ಕಥೆ: ಪರಿಭ್ರಮಣ.. (11)

ಕಥೆ: ಪರಿಭ್ರಮಣ.. (11)

( ಪರಿಭ್ರಮಣ..(10)ರ ಕೊಂಡಿ)

ಪ್ರಾಜೆಕ್ಟಿನ ನೈಜ್ಯಾಂತಿಮ ಉದ್ಘಾಟನಾ ಗಡುವು ಹತ್ತಿರವಾಗುತ್ತಿತ್ತು. ಅಂತೆಯೆ ಸಿದ್ದತೆಗಳೂ ಭರ ವೇಗದಲ್ಲಿ ಓಡತೊಡಗಿ ತಲೆ ಕೆರೆಯಲೂ ಪುರುಸೊತ್ತಿಲ್ಲದ ಪರಿಸ್ಥಿತಿ. ಆ ಉದ್ಘಾಟನಾ ಪೂರ್ವ ಸಿದ್ದತೆಗಳಲ್ಲಿ ಒಂದು ಮುಖ್ಯ ಘಟ್ಟ - ಸಂಬಂಧಪಟ್ಟವರಿಗೆಲ್ಲ ನೀಡಬೇಕಾದ ಪರಿಪಕ್ವ ತರಬೇತು ಮತ್ತು ಪರೀಕ್ಷಣಾ ಪರಿಸರದಲ್ಲಿ ನಡೆಸಬೇಕಾದ ಅಣಕು ಪರೀಕ್ಷೆಗಳ ಆವರ್ತನಗಳು. ಈ ಕೆಲಸವೆ ಸುಮಾರು ತಿಂಗಳೆರಡರತನಕ ವ್ಯಾಪಿಸಿಕೊಳ್ಳುತ್ತಿದುದರಿಂದ ಅದಕ್ಕೆ ಬೇಕಾದ ಸಕಲ ಪೂರ್ವ ಸಿದ್ದತೆಗಳು ಸಮರೋಪಾದಿಯಲ್ಲಿ ಜರುಗಬೇಕಿತ್ತು. ಸಾಮಾನ್ಯವಾಗಿ ಇದಕ್ಕೆ ಬೇಕಾದ ಸಲಕರಣೆಗಳಲ್ಲಿ ಪ್ರಮುಖವಾಗಿದ್ದುದು ಒಂದು ದೊಡ್ಡ ತರಬೇತು ಮತ್ತು ಪರೀಕ್ಷಣ ಕೊಠಡಿ (ಟ್ರೈನಿಂಗ್ ಮತ್ತು ಟೆಸ್ಟಿಂಗ್ ರೂಮ್). ತಿಂಗಳಾನುಗಟ್ಟಲೆ ಬಳಸಬೇಕಿದ್ದ ಕಾರಣ ಸಾಧಾರಣ ಮೀಟಿಂಗ್ ರೂಮಿನಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ, ಜತೆಗೆ ಇಡಿ ತಂಡವೆ ಒಟ್ಟಾಗಿ ಕೂತು ನಡೆಸಬೇಕಾದ ಪ್ರಕ್ರಿಯೆಯಾದ ಕಾರಣ ಜಾಗವೂ ಸಾಕಾಗುತ್ತಿರಲಿಲ್ಲ. ಆದರೆ ಆಫೀಸಿನಲ್ಲಿ ಇಂತಹ ಯಾವುದೆ ದೊಡ್ಡ ಜಾಗವಿಲ್ಲದ ಕಾರಣ, ಅದೊಂದು ದೊಡ್ಡ ತೊಡಕಾಗಿ ಪರಿಣಮಿಸಿತ್ತು. ಎಲ್ಲಾ ತರದ ಸಲಹೆಗಳು, ಇರುವ ಜಾಗವನ್ನು ಮಾರ್ಪಡಿಸಿ ಬಳಸಬಹುದಾದ ಸಾಧ್ಯತೆಗಳು, ಹೀಗೆ ಎಲ್ಲವನ್ನು ಪರಿಶೀಲಿಸಿ ನೋಡಿದರೂ ನೋಡಿದ ಜಾಗಗಳಾವುದು ಸೂಕ್ತವಾಗಿ ಕಂಡು ಬರಲಿಲ್ಲ. ಒಂದೆರಡು ಪುಟ್ಟ ರೂಮುಗಳನ್ನು ಜೋಡಿಸುವ ಸಾಧ್ಯತೆಯಿತ್ತಾದರೂ ಅದರಲ್ಲಿ ಅರ್ಧದಷ್ಟು ಜನ ಮಾತ್ರವೆ ಕೂರಬಹುದಿತ್ತು. ಇನ್ನೇನು ಮಾಡಬಹುದು, ಹೇಗೆ ಸಂಭಾಳಿಸಬಹುದು ಎಂದು ಆಲೋಚನೆಯಲ್ಲಿ ಮುಳುಗಿದ್ದಾಗ, ರೂಮಿಂದ ರೂಮಿಗೆ ಅಲೆದಾಡುತ್ತಿದ್ದವನನ್ನು ಕಂಡಿದ್ದ ಕುನ್.ಸು, ಯಾವುದೊ ಹುಡುಕಾಟದಲ್ಲಿರುವುದನ್ನು ಅರ್ಥೈಸಿಕೊಂಡು, ಇಂಗ್ಲಿಷ್ ಮಾತನಾಡಬಲ್ಲ ಸಹೋದ್ಯೋಗಿಯೊಬ್ಬಳ ಜತೆ ಬಂದು ಏನು ಹುಡುಕುತ್ತಿದ್ದೇವೆಂದು ಕೇಳಿದಳು. ಅವಳೆ ಇಲ್ಲಿನ ಹೌಸ್ ಕೀಪಿಂಗ್ ಸ್ಟ್ಯಾಫ್ ಆದ ಕಾರಣ ಬೇರೇನಾದರೂ ಜಾಗದ ಸಾಧ್ಯತೆಯಿದ್ದರೆ ಅವಳಿಗೆ ಗೊತ್ತಿರಬಹುದೆನಿಸಿತು; ಅಷ್ಟು ದೊಡ್ಡ ಜಾಗ ಯಾರ ಕಣ್ತಪ್ಪಿಸುವ ಸಾಧ್ಯತೆ ಇರದಿದ್ದರೂ, ಒಂದು ಬಾರಿ ಅವಳ ಮೂಲಕವೂ ಹುಡುಕಿ ನೋಡಿದರೆ ಕಳೆದುಕೊಳ್ಳುವುದೇನೂ ಇರಲಿಲ್ಲ. ಹೀಗಾಗೀ, ಆ ಸಹೋದ್ಯೋಗಿಯ ಮೂಲಕ ಅವಳಿಗೆ ತಾವು ನಡೆಸಿರುವ ಹುಡುಕಾಟವನ್ನು ವಿವರಿಸಿ, ಅವಳಿಗೆ ಅದಕ್ಕೊಂದುವ ಸೂಕ್ತ ಗಾತ್ರದ ಜಾಗವೇನಾದರೂ ಕಣ್ಣಿಗೆ ಬಿದ್ದಿದಿದೆಯೆ ಎಂದು ವಿಚಾರಿಸಿದ ಶ್ರೀನಾಥ. 

