ಕಥೆ: ಪರಿಭ್ರಮಣ..(07)

Submitted by nageshamysore on Tue, 02/25/2014 - 03:52

( ಪರಿಭ್ರಮಣ..(06)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಭಾಗ 03. ಅಧಃಪತನ : 
________________

ಶ್ರೀನಾಥನಿಗೆ ಆಗೀಗೊಮ್ಮೆ ಎಂಥದೊ ಕಳವಳ, ದುಗುಡ ಆಗಲಾರಂಭವಾಗಿತ್ತು - ತಾನೇನೊ ಬದಲಾಗಿಹೋಗುತ್ತಿರುವೆನಲ್ಲಾ? ಎಂದು. ವರ್ಷಗಳ ಹಿಂದಿನ ಸಾತ್ವಿಕ ಸನ್ನಡತೆಯ ಶ್ರೀನಾಥನಲ್ಲಿ ಮತ್ತು ಈಗಿನ ವಿಪರೀತದ ಚಿಂತನೆಯ ಶ್ರೀನಾಥನಲ್ಲಿ ಅಜಗಜಾಂತರವೆನಿಸಿ ಆ ಭೀತಿ ಇನ್ನೂ ಆಳಕ್ಕೆ ದೂಡುತ್ತಿತ್ತು. ಮತ್ತೊಂದೆಡೆ ತನಗೆ ತಾನೆ ಸಮಾಧಾನಿಸಿಕೊಳ್ಳುತ್ತ, 'ಅಪ್ಪ ಹಾಕಿದ ಆಲದ ಮರವೆಂದು ನಂಬಿದ ತತ್ವಗಳ ಬುನಾದಿಯ ಮೇಲೆ ಕಟ್ಟಿದ್ದ ವ್ಯಕ್ತಿತ್ವ,  ಈ ಕಾಲ, ದೇಶ, ವಾತಾವರಣಕ್ಕೆ ಸೂಕ್ತವೆಂದು ಹೇಗೆ ಹೇಳುವುದು? ಆ ಬೆಳೆಯುವ ದಿನಗಳ ವಾತಾವರಣ, ಪರಿಸರಕ್ಕೆ ಅದು ಸೂಕ್ತವೆಂದು ಕಂಡಿತ್ತು...ಈಗ ಬೇರೆ ಪರಿಸರ, ಬೇರೆಯದೆ ನಂಬಿಕೆ, ಬೇರೆಯದೆ ಆದ ವಾತಾವರಣ....ಇಲ್ಲಿಗೆ ತಕ್ಕಂತೆ ಹೊಂದಿಕೊಳ್ಳಬೇಕಾದ್ದೆ ಸೂಕ್ತ ತಾನೆ - ಆದಷ್ಟು ಮಟ್ಟಿಗಾದರೂ?' ಎಂದು ಸಮಾಧಾನಿಸಲೆತ್ನಿಸಿದರೂ, ಎರಡರಲ್ಲೊಂದು ಕಡೆ ಪೂರ್ತಿ ನಿಷ್ಠೆಯಲ್ಲಿರಲಾಗದ ಎಡಬಿಡಂಗಿ ದ್ವಂದ್ವ ಪದೆ ಪದೆ ಕಾಡಿ ಹುರಿದು ಮುಕ್ಕುತ್ತಿತ್ತು. ಅನುಕೂಲಕ್ಕೆ ಹಾಗು ಸಮಯಕ್ಕೆ ತಕ್ಕ ಹಾಗೆ ಒಮ್ಮೆ ಆ ದಿರುಸು, ಮತ್ತೊಮ್ಮೆ ಈ ದಿರುಸು ಹಾಕಿಕೊಳ್ಳುತ್ತ ಹೊಂದಾಣಿಕೆ ಮಾಡಿಕೊಂಡಿದ್ದರೆ ಸಾಕು ಎಂಬ ಉಸರವಳ್ಳಿ ಸಿದ್ದಾಂತ, ಅವನನ್ನು ಕೇವಲ ಅಷ್ಟು ದೂರಕ್ಕೆ ಮಾತ್ರವೆ ಕೊಂಡೊಯ್ಯಬಲ್ಲದಲ್ಲದೆ ಪೂರ್ತಿ ಗೊಂದಲವಿರದ ನೇರ ಪ್ರಕ್ಷೇಪದಡಿ ಎಂದೂ ನಡೆಯಬಿಡದೆಂದು ಅರಿವಾಗಿರಲಿಲ್ಲ. ಹೇಗೊ ಸಂಭಾಳಿಸಿದರಾಯ್ತು ಅನ್ನುವ ತತ್ವವೆ ಸದಾಕಾಲ ಕಾಯುವುದೆಂಬ ನಂಬಿಕೆಯಲ್ಲಿ ಮುನ್ನುಗಲೆತ್ನಿಸುತ್ತಿದ್ದರೂ ಅದು ಎಲ್ಲಾ ಕಾಲಕ್ಕೂ ಶ್ರೀರಕ್ಷೆಯಾಗದೆಂಬ ಸುಳಿವು ಆಗೀಗ ಸಿಕ್ಕಿತ್ತು. ಆದರೆ, ಅದರ ಅಂತಿಮ ರೂಪುರೇಷೆ, ಸಾಮಾರ್ಥ್ಯ-ದೌರ್ಬಲ್ಯಗಳ ಅರಿವಾಗಲಿ ಕಲ್ಪನೆಯಾಗಲಿ ಇರದೆ, ಗಮ್ಯವೆತ್ತ ಎನ್ನುವ ಗೊಂದಲ ಗೋಜಲಾಗೆ ಉಳಿದುಬಿಡುತ್ತಿತ್ತು. ಒಮ್ಮೊಮ್ಮೆ, ತಾನು ದೇಶದಲ್ಲೆ ಉಳಿದುಕೊಂಡು ಇತರರ ಹಾಗೆ ಅಲ್ಲೆ ಕೆಲಸ ಮಾಡಿಕೊಂಡಿದ್ದಿದ್ದರೆ ಬಹುಶಃ, ಈ ರೀತಿಯ ದ್ವಂದ್ವಗಳಾಗಲಿ, ಆಲೋಚನೆಗಳಾಗಲಿ ಬರುತ್ತಿರಲಿಲ್ಲವೊ ಏನೊ? ಅಲ್ಲಿನ ಸಾಮಾಜಿಕ ಬಂಧ ಮತ್ತು ಕಾರ್ಯ ಸಂಬಂಧಿ ಒಡನಾಟಗಳಲ್ಲಿ ಕನಿಷ್ಠ ಇಲ್ಲಿನ ರೀತಿಯ ಭಯಂಕರ ಏಕಾಂತದ ಕಾಡುವಿಕೆಗಾದರೂ ಅವಕಾಶವಿರುತ್ತಿರಲಿಲ್ಲವೇನೊ ಅನಿಸುತ್ತಿತ್ತು. ಇಲ್ಲೊ, ವಾರದ ದಿನಗಳಲ್ಲಿ ಹೇಗೊ ದಿನದೂಡುವುದು ಕಠಿಣವಿರದಿರುತ್ತಿದ್ದರೂ, ವಾರದ ಕೊನೆಗಳಲ್ಲಿ ಭಯಂಕರ ಒಂಟಿತನ ಕಾಡಿ ಅಸಹನೀಯವೆನಿಸಿಬಿಡುತ್ತಿತ್ತು.

