ಬರಿಗುಳಿ ವೃತ್ತಾಂತ

ಬರಿಗುಳಿ ವೃತ್ತಾಂತ

ನನ್ನ ಬಾಲ್ಯವೆಲ್ಲ ವೆಂಕಟಯ್ಯನ ಛತ್ರ ಎಂಬ ಕುಗ್ರಾಮದಲ್ಲಿ ಕಳೆಯಿತು. ಈಗಿನ ಆಧುನಿಕ ಸೌಲಭ್ಯಗಳು ಯಾವುವು ಇರದಿದ್ದರೂ ಈಗ ನಡೆದು ಬಂದ ದಾರಿಯ ಕಡೆ ತಿರುಗಿನೋಡಿದರೆ (ಅಡಿಗರ ಕ್ಷಮೆ ಯಾಚಿಸಿ) ನನ್ನ ಬಾಲ್ಯ ಆನಂದಮಯವಾಗಿತ್ತೆಂದೇ ಹೇಳಬೇಕು. ರಸಋಷಿ ಕುವೆಂಪುರವರ ವಾಣಿಯಂತೆ ಆನಂದಮಯ ಈ ಜಗ ಹೃದಯ ಅಂದಂತೆ ನನ್ನ ಹೃದಯವೂ ಬಾಲ್ಯದ ನೆನಪಿನಿಂದ ಆನಂದಮಯವಾಗಿಯೇ ಇದೆ.

ನನ್ನ ಹಳ್ಳಿಯಲ್ಲಿ ಎಲ್ಲರಿಗೂ ಅವರ ನಿಜ ಹೆಸರಿನೊಂದಿಗೆ ಒಂದು ಅಡ್ಡ ಹೆಸರು ಇರುತ್ತಿತ್ತು. ಎಷ್ಟೋ ಜನರ ನಿಜ ನಾಮಧೇಯ ಯಾರಿಗೂ ತಿಳಿದೇ ಇರಲಿಲ್ಲ. ಅಷ್ಟೇಕೆ ಅಡ್ಡ ಹೆಸರಿನಿಂದ ಕರೆದರೆ ಮಾತ್ರ ಪ್ರತಿಕ್ರಿಯಿಸುತ್ತಿದ್ದರೇ ವಿನಃ ಅಕಸ್ಮಾತ್ ಅವರ ನಿಜವಾದ ಹೆಸರಿನಿಂದ ಕರೆದರೆ ತಿರುಗಿಯೂ ಸಹ ನೋಡುತ್ತಿರಲಿಲ್ಲ. ಈ ಅಡ್ಡ ಹೆಸರು ಬರಲು ಏನು ಹಿನ್ನೆಲೆ ಎಂದು ಆಗ ನಾನು ಯಾವ ರೀತಿಯ ಸಂಶೋಧನೆಯನ್ನೂ ಮಾಡಿರಲಿಲ್ಲ. ಈಗ ಆ ಹೆಸರುಗಳನ್ನು ಮೆಲುಕು ಹಾಕುತ್ತ, ಅವುಗಳ ಹಿನ್ನೆಲೆ ಕಂಡುಹಿಡಿಯುವ ತವಕ ಇದ್ದರೂ ಸರಿಯಾದ ಮಾಹಿತಿ ನೀಡಲು ಆ ಕಾಲದ ಹಿರಿಯರು ಈಗ ಜೀವಿಸಿಲ್ಲ.

ಮಾದಪ್ಪ ಎಂಬ ಹೆಸರಿನ ಮೂವರು ಇದ್ದರು. ಒಬ್ಬನಿಗೆ ಬಾಬಾರಿಮಾದಪ್ಪ ಎಂದು ಹೆಸರಿದ್ದರೆ ಮತ್ತೊಬ್ಬನನ್ನು ಬೊಮ್ಮಡಿ ಮಾದಪ್ಪ ಎಂದು ಕರೆಯುತ್ತಿದ್ದರು. ಬಹುಶಃ ಈ ವ್ಯಕ್ತಿ ಚಿಕ್ಕಂದಿನಲ್ಲಿ ಬಹಳ ಬೊಮ್ಮಡಿ ಹೊಡೆಯುತ್ತಿದ್ದಿರಬೇಕು. ಮೂರನೇ ಮಾದಪ್ಪನನ್ನು ಭದ್ರಮ್ಮನ ಮಾದಪ್ಪ ಎಂದು ಕರೆಯುತ್ತಿದ್ದರು. ಭದ್ರಮ್ಮ ಆ ವ್ಯಕ್ತಿಯ ತಾಯಿಯ ಹೆಸರಿರಬೇಕು ಮತ್ತು ಆ ಭದ್ರಮ್ಮೆ ಒಂದು ಕಾಲದಲ್ಲಿ ಬಹಳ ಹೆಸರುವಾಸಿಯಾಗಿದ್ದಿರಬೇಕು.

ಈ ಅಡ್ಡ ಹೆಸರುಗಳ ವಿಶ್ಲೇಷಣೆ ಮಾಡುತ್ತ ಹೋದೆ. ಆ ಅಡ್ಡ ಹೆಸರುಗಳಲ್ಲಿಯೂ ಒಂದು ರೀತಿ ಸಾಮಾಜಿಕ ಜಾತಿ ವ್ಯವಸ್ಥೆಯ ಜಾಡನ್ನು ಕಾಣಬಹುದು. ಲಿಂಗಾಯಿತರ ಅಡ್ಡ ಹೆಸರುಗಳೆಲ್ಲಾ ಅವರವರ ಅಪ್ಪ ಅಥವಾ ಅಮ್ಮ ಅಥವಾ ಅವರ ಕಸುಬಿನ ಸೂಚಕವಾಗಿದ್ದರೆ, ಉಪ್ಪಾರರಿಗಿದ್ದ ಅಡ್ಡ ಹೆಸರುಗಳೆಲ್ಲ ಬಹಳ ವಿಚಿತ್ರವಾಗಿರುತ್ತಿದ್ದುವು.

ಒಬ್ಬನ ಹೆಸರು ಸೊಳ್ಳಿಪುಕ್ಕ, ಇನ್ನೊಬ್ಬನ ಹೆಸರು ಪೊಣ್‍ಮಾದ, ಮತ್ತೊಬ್ಬ ಮೂಗಾಟಿ, ಅವರ ಕೋಮಿನ ಯಜಮಾನನ ಹೆಸರು ತೋಡ. ಪೆಠಾರಿ ಎಂದು ಮತ್ತೊಂದು ಅಡ್ಡ ಹೆಸರು. ಮತ್ತೊಬ್ಬನ ಹೆಸರು ಬೆಕ್ಕಲುಮಾದ. ತೊರೆಯರು ಅಥವಾ ಪರಿವಾರದವರ ಕೋಮಿನಲ್ಲಿ ನಾನು ಕಂಡುಕೇಳಿದ ಕೆಲವು ಅಡ್ಡ ಹೆಸರುಗಳು ಈ ರೀತಿಯಾಗಿದ್ದವು. ವಸ್ತಿ ಎಂದು ಒಬ್ಬನ ಅಡ್ಡ ಹೆಸರಾದರೆ ಮತ್ತೊಬ್ಬನನ್ನು ಮುದುಗೈ ಎಂದು ಕರೆಯುತ್ತಿದ್ದರು. ಇವೆಲ್ಲ ಅವರವರ ಕಸುಬಿನಲ್ಲಿ ಅವರ ಪರಿಶ್ರಮ ಪರಿಣಿತಿಗೆ ತಕ್ಕುದ್ದಾಗಿದ್ದವೋ ಅಥವಾ ಅವರ ಬಾಲ್ಯದಲ್ಲಿ ಅವರಾಡಿದ ಮಕ್ಕಳಾಟದ ಕುರುಹುಗಳೋ ತಿಳಿಯದು. ಒಂದಂತೂ ನಿಜ ಇವೆಲ್ಲ ಅಪ್ಪಟ ದೇಸಿ ಕನ್ನಡದ ಹೆಸರುಗಳು. ಈಗೆಲ್ಲ ಇಂಥ ಹೆಸರುಗಳನ್ನು ಉಚ್ಚರಿಸಲೂ ಸಹ ಹಿಂಜರಿಯುತ್ತಾರೆ. ಅದೊಂದು ರೀತಿಯ ಕೀಳರಿಮೆಯಿಂದ ಬಳಲುತ್ತಾರೆ.

