಿನ ನಿಯಮಗಳಿಗೆ ಹೊಂದಿಕೊಂಡೇ ನಾವೆಲ್ಲಾ ದುಡಿಯುತ್ತೇವೆ, ಆದರೆ, ಅದೇ ವೃತ್ತದೊಳಗೆ ಕಿರುಕುಳ ಹೆಚ್ಚಾದಾಗ ನಮ್ಮಾಂತರ್ಯದೊಳಗಿನ ಸ್ವಾಭಿಮಾನ ಪುಟಿದೆದ್ದು ನಿಯಮವನ್ನು ಮುರಿದುಬಿಡುತ್ತದೆ.  ಹಾಗೆಯೇ, ಲಕ್ಷ್ಮಿಕಾಂತ ತನ್ನ ಮತ್ತಿಬ್ಬರು ಗೆಳೆಯರನ್ನು ಕೂಡಿಸಿಕೊಂಡು ತನ್ನದೇ ಒಂದು ತರಭೇತಿ ಸಂಸ್ಥೆಯನ್ನು ಶುಭಾರಂಭಿಸಿದ್ದ. ಆಡಳಿತ ಮಂಡಳಿ ಪ್ರಾರಂಭದಲ್ಲಿ ಮೌನವಾಗಿಯೇ ಇತ್ತು. ತದ ನಂತರ, ಯಾರೋ ಅವರೆಲ್ಲರ ಕಿವಿಗೆ - ಮುಂದೆ ಲಕ್ಷ್ಮಿಕಾಂತ ಇಲ್ಲಿಯೇ ಕಾಲೇಜೊಂದನ್ನು ತೆರೆದು ನಮಗೆ ಸಡ್ಡು ಹೊಡೆಯುವ ಆಲೋಚನೆಯಲ್ಲಿದ್ದಾನೆ ಎಂಬ ಸುಳ್ಳು ಹೇಳಿ, ಒಂದಷ್ಟು ಸಂಭವನಿಯತೆಗಳನ್ನು ತುರುಕಿದರು. ಲಕ್ಷ್ಮಿಕಾಂತನನ್ನು ಕಳೆದುಕೊಳ್ಳಲು ಇಚ್ಚಿಸದ ಆಡಳಿತ ಮಂಡಳಿ ಪರೋಕ್ಷವಾಗಿ ಆತನನ್ನು ಎಚ್ಚರಿಸುವ ಉದ್ದೇಶದಿಂದ ‘ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹೊರಗೆಲ್ಲೋ ಕೆಲಸ ಮಾಡಕೂಡದು’ ಎಂಬ ಕಠಿಣ ಎಚ್ಚರಿಕೆಯನ್ನು ಕೊಟ್ಟುದಲ್ಲದೇ ಉಳಿದ ಚಿಲ್ಲರೆ ಸಿಬ್ಬಂದಿ ಹೊರಗೆ ಕೆಲಸ ನಿರ್ವಹಿಸಲು ಪ್ರಾರಂಭಿಸಿದರೂ ಇದೇ ನಿರ್ವಾಹಕ ಮಂಡಳಿ ಜಾಣ ಮೌನ ವಹಿಸಿತ್ತು. ಆ ಸಮಯದಲ್ಲಿ ಈ ಪ್ರಪಂಚದಲ್ಲಿ ಕೋಟ್ಯಾನುಕೋಟಿ ಜನ ಮಾಡುವ ಕೆಲಸವನ್ನೇ ಲಕ್ಷ್ಮಿಕಾಂತ ಮಾಡಿದ್ದ. ಅದೂ ದುಡಿಮೆ, ಇದೂ ದುಡಿಮೆ. ಇದೆಲ್ಲದರಿಂದ ವಿಚಲಿತನಾದ ಲಕ್ಷ್ಮಿಕಾಂತ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದ, ಸತತ ಪ್ರಯತ್ನಗಳ ನಂತರವೂ ರಾಜೀನಾಮೆಯನ್ನು ಇದೇ ರಮಾನಂದರು ಸ್ವೀಕರಿಸದಿದ್ದಾಗ ಒಂದು ದಿನ ಹೇಳದೇ ಕೇಳದೆ ಅಲ್ಲಿಂದ ಕಾಲುಕಿತ್ತು ಮತ್ತೆಲ್ಲೋ ಕೆಲಸಕ್ಕೆ ಸೇರಿಕೊಂಡ.