ವಾರಾಂತ್ಯದ ದಿನಗಳಲ್ಲಿ ಉಳಿದ ಸಹೋದ್ಯೋಗಿಗಳ ಜತೆಗೂ ಹೋಗುವಂತಿರಲಿಲ್ಲ - ಅವರೆಲ್ಲ ತಂತಮ್ಮ ಸಂಸಾರದ ಜತೆಗಿರುವ ಕಾರಣದಿಂದಾಗಿ. ಹೊರ ದೇಶದಲ್ಲಿ ನಮ್ಮವರ ವೀಕೇಂಡಿನ ಕಥೆಗಳೆಲ್ಲ ಹೆಚ್ಚು ಕಡಿಮೆ ಒಂದೆ ತರ; ಶನಿವಾರ ಬಂತೆಂದರೆ ಸಾಕು, ಅಲ್ಲೆಲ್ಲೊ ಒಂದೆರಡೆ ಕಡೆ ಸಿಗುವ ಭಾರತೀಯ ದಿನಸಿ ಅಂಗಡಿಗೊ, ಅಥವಾ ಮಾಮೂಲಿ ಸಾಮಾಗ್ರಿಗಳ ಸೂಪರು ಮಾರ್ಕೆಟ್ಟುಗಳಲ್ಲೊ ಬೇಕಾದ್ದೆಲ್ಲ ಕೊಂಡು ತಂದು ಮನೆಯಲ್ಲಿ ಪೇರಿಸಿಡುವಷ್ಟರಲ್ಲಿ ಇಡೀ ದಿನವೆ ಮಾಯ.. ಹಾಗೆ ಹೋದಾಗ ಅಲ್ಲೆ ಎಲ್ಲಾದರೂ ತಿಂದುಕೊಂಡು ಬಂದರೆನ್ನುವುದು ಬಿಟ್ಟರೆ ಬೇರೇನೂ ಮಾಡಲಾಗುತ್ತಿರಲಿಲ ್ಲ; ಅಪರೂಪಕೊಮ್ಮೆ ಜತೆಗೊಂದು ಸಿನಿಮಾ ನೋಡುವುದನ್ನು ಬಿಟ್ಟರೆ - ಅದೂ ತರುವ ಸಾಮಾನುಗಳ ಕಾಟ ಹೆಚ್ಚಿರದೆ ಇದ್ದಾಗ. ಹಾಗೆ ಕಳೆದ ಶನಿವಾರದ ಸುಸ್ತನ್ನು ಸಂಜೆ ಯಾವುದೊ ಟೀವಿಯಲ್ಲೊ, ಡೀವೀಡಿಯಲ್ಲೊ ಹಾಕಿದ ಸಿನಿಮಾವೊಂದರ ಜತೆ ಕಳೆದುಬಿಟ್ಟರೆ, ಕಣ್ಣೆಳೆಯುವ ನಿದ್ದೆಗೆ ಸೋಫಾದಲ್ಲೆ ಮಲಗಿಬಿಟ್ಟಿದ್ದರೂ ಎಚ್ಚರವಾಗುತ್ತಿದ್ದುದು ಯಾವುದೊ ಹೊತ್ತಲ್ಲಿ ಅಥವಾ ಬೆಳಗಾದ ಮೇಲೆ. ಇನ್ನೂ ಭಾನುವಾರದ ಕಥೆಯೇನು ವಿಭಿನ್ನವಾಗಿರುತ್ತಿರಲಿಲ್ಲ .. ವಾರದೆಲ್ಲಾ ಬಟ್ಟೆ ಒಗೆತ, ಇಸ್ತ್ರಿ, ತಡವಾಗೆದ್ದು ಹಸಿವಾದ ಹೊತ್ತಿಗೆ ಬ್ರೆಡ್ಡೊ-ನೂಡಲೊ ಮೆಲುಕಾಡಿ, ಟೀವಿ ಚಾನಲ್ ತಿರುಗಿಸುತ್ತಾ ಕುಳಿತರೆ ಆಯ್ತು.. ಊಟಕ್ಕೊಂದು ಏನಾದರೂ ವ್ಯವಸ್ಥೆಯಾದರೆ ಸರಿ. ಒಬ್ಬಂಟಿಯಿರದೆ ಜತೆಯಿದ್ದವರ ಕಥೆ ಸ್ವಲ್ಪ ಬೇರೆ ತರವಿದ್ದರೂ, ಏಕಾಂಗಿಗಳ ಪಾಡಂತೂ ಇದಕ್ಕೆ ವ್ಯತಿರಿಕ್ತವಿರುತ್ತಿರಲಿಲ್ಲ - ಸೋಮಾರಿತನವಿರದೆ ಹೊರಗೆ ಅಡ್ಡಾಡುವ ಹವ್ಯಾಸವಿದ್ದವರ ಕಥೆಯಷ್ಟೆ ತುಸು ವ್ಯತ್ಯಾಸವಿರುತ್ತಿತ್ತೇನೊ ಅನ್ನುವುದನ್ನು ಬಿಟ್ಟರೆ. ಶ್ರೀನಾಥನ ಪರಿಸ್ಥಿತಿ ಹೀಗೆಯೆ ಇದ್ದರೂ, ಇಲ್ಲಿ ಟೀವೀ ನೋಡಲೂ ಬರಗಾಲ; ಯಾವ ಇಂಗ್ಲೀಷ್ ಅಥವಾ ಭಾರತೀಯ ಚಾನಲ್ಲುಗಳೂ ಇಲ್ಲದ ಜಾಗ. ಒಂದೆರಡು ಆಂಗ್ಲ ನ್ಯೂಸು ಚಾನೆಲ್ಸ್ ಬಿಟ್ಟರೆ ಮಿಕ್ಕೆಲ್ಲ ಸ್ಥಳೀಯದ್ದೆ.. ಪದೆ ಪದೆ ಅವನ್ನು ನೋಡುವುದೆ ಶಿಕ್ಷೆಯೆನಿಸಿ ಅದನ್ನು ನೋಡುವುದನ್ನೆ ನಿಲ್ಲಿಸಿಬಿಟ್ಟಿದ್ದ. ಬೇರೆಯವರ ಹಾಗೆ ಹೊರ ಸುತ್ತುವ ಹವ್ಯಾಸವೂ ಇರದೆ, ಸೋಫಾದಲ್ಲಿ ಮುದುರಿ ಬಿದ್ದುಕೊಂಡೊ, ಯಾವುದೊ ಆಫೀಸು ಕೆಲಸಮಾಡಿಕೊಂಡೊ, ಏನಾದರೂ ಓದುತ್ತಲೊ ಕಾಲ ಕಳೆದು ಹೋಗುತ್ತಿತ್ತು. ತೀರಾ ಅಪರೂಪಕ್ಕಷ್ಟೆ ಹೊರಗೆ ಹೋದರೂ ಅರ್ಧ ಒಂದು ಗಂಟೆಯೊಳಗೆ ಬೋರೆನಿಸಿ ಹಿಂದಿರುಗಿಬಿಡುವಂತಾಗಿಬಿಡುತ್ತಿತ್ತು.

