ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)

ಚಿತ್ರ

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)   

 

ಪೋಲಿಸ್ ಅಧಿಕಾರಿ ಅಶೋಕನ ಪಾಟಿಸವಾಲು ಮುಂದುವರೆಸಿದ್ದ ನರಸಿಂಹ

ಅವನಿಗೆ ಮನದೊಳಗೆ ಅದೇನೊ ಆಂದೋಳನ, ಮೇಷ್ಟ್ರು ವೆಂಕಟೇಶಯ್ಯನವರು ಕೊಲೆ ಮಾಡಿಲ್ಲ ಅನ್ನುವುದು ಶತಸಿದ್ದ. ಆದರೆ ನಿಜವಾಗಿ ನಡೆದಿರುವಾದರು ಏನು. ಅಲ್ಲಿ ಯಾರೋ ಒಬ್ಬರು ಬೈಕ್ ನಲ್ಲಿ ಬಂದಿದ್ದಾರೆ ಆದರೆ ಯಾರಿರಬಹುದು,ಯಾಕಿರಬಹುದು ಅವರಿಗೂ ಅನಂತರಾಮಯ್ಯನವರಿಗೂ ಏನು ಸಂಬಂಧವಿರಬಹುದು. ಯೋಚಿಸುತ್ತಲೆ ಅನ್ಯಮನಸ್ಕನಾಗಿ ಪ್ರಶ್ನಿಸುತ್ತಿದ್ದ ನರಸಿಂಹ.

 

“ ಅಶೋಕ್ ರವರೆ ನೀವೆ ಈಗ ಕೇಳಿದ್ದೀರಿ ಒಪ್ಪಿಕೊಂಡಿದ್ದೀರಿ,  ಕೊಲೆಯಾದ ಜಾಗದಿಂದ ನೀವು ತಂದಿರುವ ಕಲ್ಲು ತಪ್ಪು ಸಾಕ್ಷಿ ಎಂದು, ಕೋರ್ಟನ್ನು ಆ ಮೂಲಕ ತಪ್ಪು ದಾರಿಗೆ ಎಳೆದಿರುವಿರಿ ಅಲ್ಲವೇ”

 

ಪೋಲಿಸ್ ಅಧಿಕಾರಿ ಅಶೋಕ್ ಅವರ ಮೊಂಡುವಾಗ ಮುಂದುವರೆಸಿದ್ದರು.

 

“ಹಾಗೇನು ಇಲ್ಲ, ನಾನು ಹೇಳಿದ ರೀತಿ ತಪ್ಪಿರಬಹುದು ಆದರೆ ಕಲ್ಲು ಕೊಲೆಯಲ್ಲಿ ಬಾಗಿಯಾಗಿದೇ ಎಂದೇ ಅನ್ನಿಸುತ್ತಿದೆ ಅಲ್ಲವೆ, ಇಲ್ಲದಿದ್ದರೆ ಕಲ್ಲಿನ ಮೇಲೆ ರಕ್ತ ಏಕೆ  ಸುರಿದಿತ್ತು,  ಕೊಲೆಯಾದವನ ತಲೆಯನ್ನು ಕಲ್ಲಿಗೆ ಗಟ್ಟಿಸಿ ಕೊಲೆಮಾಡಿರಬಹುದು ಅಲ್ಲವೆ ?”

 

ನರಸಿಂಹ ನಗುತ್ತ ಕೇಳಿದ

“ಹೌದೇ ಹಾಗಿದ್ದಲ್ಲಿ, ನಿಮ್ಮ ಸಾಕ್ಷಿ ಶಿವಣ್ಣನ ಕತೆ ಏನು? ನೀವೆ ಕರೆತಂದಿರುವಿರಿ ಕಲ್ಲಿನಲ್ಲಿ ಎಗರಿ ಎಗರಿ ತಲೆಗೆ ಹೊಡೆದರು ನಾನು ನೋಡಿದೆ ಎಂದು ಹೇಳಲು ಅದು ಸುಳ್ಳು ಸಾಕ್ಷಿ ಎಂದು ನೀವೆ ಒಪ್ಪುತ್ತಿರುವಿರಿ ಅಲ್ಲವೇ. ನಿಮಗೆ ಹೇಗಾದರು ಕೊಲೆ ಪ್ರಕರಣ ಕಂಡು ಹಿಡಿದೆ ಅನ್ನಿಸಿ ಒಬ್ಬರಿಗೆ ಶಿಕ್ಷೆ ಕೊಡಿಸಬೇಕು ಅಷ್ಟೆ ನಿಮ್ಮ ಉದ್ದೇಶ, ಯಾರನ್ನೊ ಒಬ್ಬರನ್ನು ಫಿಟ್ ಮಾಡಲು ಆತುರ ಏಕೆ?”
ಎಂದ ಗಂಭೀರವಾಗಿ.