ಅದಕ್ಕೆ ಅವನಿಗೆ ಸಿಕ್ಕ ಉತ್ತರ ಮಾತ್ರ ಅವನ ಊಹೆಗೂ ಮೀರಿದ್ದಾಗಿತ್ತು. ಬಹುಶಃ ಅವಳು ಕ್ಲೀನು ಮಾಡಬೇಕಾದ ಅಗತ್ಯದಿಂದ ನಿಯಮಿತವಾಗಿ ಎಲ್ಲಾ ಕಡೆ ತಿರುಗಾಡುವ ಕಾರಣದಿಂದಲೊ ಏನೊ - 'ಕಸ್ಟಮರ ಟ್ರೈನಿಂಗ್ ರೂಮಿದೆಯಲ್ಲಾ?' ಎಂದಳು. ಇದು ಗ್ರಾಹಕರಿಗೆ ಮಾತ್ರ ಎಂದು ಕಾದಿರಿಸಿಬಿಟ್ಟಿದ್ದ ಕಾರಣ, ಯಾರೂ ಅದರ ಕುರಿತು ಯೋಚಿಸಿರಲೆ ಇಲ್ಲ, ಶ್ರೀನಾಥನಿಗೆ ಹೇಳಿರಲೂ ಇಲ್ಲ. ಅದುವರೆವಿಗೂ ಆ ರೂಮಿನ ಮಾತನ್ನು ಕೇಳಿಯೆ ಇರದಿದ್ದವನು ತಟ್ಟನೆ ಮೇಲೆದ್ದು ನೋಡಿ ಬರಲು ಅವಳೊಡನೆಯೆ ಹೊರಟ. ಬಾಗಿಲು ತೆರೆಯುತ್ತಿದ್ದಂತೆ ದಿಗ್ಮೂಢನಾಗುವ ಸರದಿ ಅವನದಾಗಿತ್ತು. ಅವನ ಅಗತ್ಯಕ್ಕಿಂತಲ್ಲು ಮೀರಿ ದೊಡ್ಡದಾಗಿತ್ತು ಆ ಜಾಗ ! ಅದೇನು ಸದಾ ಕಾಲ ಉಪಯೋಗದಲ್ಲಿರುವ ಕೊಠಡಿಯಂತೆ ಕಾಣಲಿಲ್ಲ. ಇದನ್ನು ಬಳಸುವ ಆಲೋಚನೆ ಬದಿಗಿಟ್ಟು ಯಾಕೆ ಬೇರೆಲ್ಲಾ ಹುಡುಕಿದ್ದರೊ ಅರ್ಥವಾಗಲಿಲ್ಲ. ಅಲ್ಲಿದ್ದ ಒಂದೆ ತೊಂದರೆ ಎಂದರೆ ತರಬೇತಿ ಅಥವ ಪರೀಕ್ಷಾ ಅನುಕೂಲಕ್ಕಾಗುವಂತೆ ಒಳಗಿನ ಜೋಡಣೆ ಸಿದ್ದವಿರಲಿಲ್ಲ. ಅದೊಂದನ್ನು ಹೊಂದಿಸಿಕೊಂಡುಬಿಟ್ಟರೆ ಬೇರೆ ಹುಡುಕುವ ಅಗತ್ಯವೆ ಇರಲಿಲ್ಲ. ಅದು ಖಾಲಿಯಿದ್ದ ದಿನಗಳು ಮತ್ತು ಶ್ರೀನಾಥನಿಗೆ ಅಗತ್ಯವಿದ್ದ ದಿನಗಳನ್ನು ತಾಳೆ ನೋಡಿದರೆ, ನಡುವಿನ ಕೆಲದಿನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ದಿನವೂ ಖಾಲಿಯೆ ಇತ್ತು. ಹೀಗಾಗಿ ಕೊಂಚ ಪ್ಲಾನಿಂಗು ಬದಲಿಸೊ, ಇಲ್ಲಾ ಸಂಬಂಧಪಟ್ಟ ವಿಭಾಗದವರೊಂದಿಗೆ ಚರ್ಚಿಸಿಯೊ ಆ ನಡುವಿನ ದಿನಗಳ ತೊಡಕನ್ನು ಪರಿಹರಿಸಿಕೊಂಡರೆ ಸಾಕಿತ್ತು. ಕೊನೆಗೂ ಸಮಸ್ಯೆಯ ಪರಿಹಾರಕ್ಕೆ ಕಾರಣಳಾದ ಅವಳತ್ತ ಕೃತಜ್ಞತಾಪೂರ್ವಕ ದೃಷ್ಟಿ ಬೀರಿ ಆ ರೂಮನ್ನು ಸಿದ್ದಪಡಿಸುವತ್ತಾ ಗಮನ ಹರಿಸಿದ. ಆದರೆ ಸದ್ಯಕ್ಕೆ ಅಲ್ಲಿ ನಡೆಯಲಿದ್ದ ಗ್ರಾಹಕ ಶಿಬಿರವೊಂದರ ಕಾರಣ ವಾರದ ಕೊನೆಯತನಕ ಅಲ್ಲೇನು ಬದಲಿಸುವಂತಿಲ್ಲವೆಂದು ತಿಳಿಯಿತು. ಬೇಕಿದ್ದರೆ ಭಾನುವಾರದಂದು ಸಿದ್ದಪಡಿಸಲು ಜನರನ್ನು ಕರೆಸಬಹುದೆಂದು, ಆದರೆ ಶ್ರೀನಾಥನೆ ಬಂದು ಮೇಲುಸ್ತುವಾರಿ ನೋಡುವಂತಿದ್ದರೆ ಮಾತ್ರ ಅದು ಸಾಧ್ಯವೆಂದಾಗ ವಿಧಿಯಿಲ್ಲದೆ ಒಪ್ಪಿಕೊಂಡಿದ್ದ - ಮುಂದಿನ ಸೋಮವಾರದಿಂದಲೆ ಆ ಜಾಗದ ಅಗತ್ಯವಿದ್ದುದರಿಂದ. 

ಹಾಗೆಯೆ ತನ್ನವಶ್ಯಕತೆಯನ್ನು ಸರಿಯಾಗಿ ವಿವರಿಸಲು ಸಹಾಯ ಮಾಡಿದ ಮಾರ್ಕೆಟಿಂಗ್ ವಿಭಾಗದಲ್ಲಿದ್ದ ಮತ್ತೊಬ್ಬ ಸಹೋದ್ಯೋಗಿ ಕುನ್. ಜಿಟ್ಸುಪಾಗೂ ವಂದನೆ ಸಲ್ಲಿಸಿದ. ಭಾಷೆಯ ತೊಡಕಿನ ವಿಷಯಕ್ಕೆ ಬಂದಾಗ ಮತ್ತೊಂದು ವಿಶೇಷವನ್ನು ಶ್ರೀನಾಥನ ಗಮನಿಸಿದ್ದ. ಸಾಧಾರಣ ಆಫೀಸಿನಲ್ಲಿ ಸರಿಸುಮಾರು ಎಲ್ಲರೂ ಬರಿ ಥಾಯ್ ಮಾತ್ರ ನಿರರ್ಗಳವಾಗಿ ಮಾತನಾಡಬಲ್ಲವರಾದರೂ, ಒಂದು ಸಣ್ಣ ಭಾಗಾಂಶದ ಗುಂಪು ಮಾತ್ರ ಆಂಗ್ಲ ನೈಪುಣ್ಯತೆಯಲ್ಲಿ ಸಾಕಷ್ಟು ಮುಂದಿರುವಂತೆ ಕಾಣಿಸುತಿತ್ತು. ಅದರಲ್ಲೂ ಪುರುಷರಿಗಿಂತ ಸ್ತ್ರೀಯರಲ್ಲಿ ಈ ಪಾಂಡಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತಿತ್ತು. ಅಂತೆಯೆ ಆ ಗುಂಪಿನ ಹೆಂಗಸರನ್ನು ಮತ್ತು ಗಂಡಸರ ಚಹರೆ, ಮುಖ ಲಕ್ಷಣಗಳನ್ನು ನೋಡಿದರೆ ಇತರರಿಗಿಂತ ಸ್ವಲ್ಪ ವಿಭಿನ್ನವಾಗಿರುವಂತೆಯೂ ಕಾಣಿಸುತಿತ್ತು. ಮೊದ ಮೊದಲಿಗೆ ಆಂಗ್ಲ ಪಾಂಡಿತ್ಯವಿರುವ ಆತ್ಮವಿಶ್ವಾಸದಿಂದ ಹಾಗೆ ಕಾಣುವರೇನೊ ಎಂದುಕೊಂಡಿದ್ದ ಶ್ರೀನಾಥ. ಆದರೂ ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಈ ಎರಡು ಗುಂಪುಗಳಲ್ಲಿ ಏನೊ ತೆಳುವಾದ ಕಂಡೂ ಕಾಣಲಾಗದಂತೆ ಹರವಿಕೊಂಡ ವ್ಯತ್ಯಾಸವಿದೆಯೆಂದು ಪದೆ ಪದೆ ಅನಿಸುತಿತ್ತಾದರೂ ನಿರ್ಣಾಯಕವಾಗಿ ಹೀಗೆ ಎಂದು ಹೇಳಲಾಗದಷ್ಟು ಅಗೋಚರ... ಬಹುಶಃ ಅಲ್ಲೆ ಹುಟ್ಟಿ ಬೆಳೆದ ಅಲ್ಲಿಯವರಿಗೆ ಅದು ಸುಲಭವಿರುತ್ತಿತ್ತೊ ಏನೊ...ನಮ್ಮಲ್ಲೆ ಒಂದೆ ಪ್ರಾಂತ್ಯದಲ್ಲಿರುವ ಜನರೂ ಬೇರೆ ಬೇರೆ ಭಾಷಾ ಪ್ರಭೇದ , ಶೈಲಿಯಲ್ಲಿ ಮಾತನಾಡುವುದಿಲ್ಲವೆ? ಹಾಗೆ ಇವರದು ಬೇರೆ ಬೇರೆ ಪ್ರಾಂತ್ಯಗಳಿಂದ ಬಂದ ಹಿನ್ನಲೆಯಿರಬಹುದು ಎಂದು ತೀರ್ಮಾನಿಸಿವ ಹೊತ್ತಿಗೆ ಆ ಹಿನ್ನಲೆಯನ್ನರಿಯುವ ನಿಚ್ಚಳವಾಗಿ ಅರಿಯುವ ಅವಕಾಶ ಆಯಾಚಿತವಾಗಿ ಒದಗಿ ಬಂತು. 