ಅದೊಂದು ವಾರ ಮೀಟಿಂಗೊಂದರಲ್ಲಿ ಮಾತನಾಡುತ್ತ ಇದ್ದಾಗ, ಸ್ಥಳೀಯ ಸಹೋದ್ಯೋಗಿಯೊಬ್ಬರು ಒಂದು ಕುತೂಹಲಕರ ಸುದ್ದಿ ಹೇಳಿದ್ದರು - ಭಾನುವಾರಗಳಂದು ಸರಕಾರವು 'ವಾಕಿಂಗ್ ಸ್ಟ್ರೀಟ್' ಎಂದು ಘೋಷಿಸಿದೆಯೆಂದು. ಯಾವುದೊ ಸಾಂಸ್ಕೃತಿಕ ಕಲಾಚರಣೆಯ ಅಂಗವಾಗಿ ಒಂದು ವರ್ಷ ಕಾಲ ಮಾಡಲ್ಹಮ್ಮಿಕೊಂಡಿದ್ದ ಕಾರ್ಯಕ್ರಮವದು.. ಆ ದಿನದ ವಿಶೇಷವೆಂದರೆ, ಸದಾ ಜನ-ವಾಹನ ದಟ್ಟಣೆಯಲಿ ನಲುಗುವ 'ಸಿಲೋಮ್ ರೋಡು', ಭಾನುವಾರದ ಬೆಳಗಿಂದಲೆ ಸಿಂಗರಿಸಿಕೊಂಡ ವಧುವಿನಂತೆ ಮೆರೆಯಲಿದೆಯೆಂದು; ಅದನ್ನು ಆಗಿಸುವ ಸಲುವಾಗಿ ದಿನವಿಡಿ ರಸ್ತೆಯ ಎರಡೂ ಕಡೆ ಮುಚ್ಚಿ ಸಂಚಾರ ನಿರ್ಬಂಧಿಸಿಬಿಡುವರೆಂದು ಹೇಳಿದ್ದರು. ಅಂದರೆ, ವಿಶಾಲವಾದ ಆ ದೊಡ್ಡ ರಸ್ತೆಯ ಎರಡೂ ಬದಿ, ಯಾವುದೆ ಟ್ರಾಫಿಕ್ಕಿನ ಹಂಗಿಲ್ಲದೆ ದಿನವೆಲ್ಲ ಓಡಾಡುವ ಸ್ವೇಚ್ಚೆ! ಹಾಗೆ ಆ ಉದ್ದದ ರಸ್ತೆಯಲ್ಲಿ ಅಲ್ಲಲ್ಲಿ ನಡೆಯುವ ಪ್ರದರ್ಶನಗಳು, ಮೆರವಣಿಗೆಗಳು, ಸಾಂಸ್ಕೃತಿಕ ಆಚರಣೆಗಳೆ ಮೊದಲಾದ ಹತ್ತು ಹಲವು ಆಕರ್ಷಣೆಗಳು ಇರುವುದಂತೆ..ಸಂತೆಯೆಂದ ಮೇಲೆ ಜನ, ಜನರಿದ್ದ ಮೇಲೆ ಮಾರುವ, ಕೊಳ್ಳುವವರೂ ಇರಬೇಕಾದದ್ದು ಸಹಜ - ಉದ್ದಕ್ಕೂ ಇರುತ್ತಾರೆ, ಚೌಕಾಸಿ ಮಾಡಿ ಬೇಕಾದಷ್ಟು ಕೊಳ್ಳುವ ಸದವಕಾಶ ಎಂದು ಬೇರೆ ಶಿಪಾರಸು ಮಾಡಿ ಹೇಳಿದ್ದರು. ಅಂತವರಲ್ಲಿ ಆಟಿಕೆ ಮಾರುವುದರಿಂದ ಹಿಡಿದು, ಕೂತಲ್ಲೆ ನಿಮ್ಮ ಚಿತ್ರ ಬಿಡಿಸಿಕೊಡುವವರು, ಕಲಾತ್ಮಕ ಕ್ಯಾಂಡಲಿನ ಆಕೃತಿಗಳನ್ನು ಮಾರುವವರೂ, ಥಾಯ್ ಸಿಲ್ಕು ಮಾರಾಟದವರು - ಅಷ್ಟೇಕೆ, ರಸ್ತೆಯಲ್ಲೆ ಹಾಸಿದ್ದ ತೂಗು ಮಂಚವೊಂದರ ಮೇಲೆ ಸಾಂಪ್ರದಾಯಿಕ ಮಸಾಜು ಮಾಡುವವರು - ಎಲ್ಲಾ ಇರುತ್ತಾರಾದ ಕಾರಣ ನೋಡಲು ಚೆನ್ನಿರುತ್ತದೆ ಹೋಗಿ ಬನ್ನಿ ಎಂದಿದ್ದರು. ವರ್ಷ ಪೂರ್ತಿ ಇರುವ ಕಾರಣ , ಯಾವಾಗಲಾದರೂ ಹೋಗಿ ಬರಬೇಕೆಂದು ಇವನಿಗೂ ಅನಿಸಿತ್ತು. ಹಾಗಂದುಕೊಂಡೆ ನಾಲ್ಕು ತಿಂಗಳು ಉರುಳೆ ಹೋಗಿತ್ತೂ, ಸಹಾ..