 

ಅಶೋಕನಿಗೆ ಪಿತ್ತ ನೆತ್ತಿಗೇರಿತ್ತು, ತನ್ನ ಕೆಲಸವೆಲ್ಲ ನೀರಿನಲ್ಲಿ ಹೋಮದಂತೆ ಆಗುತ್ತಿತ್ತು, ತನ್ನ ಸಾಕ್ಷಿಗಳೆಲ್ಲ ತನ್ನ ಎದುರಿಗೆ ಬಿದ್ದು ಹೋಗುತ್ತಿತ್ತು, ಹೀಗೆ ಆದರೆ ಎಷ್ಟು ಅವಮಾನ, ಕಡೆಗೆ ತನ್ನ ಕೈ ಕೆಳಗೆ ಕೆಲಸ ಮಾಡುವ ಕಾನ್ಸ್‍ಟೇಭಲ್ ಗಳು ಸಹಿತ ತನ್ನನ್ನ ಹಾಸ್ಯ ಮಾಡುವಂತಾಗುವುದು. ಅವನು ಕೋಪದಿಂದ ನುಡಿದ

“ನೋಡಿ ನಾನು ಯಾರನ್ನೊ ಕೊಲೆಗೆ ಸಂಬಂಧಪಡದವರನ್ನು ಇಲ್ಲಿ ತಂದು ನಿಲ್ಲಿಸುತ್ತಿಲ್ಲ, ಕೊಲೆಗೆ ನೇರವಾಗಿ ಸಂಬಂಧಿಸಿದ ವ್ಯಕ್ತಿ ಈ ಆರೋಪಿ, ಸಾಯುವಾಗ ಜೊತೆಗಿದ್ದವರು, ಒಂದು ವೇಳೆ ಆ ಮೋಟರ್ ಬೈಕ್‍ನಲ್ಲಿ ಬಂದಿದ್ದವರು ಯಾರೊ ಇದ್ದರು ಅನ್ನುವದಾದರೆ , ಅದು ಈ ಅರೋಪಿಗೆ ಗೊತ್ತಿರುತ್ತದೆ, ನಾನು ಸರಿಯಾದವರನ್ನೆ ಕಟಕಟೆಯಲ್ಲಿ ನಿಲ್ಲಿಸಿದ್ದೇನೆ, ಹಾಗೆ ಯಾರೊ  ಸಿಕ್ಕಿದವರನ್ನು  ರಸ್ತೆಯಲ್ಲಿಯೆ ಒದ್ದು ಒದ್ದು ಒಪ್ಪಿಸಲಾಗುವದಿಲ್ಲ”  
ನ್ಯಾಯದೀಶರು, ಗಂಭೀರವಾಗಿ,

“ಮಿ! ಅಶೋಕ್ ನೀವು ಜವಾಬ್ದಾರಿಯ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿ, ಕೋರ್ಟಿನಲ್ಲಿ ಹೀಗೆಲ್ಲ ವರ್ತಿವಂತಿಲ್ಲ, ವಕೀಲರ ಮೇಲೆ ಕೂಗಾಡುವಂತಿಲ್ಲ ತಿಳಿಯದೇ. ಇನ್ನೊಮ್ಮೆ ಹೀಗೆ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತೆ “ ಎಂದು ಎಚ್ಚರಿಸಿದರು.

ನರಸಿಂಹ ಒಂದು ಕ್ಷಣ ಸುಮ್ಮನೆ ನಿಂತಿದ್ದ, ಅವನಿಗೆ ಅಶೋಕನ ಮಾತೆ ಕಿವಿಯಲ್ಲಿ ಗುನುಗುತ್ತಿತ್ತು,

ರಸ್ತೆಯಲ್ಲಿ ಒದ್ದು, ಒದ್ದು ಎಂದುಕೊಂಡ, ತಲೆಗೆ ಏನೋ ಮಿಂಚಿನಂತೆ ಹೊಳೆಯಿತು.

ಹೌದು ತಾನು  ಕೊಲೆಯಾದ ತಾಣಕ್ಕೆ ಹೋದಾಗ ಈ ಪಾಂಡು ನೆಲದ ಮೇಲೆ ಬಿದ್ದ ವಸ್ತುವನ್ನೆಲ್ಲ ತನ್ನ ಕಾಲಿನಿಂದ ಒದೆಯುತ್ತ ನಿಂತಿದ್ದ,  ಹೌದು ಏನದು !  ಹೌದು ಕೊಲೆಗೆ ಲಿಂಕ್ ಅದೇ, ಈಗ ಅಲ್ಲಿಯೇ ಇರುವುದೋ ಇಲ್ಲವೋ ತಿಳಿಯದು, ಅದು ತನ್ನನ್ನು ಕೊಲೆಗಾರನಲ್ಲಿಗೆ ಕರೆದೊಯ್ಯುವುದೋ ಇಲ್ಲವೋ ತಿಳಿಯದು.

ಅವನ ಆತುರ ಅತಿಯಾಯಿತು,  ಆದರೂ ಹೊರಗೆ ತನ್ನ ಕಾತುರ ತೋರದೇ ನುಡಿದ

“ಸ್ವಾಮಿ ಸಾಹೇಬರು ಕೂಗಾಡಲಿ ಬಿಡಿ,  ಕೇಸು ಸೋಲುವ ಹತಾಶೆಯಲ್ಲಿ ಕೂಗಾಡುತ್ತಿದ್ದಾರೆ,  ಅವರು ಮಾಡಬೇಕಿರುವ ಕೆಲಸ ನಾವು ಮಾಡಬೇಕಿದೆ. ಸ್ವಾಮಿ, ನನಗೆ  ಇವರು ಆಡಿದ  ಮಾತಿನಲ್ಲಿ ಏನು ಒಂದು ಎಳೆ ಹೊಳೆದಿದೆ, ನನಗೆ ಕೇವಲ ಇಪ್ಪತನಾಲಕ್ಕು ಗಂಟೆಗಳ ಅವಕಾಶ ಕೊಡಿ, ನನ್ನ ಊಹೆ ನಿಜವಾದರೆ ನನಗೆ ಒಂದು ದೊಡ್ಡ ಸಾಕ್ಷಿ ಸಿಗುತ್ತದೆ ದಯಮಾಡಿ ಈಗ ಏನು ಕೇಳಬೇಡಿ” ಎಂದ.

ನ್ಯಾಯದೀಶರು ನಗುತ್ತ , ‘ವಿಚಿತ್ರ ವ್ಯಕ್ತಿಗಳು ಕಣ್ರೀ ನೀವು, ಆಯಿತು, ಇಷ್ಟು ದಿನವೇ ಕಳೆದಿದೆಯಂತೆ ಮತ್ತೆ ಒಂದು ದಿನ ತಾನೆ’ ಎನ್ನುತ್ತ  ಮರುದಿನಕ್ಕೆ ಕೇಸನ್ನು ಮುಂದಕ್ಕೆ ಹಾಕಿ ಎದ್ದು ಹೋದರು.

……….

 

ಪುನಃ ನರಸಿಂಹ, ಹಾಗು ಪಾಂಡು ಕೊಲೆಯಾದ ಜಾಗದಲ್ಲಿ ನಿಂತಿದ್ದರು, ನರಸಿಂಹ ಸಿಗರೇಟ್ ಎಳೆಯುತ್ತ ಸುತ್ತಲೂ ಏನನ್ನೊ ಹುಡುಕುತ್ತ ಓಡಾಡುತ್ತಿದ್ದ,

“ಬಾಸ್ ಏನು ಹುಡುಕುತ್ತಿದ್ದಿರೀ ಹೇಳಿದರೆ ನಾನು ಹುಡುಕುವೆ “ ಎಂದ

“ಪಾಂಡು ಆ ದಿನ ನಾವು ಬಂದಿದ್ದೆವಲ್ಲ ಆಗ ನೀನು ರಸ್ತೆಯಲ್ಲಿ ನಿಂತು ಒಂದು ವಸ್ತುವನ್ನು ಒದೆಯುತ್ತ ಇದ್ದೆ ಅಗಾಗ್ಯೆ, ಅದು ಏನು ನೆನಪಿಸಿಕೋ, ಹಾಗೆ ಅದು ಇಲ್ಲೇ ಇರಬಹುದ ಹುಡುಕು” ಎಂದ

“ಬಾಸ್ ಅದಾ…. ನೆನಪಾಯಿತು, ಅದು ಯಾವುದೋ ವಾಹನದ ಬ್ರೇಕಿನ ಲೈಟ್ ಒಡೆದು ಕೆಳಗೆ ಬಿದ್ದ ಬಾಗ ಅನ್ನಿಸುತ್ತೆ,  ಒಂದು ಕೆಂಪು ಗ್ಲಾಸಿನ ಪೀಸ್,” ಎನ್ನುತ್ತ ಅದನ್ನೆ ಕಡೆಗೆ ಜೋರಾಗಿ ಒದ್ದೆನಲ್ಲವೆ ಎಂದು ನೆನಪಿಸಿಕೊಳ್ಳುತ, ಖಾಲಿ ಸೈಟ್ ಇದ್ದ ಮೂರ್ತಿಯ ಮನೆಯ ಕಡೆ ನಡೆದ . ಐದು ನಿಮಿಶದ ಹುಡುಕುವಿಕೆ ಫಲ ಕೊಟ್ಟಿತ್ತು,

“ಭಾಸ್ ಸಿಕ್ಕಿತು “ ಎನ್ನುತ್ತ ಎತ್ತಿ ತೋರಿಸಿದ, ಹೌದು ಅದೇ ಕೆಂಪು ಬಣ್ಣದ ತುಂಡು , ಯಾವುದೋ ಬೈಕಿನ ಬ್ರೇಕ್ ಲೈಟ್ ನದು.

“ಗುಡ್ ಪಾಂಡು, ಕಡೆಗೂ ಸಿಕ್ಕಿತಾ ಕೊಡು ಇಲ್ಲಿ “ ಎಂದವನೇ ತಿರುಗಿಸಿ ನೋಡಿ

“ಈಗ ಮತ್ತೆ ಅವರ ಮನೆಗೆ , ಅದೆ ಅನಂತರಾಮಯ್ಯನವರ ಮನೆಗೆ ಹೋಗಬೇಕಲ್ಲ  ಬರ್ತೀಯ ?” ಎಂದ

“ಪುನಃ ಅಲ್ಲಿಗಾ ಬಾಸ್ ಅದೇಕೆ, ?”

ಎಂದವನು ಸದ್ಯಕ್ಕೆ ತನ್ನ ಪ್ರಶ್ನೆಗೆ ನರಸಿಂಹ ಉತ್ತರ ಕೊಡುವದಿಲ್ಲ ಎಂದು ಅರಿತು ಸುಮ್ಮನೇ ಅವನ ಜೊತೆ ಹೊರಟ.

 

ತನ್ನ ಮನೆಗೆ ಪುನಃ ಬಂದ ನರಸಿಂಹನನ್ನು ನೋಡಿ ರಾಜಮ್ಮನಿಗೆ ಆಶ್ಚರ್ಯ ಸ್ವಲ್ಪ ದಿಗಿಲು

ನರಸಿಂಹ ಹೇಳಿದ

“ನೋಡಮ್ಮ  ನಿಮ್ಮ  ಗಂಡನ ಕೊಲೆಗೆ ಸಂಬಂದಿಸಿದಂತೆ ಬಂದಿರುವುದು ನಿಜ ಆದರೆ ನಿಮ್ಮ ಸಹಾಯ ಬೇಕು ಅಷ್ಟೆ ನೀವು ನನಗೆ ಏನು ಹೇಳಬೇಕಿಲ್ಲ”  ಎಂದ ನರಸಿಂಹ

“ನನ್ನ ಗಂಡನ ಕೊಲೆಗಾರನನ್ನು ಹಿಡಿಯಲು  ಸಹಾಯ ಖಂಡಿತ ಮಾಡುವೆ ಆದರೆ ನನ್ನನ್ನು ದಾರಿ ತಪ್ಪಿಸಲಾಗದು, ವೆಂಕಟೇಶಯ್ಯನವರಿಗೆ ಶಿಕ್ಷೆ ಆಗಲೇ ಬೇಕು” ಎಂದಳು ರಾಜಮ್ಮ, ಅದಕ್ಕೆ ನರಸಿಂಹ

“ಅಗಲಮ್ಮ ಅದು ಆಮೇಲೆ ಯೋಚಿಸೋಣ. ಆ ದಿನ ನಿಮ್ಮ ಮನೆಗೆ ಒಬ್ಬ ಹುಡುಗ ಬಂದಿದ್ದನಲ್ಲ ಬೈಕ್ ನಲ್ಲಿ ಅವನನ್ನು ಕರೆಸಲು ಆಗುತ್ತ ಪುನಃ, ಆದರೆ ನಾವು ಬಂದಿರುವುದು ತಿಳಿಸಬಾರದು, ಸುಮ್ಮನೆ ಬರಲು ಹೇಳಿ ಹಾಗೆ , ಬೈಕನ್ನು ತರಲು ಹೇಳಿ” ಎಂದ

 

“ನೀವು ಹೇಳದಿದ್ದರು ಅವನು ಬರುವುದು ಬೈಕ್ ನಲ್ಲಿಯೆ” ಅಂದುಕೊಂಡ ಆಕೆ ತನ್ನ ಮಗಳಿಗೆ ಪ್ರದೀಪನಿಗೆ ಪೋನ್ ಮಾಡಲು ಹೇಳಿದಳು. ಅವಳಿಗೆ ಒಳಗೊಳಗೆ ಒಂದು ಕುತೂಹಲ, ತನ್ನ ಗಂಡನ ಕೊಲೆಯ ವಿಷಯ ತಿಳಿಯಲು ಬಂದವರು ಈ ಹುಡುಗನಿಗೇಕೆ ಕರೆಸುತ್ತಿದ್ದಾರೆ ಅವನಿಗೂ ಈ ಕೊಲೆಗೂ ಸಂಬಂಧ ಇದೆಯ? , ಆಕೆ ಯೋಚಿಸುತ್ತಿದ್ದಳು.

 

ನರಸಿಂಹನು ಯೋಚಿಸುತ್ತಿದ್ದ ತಾನು ಕತ್ತಲಿನಲ್ಲಿ ಕೈ ಆಡಿಸುತ್ತಿರುವೆ, ನನ್ನ ಊಹೆ ನಿಜವೋ ಸುಳ್ಳೊ ಎಂಬುದು ಹುಡುಗನು ಬಂದ ನಂತರ ತಿಳಿಯಬಹುದು. ಎದುರಿಗೆ ರಾಜಮ್ಮ ನಿಂತಿದ್ದರೆ ಆಕೆಯ ಹಿಂದೆ ಆಕೆಯ ಇಬ್ಬರು ಹೆಣ್ಣುಮಕ್ಕಳು ನಿಂತಿದ್ದರು. ಅವನಿಗೆ ಒಂದು ಕ್ಷಣ ಪಾಪ ಅನ್ನಿಸಿತು, ಸಂಸಾರದ ಯಜಮಾನನನ್ನು ಕಳೆದುಕೊಂಡು ದಿಕ್ಕೆಟ್ಟು ನಿಂತಿರುವ ಸಂಸಾರ ಎಂದು.

 

ನಿರೀಕ್ಷೆಯಂತೆ ಪ್ರದೀಪ ಹಕ್ಕಿಯಂತೆ ಹಾರಿ ಬಂದ ತನ್ನ ಬೈಕ್ ಮೇಲೆ. ಬಂದು ಗಾಡಿ ನಿಲ್ಲಿಸುವಾಗಲೆ ನರಸಿಂಹ, ಮತ್ತು ಪಾಂಡುವನ್ನು ಕಂಡು ಅವನ ಮುಖದ ಸಂತಸ ಹಾರಿಹೋಯಿತು. ಒಂದು ರೀತಿ ಗೊಂದಲ ಭಯದ ಭಾವ ಅಲ್ಲಿ ನೆಲೆಗೊಂಡಿತು.

“ಬಾ ಪ್ರದೀಪ, ಇವರು ನೋಡು ಅದೇನೊ ನಿನ್ನ ಜೊತೆ ಮಾತನಾಡಬೇಕಂತೆ” ಎಂದಳು ರಾಜಮ್ಮ.

“ಬಾ ಪ್ರದೀಪ, ಏನು ಭಯಪಡಬೇಡ, ಕೆಲವು ಪ್ರಶ್ನೆ ಅಷ್ಟೆ, ನೀನು ಇನ್ನು ಡ್ರೈವಿಂಗ್ ಲೈಸನ್ಸ್ ಮಾಡಿಸಲಿಲ್ಲವಾ?” ಎಂದ ನರಸಿಂಹ ನಗುತ್ತ.