ಬ್ರಾಹ್ಮಣರಿಗೂ ಸಹ ಅಡ್ಡ ಹೆಸರುಗಳು ಇದ್ದುವು. ನಮ್ಮೂರಿನಲ್ಲಿದ್ದ ಬ್ರಾಹ್ಮಣಕುಟುಂಬಗಳ ಯಜಮಾನರುಗಳಲ್ಲಿ ಐದು ಜನರಿಗೆ ಒಂದೇ ಹೆಸರು ಇತ್ತು ರಂಗಾಚಾರ್ ಎಂದು. ಒಬ್ಬ ರಂಗಾಚಾರ್ ಆ ಊರಿನ ಸ್ಥಾಪಕರ ವಂಶಸ್ಥರು ಅದರಿಂದ ಅವರನ್ನು ಜನ ಯಜಮಾನ್ ರಂಗಪ್ಪ ಎಂದು ಕರೆಯುತ್ತಿದ್ದರು. ಎರಡನೇ ರಂಗಾಚಾರ್ ವಂಶಜರು ಮೈಸೂರಿನಿಂದ ಬಂದು ಆ ಹಳ್ಳಿಯಲ್ಲಿ ನೆಲಸಿದ್ದರಿಂದ ಅವರನ್ನು ಮೈಸೂರು ರಂಗಪ್ಪ ಎಂದು ಕರೆಯಲಾಯಿತು. ಇನ್ನು ಮೂರನೇ ರಂಗಾಚಾರ್ ಇವರ ಮೂಲ ಸೋಸಲೆಗ್ರಾಮ ಆದ್ದರಿಂದ ಅವರು ಸೋಸಲೆ ರಂಗಪ್ಪ. ಮತ್ತೊಬ್ಬ ರಂಗಾಚಾರ್‍ರವರ ಮನೆ ಆ ಊರಿನ ಗುಡಿ ಹಿಂದೆ ಇತ್ತು. ಇವರನ್ನು ಗುರುತಿಸಲು ಅವರು ಗುಡಿಹಿಂದಿಲರಂಗಪ್ಪ ಆಗಿಬಿಟ್ಟರು. ಇನ್ನು ಕಡೆ ಮತ್ತು ಐದನೇ ರಂಗಾಚಾರ್ ಸರದಿ. ಈ ಹಿರಿಯರ ತಂದೆ ಆ ಊರಿನಲ್ಲಿರಿರಲಿಲ್ಲ. ಅವರು ಸತ್ತಿದ್ದರೋ ಅಥವಾ ದೇಶಾಂತರ ಹೋಗಿದ್ದರೋ ಯಾರಿಗೂ ತಿಳಿಯದು. ಅವರ ತಾಯಿಯ ಹೆಸರು ಅಮ್ಮಣ್ಣಮ್ಮ ಎಂದು. ಇವರ ತಾಯಿಯ ಹೆಸರನ್ನು ಇವರ ಹೆಸರಿನ ಮುಂದಿಟ್ಟು ಅಮ್ಮಣ್ಣಮ್ಮನ ರಂಗಪ್ಪ ಎಂದು ಕರೆದುಬಿಟ್ಟರು.

ಇಲ್ಲಿ ವಿಶೇಷವೆಂದರೆ ಈ ಅಡ್ಡ ಹೆಸರಿನಿಂದ ಕರೆಯುವುದನ್ನು ಯಾರೂ ಅವಮಾನ ಅಥವಾ ಕುಚೋದ್ಯದ ಕೃತ್ಯ ಎಂದು ತಿಳಿದಿರಲಿಲ್ಲ. ಅಡ್ಡ ಹೆಸರಿನವರೆಲ್ಲರನ್ನೂ ಅವರವರ ಅಡ್ಡ ಹೆಸರಿನಿಂದಲೇ ಕರೆಯುತ್ತಿದ್ದರು ಮತ್ತು ಅವರೂ ಸಹ ಬಹಳ ಸಹಜವಾಗಿಯೇ ಪ್ರತಿಕ್ರಿಯಿಸುತಿದ್ದರು.  ಉಪ್ಪಾರರಲ್ಲಿ ಅಡ್ಡ ಹೆಸರುಗಳು ಬಹಳ ಬಳಕೆ ಇತ್ತು. ಹೀಗೇಕೆ ಎಂದು ಸ್ವಲ್ಪ ಸಂಶೋಧನೆ ಮಾಡಿದಾಗ ಒಂದು ಸ್ವಾರಸ್ಯಕರವಾದ ವಿಚಾರ ತಿಳಿದುಬಂತು. ಇದನ್ನು ನನ್ನ ತಾಯಿಯಿಂದ ನಾನು ತಿಳಿದೆ. ಉಪ್ಪಾರ ಜಾತಿಯವರು ನಾನು ಚಿಕ್ಕಂದಿನಲ್ಲಿ ಕಂಡಂತೆ ಅರ್ಧ ಬುಡಕಟ್ಟು ಜನಾಂಗಕ್ಕೆ ಸೇರಿದವರಂತೆಯೇ ಇದ್ದರು. ಅವರ ಆಚಾರ ನಂಬಿಕೆ ದೇವರು ಎಲ್ಲ ಸ್ವಲ್ಪ ಬುಡಕಟ್ಟು ಜನರಂತೆಯೇ ಇತ್ತು. ಅವರು ತಮ್ಮ ಮಕ್ಕಳಿಗೆ ತಮ್ಮ ಹಿರಿಯರ ಹೆಸರುಗಳನ್ನೇ ಇಡುತ್ತಿದ್ದರು. ರಂಗಸೆಟ್ಟಿಯಮಗ ಚಿಕ್ಕ ರಂಗಸೆಟ್ಟಿ, ಅವನ ತಾತನ ಹೆಸರು ದೊಡ್ಡ ರಂಗಸೆಟ್ಟಿ ಹೀಗೆ. ಇದರಿಂದಾಗಿ ಅವರ ಹೆಸರುಗಳು ಅವರ ವಂಶದ ಯಾರಾದರೂ ಹಿರಿಯರ ಹೆಸರಾಗಿಯೇ ಇರುತ್ತಿತ್ತು. ಮತ್ತೊಂದು ವಿಚಾರ ಅಂದರೆ ಅವರು ಮಕ್ಕಳನ್ನು ತಪ್ಪು ಮಾಡಿದಾಗ ಅವಾಚ್ಯ ಶಬ್ದಗಳಿಂದ ಬೈಯುವುದು ವಾಡಿಕೆ. ಇಂದಿನ ಕಾಲಕ್ಕೆ ಅದೆಲ್ಲ ಅಶ್ಲೀಲ, ಅಸಂಸ್ಕೃತ ಎಂದು ಅನಿಸಿದರೂ, ಆಗೆಲ್ಲ ಆ ರೀತಿಯ ಮಾತುಗಳು ಸರ್ವ ಸಮ್ಮತವಾಗಿತ್ತು. ಹೀಗೆ ಮಕ್ಕಳನ್ನು ಕಿರಿಯರನ್ನು ಬಯ್ಯುವಾಗ ಅವರ ಹೆಸರು ಹಿಡಿದು ಅವಾಚ್ಯ ಶಬ್ಧಗಳಿಂದ ಬೈಯಲು ಸಾಧ್ಯವಿಲ್ಲ. ಏಕೆಂದರೆ ಅವರ ಹೆಸರು ತಮ್ಮ ವಂಶದ ಹಿರಿಯರ ಹೆಸರು. ಬೈಯ್ದರೆ ಹಿರಿಯರನ್ನೇ ಬೈಯ್ದಂತೆ. ಅದಕ್ಕಾಗಿ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಒಂದು ಅಡ್ಡ ಹೆಸರು ಇರಲೇಬೇಕು. ಇಲ್ಲದಿದ್ದರೆ ಅವರನ್ನು ಮನಸ್ವೇಚ್ಛೆ ಬಯ್ಯುವುದು ಹೇಗೆ. ಇನ್ನು ಈ ಅಧ್ಯಾಯದ ಶೀರ್ಷಿಕೆಯ ವಿಚಾರಕ್ಕೆ ಬರೋಣ. ಈ ಬರಿಗುಳಿಯ ವೃತ್ತಾಂತವನ್ನು ದಾಖಲಿಸಬೇಕಾದರೆ, ಗುಳಿಯ ಬಗ್ಗೆ ಸ್ವಲ್ಪ ವಿವರಣೆ ನೀಡಲೇಬೇಕು.

ಹಿಂದೆಲ್ಲ ಬೆಳೆದ ದವಸಧಾನ್ಯಗಳನ್ನು ಶೇಖರಿಸಿ ಇಡಲು ಈಗಿನಂತೆ ಆಧುನಿಕ ಸೌಲಭ್ಯಗಳು ಇರಲಿಲ್ಲ. ಆಗಿನ ಕಾಲಕ್ಕೆ ತಕ್ಕಂತೆ, ಲಭ್ಯವಿರುವ ತಂತ್ರಜ್ಞಾನವನ್ನು ಬಳಸುತ್ತಿದ್ದರು. ಬಹಳ ಸಮಯ ಶೇಖರಿಸಿಡಲು, ಮತ್ತು ಮಳೆ, ಗಾಳಿ, ಕ್ರಿಮಿಕೀಟಗಳಿಂದ ಧಾನ್ಯಗಳು ಕೆಡದಂತೆ ಇರಿಸಲು ನೆಲದಲ್ಲಿ ತೋಡಿದ ಗುಳಿಗಳನ್ನು ಉಪಯೋಗಿಸುತ್ತಿದ್ದರು.

ಈ ಗುಳಿಯ ವಿನ್ಯಾಸ ಬಹಳ ತಾಂತ್ರಿಕತೆಯಿಂದ ಕೂಡಿತ್ತು. ನೆಲದ ಮಟ್ಟಕ್ಕೆ ಇರುವ ಗುಳಿಯ ಬಾಯಿ ಬಹಳ ಕಿರಿದಾಗಿತ್ತು. ಕೇವಲ ಒಬ್ಬ ಸಾಮಾನ್ಯ ಆಕಾರದ ಮನುಷ್ಯ ಇಳಿಯಲು ಬರುವಂತೆ ಇಡುತ್ತಿದ್ದರು. ಒಳಗೆ ಇಳಿದರೆ ಗುಳಿಯ ಮಧ್ಯಭಾಗ ಅಂದರೆ ಹೊಟ್ಟೆಯ ಭಾಗ ವಿಶಾಲವಾಗಿರುವಂತೆ ತೋಡಿರುತ್ತಿದ್ದರು. ಸುಮಾರು ಎರಡಾಳು ಆಳ ಇರುತ್ತಿತ್ತು. ಈ ಗುಳಿಯ ಒಳಮೈ ಮತ್ತು ಕೆಳಗಿನ ನೆಲವನ್ನು ಕಲಸಿದ ಮಣ್ಣಿನಿಂದ ಬಹಳ ನಯವಾಗಿ ಗಿಲಾವು ಮಾಡುತ್ತಿದ್ದರು.