ಈ ಬಾರಿ ಮಾತುಕಥೆಗೆ ಸಹಾಯ ಮಾಡಿದ ಕುನ್. ಜಿಟ್ಸುಪ ಹೆಸರು ಜಿಟ್ - ಸುಪಾ ಎಂದಿದ್ದರು, ಇತರರ ಹೆಸರನ್ನು ತುಂಡಿರಿಸಿ ಕರೆಯುವ ಹಾಗೆ 'ಕುನ್. ಜಿ' ಎಂದೊ 'ಕುನ್. ಜಿಟ್' ಎಂದೊ ಕರೆಯುತ್ತಿರಲಿಲ್ಲ. ಮೊದ ಮೊದಲು ಒಂದೆರಡು ಬಾರಿ ಅಲ್ಲಿನ ಅಭ್ಯಾಸದಂತೆ ಹಿಂದಿನಿಂದ  'ಕುನ್. ಜಿ' ಎಂದು ಕರೆದರೂ ಅವಳು ತಿರುಗಿ ನೋಡಿರಲಿಲ್ಲ. ಬಹುಶಃ 'ಕುನ್. ಜಿ' ಅಲ್ಲದೆ ಬೇರೆ ಅಡ್ಡ ಹೆಸರು ಇರಬಹುದೆಂದುಕೊಂಡು, ಪೂರ್ತಿ ಹೆಸರಲ್ಲಿ ಕರೆದಾಗಷ್ಟೆ ಅವಳನ್ನು ಕರೆಯುತ್ತಿರುವುದರ ಅರಿವಾಗಿ ಹಿಂದಿರುಗಿ ನೋಡಿದ್ದಳು. ಅದಾದ ಮೇಲೆ ಇತರ ಸ್ತ್ರೀಯರೂ ಸಹ ಅವಳನ್ನು ತುಂಡಿರಿಸದ ಪೂರ್ತಿ ಹೆಸರಿಂದಲೆ ಕರೆಯುವುದನ್ನು ನೋಡಿ, ಸ್ವಲ್ಪ ತಲೆ ಕೆರೆದುಕೊಳ್ಳುವಂತಾದರೂ, ಅವನೂ ಪೂರ್ತಿ ಹೆಸರಲ್ಲಿ ಕರೆಯುವ ಅದೆ ಅಭ್ಯಾಸ ಮುಂದುವರೆಸಿದ್ದ. ಈ ನಡುವೆ ಪ್ರಾಜೆಕ್ಟಿನ ಸದಸ್ಯರೆಲ್ಲ ತುಸು ಒತ್ತಡ ರಹಿತ ವಾತಾವರಣದಲ್ಲಿ ಸೇರಿ ಹಗುರಾಗಲೆಂದು 'ಟೀಂ ಬಿಲ್ಡಿಂಗ್ ಇವೆಂಟ್' ಒಂದನ್ನು ಆಯೋಜಿಸುವ ಆಲೋಚನೆ ಬಂದಾಗ ಮಾರ್ಕೆಟಿಂಗ್ ಹಿನ್ನಲೆಯವಳಾದ ಕಾರಣ ಕುನ್. ಜಿಟ್ಸುಪಾಳಲ್ಲಿ ಕೇಳಿದರೆ ಉತ್ತಮ ಸಲಹೆ, ಸೂಚನೆ ಸಿಗಬಹುದೆಂದು ಸುಳಿವು ಕೊಟ್ಟವನು ಕುನ್. ಸೊಂಚಾಯ್. ಆ ಸಲಹೆಯ ಬೆನ್ಹಿಡಿದು ಅವಳನ್ನು ಸಂಪರ್ಕಿಸಿದ್ದೆ ತಡ, ಮೊದಲು ಅಂದಾಜು ವೆಚ್ಚದ ಮೊತ್ತ ಕೇಳಿದವಳೆ, ಒಂದರ ಹಿಂದೆ ಒಂದರಂತೆ ಬಡ್ಜೆಟ್ಟಿಗೆ ಹೊಂದುವ ಹತ್ತಾರು ಸಾಧ್ಯತೆಗಳನ್ನು ತೆರೆದಿಟ್ಟುಬಿಟ್ಟಳು. ಸಾಲದಕ್ಕೆ ಬೇಕಿದ್ದರೆ ತಾನೆ ಇಡೀ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡು ನಿಭಾಯಿಸುವುದಾಗಿ ಹೇಳಿದಾಗ ಶ್ರೀನಾಥನಿಗೂ ನಿರಾಳವಾಗಿತ್ತು.  ಅವಳೂ ಕೂಡಾ ಪ್ರಾಜೆಕ್ಟಿನ ತಂಡದ ಅರೆಕಾಲಿಕ ಸದಸ್ಯಳಾಗಿರುವುದು ಇನ್ನೂ ಅನುಕೂಲಕರ ಅಂಶವಾಗಿ ಅದರ ಪೂರ್ತಿ ಹೊಣೆಯನ್ನು ಅವಳಿಗೆ ವಹಿಸಿಬಿಟ್ಟಿದ್ದ. ಆ ಹೊತ್ತಿನಲ್ಲಿ ಪರಸ್ಪರ ಮಾತನಾಡುವಾಗ ಯಾಕೆ ಅವಳನ್ನು ಅಡ್ಡ ಹೆಸರಿನಲ್ಲಿ ಕರೆಯುವುದಿಲ್ಲವೆಂಬ ಕುತೂಹಲದ ಪ್ರಶ್ನೆಯ ನೆನಪಾಗಿ ಅವಳನ್ನೆ ನೇರ ಕೇಳಲು ಸಾಧ್ಯವಾಗಿತ್ತು - ಆಗಷ್ಟೆ  ಅವನಿಗೆ ತಿಳಿದು ಬಂದಿದ್ದು ಅವಳು 'ಥಾಯ್ ಚೈನೀಸ್' ಎಂಬುದಾಗಿ !

ಮೊದಲಿಗೆ ಅವಳಿಗೇಕೆ ಇತರರಂತೆ ಅಡ್ಡ ಹೆಸರಿಲ್ಲವೆಂದು ಕೇಳುತಿದ್ದಂತೆ ಅವಳು ಮುಗುಳ್ನಗುತ್ತ , ಥಾಯ್ ಚೈನೀಸಿಗೆ ಸಾಮಾನ್ಯವಾಗಿ ಈ ರೀತಿಯ ಅಡ್ಡ ಹೆಸರಲ್ಲಿ ಕರೆಯುವ ಬಳಕೆಯಿಲ್ಲವೆಂದಾಗ ಅರೆಗಳಿಗೆ ಅವಾಕ್ಕಾದವನಂತೆ ಕಂಡ ಶ್ರೀನಾಥನ ಮೊಗವನ್ನೆ ದಿಟ್ಟಿಸಿ, ಅವನ ಗೊಂದಲ ಅರಿವಾದವಳಂತೆ , ' ಥಾಯ್ಲ್ಯಾಂಡಿನ ಸುಮಾರು ಶೇಕಡ ಹನ್ನೆರಡರಷ್ಟು ಜನ ಚೈನೀಸ್ ಮೂಲದವರು.... ಇಲ್ಲಿನ ವಾಣಿಜ್ಯ ಜಗತ್ತಿನ ವಹಿವಾಟನೆಲ್ಲ ಹೆಚ್ಚು ಕಮ್ಮಿ ಈ ಚೀಣಿ ಗುಂಪೆ ನಿಭಾಯಿಸುತ್ತಿರುವುದು..' ಅಂದಾಗ  ಬಿಜಿನೆಸ್ಸಿನ ಸಾಧ್ಯತೆಯಿರುವ ಎಲ್ಲಾ ಕಡೆ ಬೇರೂರಿ, ಅಲ್ಲಿನ ಭಾಗವೆ ಆಗಿ ಅದರ ಪೂರ್ತಿ ಹತೋಟಿಯಲಿಟ್ಟುಕೊಳ್ಳುವ ಅವರ ಸಾಮರ್ಥ್ಯಕ್ಕೆ ಬೆರಗಾಗದಿರಲು ಸಾಧ್ಯವಾಗಲಿಲ್ಲ... ಆ ಮಾತು ಕೇಳುತಿದ್ದ ಹಾಗೆಯೆ ಮೂಲತಃ ಚೀನಿ ನಾಡುಗಳಲ್ಲದ ಮಲೇಶೀಯ, ಇಂಡೋನೇಶಿಯಾಗಳಂತಹ ದೇಶಗಳಲ್ಲು ವಾಣಿಜ್ಯದ ಚುಕ್ಕಾಣಿ ಹಿಡಿದವರು ಚೈನೀಸರೆಂದು ನೆನಪಾಗಿ ಆ ಅಚ್ಚರಿ ದ್ವಿಗುಣವಾಗಿತ್ತು. ಅಷ್ಟೇಕೆ ಫಿಲಿಫೈನಿನಂತಹ ಅಪ್ಪಟ ಕ್ರಿಶ್ಚಿಯನ್ ಮತಾವಲಂಬಿಗಳಿಂದ ಕಿಕ್ಕಿರಿದಂತಹ ದೇಶದಲ್ಲಿ, ಎಲ್ಲಾ ಪಟ್ಟಣಗಳಲ್ಲೂ ಪಸರಿಸಿಕೊಂಡಿರುವ ಹೆಸರಾಂತ ಹೈಪರ್ ಮಾರ್ಟ್ ಚೈನ್ ' ಎಸ್ಸೆಮ್ ಮಾರ್ಟ್' ನ ಮಾಲಿಕ ಒಬ್ಬ ಚೀನಿ ಮೂಲದವ ! ಉಡಲೂ ಬಟ್ಟೆಯೂ ಇಲ್ಲದಂತಹ ಭಿಕಾರಿ ಸ್ಥಿತಿಯಲ್ಲಿ ಬಂದ ಈ ವ್ಯಕ್ತಿ ಚಿಂದಿಯುಟ್ಟೆ ಈ ವಾಣಿಜ್ಯ ಸಲಗವನ್ನು ಕಟ್ಟಿದ ಕಥೆಯನ್ನು ದಂತ ಕಥೆಯಂತೆ ವರ್ಣಿಸುವುದನ್ನು ಕೇಳಿದ್ದ ಶ್ರೀನಾಥನಿಗೆ ವ್ಯವಹಾರದ ಬೀಜ ಬಹುಶಃ ಇವರ ರಕ್ತದಲ್ಲೆ ಬಂದ ಗುಣವೇನೊ ಅನಿಸುವಂತೆ ಮಾಡಿತ್ತು. ಈ ಚೀನಿ ಗುಂಪಿನವರು ಮಾತ್ರ ಯಾವುದೆ ಅಡ್ಡ ಹೆಸರಿನ ಗೊಡವೆಗಿಳಿಯದೆ ತಮ್ಮ ಮೂಲದ ಹೆಸರಿನಲ್ಲೆ ವ್ಯವಹರಿಸುತಿದ್ದರು. ಅದಕ್ಕೆಂದೆ ಕುನ್. ಜಿಟ್ಸುಪ ಹೆಸರಿಗೆ ಕತ್ತರಿ ಬಿದ್ದಿರಲಿಲ್ಲ. ಅದೇ ಕುತೂಹಲದಲ್ಲಿ ಮೂಲ ಚೈನಾದವರಂತೆ ಅವರು 'ಮ್ಯಾಂಡರೀನ್, ಹೊಕ್ಕೈನ್, ಕ್ಯಾಂಟೊನೀಸ್' ರೀತಿಯ ಭಾಷೆ ಬಳಸುತ್ತಾರೆಯೆ ಎಂದು ವಿಚಾರಿಸಿದರೆ ಥಾಯ್ ಚೈನಿಗಳಿಗೆ ಅವರದೆ ಆದ ' ಥಾಯ್ ಚೂ' ಎಂಬ ಭಾಷೆ ಇರುವುದಾಗಿ ಹೇಳಿದಳು. ಬಹುಶಃ ಇವರೆಲ್ಲ ಕಾಲಾಂತರದಲ್ಲಿ ಮೂಲ ಚೀನಾದಿಂದ ವಲಸೆ ಬಂದು ಎಲ್ಲೆಡೆ ಹರಡಿಕೊಂಡಂತೆ ಇಲ್ಲೂ ಸೇರಿಕೊಂಡ ಮೇಲೆ ಸ್ಥಳೀಯ ಭಾಷೆ, ಆಚಾರ, ವಿಚಾರ ಸಂಸ್ಕೃತಿಯ ಪ್ರಭಾವದಲ್ಲಿ ತಮ್ಮದೆ ಆದ ಹೊಸ ರೂಪವೊಂದನ್ನು ಅವಿಷ್ಕರಿಸಿಕೊಂಡಿರಬೇಕು...