ಲಕ್ಷ್ಮಿಕಾಂತ ಅಲ್ಲಿಂದ ಕಾಲು ಕೀಳುವುದನ್ನೇ ಕಾಯುತ್ತಿದ್ದ, ‘ಸೃಷ್ಟಿ’ ಕಾಲೇಜಿನ ಏಳಿಗೆಯನ್ನು ಸಹಿಸದ, ಅನೇಕರ ರೆಕ್ಕೆ ಬಲಿತುಕೊಂಡಿತು. ಹಾರಾಡಿ ಸಿಕ್ಕ ಸಿಕ್ಕಲ್ಲಿ ಚೀರಿದರು. ಸೃಷ್ಟಿ ಕಾಲೇಜಿನ ಬುಡವೇ ಅಲುಗಾಡಿಹೋಯಿತು, ಲಕ್ಷ್ಮಿಕಾಂತನ ಜಾಗವನ್ನು ಯಾರು ತುಂಬಬಲ್ಲರು? ಆತನದೇನೂ ತಪ್ಪಿಲ್ಲ, ಇವರ ಚಿತ್ರಹಿಂಸೆ ತಡೆಯಲಾಗದೇ ಲಕ್ಷ್ಮಿಕಾಂತ್ ರಾತ್ರೋರಾತ್ರಿ ಓಡಿಹೋಗಿದ್ದಾನೆಂಬ ಪುಕಾರುಗಳೆದ್ದವು. ಲಕ್ಷ್ಮಿಕಾಂತನನ್ನು ಬಿಟ್ಟರೆ ಅಲ್ಲಿ ಒಳ್ಳೆಯ ತರಭೇತಿ ಸಿಕ್ಕುವುದು ಇದ್ದದ್ದೇ, ಅದರ ಬದಲು ಸರ್ಕಾರಿ ಶಾಲೆಯೇ ಉತ್ತಮವಾಗಿದೆ, ನಿಮ್ಮ ಮಕ್ಕಳನ್ನು ಮೊದಲು ಅಲ್ಲಿಂದ ಬೇರ್ಪಡಿಸಿ, ಮುಂದೆ ಅಲ್ಲಿಗೆ ಸೇರಿಸಬೇಡಿ ಎಂಬ ಸಲಹೆಗಳು ಪುಕ್ಕಟೆಯಾಗಿ ಸಿಕ್ಕವು.

ಶಾಲೆಯ ಹೊರಗೆ ಒಂದು ಮಾದರಿಯಾದರೆ, ಶಾಲೆಯೊಳಗೂ ದಂಗೆ ಉಂಟಾಯಿತು. ಅಷ್ಟು ದಿನ ಮೌನವಾಗಿದ್ದ ಮಕ್ಕಳು ಕೆರಳಿದವು. ನಮಗೆ ಲಕ್ಷ್ಮಿಕಾಂತ್ ಬೇಕೇಬೇಕು ಎಂದು ಪಟ್ಟು ಹಿಡಿದವು. ಅರಾಜಕತೆ ಎದ್ದು ಕಂಡಿತು. ಆ ಅರಾಜಕತೆ ರಮಾನಂದರ ಮನಸ್ಸಿನೊಳಗೂ ನುಗ್ಗಿತು.  ದಿನದಿಂದ ದಿನಕ್ಕೆ ಶಾಲೆಯನ್ನು ತೊರೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವುದಲ್ಲದೇ, ವಿದ್ಯಾರ್ಥಿ ಸಂಘಟನೆಗಳೂ ಪ್ರಾಂಶುಪಾಲರ ಕೊಠಡಿಯ ಮುಂದೆ ಘೆರಾವ್ ಹೂಡಿದವು. ಲಕ್ಷ್ಮಿಕಾಂತನನ್ನು ಅಷ್ಟು ಸುಲಭವಾಗಿ ಆ ಮಕ್ಕಳ ಮನಸ್ಸಿನಿಂದ ಹೊರ ದೂಡಲು ಸಾಧ್ಯವಾಗಲಿಲ್ಲ. ಈ ವೃತ್ತಿಯಲ್ಲಿ ನಿಪುಣನಾಗಿದ್ದ ರಮಾಕಾಂತನು ಕೆಲವೇ ದಿನಗಳಲ್ಲಿ ಅನೇಕ ಪರಿಣಿತರನ್ನು ತಂದರೂ ಮಕ್ಕಳು ಪೂರ್ವಗ್ರಹಪೀಡಿತರಾದವರಂತೆ ವರ್ತಿಸಿದರು.

‘ಸಾರ್.. ಸಾರ್..’ – ಅಷ್ಟಕ್ಕೇ ರಮಾನಂದರ ಮಗಳು ನನ್ನನ್ನು ಎಚ್ಚರಿಸಿದಳು. ನೋಡಲು ಸುಂದರಿ. ವಯಸ್ಸು ಹೆಚ್ಚೆಂದರೆ ಇಪ್ಪತ್ತೈದಾಗಿರಬಹುದು. ಈ ಘಳಿಗೆಯಲ್ಲಿ ವಿಧವೆಯಾಗುವ ಪರಿಸ್ಥಿತಿಗೆ ಮನ ನೊಂದುಕೊಂಡರೂ ಕೆಲವು ಅಚಾನಕ್ ಸತ್ಯಗಳನ್ನು ಮನುಷ್ಯ ಒಪ್ಪಿಕೊಳ್ಳುವುದನ್ನು ಕಲಿಯಬೇಕು, ಆದುದರಿಂದ ನಾನೂ ಒಪ್ಪಿಕೊಂಡೆ. ಹುಟ್ಟಿದಾಗಿಂದಲೂ ಜೊತೆ ಬೆಳೆದವರನ್ನು ಬಿಟ್ಟು ಹೊಸ ಮನೆಯನ್ನು ತುಳಿಯುವ ಹೆಣ್ಣು ಆ ಮನೆಗೆ ಜಾತ್ರೆಯಿಂದ ತಂದ ಬೊಂಬೆಯಿದ್ದಂತೆ. ಆದರೆ ಈಕೆ, ಮತ್ತೆ ಅದೇ ಮನೆಗೆ ಬಂದು ತಳವೂರಿದ್ದಾಳೆ. ಈ ಬೆಟ್ಟಗಳ ನಡುವೆಯೇ ಆಕೆಯ ವೈಧವ್ಯ. ಈ ರಮಾನಂದರದು ಮೈಸೂರು ಸಿಟಿಯಲ್ಲಿ ಒಂದು ಮನೆಯಿತ್ತಂತೆ. ತಮ್ಮ ಆರೋಗ್ಯದ ಖರ್ಚಿಗೆಂದೇ ಮಾರಿಬಿಟ್ಟಿದ್ದರು. ಆದುದರಿಂದ ಈಕೆಗೆ ಈ ಮನೆಯೇ ಎಲ್ಲಾ.