ಅವರವರ ಅಗತ್ಯಕ್ಕೆ ಅನುಸಾರವಾಗಿ ಗುಳಿಯ ವಿಸ್ತಾರವನ್ನು ನಿಗದಿಪಡಿಸಿ ಆ ಪ್ರಮಾಣದಲ್ಲಿ ತೋಡಿ ಗುಳಿ ಸಿದ್ಧಪಡಿಸುತ್ತಿದ್ದರು. ಗುಳಿಯ ಬಾಯಿ ಚೌಕಾಕಾರದಲ್ಲಿದ್ದು ಅದರ ನಾಲ್ಕೂ ಭುಜಗಳಿಗೆ ಕಲ್ಲಿನ ಚೌಕಟ್ಟನ್ನು ಇಟ್ಟು ಭದ್ರಮಾಡಲಾಗುತ್ತಿತ್ತು. ಗುಳಿಯಲ್ಲಿ ಧಾನ್ಯ ತುಂಬಿದ ಮೇಲೆ ಈ ಕಲ್ಲಿನ  ಚೌಕಟ್ಟಿನ ಮೇಲೆ ಅದರ ಅಗಲಕ್ಕೆ ತಕ್ಕಹಾಗೆ ಪೂರ್ತಿ ಮುಚ್ಚುವಂತೆ ಒಂದು ಕಲ್ಲು ಚಪ್ಪಡಿ ಇಟ್ಟು ಗುಳಿ ಮುಚ್ಚಿಡುತ್ತಿದ್ದರು. ಗುಳಿಯನ್ನು ತೆಗೆದು ಒಳಕ್ಕೆ ಇಳಿದು ಅದರಲ್ಲಿ ಧಾನ್ಯ ತುಂಬುವುದೂ ಒಂದು ಕಲೆ. ಎಲ್ಲರಿಗೂ ಇದು ಬರುತ್ತಿರಲಿಲ್ಲ. ಗುಳಿ ಇಳಿದು ಅದರೊಳಗೆ ರಾಗಿ ತುಂಬುವುದಕ್ಕೆಂದೇ ಪರಿಣಿತರಿದ್ದರು. ಗುಳಿಯ ಗೋಡೆಗೆ ರಾಗಿ ಸೋಗೆ ಇಟ್ಟು ಹಂತ ಹಂತವಾಗಿ ತುಂಬುತ್ತಿದ್ದರು. ಸಾಮಾನ್ಯವಾಗಿ ಸುಮಾರು ಎರಡು ಎಕರೆ ಮೂರು ಎಕರೆ ಸಾಗುವಳಿ ಜಮೀನು ಇದ್ದವರೆಲ್ಲ ಒಂದು ಅಥವಾ ಎರಡು ಗುಳಿಗಳನ್ನು ಹೊಂದಿರುತ್ತಿದ್ದರು. ಗುಳಿಗಳು ಅವರವರ ಮನೆಮುಂದೆಯೇ ಇರುತ್ತಿದ್ದವು. ಕೆಲವೊಮ್ಮೆ ಖಾಲಿ ಇರುವ ಗುಳಿಯನ್ನು ಬಾಡಿಗೆಗೆ ಬಿಡುವ ರೂಢಿ ಇತ್ತು. ಅದಕ್ಕೆ ಬಾಡಿಗೆ ಧಾನ್ಯರೂಪದಲ್ಲಿ ಸಂದಾಯ ಮಾಡುತ್ತಿದ್ದರು. ಈಗಿನಂತೆ ಎಲ್ಲದಕ್ಕೂ ರೂಪಾಯಿಯನ್ನು ಬಳಸುತ್ತಿರಲಿಲ್ಲ. ಈಗೆಲ್ಲ ಬರೀ Currency Economy ತಾನೆ. ಇದಿಷ್ಟು ಗುಳಿ ಬಗ್ಗೆ ಹೇಳಿದ್ದಾಯಿತು.

ಅಡ್ಡ ಹೆಸರಿನ ಬಗ್ಗೆ ಹಿಂದೆಯೇ ತಿಳಿಸಿದಂತೆ ನಮ್ಮೂರಿನಲ್ಲಿ ಒಬ್ಬರಿಗೆ ಬರ್ಗುಳಿ ಸಿದ್ದಪ್ಪ ಎಂದು ಹೆಸರಿತ್ತು. ಬರ್ಗುಳಿ ಅಥವಾ ಪದ ವಿಭಾಗ ಮಾಡಿದರೆ ಬರಿ ಗುಳಿ ಸಿದ್ದಪ್ಪ. ಅವರಿಗೆ ಅಡ್ಡ ಹೆಸರು ಬರಲು ಒಂದು ಹಿನ್ನೆಲೆ ಇತ್ತು ಮತ್ತು ಅದೆಲ್ಲರಿಗೂ ಸಹ ತಿಳಿದಿತ್ತು. ಈ ಸಿದ್ದಪ್ಪ ಎನ್ನುವ ವ್ಯಕ್ತಿ ಹಿಂದೆ, ತನ್ನ ಮನೆಯಲ್ಲಿ ಉಣ್ಣಲು ರಾಗಿ ಮುಗಿದಾಗ, ಪಕ್ಕದ ಮನೆಯವರ ಹತ್ತಿರ ಹೋಗಿ, “ನೋಡಪ್ಪಾ, ನನ್ ಗುಳಿ ತೆಗೆದಾಗ ಕೊಟ್ಟಿ, ಈಗೆ ಒಂದೆರಡು ಕೊಳಗ ರಾಗಿ ಕೊಡು” ಎಂದು ಹೇಳಿ ರಾಗಿಕಡ ಪಡೆದ. ಸರಿ ಪಕ್ಕದ ಮನೆಯವನು ತಾನೆ ಎಲ್ಲಿ ಹೋಗ್ತಾನೆ. ಅವನ ಗುಳಿ ತೆಗೆದಾಗ ಇಸ್ಕಂಡ್ರೆ ಆಯ್ತು ಅಂತ ಅವನು ಎರಡು ಕೊಳಗ ರಾಗಿ ಕೊಟ್ಟ.

ಈ ಕಡ ಪಡೆದ ರಾಗಿಯನ್ನು ಉಂಡು ಮುಗಿಸಿಯಾಯಿತು. ಮತ್ತೇನು ಮಾಡೋದು. ಈ ಭೂಪ ಸುಮ್ಮನಿರನೇ ತನ್ನ ಮನೆಯ ಹಿಂದಿನ ಬೀದಿಯವನನ್ನು ಹಿಡಿದ. ಅವನ ಹತ್ತಿರವೂ ಇದೇ ರಾಗ, ಮತ್ತೆರಡು ಕೊಳಗ ರಾಗಿ ಗಿಟ್ಟಿಸಿದ. ಹೀಗೆ ಸುಮಾರು ಮೂರು ನಾಲ್ಕು ಜನರ ಹತ್ತಿರ ಕಡ ಪಡೆದು ಸುಮಾರು ಐದಾರು ತಿಂಗಳು ಕಾಲ ಹಾಕಿ ಬಿಟ್ಟ. ರಾಗಿ ಕೊಟ್ಟವರು ಸುಮ್ಮನಾಗಲಿಲ್ಲ. ರಾಗಿ ಹಿಂದಕ್ಕೆ ಕೊಡುವಂತೆ ಪೀಡಿಸಿದರು. ಇವನೋ ತನ್ನ ಗುಳಿಯನ್ನು ತೆಗೆಯಲು ಮುಂದಾಗಲೇ ಇಲ್ಲ. ಇದರಿಂದಾಗಿ ರಾಗಿ ಕೊಟ್ಟವರು ಕೋಪಗೊಂಡು ಎಲ್ಲರೂ ಒಟ್ಟಾಗಿ ಸೇರಿ, ಇವನನ್ನು ಏನು ಕೇಳೋದು, ಹೇಗಿದ್ದರೂ ಇವನ ಗುಳಿಯಲ್ಲಿ ರಾಗಿ ಇದೆ. ನಾವೇ ಅಗೆದು ನಮಗೆ ಬರಬೇಕಾದ ರಾಗಿ ತೆಗೆದುಕೊಂಡು ಮಿಕ್ಕದ್ದನ್ನು ಅವನಿಗೇ ಕೊಟ್ಟು ಬಿಡೋಣ ಎಂದು ತೀರ್ಮಾನಿಸಿದರು. ಅವನ ಪ್ರತಿಭಟನೆಯನ್ನೂ ಲೆಕ್ಕಿಸದೆ ಅವನ ಮನೆಮುಂದೆ ಇದ್ದ ಅವನ ಗುಳಿ ಅಗೆದು ಮೇಲೆ ಮುಚ್ಚಿದ್ದ ಚಪ್ಪಡಿ ಕಲ್ಲನ್ನು ಸರಿಸಿ ಗುಳಿ ತೆಗೆದೇ ಬಿಟ್ಟರು.

ಆಗಲ್ಲವೇ ಸ್ವಾರಸ್ಯ ನಡೆದದ್ದು. ಗುಳಿಗೆ ದೀಪ ಇಳಿ ಬಿಟ್ಟು ನೋಡುತ್ತಾರೆ. ಅದು ಬರಿ ಖಾಲಿಗುಳಿ, ಅದರೊಳಗೆ ರಾಗಿಯೂ ಇಲ್ಲ, ಏನೂ ಇಲ್ಲ. ಅದನ್ನು ಕಂಡ ಅವರೆಲ್ಲ ಆ ಕ್ಷಣದಲ್ಲಿ ಕೋಪಗೊಂಡರೂ ನಂತರ ಸಾವರಿಕೊಂಡು ಅವರಲ್ಲಿಯೇ ಹಿರಿಯನಾದವನೊಬ್ಬ ಹೇಳಿದ ಮಾತುಗಳಿವು:

“ಏ ಬಡ್ಡತ್ತದೆ, ಇಲ್ಲೇನಿದ್ದಾತು, ಬರ್ಗುಳಿ, ಹೊಟ್ಗಿಲ್ಲಾಂದ್ರೆ

ಅಂಗೇ ಕೊಡ್ತಿದ್ವಲ್ಲ. ಹೋಗಡೋ ಬರ್ಗುಳಿ ಬಡ್ಡತ್ತದೆ. ಅದ್ಯಾಕುಡೋ

ಸುಳ್ಳೇಲ್ದೆ, ನೀ ಬರ್ಗುಳಿ ಸಿದ್ದಪ್ಪ ಕಣಲೇ”

ಎಂದು ಬಿಟ್ಟ. ಅಂದಿನಿಂದ ಅವನು ಬರ್ಗುಳಿ ಸಿದ್ದಪ್ಪನಾಗಿ ಬಿಟ್ಟ.

ಈ ಬರ್ಗುಳಿ ಸಿದ್ದಪ್ಪನೊಡನೇ ತಳುಕು ಹಾಕಿಕೊಂಡಿರುವ ಮತ್ತೊಂದು ರೋಚಕ ಘಟನೆ ನೆನಪಿಗೆ ಬಂತು.

ಶಾಲಾಮಾಸ್ತರಾಗಿ ಇಪ್ಪತ್ತೇಳು ವರ್ಷ ಆ ಕೆಲಸ ಮಾಡಿ ಆ ಕೆಲಸದಲ್ಲಿ ಹೆಚ್ಚು ಸವಾಲುಗಳು ಇಲ್ಲದೆ ಯಾಂತ್ರಿಕವಾದ್ದರಿಂದ ಸಾಹಸಿ ಪ್ರವೃತ್ತಿ ನನ್ನ ಹೊಂದಿದ್ದ ಅಪ್ಪ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟರು. ಇದು ಅವರು ತಮ್ಮ ಜೀವನದಲ್ಲಿ ಮಾಡಿದ ಸಾಹಸ ಕೃತ್ಯಗಳಲ್ಲಿ ಅತ್ಯಂತ ಅಪಾಯಕಾರಿಯಾದ ಕೃತ್ಯ. ಅವರು ರಾಜೀನಾಮೆ ನೀಡಿದಾಗ ನಮ್ಮ ಸಂಸಾರದ ಸೈಜು ಹೀಗಿತ್ತು. ನಾಲ್ಕು ಗಂಡು ಮಕ್ಕಳು, ನನ್ನ ಹಿರಿಯಣ್ಣನಿಗೆ ಹದಿನಾರು ವರ್ಷ, ಎರಡನೇ ಅಣ್ಣನಿಗೆ ಹದಿಮೂರು ವರ್ಷ ಮೂರನೆಯ ಅಣ್ಣನಿಗೆ ಎಂಟು ವರ್ಷ ವಯಸ್ಸು ಮತ್ತು ನಾನು ಹುಟ್ಟಿ ಸುಮಾರು ಆರು ತಿಂಗಳಾಗಿತ್ತು. ಅದೃಷ್ಟವಶಾತ್ ಆ ವೇಳೆಗಾಗಲೇ ನಮ್ಮೆಲ್ಲರಿಗಿಂತ ಹಿರಿಯಳಾದ ನನ್ನ ಅಕ್ಕನಿಗೆ ಮದುವೆ ಆಗಿ ಗಂಡನ ಮನೆಯಲ್ಲಿದ್ದಳು. ಈ ಸ್ಥಿತಿಯಲ್ಲಿ ಇವರು ರಾಜೀನಾಮೆ ನೀಡುವುದೇ. ಈಗ ನೆನಸಿಕೊಂಡರೆ ಭಯವಾಗುತ್ತದೆ. ನನ್ನ ಅಪ್ಪನ ಅದೃಷ್ಟವೋ ಅಥವಾ ನಾವುಗಳೆಲ್ಲ ಪಡೆದುಕೊಂಡ ಬಂದ ಭಾಗ್ಯವೋ ಒಟ್ಟಿನಲ್ಲಿ ನಾವೆಲ್ಲ ಬದುಕಿ ಚೆನ್ನಾಗಿಯೇ ಬಾಳಿ, ಈಗ ಬಾಳ ಸಂಜೆಯ ಹೊಸ್ತಿಲಿನ ಬಳಿ ಬಂದಿದ್ದೇವೆ. ನಮ್ಮ ಮುಂದಿನ ಪೀಳಿಗೆಯವರೂ ಸಹ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ನನ್ನ ಅಪ್ಪ ನನ್ನ ಸ್ವಗ್ರಾಮಕ್ಕೆ ಬಂದು ಒಂದು ಕಿರಾಣಿ ಅಂಗಡಿ ಪ್ರಾರಂಭಿಸಿದರು. ಅದಕ್ಕೆ ಅವರು ಆಗ ಹಾಕಿದ ಬಂಡವಾಳ ಎಷ್ಟಿರಬಹುದು ನನ್ನ ಅಪ್ಪನ ಇಪ್ಪತ್ತೇಳು ವರ್ಷ ಮಾಸ್ತರಿಕೆಮಾಡಿದ್ದಕ್ಕೆ ಪ್ರಾವಿಡೆಂಟ್ ಫಂಡಿನಲ್ಲಿ ಉಳಿತಾಯವಾಗಿದ್ದ ರೂ. 425/- ಮತ್ತು ಅಮ್ಮನ ಹುಂಡಿಯಿಂದ ರೂ. 25/- ಒಟ್ಟಿನಲ್ಲಿ ರೂ. 500/-.

ನನ್ನೂರಿನಲ್ಲಿ ನ್ನನ ಅಪ್ಪ ಕಿರಾಣಿ ಅಂಗಡಿ ಪ್ರಾರಂಭಿಸುವುದಕ್ಕೆ ಒಂದು Commercial angle ಇತ್ತು. ನನ್ನ ಹಳ್ಳಿ ಸುಮಾರು ಹತ್ತು ಹನ್ನೆರಡು ಹಳ್ಳಿಗಳಿಂದ ಸುತ್ತುವರೆದಿತ್ತು. ಅಲ್ಲೆಲ್ಲಿಯೂ ಸಹಾ ಜನರ ದಿನ ಬಳಕೆಗೆ ಬೇಕಾಗುವ ನಿತ್ಯೋಪಯೋಗಿ ಸಾಮಾನುಗಳನ್ನು ಮಾರುವ ಯಾವ ಅಂಗಡಿಯೂ ಇರಲಿಲ್ಲ. ಇದರಿಂದ ಆ ಹಳ್ಳಿಯ ಜನರೆಲ್ಲ ಹತ್ತಿರದಲ್ಲಿದ್ದ ನನ್ನ ಅಪ್ಪನ ಅಂಗಡಿಗೆ ಬರಬೇಕಾಗಿತ್ತು. ಇಲ್ಲದಿದ್ದರೆ ದೂರದ ತಾಲ್ಲೂಕು ಕೇಂದ್ರವಾದ ಚಾಮರಾಜನಗರಕ್ಕೇ ಹೋಗಬೇಕಾದಂಥ ನಿರ್ಭಂದ. ಇದರಿಂದಾಗಿ ನನ್ನ ಅಪ್ಪ ಮಾರ್ಕೆಟ್ ಸರ್ವೆಯನ್ನು ಪಕ್ಕಾವಾಗಿಯೇ ಮಾಡಿದ್ದ ಎಂದು ತಿಳಿಯಬೇಕು. ಅಂಗಡಿ ಪ್ರವರ್ಧಮಾನಕ್ಕೆ ಬಂದು ಆರ್ಥಿಕ ಸ್ಥಿತಿ ಸುಧಾರಿಸಿತು. ನನ್ನ ಅಮ್ಮ ಮತ್ತು ಎರಡನೇ ಅಣ್ಣ ಶಲ್ಲಣ್ಣನ ಅಪಾರ ಪರಿಶ್ರಮವೂ ಸೇರಿತ್ತು. ಅಗಂಡಿಯಲ್ಲಿ ನಿಂತು ವ್ಯಾಪಾರ ಮಾಡುವುದನ್ನೇ ಮುಖ್ಯ ಉದ್ಯೋಗವನ್ನಾಗಿ ತೆಗೆದುಕೊಂಡು ತನ್ನ ಮುಂದಿನ ವಿದ್ಯಾಭ್ಯಾಸವನ್ನು ಬಲಿಕೊಟ್ಟ ಶಲ್ಲಣ್ಣ. ನನ್ನ ಹಿರಿಯಣ್ಣ, ನಾನು ಮತ್ತು ನನ್ನ ಮೂರನೇ ಅಣ್ಣ ನಮ್ಮ ವ್ಯಾಸಂಗವನ್ನು ಮುಂದುವರೆಸಿದೆವು. ನಂತರದ ದಿನಗಳಲ್ಲಿ ನನ್ನ ದೊಡ್ಡಣ್ಣ ಅವನ ವಿದ್ಯಾಭ್ಯಾಸ ಮುಗಿಸಿ ನನ್ನ ಅಪ್ಪನ ಜತೆಗೆ ನಿಂತು ಅಂಗಡಿ ಮೇಲ್ವಿಚಾರಣೆ ವಹಿಸಿಕೊಂಡ. ಅವನೂ ಸಹಾ ಬೇರೆ ಉದ್ಯೋಗ ಅರಸಿ ಹೋಗಲಿಲ್ಲ. ಪ್ರತಿದಿನ 8 ಮೈಲಿ ಸೈಕಲ್ ತುಳಿದು ಚಾಮರಾಜನಗರಕ್ಕೆ ಹೋಗಿ, ಅಂಗಡಿಗೆ ಬೇಕಾದ ಸಾಮಾನುಗಳನ್ನು ಸೈಕಲ್ಲಿನ ಮೇಲೆ ಕಟ್ಟಿಕೊಂಡು ದಿನಕ್ಕೆ ಒಂದು ಬಾರಿ ಕೆಲವೊಮ್ಮೆ ಮೂರುಬಾರಿ ಈ ರೀತಿ ನನ್ನೂರಿಂದ ನಗರಕ್ಕೆ ಹೋಗಿ ಬರುತ್ತಿದ್ದರು ನನ್ನ ಅಪ್ಪ. ಅವರ ದೈಹಿಕ ಶ್ರಮವನ್ನು ನೆನೆಸಿಕೊಂಡರೆ ಈಗಲೂ ದಿಗ್ಭ್ರಮೆಯಾಗುತ್ತದೆ. ಮನುಷ್ಯ ಮಾತ್ರದವನಿಂದ ಸಾಧ್ಯವಾಗದ ಕೆಲಸ ನಮ್ಮ ಅಪ್ಪ ಮಾಡಿದ್ದು.