ಆದರೆ ಅವನಿಗೆ ಅಚ್ಚರಿಯಾಗಿದ್ದೆಂದರೆ ಅವರು ಅಲ್ಲಿನ ಸಂಸ್ಕೃತಿಯ ಪಟಲಕ್ಕೆ ಹೊಂದಿಕೊಂಡ ಬಗೆ. ಬೇರೆಲ್ಲ ಕಡೆಯೂ ಅವರು ಹೊಂದಿಕೊಂಡ ಚಿತ್ರ ಎದ್ದು ಕಾಣುವುದಾದರೂ, ಅವರ ಪ್ರತ್ಯೇಕತೆಯನ್ನು ಬಿಟ್ಟುಕೊಡದೆ ಜತೆಗಿಟ್ಟುಕೊಂಡ ಕಾರಣ ಆ ವ್ಯತ್ಯಾಸಗಳೂ ಸಹ ಎದ್ದು ಕಾಣುತ್ತವೆ. ಹೊಸದಾಗಿ ಬಂದ ಅಪರಿಚಿತರಿಗೂ ಸಹ ಇವರು ಚೈನೀಸ್, ಇವರು ಮಲೈ, ಇವರು ಇಂಡೋನೇಶಿಯನ್ನರು, ಇವರು ಫಿಲಿಫಿನೊ ಎಂದು ಹೇಳಲು ಸಾಧ್ಯವಾಗುವಂತೆ ಅಂತರ, ಆಚಾರ, ವಿಚಾರ, ಉಡುಗೆ ತೊಡುಗೆಗಳು ಢಾಳಾಗಿ ಎದ್ದು ಕಾಣಿಸುತ್ತವೆ. ಆದರೇಕೊ ಇಲ್ಲಿ ಮಾತ್ರ ತೀರಾ ಸೂಕ್ಷ್ಮವಾಗಿ ಗಮನಿಸಿದ್ದಲ್ಲದೆ ಅಷ್ಟು ಸುಲಭದಲ್ಲಿ ಗೊತ್ತಾಗುವುದಿಲ್ಲ. ಅಲ್ಲದೆ ದೈನಂದಿನ ಒಡನಾಟದಲ್ಲೂ ಈ ಜನ ತೀರಾ ಸರಳವಾಗಿ, ಸಹಜವಾಗಿ ಬೆರೆತು ಒಡನಾಡುವುದರಿಂದ ಹೊರಗಿನವರಿಗೆ ವ್ಯತ್ಯಾಸವೆ ಇಲ್ಲವೆನಿಸಿಬಿಡುತ್ತದೆ. ಮಾತ್ರವಲ್ಲ ಈ ಥಾಯ್ ಚೀನಿಯರಿಗೆ ಸಾಮಾನ್ಯ ಇತರೆ ಚೀನಿಯರಲ್ಲಿ ಕಂಡೂ ಕಾಣದಂತೆ ಅಡಕವಾಗಿರುವ 'ಅಗ್ರೆಸ್ಸಿವ್' ರೀತಿಯ ಧಾರ್ಷ್ಟ್ಯ ಗುಣವೂ ಇಲ್ಲದಿದ್ದುದು. ಬಹುಶಃ ಇದೆಲ್ಲದರ ಸಮ್ಮಿಶ್ರಣದಲ್ಲಿ ಎಲ್ಲರೂ ಒಂದೆ ರೀತಿ ಕಂಡಿದ್ದರೆ ಅಚ್ಚರಿಯೇನೂ ಇರಲಿಲ್ಲ. ಟೀಮ್ ಬಿಲ್ಡಿಂಗಿನ ಹೊತ್ತಿನಲ್ಲಿ ಅವರು ಜತೆ ಸೇರಿ ಒಡನಾಟಕ್ಕಿಳಿದ ಬಗೆಯನ್ನು ಕಂಡ ಶ್ರೀನಾಥನಿಗೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿತ್ತು - ಅಷ್ಟರಮಟ್ಟಿನ ಸಖ್ಯ, ಸಾಂಗತ್ಯದಲ್ಲಿ ಗಂಡಸು, ಹೆಂಗಸರೆಂಬ ಭೇಧವಿಲ್ಲದೆ ರಾತ್ರಿಯೆಲ್ಲ ಇಸ್ಪೀಟಾಡಿಕೊಂಡೊ, ಹಾಡು ಹೇಳಿಕೊಂಡೊ ನಕ್ಕು ನಲಿದಿದ್ದರು ಎಲ್ಲರು.  

ಅದಾದ ಮೇಲೆ ನಿಜವಾದ ಥಾಯ್ ಸಂಸ್ಕೃತಿ ಯಾವುದಿರಬಹುದೆಂಬ ಮತ್ತೊಂದು ಗೊಂದಲ, ಜಿಜ್ಞಾಸೆ ಆರಂಭವಾಗಿಬಿಟ್ಟಿತು ಶ್ರೀನಾಥನಿಗೆ. ಯಾವುದೆ ಆಚಾರ ವಿಚಾರಗಳನ್ನು ಕಂಡರೂ ಇದು ಮೂಲ ಥಾಯ್ನದೆ ಅಥವಾ ಚೀನಿ ಬಳುವಳಿಯ ಮಿಶ್ರಣವೆ ಎಂದು ಸಂಶಯ ಬರಲಾರಂಭವಾಗುತಿತ್ತು. ಆ ಕುರಿತು ಇವನು ಪದೆ ಪದೆ ಕುತೂಹಲದಿಂದ ಕೇಳುತಿದ್ದ ಪ್ರಶ್ನೆಗಳಿಂದ ಅವನಿಗಿರುವ ಆಸಕ್ತಿಯನ್ನು ಅರಿತವರಂತೆ ಅಲ್ಲಿನ ವಿಭಾಗದ ಮುಖ್ಯಸ್ಥರಲ್ಲೊಬ್ಬರಾದ ಕುನ್. ನೊಪ್ಪೊನ್ ಅವನಿಗೆ ಅಪ್ಪಟ ಥಾಯ್ ಚರಿತ್ರೆ ಸಾರುವ ಒಂದು ಐತಿಹಾಸಿಕ ಸಿನಿಮಾ ಬಂದಿರುವುದನ್ನು ತಿಳಿಸಿ ನೋಡಲು ಹೇಳಿದ್ದರು. ಕುನ್. ನೊಪ್ಪೋನ್ ಸ್ಥೂಲಕಾಯದ ಥಾಯಿ ವ್ಯಕ್ತಿ. ಸೇಲ್ಸ್ ಡಿಪಾರ್ಟ್ಮೆಂಟಿನ ಮ್ಯಾನೇಜರಾದ ಕಾರಣ ಶ್ರೀನಾಥನ ಜತೆ ಆಗಾಗ್ಗೆ ಒಡನಾಟವಿರುತಿತ್ತು. ಕೆಲವೊಮ್ಮೆ ಒಟ್ಟಾಗಿ ಲಂಚಿಗೆ ಹೋಗಿ ಬರುತಿದ್ದುದು ಉಂಟು. ಅವರ ಸಲಹೆಯಿಂದ ಕುತೂಹಲವಾಗಿ ಆ ಚಿತ್ರ ' ಸುರಿಯೊ ಥಾಯ್' ಡಿವಿಡಿ ಇಂಗ್ಲೀಷ್ ಆವೃತ್ತಿಯೇನಾದರೂ ಸಿಗುವುದೊ ಎಂದು ಹುಡುಕಿದ್ದ. ಇಂಗ್ಲೀಷ್ ಸಿಗದಿದ್ದರೂ, ಇಂಗ್ಲೀಷ್ ಸಬ್ ಟೈಟಲ್ಗಳಿರುವ ಆವೃತ್ತಿ ಸಿಕ್ಕಿತು. ಆ ಐತಿಹಾಸಿಕ ಚಿತ್ರ ಒಂದು ರೀತಿ ಆ ದೇಶದ ಒಂದು ಕಾಲಘಟ್ಟದ ಯುದ್ಧದ ಹಿನ್ನಲೆಯಲ್ಲಿ ನಡೆದ ಕಥಾನಕ. ಥಾಯ್ ಇತಿಹಾಸದತ್ತ ಒಂದು ಸಿಂಹಾವಲೋಕನ ಮಾಡಿದರೆ ಗಮನಕ್ಕೆ ಬರುವ ಒಂದು ಅಂಶ - ಎಲ್ಲಾ ಸಾಮ್ರಾಜ್ಯದ ರಾಜ್ಯಭಾರಗಳಲ್ಲಿರುವಂತೆ ರಕ್ತಸಿಕ್ತವಾದ, ಯುದ್ಧ, ಆಕ್ರಮಣಗಳಿಂದ ತುಂಬಿದ ಕಥಾನಕಗಳೆ ಹೆಚ್ಚು ಕಾಣಿಸುತ್ತವೆ. ಅಂತೆಯೆ ಆ ಕದನಗಳ ಜತೆಯಲ್ಲೆ ಮಿಳಿತವಾದ ಬೌದ್ಧ ಧರ್ಮದ ಪ್ರಸರಣ ಸಮಯದ ಹೋರಾಟ, ಪ್ರಸ್ತಾಪಗಳು ಅಲ್ಲಲ್ಲಿ ಕಾಣಸಿಗುತ್ತವೆ. ದೇಶಾಂತರಗಳಿಂದೆಲ್ಲ ಬುದ್ಧನ ವಿಗ್ರಹಗಳನ್ನು ಸಾಗಿಸಲು ನಡೆಸಿದ ಹುನ್ನಾರಗಳು ಅಲ್ಲಲ್ಲಿ ಕಣ್ಣಿಗೆ ಬೀಳುತ್ತವೆ. ಈ ಕಥಾನಕ 'ಸುರಿಯೊ ಥಾಯ್' ಎಂಬ ರಾಜ ಮನೆತನದ ಹೆಣ್ಣು ಮಗಳದು. ನಮ್ಮ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿಯಂತಹ ಹಿನ್ನಲೆಯ ಕಥಾನಕ. ಆ ಹೋರಾಟಗಳಲ್ಲಿ ಭಾರತದ ರೀತಿಯೆ ಆನೆ, ಕುದುರೆ ಬಳಸಿದ್ದ ರೀತಿ ಹಳೆ ಕನ್ನಡ ಚಿತ್ರಗಳನ್ನು ನೆನಪಿಸಿತ್ತು ಶ್ರೀನಾಥನಿಗೆ. ಹಾಗೆಯೆ ಅರಮನೆಯಂತಹ ಕಡೆ ಅವರ ನಡುವಳಿಕೆಯ ರೀತಿ , ಅದರಲ್ಲೂ ರಾಜ ರಾಣಿಯರಿಗೆ ಕಾಲು ತೋರಿಸದ ರೀತಿ ಪಕ್ಕದ ಬದಿಗೆ ಮಂಡಿಯೂರಿ ತೆವಳುತ್ತಲೆ ಸರಿದಾಡುವ ಪರಿಚಾರಿಕೆಯರ ರೀತಿ , ರಿವಾಜುಗಳು ಒಂದು ಬೇರೆಯದೆ ಲೋಕಕ್ಕೆ ಕರೆದೊಯ್ದುಬಿಟ್ಟಂತೆ ಭಾಸವಾಗಿತ್ತು. ಆ ಚಿತ್ರ ನೋಡಿದ ಮೇಲೆ ಅವನು ದಿನನಿತ್ಯ ನೋಡುತಿದ್ದ ಕೆಲವು ವಿಶಿಷ್ಠ ಆಚಾರ , ಸಂಪ್ರದಾಯಗಳ ಮೂಲ ತೀರಾ ಪ್ರಾಚೀನವಾದದ್ದೆಂದು ಅರಿವಾಗಿತ್ತು.