ನಾನು ಹಲ್ಲುಜ್ಜಿಕೊಂಡು ತಿಂಡಿಮಾಡಿಕೊಂಡು ಹೊರಬರುವಷ್ಟರಲ್ಲಿ ರಮಾನಂದರು ಮನೆಯ ಹೊರಗಿನ ಕಲ್ಲುದಿಣ್ಣೆಯ ಮೇಲೆ ಕುಳಿತಿದ್ದರು. ನನಗೆ ಅತೀವ ಆಶ್ಚರ್ಯವಾಯಿತು. ಅವರ ಮೊಗದಲ್ಲಿ ಸ್ವಲ್ಪ ಲವಲವಿಕೆ ಎದ್ದು ಕಂಡಿತು. ಪಕ್ಕದಲ್ಲೇ ನಿಂತಿದ್ದ ರಮಾನಂದರ ಮಡದಿಯೂ ತಮ್ಮ ಹಲ್ಲನ್ನು ಕಾಣಿಸುತ್ತಿದ್ದರು. ‘ಯಾವ ಮಾತ್ರೆಗೂ ಬಗ್ಗದವರು, ಇಂದು ಅವರೇ ಎದ್ದು ಕೈ ಕಾಲು ಮುಖ ತೊಳೆದು ಬಂದಿದ್ದಾರೆ ನೋಡಿ’ ಎಂದರು.

‘ಹ್ಹ ಹ್ಹ... ನಿಮ್ಮೆಜಮಾನರದು ಮನಸ್ಸಿನ ರೋಗ ಅಮ್ಮ, ಅದು ಕೆಲವೊಮ್ಮೆ ತಾತ್ಕಾಲಿಕವಾಗಿ ಸಂಪೂರ್ಣವಾಗಿ ಗುಣವಾಗಿಬಿಡಬಲ್ಲದು’ – ಎಂದೆ. ಅಷ್ಟಕ್ಕೆ ನನ್ನ ಕೈ ಹಿಡಿದುಕೊಂಡು ಮೇಲಕ್ಕೆದ್ದ ರಮಾನಂದರು ‘ಬನ್ನಿ’ ಎಂದು ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋಗಲು ಆಣಿಯಾದರು. ರಮಾನಂದರ ಹೆಂಡತಿ ಮತ್ತು ಮಗಳ ಖುಷಿ ಇಮ್ಮಡಿಸಿತು. ಜೊತೆಯಾದೆ. ಜೊತೆಗೆ ಒಂದು ಕೆಲಸದಾಳನ್ನೂ ಸೇರಿಸಿಕೊಂಡು ಒಂದು ಕಿಲೋಮೀಟರ್ ನಡೆಸಿದರು. ಉಣ್ಣಿಗಿಡಗಳೇ ಹೆಚ್ಚಾಗಿ ಬೆಳೆದ ದಾರಿಯುದ್ದಕ್ಕೂ ಕೆಲಸದಾಳು ಮಚ್ಚಿನಿಂದ ಸವರಿ ನಮಗೆ ದಾರಿ ಮಾಡಿಕೊಡುತ್ತಿದ್ದ. ಒಂದು ಮರದ ಕೆಳಗೆ ಕರೆತಂದು ಅಲ್ಲಿಯೇ ಹಾಸಿದ್ದ ಚಪ್ಪಡಿ ಕಲ್ಲಮೇಲೆ ಕೂರಿಸಿದರು. ಆಗಾಗ ಬಂದು ತಂಗಲೆಂದೇ ಆ ಜಾಗವನ್ನು ಆಣಿ ಮಾಡಿರುವಂತೆ ಕಂಡಿತು. ಜೊತೆಗೆ ಬಂದಿದ್ದ ಆಳಿನ ಕೈಗೆ ಮೂವ್ವತ್ತು ರುಪಾಯಿ ನೀಡಿ ಮತ್ತೇ ಇಷ್ಟು ಹೊತ್ತಿಗೆ ಬರುವಂತೆ ಸೂಚಿಸಿದರು.

ಸುತ್ತಲಿನ ವಾತಾವರಣ ನೀರವವಾಗಿತ್ತು. ಎಲ್ಲೆಲ್ಲೂ ಮೌನ. ರಮಾನಂದರೂ ಮೌನವಾದರು. ನಾನೇ ಅವರ ಮೌನ ಮುರಿಯಲು ಪ್ರಯತ್ನಿಸಿದೆ. ‘ಸಾರ್, ದಯವಿಟ್ಟು ತಿಳಿಸಿ, ನನ್ನನ್ನು ಬರಹೇಳಿದ ಉದ್ದೇಶವೇನು, ದಯವಿಟ್ಟು ಹಳೆಯದನ್ನು ಕೆದಕಬೇಡಿ, ನನಗೆ ನಿಮ್ಮ ಮೇಲೆ ವಾಕರಿಕೆ ಬರುತ್ತದೆ’ - ನೇರವಾಗಿಯೇ ಹೇಳಿದೆ. ಅವರು ಅಳುತ್ತ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು.