ಹೀಗೆ ಬದುಕು ಸಾಗುತ್ತಿತ್ತು. ಮೊದಲೇ ಹೇಳಿದಂತೆ ಸಾಹಸೀ ಪ್ರವೃತ್ತಿಯ ನನ್ನ ಅಪ್ಪ ಸುಮ್ಮನೆ ಇರುವ ಆಸಾಮಿ ಅಲ್ಲ. ಈಗೆಲ್ಲ ಬಿಸಿನೆಸ್ ಡೈವರ್ಸಿಫಿಕೇಷನ್ (Business diversification) ಎನ್ನುತ್ತಾರಲ್ಲ ಹಾಗೆ  ವ್ಯವಸಾಯಕ್ಕೆ ಕೈ ಹಾಕಿದರು. ನಮ್ಮೂರಿನಿಂದ ಸುಮಾರು 8 ಮೈಲು ದೂರದಲ್ಲಿ ಅಟ್ಟುಗೂಳಿಪುರ ಎಂಬ ಊರಿದೆ. ಅದು ಕಾಡಂಚಿನ ಊರು. ಆ ಊರಿನಿಂದ ಮುಂದೆ ಆಗ ದಟ್ಟವಾದ ಕಾಡಿತ್ತು. ಆ ಕಾಡಿನಲ್ಲಿ ಮರಗಳು ಎಷ್ಟು ಒತ್ತಾಗಿ ಬೆಳೆದಿದ್ದವು ಅಂದರೆ, ನಡು ಹಗಲಿನಲ್ಲಿಯೂ ಸೂರ್ಯರಶ್ಮಿ ನೆಲಕ್ಕೆ ಬೀಳುತ್ತಿರಲಿಲ್ಲ. ಮಿಕ್ಕ ಜಾತಿ ಮರಗಳ ಸಮೂಹದೊಂದಿಗೆ ಹುಲುಸಾದ ಬಿದಿರು ಕಾಡೂ ಸಹ ಇತ್ತು. ಹತ್ತಿರದಲ್ಲಿಯೇ ಹರಿಯುವ ಚಿಕ್ಕಹೊಳೆ ಮತ್ತು ಎಣ್ಣೊಳೆ (ಹೊನ್ನು+ಹೊಳೆ- ಹೊನ್ನೊಳೆ-ಗ್ರಾಮ್ಯವಾಗಿ ಎಣ್ಣೊಳೆಯಾಗಿತ್ತು) ಪಕ್ಕದಲ್ಲಿ ಬಿದಿರು ಕಾಡು ಇಷ್ಟು ಸಾಕಲ್ಲವೆ ಆನೆಗಳ ಹಿಂಡು ಬಂದು ಮೇಯಲು. ಅಲ್ಲಂತೂ ಕಾಡಾನೆಗಳು ಹಿಂಡು ಹಿಂಡಾಗಿ ಸಂಚಾರ ಮಾಡುತ್ತಿದ್ದವು. ಆಗಿನ ಕಾಲದಲ್ಲಿ ಕಾಡು ಬಹಳ ಸೊಂಪಾಗಿ ಬೆಳೆಯುತ್ತಿತ್ತು ಮತ್ತು ವನ್ಯಜೀವಿಗಳಿಗೆ ಆಶ್ರಯ ಕೊಡುತ್ತಿತ್ತು. ಕ್ರಮೇಣ ಜನಸಂಖ್ಯೆ ಬೆಳೆದಂತೆ ಹಂತ ಹಂತವಾಗಿ ಕಾಡು ಮಾಯವಾಗಲು ಶುರು ಆಯಿತು. ಈಗ ನಾನು ದಾಖಲಿಸಿರುವ ಕಾಲದಲ್ಲಿದ್ದಷ್ಟು ಕಾಡು ಈಗ ಅಲ್ಲಿ ಕಾಣಲು ಸಿಗುವುದಿಲ್ಲ. ಈಗೆಲ್ಲಾ ಕಾಡಿದ್ದ ಜಾಗವೆಲ್ಲ ಬಟ್ಟಬಯಲಾಗಿದೆ. ಇನ್ನು ಆನೆಗಳು ಸುರಕ್ಷಿತ ಅಭಯಾರಣ್ಯ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತವೆ. ಅದಿಲ್ಲದಿದ್ದರೆ ಯಾವುದಾದರೂ ಮೃಗಾಲಯದಲ್ಲಿ ಸರ್ಕಾರದ ಸಹಾಯಧನದಿಂದ ಹೊಟ್ಟೆ ಹೊರೆಯುವ ಬಡಕಲು ಆನೆಯನ್ನು ನೋಡಬೇಕು. ಅದೂ ಇಲ್ಲದೇ ಹೋದರೆ ಜನರ ಭಕ್ತಿ ಪರಾಕಾಷ್ಠೆಯ ಚಿನ್ಹೆಯಾಗಿ ಯಾವುದಾದರೂ ದೇವಸ್ಥಾನದಲ್ಲಿ ನೋಡಬಹುದು. ಇದ್ದ ಕಾಡನ್ನೆಲ್ಲ ಕ್ರಮೇಣ ಕಡಿದು ಸಾಗುವಳಿ ಮತ್ತು ವಸತಿ ಪ್ರದೇಶಗಳನ್ನಾಗಿ ಪರಿವರ್ತಿಸಲಾಗಿದೆ. ಇರುವ ಕಾಡನ್ನೆಲ್ಲ ಕಡಿದು ಬಟಾ ಬಯಲನ್ನಾಗಿಸಿದ ಮೇಲೆ, ಈಗ ಮನೆಗೊಂದು ಮರ ನೆಡಿ ಎಂದು ಊರಿನಲ್ಲೆಲ್ಲ ಮರ ನೆಡುವ ಕಾರ್ಯಕ್ರಮವನ್ನು ಕಾಣುತ್ತೇವೆ. ಕಾಡನ್ನು ಊರಾಗಿಸಿ ಊರನ್ನು ಕಾಡು ಮಾಡುವ ಈ ಉಲ್ಟಾ ಪ್ರವೃತ್ತಿಗೆ ಏನು ಹೇಳುವುದೋ ತಿಳಿಯದು. ಬಹುಶಃ ಇದು ಈ ಯುಗದ ಧರ್ಮ ಇರಬಹುದೇನೋ.