ಥಾಯ್ ಕಲಾಚಾರ ನಡೆನುಡಿ ಸಂಸ್ಕೃತಿಯ ವಿಷಯಕ್ಕೆ ಬಂದಾಗ ಅಲ್ಲಿ ನಡೆದ ಮತ್ತೊಂದು ತಮಾಷೆಯ ಘಟನೆ ಶ್ರೀನಾಥನಿಗೆ ಮಾತ್ರವಲ್ಲದೆ ಅವನ ಜತೆಗಿದ್ದ ಮಿಕ್ಕವರಿಗೂ ಲಘು ಮನೋರಂಜನೆಯೊದಗಿಸಲು ಕಾರಣವಾಗಿತ್ತು. ಪ್ರತೀ ಬಾರಿಯಂತೆ ಆ ವರ್ಷವೂ ವರ್ಷದ ಕೊನೆಯಲ್ಲಿ ನಡೆಯುವ ಡಿನ್ನರ ಅಂಡ್ ಡ್ಯಾನ್ಸ್ ಪಾರ್ಟಿಗೆ ಈ ಬಾರಿ ಪ್ರಾಜೆಕ್ಟಿನ ದೆಸೆಯಿಂದಾಗಿ ಶ್ರೀನಾಥನ ತಂಡವನ್ನೂ ಆಹ್ವಾನಿಸಿದ್ದರು. ಕಳೆದೆರಡು ವರ್ಷ ಜಾಗತಿಕವಾಗಿ ಆರ್ಥಿಕ ಸ್ಥಿತಿ ಕುಸಿದು, ವಾಣಿಜ್ಯ ತೀರ ಬಳಲಿ ಕೆಳಮಟ್ಟಕಿದ್ದ ಕಾರಣ ಈ ಆಚರಣೆ ತಾತ್ಕಾಲಿಕವಾಗಿ ನಿಂತುಹೋಗಿತ್ತು. ಹೀಗಾಗಿ ಈ ಬಾರಿ ತುಂಬಾ ವಿಜೃಂಭಣೆಯಿಂದ ಆಚರಿಸಲು ಸಿದ್ದತೆ ನಡೆದಂತಿತ್ತು. ಅದರಲ್ಲೂ ಕೆಲವು ಸ್ತರದ ಉದ್ಯೋಗಿಗಳು ಪ್ರತಿವರ್ಷ ಇದನ್ನು ಕಾತರದಿಂದ ಎದುರು ನೋಡುವ ಕಾರಣ ಆದಷ್ಟು ರಸವತ್ತಾಗಿಡಲು ಪ್ರಯತ್ನಿಸಿದಂತಿತ್ತು. ಈ ಬಾರೀ ಬಿಯರ, ವೈನು, ಆಲ್ಕೋಹಾಲುಗಳು ನೀರಿನಂತೆ ಹರಿಯಲಿದೆಯೆಂದು ಕೆಲವರು ಮಾತನಾಡಿಕೊಳ್ಳುತಿದ್ದರೆ, ಪ್ರಥಮ ಬಾರಿಗೆ ಶ್ರೀನಾಥನ ತಂಡವೂ ಸೇರಿದಂತೆ ಸಾಕಷ್ಟು ವಿದೇಶಿಯರೂ ಭಾಗವಹಿಸುತ್ತಿರುವುದರಿಂದ ಥಾಯ್ ಕಲೆ, ಆಚಾರ, ಸಂಸ್ಕೃತಿಗಳನ್ನು ಅನಾವರಣಗೊಳಿಸುವ ಕೆಲವು ಭಾಗಗಳು ಪ್ರೋಗಾಮಿನಲ್ಲಿ ಸೇರಿದೆಯೆಂದು ಸುದ್ದಿ ಹರಡಿತ್ತು. ಅದಕ್ಕೆಂದೊ ಏನೊ ಪ್ರತಿ ಬಾರಿ ತಮ್ಮಷ್ಟಕ್ಕೆ ತಾವೆ ನಡೆಸಿಕೊಳ್ಳುತ್ತಿದ್ದ ಕಾರ್ಯಕ್ರಮದ ಬದಲಿಗೆ ಈ ಬಾರಿ ಹೊರಗಿನ ಮಾರ್ಕೆಟಿಂಗ್ ಈವೆಂಟ್ ನಡೆಸುವ ವೃತ್ತಿಪರ ಸಂಘಟನೆಯೊಂದಕ್ಕೆ ಜವಾಬ್ದಾರಿ ವಹಿಸಲಾಗಿತ್ತು. ಹೀಗಾಗಿ ಈ ಬಾರಿಯ ಆಚರಣೆಯ ಬಗ್ಗೆ ಸಾಕಷ್ಟು ನಿರೀಕ್ಷೆ ಕುತೂಹಲ ಹುಟ್ಟಿಕೊಂಡಿತ್ತು. ಬ್ಯಾಂಕಾಕಿನ ಗದ್ದಲದಿಂದ ಪೂರ್ತಿ ಹೊರಗೆ ರೆಸಾರ್ಟ್ ಒಂದರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆಂದೆ ಶುಕ್ರವಾರದ ಅರ್ಧ ದಿನ ರಜೆಯನ್ನು ಘೋಷಿಸಲಾಗಿತ್ತು. ಅಲ್ಲದೆ ಕಾರ್ಯಕ್ರಮಕ್ಕೆ ಕಳೆ ಹೆಚ್ಚಿಸಲು ಕಾರ್ಯಕ್ರಮದ ಥೀಮ್ ಆಗಿ ' ಥಾಯ್ ಸಾಂಸ್ಕೃತಿಕತೆ' ಯನ್ನು ಆರಿಸಿ, ಪ್ರತಿಯೊಬ್ಬರೂ ಥಾಯ್ ಸಾಂಪ್ರದಾಯಿಕ ಅಥವಾ ಥಾಯ್ ಅಧುನಿಕ ದಿರಿಸಿನಲ್ಲೆ ಬರಬೇಕೆಂದು ನಿಯಮವನ್ನು ವಿಧಿಸಲಾಗಿತ್ತು.