ಕುನ್ ಯೂಪಳ ಪ್ರಸಂಗವಾದ ಮೇಲೆ ಪ್ರತಿ ವಾರದ ಕೊನೆ ಬಂದಾಗಲೂ ಒಂದು ರೀತಿ ಭಯವಾಗುತ್ತಿತ್ತು - ಮತ್ತೆ ಆ ಮೇಡಂನ ಕರೆಯೊ ಅಥವ ಮತ್ತೊಂದೆರಡು ಹೆಣ್ಣುಗಳನ್ನು ಹೇಳದೆ ಕೇಳದೆ ಬಾಗಿಲಿಗೇ ಕಳಿಸಿ ಪ್ರಲೋಭಿಸುವ ಘಟನೆಯೊ ನಡೆಯುವುದೆ ಎಂದು. ಅದೃಷ್ಟವೊ ಅಥವ ಅವರ ಅಲಿಖಿತ ವೃತ್ತಿಧರ್ಮದ ಸಜ್ಜನಿಕೆಯೊ - ಎರಡೂ ಆಗಲಿಲ್ಲ. ಮೊದಲೆರಡು ವಾರದ ಕೊನೆಯಂತೂ ಎಲ್ಲಿ ಹಾಗೆ ಘಟಿಸಿಬಿಡುವುದೊ ಎಂಬ ಆತಂಕದಲ್ಲೆ ದಿನವೆಲ್ಲ ಉರುಳಿಹೋಗಿತ್ತು. ಕೊನೆಗಂತು ಅವನದನ್ನು ಎದುರು ನೋಡುತ್ತಿದ್ದಾನೊ ಅಥವಾ ಆತಂಕಿಸುತ್ತಿದ್ದಾನೊ ಎಂದು ಅವನಿಗೇ ಅನುಮಾನವಾಗಿತ್ತು.. ಈ ನಡುವೆ ಮಾತು ಕೊಟ್ಟಂತೆ ಯೂಪಾಳು, ಮುಂದಿನ ಮಂಗಳವಾರವೆ ಪೋನ್ ಮಾಡಿದ್ದಳು. ಯಾಕೊ ಇವನಿಗೆ ಆಸಕ್ತಿಯೆ ಬತ್ತಿ ಹೋದಂತೆ, ತಾನೆ ಮತ್ತೆ ಪೋನ್ ಮಾಡುವುದಾಗಿ ಹೇಳಿ ಇಟ್ಟುಬಿಟ್ಟಿದ್ದ. ಇದುವರೆಗೂ ಅವನು ಬ್ಯಾಂಕಾಕಿನಲ್ಲಿ ಕಂಡ ಅತ್ಯಂತ ಸುಂದರ ಹೆಣ್ಣು ಅವಳು ; ಅದೆ ಅವನಲ್ಲಿ ಕೀಳರಿಮೆಯಾಗಿಸಿತ್ತೊ, ಇನ್ನೇನು ಕಾರಣವೊ - ಅವಳು ಮನಃಪಟಲದ ಪರದೆಯ ತೀರಾ ಆಚೆಯಲ್ಲಷ್ಟೆ ಇದ್ದಳೆ ಹೊರತು, ಒಮ್ಮೆಯೂ ಅವನಲ್ಲಿ ಬಯಕೆ ಬಿತ್ತುವ ಪ್ರಲೋಭನೆಯಾಗಿ ಕಾಣಲೆ ಇಲ್ಲ. ಬಹುಶಃ ತೀರಾ ಪರಿಪೂರ್ಣತೆಯೂ ಒಂದು ವಿಧದ ಅಪೂರ್ಣತೆಯೆಂದು ಕಾಣುತ್ತದೆ....