“ಮುಂದಿನ ತಿಂಗಳು ಮಾಡಿಸುತ್ತೇನೆ ಸಾರ್ ಹದಿನೆಂಟು ಆಗುತ್ತಲ್ಲ ’ ಅಂದ

“ಗಾಡಿಯನ್ನು ಪರೀಕ್ಷಿಸುತ್ತ, ಅದೇನು ನಿನ್ನ ಗಾಡಿ ಎಡಬಾಗವೆಲ್ಲ ಇಷ್ಟೋಂದು ಗೆರೆಗಳು ಎಲ್ಲಿಯೋ ಎತ್ತಿಹಾಕಿದಂತಿದೆ “ ಎಂದ ನರಸಿಂಹ

“ಇಲ್ಲ ಮನೆಯ ಹತ್ತಿರ ಬಿದ್ದು ಬಿಡ್ತು ’ ಅಂದ ಪ್ರದೀಪ, ’ಅದೇನು ಸಾರ್ ನನ್ನನ್ನು ಕರೆದಿದ್ದು?”  ಪ್ರಶ್ನಿಸಿದ

“ಹೇಳುತ್ತೇನೆ ಬಿಡು ಅಂತ ಅರ್ಜೆಂಟ್ ವಿಷಯ ಏನಲ್ಲ, ಅದೇನು ಹಿಂಬಾಗದ ಬ್ರೇಕ್ ಲೈಟ್ ಸಹ ಮುರಿದುಹೋಗಿದೆ” ಎಂದ ನರಸಿಂಹ.

“ಹೌದು ಸಾರ್ ಗಾಡಿ ಬಿತ್ತಲ್ಲ ಆಗ ಮುರಿದುಹೋಯಿತು ಅನಿಸುತ್ತೆ” ಎಂದ ಪ್ರದೀಪ, ಸ್ವಲ್ಪ ಗೊಂದಲ ಅವನ ದ್ವನಿಯಲ್ಲಿ.

 

“ನೋಡು ಇದೇನ ನಿನ್ನ ಗಾಡಿಯ ಬ್ರೇಕ್ ಲೈಟಿನ ಪೀಸ್,” ಅನ್ನುತ್ತ,

ಪಾಂಡುವಿಗೆ ಅದನ್ನು ತೆಗೆದು ತೋರಿಸಲು ಹೇಳಿದ

ಪಾಂಡು ತನ್ನ ಕೈಯಲ್ಲಿದ್ದ ಬ್ರೇಕ್ ಲೈಟಿನ ತುಂಡನ್ನು ತೆಗೆದು ತೋರಿಸುತ್ತ, ಗಾಡಿಯ ಹಿಂದೆ ಬಂದು, ಲೈಟಿನ ಒಡೆದ ಬಾಗ ಕೂಡಿಸಲು ನೋಡಿದ ಆಶ್ಚರ್ಯ ಅನ್ನುವಂತೆ, ಅದು ಒಡೆದಬಾಗದ ಮೇಲೆ ಸರಿಯಾಗಿ ಹೊಂದಿಕೊಂಡು ಕುಳಿತಿತು, ಒಡೆದೇ ಇಲ್ಲ ಅನ್ನುವಂತೆ. ನರಸಿಂಹನಿಗೆ ತೃಪ್ತಿಯಾಯಿತು.

“ನೋಡು ಪ್ರದೀಪ, ಈ ತುಂಡು ನಿನ್ನ ಗಾಡಿಯ ಲೈಟ್ ಮೇಲೆ ಎಷ್ಟು ಸರಿಯಾಗಿ ಕುಳಿತುಬಿಡ್ತು, ಈ ಗಾಡಿಯದೇ ಅಂತಾಯ್ತು ಅಲ್ವ”

“ಇರಬಹುದೇನೋ ಸಾರ್, ಎಲ್ಲಿ ಸಿಕ್ಕಿತು ನಿಮಗೆ “ ಅವನ ದ್ವನಿಯಲ್ಲಿ ಒಡಕು

“ಎಲ್ಲಿ ಸಿಕ್ಕಿತು ಅಂತ ಆಮೇಲೆ ಹೇಳೋಣ, ನೀನು ಅದೇನು ಪದೇ ಪದೇ ಇವರ ಮನೆಗೆ ಬರುವುದು, ಏನು ವಿಶೇಷ’ ಎಂತದೋ ಕುಹಕ ನರಸಿಂಹನ ದ್ವನಿಯಲ್ಲಿ. ಅವನು ಹಾಗೆ ಕೇಳುತ್ತಿರುವಾಗಲೆ ಪಾಂಡು ಗಮನಿಸಿದ, ರಾಜಮ್ಮನ ಎರಡನೇ ಮಗಳು  ರಾಗಿಣಿ

ಹಿಂದೆ ಸರಿದು ಹಾಗೆ ಒಳಗೆ ಹೊರಟು ಹೋದಳು. ಪಾಂಡುವಿನ ಗಮನ ಬಹಳ ಸೂಕ್ಷ್ಮ.

“ಸುಮ್ಮನೆ ಸಾರ್ ಪರಿಚಯದವರಲ್ವ ಏನಾದರು ಸಹಾಯ ಬೇಕಾಗುತ್ತೆ ಅಂತ ಬರುತ್ತಿರುತ್ತೇನೆ” ಪ್ರದೀಪ ಎಂದ

“ಏನು ನೀನು ಇಲ್ಲಿ ಬಂದು ಸಹಾಯ ಮಾಡೋದು, ಸರಿ ಏನಾದರು ಮಾಡಿಕೋ, ಆದರೆ ಅದಿನ ಬಸ್ ನಿಲ್ದಾಣದ ಹತ್ತಿರ ಏಕೆ ಹೋಗಿದ್ದೆ ಹೇಳೂ” ಎಂದ ನರಸಿಂಹ ಗಂಭೀರವಾಗಿ.