ಇವರಿಗೊ ತಮ್ಮ ಸಂಸ್ಕೃತಿ ಆಚಾರ ವಿಚಾರಗಳೆ ಶುದ್ಧ ಪಿಟಿಪಿಟಿ. ಅಂತಹುದ್ದರಲ್ಲಿ ಥಾಯ್ ಸಾಂಪ್ರದಾಯಿಕ ಬಟ್ಟೆ ಧರಿಸಿ ಬರಬೇಕೆಂದರೆ? ಥಾಯ್ ಸಾಂಪ್ರದಾಯಿಕ ಉಡುಗೆಯೆಂದರೆ ಏನು ಎನ್ನುವುದೆ ದೊಡ್ಡ ಸಮಸ್ಯೆಯಾಗಿ ಹೋಗಿತ್ತು. ಆಫೀಸಿನಲ್ಲಿ ಸಾಧಾರಣ ಆಧುನಿಕ ಉಡುಗೆ ತೊಡುಗೆಯುಟ್ಟೆ ಬರುವವರು ಎಲ್ಲರು. ಇನ್ನು ಬೇರೆಡೆ ಕಂಡ ಸಾಂಪ್ರದಾಯಿಕ ತೊಡುಗೆಯೆಂದರೆ ಎಲ್ಲಾ ಪೌರಾಣಿಕ ಉಡುಗೆ ತೊಡುಗೆಯಂತಹದ್ದು. ಅಂತಹದ್ದನ್ನು ಧರಿಸಿದರೆ ಇವರೆ ಆಕರ್ಷಣೆಯ ಬಿಂದುವಾಗಿಬಿಡುವ ಸಾಧ್ಯತೆಯಂತೂ ಗಟ್ಟಿ. ಜತೆಗೆ ಇವರನ್ನು ಬಿಟ್ಟು ಬೇರೆಯವರೆಲ್ಲ ಮಾಮೂಲಿ ಉಡುಗೆಯಲಿದ್ದರೆ ಇನ್ನು ಮುಜುಗರ. ಆದಷ್ಟು ಗಮನ ಸೆಳೆಯದ ರೀತಿ ಉಡುಗೆ ಧರಿಸುವುದೆ ಕ್ಷೇಮಕರ ಎಂದು ಅನಿಸಿ ಅದಕ್ಕೆಂದೆ ಕೆಲವರ ಸಲಹೆ ಕೇಳಿದರೆ ಯಾರೂ ಬಾಯಿ ಬಿಡುತ್ತಲೆ ಇಲ್ಲ .. ಎಲ್ಲಾ ನೀವೆ ಹುಡುಕಿ ನಿರ್ಧರಿಸಿಕೊಳ್ಳಿ ಎಂದು ತುಂಟ ನಗೆ ನಕ್ಕು ಕೈ ತೊಳೆದುಕೊಳ್ಳುವವರೆ. ಬಹುಶಃ ಹೀಗೆ ಆಟವಾಡಿಸಿ ಅವರು ತೊಡಬಹುದಾದ ವಿಚಿತ್ರ ಉಡುಗೆ ತೊಡುಗೆ ನೋಡಿ ತಮಾಷೆ ನೋಡಲೆಂದೊ ಏನೊ? ಕೊನೆಗೆ ಕಾರ್ಯಕ್ರಮದ ಎರಡು ದಿನ ಮೊದಲು ಎಲ್ಲಾ ಒಟ್ಟುಗೂಡಿ ಏನು ಮಾಡಬೇಕೆಂದು ಚರ್ಚಿಸಿದಾಗ ಸುರ್ಜಿತ್ ಕುಮಾರ ತನ್ನ ಮನೆಯ ಬಳಿ ಪರಿಚಿತ ಥಾಯ್ ಅಂಗಡಿಯೊಂದು ಇರುವುದಾಗಿ , ಬೇಕಿದ್ದರೆ ಅಲ್ಲಿಂದ ಕೇಳಿ ತರುವುದಾಗಿ ಹೇಳಿದಾಗ ಎಲ್ಲರು ನೆಮ್ಮದಿಯ ನಿಟ್ಟುಸಿರು ಬಿಟ್ಟು ತಂತಮ್ಮ ಅಳತೆ ಕೊಟ್ಟಿದ್ದರು. ಅಲ್ಲಿಗೆ ಆ ತಲೆನೋವು ಮುಗಿದಂತಾಗಿತ್ತು. ಇವರೆಲ್ಲ ಯಾವ ದಿರುಸುಟ್ಟು ಬರುವರೆಂಬ ಕುತೂಹಲದಿಂದ ವಿಚಾರಿಸಿದ ಕೆಲವರಿಗೂ ಗುಟ್ಟು ಬಿಟ್ಟು ಕೊಡದೆ ಧಿಮಾಕು ತೋರಿಸುವ ಸರದಿ ಈಗ ಇವರ ಪಾಲಿನದಾಗಿತ್ತು.. ಅಂತೂ ನೋಡ ನೋಡುತಿದ್ದಂತೆ ಆ ದಿನ ಬಂದೆಬಿಟ್ಟಿತು. ಬೆಳಗಿನಿಂದಲೆ ಎಲ್ಲಾ ಸುಮ್ಮನೆ ಆಫೀಸಿಗೆ ಬಂದಂತೆ ಕಾಣುತಿದ್ದರೆ ಹೊರತು, ಯಾರಿಗೂ ಕೆಲಸದತ್ತ ಗಮನವೆ ಇದ್ದಂತಿರಲಿಲ್ಲ...ಅ ಮೂಡ್ ಗಮನಿಸಿದ ಶ್ರೀನಾಥನೂ ಆ ದಿನ ಬೆಳಗಿನ ಎರಡು ಮೀಟಿಂಗುಗಳನ್ನು ರದ್ದು ಮಾಡಿ ಅವರ ಮೂಡಿಗೆ ಮತ್ತಷ್ಟು ಚಾಲನೆ ಕೊಟ್ಟಿದ್ದ. ಕೊನೆಗೆ ಮಧ್ಯಾಹ್ನವಾಗುತ್ತಿದ್ದಂತೆ ಎಲ್ಲಾ ಹೊರಟು ಆಫೀಸೆಲ್ಲ ಖಾಲಿಯಾದಾಗ ಇವರೂ ಹೊರಟರು, ಸಂಜೆಯ ಹೊತ್ತಿಗೆ ಎಲ್ಲಾ ರಿಸಾರ್ಟ್ ಬಳಿ ಸೇರುವ ವಾಗ್ದಾನದೊಂದಿಗೆ. 

ಅಂದು ಸಂಜೆ ಸೇರಿದಾಗ ಮಾತ್ರ ಇವರೆ ಪೆಚ್ಚಾಗುವಂತಾಗಿತ್ತು - ಇತರರು ಬಂದಿದ್ದ ತರಹಾವರಿ ಸಾಂಪ್ರದಾಯಿಕ ದಿರುಸನ್ನು ನೋಡಿದ ಮೇಲೆ. ಇವರೆಲ್ಲ ಸುರ್ಜಿತ್ ಕುಮಾರ ತಂದಿದ್ದ ಸಡಿಲ ವರ್ಣರಂಜಿತ ಜುಬ್ಬಾದಂತಹ ಮೇಲುಡುಪಿಗೆ ಜತೆಯಾಗಿ ಉದ್ದದ ಬರ್ಮುಡ ಧರಿಸಿಕೊಂಡು ಬಂದಿದ್ದರು. ಪುಕೆತ್ ಪಟ್ಟಾಯಗಳಂತಹ ಜಾಗಗಳ ಬೀಚಿನ ತೀರದಲ್ಲಿ ಇದೇ ರೀತಿಯ ಬಣ್ಣಬಣ್ಣದ ಬಟ್ಟೆ ಧರಿಸಿದ್ದ ದೃಶ್ಯಗಳನ್ನು ಸಾಮಾನ್ಯವಾಗಿ ನೋಡಿ ಅಭ್ಯಾಸವಿದ್ದ ಇವರೆಲ್ಲ ಅದೂ ಕೂಡ ಒಂದು ರೀತಿಯ ಸಾಂಪ್ರದಾಯಿಕ ಉಡುಗೆಯೆ ಎಂದು ಭಾವಿಸಿ ಅವುಗಳನ್ನೆ ಧರಿಸಿಕೊಂಡು ಬಂದುಬಿಟ್ಟಿದ್ದರು. ಆ ಸ್ಥಳಕ್ಕೆ ಬಂದರೆ ಇವರ ಗುಂಪು ಮಾತ್ರ ಬೀಚಿನ ಪಾರ್ಟಿಗೆ ಬಂದ ಪ್ರವಾಸಿಗಳ ಹಾಗೆ ಕಾಣುತ್ತಿದ್ದರೆಂದು ಅರಿವಾಗಿ ಎಲ್ಲರಿಗೂ ಮುಜುಗರ. ಸಾಲದಕ್ಕೆ ಇವರನ್ನು ಕಂಡ ಸಹೋದ್ಯೋಗಿಗಳೆಲ್ಲ ಮುಸಿಮುಸಿ ನಗುತ್ತ 'ಸುವೈ ಮಾಕ್' ಎಂದು ಛೇಡಿಸಿದಾಗ ಇವರಿಗೆ ಇನ್ನು ಪೆಚ್ಚು. ಆದಷ್ಟು ಯಾರಿಗೂ ಕಾಣದ ಮೂಲೆಯೊಂದನ್ನು ಹಿಡಿದು ಕೂರೋಣವೆಂದು ಹೊರಟರೆ ಯಾರೊ ಒಬ್ಬರು ಬಂದು ಇವರನ್ನೆಲ್ಲ ಎಳೆದುಕೊಂಡು ಹೋಗಿ ಮುಂದಿನ ಮೊದಲ ಸಾಲಿನಲ್ಲೆ ಮ್ಯಾನೇಜ್ಮೆಂಟು ಟೀಮಿನ ಜತೆ ಕೂರಿಸಿಬಿಟ್ಟಿದ್ದರು. ಇವರಿಗೆ ಮುಜುಗರದ ಜತೆ ಚಡಪಡಿಕೆಯೂ ಸೇರಿಕೊಂಡು ಎಷ್ಟೊತ್ತಿಗೆ ಇದೆಲ್ಲ ಮುಗಿದು ಹೊರಟುಬಿಡುವೆವೊ ಎನ್ನುವಂತಾಗಿತ್ತು. ಸಾಲದ್ದಕ್ಕೆ ಆ ಸಾಲಿನಲ್ಲಿ ಕುಳೀತಿದ್ದ ಐರೋಪ್ಯ ಮೂಲದ ಮ್ಯಾನೇಜಿಂಗ್ ಡೈರೆಕ್ಟರವರು ಸೂಟು ಬೂಟು ಧರಿಸಿ ಪಕ್ಕದಲ್ಲೆ ಕುಳಿತುಬಿಟ್ಟು ಇನ್ನೂ ಹೆಚ್ಚು ಕಣ್ಕಣ್ಣು ಬಿಡುವಂತಾಗಿತ್ತು. 