ಈ ನಡುವೆ ಒಮ್ಮೆ ಹೀಗೆ ವಾರಾಂತ್ಯವೆಲ್ಲಾ ಹಿಡಿದ ಜಡಿಮಳೆ ಇಡೀ ಶನಿವಾರವೆಲ್ಲಾ ಸುರಿದು ಕಾಡಿತ್ತು. ಎಲ್ಲೂ ಹೋಗಲಾಗದಂತೆ ಮನೆಯಲ್ಲೆ ಕಟ್ಟಿ ಹಾಕಿಬಿಟ್ಟಿದ್ದ ಆ ಮಳೆ ಭಾನುವಾರ ಮಧ್ಯಾಹ್ನದವರೆಗೂ ಬಿಡದೆ ಸುರಿದಾಗ, 'ಥತ್! ವಾರದ ಕೊನೆಯೆಲ್ಲಾ ಹಾಳಾಯ್ತು...' ಎಂದು ಬೈದುಕೊಳ್ಳುತ್ತಲೆ ಇದ್ದಾಗ,ಇದ್ದಕ್ಕಿದ್ದಂತೆ ಏನೊ ಆದಂತೆ ಮೂರು ಗಂಟೆ ಹೊತ್ತಿಗೆ ಮಳೆಯೆಲ್ಲ ನಿಂತು ಮತ್ತೆ ಪ್ರಖರ ಬೆಳಕಿನೊಂದಿಗೆ ಸೂರ್ಯನೂ ಕಾಣಿಸಿಕೊಂಡ. ಎರಡು ದಿನದ ಉಸಿರು ಬಿಗಿದ ವಾತಾವರಣಕ್ಕೊ ಏನೊ, ಆ ದಿನ ಇದ್ದಕ್ಕಿದ್ದಂತೆ ಹೊರಗೆ ಹೋಗಬೇಕೆನಿಸಿದಾಗ ತಟ್ಟನೆ ನೆನಪಾದದ್ದು - 'ಸಿಲೋಮ್ ವಾಕಿಂಗ್ ಸ್ಟ್ರೀಟ್' ವಿಷಯ. ಹೇಗೂ ಹತ್ತಿರದಲ್ಲೆ ಇದೆ, ಇಲ್ಲಿಯವರೆಗೂ ನೋಡಿಲ್ಲ ಬೇರೆ; ಟ್ರಾಫಿಕ್ಕಿನ ಜಂಜಾಟವೂ ಇರದು - ಎಂದೆಲ್ಲ ಆಲೋಚಿಸಿ ಬರ್ಮುಡವೊಂದರ ಜತೆ ಟೀ ಶರ್ಟೊಂದನ್ನು ತಗಲಿಸಿಕೊಂಡು, ಹಣದ ಪರ್ಸನ್ನು ಜೇಬಿಗಿಟ್ಟವನೆ ಹೊರನಡೆದ. ಅಚ್ಚರಿಯೆಂಬಂತೆ ಬೀದಿಯ ಕೊನೆಗೆ ತಲುಪಿ ಸಿಲೋಮ್ ಮುಖ್ಯ ರಸ್ತೆಯ ತುದಿಗೆ ಬರುತ್ತಿರುವ ಹಾಗೆ ಆಗಲೆ ದಟ್ಟ ಜನಸಂದಣಿ ಕಾಣಿಸುತ್ತಿತ್ತು.  

ಒಂದೆರಡು ಕಿಲೊಮೀಟರು ಇರುವ ರಸ್ತೆಯ ಎರಡೂ ಕಡೆಯಿಂದ ತಡೆ ಹಾಕಿ ವಾಹನಗಳ ಓಡಾಟವನ್ನು ಸಂಪೂರ್ಣ ನಿರ್ಬಂಧಿಸಿದ್ದರಿಂದ, ದಿನಾ ಬೆಂಕಿಪೊಟ್ಟಣಗಳಂತೆ ಕಾಣುತ್ತ ಸಾವಿರಾರು ವಾಹನಗಳು ತುಂಬಿ ಟ್ರಾಫಿಕ್ಕಿನ ನರಕವಾಗುತ್ತಿದ್ದ ಈ ರಸ್ತೆ, ಈಗ ಪೂರಾ ಖಾಲಿಖಾಲಿಯಾಗಿ ಸಿಂಗರಿಸಿಕೊಂಡ ನವವಧುವಿನಂತೆ ಕಾಣುತ್ತಿತ್ತು. ಎಲ್ಲಾ ಖಾಲಿಯಾಗಿ ಬರಿ ಜನರಿಂದ ಮಾತ್ರ ಗಿಜಿಗುಡುತ್ತಿದ್ದ ಈ ರಸ್ತೆ, ಈಗಷ್ಟೆ ಎಷ್ಟು ದೊಡ್ಡದಿದೆಯೆಂದು ಅರಿವಿಗೆ ಬರುತ್ತಿತ್ತು. ಒಂದೆರಡು ಕಿಲೊಮೀಟರಿನ ನಡೆಯಾದರೂ ಒಂದು ಬಾರಿ ನಡೆದೆ ಬರುವುದೆಂದು ಹೊರಟ ಶ್ರೀನಾಥ. ಗಾಳಿ ಚೆನ್ನಾಗಿ ಬೀಸುತ್ತಿತ್ತಾಗಿ ಸಂಜೆಯ ಬಿಸಿಲು ಬೆವರಿಳಿಸುವ ಮಟ್ಟದಲ್ಲೇನೂ ಇರಲಿಲ್ಲ; ಅಲ್ಲದೆ ಎರಡು ದಿನದಿಂದ ಮಳೆಯಲ್ಲಿ ಮನೆಯಲ್ಲೆ ಕೂತು ಜಡ್ಡು ಹಿಡಿದಿದ್ದ ಮೈಗೆ ನಡೆದಾಟದ ವ್ಯಾಯಾಮ ತುಸು ಆರಾಮವನ್ನು