ಜನರು ಸಲ್ಲಿಸಿದ ತೆರಿಗೆ ಹಣವನ್ನು ಹೆಗ್ಗಣದಂತೆ ಮೇದು ತಿಂದು ತೇಗಿ, ಆನೆಯಷ್ಟೇ ದಪ್ಪವಾಗಿರುವ ಅನೇಕ ರಾಜಕೀಯ ನಾಯಕ / ನಾಯಕೀಮಣಿಗಳು ಪ್ರಸಿದ್ಧ ದೇವಾಲಯಗಳಿಗೆ ಆನೆಮರಿಗಳನ್ನು ದಾನ ಮಾಡುವುದನ್ನೂ ನೋಡುತ್ತಲಿದ್ದೇವೆ. ಇದ್ಯಾವ ದೇವ್ರಿಗೆ ಪ್ರೀತೀನೋ ತಿಳಿಯದು. ಏನೋ ಒಟ್ಟಿನಲ್ಲಿ ಒಂದು ಆನೆಗಾದರೂ ಒಂದಷ್ಟು ಆಶ್ರಯ ಸಿಕ್ಕಿತಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೆ. ಈ ಕಾಡಂಚಿನಲ್ಲಿ ಅಟ್ಟುಗೂಳಿಪುರಕ್ಕೆ ಸೇರಿದಂತೆ ಸರ್ಕಾರದಿಂದ 15 ಎಕರೆ ಕಾಡು ಜಮೀನು ಖರೀದಿ ಮಾಡಿದರು ನನ್ನ ಅಪ್ಪ. ಅವರು ಆ ಜಮೀನನ್ನು ಖರೀದಿಸಿದಾಗ ಅದು ಸಾಗುವಳಿಗೆ ಯೋಗ್ಯವಾಗಿರಲಿಲ್ಲ. ಬರೀ ಕಲ್ಲು ಮುಂಟಿ, ಮೋಟು ಮರಗಳು ಜಮೀನಿನಲ್ಲಿ ಅಲ್ಲಲ್ಲಿ ಬೃಹದಾಕಾರದ ಹುಣಸೆ ಮರಗಳು, ಹೀಗಿತ್ತು. ಆ ಜಮೀನಿನ ಮೇಲ್ಮೈ ಲಕ್ಷಣ. ಆ ಮೋಟು ಮರಗಳನ್ನು ಸವರಿ, ಜಮೀನನ್ನು ಸಮತಟ್ಟು ಮಾಡಿ ಅಲ್ಲಲ್ಲಿ ಬೆಳೆದಿದ್ದ ಕಾಡುಮೆಳೆಗಳನ್ನು ಕಡಿಸಿ, ಸುಮಾರಾಗಿ ವ್ಯವಸಾಯಕ್ಕೆ ಯೋಗ್ಯವನ್ನಾಗಿ ಮಾಡಲು, ನನ್ನ ಅಪ್ಪನಿಗೆ ಒಂದು ವರ್ಷ ಹಿಡಿಯಿತು. ಸರಿಯಾದ ಮಳೆ ಬಿದ್ದ ಮೇಲೆ ಆ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಿಸಿದರು. ಆ ಜಮೀನಿಗೆ ಹೋಗಬೇಕಾದರೆ ಈ ಬರ್ಗುಳಿ ಸಿದ್ದಪ್ಪನ ಮನೆಯನ್ನು ಹಾದು ಹೋಗಬೇಕಾಗಿತ್ತು. ನನ್ನ ಅಪ್ಪ ಪ್ರತಿದಿನ ಬೆಳಿಗ್ಗೆ ಸಿದ್ದಪ್ಪನ ಮನೆ ಮುಂದೆ ಸೈಕಲ್ ತುಳಿದುಕೊಂಡು ಅಟ್ಟುಗೂಳಿಪುರಕ್ಕೆ ಹೋಗುತ್ತಿದ್ದರು. ಪುನಃ ಸಂಜೆ ವಾಪಸ್ಸು. ಈ ದೈನಂದಿನ ಕಾರ್ಯಕ್ರಮವನ್ನು ತಪ್ಪದೇ ಕಾಣಬಹುದಾಗಿತ್ತು. ದಿನಾ ಇದನ್ನೇ ನೋಡುತ್ತಿದ್ದ ಈ ಬರ್ಗುಳಿ ಸಿದ್ದಪ್ಪನಿಗೆ ಏನನ್ನಿಸಿತೋ ಏನೋ ಒಂದು ದಿನ ನನ್ನ ಅಪ್ಪ ಜಮೀನಿಗೆ ಹೊರಟು ಇವನ ಮನೆ ಮುಂದೆ ಹಾದು ಹೋಗುತ್ತಿದ್ದಾಗ. ಅಡ್ಡಗಟ್ಟಿ ಸಂಭಾಷಣೆಗೆ ಪ್ರಾರಂಭಿಸಿದ. ಸರಿ ಊರಿನವನು, ಪರಿಚಯದವನು, ಮಾತನಾಡದೇ ಹೋಗುವುದು ಸಭ್ಯತೆ ಅಲ್ಲ. ಅದಲ್ಲದೆ ಅವರಿಬ್ಬರಲ್ಲಿ ಯಾವ ವೈಷಮ್ಯ ಅಥವಾ ವೈರತ್ವವೂ ಇರಲಿಲ್ಲ. ಅದರಿಂದ ನನ್ನಪ್ಪ ಸಹಾ ಮಾತಿಗೆ ನಿಂತರು.

“ಏನ್ ಸಿದ್ದಪ್ಪಾ, ಆರೋಗ್ಯಾನಾ, ಏನ್ಸಮಾಚಾರ” ಅಂದರು ನನ್ನ ಅಪ್ಪ

“ಏನಿಲ್ಲ ಬುದ್ದಿ, ಜಮೀನ್ಗೆ ಒಂಟ್ರ” ಅಂದ ಸಿದ್ದಪ್ಪ

“ಹೌದು, ದಿನಾ ನೋಡ್ತಾನೇ ಇದ್ದೀಯಲ್ಲ” ಅಂದರು.

ಅದಕ್ಕೆ ಸಿದ್ದಪ್ಪ ಹೀಗಂದ

“ಅಲ್ಲ ಬುದ್ದಿ ನೀವು ನೀರ್‍ಮಂತ್ರುಸೋ ಐನೋರು (ಐಯ್ಯನವರು ಎಂಬ ಪದದ ಗ್ರಾಮ್ಯರೂಪ)

ನಿಮ್ ಕೈಲಿ ಮೇಟಿ ಇಡಿಯೋಕ್ಕಾದ್ದಾ. ನೀರ್‍ಮಂತ್ರುಸೋದ್ ಬುಟ್ಟು ಆರಂಭ ಮಾಡ್ತೀನಿ ಅಂತ ಒಂಟವರಲ್ಲ.

ನೀವೇನಾರಾ ಆ ಆನೆಕಾಡ್ನಲ್ಲಿ ಮಾಡಿರೋ ಜಮೀನ್ಲಿ

ಒಂದು ಗೊನೆ ಜೋಳ, ಒಂದೇ ಒಂದ್ ಗೊನೆ ಜೋಳ

ಆನೆಗಳ್ ಕೈತಪ್ಪಿಸಿ ಬೆಳ್ದು ತಂದ್ಬುಟ್ರೆ, ನಾನು ನನ್ ಲಿಂಗ ತೆಗ್ದು

ನಾಯ್ಕತ್ಗೆ ಹಾಕ್ಬುಡ್ತೀನಿ” ಅಂತ ಸವಾಲೆಸೆದುಬಿಟ್ಟ.

ಸಿದ್ದಪ್ಪನ ಮನಸ್ಸಿನಲ್ಲಿ ಇಂಥ ಆಲೋಚನೆ ಇದೆ ಎಂದು ನನ್ನ ಅಪ್ಪ ತಿಳಿದಿರಲಿಲ್ಲ. ದೀಢೀರೆಂದು ಅವನಂದ ಆ ಮಾತುಗಳಿಂದ ಸ್ವಲ್ಪ ಆವಾಕ್ಕಾದರು. ನನ್ನ ಅಪ್ಪ ಮೊದಲೇ ಸಾಹಸೀ ಮನುಷ್ಯ. ಅದರ ಮೇಲೆ ಸವಾಲೆಂದರೆ ಸುಮ್ಮನಿರುವ ಜಾಯಮಾನದವನಲ್ಲ.

“ನೋಡು ಸಿದ್ದಪ್ಪ, ಇದೇ ಮಾತು, ಅಲ್ಲಿ, ಆ ಆನೆ ಕಾಡ್ನಲ್ಲಿ

ನಿನ್ನ ಕಣ್ಣ ಮುಂದೇನೇ, ಜೋಳ ಬೆಳೆದು, ಆನೆಗಳಿಗೆ ಸಿಕ್ಕದಂತೆ

ಕಟಾವ್ ಮಾಡಿ ತರಲಿಲ್ಲ – ನಾನೂ ನನ್ ಜನಿವಾರ ಕಿತ್ತೆಸೆದ್ಬುಡ್ತೀನಿ”

ಅಂತ ಮರು ಸವಾಲ್ ಎಸೆದೇ ಬಿಟ್ಟರು.

ಸುತ್ತಲೂ ಬೀಡಿ ಸೇದುತ್ತ ಅರಳಿಕಟ್ಟೆ ಮೇಲೆ ಕುಳಿತಿದ್ದ ಜನರಿಗೂ ಇವರಿಬ್ಬರ ಮಾತುಗಳು ಕೇಳಿಸಿತು. ಇನ್ನು ಕೇಳಬೇಕೆ ಈ ಪ್ರಸಂಗ, ಆ ಸುತ್ತಲಿನ ಊರುಗಳಿಗೆಲ್ಲ ಮಿಂಚಿನಂತೆ ಒಬ್ಬರ ಬಾಯಿಂದ ಒಬ್ಬರಿಗೆ ಹಬ್ಬಿತು. ಈ ಸವಾಲ್ ಮರು ಸವಾಲ್ ವಿಚಾರ ಆ ಹಳ್ಳಿಗಾಡಿನಲ್ಲೆಲ್ಲಾ ರಪ್ಪಟ್ಟಾಗಿ ಬಿಟ್ಟಿತು.

ಈ ಘಟನೆ ನಡೆದ ಮೇಲೆ ನನ್ನ ಅಪ್ಪನಿಗೆ ಮೈಮೇಲೆ ಆವೇಶ ಬಂದವರಂತೆ ಆಗಿ ಆ ಜಮೀನಿನಲ್ಲಿ ಆಗತಾನೇ ಬಿತ್ತಿದ್ದ ಜೋಳದ ಬೆಳೆಯನ್ನು ಆನೆಗಳ ಹಾವಳಿಯಿಂದ ಜೋಪಾನ ಮಾಡುವ ಕೆಲಸಕ್ಕೆ ಪ್ರಾರಂಭಿಸಿಬಿಟ್ಟರು.

ಜಮೀನಿನಲ್ಲಿದ್ದ ಮೂರು ಭಾರೀ ಹುಣಸೇಮರಗಳ ಮೇಲೆ ಅಟ್ಟಣೆಗಳನ್ನು ಕಟ್ಟಿಸಿದರು. ಅದರ ಮೇಲೆ ಹತ್ತಲು ಏಣಿಯಂತೆ ಕವಲು ಬಿಟ್ಟಿದ್ದ ಬಿದಿರುಗಳನ್ನು ಕಟ್ಟಿಸಿದರು. ಪಕ್ಕದ ತಮಿಳುನಾಡಿನ ಕೊಯಮುತ್ತೂರಿಗೆ ಹೋಗಿ 10 ಸೆಲ್ ಹಾಕುವ ಉದ್ದನೆಯ ಎರಡು ಟಾರ್ಚ್‍ಗಳನ್ನು ಕೊಂಡುಕೊಂಡು ಬಂದರು. ಈ ಟಾರ್ಚ್‍ನ ಬೆಳಕು ಬಹಳ ತೀಕ್ಷಣವಾಗಿರುತ್ತಿತ್ತು ಮತ್ತು ರಾತ್ರಿ ಹೊತ್ತು ಆನೆಗಳ ಕಣ್ಣಿಗೆ ನೇರವಾಗಿ ಬೀಳುವಂತೆ ಬೆಳಕು ಬಿಟ್ಟರೆ ಅವು ಈ ತೀಕ್ಷ್ಣ ಬೆಳಕಿಗೆ ಭ್ರಮಿಸಿ ಮುಂದೆ ಬರುತ್ತಿರಲಿಲ್ಲ. ಮೈಸೂರಿಗೆ ಹೋಗಿ ಎರಡು ಚರೆ ಬಂದೂಕುಗಳನ್ನೂ ಕೊಂಡುಕೊಂಡು ಬಂದರು. ಚರೆ ಬಂದೂಕು ಅಂದರೆ ಅದರಲ್ಲಿ ತೋಟಾಗೆ ಬದಲಾಗಿ ಸಣ್ಣ ಸಣ್ಣ ಕಬ್ಬಿಣದ ಗುಂಡುಗಳನ್ನು ತುಂಬಿ ಹಾರಿಸುತ್ತಿದ್ದರು. ಇದರಿಂದ ಚದುರಿದ ಚರೆ (ಸಣ್ಣ ಕಬ್ಬಿಣದ ಗುಂಡು) ಆನೆಯ ಮೈಮೇಲೆ ಹಾದು ಅದು ನೋವಿನಿಂದ ಭಯದಿಂದ ಓಡಿಬಿಡುತ್ತಿತ್ತು. ಈ ಬಂದೂಕು ಹೊಂದಲು ಯಾವಾಗ ಲೈಸೆನ್ಸ್ ಪಡೆದಿದ್ದರೋ ನನಗೆ ತಿಳಿಯದು. ಅಂತೂ ಬಂದೂಕು ತಂದದ್ದಂತೂ ನಿಜ.

ಎಲ್ಲ ಅಟ್ಟಣೆಗಳಿಗೂ ಎರಡೂ ಪಕ್ಕದಲ್ಲಿ ಎರಡೆರಡು ಗ್ಯಾಸ್ ಲೈಟ್‍ಗಳನ್ನು ಕಟ್ಟಿ, ಅವು ರಾತ್ರಿಯೆಲ್ಲ ಉರಿಯುವಂಥ ಏರ್ಪಾಡು ಮಾಡಿದರು. ಇನ್ನು ಕಾವಲಿಗೆ ಒಂದೊಂದು ಅಟ್ಟಣೆಗೆ 3 ಜನರಂತೆ ಕಾವಲು ಕಾಯುವ ಏರ್ಪಾಟು ಮಾಡಿಬಿಟ್ಟರು. ಈ ಸವಾಲನ್ನು ಸ್ವೀಕರಿಸಿದ ಮೇಲಂತೂ ನನ್ನ ಅಪ್ಪ ದಿನಾ ಸಂಜೆ ಊರಿಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಜಮೀನಿನಲ್ಲಿಯೇ ವಾಸ್ತವ್ಯ ಹೂಡಿಬಿಟ್ಟರು. ಅವರಿಗೆ ಮತ್ತು ಅಲ್ಲಿ ಕಾವಲು ಕಾಯುವ ಆಳುಗಳಿಗೆ ನಾನು ಮತ್ತು ನನ್ನ ಅಣ್ಣ ಎರಡು ಹೊತ್ತು ಸೈಕಲ್‍ನಲ್ಲಿ, ಮನೆಯಿಂದ ಊಟ ಸರಬರಾಜು ಮಾಡುವಂತೆ ಅಪ್ಪಣೆ ಮಾಡಿದರು. ನನ್ನ ತಾಯಿಯಂತೂ ದಿನಾ 9-10 ಆಳುಗಳಿಗೆ ಎರಡು ಹೊತ್ತು ಹಿಟ್ಟು ಬೇಯಿಸಿ ಒದ್ದೆ ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಬುತ್ತಿ ತಯಾರು ಮಾಡುವುದರಲ್ಲಿಯೇ ಸುಸ್ತಾಗಿ ಬಿಡುತ್ತಿದ್ದರು. ಇದರ ಜತೆಗೆ ನನ್ನಪ್ಪನಿಗೆ ಬೇರೆ ಬುತ್ತಿ ತಯಾರು ಮಾಡಬೇಕು. ಜೋಳದ ಬೆಳೆ ಬೆಳೆದು ಫಸಲು ಬಂತು. ಒಳ್ಳೆ ಮಳೆ ಬಿದ್ದು, ರಸವತ್ತಾದ ಜೋಳದ ತೆನೆಗಳು ಮೂಡಿ ಗಾಳಿಗೆ ತೊಯ್ದಾಡುತ್ತಿದ್ದ ಆ ನೋಟವೇ ನೋಟ, ಕಾಣಲು ಎರಡು ಕಣ್ಣುಗಳು ಸಾಲದೆಂಬಂತೆ ಹುಲುಸಾದ ಫಸಲು ಬಂತು.

ಜೋಳದ ಗಿಡಗಳು ತೆನೆದುಂಬಿದ ಮೇಲೆ ಆನೆಗಳು ಸುಮ್ಮನಿದ್ದಾವೆಯೇ ಒಂದು ರಾತ್ರಿ ಜೋಳದ ಹೊಲದ ಒಂದು ಬದಿಗೆ, ಒಂದು ಹಿಂಡು ಆನೆ ನುಗ್ಗಿಯೇ ಬಿಡ್ತು, ಇದನ್ನು ಕಂಡ ಆಳುಗಳು ಅಟ್ಟಣೆಯಿಂದ ಕೆಳಗೆ ಇಳಿದು ಆನೆಗಳನ್ನು ಓಡಿಸಲು ಭಯಪಟ್ಟು, ಅಟ್ಟಣೆಯಿಂದಲೇ ಬಿದಿರು ಕೊಳವೆಗಳನ್ನು (ಪೆಟಲು) ಹಿಡಿದು ಜೋರಾಗಿ ಶಬ್ದ ಮಾಡಲು ಶುರು ಮಾಡಿದರು. ಮತ್ತೊಂದು ಅಟ್ಟಣೆಯ ಮೇಲಿದ್ದ ನನ್ನ ಅಪ್ಪ ಅವರನ್ನು ಎಷ್ಟು ಹುರಿದುಂಬಿಸಿದರೂ ಆಳುಗಳು ಜೀವ ಭಯದಿಂದ ಕೆಳಗೆ ಇಳಿಯಲೇ ಇಲ್ಲ. ಇದೇಕೋ ಪರಿಸ್ಥಿತಿ ವಿಪರೀತಕ್ಕೆ ಬಂತು ಎಂದು ತಿಳಿದ ನನ್ನ ಅಪ್ಪ, ಒಂದು ಕೈಯಲ್ಲಿ ಟಾರ್ಚ್ ಹಿಡಿದು, ತೋಳಿಗೆ ಬಂದೂಕು ನೇತು ಹಾಕಿಕೊಂಡು ಅಟ್ಟಣೆಯಿಂದ ಇಳಿದೇ ಬಿಟ್ಟರು. ಇಳಿದು ಟಾರ್ಚ್ ಲೈಟ್ ಬೆಳಕಿನಲ್ಲಿ ಆನೆ ಹಿಂಡಿನ ಕಡೆ ಓಡಿದರು. ನೋಡುತ್ತಾರೆ ಸುಮಾರು ಏಳೆಂಟು ಆನೆಗಳು ಬೆಳೆದ ಪಸಲನ್ನು ಕಾಲಿನಿಂದ ತುಳಿದು ಸೊಂಡಿಲಿನಿಂದ ಸೆಳೆದು ಆರ್ಭಟ ಮಾಡುತ್ತಾ ಘೀಳಿಡುತ್ತಲಿವೆ. ಟಾರ್ಚ್ ಲೈಟ್‍ನಲ್ಲಿ ಕಂಡ, ಆನೆಗಳು ಮೇಯುತ್ತಿದ್ದ ದಿಕ್ಕಿಗೆ ಬಂದೂಕನ್ನು ಹೆಗಲಿಗೇರಿಸಿ ಆಕಾಶದ ಕಡೆ ಗುಂಡು ಹಾರಿಸಿದರು. ಗುಂಡಿನ ಶಬ್ದಕ್ಕೆ ಬೆದರಿದ ಆನೆಗಳು ಕಾಡಿನ ಕಡೆ ತಿರುಗಿ ಓಡಲಾರಂಭಿಸಿದವು. ಅಷ್ಟರಲ್ಲಿ ನನ್ನ ಅಪ್ಪ ಏಕಾಂಗಿಯಾಗಿ ಆನೆಗಳ ಹಿಂಡಿನತ್ತ ಓಡಿದ್ದನ್ನು ಕಂಡ ಮಿಕ್ಕ ಕಾವಲುಗಾರರು ಧೈರ್ಯವನ್ನು ಒಗ್ಗೂಡಿಸಿಕೊಂಡು ಅಟ್ಟಣೆಯಿಂದ ಕೆಳಗಿಳಿದು ನನ್ನಪ್ಪ ನಿಂತಿದ್ದ ಸ್ಥಳಕ್ಕೆ ಗುಂಪಾಗಿ ಬಂದು ಪುನಃ ಆ ಆನೆ ಹಿಂಡಿನ ಹಿಂದೆಯೇ ಸದ್ದು ಮಾಡುತ್ತಾ ಟಾರ್ಚ್ ಬೆಳಕನ್ನು ಆ ದಿಕ್ಕಿಗೆ ಹಾಯಿಸುತ್ತಾ, ಹಿಂಡಾನೆಗಳು ಕಾಡಿನೊಳಕ್ಕೆ ಹೋಗುವವರೆಗೂ ಓಡಿಸಿದರು. ಆಗ ಸುಮಾರು ರಾತ್ರಿ 2 ಗಂಟೆ ಸಮಯ.