ಅದೃಷ್ಟವಶಾತ್ ಇವರ ಮುಜುಗರ, ಚಡಿಪಡಿಕೆಯನ್ನೆಲ್ಲ ಮರೆಸುವಂತೆ ವೇದಿಕೆಯಲ್ಲಿ ಕಾರ್ಯಕ್ರಮಗಳು ಆರಂಭವಾಗಿತ್ತು. ಒಂದೊಂದಾಗಿ ಹಾಡು, ಕುಣಿತ, ಪ್ರಹಸನ, ಫ್ಯಾಷನ್ ಷೊ ಇತ್ಯಾದಿಗಳ ಲಯದೊಂದಿಗೆ ಆರಂಭವಾದ ಕಾರ್ಯಕ್ರಮ ಇದ್ದಕ್ಕಿದ್ದಂತೆ ವೇಗ ಹೆಚ್ಚಿಸಿಕೊಂಡಂತೆ ಮಾರ್ಕೆಟಿಂಗ್ ಈವೆಂಟಿನ ಕಂಪನಿಯ ವಿಶೇಷ ಕಾರ್ಯಕ್ರಮಗಳತ್ತ ತಿರುಗಿತು. ಸಾಂಪ್ರದಾಯಿಕ ವಸ್ತ್ರಾಭರಣದೊಂದಿಗೆ ಸ್ಥಳೀಯ ಕಲಾಚಾರದ ಪ್ರದರ್ಶನದ ತುಣುಕುಗಳನ್ನು ನಿರೀಕ್ಷಿಸಿದ್ದ ಇವರೆಲ್ಲರಿಗೂ ಅಚ್ಚರಿಯಾಗುವಂತೆ ಮೈಗೆ ಮೆತ್ತಿಕೊಂಡಂತಿದ್ದ ಬಿಗಿಯುಡುಗೆಯ ಲಲನೆಯರ ಓಡಾಟ , ಮಾತಾಟಗಳಿಂದ ತುಂಬಿಹೋಗಿತ್ತು...ಪ್ರದರ್ಶನವೆಲ್ಲ ಥಾಯ್ ಭಾಷೆಯಲಿದ್ದ ಕಾರಣ ಇವರಾರಿಗೂ ಏನೂ ಅರ್ಥವಾಗದಿದ್ದರೂ ಸ್ಥಳೀಯರೆಲ್ಲ ಬಿದ್ದು ಬಿದ್ದೂ ನಗುತಿದ್ದ ಕಾರಣ ಹಾಸ್ಯ ಪ್ರಹಸನವಿರಬೇಕೆಂದು ಊಹಿಸಬಹುದಾಗಿತ್ತಷ್ಟೆ. ಪೇಯ, ಪಾನೀಯಗಳ ಸತತ ಸರಬರಾಜಿನಿಂದಾಗಿ ಮೊದಲೆ ರಂಗುಕಟ್ಟಿದ್ದ ಸಮಾರಂಭಕ್ಕೆ ಅಬ್ಬರದ ಸಂಗೀತ, ಮೈಕು ಸ್ಪೀಕರುಗಳ ಗದ್ದಲವೂ ಸೇರಿ ಯಾರು ಏನು ಮಾತಾಡುತ್ತಿದ್ದಾರೆಂದೆ ಕೇಳಿಸದ ವಾತಾವರಣ. ಈ ನಡುವೆ ಗಳಿಗೆಯಿಂದ ಗಳಿಗೆಗೆ ವೇಗ ವರ್ಧಿಸಿಕೊಂಡಂತೆ ಕಾಣುತಿದ್ದ ವೇದಿಕೆಯ ಕಾರ್ಯಕ್ರಮ ನೋಡು ನೋಡುತ್ತಿದ್ದಂತೆ ಹೆಚ್ಚು ಹೆಚ್ಚು ಅರೆ ಬೆತ್ತಲೆ ನೃತ್ಯದ ಪ್ರದರ್ಶನ, ಅಶ್ಲೀಲತೆಯ ಪಾಟ್ಪೋಂಗ್ ಮಟ್ಟಕ್ಕಿಳಿದಾಗ ಇವರಿಗೆಲ್ಲ ಅಚ್ಚರಿ. ಜತೆಯಲ್ಲಿ ಕೂತಿದ್ದ ಮ್ಯಾನೇಜ್ಮೆಂಟಿನ ಟೀಮೀಗೂ ಇದು ಅನಿರೀಕ್ಷಿತವಾಗಿತ್ತೇನೊ ಎಂಬಂತೆ ಅವರವರಲ್ಲೆ ಮುಖಾ ಮುಖ ನೋಡಲಾರಂಭಿಸಿದಾಗಲೆ ಇವರಿಗೂ ಅವರ ಮುಜುಗರ ಅರಿವಾಗಿದ್ದು. ಆ ಪ್ರಾಸಂಗಿಕ ತಿರುವಿನಿಂದಾಗಿ ಇವರ ಬಟ್ಟೆಯ ಮುಜುಗರವೆಲ್ಲ ಮಾಯವಾಗಿ ಸಮಾಧಾನದ ನಿಟ್ಟುಸಿರಿಡುವಂತಾಗಿತ್ತು. 

ಉಗ್ರಾಣದಲ್ಲಿ ಕೆಲಸ ಮಾಡುವ ಕೆಲವು ನೌಕರರು ಸೇರಿದಂತೆ ಅದನ್ನು ಆಸ್ವಾದಿಸುವ ಗುಂಪೊಂದು ವೇದಿಕೆಯಲ್ಲೆ ಹತ್ತಿ ನರ್ತನ ಮಾಡತೊಡಗಿದಾಗ ಯಾಕೊ ಇದು ತೀರಾ ಅಶ್ಲೀಲ ಮಟ್ಟಕ್ಕಿಳಿದಂತಿದೆಯೆಂದೆನಿಸಿ ಸ್ವಲ್ಪ ಆಚೆ ಹೋಗಿ ಬರೋಣವೆಂದು ಮೇಲೆದ್ದಿದ್ದ ಶ್ರೀನಾಥ. ಆಗಷ್ಟೆ ಅವನು ಗಮನಿಸಿದ್ದು ತನ್ನ ಸುತ್ತಮುತ್ತಲ ಸುಮಾರು ಆಸನಗಳಿಂದ ಮುಕ್ಕಾಲು ಪಾಲು ಜನ ಒಂದಲ್ಲ ಒಂದು ನೆಪದಲ್ಲಿ ಎದ್ದುಬಿಟ್ಟಿದ್ದರೆಂದು. ಪಾನೀಯದ ಲೋಟ ಇಡುವ ನೆಪದಲ್ಲಿ ಶ್ರೀನಾಥನು ಎದ್ದು ತುಸು ದೂರ ನಡೆದು ಬಂದಾಗ ಥಾಯಿ ಸಾಂಪ್ರದಾಯಿಕ ಉಡುಗೆಯಲ್ಲಿ ಥೇಟ್ ಅಪ್ಸರೆಯಂತೆ ಕಾಣುತಿದ್ದ ಮಾರ್ಕೆಟಿಂಗ್ ವಿಭಾಗದ ಮತ್ತೊಬ್ಬ ಸಹೋದ್ಯೋಗಿ ಕುನ್.ಸುಪಾರಾತ್ ಕಣ್ಣಿಗೆ ಬಿದ್ದಿದ್ದರು. ಸೊಗಸಾದ ಆಂಗ್ಲ ಭಾಷೆ ಮಾತನಾಡುವ ಕೆಲವೆ ಥಾಯ್ ಸಹೋದ್ಯೋಗಿಗಳಲ್ಲಿ ಒಬ್ಬರಾದ ಆಕೆ ಎಲ್ಲರ ಗಮನ ಸೆಳೆಯುತಿದ್ದುದು ಆಕೆಯ ಮಾತಿಗಿಂತಲೂ ಅದ್ಭುತವಾದ ಸೌಂದರ್ಯದಿಂದಾಗಿ. ಮದುವೆಯಾಗಿ ಎರಡು ಮಕ್ಕಳಿದ್ದರೂ ತನ್ನ ಮೂಲ ಸೌಂದರ್ಯದ ವೈಭವವನ್ನು ಹಾಗೆಯೆ ಜತನದಿಂದ ಕಾಪಾಡಿಕೊಂಡಂತಿದ್ದ ಆಕೆಗೆ ಥಾಯ್ ಸಂಪ್ರದಾಯವೆಂದರೆ ವಿಶೇಷ ಗೌರವ, ಪ್ರೀತಿ. ಹಾಗೆಯೆ ಸದಾ ಯಾವುದಾದರೊಂದು ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ನಿರತರಾಗಿರುವ ಸ್ವಭಾವ. ಪ್ರಾಜೆಕ್ಟಿನಲ್ಲಿ ಆಕೆಯದೇನು ಪಾತ್ರವಿರದಿದ್ದರೂ ಆಗಾಗ್ಗೆ ಮಾತನಾಡುವಾಗ ಥಾಯ್ - ಭಾರತೀಯ ಸಂಸ್ಕೃತಿಯ ವಿನಿಮಯವಾಗುತಿದ್ದ ಕಾರಣದಿಂದಾಗಿ ಸ್ವಲ್ಪ ಮಾತನಾಡುವಷ್ಟು ಸಲಿಗೆಯಿತ್ತು. ಅವನನ್ನು ನೋಡುತಿದ್ದಂತೆ ಅವನು ಮಾತನಾಡುವ ಮೊದಲೆ ಯಾವುದೊ ಅಪರಾಧಿ ಭಾವದಲ್ಲಿನ ಧ್ವನಿಯಲ್ಲಿ ' ದಿಸ್ ಇಸ್ ನಾಟ್ ಥಾಯ್ ಕಲ್ಚರ..ದಿಸ್ ಇಸ್ ಫಾರ್ ದ ಎಂಜಾಯ್ಮೆಂಟ್ ಆಫ್ ಸಮ್ ಪೀಪಲ್ ಓನ್ಲಿ...ದಿಸ್ ಈಸ್ ನಾಟ್ ಟ್ರೂ ಟ್ರಡಿಶನಲ್ ಥಾಯ್ ಪ್ರೋಗ್ರಾಮ್..' ಎಂದಿದ್ದಳು. ಅವಳ ಮುಜುಗರ, ಕಳವಳ ಅರ್ಥವಾದವನಂತೆ ತಲೆಯಾಡಿಸುತ್ತ ಅವನು ವಾಕಿಂಗ್ ಸ್ಟ್ರೀಟಿನಲ್ಲಿ ನೋಡಿದ್ದ ಥಾಯ್ ರಾಮಾಯಣದ ಪ್ರದರ್ಶನದ ಕುರಿತು ಮಾತಾಡುತ್ತ ಅವಳ ಗಮನ ಬೇರೆಡೆಗೆ ತಿರುಗಿಸಿದ್ದ. ಅಂತೂ ಆ ದಿನದ ಕಾರ್ಯಕ್ರಮವೆಲ್ಲ ಮುಗಿದು ಬಫೆಯೂಟ ಮುಗಿಸಿದಾಗ ನಡುರಾತ್ರಿಯನ್ನು ಮೀರಿಸಿತ್ತು. ಆದರೂ ಅದೊಂದು ಮರೆಯದ ನೆನಪಾಗಿ ಎಲ್ಲರ ಮನಸಲ್ಲಿ ನಿಂತುಬಿಟ್ಟಿತು. ಆಗಿಂದ ಸಾಂಪ್ರಾದಾಯಿಕ ಉಡುಗೆಯೆಂದರೆ ಬೀಚ್ ಡ್ರೆಸ್ ಎಂದು ಪರಸ್ಪರರನ್ನು ಛೇಡಿಸುವುದೂ, ಇಡೀ ಕಾರ್ಯಕ್ರಮ ನೆನೆಸಿಕೊಂಡು ನಗುವುದೂ ನಡೆದೆ ಇತ್ತು. ಈ ನಡುವೆಯೆ ಟೆಸ್ಟಿಂಗಿನ ದಿನಗಳು ಹತ್ತಿರವಾಗಿ ಶ್ರೀನಾಥ ಸರಿಯಾದ ಟ್ರೈನಿಂಗ್ ರೂಮು ಸಿಗದೆ ಪರದಾಡುತಿದ್ದುದು. ಕುನ್. ಸು ಸಮಯೋಚಿತ ಚಾತುರ್ಯದಿಂದಾಗಿ ಜಾಗವೇನೊ ಸಿಕ್ಕಿದಂತಾಗಿತ್ತು. ಇನ್ನು ಮಿಕ್ಕಿದ್ದೇನಿದ್ದರೂ ಅದನ್ನು ಟೆಸ್ಟಿಂಗಿಗೆ ಬಳಸಲನುವಾಗುವಂತೆ ಸಿದ್ಧಗೊಳಿಸುವುದಷ್ಟೆ ಬಾಕಿಯಿದ್ದುದು. ಮುಂದಿನ ಭಾನುವಾರದೊಳಗೆ ಸಿದ್ದಪಡಿಸಿಡಬೇಕೆಂದು ಅಂದುಕೊಳ್ಳುತ್ತಲೆ ತಾಂತ್ರಿಕ ಸಿದ್ದತೆಯ ಮತ್ತಿತ್ತರ ವಿಷಯಗಳತ್ತ ಗಮನ ಹರಿಸಿದ್ದ ಶ್ರೀನಾಥ.