ಕೊಡಲೆಂದು ನಡೆದವನಿಗೆ ನಿರಾಶೆಯೇನೂ ಆಗಲಿಲ್ಲ. ಉದ್ದಕ್ಕೂ ಎರಡು ಬದಿಯಲ್ಲೂ ಸಾಲು ಸಾಲಾಗಿ ಅಂಗಡಿಗಳು, ಪ್ರದರ್ಶನಗಳು, ಕರ-ಕುಶಲ ವೈಚಿತ್ರಗಳು, ಚಿತ್ರ ವಿಚಿತ್ರ ಆಟಿಕೆಗಳು, ಮರದ, ಲೋಹದ ಬಗೆ ಬಗೆ ಪ್ರತಿಮೆಗಳು, ಬಿಸಾಡಿದ ವಸ್ತುಗಳಿಂದ ತಯಾರಿಸಿದ ವಸ್ತುಗಳು, ಥಾಯಿ ಸಾಂಪ್ರದಾಯಿಕ ಸರಕುಗಳು - ಹೀಗೆ ಎಲ್ಲವೂ ಒಂದರ ಪಕ್ಕ ಒಂದು ಸಾಲಾಗಿ ಗುಳೆ ಹಾಕಿಕೊಂಡು ಕುಳಿತಿದ್ದವು. ನಡುನಡುವೆ ಜ್ಯೂಸುಗಳು, ಹಣ್ಣುಗಳು, ಕುರುಕಲು ಮತ್ತು ಬೀದಿಯ ತಿಂಡಿಗಳು - ಎಲ್ಲವೂ ಇತ್ತು. ಅವನ ಸಹೋದ್ಯೋಗಿಗಳು ಹೇಳಿದಂತೆ ಒಂದು ಕಡೆ ಮಸಾಜಿನ ಮಂಚಗಳಲ್ಲಿ ಮರ್ದನ ನಿರತ ಬಲಿಷ್ಟ ಥಾಯಾಳುಗಳು ಕಂಡುಬಂದರು. ಮತ್ತೊಂದೆಡೆ ನಿಮ್ಮನ್ನು ಎದುರಲ್ಲೆ ಕೂರಿಸಿಕೊಂಡು ಅರ್ಧ ಗಂಟೆಯಲ್ಲೆ ನಿಮ್ಮ ಕಪ್ಪು-ಬಿಳಿಯ ಅಥವಾ ಬಣ್ಣದ ಚಿತ್ರ ಬರೆದುಕೊಡುವವರ ನಾಲ್ಕೈದು ಅಂಗಡಿಗಳ ಸಾಲು. ಅಲ್ಲಿದ್ದ ಮರಗಳಿಂದ ಮಾಡಿದ ಮೂರ್ತಿಗಳ ಅಂಗಡಿಯೊಂದರಲ್ಲಿ ಥಾಯ್ ಪ್ರತಿಮೆಗಳಲ್ಲದೆ ಬುದ್ಧನ ಶಿಲ್ಪಗಳನ್ನು ಮಾತ್ರ ನಿರೀಕ್ಷಿಸಿದ್ದ ಶ್ರೀನಾಥನಿಗೆ, ಅಲ್ಲಿದ್ದ ನಾಲ್ಕು ತಲೆಯ ದೇವರೊಂದರ ವಿಗ್ರಹ ಮನ ಸೆಳೆಯಿತು - ಅರೆ, ನಮ್ಮ ಬ್ರಹ್ಮನ ಹಾಗೆ ಇಲ್ಲೂ ಯಾರೊ ಬ್ರಹ್ಮ ದೇವರಿರುವಂತಿದೆಯಲ್ಲಾ? ಎನಿಸಿ. ಆಮೇಲೆ ವಿಚಾರಿಸಿದಾಗ ಆ ವಿಗ್ರಹದ ಹೆಸರು 'ಪಾಟ್ ಪೋಂ' ಅಂದು ಗೊತ್ತಾಯಿತು. 'ಬ್ರಹ್ಮ' ಹೋಗಿ , 'ಪೊಮ್ಮ' ನಾಗಿ ಕಡೆಗೆ 'ಪೋಂ' ಮಾತ್ರವೆ ಉಳಿದುಕೊಂಡಿರಬೇಕೆಂದುಕೊಂಡ.. ಪರವಾಗಿಲ್ಲವೆ, ಬ್ರಹ್ಮನಿಗೆ ನಾವು ಪೂಜಿಸದಿದ್ದರೂ, 'ವಿದೇಶದಲ್ಲಾದರೂ ಸ್ವಲ್ಪ ಪೂಜೆ ಮಾಡುವ ಭಕ್ತರಿರುವಂತಿದೆಯಲ್ಲಾ' ಎಂದುಕೊಳ್ಳುತ್ತಲೆ ಮತ್ತೊಂದು ಕಡೆ ತಿರುಗಿದರೆ - ಅಲ್ಲಿ ಗಣೇಶನ ವಿಗ್ರಹವೂ ಆಸೀನ! ಇದೆ ರೀತಿಯ ವಿಗ್ರಹಗಳನ್ನು ಕೆಲವು ದೊಡ್ಡ ಶಾಪಿಂಗ್ ಮಾಲಿನ ಹತ್ತಿರವೂ ನೋಡಿದ್ದು ನೆನಪಾಯ್ತು. ಮಹಾ ದೈವ ಭಕ್ತರಾದ ಸಾಧು ಥಾಯಿ ಜನರು , ಅಲ್ಲೆ ಬಗ್ಗಿ ನಮಸ್ಕರಿಸುತ್ತ ಉದುಗಡ್ಡಿ ಹಚ್ಚುವುದನ್ನು ಕಂಡು 'ಇವರೂ ನಮ್ಮ ಜನರ ಹಾಗೆ ಭಕ್ತಿಯಲ್ಲಿ' ಅಂದುಕೊಂಡಿದ್ದ. 

