ಬೀಡಿ ಪುರಾಣ
ಬೀಡಿ ಒಂದು ರೀತಿ ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಸಿಗರೇಟಿನ ಜತೆ ಪೈಪೋಟಿಗಿಳಿದಂತೆ ಬಿಕರಿಯಾಗುವ ಇದರ ಮಹಿಮೆ ಬರಿಯ ಮಾತುಗಳಲ್ಲಿ ವರ್ಣಿಸಲದಳ. ಸೇದುವವರಿಗೆ ಆನಂದ ಕೊಡುವ ಹಾಗೆಯೆ ಸೇದಿ ಸೇದಿ ತಾವೆ ಸೇದಿ ಹೋದವರಿಗೆ ದಮ್ಮು ಕೆಮ್ಮೆಲ್ಲಾ ಬರಿಸಿ ಒದ್ದಾಡಿಸಿ ಆಸ್ಪತ್ರೆ ಸೇರಿಸುವವರೆಗೆ ಇದು ವ್ಯಾಪಕ. ಕೆಲವೊಮ್ಮೆ ಕೆಮ್ಮುತಿದ್ದರೂ ಬಿಡದೆ ಹಚ್ಚಿಕೊಂಡು ಸೇದುವಷ್ಟು ಪ್ರಖರ ಇದರ ಹುಚ್ಚು. ಸಿಗರೇಟು ನಗರ ಜೀವನದ ಪ್ರತೀಕವಾದರೆ ಬೀಡಿ ಹಳ್ಳಿ ಗ್ರಾಮಗಳ ಪ್ರತೀಕವಾಗುತ್ತದೆ. ಸಿಗರೇಟು ವಿದೇಶಿ ಸಂಸ್ಕೃತಿ ಸೂಚಕವಾದರೆ ಬೀಡಿ ಸ್ವದೇಶಿ ಮಾಲಿನ ದ್ಯೋತಕವಾಗುತ್ತದೆ; ಸಿಗರೇಟು ತುಟ್ಟಿಯ ಕುರುಹಾದರೆ ಬೀಡಿ ಅಗ್ಗದ ಮಾಲಿನ ಗುರುತಾಗುತ್ತದೆ. ಹೀಗೆ ಹೇಗಾದರೂ ಸರಿ ತನ್ನ ಛಾಪನ್ನು ಒಂದಲ್ಲ ಒಂದು ರೀತಿ ತೋರಿಸಿಕೊಳ್ಳುವ ಬೀಡಿ ತನ್ನದೆ ಆದ ವಿಶಿಷ್ಟ ಗುಣಗಳುಳ್ಳ ಸ್ವತಂತ್ರ ಜೀವಿ. ಬೇಕೆಂದಾಗ ಆರುವ ಹತ್ತಿಕೊಳ್ಳುವ ಸ್ವತಂತ್ರ ಚಿಂತಕ. ಚೋಟುದ್ದವಿದ್ದರೂ ಇದರ ಪ್ರಖ್ಯಾತಿ 'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬಂತೆ. ಅಂತಹ ಬೀಡಿಯ ಕಿರು ಗುಣಗಾನದ ಕಾಣಿಕೆ ಈ ಪದ್ಯ- 'ಬೀಡಿ ಪುರಾಣ'
(ಬೀಡಿಯ ಚಿತ್ರದ ಕೃಪೆ: ಅಂತರ್ಜಾಲದಿಂದ)
ಬೀಡಿ ಪುರಾಣ
_________________
ಸುರುಳಿ ಸುತ್ತಿದ ತುಂಡೆಲೆ
ತಂಬಾಕ ಸೊಪ್ಪು ಒಳಗಿರಲೆ
ಮೇಲೊಂದೆಳೆ ಉಡಿದಾರ
ಮೋಟು ಬೀಡಿಯವತಾರ ||
ತಲೆ ದಪ್ಪ ಮಡಚಿದ ಸುರುಳಿ
ಕೋನ ತೆಳು ಬಾಲದ ಮಳ್ಳಿ
ಮೂರಿಂಚಿನ ಬಡಕಲ ನಡು
ಸಪೂರ ವಿಶ್ವ ಸುಂದರಿ ಬಿಡು ||
ಪಕ್ಕಾ ಹೆಣ್ಣಿನ ಹಾಗೆ ಜಾಡು
ಹತ್ತಿ ಆರುವಂತವರ ಮೂಡು
ಸೇದಿ ಹೊಡೆದು ಮಸ್ಕಾ ಸತತ
ಮತ್ತೆ ಗೀರುತ ಬೆಂಕಿಕಡ್ಡಿ ವ್ಯರ್ಥ ||
ಸೇದುತಿದ್ದರೆ ಸ್ವರ್ಗಕೆ ಕಿಚ್ಚಂತೆ
ಅಂದುಕೊಂಡೆ ಕಟ್ಟು ಹಚ್ಚುವರಂತೆ
ಬಿಡಿಗಾಸಿಗು ಸಿಗೊ ಕುಳ್ಳು ಕಳ್ಳಿ
ದುಬಾರಿ ಸಿಗರೇಟು ಥಳುಕ ಮಳ್ಳಿ ||
ಸಿಗರೇಟು ಬರಿ ನೋಡಲೆ ಚಂದ
ಬೀಡಿಯ ಸವಿ ಸೇದುವ ಆನಂದ
ಸೇದದಿರೆ ತಾನೆ ಆರಿಹೋಗೊ ಜಿಪುಣ
ತುಟ್ಟಿ ಕಾಲದಲಿ ಕಾಸುಳಿಸೊ ನಿಪುಣ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಬೀಡಿ ಪುರಾಣ
ಪದ್ಯ ಚೆನ್ನಾಗಿದೆ . ಬೀಡಿ ಕಟ್ಟುವ ಉದ್ಯೋಗ ನಮ್ಮೂರ ಹೆಣ್ಣು ಮಕ್ಕಳ ಜೀವನಾಧಾರವಾಗಿದೆ. ಗಂಡ ಬೀಡಿ ಸೇದಿ ಹಣ ಖರ್ಚು ಮಾಡಿದರೆ ಹೆಂಡತಿ ಬೀಡಿ ಕಟ್ಟಿ ಮನೆ ಮಕ್ಕಳನ್ನು ಸಾಕುತ್ತಾಳೆ.
In reply to ಉ: ಬೀಡಿ ಪುರಾಣ by basho aras
ಉ: ಬೀಡಿ ಪುರಾಣ
ಶೋಭಾರವರೆ ನಿಮ್ಮ ಮಾತು ಅವರ ಬದುಕಿನ ವಿಪರ್ಯಾಸದತ್ತ ಗಮನ ಸೆಳೆಯಿತು - ಸೇದಿ ಹಾಳಾಗುವ ಗಂಡದಿರೆ ಈ ಹೆಣ್ಣುಗಳ ಕುಟುಂಬ ನಡೆಸುವ ಆಧಾರ ಉದ್ಯಮಕ್ಕೆ ಗಿರಾಕಿಗಳು! ಬದುಕಲು ಬೀಡಿ ಕಟ್ಟಬೇಕು ಆದರೆ ಅದೆ ಬೀಡಿಯೆ ಅವರ ಸಂಸಾರ ನುಂಗುವುದನ್ನು ಸಹಿಸುತ್ತ ಹೋರಾಡುವ ವಿಪರ್ಯಾಸ! ನಿಮ್ಮ ಮಾತಿಂದ ಮೂಡಿದ ಚಿತ್ರಕ್ಜೆ, ಮತ್ತಷ್ಟು ಸಾಲು ಸೇರಿಸಿದ್ದೇನೆ ಬೀಡಿ ಪುರಾಣಕ್ಕೆ! ಪ್ರತಿಕ್ರಿಯೆಗೆ ಧನ್ಯವಾದಗಳು :-)
.
ಬೀಡಿ ಸೇದೊ ಶೋಕಿ ಕಾಸಿಗೆ
ಬೀಡಿ ಕಟ್ಟೊ ಹೆಣ್ಣುಗಳ ಜೋಳಿಗೆ
ಮಕ್ಕಳು ಮರಿ ಸಾಕುವ ಬಾಳು
ಸೇದಿ ಕೂತ ಪತಿ ರೋಗಕು ಕೂಳು ||
.
ಸೇದಿಸಿ ಮುರಿದು ಕೂರಿಸೊ ಬೀಡಿ
ಬದುಕಿಗಾಧಾರವಾಗೊ ಗಡಿಬಿಡಿ
ವಿಪರ್ಯಾಸಕೆಲ್ಲಿ ಕೊನೆ ಅನಿವಾರ್ಯ
ಸೇದೊ ಗಂಡಗಳೆ ಜೀವನೋಪಾಯ ||
.
ಹಾಳ್ಬದುಕಿಗೆ ಬೀಡಿ ಕಟ್ಟುವ ಕಾಟ
ತಮ್ಮ ಬದುಕಿಗೆ ತಾವೆ ಕಟ್ಟಿದ ಚಟ್ಟ
ಹೊಯ್ದಾಟವೆ ಬಿಸಿ ತುಪ್ಪದ ಹಾಗೆ
ಒಲೆಗಿಟ್ಟ ಪಾತ್ರೆ ದೂಷಿಸಲೆಂತು ಹೊಗೆ ||
ಉ: ಬೀಡಿ ಪುರಾಣ
ಬೀಡಿ ಪುರಾಣ ಚೆನ್ನಾಗಿದೆ,,,, ಕೆಲವು ಹಳ್ಳಿಗಳಲ್ಲಿ ಅನೇಕ ಹೆಣ್ಣು ಮಕ್ಕಳು ಮನೆಯಲ್ಲಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಾರೆ, ಅವರ ಬದುಕಿನ ಆಧಾರ ಸ್ಥಂಬ ಈ ಚಿಕ್ಕ ಬೀಡಿ,,,,,ವಿಷಯದ ಆಯ್ಕೆಯೇ ವಿಭಿನ್ನವಾಗಿ ಸುಂದರವಾಗಿದೆ.