‘ನಿಜ ಹೇಳಿ, ಲಕ್ಷ್ಮಿಕಾಂತ ತೀರಿಕೊಂಡಿಲ್ಲ ಅಲ್ಲವೇ?’ – ಒಂದೇ ಸಮನೆ ಗೋಗರೆದರು.

‘ನೀವೇ ಅಂದು ಅವನ ಹೆಣದ ಮೇಲೆ ಹೂವಿನ ಹಾರ ಹಾಕಿದ್ರಲ್ಲ ಸರ್’ - ನಾನಂದೆ.

‘ನಾನವನ ಮುಖ ನೋಡಲಿಲ್ಲ, ನೋಡುವ ಧೈರ್ಯವಿರಲಿಲ್ಲ’

‘ಕೊನೆಯ ಕ್ಷಣದಲ್ಲಿ ಮಣ್ಣು ಮಾಡುವಾಗ ನೀವಿರಲಿಲ್ಲವೇ?’

‘ಇರಲಿಲ್ಲ, ಅಲ್ಲಿ ನಿಲ್ಲುವ ಶಕ್ತಿಯಿರಲಿಲ್ಲ ಹೊರಟಬಿಟ್ಟಿದ್ದೆ’

‘ಸಾವಿನ ವಿಚಾರದಲ್ಲಿ ಸುಳ್ಳು ಹೇಳುವುದು ಸಾವನ್ನು ಹಾಸ್ಯ ಮಾಡಿದಷ್ಟೇ ವಿಕೃತತನ. ಸತ್ಯವನ್ನೇ ಹೇಳುತ್ತಿದ್ದೇನೆ, ಲಕ್ಷ್ಮಿಕಾಂತ್ ನೇಣು ಬಿಗಿದುಕೊಂಡು ಸತ್ತುಹೋದ, ಕೊನೆಯದಾಗಿ ಆತ ಬರೆದಿಟ್ಟಿದ್ದ ಪತ್ರದ ಝೆರಾಕ್ಸ್ ಪ್ರತಿ ಕೂಡ ಇಲ್ಲಿದೆ, ಓದಿ’ ಎಂದು ಅವರ ಕೈಗೆ ಆ ಪತ್ರವನ್ನು ನೀಡಿದೆ.  ಅದನ್ನು ಓದುತ್ತಿದ್ದಂತೆ ಅವರ ಕೈಕಾಲುಗಳು ಥರ ಥರ ನಡುಗಲು ಪ್ರಾರಂಭಿಸಿದವು, ತುಟಿ ಕಿತ್ತು ಬರುವಂತೆ ಅದುರುತ್ತಿದ್ದವು, ಭಯವೆಲ್ಲಾ ಅವರ ಕಣ್ಣನ್ನು ತುಂಬಿಕೊಂಡಿತು. ತೀವ್ರ ಸುಸ್ತಾದರು.

‘ಸರ್ ಆತ ಸತ್ತು ಐದು ವರ್ಷವಾಗುತ್ತು ಬಂದಿದೆ, ಆತ ಇಂದು ಇದ್ದಿದ್ದರೆ ಪ್ರಪಂಚವೇ ಕೊಂಡಾಡುವ ಮಟ್ಟದಲ್ಲಿರುತ್ತಿದ್ದ, ಆದರೆ ಆತನ ಅವಸಾನ ಅಷ್ಟು ಬೇಗ ಆಗುತ್ತದೆ ಎಂಬುದು ನನಗೂ ಅಚ್ಚರಿಯ ವಿಚಾರ, ಆತನ ಬುದ್ದಿಮತ್ತೆ ಸತ್ತುಹೋದ ಆತನಷ್ಟೇ ಸಮ, ಇನ್ನಾದರೂ ಆತನನ್ನು ಮರೆಯಿರಿ, ನೀವು ನನ್ನನ್ನು ಕರೆಸಿಕೊಂಡ ಕ್ಷಣವೇ ನೀವೊಬ್ಬ ಮಾನಸಿಕ ರೋಗಿಯಾಗಿ ಕೊರಗುತ್ತಿದ್ದೀರಿ ಎಂಬುದು ನನಗೆ ಸ್ಪಷ್ಟ’ ಎನ್ನುತ್ತಿದ್ದಂತೆ ಅವರು ನನ್ನ ತೊಡೆಯನ್ನು ಬಿಗಿಯಾಗಿ ಹಿಡಿದುಕೊಂಡರು ‘ಇಲ್ಲ, ಇಲ್ಲ’ ಎಂದು ನಡುಗುವ ದ್ವನಿಯಲ್ಲಿ ಉದ್ಗರಿಸಿದ್ದರು. ‘ಲಕ್ಷ್ಮಿಕಾಂತ್, ಪ್ರತಿರಾತ್ರಿ ನನ್ನ ಮುಂದೆ ಬಂದು ನನ್ನನ್ನು ಹೆದರಿಸುತ್ತಾನೆ, ಒಮ್ಮೊಮ್ಮೆ ಕೋಟು ಬೂಟು ಧರಿಸಿ ಯಾವುದಾವುದೋ ಪ್ರಶಸ್ತಿಗಳನ್ನು ಗೆದ್ದುಕೊಂಡು ಬಂದಿರುವವನಂತೆ ಕಾಣುತ್ತಾನೆ, ಅವನ ಸುತ್ತ ಕೋಟಿ ಕೋಟಿ ಜನ ಜೈಕಾರ ಕೂಗುತ್ತಿರುತ್ತಾರೆ, ಅವನ ವಿದ್ಯಾರ್ಥಿಗಳು ಅವನ ಬಗ್ಗೆ ಪುಟಗಟ್ಟಲೇ ಬರೆದು ಗ್ರಂಥಗಳನ್ನು ಮಾರುತ್ತಿರುತ್ತಾರೆ, ಅವನ ಒಂದೇ ಒಂದು ತರಗತಿಗೆ ದೇಶ ವಿದೇಶಗಳಿಂದ ಬೇಡಿಕೆಯಿದೆ, ಕೋಟಿ ಕೋಟಿ ಹಣ ಸುರಿಯುತ್ತಿದ್ದಾರೆ, ಲಕ್ಷ್ಮಿಕಾಂತನಿಗೆ ಹಣ ಎಣಿಸುವಷ್ಟೂ ಪುರುಸೋತ್ತಿಲ್ಲ’ ಎನ್ನುತ್ತಿದ್ದಂತೆ ನಾನು ‘ಸರ್, ಲಕ್ಷ್ಮಿಕಾಂತ್ ಸತ್ತಾಗ ಆತನಿಗೆ ಒಂದು ಲಕ್ಷ ಸಾಲವಿತ್ತು, ನಾನೇ ತೀರಿಸಿದೆ ಎಂದೆ’. ರಮಾನಂದರು ಮತ್ತೂ ಸುಸ್ತಾದಂತೆ ಕಂಡುಬಂದರು. ಹಾಗೇ ಕಲ್ಲ ಮೇಲೆ ಒರಗಿ ಮಲಗಿಬಿಟ್ಟರು. ನಾನು ಪಕ್ಕದ ಕಲ್ಲಿನಲ್ಲಿ ಕುಳಿತುಕೊಂಡೆ.