(ಇನ್ನೂ ಇದೆ)
_________

Comments

Submitted by kavinagaraj Mon, 03/17/2014 - 14:35

ಹೀಗಾದರೂ ಥಾಯ್ ಸಂಸ್ಕೃತಿ ಪರಿಚಯ ಸಂಪದಿಗರಿಗೆ ಆಗುತ್ತಿದೆ! ಧನ್ಯವಾದ, ನಾಗೇಶರಿಗೆ!

Submitted by nageshamysore Wed, 03/19/2014 - 00:34

In reply to by kavinagaraj

ಕವಿಗಳೆ ನಮಸ್ಕಾರ. ನಾ ಕಂಡು, ಕೇಳಿದ ತುಣುಕುಗಳನ್ನು ಹತ್ತನ್ನೆರಡು ವರ್ಷದ ಹಿಂದಿನ ನೆನಪಿನ ಮೂಸೆಯಿಂದೆತ್ತಿ ಕಥೆಯ ಹಂದರಕ್ಕೆ ಸೇರಿಸಿ ದಾಖಲಿಸಲು ಪ್ರಯತ್ನಿಸಿದ್ದೇನೆ. ಇಡಿ ಸಂಸ್ಕೃತಿಯ ಸಮಗ್ರ ಚಿತ್ರಣ ಕೊಡುವ ಆಳ ಅಧ್ಯಯನದ ಚಿತ್ರಕ್ಕಿಂತ , ಅಲ್ಲಿಗೆ ಹೋದವರು ಕಾಣುವ ದೈನಂದಿನ ಚಿತ್ರಣಕ್ಕೆ ಒತ್ತು ಕೊಟ್ಟಿರುವ ಕಾರಣ ನೈಜ್ಯತೆಗೆ ಸಾಕಷ್ಟು ಸಮೀಪವೆಂದೆ ಹೇಳಬಹುದು. ಸರ್ವವಿಧದಲ್ಲಿ ಪರಿಪೂರ್ಣವಾಗಿಲ್ಲದೆ ಇದ್ದರು, ಅಲ್ಲಿನ ಬದುಕಿನ ಒಂದು ಪಾರ್ಶ್ವನೋಟ ಖಂಡಿತ ಸಿಗುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು :-)

Submitted by ಗಣೇಶ Mon, 09/08/2014 - 00:23

In reply to by nageshamysore

ನಾಗೇಶರೆ, (ನೀವು ೫೧ ತಲುಪಿದಿರಿ- ನಾನಿನ್ನೂ ೧೧ರಲ್ಲಿದ್ದೇನೆ), ಇಲ್ಲಿನ ಸಂಸ್ಕೃತಿಯ ಪರಿಚಯವಿದ್ದೂ, ನಾಲ್ಕು ಪಾತ್ರಗಳನ್ನಿಟ್ಟು ಒಂದು ಲೇಖನ ಬರೆಯುವುದೇ ಕಷ್ಟ. ಅಂತಲ್ಲಿ ಅಪರಿಚಿತ ನಾಡಿನಲ್ಲಿ ೧೨ ವರ್ಷ ಹಿಂದೆ ಗಮನಿಸಿದ್ದನ್ನು ಇಷ್ಟು ಚೆನ್ನಾಗಿ ವಿವರವಾಗಿ ಬರೆಯುತ್ತಿದ್ದೀರಿ. ನೀವು ಗ್ರೇಟ್.

Submitted by nageshamysore Mon, 09/08/2014 - 04:33

In reply to by ಗಣೇಶ

ಗಣೇಶ್ ಜಿ ನಮಸ್ಕಾರ, ಹನ್ನೆರಡು ವರ್ಷದ ಹಿಂದಿನದಾದರೂ ಮೂಲ ಹಂದರ ಹಾಕಿಕೊಳ್ಳುವಾಗ ನನಗೆ ಅಚ್ಚರಿಯಾಗುವ ಹಾಗೆ ಕೆಲವು ಪೂರಕ ಹಾಗು ಕಥೆಗೆ ಬಳಸಬಹುದಾದ ವಿವರಗಳು ನೆನಪಿಗೆ ಬಂದವು. ಮತ್ತು ಅಲ್ಲಿದ್ದಾಗ ಪರಿಚಯವಾದ ಕೆಲವು ಜಾಗಗಳನ್ನು ಕಥೆಯೊಂದರ ಹಂದರಕ್ಕೆ ಜೋಡಿಸಿ ಪ್ರಸ್ತುತ ಪಡಿಸುವ ಆಲೋಚನೆಯು ಹೊಳೆಯಿತು. ಇದಾದಮೇಲೆ ಮಿಕ್ಕಿದ್ದೆಲ್ಲ ಆ ಮೂಲ ಊಹೆಯ ಅಸ್ತಿಪಂಜರಕ್ಕೆ ಕಥಾನಕದ ಬಂಧ ಹೆಣೆಯುತ್ತ ಹೋಗುವುದಷ್ಟೆ ಆದರಿಂದ ಮೂಡಿದ ಲಹರಿಗೆ ಪದರೂಪ ಕೊಡುವ ಕೆಲಸ ಸುಲಭವಾಯಿತು. ಮೊದಲು ಸಣ್ಣದೆಂದುಕೊಂಡು ಹೊರಟ ಕಥೆ ಗಾತ್ರದಲ್ಲಿಯು ಬೆಳೆದುಕೊಂಡು ಹೋಯ್ತು. ನಾನು ಬೇಕೆಂದೆ ಕೈ ಬಿಟ್ಟ ಕೆಲವು ವಿಷಯಗಳೆಂದರೆ ಥಾಯ್ಲ್ಯಾಂಡಿನ ಪ್ರಸಿದ್ದ ಪ್ರವಾಸಿ ತಾಣಗಳಾದ ಪುಕೇತ್, ಪಟ್ಟಾಯದಂತಹ ಜಾಗಗಳನ್ನು ಪರಿಗಣಿಸದಿದ್ದದ್ದು. ಒಂದೊ ಜನರಿಗೆ ಗೊತ್ತಿರದ ಅಪರೂಪದ ಜಾಗವಾಗಿರಬೇಕು ಅಥವಾ ಅಲ್ಲಿನ ವಿಶೇಷ ಹಿನ್ನಲೆ, ಪದ್ದತಿ, ಚರಿತ್ರೆ, ಸಂಪ್ರದಾಯವನ್ನು ತೋರುವ ಹಿನ್ನಲೆಯದಿರಬೇಕು ಎನ್ನುವ ಚೌಕಟ್ಟಿನಲ್ಲಿ ಬರೆಯಹೊರಟಿದ್ದರಿಂದ. ಸುದೈವಕ್ಕೆ ಅದನ್ನು ಓದಿ ಪ್ರೋತ್ಸಾಹಿಸುವ ಸಂಪದಿಗ ಬಳಗದ ಪರಿಸರದಿಂದ ಈ ಖಾಸಗಿ ಪ್ರಾಜೆಕ್ಟನ್ನು ಕೈ ಬಿಡದೆ ಬರೆದು ಮುಗಿಸಲೆಬೇಕೆಂಬ ಹುಮ್ಮಸ್ಸೂ ಹೆಚ್ಚಾಯಿತು. ಹೀಗೆ ಬರೆಯಬೇಕೆಂದುಕೊಂಡು ಹೊರಡದಿದ್ದರೂ, ಪೂರ್ವ ಸಿದ್ದತೆಯಿಲ್ಲದೆ ಅನಾವರಣಗೊಂಡ ಈ ಅರೆಪ್ರವಾಸಿ ಸಾಹಿತ್ಯಿಕ ಕೃತಿಯೆ ನನ್ನ ಮೊದಲ ಕಾದಂಬರಿಯಾಗಿಬಿಡುತ್ತಿದೆ ನೋಡಿ!