ಕಥೆಯೊಂದು ಪೂರ್ತಿಯಾಗಿದ್ದು ....

ಕಥೆಯೊಂದು ಪೂರ್ತಿಯಾಗಿದ್ದು ....

ಈ ಜನ, ಗಲಾಟೆ, ಗಡಿಬಿಡಿಗಳನ್ನ ಎಷ್ಟೂಂತ ನೋಡೋದು ಅನ್ನಿಸಿ ಮುಖಕ್ಕೆ ಮೋಡದ ಮುಸುಕು ಹೊದ್ದು ಉದಾಸೀನಗೊಂಡ ಆಕಾಶ; ಅತ್ತ ಬಿಸಿಲೂ ಅಲ್ಲದೆ, ಇತ್ತ ತಂಪೂ ಇಲ್ಲದೆ ಇದ್ದ ಈ ವಾತಾವರಣದಲ್ಲಿ ಗಿಜಿಗುಡುತ್ತಿದ್ದ ಬಸ್ ಸ್ಟ್ಯಾಂಡು; ಎಲ್ಲಿ ನೋಡಿದರೂ ಜನ,

ಎಲ್ಲರೂ ಎಲ್ಲಿಗೋ ಹೊರಟವರು
ಎಲ್ಲಿಗೋ. . . ?
ಎಲ್ಲರೂ ಎಲ್ಲಿಂದಲೋ ಬಂದವರು,
ಎಲ್ಲಿಂದಲೋ. . .?

ಅಲ್ಲಿನ್ನೂ ಸ್ಟ್ಯಾಂಡಿಗೆ ಬರುತ್ತಿರುವ ಬಸ್ಸಿಗೆ, ನಿಲ್ಲುವ ಮೊದಲೇ ಮುಗಿಬಿದ್ದ ಜನ; ಕಿಟಕಿಗಳಲ್ಲೇ ಅರ್ಧ ನುಗ್ಗಿ ತಮ್ಮ ಗುರುತು ಸಾರುವ ಬ್ಯಾಗು, ಕರ್ಛೀಫ್, ಕಿರುಸಹಿ ಹಾಕಿದ ಪತ್ರಿಕೆಗಳನ್ನು ಸೀಟಿನಲ್ಲಿ ಸ್ಥಾಪಿಸಿ ನಿಸೂರಾದವರು; ನುಗ್ಗಿ ಹೋಗಲಾಗದೆ ಹಿಂದೆ ನಿಂತು ಆತಂಕದ ಕಂಗಳಿಂದ ನೋಡುತ್ತಿರುವ ಚಂದದ ಹುಡುಗಿಯ ಹಣೆಯ ಮೇಲೆ ಬೆವರ ಸಾಲು; ಮಧಾಹ್ನ ಯಾವಾಗಲೋ ಬರುವ ಬಸ್ಸಿಗೆ ಕಾಯುತ್ತಾ ಅಲ್ಲೆ ಬೆಂಚಿನ ಮೇಲೇ ಪವಡಿಸಿರುವ ಯಾವೂರಿನದೋ ಅಜ್ಜ; ತಂದ ಬುತ್ತಿಯನ್ನು ಬಿಚ್ಚಿ ಪುಟ್ಟಮಕ್ಕಳಿಗೆ ತಿನ್ನಿಸುತ್ತಾ ಕುಳಿತ ಅಮ್ಮ; ಯಾರಾದರೂ ಹುಡುಗಿ ಒಮ್ಮೆ ನಕ್ಕರೂ ಸಾಕು ಧನ್ಯವೆಂಬಂತೆ ಗೋವಿಂದನ ಸ್ಟೈಲಲ್ಲಿ ಓಡಿಯಾಡುವ ಹುಡುಗರು; ಇನ್ನೂ ಕೊಂಚ ಸಿಂಡರಿಸಿದರೆ ಸಾಕು ಸೇರಿಕೊಂಡೇ ಹೋಗಿಬಿಡಬಹುದಾದ ಹುಬ್ಬಿನ ಕಂಟ್ರೋಲರ್ ಗಳು; ದೊಡ್ಡ ಲಗ್ಗೇಜು ಸಿಕ್ಕರೆ ಇವತ್ತು ಮಗನ ಯೂನಿಪಾರಮ್ಮು ಆ ಟೇಲರಿಗೆ ಹೊಲಿಯಕ್ಕೆ ಕೊಡಬೇಕು ಅಂತ ಐಡಿಯಾ ಹಾಕುತ್ತಿರುವ ಕೂಲಿಯವನು; ಅಮ್ಮನ ಕರಿಮಣಿ ಹಿಡಿದು ಆಡುತ್ತಲೇ ನಿದ್ದೆ ಹೋಗಿರುವ ಎಳೆಮಗು; ಒಂದೇ ಎರಡೇ? ಎಲ್ಲ ಚಹರೆಗಳೂ ಅಲ್ಲಿದ್ದವು, ನಾನು ಕಾಯುತ್ತಿದ್ದ ಚಹರೆಯ ಹೊರತಾಗಿ!

