ಕಥೆ: ಪರಿಭ್ರಮಣ..(12)

ಕಥೆ: ಪರಿಭ್ರಮಣ..(12)

(ಪರಿಭ್ರಮಣ..(11)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ಶ್ರೀನಾಥ ಮತ್ತು ಜತೆಗಿದ್ದ ಭಾರತೀಯ ಸಹೋದ್ಯೋಗಿಗಳಿಗೆ ಜೀವನವೇನು ಅಲ್ಲಿ ಹೂವಿನ ಹಾಸಿಗೆ ಎನ್ನುವಂತಿರಲಿಲ್ಲ. ಊಟಾ ತಿಂಡಿಯಿಂದ ಹಿಡಿದು ಭಾಷೆ, ನಡುವಳಿಕೆಯತನಕ ಒಂದಲ್ಲ ಒಂದು ವಿಧದ ಹೊಂದಾಣಿಕೆ ಮಾದಿಕೊಳ್ಳಲೇಬೇಕಾದ ಅನಿವಾರ್ಯ ಇದ್ದೆ ಇರುತ್ತಿತ್ತು. ಹೀಗಾಗಿ ಯಾವುದೆ ವಿಷಯವಿದ್ದರು ಅವರವರ ನಡುವೆ ಚರ್ಚಿಸಿ ಒಮ್ಮತಕ್ಕೆ ಬರದೆ ಬೇರೆ ದಾರಿಯೂ ಇರುತ್ತಿರಲಿಲ್ಲ. ಇದೊಂದು ರೀತಿ ಪರೋಕ್ಷವಾಗಿ 'ಟೀಮ್ ವರ್ಕ್' ಸಂಸ್ಕೃತಿಗೆ ಎಡೆಮಾಡಿಕೊಟ್ಟ ಕಾರಣ ಶ್ರೀನಾಥನಿಗೂ ಇದೊಂದು ರೀತಿಯ ಖುಷಿಯೆ ಆಗಿತ್ತು. ಇಲ್ಲದಿದ್ದರೆ ಅವರನ್ನೆಲ್ಲ ಒಂದೆ ಸಮತಲದಲ್ಲಿ ತಂದು ಮುನ್ನಡೆಸಲು ನಾನಾ ತರದ ರಣನೀತಿಯ ಜತೆ ಹೆಣಗಬೇಕಾಗುತ್ತಿತ್ತು. ತಂಡದಲ್ಲಿದ್ದವರೆಲ್ಲ ಬುದ್ಧಿವಂತರೆ ಆಗಿದ್ದರು ಅಗತ್ಯಕ್ಕಿಂತ ಹೆಚ್ಚು ತಲೆಹರಟೆ, ತರಲೆ ಮಾಡುವವರಿಗೇನೂ ಕೊರತೆಯಿರಲಿಲ್ಲ. ಅದರಲ್ಲೂ ಮುಖ್ಯವಾದ ತಲೆನೋವೆಂದರೆ ಏನು ಮಾಡಬೇಕೆಂದು ಹೇಳಿದ್ದರು, ಅದನ್ನು ಮೀರಿಸಿ ಬೇರೇನನ್ನೊ ಹೆಚ್ಚುವರಿಯಾಗಿ ಮಾಡಿ ತಮ್ಮ 'ಚಾಲೂಕುತನ' ತೋರಿಸಿ ಕಾಲರು ಎತ್ತಿಡಿವ ಸ್ವಭಾವ. ಹಾಗೆ ಅವರು ಮಾಡಿದ್ದು ಒಟ್ಟಾರೆ ಯೋಜನೆಗೆ ವ್ಯತಿರಿಕ್ತವಾಗಿದ್ದು, ಕೆಲವೊಮ್ಮೆ ಯೋಜನೆಗಳನ್ನೆ ಅಲ್ಪ ಸ್ವಲ್ಪ ಅದಲು ಬದಲು ಮಾಡಬೇಕಾಗಿ ಬರುತ್ತಿತ್ತು. ಹಾಗೆ ಮಾಡದೆ ಅವರ ಹೆಚ್ಚುವರಿಗೆ ಕತ್ತರಿ ಹಾಕಿದರೆ 'ಮುಸುಕಿನೊಳಗಿನ ಗುದ್ದಿನ' ಆರಂಭವಾಗಿಬಿಡುತ್ತಿತ್ತು. ಎಲ್ಲಿಂದಲೊ ಏನಾದರೂ ಕಿರಿಕಿರಿ, ತಲೆನೋವುಗಳು ಹುಟ್ಟಿಕೊಳ್ಳುತ್ತಿದ್ದವು. ಹೀಗಾಗಿ ಇದನ್ನೆಲ್ಲ ಸೂಕ್ಷ್ಮವಾಗಿ ನಿಭಾಯಿಸಬೇಕೆಂದರೆ ಸಾಕಾಗಿ ಹೋಗುತ್ತಿತ್ತು ಶ್ರೀನಾಥನಿಗೆ. ಅದೆ ಸ್ಥಳೀಯ ಸಹೋದ್ಯೋಗಿಗಳ ವಿಷಯಕ್ಕೆ ಬಂದರೆ ಸಂಪೂರ್ಣ ವ್ಯಾಸೋತ್ತರಮುಖಿ ಸ್ವಭಾವ. ಅವರಿಗೆ ಏನು ಮಾಡಬೇಕೆಂದು ಮಕ್ಕಳಿಗೆ ಹೇಳುವ ಹಾಗೆ ಪ್ರತಿ ಹೆಜ್ಜೆಯನ್ನು ಬಿಡಿಸಿ ಬಿಡಿಸಿ ವಿವರಿಸಬೇಕಿತ್ತು. ಸಾಲದ್ದಕ್ಕೆ ಅದೆಲ್ಲವನ್ನು ಸರಳವಾಗಿ ಅರ್ಥವಾಗುವ ಹಾಗೆ ಬರೆದುಕೊಡುವ ಕೆಲಸ ಬೇರೆ. ಇದು ಇನ್ನು ಅತಿರೇಖಕ್ಕೆ ಹೋದದ್ದೆಂದರೆ ತರಬೇತಿಯ ಸಿದ್ದತೆಗಾಗಿ ಮಾಡಿದ ಹಸ್ತ ಪ್ರತಿಗಳಲ್ಲಿ; ಎಲ್ಲರಿಗೂ ಆಂಗ್ಲ ಭಾಷೆ ಬರದ ಕಾರಣ ಇವರು ಇಂಗ್ಲೀಷಿನಲ್ಲಿ ವಿವರಿಸಿದ್ದನ್ನು ಯಾರಾದರೊಬ್ಬರು ಥಾಯ್ ಭಾಷೆಯಲ್ಲಿ ವಿವರಿಸಬೇಕಿತ್ತು. ತಮಾಷೆಯೆಂದರೆ ಅವರು ಸರಿಯಾಗಿ ವಿವರಿಸುತ್ತಿದ್ದಾರೊ ಇಲ್ಲವೊ ಎಂದು ತಿಳಿಯಲೆ ಆಗುತ್ತಿರಲಿಲ್ಲ! ಒಮ್ಮೊಮ್ಮೆ ಇವರು ಐದು ನಿಮಿಷದಲ್ಲಿ ಹೇಳಿದ ವಿಷಯವನ್ನು ಅರ್ಧಗಂಟೆಯತನಕ ವಿವರಿಸುತ್ತ ಚರ್ಚಿಸುತಿದ್ದರೆ, ಮತ್ತೆ ಕೆಲವೊಮ್ಮೆ ಇವರು ಅರ್ಧಗಂಟೆ ಹೇಳಿದ ಧೀರ್ಘ ವಿಷಯವನ್ನು ಐದೆ ನಿಮಿಷದಲ್ಲಿ ಮುಗಿಸಿಬಿಡುತ್ತಿದ್ದರು! ಸರಿಯಾಗೆ ವಿವರಿಸುತ್ತಿದ್ದರೆಂದುಕೊಂಡು ದೇವರ ಮೇಲೆ ಭಾರ ಹಾಕಿ ಮುಂದುವರೆಯುವುದಲ್ಲದೆ ಮತ್ತೇನು ಮಾಡಲು ಸಾಧ್ಯವಿರಲಿಲ್ಲ. ಆ ಮುಂದೆ ತರಬೇತಿಯ ಹಸ್ತಪ್ರತಿಗಳಲ್ಲೆ ಥಾಯ್ ವಿವರಣೆ ಸೇರಿಸಿದರು, ಇವೆಲ್ಲ ಕಲಸುಮೇಲೋಗರದಿಂದಾಗಿ ಮಾಮೂಲಿಗಿಂತ ಎರಡರಷ್ಟು ಸಮಯ ಹಿಡಿಸುತಿತ್ತು; ಮಾತ್ರವಲ್ಲದೆ, ಅದು ಮುಂದುವರೆಯುವ ವೇಗದಿಂದ ತಾಳ್ಮೆ ಸಹನೆಯ ಪರೀಕ್ಷೆಯೂ ಆಗಿಬಿಡುತ್ತಿತ್ತು. ಇದೆಲ್ಲದರಿಂದ ರೋಸಿ ಹೋದರೂ ಶ್ರೀನಾಥ ಆಗಾಗ್ಗೆ ತಮಾಷೆ ಮಾಡುತ್ತ 'ನಮ್ಮ ಹುಡುಗರ ತಂಡಕ್ಕೆ ಏನು ಮಾಡಬೇಕೆಂದು ಹೇಳುವ ಅಗತ್ಯವೆ ಇಲ್ಲ..ಬರಿ 'ಏನು ಮಾಡಬಾರದು' ಎಂದು ಹೇಳಿದರೆ ಸಾಕು...ನಮ್ಮ ಕಸ್ಟಮರಿಗೆ ಏನು ಮಾಡಬೇಕು ಅನ್ನುವುದನ್ನು ಮಾತ್ರ ವಿಷದವಾಗಿ ಹೇಳಿದರೆ ಸಾಕು...ಬೇರೇನು ಹೇಳಿ ಗೊಂದಲ ಪಡಿಸಬಾರದು' ಎಂದು ನಗುತಿದ್ದ. ಅವನು ತಮಾಷೆಗೆ ಅಂದರೂ ಆ ಮಾತಿನಲ್ಲಿ ಬಹುಪಾಲು ಸತ್ಯವೂ ಇತ್ತು.

ಅಲ್ಲಿದ್ದ ತರತರದ ತೊಡಕುಗಳಿಂದಾದ ಒಂದು ಮಹದುಪಕಾರವೆಂದರೆ, ಸಾಧಾರಣವಾಗಿ ಒಗ್ಗೂಡದ ತಂಡದ ಸದಸ್ಯರು ಈಗ ಹೆಚ್ಚು ನಿಕಟತೆಯಿಂದ ಒಡನಾಡುವಂತಾಗಿತ್ತು. ಮೊದಲೆಲ್ಲ ಭಾಷೆ, ಪ್ರಾಂತ್ಯಗಳ ಮೇಲೆ ಸಣ್ಣಪುಟ್ಟ ಅನಧಿಕೃತ ಗುಂಪುಗಳಾಗುತಿದ್ದವರೂ ಈಗ ಅದಾವುದೆ ಭೇಧವಿಲ್ಲದ ಒಂದು ತಂಡವಾಗಿ ವರ್ತಿಸಲು ಅನುವುಮಾಡಿಕೊಟ್ಟಿತ್ತು. ಅದರಲ್ಲೂ ಮುಖ್ಯವಾಗಿ ಅವರನ್ನೆಲ್ಲ ಮೊದಮೊದಲು ಹತ್ತಿರ ತಂದ ಪದಾರ್ಥ - ಅಕ್ಕಿ.. ಇವರಲೆಲ್ಲ ಹೆಚ್ಚಿನವರು ದಕ್ಷಿಣ ಭಾರತದವರೆ ಆಗಿದ್ದ ಕಾರಣ ಅಕ್ಕಿ ಪ್ರಮುಖವಾದ ವಸ್ತುವಾಗಿತ್ತು. ಉಳಿದವರು ಕೂಡ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಕಾರಣ ಅನ್ನ ತಿಂದೆ ಅಭ್ಯಾಸವಾದವರು. ಥಾಯ್ಲ್ಯಾಂಡು ಅಕ್ಕಿಯ ಕಣಜವೆ ಆದ ಕಾರಣ ಅಲ್ಲಿ ಅಕ್ಕಿಗೇನು ಕೊರತೆಯಿರಲಿಲ್ಲ; ಆದರೆ ನಿಜವಾದ ತೊಂದರೆಯಿದ್ದುದು ಅಲ್ಲಿ ದೊರಕುವ ಅಕ್ಕಿಯ ವಿಧ. ಇವರೆಲ್ಲ ಸೋನಾ ಮಸೂರಿ, ಬಂಗಾರ ಸಣ್ಣ, ಗೌರಿ ಸಣ್ಣ ರೈಸುಗಳ ಬಾಯೃಚಿ ಹಿಡಿದವರು. ಆ ಅಕ್ಕಿಯೆ ಅಲ್ಲಿಯೂ ಸಿಗಬೇಕೆಂದರೆ ಹೇಗಾದೀತು? ಅಲ್ಲಿ ಸಿಗುತಿದ್ದ ಅಕ್ಕಿಗಳಲ್ಲಿ ಸರಿ ಸುಮಾರು ಎಲ್ಲಾ 'ಪರಿಮಳಯುಕ್ತ ಅಕ್ಕಿ' (ಫ್ರಾಗ್ರೆನ್ಸ್ ರೈಸ್) ಅಥವ 'ಅಂಟಕ್ಕಿ' (ಸ್ಟಿಕ್ಕಿ ರೈಸ್). ಅಂಟಕ್ಕಿಯನ್ನಂತೂ ಇವರ ಅಡುಗೆಗೆ ಬಳಸಲು ಸೂಕ್ತವಿಲ್ಲದ ಕಾರಣ ಯಾವುದಾದರೊಂದು ಬಗೆಯ ಫ್ರಾಗ್ರೆನ್ಸ್ ರೈಸನ್ನೆ ಕೊಳ್ಳಬೇಕಾಗುತಿತ್ತು. ಐದು ಹತ್ತ್ತು ಕೇಜಿ ಪ್ಯಾಕುಗಳಲ್ಲಿ ಬರುವ ಈ ಅಕ್ಕಿಯನ್ನು ಸೂಪರ್ ಮಾರ್ಕೆಟ್ಟಿನ ಐಟಂಗಳ ಜತೆ ಹೊತ್ತು ತರುವುದು ಕಷ್ಟವಿರಲಿಲ್ಲ. ಆದರೆ ಪ್ರತಿದಿನ ಹಗಲಿರುಳು ಆ ಸುವಾಸನಾಯುಕ್ತ ಅಕ್ಕಿಯ ಅನ್ನವನ್ನು ಸಾಂಬಾರು, ದಾಲ್, ತಿಳಿಸಾರುಗಳ ಜತೆ ತಿನ್ನಲು ಸಾಧ್ಯವಿರಲಿಲ್ಲ. ಜತೆಗೆ ಸ್ವಲ್ಪ ಹೆಚ್ಚು ಅಂಟಾಗಿ ಉದುರುದುರಾಗದ ಅನ್ನ ಹೆಚ್ಚು ತಿನ್ನಲು ಸಾಧ್ಯವಾಗದ ಪರಿಸ್ಥಿತಿ ಬೇರೆ. ಬಂದ ಮೊದಲೆರಡು ದಿನ ಹೇಗೊ ಕಷ್ಟಪಟ್ಟು ತಿಂದರಾದರೂ ಆ ಮೇಲಿನ ಕಾಂತಿಹೀನ ಮುಖಗಳು ಬೇರೆಯೆ ಕಥೆ ಹೇಳತೊಡಗಿದವು. ಶ್ರೀನಾಥನಿಗೇನೊ ಇದು ದೊಡ್ಡ ಸಮಸ್ಯೆಯಲ್ಲದಿದ್ದರೂ, ಉಳಿದವರಿಗಾಗಿ ಎಲ್ಲಾದರೂ ಸರಿಯಾದ ಅಕ್ಕಿ ಸಿಗುವುದೆ ಎಂಬುದನ್ನು ಪತ್ತೆ ಮಾಡಬೇಕೆನಿಸಿತು. ಸಿಗುವುದೊ ಬಿಡುವುದೊ ನಂತರದ ವಿಷಯ - ಆಂಗ್ಲ ಭಾಷೆ ಬಲ್ಲ ಯಾರನ್ನು ಕೇಳುವುದು ಅನ್ನುವುದೆ ದೊಡ್ಡ ಸಮಸ್ಯೆ.. ದೂರದಲಿದ್ದ ಕೆಲವು ಭಾರತೀಯ ರೆಸ್ಟೊರೆಂಟಿನವರು ತರಿಸಿಕೊಡಲು ಸಿದ್ದರಿದ್ದರೂ, ಅವರ ಬೆಲೆಗಳು ಕೇಳಿದರೆ ಪ್ರಜ್ಞೆ ತಪ್ಪುವಂತಾಗುತ್ತಿತ್ತು. ಒಂದು ವಾರದ ಕೊನೆಯ ದಿನ ಸುತ್ತಾಡಿಕೊಂಡು ಬರುತ್ತಲೆ ಹತ್ತಿರದ ಜಾಗಗಳನ್ನೆಲ್ಲ ಅನ್ವೇಷಿಸುತಿದ್ದಾಗ ಅಲ್ಲಿದ್ದ ಯಾರೊ ಎರಡು ಮೂರು ಸ್ಟಾಪಿನ ನಂತರ ಸಿಕ್ಕುವ ದೊಡ್ಡ ಮಾರ್ಕೆಟ್ಟಿನಲ್ಲಿ ಸಿಗಬಹುದೆಂಬ ಸಲಹೆ ಕೊಟ್ಟರು. ಅದನ್ನೆ ಅನುಕರಿಸಿ ಹೊರಟರೆ ಅಲ್ಲಿ ಕಂಡ ಆ ದೊಡ್ಡ ಮಾರ್ಕೆಟ್ಟಿಗೆ ಶ್ರೀನಾಥನೆ ಬೆಚ್ಚಿ ಬೀಳುವಂತಾಗಿತ್ತು. ಸುಮಾರು ಎರಡು ಮೂರು ಕಿಲೊಮೀಟರು ಉದ್ದಕ್ಕು ಹರಡಿಕೊಂಡಿದ್ದ ಅಲ್ಲಿ ಏನು ಸಿಗುವುದು, ಏನು ಸಿಗದು ಎಂದು ಕಂಡು ಹಿಡಿಯಲೆ ಎರಡು ಮೂರು ದಿನ ಬೇಕಾಗುತ್ತಿತ್ತೊ ಏನೊ? ಅಂದು ಅಕ್ಕಿಯ ಅಂಗಡಿಗಳತ್ತ ಮಾತ್ರ ಹೋಗಿ ನೋಡಿದರೆ, ಸಾಲು ಸಾಲಾಗಿ ಎಲ್ಲ ತರಹದ ಅಕ್ಕಿ ಮಾರುವ ಅಂಗಡಿಗಳು. ಕೆಲವೆಡೆ ನೋಡಿದರೆ 'ಸುವಾಸನಾರಹಿತ' ಅಕ್ಕಿಯೂ ಇದೆ - ಅದೂ ಅರ್ಧಕ್ಕರ್ಧ ಬೆಲೆಯಲ್ಲಿ ! 'ಥಾಯ್ ವೈಟ್ ರೈಸ್' ಎಂದು ಅದರ ಮೇಲಿದ್ದ ಹೆಸರನ್ನು ಗಮನಿಸಿ ಅಲ್ಲಿಂದಲೆ ಉಳಿದವರಿಗೆ ಪೋನ್ ಮಾಡಿದ್ದ. ಅಕ್ಕಿಯ ಹೆಸರು ಕೇಳುತ್ತಲೆ ಎದ್ದುಬಿದ್ದು ಓಡಿ ಬಂದವರಿಗೆ ಆ ಅಕ್ಕಿಯನ್ನು ಕಂಡು ಸ್ವರ್ಗವೇ ಕೈಗೆ ಸಿಕ್ಕವರಂತೆ ಕುಣಿದಾಡಿದ್ದರು - ಸದ್ಯ ರುಚಿಗೆ ಸ್ವಲ್ಪವಾದರೂ ಹತ್ತಿರವಿರುವ ