ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)
ಪಾಂಡು ನರಸಿಂಹನ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿ ಎರಡು ವರ್ಷವಾಗುತ್ತಾ ಬಂದಿತ್ತು. ಸ್ವಲ್ಪ ವಿಚಿತ್ರ ವ್ಯಕ್ತಿತ್ವ ಅವನದು. ನೋಡಲು ಅತಿ ಸಾದಾರಣನಂತೆ ಕಾಣುವನು. ಅವನ ಬಟ್ಟೆಗಳು ಅಷ್ಟೆ ಲಾಯರ್ ಹಾಕುವಂತೆ ಇರುತ್ತಲೇ ಇಲ್ಲ. ದೊಗಳೆ ಪ್ಯಾಂಟ್ , ಮೇಲೆ ಒಂದು ಶರ್ಟ್ , ಅವನು ಎಂದೂ ಇನ್ ಶರ್ಟ್ ಮಾಡುತ್ತಿರಲಿಲ್ಲ. ಕಾಲಲ್ಲಿ ಒಂದು ಹವಾಯ್ ಚಪ್ಪಲಿ. ತಕ್ಷಣಕ್ಕೆ ನೋಡಿದರೆ ಯಾರದೋ ಮನೆಗೆ ಪೈಂಟ್ ಮಾಡಲು ಬಂದಿರುವ ಪೈಂಟರ್ ನಂತೆ ಕಾಣುತ್ತಿದ್ದ.
ಪಾಂಡು ಮಹಾಲಕ್ಷ್ಮೀಪುರಂನ ಪೋಲಿಸ್ ಸ್ಟೇಷನ್ಗೆ ಕಾಲಿಟ್ಟಾಗ ಬೆಳಗಿನ ಒಂಬತ್ತು ಗಂಟೆ.
ಹಿರಿಯ ಅಧಿಕಾರಿಗಳು ಇನ್ನು ಯಾರು ಇರಲಿಲ್ಲ. ಪಕ್ಕಕ್ಕೆ ನೋಡಿದರೆ ಹೆಡ್ ಕಾನ್ಸ್ಟೇಬಲ್ ಮರಿಯಪ್ಪ ತನ್ನ ಕುರ್ಚಿಯಲ್ಲಿ ಕುಳಿತು ಎದುರಿಗೆ ಇರುವ ಇಬ್ಬರ ಜೊತೆ ಮಾತುಕತೆ ನಡೆಸಿದ್ದ. ಅವನ ಕೈಯಲ್ಲಿ ಸಿಗರೇಟ್ . ಬಾಯಿಂದ ಧೂಮ ದಾರಳವಾಗಿ ಹೊರಟು ರೂಮನ್ನೆಲ್ಲ ತುಂಬಿಕೊಂಡಿತು. ಅದನ್ನು ಕಾಣುವಾಗಲೆ ಪಾಂಡು ಅಂದುಕೊಂಡ ತಕ್ಷಣಕ್ಕೆ ಹಿರಿಯ ಅಧಿಕಾರಿಗಳು ಯಾರು ಬರುವದಿಲ್ಲ ಎಂದು.
’ಸಾರ್...’ ಎಂದ ರಾಗ ಎಳೆಯುತ್ತ ಪಾಂಡು,
ಹೆಡ್ಕಾನ್ಸ್ಟೇಬಲ್ ಮರಿಯಪ್ಪ ಪಾಂಡುವಿನತ್ತ ತನ್ನ ಚೂಪು ನೋಟ ಭೀರಿದ,
"ಏಯ್, ಗುಲ್ಡೂ, ನಾನು ಏನು ಮಾಡ್ತಾ ಇದ್ದೀನಿ ಕಾಣಿಸುತ್ತ ಇಲ್ಲವಾ, ಸುಮ್ಮನೆ ಕುಳಿತ್ತಿದ್ದೀನ, ಇವರಿಬ್ಬರ ಜೊತೆ ಮಾತನಾಡುತ್ತ ಇದ್ದೀನಿ, ಅದೇನು ನಿನ್ನದು, ಅಂತ ಅರ್ಜೆಂಟ್ ತಲೆ ಹೋಗೋದು, ನೋಡು ಅಲ್ಲಿ ಬೆಂಚ್ ಇದೆಯಲ್ಲ ಅಲ್ಲಿ ಸುಮ್ಮನೆ ಕುಳಿತಿರು, ನನ್ನ ಕೆಲಸ ಮುಗಿದ ತಕ್ಷಣ ಕರೀತೀನಿ , ಆಮೇಲೆ ತಮ್ಮನ್ನು ವಿಚಾರಿಸುತ್ತೀನಿ" ಎಂದು ಎದುರಿನ ಗೋಡೆಗೆ ಹಾಕಿದ್ದ ಬೆಂಚ್ ತೋರಿಸಿದ.
ಪಾಂಡು ಮಾತನಾಡಲು ಹೊಗಲಿಲ್ಲ, ಸುಮ್ಮನೆ ಎದುರಿಗಿದ್ದ ಬೆಂಚ್ ಮೇಲೆ ಹೋಗಿ ಕುಳಿತು ಅವರಿಬ್ಬರ ಮಾತುಗಳನ್ನು ಆಲಿಸುತ್ತ ಸಂದರ್ಭ ಅರ್ಥಮಾಡಿಕೊಂಡ.
ಶ್ರೀನಿವಾಸ ಎನ್ನುವ ಹುಡುಗ ಸೈಕಲ್ ನಲ್ಲಿ ರಸ್ತೆಯಲ್ಲಿ ಹೋಗುವಾಗ, ಹಿಂದಿನಿಂದ ವೇಗವಾಗಿ ಕಾರಿನಲ್ಲಿ ಬಂದ ಯಾರೋ ಗುದ್ದಿಸಿದ್ದರು. ನಂತರ ಕಾರು ನಿಲ್ಲಿಸದೆ, ಓಡಿಹೋದರು. ಎದುರಿಗಿದ್ದ ಬೀಡ ಅಂಗಡಿಯವನು ಶ್ರೀನಿವಾಸನನ್ನು ಮೇಲೆತ್ತಿದ್ದ, ನಂತರ ಶ್ರೀನಿವಾಸನ ಅಪ್ಪನಿಗೆ ಹುಡುಗನಿಂದ ನಂಬರ್ ಪಡೆದು ಕಾಲ್ ಮಾಡಿದ್ದ. ಗಾಭರಿಯಿಂದ ಶ್ರೀನಿವಾಸನ ಅಪ್ಪ, ಹಾಗು ಸೋದರಮಾವ ಅಲ್ಲಿಗೆ ಹೋಗಿದ್ದರು. ಶ್ರೀನಿವಾಸನನ್ನು ಆಸ್ಪೆಟಲ್ ಗೆ ಸೇರಿಸಿದ್ದರು. ಶ್ರೀನಿವಾಸನ ಬಲಗಾಲು ಮುರಿದಿತ್ತು, ಎಡದವಡೆ ಪೂರ್ಣ ಜಜ್ಜಿ ಹೋಗಿತ್ತು. ಬೀಡ ಅಂಗಡಿಯವನು ಕಾರಿನ ನಂಬರ್ ಸಹ ಗುರುತುಹಾಕಿಕೊಂಡು ಇವರಿಗೆ ಕೊಟ್ಟಿದ್ದ, ಕಂಪ್ಲೇಟ್ ಕೊಡಲು ಇವರು ಬಂದಿದ್ದು, ಹೆಡ್ ಕಾನ್ಸ್ಟೇಬಲ್ ಅವರ ಕೈಲಿ ಕಂಪ್ಲೈಂಟ್ ಹೇಗೆ ಬರಯಬೇಕೆಂದು ಹೇಳಿ ತಾನೆ ಕಂಪ್ಲೇಟ್ ಬರೆಸುತ್ತಿದ್ದ. ನಡುವೆ ಕೇಳಿದ,
"ಅದು ಸರಿ ನಿಮ್ಮ ಹುಡುಗ ಸೈಕಲ್ ತುಳಿಯುತ್ತಿದ್ದ ಅಂದಿರಲ್ಲ, ಕಾರಿನವರು ಗುದ್ದಿಸಿದ ಅಂತೀರಲ್ಲ, ಆ ಸೈಕಲ್ ಎಲ್ಲಿ ?"
"ಸೈಕಲ್ " ಅವರಿಬ್ಬರು ಕಣ್ಣು ಕಣ್ಣು ಬಿಟ್ಟರು.
"ಸಾರ್ , ನಾವು ಹುಡುಗನನ್ನು ಆಸ್ಪತ್ರೆಗೆ ಸೇರಿಸುವ ಗಲಾಟೆಯಲ್ಲಿ ಸೈಕಲ್ ನೋಡಲೇ ಇಲ್ಲ, ಅದನ್ನು ಬೀಡ ಅಂಗಡಿ ಪಕ್ಕ ಯಾರೊ ಎತ್ತಿ ಹಾಕಿದ್ದರು ಈಗ ಅದು ಅಲ್ಲಿ ಸಹ ಇಲ್ಲ ಯಾರೊ ತೆಗೆದುಕೊಂಡು ಹೋಗಿದ್ದಾರೆ" ಎಂದ ಅವರಲ್ಲಿ ಒಬ್ಬ,
"ರೀ ಸ್ವಾಮಿ , ಏನ್ರಿ ಹಾಗಂತೀರಿ, ಅದೇ ಮುಖ್ಯ ಸಾಕ್ಷೀ ನಮಗೆ , ಸೈಕಲ್ಲೆ ಇಲ್ಲ ಅಂತೀರಲ್ಲ ಏನು ಜನಾನಪ್ಪ, ಈಗ ಏನು ಮಾಡೋದು" ಎಂದು ಒಂದು ಕ್ಷಣ ಚಿಂತಿಸಿದ,
ಹೆಡ್ಕಾನ್ಸ್ಟೇಬಲ್ ಮರಿಯಪ್ಪ ,
"ನೀವು ಒಂದು ಕೆಲಸ ಮಾಡಿ, ಯಾವುದಾದರು ಒಂದು ಹಳೆಯ ಸೈಕಲ್ ತೆಗೆದುಕೊಳ್ಳಿ, ಆಯ್ತಾ, ಅದನ್ನು ನೆಲದ ಮೇಲೆ ಹಾಕಿ, ಒಂದು ಸೈಜ್ ಕಲ್ ತೆಗೆದುಕೊಳ್ಳಿ, ಪಾಯ ಕಟ್ಟಕ್ಕೆ ಬಳಸ್ತಾರಲ್ಲ ಅಂತದ್ದು, ಆ ಕಲ್ಲನ್ನು ಸೈಕಲ್ ಮೇಲೆ ನಾಲಕ್ಕು ಸಾರಿ ಎತ್ತಿ ಹಾಕಿ ಜೋರಾಗಿ, ಆಮೇಲೆ ಆ ಸೈಕಲ್ಲನ್ನು ಇಲ್ಲಿ ತನ್ನಿ, ಅದನ್ನು ಸಾಕ್ಷಿ ಎಂದು ಕೋರ್ಟ್ ಗೆ ಕೊಡೋಣ . ಕಾರಿಗೆ ಏನಾದ್ರು ಇನ್ಶೂರೆನ್ಸ್ ಅಂತ ಇದ್ರೂ ಸಹ ಆಗ ಸಹಾಯ ಆಗುತ್ತೆ ಈ ಸೈಕಲ್ ತೋರಿಸಬಹುದು ಆಕ್ಸಿಡೆಂಟ್ ಆಗಿದೆ ಎಂದು "
ಎಂದ ಹೆಡ್ ಕಾನ್ಸ್ ಟೇಬಲ್ ಮರಿಯಪ್ಪ. ಎದುರಿಗೆ ಕುಳಿತಿದ್ದ ಶ್ರೀನಿವಾಸನ ಅಪ್ಪ, ಹಾಗು ಮಾವನ ಮುಖ ಅಗಲವಾಯಿತು ಸಂತಸದಿಂದ.
ಪಾಂಡುವಿನ ಮುಖದಲ್ಲಿ ನಗು ತುಂಬಿತು. ಇವನು ನಗುತ್ತಿರುವದನ್ನು ಕಂಡು , ಮರಿಯಪ್ಪ ನುಡಿದ
"ಯಾಕೆ ನಗ್ತಾ ಇದ್ದೀಯ, ಕೇಳಿ ನಗು ಬಂತಾ, ಪೋಲಿಸ್ ,ಕೋರ್ಟು ಅಂದರೆ ಇಂತವೆಲ್ಲ ಇದ್ದಿದ್ದೆ , ನಿನಗೇನು ತಿಳಿಯುತ್ತೆ"
ಎಂದ ನಗುತ್ತ, ಧೂಮವನ್ನು ಬಾಯಿಯಿಂದ ಹಾರಿಸುತ್ತ.