ನನಗಲ್ಲೇನೂ ಪಶ್ಚಾತ್ತಾಪ ಕಾಣಲಿಲ್ಲ.  ನಿಮಗೆ ಲಕ್ಷ್ಮಿಕಾಂತನ ಕಥೆ ಹೇಳುತ್ತಿದ್ದೆ.  ಪ್ರಸಕ್ತ ಯುಗದಲ್ಲಿ ಮನುಷ್ಯನಲ್ಲಿ ಭೌತಿಕ ದಾರಿದ್ರ್ಯವೆನ್ನುವುದು ಮೂಲಭೂತ ಹಕ್ಕಿನಂತೆ ಎದ್ದು ಕಾಣುತ್ತದೆ. ಅಂದು ಲಕ್ಷ್ಮಿಕಾಂತನನ್ನು ಬೆಳೆಯಗೊಡದೇ ಒಂದೇ ಸಮನೇ ಕಟ್ಟಿಹಾಕಲು ಹೊಂಚುಹಾಕಿದ ಈ ಜನಗಳದು ಭೌತಿಕ ದಾರಿದ್ರ್ಯವೇ. ತನಗೆ ತಡೆ ಒಡ್ಡಿದ, ಭವಿಷ್ಯದಲ್ಲಿ ತನ್ನ ರೆಕ್ಕೆಗಳನ್ನು ಮುರಿಯಲು ತಯಾರಿದ್ದ ಇವರ ಜೊತೆ ಅಪ್ರತಿಮ ಬುದ್ಧಿವಂತನಾದ ಆತನೇಕಿರಬೇಕಿತ್ತು ನೀವೇ ಹೇಳಿ. ಒಂದು ಛಲದಿಂದಲೇ ಆ ಸ್ಥಳವನ್ನು ತೊರೆದ. ಹಾಳಾಗುವ ಉದ್ದೇಶದಿಂದ ಯಾರೂ ಯಾವ ಕೆಲಸವನ್ನೂ ಪ್ರಾರಂಭಿಸುವುದಿಲ್ಲ. ಮುಂಜಾನೆ ಎದ್ದೊಡನೆ ಈ ದಿನ ನನಗೆ ಕೆಡುಕಾಗಲಿ ಎಂದು ಯಾರೂ ಬಯಸಿ ಮುಖ ತೊಳೆಯುವುದಿಲ್ಲ. ಆದರೆ, ಲಕ್ಷ್ಮಿಕಾಂತನ ವಿಚಾರದಲ್ಲಿ ಅದು ಹುಸಿಯಾಯಿತು.  ಈ ಪ್ರಪಂಚ ಅವನೆಡೆಗೆ ನಿಲ್ಲಲ್ಲಿಲ್ಲ.