ಅರೆ ಅಲ್ಲಿ ಹೊಳೆದಿದ್ದೇನು? ಓಹ್ ಅವನ ಕಣ್ಣ ನಕ್ಷತ್ರವೇ. ಅಲ್ಲಿ ಬರುತ್ತಿರುವುದು ಚೈತ್ರನೇ. ಅವನು ನನ್ನೆದುರು ಇನ್ನೂ ಸರಿಯಾಗಿ ಕಾಲೂರಿ ನಿಂತಿರಲೂ ಇಲ್ಲ, ಅಷ್ಟರಲ್ಲಿ ಮಳೆ ಹನಿಯತೊಡಗಿತು.

"ತುಂಬ ಕಾದೆಯಾ ವರ್ಷಾ" ಅಂದವನ ಮೃದು ಮಾತಿನಲ್ಲಿ, "ಕಾದು ಬೇಜಾರಾಯಿತಾ" ಅನ್ನುವ ಒಳದನಿಯಿತ್ತು. ನಾನು ತಲೆಯಲ್ಲಾಡಿಸಿ ನಕ್ಕೆ. ಅವನು ಹಗುರಾದ. ಅಷ್ಟರಲ್ಲಿ ನಮ್ಮ ಬಸ್ಸು - ಅದೇ ನಾವು ಹೋಗಬೇಕಿದ್ದ ಬಸ್ಸು ಬಂತು. ಲಕ್ಷುರಿ ಬಸ್ಸಾದದ್ದರಿಂದ ನಾವು ಕಿಟಕಿಯೊಳತೂರಬೇಕಾದ ಅವಶ್ಯಕತೆ ಬೀಳಲಿಲ್ಲ.

ನಾವೆಲ್ಲಿ ಹೊರಟಿದ್ದೂಂತಲೆ ಹೇಳಲಿಲ್ಲ ಅಲ್ಲವೇ? ಕೈ ಹಿಡಿದು ಜಗ್ಗಿ ತಲೆತಿನ್ನುವ ಸಂಬಂಧ ಮಾಲೆಗಳನ್ನು ಕಟ್ಟಿ ರೂಮಿನಲ್ಲಿಟ್ಟು, ಹಗಲು-ರಾತ್ರಿ, ಆಫೀಸು-ಮನೆ ಎಂಬ ಬೇಧವಿಲ್ಲದೆ ದೇಶಕಾಲಾತೀತವಾಗಿ ಕಥಕ್ಕಳಿಯಾಡುವ ಬೇಸರಕ್ಕೆ ಕೋಳ ಹಾಕಿ, ಅಡ್ಜಸ್ಟ್ ಮೆಂಟು ಎಂಬ ಕೊಂಡಿ ಕಳಚಿ, ಪ್ರಶ್ನೆಗಳ ಬೇಲಿ ದಾಟಿ, ಒಳದನಿಯ ಮ್ಯಾಪು ಬರೆದಿಟ್ಟ ದಾರಿಯಲ್ಲಿ, ಹೃದಯ ಕಂಪಿಸಿ ಕೈದೋರಿದ ಕಡೆ, ಅಂತರಂಗದ ಹಾಡಿನ ಸ್ವರ ಎಳೆದ ಕಡೆ ಹೊರಟಿದ್ದೆವು.

ದೂರ. . ತುಂಬ ದೂರ - ಕತ್ತಲೂ ಬೆಳದಿಂಗಳೂ ಕೈಕೈಸೇರಿಸಿ ಹಸಿರು ಹೊದ್ದ ಕಾಡ ಮೇಲೆ ನರ್ತಿಸುವಲ್ಲಿ, ಮುಂಜಾವು ತನ್ನ ತಂಪು ಮಂಜುಹನಿಗಳಿಂದ ಬೆಟ್ಟದ ಮುಖ ತೊಳೆಯುವಲ್ಲಿ, ದಿನ ರಾತ್ರಿಗಳು ಮಳೆಯ ರಾಗಗಳಿಗೆ ತಲೆದೂಗುವಲ್ಲಿ, ಕತ್ತಲೆ ತುಂಬಿದ ಕಣ್ಣಲ್ಲೂ ಬೆಳಕಿನ ಕಿರಣ ಪ್ರತಿಫಲಿಸುವಲ್ಲಿ, ಮೌನಕ್ಷಣಗಳ ನೂಲು ಅಂತರಂಗಗಳ ನಡುವೆ ಸೇತುವೆ ನೇಯುವಲ್ಲಿ, ಬೇಕೆಂದಾಗ ಅಳಲಾಗುವಲ್ಲಿ, ಅಳುತ್ತ ಅಳುತ್ತಲೇ ನಗುವಿನ ಮೊಗ್ಗರಳುವಲ್ಲಿ, ಬದುಕಬೇಕು ಎಂಬ ಅನಿಸಿಕೆಯ ಗಾಳಿ ಬೀಸುವಲ್ಲಿ - ನಮ್ಮ ಮನದಂಗಳಕ್ಕೆ ಹೊರಟಿದ್ದೆವು.

ಯಾಕೆ ಅಂದಿರಾ?

ನಮಗೆ ತುಂಬ ಹೊತ್ತು ಸುಮ್ಮನೆ ಕೂರಬೇಕಿತ್ತು, ಸ್ವಲ್ಪ ಹೊತ್ತು ಮಾತಾಡಬೇಕಿತ್ತು, ಒಂಚೂರು ಅವನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಬೇಕಿತ್ತು. ಅವನ ಕಂಗಳನ್ನ ನೇವರಿಸಬೇಕಿತ್ತು. ಅವನು ನನ್ನ ತಲೆ ಬಾಚಬೇಕಿತ್ತು. ನಾನು ಅವನಿಗೆ ಶೇವ್ ಮಾಡಬೇಕಿತ್ತು 'ಇಷ್ಟೆ ಸಾಕು' ಅಂತ ನಾನು ಹಟ ಮಾಡಿದಾಗ ಅವನು ಗದರಿಸಿ ನನ್ನ ಬಾಯಿಗೆ ತುತ್ತಿಡಬೇಕಿತ್ತು. ಬೇಡಬೇಡವೆಂದು ಕಾಲು ಮಡಚಿ ಕುಳಿತ ಅವನ ಕಾಲುಗಳನ್ನು ನಾನು ಎಳೆದು ಬಿಡಿಸಿ ಒತ್ತಿಕೊಡಬೇಕಿತ್ತು.

ಹೀಗೇ . . . ಮಾತಾಡದೇ ಮಾತಾಡದೇ.. ಒಂದೆರಡು ಪದವಾಡಿ... ಮತ್ತೆ ಸುಮ್ಮನಾಗಿಬಿಡಬೇಕಿತ್ತು. ನಾನು ಅಳಬೇಕಿತ್ತು. ಅವನು ಕಣ್ಣೊರೆಸಬೇಕಿತ್ತು. ಅವನ ಹನಿಗಣ್ಣಿಂದ ಧುಮ್ಮಿಕ್ಕುವ ಧಾರೆಗೆ ನಾನು ಬೊಗಸೆಯ ಕಟ್ಟೆ ಕಟ್ಟಬೇಕಿತ್ತು. ಸ್ವಲ್ಪ ಹೊತ್ತಾದ ಮೇಲೆ ಅವನು ನಂಗೆ ಕಥೆ ಹೇಳಬೇಕಿತ್ತು. ಆ ಕಥೆ ಮುಗಿದ ಮೇಲೆ ನಾನು ಇನ್ನೊಂದು ಕಥೆ ಹೇಳು ಅಂತ ಹಟ ಮಾಡುವುದಿತ್ತು.

ಹೀಗೆಲ್ಲ ಅಂದುಕೊಂಡು ಹೊರಟೆವು. ಅಲ್ಲಲ್ಲ ಬಸ್ಸು ಹೊರಡ್ತು. ಹೊರಗೆ ಜಿಟಿಜಿಟಿ ಮಳೆ. ಊರ ಲಕ್ಷಣಗಳೆಲ್ಲ ಮುಗಿದು ಗುಡ್ಡ ಕಾಡುಗಳ ಚಿತ್ರ ಮೂಡಿ ಕೆಲವು ಗಂಟೆಗಳಲ್ಲೆ ನಾವು ಅಲ್ಲಿದ್ದೆವು. ಪ್ರಯಾಣ ಬೆಚ್ಚಗಿತ್ತು - ಜೊತೆಗೆ ಚೈತ್ರನಿದ್ದನಲ್ಲಾ;

ಹೊರಗೆ ಕಂಡ ನೋಟ ಹಚ್ಚಗಿತ್ತು - ಮಳೆ ಬರುತ್ತಿತ್ತಲ್ಲಾ!

ಆ ಜಾಗ ತುಂಬ ಏನೂ ಬದಲಾಗಿರಲಿಲ್ಲ. ಹನ್ನೆರಡು ವರ್ಷಗಳ ಹಿಂದಿನ ರೇಖೆಗಳು ಇಂದಿಗೂ ಇಣುಕುತ್ತಿದ್ದವು. ಆವತ್ತಿನಂತೆ ಇವತ್ತು ಯಾವ ಹೋಟೆಲು ಅಂತ ಪ್ರಶ್ನೆಯಿರಲಿಲ್ಲ. ನಾವು ಆಟೋ ಹತ್ತಿ ವಿಳಾಸ ಹೇಳಿದೆವು. ದಾರಿಯುದ್ದಕ್ಕೂ ಇಬ್ಬರಿಗೂ ಹಳೆಯ ನೆರಳುಗಳನ್ನು ಹುಡುಕುವುದೇ ಕೆಲಸ.

ಇಳಿದು ಆ ಕಾಟೇಜಿನ ರೂಮೊಳಹೊರಟ ಇಬ್ಬರಿಗೂ ಅವತ್ತಿನದೇ ಸಂಭ್ರಮ. ಒಳನಡೆದವರೇ ಬ್ಯಾಗು ಮಂಚದ ಮೇಲೆ ಹಾಕಿ ಕಿಟಕಿಯವಾಡದಲ್ಲಿ ಇಬ್ಬರೂ ಎದುರುಬದುರಾಗಿ ಕೂತುಬಿಟ್ಟೆವು. ನಾಲಿಗೆ ಇದು ನನ್ನ ಕೈಯಲ್ಲಾಗುವ ಮಾತಲ್ಲ ಎಂಬಂತೆ ಬಾಯಂಗಳಕ್ಕೆ ಕಚ್ಚಿಕೊಂಡು ಕೂತಿತ್ತು. ಕಣ್ಣು ಕುಶಲೋಪರಿಗೆ ತೊಡಗಿದ್ದು, ಈ ಇಡೀ ಹನ್ನೆರಡು ವರ್ಷಗಳ ಹಾದಿಯ ಮಗ್ಗುಲುಮಗ್ಗುಲನ್ನೂ ಪರಿಚಯ ಮಾಡಿಕೊಳ್ಳುತ್ತಿತ್ತು.

ಕಿಟಕಿಯ ಆಚೆ, ಗುಡ್ಡದ ಹಿಂದೆ ಓಡಿಹೋಗಿ ಅಡಗಿಕೊಂಡ ಸೂರ್ಯ. ಅವನನ್ನೇ ಅಟ್ಟಿಸಿಕೊಂಡು ಬಂದ ಚಂದಿರ ಅಲ್ಲೆ ಕೆಲಕ್ಷಣ ದಣಿವಾರಿಸಿಕೊಳ್ಳಲು ನಿಂತ.

"ತುಂಬ ಕಾದೆಯಲ್ಲಾ . . ." ಅಂದವನ ಅಳುದನಿಯಲ್ಲಿ " ತುಂಬ ಬೇಜಾರಾಯಿತಲ್ಲಾ ..." ಅನ್ನುವ ಒಳದನಿಯಿತ್ತು. ನಾನು ತಲೆಯಲ್ಲಾಡಿಸಿ ನಕ್ಕೆ. ಬೇಡವೆಂದರೂ ನನ್ನ ಕಣ್ಣಿಂದ ಎರಡು ಹನಿ ಉದುರಿಯೇ ಬಿಟ್ಟಿತು. ಚೈತ್ರನ ಕಣ್ಣಲ್ಲಿ ಮಳೆಗಾಲದ ಜೋಗ. ಅವನನ್ನೆಳೆದು ತೊಡೆಯ ಮೇಲೆ ಮಲಗಿಸಿ ತಟ್ಟತೊಡಗಿದೆ.

ಆವತ್ತು ನಾನು ಹೀಗೆ ಅವನ ತೊಡೆಯ ಮೇಲೆ ಮಲಗಿಕೊಂಡು ಕಥೆ ಕೇಳುತ್ತಿದ್ದೆ. ಕೇಳುತ್ತಾ ಕೇಳುತ್ತಾ ನಂಗೆ ನಿದ್ದೆ ಬಂದುಬಿಟ್ಟಿತ್ತು. ಬೆಳಗ್ಗಿನವರೆಗೂ ನನ್ನ ಎಬ್ಬಿಸದೆ ಸುಮ್ಮನೆ ತಟ್ಟುತ್ತ ಕೂತಿದ್ದ ಅವನು. ಆಮೇಲೆ ಟೈಮಿರಲಿಲ್ಲ, ಊರಿಗೆ ವಾಪಸ್ ಹೊರಡಬೇಕಿತ್ತು. ಬಸ್ಸಲ್ಲಿ ಎಷ್ಟು ಪೀಡಿಸಿದರೂ ಅವನು ಕಥೆ ಪೂರ್ತಿಮಾಡಲಿಲ್ಲ. ಮತ್ತೆ ಅಲ್ಲಿಗೆ ಹೋದಾಗಲೆ ಹೇಳುತ್ತೇನೆಂದಿದ್ದ. ಆಮೇಲೆ ನಾವು ಸಿಕ್ಕಿದ್ದೇ ನಿನ್ನೆ.

ಅವನಿಗೆ ಎಚ್ಚರಾಯಿತು. ತಾನೆದ್ದು ನನ್ನ ಮಲಗಿಸಿ ತಟ್ಟತೊಡಗಿದ. ನಾನು ಅವನ ಕೈತಡೆದು ಹೇಳಿದೆ. "ನನ್ನ ಮಲಗಿಸಬೇಡ, ಆ ಕಥೆ ಪೂರ್ತಿ ಹೇಳಬೇಕು ನೀನು" ಅಂತ. ಅವನು ತುಂಬ ಹೊತ್ತಿನವರೆಗೂ ಮೆಲುದನಿಯಲ್ಲಿ ಕತೆ ಹೇಳುತ್ತಿದ್ದ.

ಯಾವಾಗ ನಿದ್ದೆ ಬಂತೋ , ಎಚ್ಚರಾದಾಗ ಚುಮುಚುಮು ಬೆಳಗು. ಮಳೆಗಾಲವಾದ್ದರಿಂದ ಮರಗಿಡಗಳ ಹಸೀ ವಾಸನೆ. ನಾನು ಎದ್ದು ಕೂತು ಅವನಿಗೆ ನನ್ನ ಮಗನ ವಿಷಯ ಹೇಳಿದೆ. ನನ್ನ ಮಗ ಅವನನ್ನು ಎಷ್ಟು ಹೋಲುತ್ತಾನೆ, ಹೇಗೆ ಅವನ ತರವೇ ಮಾತಾಡುತ್ತಾನೆ, ಅವನ ಹಾಗೆಯೇ ಬರೆಯುತ್ತಾನೆ ಮತ್ತು ನಂಗೆ ಕತೆ ಹೇಳ್ತಾ ಇರ್ತಾನೆ ಅಂತ ಸಾಭಿನಯವಾಗಿ ವಿವರಿಸಿದೆ.