“ಯಾವ ಬಸ್ ನಿಲ್ದಾಣ , ನಾನು ಎಲ್ಲಿಗೆ ಹೋಗಿದ್ದೆ” ಪ್ರದೀಪದ ದ್ವನಿ ನಡುಗುತ್ತಿತ್ತು, ಆದರು ಅಮಾಯಕನಂತೆ ವರ್ತಿಸಲು ಪ್ರಯತ್ನಿಸಿದ.

“ಯಾವ ಬಸ್ ನಿಲ್ದಾಣ ಅಂದರೆ, ಅದೇ ನಿಮ್ಮ ಮೇಷ್ಟ್ರು ಅನಂತರಾಮಯ್ಯನವರು ಕೊಲೆ ಆದರಲ್ಲ ಅಲ್ಲಿಗೆ ಅವತ್ತು  ಏಕೆ ಹೋಗಿದ್ದೆ , ನೋಡು ನನಗೆಲ್ಲ ತಿಳಿದಿದೆ. ಅಲ್ಲಿ ಗುಡಿಸಲಲ್ಲಿ ಇರುವ ಮೂರ್ತಿ ಎಲ್ಲವನ್ನು ಹೇಳಿದ್ದಾನೆ”

ನರಸಿಂಹ ಸುಮ್ಮನೆ ಕತ್ತಲಲ್ಲಿ ಒಂದು ಬಾಣಬಿಟ್ಟ.  ಮೊದಲೆ ಹೆದರಿದ್ದ ಪ್ರದೀಪ ಈಗ ಕುಳಿತುಬಿಟ್ಟ, ಅವನು ಕಣ್ಣಲ್ಲಿ ನೀರು ಬರುತ್ತಿತ್ತು, ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯ. ರಾಜಮ್ಮ ಹಾಗು ಅವಳ ಮೊದಲ ಮಗಳು ರಾಧ ಪ್ರದೀಪನನ್ನೆ ನೋಡುತ್ತಿದ್ದರು ಅಚ್ಚರಿಯಿಂದ.  

ನರಸಿಂಹ ಮತ್ತೆ ಹೇಳಿದ ,

“ನೋಡು ಯಾವುದನ್ನು ಮುಚ್ಚಿಡದೆ ಎಲ್ಲವನ್ನು ಹೇಳಿಬಿಡು ನಾನು ಕ್ರಿಮಿನಲ್ ಲಾಯರ್, ನೀನು ನಿಜವನ್ನೆ ಹೇಳಿದರೆ ನಿನ್ನನ್ನು ಹೇಗೆ ಉಳಿಸಬಹುದು ಎಂದು ಯೋಚಿಸುತ್ತೀನಿ, ಆದರೆ ನೀನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಮಾತ್ರ  ಶಿಕ್ಷೆ ಕಾದಿದೆ”

ನರಸಿಂಹ ಕಾದಿದ್ದ ಕಣ್ಣಿಣವನ್ನು ಬಡಿಯುತ್ತಿದ್ದ.

“ಇಲ್ಲ ಸಾರ್ ನಾನು   ಬೇಕು ಎಂದು ಮಾಡಿದ್ದಲ್ಲ, ಆಕ್ಸಿಡೆಂಟ್ ತರ ಆಗಿಹೋಯಿತು, ನಾನು ನಿರೀಕ್ಷಿಸಿಯೇ ಇರಲಿಲ್ಲ”

ಅವನ ದ್ವನಿ ಕುಸಿದಿತ್ತು, ಮತ್ತೆ ಹೇಳಿದ

“ಆ ದಿನ ರಾತ್ರಿ ನಾನು ಬಸ್ ಸ್ಟಾಂಡಿನ ರಸ್ತೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದೆ, ಯಾವ ವಾಹನವು ಇರಲಿಲ್ಲ, ಜನರೂ ಇರಲಿಲ್ಲ , ಸ್ವಲ್ಪ ಸ್ಪೀಡಾಗೆ ಬರುತ್ತಿದ್ದೆ, ಬಸ್ ಸ್ಟಾಪಿನ ಹತ್ತಿರ ಬರುವವರೆಗೂ ಗಮನಿಸಲೇ ಇಲ್ಲ , ಇದ್ದಕಿದ್ದಂತೆ ಕತ್ತಲೆಯಲ್ಲಿ ಒಬ್ಬರು ರಸ್ತೆಗೆ ಅಡ್ಡಬಂದುಬಿಟ್ಟರು, ನಾನು ಬ್ರೇಕ್ ಹಾಕಿದೆ, ಏನೆ ಮಾಡಿದರು ಗಾಡಿ ಕಂಟ್ರೋಲ್ ಸಿಗದೆ ಅವರನ್ನು ಉಜ್ಜಿ ಬಿಡ್ತು, ಅವರು ಹಿಂದಕ್ಕೆ ದಬ್ ಎಂದು ಬಿದ್ದು ಬಿಟ್ಟರು. , ಬೀಳುವಾಗ ಅಯ್ಯೋ ಎಂದು ಜೋರಾಗಿ ಕಿರುಚಿದರು.  ನನ್ನ ಗಾಡಿಯು ಕೆಳಗೆ ಬಿತ್ತು, ಯಾರು ಬಿದ್ದವರು ಎಂದು ನೋಡಿದೆ, ಮೇಷ್ಟ್ರು ಅನಂತರಾಮಯ್ಯನವರು, ಏನು ಮಾಡುವುದು ಎಂದು ಗೊತ್ತಾಗಲಿಲ್ಲ, ಅವರು ಹಿಂದಕ್ಕೆ ಬೀಳುವಾಗ ತಲ್ಲೆ ಅಲ್ಲಿದ್ದ ಕಲ್ಲಿಗೆ ಬಡಿದು ತಲೆಯ ಹಿಂಬಾಗದಿಂದ ರಕ್ತ ಸುರಿಯುತ್ತ ಇತ್ತು. ಮೂರು ನಾಲಕ್ಕು ಸಾರಿ ಕೂಗಿದರು, ಅವರು ಅಲ್ಲಾಡಲೇ ಇಲ್ಲ , ಸುತ್ತಲೂ ಯಾರು ಇರಲಿಲ್ಲ, ನನಗೆ ಭಯ ಎನಿಸಿತು, ಅವರು ಸತ್ತು ಹೋದರೆ ನನ್ನನ್ನು ಪೋಲಿಸರು ಅರೆಸ್ಟ್ ಮಾಡುತ್ತಾರೆ ಅಂತ ಭಯವಾಯಿತು, ಅದಕ್ಕೆ ಅಲ್ಲಿಂದ ನನ್ನ ಬೈಕ್ ತೆಗೆದುಕೊಂಡು   ಹೊರಟು ಹೋದೆ. ಆಮೇಲೆ ಆ ಬಗ್ಗೆ ಏನಾದರು ವಿಷಯ ಗೊತ್ತಾಗಲಿ ಎಂದು ಇವರ ಮನೆಗೆ ಅಗಾಗ್ಯೆ ಬರುತ್ತಿದ್ದೆ”