ಇಲ್ಲಿನ ಜನರ ವಿಷಯಕ್ಕೆ ಬಂದರೆ ತೀರಾ ಸಾಧು ಜನರೆಂದೆ ಹೇಳಬೇಕು - ದೇವರು ದಿಂಡರೆಂದು ಹೆದರುವ ಜನ. ಇಲ್ಲಿ ಇನ್ನೂ ರಾಜರ ಆಳ್ವಿಕೆ ಸಾಂಕೇತಿಕವಾಗಿ ಮಾನ್ಯಗೊಂಡ ವ್ಯವಸ್ಥೆಯಾಗಿರುವುದರಿಂದ ರಾಜರೆಂದರೆ ಬಹಳ ಭಯ, ಭಕ್ತಿ ಇಲ್ಲಿನವರಿಗೆ. ಇಲ್ಲಿನ ರಾಜರ ಹೆಸರೂ ಸಹ 'ರಾಮ' ಎಂದು - ಈಗಿರುವ ರಾಜರು ಒಂಭತ್ತನೆ ರಾಮ. ಬೇರೆ ಯಾವುದೆ ವಿಷಯ ಹೇಗಿದ್ದರೂ ಸರಿ, ತಮ್ಮ ದೊರೆ ಹಾಗೂ ಅರಸು ಮನೆತನದ ವಿಷಯದಲ್ಲಿ ಮಾತ್ರ ಯಾರು ಏನಂದರೂ ಈ ಜನ ಸಹಿಸುವುದಿಲ್ಲ - ಅಷ್ಟೊಂದು ಪ್ರೀತಿ ಭಯ ಭಕ್ತಿ. ಎಷ್ಟೊ ಬಾರಿ ಒಡಾಡುವಾಗ ರಸ್ತೆಯ ಕೆಲವೆಡೆ ಅವರ ಚಿತ್ರಗಳಿಟ್ಟದ್ದನ್ನು ಶ್ರೀನಾಥ ನೋಡಿದ್ದ. ಅದರ ಮುಂದೆ ಹಾದು ಹೋಗುತ್ತಿದ್ದ ಪ್ರತಿಯೊಬ್ಬರೂ, ಥಾಯಿ ರೀತಿಯಲ್ಲಿ ತಲೆಬಗ್ಗಿಸಿ, ಪಟಕ್ಕೆ ನಮಸ್ಕರಿಸಿಯೆ ಮುಂದೆ ಹೋಗುತ್ತಿದ್ದುದ್ದು! ಒಮ್ಮೆ ಅಲ್ಲಿನ ಥಿಯೇಟರೊಂದಕ್ಕೆ ಸಿನೆಮಾ ನೋಡಲು ಹೋಗಿದ್ದ ಶ್ರೀನಾಥನಿಗೊಂದು ವಿಶಿಷ್ಟ ಅನುಭವ ; ಆಗ ತಾನೆ ಚಿತ್ರ ಆರಂಭವಾಗಿ ಕೆಲವು ಜಾಹಿರಾತುಗಳನ್ನು ತೋರಿಸುತ್ತಿದ್ದರು. ಇನ್ನೇನು ಮುಖ್ಯ ಸಿನೆಮಾ ಆರಂಭವಾಗುವ ಹೊತ್ತು, ಇದ್ದಕ್ಕಿದ್ದಂತೆ ಕತ್ತಲೆಯಿದ್ದ ಥಿಯೇಟರು ಹಾಲಿನ ತುಂಬ ಮತ್ತೆ ದೀಪಗಳು ಹೊತ್ತಿಕೊಂಡವು ಮತ್ತು ಕುರ್ಚಿಯಲ್ಲಿ ಕುಳಿತಿದ್ದ ಇಡಿ ಥಿಯೇಟರಿನ ಜನವೆಲ್ಲ ಎದ್ದು ನಿಂತುಬಿಟ್ಟರು. ಇವನಿಗೊ ಗಾಬರಿ - ಎಲ್ಲಿ ಏನಾಯ್ತು? ಯಾಕೆ ಹೀಗೆಲ್ಲ ಏಳುತ್ತಿದ್ದಾರೆಂದು. ಸರಿ, ಗಡಬಡಿಸಿಕೊಂಡು ಅವರ ಜತೆ ತಾನು ಎದ್ದು ನಿಂತ. ಆಗ ಪರದೆಯತ್ತ ಏನೊ ತೋರಿಸುತ್ತಿದ್ದ ಕಡೆ ಗಮನ ಹರಿದು ಅಲ್ಲಿ ನೋಡಿದರೆ, ದೊಡ್ಡದಾಗಿ ಅಲ್ಲಿ ರಾಜರ ಭಾವಚಿತ್ರ ತೋರಿಸುತ್ತ ಥಾಯ್ ಭಾಷೆಯಲ್ಲಿ ಅವರ ವ್ಯಕ್ತಿತ್ವ, ಸಾಧನೆಯ ಕುರಿತಾಗಿ ಏನೊ ಹೇಳುತ್ತಿದ್ದಾರೆ. ಜನರೆಲ್ಲ ಏಕೆ ಎದ್ದು ನಿಂತರೆಂದು ಆಗ ಅವನಿಗರ್ಥವಾಯ್ತು; ಮತ್ತು ಇದು ಪ್ರತಿ ಟಾಕೀಸಿನಲ್ಲೂ, ಪ್ರತಿ ಶೋನಲ್ಲೂ ಪುನರಾವರ್ತನೆಯಾಗುತ್ತದೆಂದು ತಿಳಿದು ಅಚ್ಚರಿಯೂ ಆಯ್ತು, ಈ ಕಾಲದಲ್ಲೂ ಎಂಥಹ ಅಗಾಧ ರಾಜಭಕ್ತಿ ಎಂದು. ಒಂದೊಮ್ಮೆ ಯಾವುದೊ ಪುಣ್ಯಕಾರ್ಯಕ್ಕೆ ಹಣ ಸಂಗ್ರಹಿಸಬೇಕಾದ ಕಾರ್ಯದಲ್ಲಿ ಮಹಾರಾಜರ ನೆಚ್ಚಿನ ನಾಯಿಯಾದ 'ಕುನ್ ಡೆಂಗ್' ('ಡೆಂಗ್' ಎಂದರೆ ಕೆಂಪು ಎಂದರ್ಥ; 'ಕುನ್' ಎನ್ನುವುದು ಎಲ್ಲರಿಗೂ ಬಳಸುವ ಗೌರವ ಸೂಚಕ ಪದ) ಹೆಸರಿನಲ್ಲಿ ಟೀ ಶರಟುಗಳನ್ನು ಮಾಡಿ ಮಾರಿದಾಗ ಅದನ್ನು ಕೊಳ್ಳಲೆ ಜನರಲ್ಲಿ ನೂಕುನುಗ್ಗಲಾಗಿ ಹೋಗಿತ್ತು..ಕೇವಲ ಪ್ರಭಾವವಿರುವ, ಕೆಲವರಿಗೆ ಮಾತ್ರ ಸಿಕ್ಕಿತ್ತಷ್ಟೆ - ದುಬಾರಿ ಬೆಲೆಯದಾದರೂ ಕೂಡ. ಅಷ್ಟರ ಮಟ್ಟಿಗೆ ಆರಾಧಿಸುವ ಈ ಜನ, ಅವರ ಹುಟ್ಟುಹಬ್ಬವನ್ನು ಅಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ - ಅದಕೆಂದೆ ರಾಜ ರಾಣಿಯರ ಹುಟ್ಟಿದ ದಿನಗಳು ಇಲ್ಲಿ ಸಾರ್ವಜನಿಕ ರಜೆಯ ದಿನಗಳು.