ಧನ್ಯವಾದಗಳೊಂದಿಗೆ ನವೀನ್ ಜೀ ಕೇ
In reply to ಉ: ಬೀಡಿ ಪುರಾಣ by naveengkn
ಉ: ಬೀಡಿ ಪುರಾಣ
ನವೀನರೆ ನಿಮ್ಮ ಮಾತು ನಿಜ. ಯಾವುದೆ ಹೆಚ್ಚಿನ ತರಬೇತಿ ಬೇಡದ ಬೀಡಿ ಕಟ್ಟುವ, ಗಂಧದ ಕಡ್ಡಿ ತೀಡುವಂತ ಉದ್ಯಮಗಳು ಎಷ್ಟೊ ಹೆಣ್ಣುಗಳ ಜೀವನೋಪಾಯವಾಗಿರುವುದು ವ್ಯಂಗ್ಯವೊ, ವಿಪರ್ಯಾಸವೊ - ವಾಸ್ತವದ ಚಿತ್ರ. ಮನೆ ಮನಸು ಮುರಿಯುವುದರೆ ಜತೆಜತೆಗೆ ಮನೆ ಉಳಿಸುವ ಮತ್ತೊಂದು ಆಯಮದಲ್ಲೂ ಕೆಲಸ ಮಾಡುವ ವೈಚಿತ್ರದ ನಡುವೆ ಹೇಗಾದರೂ ಏಗುತ್ತ ಬದುಕು ತೂಗಿಸುವ ಆ ಜೀವಿಗಳ ಹೋರಾಟಕ್ಕೆ ನಮನ. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು :-)
ಉ: ಬೀಡಿ ಪುರಾಣ
ನನ್ನ ಸ್ನೇಹಿತ ಮೊದಲು ಬೀಡಿ ಸೇದುತ್ತಿದ್ದವನು ಬಡ್ತಿ ಹೊಂದಿದ ಕೂಡಲೇ ಸಿಗರೇಟು ಸೇದಲು ಪ್ರಾರಂಭಿಸಿದ, ಅಂತಸ್ತಿಗಾಗಿ! ಬೀಡಿಯ ಮಜಾ ಬರುತ್ತಿಲ್ಲವೆಂದು ಗೊಣಗುತ್ತಿದ್ದ!
In reply to ಉ: ಬೀಡಿ ಪುರಾಣ by kavinagaraj
ಉ: ಬೀಡಿ ಪುರಾಣ
ಹೌದು ಕವಿಗಳೆ, ಬೀಡಿಯ ಕುರಿತಾದ ಇದೆ ಅಭಿಪ್ರಾಯವನ್ನು ಇತರರಲ್ಲೂ ಕೇಳಿದ್ದೇನೆ. ಆಂದಹಾಗೆ ಸಿಗರೇಟು ಸೇದುವ ಮಹಾಶಯರೂ ಹೊತ್ತಿಲ್ಲದ ಹೊತ್ತಲ್ಲೊ, ಅಥವಾ ಬೇಕಾದ ಸಿಗರೇಟು ಸಿಗದ ಕಡೆ ಬೇರೆ ದಾರಿಯಿಲ್ಲದೆ ಬೀಡಿಗೆ ಶರಣಾಗಿ ನಂತರ ಅದನ್ನೂ ಗುಟ್ಟಾಗಿ ಆಗೀಗೊಮ್ಮೆ ಸೇದಿದ್ದನ್ನು ಕಂಡಿದ್ದೇನೆ. ಬೆರಳ ತುದಿಯಿಂದ ಬೀಡಿ ಕಟ್ಟನ್ನು ಕುಟ್ಟುತ್ತ, ಬೀಡಿಯೊಂದನ್ನು ಮೇಲೆ ಎಳೆದು ಹಚ್ಚುವ ವಯಸ್ಕರ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ - ಸಿಂಗಪುರದಲ್ಲಿ ಬೀಡಿ ಸೇದುವವರು ಸಿಗದಿದ್ದರೂ ಕೂಡ (ಬೀಡಿಯೂ ಸಿಗುವುದಿಲ್ಲ)
- ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು