ಮನಮೆಚ್ಛಿದ‌ ಹುಡುಗಿಗೆ ಕರೆಯೋಲೆ

ಮನಮೆಚ್ಛಿದ‌ ಹುಡುಗಿಗೆ ಕರೆಯೋಲೆ

ಹೇ ಪ್ರಿಯತಮೆ,

ಪ್ರೀತಿಯೆಂಬುದು ಮನುಜನಿಗೆ ಕಟ್ಟಿಟ್ಟಬುತ್ತಿ ಎಂಬುದನ್ನು ಅರಿತಿದ್ದೆ. ಆದರೆ ನನ್ನ ಜೀವನದಲ್ಲೂ  ಕಾಲಿಡುತ್ತದೆ, ನಿನ್ನ ರೂಪದಲ್ಲಿ ಧಾವಿಸುತ್ತದೆ ಎಂಬುದನ್ನು  ನಾನು ಕನಸಲ್ಲಿಯೂ ನೆನೆಸಿರಲಿಲ್ಲ. ಗೆಳತಿಯೊಬ್ಬಳು ಶೋಕಿಗೆಂದೇನು ನಾನು ಯೋಚಿಸಿದವನಲ್ಲ ಅಥವಾ ಏನೊಂದನ್ನೂ ಬಯಸಿ ಈ ಪತ್ರವನ್ನು ಬರೆಯುತ್ತಿಲ್ಲ. ನಿನ್ನ ಬಳಿಗೆ ಬೇಡಿಕೆಗಳೇನೂ ಇಲ್ಲ ಆದರೂ ಬಂದು ಮೊಣಕಾಲೂರಿ ಕೈ ಹಿಡಿದು ಹೇಳಬೇಕಿದೆ ಕೆಲವು ವಿಷಯಗಳನ್ನು. ಮಗು ತಾಯಿಗೆ ಹೇಳಬಯಸುವುದನ್ನು ಅತ್ತುಕರೆದು ತಿಳಿಸುತ್ತದೆ. ಗಂಡಸಾಗಿ ಹುಟ್ಟಿರುವ ಕಾರಣ ಅಳಲು ಸಾಧ್ಯವೇ ಅದರೂ ಅಳಬೇಕು ನಿನ್ನೆದುರು, ಕಣ್ಣೀರು ನಿನ್ನ ಕೈ ಸೇರಬೇಕು.

ನಿನ್ನನ್ನು ಹಿಂಬಾಲಿಸುತ್ತಿದ್ದುದು ನಿನಗೆ ತಿಳಿದಿತ್ತು ಎಂದು ಭಾವಿಸುತ್ತೇನೆ. ನೋಡಿದ ದಿನದಿಂದ ನಿನ್ನ ಬಗ್ಗೆ ಯೋಚಿಸಲಾರಂಭಿಸಿದೆ. ಆದರೆ ನನ್ನ ಜೀವನದ ಒತ್ತಡದ ದಿನಗಳವು, ಏನೊಂದನ್ನೂ ನಿರ್ಧರಿಸುವಂತಹ ಸ್ಥಿತಿಯಲ್ಲಿರಲಿಲ್ಲ. ಕೆಲವು ದಿನಗಳಿಂದ ಅದೇನೋ ನಿನ್ನ ನೆನಪುಗಳು ಸಿಕ್ಕಾಪಟ್ಟೆ ಕಾಡುತ್ತಿವೆ. ಹೃದಯ ನಿನ್ನೆಸರನ್ನೇ ಜಪಿಸುತ್ತಿದೆ, ಕನ್ನಡದ ಕೆಲವು ಕೇಳಿದ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಿರುವೆ, ಅದರ ಸಾಲುಗಳಲ್ಲಿ ಮನಸ್ಸು ನಮ್ಮಿಬ್ಬರನ್ನೇ ಜೋಡಿಸುತ್ತಿದೆ. ಅಷ್ಟೇ ಅಲ್ಲ ಕಾಣುವವರೆಲ್ಲರಲ್ಲೂ ನಿನ್ನನ್ನೇ ಕಾಣುತ್ತಿರುವೆ. ಇದು ಸಿನಿಮೀಯವಾಗಿರಬಹುದು ಆದರೆ ನಿಜ, ನನ್ನ ನಿಜ ಭಾವನೆಗಳು. ನಿನಗೂ ಈ ಭಾವನೆಗಳು ಕಾಡಿರಬಹುದೆಂದು ಅಂದುಕೊಳ್ಳುತ್ತೇನೆ. ನಿನ್ನ ಅಂದಕ್ಕೆ ಆತಂಕಗೊಂಡಿರಬಹುದು, ನೋಟಕ್ಕೆ ಭಯಪಟ್ಟಿರಬಹುದು. ಕಾರಣಗಳು ನೂರಿದ್ದರೂ ಅಂದೇ ನಾನಿದನ್ನು ನಿನಗೆ ಹೇಳಬೇಕಿತ್ತು, ಹೇಳದುದಕ್ಕೆ ಕ್ಷಮೆ ಇರಲಿ. ಹೇಳಬೇಕಿದ್ದುದನ್ನೆಲ್ಲಾ ಸಾಲು ಸಾಲುಗಳಾಗಿ, ಕವಿತೆ ಕವಿತೆಗಳಾಗಿ ಒಂದು ಪುಸ್ತಕವಾಗಿ ಬಿಚ್ಚಿಟ್ಟಿರುವೆ. ನನ್ನ ಪ್ರೀತಿಯನ್ನು  ಪೂರ್ಣವಾಗಿ ಬಿಡಿಸಿಡಲು ಈ ಸಾಲುಗಳಾವು ಸಾಲದು. ಮನಸ್ಸಿನಲ್ಲಿರುವುದನ್ನು ಈ  ಕವಿತೆಗಳಾವು ಸಾರದು.

ನಿನ್ನೆಡೆಗೆ ಬರುತ್ತಿರುವೆ, ನಿನ್ನಯ ಇಂದಿನ ಪರಿಸ್ಥಿತಿ ಏನೆಂದು ತಿಳಿದಿಲ್ಲ. ಆದರೂ ನಿನಗೋಸ್ಕರ ಬರುತ್ತಿರುವೆ, ನೀನಿದ್ದ ಕಡೆಗೆ ನನಗೋಸ್ಕರ ಬರುತ್ತಿರುವೆ. ನನಗೆ ಇಂದೂ ಭಯವಿದೆ, ನಿನ್ನ ಅಂದದ ಮೇಲಲ್ಲ, ನೋಟದ ಮೇಲೂ ಅಲ್ಲ, ನಿನ್ನ ಕಳೆದುಕೊಂಡಿರುವೆನೇನೋ ಎಂದು, ಮರಳಿ ಪಡೆಯಲು ಅಸಾಧ್ಯವೇನೋ ಎಂದು. ಮೋಡವಾಗಿದ್ದಿದ್ದರೆ ಬಿಸಿಲಾಗಿ ಕರಗಿಸಿಬಿಡಬಹುದಿತ್ತೇನೋ, ನೀನೋ ವರ್ಷವಾಗಿರುವೆ ನೆನೆಯುತ್ತಿರುವೆ ಭೂಮಿಯಂತೆ ನಿನ್ನನ್ನು. ನೋಡು ನೋಡು!!! ನನ್ನಷ್ಟಕ್ಕೆ ನನ್ನ ದಾರಿಯಲ್ಲಿ ಸುಮ್ಮನೆ ಹೋಗುತ್ತಿದ್ದೆ, ದಾರಿಯನ್ನು ಬದಲಿಸಿ ಹೀಗೆಲ್ಲಾ ಮಾತನಾಡಲು ಆರಂಭಿಸಿರುವೆನು. ಈ ಭಾವನೆಗಳೇ ಪ್ರೀತಿಯೆಂದು ಹೇಳಲಾಗುತ್ತಿಲ್ಲ ಏಕೆಂದರೆ ಈ ನಾಮದೇಯವ  ಸೃಷ್ಟಿಸಿದವನು ನಾನಲ್ಲ, ಬರೀ ಆಕರ್ಷಣೆ ಅಥವಾ ಕಾಮವೆಂದು ಹೇಳುವುದಿಲ್ಲ ಏಕೆಂದರೆ ಆ ಕೋನದಲ್ಲಿ ನನ್ನ ಮನಸ್ಸೆಂದೂ ನಿನ್ನ ಕಡೆ ಕಂಪಿಸಿರಲಿಲ್ಲ.

ಸರಿ ಈ ಎಲ್ಲಾ ಕಥೆಗಳು ಒಂದುಬದಿ ಇರಲಿ. ನಾನೀಗ ನೇರವಾಗಿ ವಿಷಯಕ್ಕೆ ಬರುತ್ತೇನೆ. ಹಾಗೆ ನಗಬೇಡ, ನಾನು ಕೇವಲ ಒಂದು ಹನಿಯಷ್ಟು ,ಒಂದು ಕೂದಲಷ್ಟನ್ನು ಮಾತ್ರ ಹೇಳಿರುವೆ. ಹೇಳಲು ಸಾಗರದಷ್ಟಿದೆ, ನೀಡಲು ಕೇಶದಷ್ಟಿದೆ.

ಎಲ್ಲಿಯಾದರೂ ನನ್ನ ಮೇಲೊಂದು ಚೂರು ಒಲವಿದ್ದರೆ ಬಾ, ಒಂದು ಗುಟುಕು ನೆನಪು ಬಾಕಿ ಇದ್ದರೆ ಬಾ. ವರ್ಷಾನು ವರ್ಷಗಳು ಕಾದಿದ್ದ ನಾನು ಮತ್ತೆ ನಿನಗಾಗಿ ಕಾಯುವೆನು. ನಿನಗೆ ತಿಳಿದಿರುವ ಅದೇ ಆಕಾಶದೀಪದ ಬಳಿ ಹುಣ್ಣಿಮೆ ಗಳಿಗೆಯಲಿ ಚಂದಿರನೊಂದಿಗೆ ಈ ಪ್ರೇಮಿಗಳ ದಿನದಂದು ಕಾಯುವೆನು. ನೀ ಬರುವವರೆಗೂ ಕಾಯುವೆನು.

ನಿನಗಾಗಿ ಕಾಯುತ್ತಿರುವ ಇಂತಿ ನಿನ್ನ  

ಪ್ರೆಮಿ ಸಿದ್ಧ

http://www.cherylanswers.com/wp-content/uploads/Love-letter1-1024x840.jpg

 

Comments