ಈ 'ಕುನ್' ಬಳಕೆಯ ವಿಷಯಕ್ಕೆ ಬಂದಾಗ ಈ ಪದವನ್ನು ಗೌರವಸೂಚಕವಾಗಿ ಪ್ರತಿಯೊಬ್ಬರ ಹೆಸರಿನ ಹಿಂದೆಯೂ ಬಳಸುತ್ತಾರೆ. ಗಂಡಸರಿರಲಿ, ಹೆಂಗಸರಿರಲಿ, ಸ್ಥಳೀಯರಾಗಲಿ, ವಿದೇಶಿಗಳಾಗಲಿ ಅವರ ಹೆಸರನ್ನು ನೇರ ಉಚ್ಚರಿಸುವುದಿಲ್ಲ. ಹೀಗಾಗಿ ಶ್ರೀನಾಥನನ್ನು ಮಾತನಾಡಿಸಬೇಕೆಂದರೆ 'ಕುನ್ ಸ್ರೀನಾಥ್..' ಎಂದೆ ಕರೆಯುತ್ತಿದ್ದರು ; ರಾಮಾನುಜಂಗೆ 'ಕುನ್ ರಾಮ್'. ಅಂತೆಯೆ ಯಾರಾದರೂ ಎದುರು ಸಿಕ್ಕಾಗ ಮಡಿಸಿದ ತೋಳುಗಳೆರಡನ್ನು ಎದೆಯ ಮಟ್ಟಕ್ಕೆ ತಂದು, ಹಸ್ತಗಳನ್ನು ನಡು ಮಧ್ಯಕ್ಕೆ, ಹೃದಯದ ಹತ್ತಿರವೇನೊ ಎಂಬಂತೆ ಜೋಡಿಸಿ, ಅತೀವ ವಿನಯದಿಂದ ಕುತ್ತಿಗೆಯನ್ನು ಬಾಗಿಸಿ ಶಿರವನ್ನು ಜೋಡಿಸಿದ ಬೆರಳ ತುದಿ ಹಣೆಗೆ ತಗುಲುವಂತೆ ಮುಟ್ಟಿಸಿ ' ಸವಾಡಿ ಕಾಪ್' ಎನ್ನುತ್ತಾರೆ. ನೋಡಲು ನಮ್ಮ ನಮಸ್ಕಾರದ ಹಾಗೆ ಕಂಡರೂ, ನಮ್ಮ ನಮಸ್ಕಾರ ಕಾಟಾಚಾರಕ್ಕೆ ಕೈ ಜೋಡಿಸಿ ಬಿಟ್ಟ ಹಾಗೆ ಕಾಣುತ್ತದೆ, ಇವರ ನಮಸ್ಕಾರದ ಆಂಗಿಕ ಅಭಿನಯದೊಡಗೂಡಿದ ವಿನಮ್ರಪೂರ್ಣ ನಮನದೆದುರು. ಅದೇ ರೀತಿ ಯಾರಾದರೂ ಇಬ್ಬರು ಮಾತನಾಡುತ್ತಿರುವವರ ನಡುವೆ ಹೋಗಬೇಕಾಗಿ ಬಂದರೆ ತಲೆ ತಗ್ಗಿಸಿ, ಇಡಿ ದೇಹವನ್ನು ಕುಗ್ಗಿಸಿಕೊಂಡು ಹೋಗುತ್ತಾರೆ. ಮಾತನಾಡುವಾಗ ಪ್ರತಿ ವಾಕ್ಯದ ಕೊನೆಯಲ್ಲೂ ಸಹ 'ಕುನ್'ನಂತೆಯೆ ಒಂದು ಪದ ಬಳಸುತ್ತಾರೆ ; ಗಂಡಸರಾದರೆ 'ತಮ್ಮ ಮಾತಿನ ಕೊನೆಯಲ್ಲಿ ತಪ್ಪದೆ 'ಕಾಪ್' ಎಂದು ಸೇರಿಸಬೇಕು. ಅದೆ ಹೆಂಗಸರಾದರೆ 'ಕಾ' ಎಂದು ಕೊನೆಗೊಳಿಸಬೇಕು. ಬಂದ ಹೊಸತರಲ್ಲಿ 'ಕಾಪ್' ಎನ್ನಬೇಕೊ, 'ಕಾ' ಎನ್ನಬೇಕೊ ಎಂದು ಗೊತ್ತಾಗದೆ ಸಾಮಾನ್ಯ ಎಲ್ಲರು ಪಾಡು ಪಡುವವರೆ. ಅದರಲ್ಲೂ ಯಾರಿಗಾದರೂ 'ಕಾಪ್ ಕುನ್....(ಥ್ಯಾಂಕ್ಯೂ)' ಹೇಳುವಾಗಲಂತೂ ಇದು ತುಂಬಾ ಮುಖ್ಯ. ಹೇಳುತ್ತಿರುವವರು ಗಂಡಸರಾದರೆ 'ಕಾಪ್ ಕುನ್ ಕಾಪ್' ಎನ್ನಬೇಕು...ಅದೆ ಹೆಂಗಸಾದರೆ ' ಕಾಪ್ ಕುನ್ ಕಾ' ಎನ್ನಬೇಕು. ಶ್ರೀನಾಥನಿಗೆ ಮತ್ತವನ ತಂಡದ ಇತರರಿಗೆ ಪ್ರತಿ ಬಾರಿ ಗೊಂದಲವಾಗುತ್ತಿದ್ದುದು ಇದು ಮಾತನಾಡುವ ಗಂಡು / ಹೆಣ್ಣು ಅನುಕರಿಸಬೇಕಾದ ನಿಯಮವೊ ಅಥವಾ ಮಾತಾಡಿಸುತ್ತಿರುವವರು ಅನುಕರಿಸುವ ನಿಯಮವೊ ಎಂದು!

(ಇನ್ನೂ ಇದೆ)
___________