 

ಪ್ರದೀಪ ಎಲ್ಲವನ್ನು ಹೇಳಿ ಅಳುತ್ತಿದ್ದ, ರಾಜಮ್ಮನಿಗೆ  ತಡೆಯಲಾಗದ ಅಘಾತವಾದಂತಿತ್ತು, ತನ್ನವರನ್ನು ಕೊಲೆ ಮಾಡಿ ಏನು ತಿಳಿಯದವನಂತೆ , ನನ್ನ ಕಣ್ಣೆದುರೇ ದಿನಾ ಬಂದು ಎದುರಿಗೆ ಕುಳಿತು ಲಲ್ಲೆ ಹೊಡೆಯುತ್ತಿದ್ದ ಅಂತ ತಡೆಯಲಾರದ ಕೋಪ ಬಂದು  ಎದುರಿಗೆ ನಿಂತಿದ್ದ ಅವನ ಕೆನ್ನೆಗೆ ಬಾರಿಸಿ, ಕುಸಿದು ಕುಳಿತರು.  

ಅಲ್ಲಿಂದ ಹೊರಡುವ ಮುಂಚೆ ಪಾಂಡು ರಾಜಮ್ಮನನ್ನು ಕರೆದು ಹೇಳಿದ ,
’ಬಹುಷಃ ನಿಮ್ಮ ಎರಡನೇ ಮಗಳಿಗೆ ಈ ವಿಷಯ ಮೊದಲೆ ಗೊತ್ತಿತ್ತ ಅಂದ ವಿಚಾರಿಸಿ”
ರಾಜಮ್ಮ  ಆಶ್ಚರ್ಯದಿಂದ ’ಏಕೆ?’  ಎಂದರು,

ಪಾಂಡು  ಏನು ಹೇಳಲಿಲ್ಲ. ಅಲ್ಲಿಂದ ತನ್ನ ಬಾಸ್ ಜೊತೆ ಹೊರಟುಬಿಟ್ಟ.

 

-----------

.

 

ನ್ಯಾಯದೀಶರಿಗೆ , ನರಸಿಂಹ ಎಲ್ಲವನ್ನು ಅರಿಕೆ ಮಾಡಿ ತನ್ನ ಕ್ಲೈಂಟ್ ವೆಂಕಟೇಶಯ್ಯನವರು ನಿರಪರಾದಿಯೆಂದು ಅವರನ್ನು ಗೌರವ ಪೂರ್ಣವಾಗಿ ಈ ಕೇಸಿನಿಂದ ಮುಕ್ತಗೊಳಿಸಬೇಕೆಂದು ಕೇಳಿದ.

ನ್ಯಾಯಾದೀಶರು ಪೋಲಿಸ್ ತನಿಖಾಧಿಕಾರಿ ಅಶೋಕನನು ತರಾಟೆಗೆ ತೆಗೆದುಕೊಂಡರು, ಪರಿಪೂರ್ಣವಾಗಿ ತನಿಖೆ ಮಾಡದೆ ಕೋರ್ಟಿಗೆ ನಿರಪರಾದಿಯನ್ನು ತಂದು ನಿಲ್ಲಿಸಿದ್ದಕ್ಕಾಗಿ ಚೀಮಾರಿ ಹಾಕಿದರು. ಸಹಜವಾಗಿಯೆ ಕೇಸ್ ಡಿಸಿಮಿಸ್ ಆಯಿತು. ಪೋಲಿಸರು ಪ್ರಾಪ್ತವಯಸ್ಕನಲ್ಲದ ಪ್ರದೀಪನ ಮೇಲೆ ಬೇರೆ ಬಾಲಪರಾದದ ಅಡಿಯಲ್ಲಿ ಕೇಸ್ ದಾಖಲಿಸುವಂತೆ  ನ್ಯಾಯಾದೀಶರು ನಿರ್ದೇಶಿಸಿದರು.