ಅಂದು ಲಕ್ಷ್ಮಿಕಾಂತನ ಬಗೆಗೆ ಇಡೀ ಸಮುದಾಯದಲ್ಲಿ ಎಷ್ಟು ಆಸಕ್ತಿ ಮತ್ತು ಆಸ್ಥೆಯಿತ್ತೆಂದರೆ ಸೃಷ್ಟಿ ವಿದ್ಯಾಸಂಸ್ಥೆ ಇನ್ನೊಂದಷ್ಟು ವರ್ಷಗಳಲ್ಲಿ ಮುಚ್ಚಿಹೋಗುತ್ತಿತ್ತೇನೋ ಅಥವಾ ಇನ್ನಷ್ಟು ವರ್ಷಗಳ ನಂತರ ಮುಂದಿನ ಪೀಳಿಗೆ ಲಕ್ಷ್ಮಿಕಾಂತನನ್ನು ಮರೆತೇಬಿಡುತ್ತಿದ್ದರೇನೋ. ಆದರೆ, ತನ್ನುಳಿವಿಗೋಸ್ಕರ ಇಲ್ಲಿ ಏದುಸಿರು ಬಿಡುತ್ತಿರುವ ರಮಾನಂದ ಇನ್ನಿಲ್ಲದ ಗೊಂದಲ ಗೋಜಲು ತಂದ. ಅದನ್ನು ಆ ದಿನಗಳಲ್ಲಿ ಆತ ಪ್ಲಾನ್ ಎಂದು ಕರೆದ. ಆತ ಹೋದದ್ದಲ್ಲ, ನಾವೇ ತೆಗೆದದ್ದು. ಆತನ ಬಗ್ಗೆ ಸ್ಥಳೀಯ ವೇಶ್ಯೆಯೊಬ್ಬಳಿಂದ ದೂರು ಬಂದಿದೆ, ಜೊತೆಗೆ ವಿದ್ಯಾರ್ಥಿಗಳ ಜೊತೆಗಿನ ಆತನ ನಡವಳಿಕೆಗಳಲ್ಲಿ ಅನುಮಾನವಿದೆ ಎಂಬ ವಿಚಾರವನ್ನು ಹರಿಯಬಿಟ್ಟ.  ಸ್ಥಳೀಯ ರಾಜಕೀಯವನ್ನು ಉಪಯೋಗಿಸಿಕೊಂಡು ಈ ವಿಚಾರ ದಟ್ಟವಾಗುವಂತೆ ಮಾಡಿದ. ವಿದ್ಯಾರ್ಥಿಗಳ ಕಿವಿಗೂ ಏನೇನನ್ನೋ ಊದಿದ. ಕೊನೆಗೆ ಆ ವೇಶ್ಯೆಯಿಂದ ದೂರನ್ನೂ ದಾಖಲಿಸಿಬಿಟ್ಟ. ಈಗ ಹೇಳಿ ವೇಶ್ಯೆಯೊಂದಿಗಿನ ಸಂಬಂಧ ಯಾರಿಗಿತ್ತು? ಈ ವಿಚಾರಗಳು ಮಾಧ್ಯಮಗಳಲ್ಲಿ ಭಿತ್ತರವಾದೊಡನೆ, ಸಮುದಾಯದಲ್ಲಿ ಬೇರೂರಿದ್ದ ಲಕ್ಷ್ಮಿಕಾಂತನ ಮೇಲಿನ ಆಸ್ಥೆ, ಕಾಳಜಿಗಳು ನೆಲಕಚ್ಚಿದವು.  ಅದೇ ಜನ ತಿರುಗಿಬಿದ್ದರು. ಆತನನ್ನು ಬರಿಗೈಯಲ್ಲಿ ಕಳುಹಿಸದೇ ಸರಿಯಾಗಿ ಶಿಕ್ಷಿಸಿ ಕಳುಹಿಸಬೇಕಾಗಿತ್ತೆಂಬ ಚರ್ಚೆ ಶುರುವಾಯಿತು.