ನನ್ನ ಅಪ್ಪ ಅಂದು ಏಕಾಂಗಿಯಾಗಿ ಕಾಡಾನೆಗಳ ಗುಂಪನ್ನು ಎದುರಿಸಿ ಗುಂಡು ಹಾರಿಸಿದೇ ಇದ್ದಿದರೆ ಇಡೀ ಫಸಲನ್ನು ಆನೆಗಳ ಹಿಂಡು ಕ್ಷಣದಲ್ಲಿ ನಾಶ ಮಾಡಿಬಿಡುತ್ತಿತ್ತು.

ಆನೆಗಳಿಂದ ಫಸಲು ರಕ್ಷಣೆ ಮಾಡಿದ ಮೇಲೆ ಜೋಳ ಕಟಾವು ಆಯಿತು. ತೆನೆಗಳನ್ನು ಜೋಳದ ಮೆದೆಗಳಲ್ಲಿ ಪೇರಿಸಿ, ಪಕ್ವವಾದ ಮೇಲೆ ಮೂರು ಎತ್ತಿನಗಾಡಿಯ ತುಂಬ ತುಂಬಿಕೊಂಡು ನಮ್ಮ ಊರಿಗೆ ಹೊರಟರು ನನ್ನ ಅಪ್ಪ.

ನನ್ನೂರಿಗೆ ಬರಬೇಕಾದರೆ ಬರ್ಗುಳಿಸಿದ್ದಪ್ಪನ ಮನೆ ಮುಂದೆ ತಾನೆ ಬರಬೇಕು. ಅವನು ಹಿಂದೆ, ಎಸೆದ ಸವಾಲನ್ನು ಜ್ಞಾಪಕದಲ್ಲಿಯೇ ಇಟ್ಟಿದ್ದ ನನ್ನ ಅಪ್ಪ ಬರ್ಗುಳಿಸಿದ್ದಪ್ಪನ ಮನೆ ಮುಂದೆ ಗಾಡಿಗಳು ಬಂದಾಗ ಅಲ್ಲಿಯೇ ಗಾಡಿನಿಲ್ಲಿಸಿ ಸಿದ್ದಪ್ಪನನ್ನು ಕರೆದರು. ಹೊರಗೆ ಬಂದ ಸಿದ್ದಪ್ಪನನ್ನು ಉದ್ದೇಶಿಸಿ “ಏಯ್ ಸಿದ್ದಪ್ಪಾ. ಏನ್ ಹೇಳ್ದೆ ನೀನು ಒಂದು ತೆನೆ ಜೋಳ ಬೆಳ್ದು ತಂದ್ರೆ ಲಿಂಗ ತೆಗ್ದು ನಾಯ್ಕತ್ತಿಗೆ ಹಾಕ್ತೀನಿ ಅಂದೆಯಲ್ಲಾ ನೋಡು ಈಗ ಮೂರು ಗಾಡಿ ಜೋಳನಾ” ಹೀಗೆಂದವರೆ ಹಿಂದಿನ ಗಾಡಿಯಲ್ಲಿ ತುಂಬಿದ್ದ ಜೋಳದ ಮೂಟೆಗಳಲ್ಲಿ ಎರಡು ಮೂಟೆ ಜೋಳವನ್ನು ಸಿದ್ದಪ್ಪನ ಮನೆ ಜಗುಲಿಮೇಲೆ ಇಳಿಸಿ ಊರಿನ ಕಡೆ ಗಾಡಿ ಹೊರಡಿಸಿಕೊಂಡು ಬಂದುಬಿಟ್ಟರು. ಇದನ್ನೆಲ್ಲ ಕಣ್ಣಾರೆ ಕಂಡ ನನಗೆ ಒಂದು ಹಿನ್ನೋಟದಿಂದ ನೋಡಿದಾಗ, ನನ್ನ ಅಪ್ಪನಿಗೆ ಜೀವನವನ್ನು ಎದುರಿಸುವ ಸಾತ್ವಿಕ ಛಲ ಎಷ್ಟರಮಟ್ಟಿಗೆ ಇತ್ತು ಎಂಬುದು ಅರಿವಿಗೆ ಬಂತು. ಬರ್ಗುಳಿ ಸಿದ್ದಪ್ಪನ ಈ ರೀತಿಯಾದ ನಡತೆಗೆ ಏನು ಪ್ರಚೋದನೆ ಇರಬಹುದು ಎಂದು ಈಗ ಕುಳಿತು ವಿಶ್ಲೇಷಿಸಿದರೆ, ನನಗೆ ಹೊಳೆದದ್ದು ಹೀಗೆ.

ಬರಿ ಮಂತ್ರ ಹೇಳಿಕೊಂಡು, ಊರಿನ ಹುಡುಗರಿಗೆ ಪಾಠ ಹೇಳುವ ಬ್ರಾಹ್ಮಣನಿಗೆ ಬಿಸಿಲಿನಲ್ಲಿ ಬೆಂದು ಬೆಂಡಾಗಿ, ಉಳುಮೆ ಮಾಡಿ ಜಮೀನಿನಲ್ಲಿ ಫಸಲು ತೆಗೆಯುವ ತಾಕತ್ತು ಎಲ್ಲಿದೆ. ಅದು ಅವನಿಂದಾಗದ ಕೆಲಸ. ಇದೆಲ್ಲ ರೈತಾಪಿ ಜನರು ಮಾಡುವ ಕೆಲಸ ಬ್ರಾಹ್ಮಣನಾದವನಿಗೆ ಈ ಕೆಲಸವಲ್ಲ. ಇವನಾರೋ ನನ್ನ domainಗೆ trespass ಮಾಡುತ್ತಿದ್ದಾನಲ್ಲ ಎಂದು ಭಾವಿಸಿರಬೇಕು. ಅಥವ ಈ ಕೈಲಾಗದ ಬ್ರಾಹ್ಮಣ ಏನು ತಾನೆ ಮಾಡಬಲ್ಲ. ಎಂಬ ತಾತ್ಸಾರ ಮನೋಭಾವ ಇದ್ದಿರಬೇಕು. ಜನ್ಮ ನಿರ್ಣೀತವಾದ ಜಾತಿವ್ಯವಸ್ಥೆಯು ಎಲ್ಲರ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿತ್ತು. ಜಾತಿ ಎಂಬುದು ಗುಣ ನಿರ್ಣೀತ ಎಂಬ ಆಲೋಚನೆ ಇನ್ನೂ ಜನರಲ್ಲಿ ಬಂದಿರಲಿಲ್ಲ ಎನಿಸುತ್ತದೆ. ಈ ವ್ಯವಸ್ಥೆಯನ್ನು ಸ್ವಲ್ಪ ಅಲುಗಾಡಿಸಿದರೂ ಸಮಾಜದ ಪ್ರತಿಭಟನೆಗೆ ಸಿದ್ಧವಾಗಬೇಕಿತ್ತು. ಪುರೋಗಾಮಿ ಚಿಂತನೆ ಇನ್ನೂ ಸಾಮಾನ್ಯನ ಮನಸ್ಸನ್ನು ಆವರಿಸಿರಲಿಲ್ಲ, ಪ್ರತಿಗಾಮಿಯಾಗಿಯೇ ಯೋಚಿಸುತ್ತಿತ್ತು ಎಂದು ತಿಳಿಯಬೇಕು ಅಷ್ಟೆ.

Rating
No votes yet

Comments

Submitted by naveengkn Thu, 03/13/2014 - 17:04

ಅರವಿಂದರೇ,, ಅದ್ಭುತ‌ ಬರಹ‌, ಅಂದಿನ‌ ನೆನಪುಗಳು, ಇಂದಿನ‌ ಸ್ಥಿತಿಗಳು,,,,, ಬರಹ‌ ಓದುತ್ತಾ ಓದುತ್ತಾ ರಸಕವಳೆ ಸವಿದ‌ ಅನುಭವ‌,,,,ನಿಮ್ಮ‌ ತಂದೆಯವರ‌ ಛಲ‌, ಹಠ‌, ನಿಮ್ಮ‌ ಮುಗ್ಧ‌ ಕಣ್ಣುಗಳಲ್ಲಿ ನೀವು ಅದನ್ನು ಆಸ್ವಾದಿಸಿದ‌ ರೀತಿ,, ಅಂದಿನ‌ ಹಳ್ಳಿಯ‌ ಚಿತ್ರಣ‌,,, ಕೆಲಸ‌ ಬಿಟ್ಟು ಜೀವನವನ್ನು ಸವಾಲಾಗಿ ತೆಗೆದುಕೊಂಡ‌ ತಂದೆಯವರ‌ ಆತ್ಮಸ್ಥೈರ್ಯ‌ ಎಲ್ಲವೂ ಮನಮುಟ್ಟುವಂತಿದೆ,
ಧನ್ಯವಾದಗಳೊಂದಿಗೆ ನವೀನ್ ಜೀ ಕೇ