ಪಾಂಡು ನಗುತ್ತ ಅಂದ ಅಮಾಯಕನಂತೆ
"ಇಂತವೆಲ್ಲ ನಿಮಗೆ ಎಷ್ಟು ಸುಲುಭವಾಗಿ ಹೊಳೆಯುತ್ತೆ ಸಾರ್, ಯಾರಿಗೂ ಅನುಮಾನವೇ ಬರಲ್ಲ, ಹೇಗೆ ಸಾರ್ "
"ಅನುಭವ ಕಣೋ ಹುಡುಗ ಅನುಭವ, ನಿಮಗೆಲ್ಲ ಏನು ಗೊತ್ತಿರುತ್ತೆ, ಸರ್ವೀಸ್ ಇಪ್ಪತ್ತೇಳು ವರ್ಷವಾಯಿತು. ಹಾಳಾದ್ದು ಡಿಪಾರ್ಟ್ ಮೆಂಟಿನಲ್ಲಿ ಒಮ್ಮೆ ಕಾನ್ ಸ್ಟೇಬಲ್ ಆಗಿ ಸೇರಿಬಿಟ್ಟರೆ ಆಯ್ತು, ಸಾಯೋ ವರೆಗೂ ಒಂದು ಪ್ರಮೂಷನ್ ಇರಲ್ಲ, ಇಂದು ನಿನ್ನೆ ನಮ್ಮ ಮುಂದೆ ಇನ್ಸ್ಪೆಕ್ಟರ್ ಆಗಿ ಸೇರಿದವರು ಮೆರೀತಾರೆ ನಮ್ಮ ಮುಂದೆ, ಅವುಗಳ ತಲೇಲಿ ಬರೀ ಮಣ್ಣು ತುಂಬಿರುತ್ತೆ , ಆದರೆ ಅಹಂಕಾರ ತಾವೇ ಬುದ್ದಿವಂತರು ಎಂದು"
ಮರಿಯಪ್ಪ ನುಡಿದ.
ಪಾಂಡುವಿಗೆ ಅರ್ಥವಾಗಿಹೋಗಿತ್ತು, ಮರಿಯಪ್ಪ ವಾಚಾಳಿ ಸ್ವಲ್ಪ ಕೆದಕಿದರೆ, ಉಬ್ಬಿಸಿದರೆ ಏನು ಬೇಕಾದರು ಬಾಯಿ ಬಿಡುತ್ತಾನೆ ಎಂದು.
"ಸಾರ್, ಅಂದರೆ ನೀವು ಹೇಳುವುದು, ಈಗಿನ ಆಫೀಸರಿಗೆ ಏನು ಗೊತ್ತಾಗಲ್ಲ ಅಂತಾನ ಸಾರ್, ಅವರು ಓದಿರ್ತಾರಲ್ಲ "
ಪಾಂಡು ಅಂದ,
ಅದಕ್ಕೆ ರೇಗಿಕೊಂಡ ಮರಿಯಪ್ಪ
"ಏನು ಓದಿರ್ತಾವೊ ಏನೊ, ಅವಕ್ಕೆ ಏನು ತಿಳಿಯುತ್ತೆ, ಕೈಗೆ ಸಿಕ್ಕಿದ್ದನ್ನೆಲ್ಲ ಸಾಕ್ಷಿ ಎಂದು ಎತ್ಕೊಂಡು ಬರ್ತಾರೆ, ಕೋರ್ಟಿನಲ್ಲಿ ನಿಂತು ಬ್ಯಾ, ಬ್ಯಾ ಅಂದರೆ ಎಲ್ಲ ಕೇಸ್ ಡಿಸ್ ಮಿಸ್ ಅಷ್ಟೆ, ನಿನ್ನೆ ನಮ್ಮವನು ನೋಡು ಅದೆಲ್ಲಿಂದಲೊ ಕಲ್ಲು ಕಿತ್ತುಕೊಂಡು ಬಂದು ಇಟ್ಕೋಂಡಿದ್ದಾನೆ ಕೊಲೆಗೆ ಸಾಕ್ಷಿ ಅಂತ, ಪೆದ್ದುಮುಂಡೇದು "
ಮರಿಯಪ್ಪ ನಗುತ್ತಿದ್ದ.
ಅದಕ್ಕೆ ಪಾಂಡುವು ಸಹ ನಗುತ್ತಲೇ
" ಹೌದಾ ಸಾರ್, ಕಲ್ಲು ಕಿತ್ಕೊಂಡು ಬರೋದು ಅಂದ್ರೆ ಅದೇನು ಮಾವಿನ ಕಾಯಿನ ಸಾರ್ ಕೀಳೋಕ್ಕೆ, ಅರ್ಥವಾಗಲಿಲ್ಲ, ಅದೇನೊ ಕೊಲೆ ಬೇರೆ ಆಯ್ತಂತಲ್ಲ ಸಾರ್ ಇಲ್ಲೆ ಬಸ್ ಸ್ಟಾಪಿನ ಹತ್ರ , ವಯಸ್ಸಾದವರೊಬ್ಬರದು "
"ಅದನ್ನೆ ಕಣಪ್ಪಾ ನಾನು ಹೇಳ್ತಾ ಇರೋದು, ಅಲ್ಲಿ ಕೊಲೆಯಾದವನು ಬಸ್ ಸ್ಟಾಪಿನಲ್ಲಿ ಬಿದ್ದಿದ್ದ, ಹತ್ತಿರದಲ್ಲಿ ಒಂದು ಕಲ್ಲು ಇತ್ತು, ತಲೆ ಹಿಂಬಾಗದಲ್ಲಿ ರಕ್ತ ಬಂದಿತ್ತು, ಕಲ್ಲಿಗೂ ರಕ್ತ ಮೆತ್ತಿತ್ತು, ನಮ್ಮ ಇನ್ಸ್ಪೆಕ್ಟರ್ ಬುದ್ದಿ ಚುರುಕಾಯಿತು ನೋಡು, ಟಾರ್ ನೆಲದಲ್ಲಿ ಮುಕ್ಕಾಲು ಹೂತುಹೋಗಿದ್ದ ಕಲ್ಲನ್ನೆ ಕೀಳಿಸಿ ತಂದಿಟ್ಟಿದ್ದಾನೆ ಕೊಲೆಗಾರ ಅದರಲ್ಲೆ ಕೊಲೆ ಮಾಡಿರೋದು ಅಂತ"
ಎಂದು ನಗುತ್ತಿದ್ದ.
ಪಾಂಡುವಿನ ಮುಖದ ಮೇಲೆ ವಿಲಕ್ಷಣ ನಗು ಹಾಯ್ದು ಹೋಯಿತು.
ನಗುತ್ತಿದ್ದ ಮರಿಯಪ್ಪ ಸ್ವಲ್ಪ ಕುತೂಹಲದಿಂದ ಎಂಬಂತೆ ಕೇಳಿದ
’ಅದು ಸರಿ ನೀನು ಯಾರು ಮಹಾರಾಯ ಬೆಳಗ್ಗೆ ಬೆಳಗ್ಗೇನೆ ಕೆಲಸ ಇಲ್ಲದವನಂತೆ ಇಲ್ಲಿ ಬಂದು ಕುಳಿತಿದ್ದಿ, ಯಾರನ್ನ ನೋಡಬೇಕು., ನೋಡಿದರೆ ಪೈಂಟರ್ ತರ ಇದ್ದೀಯ, ನಮ್ಮ ಸ್ಟೇಷನ್ ಗೂ ಸ್ವಲ್ಪ ಪೇಂಟ್ ತಂದು ಹೊಡೆದುಕೊಟ್ಟುಬಿಡು , ಸರ್ಕಾರದವರಂತು ಹೊಡೆಸಲ್ಲ" ಎಂದು ಜೋರಾಗಿ ನಕ್ಕ.
ಪಾಂಡುವು ನಗುತ್ತ ಹೇಳಿದ
"ಇಲ್ಲ ಸಾರ್ ನಾನು ಪೈಂಟರ್ ಅಲ್ಲ, ನಿನ್ನೆ ಅರೆಷ್ಟ್ ಆಗಿದ್ದಾರಲ್ಲ , ವೆಂಕಟೇಶಯ್ಯ ಅಂತ ಮೇಷ್ಟ್ರು , ಅದೇ ನಿನ್ನೆ ನಡೆದ ಕೊಲೆ ಅರೋಪದಲ್ಲಿ ಅವರನ್ನು ಬಂದಿಸಿ ತಂದಿದ್ದೀರಲ್ಲ ಅವರನ್ನು ನೋಡೋಣ ಅಂತ ಬಂದೆ, ನಮ್ಮ ಸಾಹೇಬ್ರು ಈಗ ಬರ್ತಾ ಇದ್ದಾರೆ"
ಮರಿಯಪ್ಪ ಕುತೂಹಲಕ್ಕೆ ಕೇಳಿದ
"ಅದ್ಯಾರಯ್ಯ ನಿನ್ನ ಸಾಹೇಬ್ರು, ಕೊಲೆ ಮಾಡಿರೋ ಆ ಮುದುಕ ಮೇಷ್ಟರನ್ನ ನೋಡೋಕೆ ಬರ್ತಾ ಇರೋರು, ಅವರೇನು ರಿಟೈರ್ಡ್ ಡಿಡಿಪಿಐ ಅಲ್ಲ ತಾನೆ ? "
ತನ್ನ ಜೋಕಿಗೆ ತಾನೆ ಜೋರಾಗಿ ನಕ್ಕ.
ಪಾಂಡುವು ನಗುತ್ತ
"ಅಲ್ಲ ಸಾರ್, ಕ್ರಿಮಿನಲ್ ಲಾಯರ್ ನರಸಿಂಹ ಅಂತ ನನ್ನ ಬಾಸ್ ಬರ್ತಾ ಇದಾರೆ, ನಾನು ಅವರ ಅಸಿಸ್ಟೆಂಟ್ ಪಾಂಡು ಅಂತ"
ಮರಿಯಪ್ಪನ ನಗು ನಿಂತುಹೋಗಿ ಮುಖ ಗಂಭೀರವಾಯಿತು.
ತಾನು ಕೊಲೆಗೆ ಸಂಬಂದಿಸಿದ ಹೇಳಬಾರದ ಏನನ್ನಾದರು ಹೇಳಿದೆನಾ ಎಂದು ಚಿಂತಿಸಿದ. ಏನು ಇರಲಾರದು ಬಿಡು,ಎಂದುಕೊಂಡವನು,
‘ಆದರು ಈ ಕ್ರಿಮಿನಲ್ ಲಾಯರ್ ಗಳು ಅಂದರೆ ಸುಮ್ಮನೆ ಅಲ್ಲ’ ಎಂದು ಅಂದುಕೊಂಡ
ಪಾಂಡು ಮನದಲ್ಲಿಯೆ ನಗುತ್ತಿದ್ದ, ಹೆಡ್ಕಾನ್ಸ್ಟೇಬಲ್ ಮರಿಯಪ್ಪ ತನಗೆ ಅರಿಯದೆ ಒಂದು ದೊಡ್ಡ ಸುಳಿವನ್ನು ಬಿಟ್ಟುಕೊಟ್ಟಿದ್ದ.
********
***
**
ಕೊಲೆಕೇಸ್ ಅಂದ್ರೆ ಆಯ್ತು ಬೈಲ್ ಸಿಗೋದು ತುಂಬಾ ಕಷ್ಟಾನೆ. ಆದರೆ ನರಸಿಂಹನ ಪ್ರಯತ್ನ ಸಫಲವಾಗಿತ್ತು.