 

ಅಶೋಕನು ವೆಂಕಟೇಶಯ್ಯನವರಲ್ಲಿ ಕ್ಷಮೆ ಯಾಚಿಸಿದ.

 

ಕೋರ್ಟಿನ ಹೊರಗೆ  ವೆಂಕಟೇಶಯ್ಯನವರು ನರಸಿಂಹನಿಗೆ ಕೈಮುಗಿದು ನಿಂತಿದ್ದರು,

ನರಸಿಂಹ ನಗುತ್ತ ನುಡಿದ

“ಸಾರ್ ನೀವು ನನಗೆ ಗುರುಗಳು, ಹಿರಿಯರು, ಆಶೀರ್ವಾದ ಮಾಡಬೇಕು, ಕೈ ಮುಗಿಯಬಾರದು, ಇದು ನನ್ನ ಕರ್ತವ್ಯವಾಗಿತ್ತು, ನನ್ನ ಹರಸಿ”

ಅವರನ್ನು ಸಮಾದಾನ ಪಡಿಸಿ ಅಲ್ಲಿಂದ ಹೊರಟ. ಅವನ ಮನದಲ್ಲಿ ಎಂತದೋ ಒಂದು ಶಾಂತಿ ನೆಮ್ಮದಿ ತುಂಬಿಕೊಂಡಿತ್ತು.

ರಾಜಮ್ಮ ವೆಂಕಟೇಶಯ್ಯನವರಲ್ಲಿಗೆ ಬಂದು

“ನಿಮ್ಮನ್ನು ತಪ್ಪಾಗಿ ತಿಳಿದಿದ್ದಕ್ಕೆ ಕ್ಷಮಿಸಿ, ನನ್ನ ಬುದ್ದಿಗೆ ಅದೇನೊ ಮಂಕು ಕವಿದಿತ್ತು, ಹಣಕೊಟ್ಟು ಉಪಕಾರ ಮಾಡಿದ ನಿಮಗೆ ನಮ್ಮಿಂದ ದ್ರೋಹವಾಯಿತು’ ಎಂದು ಕೈಮುಗಿದಳು.

ವೆಂಕಟೇಶಯ್ಯ ಮತ್ತು ಮಹಾಲಕ್ಷ್ಮಮ್ಮ ಏನು ಮಾತನಾಡಲಿಲ್ಲ.

“ಈ ತಿಂಗಳಲ್ಲಿ ಅವರ ಇಲಾಖೆಯಂದ ಹಣ ಬರಲಿದೆ, ಮಗಳಿಗೆ ಕೆಲಸವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ, ನಿಮ್ಮ ಪೂರ್ತಿ ಹಣವನ್ನು ಹಿಂದಕ್ಕೆ ಕೊಡುವ ಜವಾಬ್ದಾರಿ ನನ್ನದು,  ಕೊಡುತ್ತೇನೆ “ ಎಂದು ತಾನಾಗಿಯೆ ಹೇಳಿದಳು.

ಎಲ್ಲೋ ನೋಡುತ್ತ ನಿಂತಿದ್ದ ಪಾಂಡು

“ಸಾರ್ ಏನಾದರು ಆಗಲಿ ನೀವು ಸ್ವಲ್ಪ ಹುಷಾರಾಗಿರಿ, ಈ ಬಾರಿ ಹಣ ಪಡೆಯಲು ನೀವು ಮಾತ್ರ ಹೋಗಬೇಡಿ” ಎಂದ .

ವೆಂಕಟೇಶಯ್ಯನವರಿಗೆ ನಗು ಬರಲಿಲ್ಲ, ಆದರೆ ಮಹಾಲಕ್ಷ್ಮಮ್ಮ ಮಾತ್ರ ಜೋರಾಗಿ ನಕ್ಕುಬಿಟ್ಟರು.

 

ಮುಗಿಯಿತು.

 

ಎಲ್ಲ ಬಾಗಗಳನ್ನು ಒಟ್ಟಾಗಿ ಓದಲು ಸರಣಿ ಕೆಳಗಿರುವ ವಾಕ್ಯ :ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ'  ಕ್ಲಿಕ್ ಮಾಡಿರಿ

Rating
No votes yet

Comments

Submitted by nageshamysore Sat, 03/29/2014 - 05:35

ಪಾರ್ಥಾ ಸಾರ್, ಎಲ್ಲಾ ಕಂತೂ ಒಟ್ಟಿಗೆ ಓದಿದೆ.  ಕಥೆ ಕೊನೆವರೆಗೂ ಕುತೂಹಲಕರವಾಗಿ ಓದಿಸಿಕೊಂಡು ಹೋಯ್ತು. ಸುಲಲಿತವಾಗಿ ಬಂದ ವಾದದ ಸಂಭಾಷಣೆಯಲ್ಲಿ ಇಣುಕಿದ 'ತರ್ಕ'ದ ಪರಿಯೂ ಇಷ್ಟವಾಯ್ತು :-)

Submitted by partha1059 Sat, 03/29/2014 - 21:21

In reply to by nageshamysore

ವಂದನೆಗಳು ನಾಗೇಶರಿಗೆ
ನಿಮ್ಮ‌ ಪರಿಬ್ರಮಣ‌ ಮಧ್ಯ‌ ಕೆಲವು ಕಾಲ‌ ನಿಂತಿತ್ತು ಈಗ‌ ಮತ್ತೆ ಪ್ರಾರಂಭ‌ ಹೊಸ‌ ಉತ್ಸಾಹದಿಂದ‌ !
ಮುನ್ನಡೆಯಲಿ , ಓದಿಸಿಕೊಳ್ಳುತ್ತಿದೆ!