ಲಕ್ಷ್ಮಿಕಾಂತನಿಗೆ ಫೋನಿನ ಮೇಲೆ ಫೋನು ಬಂದು ಎಲ್ಲರೂ ಈ ವಿಚಾರವಾಗಿ ಹಿಂಸಿಸತೊಡಗಿದರು.  ರಮಾನಂದ ಮತ್ತು ಉಳಿದವರ ಯೋಜನೆ ಹೇಗಿತ್ತೆಂದರೆ ಈ ವಿಚಾರವಾಗಿ ಎಷ್ಟೋ ಕೃತಕ ಸಾಕ್ಷಿಗಳನ್ನು ತಯಾರಿಸಿ ಜನ ನಂಬುವಂತೆ ಮಾಡಿಬಿಟ್ಟಿದ್ದರು.  ಈ ವಿಚಾರ ರಮಾನಂದ ಹೊಸದಾಗಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೂ ತಲುಪವಂತೆ ನೋಡಿಕೊಂಡರು. ಅಲ್ಲೂ ಲಕ್ಷ್ಮಿಕಾಂತನ ಅಮಾನತ್ತಾಯಿತು. ಸೃಷ್ಟಿ ಕಾಲೇಜು ಎಂದಿನಂತೆ ಲಯಕ್ಕೆ ನಿಂತಿತು. ವಿದ್ಯಾರ್ಥಿಗಳು ಲಕ್ಷ್ಮಿಕಾಂತನ ಗುಂಗಿನಿಂದ ಹೊರಬಂದರು. ಆದರೂ, ಗುಣಮಟ್ಟದಲ್ಲಿ ಕಾಲೇಜು ಮೊದಲಿನಂತೆ ನಿಲ್ಲಲ್ಲಿಲ್ಲ. ಅದು ಲಕ್ಷ್ಮಿಕಾಂತನಿಂದ ಮಾತ್ರ ಸಾಧ್ಯ. ಇದನ್ನೆಲ್ಲಾ ಅರಿತಿದ್ದ ರಮಾನಂದ್ ಲಕ್ಷ್ಮಿಕಾಂತನಿಗೆ ಮತ್ತೆ ಕರೆ ಮಾಡಿ ಬರಲು ಕೇಳಿಕೊಂಡಿದ್ದ! ನೀನು ಬರುವುದು ದಿಟವಾದರೆ ಎಲ್ಲಾ ವಿಚಾರವನ್ನು ತಿಳಿಗೊಳಿಸುವುದಾಗಿ ಭರವಸೆ ಕೊಟ್ಟಿದ್ದ.  ಆದರೆ, ಮತ್ತೆ ಅಲ್ಲಿಗೆ ತೆರಳಿದರೆ ತಾನು ಅಂಕುಶವಿಟ್ಟ ಆನೆಯಂತಾಗುತ್ತೇನೆಂಬುದನ್ನರಿತಿದ್ದ ಲಕ್ಷ್ಮಿಕಾಂತ್ ನಯವಾಗೇ ತಿರಸ್ಕರಿಸಿದ್ದ.  ಈ ದ್ವೇಷವನ್ನು ಪಸರಿಸಿಕೊಂಡು ಬಂದ ರಮಾನಂದ್, ಲಕ್ಷ್ಮಿಕಾಂತ್ ಎಲ್ಲಿಯೇ ಕೆಲಸಕ್ಕೆ ಹಾಜರಾದರೂ ಒಂದೆರಡು ವಾರಗಳಲ್ಲಿಯೇ ಆ ಸಂಸ್ಥೆಗಳು ಅವನನ್ನು ಕಿತ್ತು ಬಿಸಾಡುವಂತೆ ನೋಡಿಕೊಳ್ಳುತ್ತಿದ್ದ. ಒಮ್ಮೆ ಲಕ್ಷ್ಮಿಕಾಂತ್ ಇದೇ ರಮಾನಂದ್‍ಗೆ ಫೋನ್ ಮಾಡಿದ್ದ. ಪಕ್ಕದಲ್ಲಿ ನಾನೂ ಇದ್ದೆ. ‘ಸರ್, ಇದೇನಿದು? ಮರಕ್ಕಿಂತ ಮರ ದೊಡ್ಡದು, ನಾನಲ್ಲದಿದ್ದರೆ ಮತ್ತೊಬ್ಬ, ನಾ ಬರುವ ಮುಂಚೆಯೂ ಎಲ್ಲಾ ನಡೆಯುತ್ತಿತ್ತು, ನನ್ನ ಅನ್ನ ಕಿತ್ತುಕೊಳ್ಳುವುದೆಷ್ಟು ಸರಿ?’ ಎಂದು ಕೇಳಿದ್ದ.  ಆಗ ಈ ರಮಾನಂದ್ ಗರ್ವದಿಂದ ನೀಡಿದ್ದ ಉತ್ತರವೆಂದರೆ ‘ಸರ್ವೈವಲ್ ಆಫ್ ದ ಫಿಟ್ಟೆಸ್ಟ್’.

ಎಲ್ಲಾ ಚಾಕಚಕ್ಯತೆಯನ್ನು ಬಲ್ಲವನಾಗಿದ್ದ ಲಕ್ಷ್ಮಿಕಾಂತ ಕೊನೆಗೆ ಎಲ್ಲೂ ಕೆಲಸ ಸಿಗದೆ ತೀವ್ರ ಖಿನ್ನತೆಗೆ ಒಳಗಾಗಿ, ವಿಪರೀತಿ ಕುಡಿಯುವುದನ್ನು ಕಲಿತು, ಸಾಲ ಹೆಚ್ಚಾಗಿ ಒಮ್ಮೆ ಅವಸರದಲ್ಲಿ ನೇಣು ಹಾಕಿಕೊಂಡ ಎಂದು ತಿಳಿದಾಗ ನಾನು ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದೆ.  ಅವಸವಸರವಾಗಿ ಓಡಿ ಬಂದಾಗ ತಿಳಿದ್ದದ್ದು – ಆತ ತನ್ನ ಸಾವಿಗೆ ಯಾರನ್ನೂ ಹೊಣೆ ಮಾಡಿರಲಿಲ್ಲ. ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ ನಲ್ಲಿ ತಾನು ಸೋತೆ ಎಂದು ಬರೆದದ್ದು ನನಗೆ ಮಾತ್ರ ಅರ್ಥವಾಗಿತ್ತು. ಅಂದು ಈ ರಮಾಕಾಂತನ ಹೆಸರನ್ನು ಬರೆದಿಟ್ಟಿದ್ದರೆ ಈತ ತನ್ನ ಶಕ್ತಿಯನ್ನುಪಯೋಗಿಸಿಕೊಂಡು ಹೊರಗೆ ಪಾಪಪ್ರಜ್ಞೆಯಿಲ್ಲದೇ ಬದುಕುತ್ತಿದ್ದ.  ಆದರೆ, ಈಗ... ಕಾಡುತ್ತಿದೆ, ಹೌದು ಕಾಡುತ್ತಿದೆ. ಈ ಸರ್ವೈವಲ್ ಆಫ್ ಫಿಟ್ಟೆಸ್ಟ್ ಕಾಳಗದಲ್ಲಿ ಲಕ್ಷ್ಮಿಕಾಂತನ ಮನಸ್ಸು ಇನ್ನೂ ಹೋರಾಡುತ್ತಿದೆ.