ಹಲ್ಲೆಯ ಆರೋಪ, ಹತ್ತಾಶೆ ರೋಷದಿಂದ ಕೊಲೆ, ಆಕ್ರಮಣ ಮಾಡಿದ ಅರೋಪವನ್ನು ಹೊರೆಸಿ ವೆಂಕಟೇಶಯ್ಯನವರ ಮೇಲೆ ಭಾರತದ ಕಾನೂನಿನ , ಚಾಪ್ಟರ್ ೧೬ ರ ಸೆಕ್ಷನ್ 351 , ಸೆಕ್ಷನ್ 300 , ಸೆಕ್ಷನ್ 319 ಎಂದು ಚಾರ್ಚ್ ಶೀಟ್ ಹಾಕಿದ್ದಲ್ಲದೆ, ಅದರಲ್ಲಿ ಕೊಲೆಯ ನಂತರ ತಪ್ಪಿಸಿಕೊಳ್ಳುವ ಪ್ರಯತ್ನ, ಅಲ್ಲದೆ ಕಾನೂನು ಬಾಹಿರವಾಗಿ ಹಣದ ಲೇವಾದೇವಿ ಎಂದೆಲ್ಲ ಸೇರಿಸಿದ್ದ.
ನರಸಿಂಹ ತಕ್ಕಮಟ್ಟಿಗೆ ಜಡ್ಜ್ ಸಾಹೇಬರನ್ನು ವಾದದ ಮೂಲಕ ಮನಮುಟ್ಟುವಂತೆ ಮಾಡುವದರಲ್ಲಿ ಯಶಸ್ವಿಯಾಗಿದ್ದ.
ವೆಂಕಟೇಶಯ್ಯನವರ ವಯಸ್ಸು, ಅವರ ಹಿಂದಿನ ಕಲಂಕರಹಿತ ಸಾದಾರಣ ಜೀವನ, ನೇರವಾಗಿ ಕೊಲೆಯನ್ನು ನೋಡಿದ ಸಾಕ್ಷಿಯ ಕೊರತೆ ಇವುಗಳ ಹಿನ್ನಲೆಯಲ್ಲಿ ವೆಂಕಟೇಶಯ್ಯನವರಿಗೆ ಬೈಲ್ ಕೊಟ್ಟಿದ್ದರು ಜಡ್ಜ್. ಆದರೆ ಕೊಲೆ ಆರೋಪ ಅವರ ಮೇಲಿದ್ದು , ಆ ಪ್ರಸಂಗದಿಂದ ಬಿಡುಗಡೆಗೊಳಿಸುವ ಜವಾಬ್ದಾರಿ ನರಸಿಂಹನ ಮೇಲಿತ್ತು.
ವೆಂಕಟೇಶಯ್ಯನವರನ್ನು ಎದುರಿಗೆ ಕೂಡಿಸಿಕೊಂಡು ಎರಡು ಮೂರು ಬಾರಿ ಘಟನೆಯ ವಿವರ ಕೇಳಿದ ನರಸಿಂಹ, ವೆಂಕಟೇಶಯ್ಯನವರ ಪ್ರಸಂಗದ ತೀವ್ರತೆಗೆ ಕುಸಿದು ಹೋಗಿದ್ದರು. ಕೊಲೆಯ ಆರೋಪ ಅಲ್ಲದೆ ಪೋಲಿಸ್ ಸ್ಟೇಷನ್ ನಲ್ಲಿ ಮೂರು ದಿನ ಇರಬೇಕಾದ ಸಂದರ್ಭದಿಂದ ನೊಂದು ಹೋಗಿದ್ದರು. ವಿದಿಯನ್ನು ಶಪಿಸುತ್ತಿದ್ದರು. ಸಾಲ ಕೊಟ್ಟಿದ್ದು ಅಲ್ಲದೆ , ಅದು ಹಿಂದೆ ಬರುವ ಆಸೆಯನ್ನು ಬಿಟ್ಟು , ಈಗ ಈ ತಾಪತ್ರಯದಿಂದ ಉಳಿಯುವುದು ಹೇಗೆ ಎನ್ನುವ ಚಿಂತೆ ಅವರನ್ನು ಹಣ್ಣು ಮಾಡಿದರೆ. ಮಹಾಲಕ್ಷಮ್ಮನವರು ಊಟತಿಂಡಿ ಬಿಟ್ಟು ಕೊರಗುತ್ತಿದ್ದರು.
ಮುಂದುವರೆಯುವುದು…….
Comments
ಉ: ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೩)
ಸೈಕಲ್ಲಿಗೆ ಗುದ್ದಿ ಹೋದ ಕಾರಿನವರೇ ಕೊಲೆ ಮಾಡಿರಬಹುದೇನೋ! :)