ಕೇಳುತ್ತಾ ಹನಿದುಂಬಿದ ಕಣ್ಣೊರೆಸಿಕೊಂಡ ಚೈತ್ರ ನಕ್ಕು ಅವನ ಮಗಳ ಪರಿಚಯ ಹೇಳಿದ. ಅವಳು ಎಷ್ಟು ನನ್ನ ಹಾಗೇ ಇದ್ದಾಳೆ, ಹ್ಯಾಗೆ ನನ್ನ ತರವೇ ಮಾತಾಡುತ್ತಾಳೆ, ಅವನನ್ನು ಗೋಳುಗುಟ್ಟಿಸುತ್ತಾಳೆ, ಊಟಮಾಡಲು ಹಟ ಮಾಡುತ್ತಾಳೆ, ಅವನ ಶೇವ್ ಮಾಡುತ್ತಾಳೆ ಅಂತೆಲ್ಲ ಹೇಳಿ ನನ್ನ ಕಣ್ಣೊರೆಸಿ ಮುತ್ತಿಟ್ಟ.

ಆಮೇಲೆ ಗಂಭೀರವಾಗಿ ಹೇಳಿದ.

" ಬರೀ ಕತೆ ಹೇಳಿದ್ದು ಸಾಕು ವರ್ಷಾ . ನಾವು ಇಲ್ಲೇ ಇರೋಣ ಇನ್ನು.

ತುಂಬ ಮಾತನಾಡಿಕೊಂಡು. . . ಮನಸೋ ಇಚ್ಛೆ ನಕ್ಕೊಂಡು. . ಕತೆ ಹೇಳಿಕೊಂಡು. .. ಕಣ್ಣೊರೆಸಿಕೊಂಡು... ಒಬ್ಬರಿನ್ನೊಬ್ಬರ ಕೈ ಹಿಡಕೊಂಡು. . .ಸುಮ್ಮನಿದ್ದುಕೊಂಡು.. .

ಅಂತರಂಗದ ಹಾಡಿಗೆ ತಾಳ ಹಾಕಿಕೊಂಡು ಇದ್ದುಬಿಡೋಣ. ಕಾದಿದ್ದೆಲ್ಲಾ ಆಗೋಯ್ತು. ನಿಜವಾಗ್ಲೂ ನಮ್ಗೆ ಈಗ ಎರಡು ಮಕ್ಕಳು ಬೇಕು. ನಮ್ಮ ಮನದಂಗಳದಿಂದ ಅವರನ್ನ ನಮ್ಮ ಮನೆಯಂಗಳಕ್ಕೆ ಕರೆತರೋಣ ಆಯ್ತಾ" ಅಂದವನ ಕಂಗಳನ್ನೆ ನೋಡಿದೆ. ಅವನ ಕಣ್ಣಂಚಿನಲ್ಲಿ ನಿಂತ ನೀರಲ್ಲಿ ಬೆಳಗಿನ ಸೂರ್ಯ ಪ್ರತಿಫಲಿಸುತ್ತಿದ್ದ.

" ಓಹೋ, ನಾನಾಗ್ಲೇ ಅವರಿಬ್ಬರನ್ನ ತೂಗಲು ಜೋಕಾಲಿ ಕಟ್ಟುತ್ತಿದ್ದೇನೆ " ಅಂದೆ ನಗುತ್ತಾ. ಅವನು ನನ್ನನ್ನೆತ್ತಿಕೊಂಡು ತೂಗಿದ. ಆಹ್ಲಾದಕರ ಗಾಳಿಯಲೆಯಲ್ಲಿ, ಪ್ರೀತಿಯ ಹೂಗಳ ಪರಿಮಳ ತೇಲಿಬಂತು.

~ ~ ~ * ~ ~ ~

ವರ್ಷಗಳ ಹಿಂದೆ ಬರೆದ ಮಧುರ ಅನುಭೂತಿ ಇದು. ಕತೆ ಅಂತ ಕರೆಯಬಹುದೇನೋ..

Rating
No votes yet