ಅಷ್ಟಕ್ಕೇ ಆಳು ಬಂದ. ‘ನಿಮ್ಮ ಬುದ್ಧಿಯವರು ಸುಸ್ತಾಗಿ ಬಿದ್ದಿದ್ದಾರೆ, ಎತ್ಕೋಪಾ’ ಎಂದೆ. ಆತ ಒಣಗಿದ ಬಟ್ಟೆಯನ್ನು ಆರಿಸುವಂತೆ ಅನಾಮತ್ತಾಗಿ ರಮಾನಂದರನ್ನು ಹೊತ್ತುಕೊಂಡು ಮನೆಗೆ ಬಂದ. ಗಾಬರಿಗೊಂಡ ಹೆಂಡತಿ ಮಗಳು ಪಡಸಾಲೆಯಲ್ಲಿಯೇ ಚಾಪೆ ಹಾಸಿ ಮಲಗಿಸಿದರು.  ಮೊದಲೇ ಲಗ್ಗೇಜ್ ಪ್ಯಾಕ್ ಮಾಡಿಕೊಂಡಿದ್ದ ನಾನು ಹೊರಡಲು ಅನುವಾದೆ. ನಾಲ್ಕು ಹೆಜ್ಜೆ ಮುಂದೆ ಹಾಕಿದ್ದೆ. ‘ಅವ್ವಯ್ಯಾ, ಅಪ್ಪಯ್ಯನ ಕೈಕಾಲೇ ಆಡ್ತಾ ಇಲ್ಲ, ನಮಗೆ ಗತಿ ಯಾರವ್ವಾ’ ಎಂದು ರಮಾನಂದನ ಮಗಳು ಕೂಗಿಕೊಂಡಳು. ಲಕ್ಷ್ಮಿಕಾಂತ ತನ್ನ ಕೊನೆಯ ಪತ್ರದಲ್ಲಿ ಒಕ್ಕಣಿಸಿದ್ದು ನೆನಪಿಗೆ ಬಂತು – ‘ನನ್ನ ಈ ಸಾವಿನಿಂದ ವೈಯಕ್ತಿಕವಾಗಿ ಯಾರಿಗೂ ನಷ್ಟವಿಲ್ಲ, ಯಾಕೆಂದರೆ ಏಕಾಂಗಿಯಾಗಿ ಬೆಳೆದ ನಾನು ನನ್ನ ಸಾವನ್ನೂ ಏಕಾಂಗಿಗೊಳಿಸಿದ್ದೇನೆ’. ಲಕ್ಷ್ಮಿಕಾಂತನ ಸಾವಿನಲ್ಲಿಯೂ ಅಭದ್ರತೆ ಇರಲಿಲ್ಲ. ಆದರೆ ಇಲ್ಲಿ...

ಈ ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ ಆಟದಲ್ಲಿ ಗೆದ್ದೋರ್ಯಾರು?

Comments

Submitted by partha1059 Wed, 02/19/2014 - 17:13

ಭ್ರಮಾಲೋಕದ ಕತೆಯಂತೆ ಕಾಣಿಸಿದರು. ಜೀವನದ ಹೋರಾಟದ ವಿವರಣೆ ಇದರಲ್ಲಿದೆ. ಶಕ್ತಿ ಇದ್ದವನೆ ಉಳಿಯುವನೆಂಬುದು ವಾದವಾದರು ’ಶಕ್ತಿ’ ಎಂಬುದು ಈಗ ಕೇವಲ ದೈಹಿಕ ಶಕ್ತಿಯಾಗಿ ಉಳಿದಿಲ್ಲ. ಮಾನಸಿಕ ಹೋರಾಟದಲ್ಲೂ ಗೆಲ್ಲಬೇಕಿದೆ. ಸರ್ವೈವಲ್ ಆಪ್ ಫಿಟೇಸ್ಟ್ ( physically and mentally)

Submitted by ರಾಮಕುಮಾರ್ Wed, 02/19/2014 - 17:59

ಮೋಹನ್ ನಿಮ್ಮ ಕತೆ ಚನ್ನಾಗಿದೆ.

"Survival of the fittest" ಬಗ್ಗೆ ಕೆಲ ವಿಚಾರಗಳು...
"Survival of the fittest" ಡಾರ್ವಿನ್ನನ ಉಕ್ತಿ ಅಲ್ಲ. ಡಾರ್ವಿನ್ನ್ ಹೇಳಿದ್ದು Natural selection ಅಂತ. ಇವರೆಡರ ಮಧ್ಯೆ ಸೂಕ್ಷ್ಮ ವ್ಯತ್ಯಾಸವಿದೆ.Survival of the fittest ವಾಕ್ಯವನ್ನ ಟಂಕಿಸಿದ್ದು ಡಾರ್ವಿನ್ನನ ಸಮಕಾಲೀನ Herbert Spencer. ದುರದೃಷ್ಟವಶಾತ್ ಈ ವಾಕ್ಯ ಸೋಷಿಯಲ್ ಡಾರ್ವಿನಿಸಮ್ ತರಹದ ಅನರ್ಥಗಳಿಗೆ ಕಾರಣೀಭೂತವಾಗಿದೆ. Survival of the genetically fit enough ಬಹುಶ: ವಿಕಾಸವಾದದ ತಿರುಳಿಗೆ ಹೆಚ್ಚು ಹತ್ತಿರದ ವಾಕ್ಯ.
http://en.wikipedia.org/wiki/Survival_of_the_fittest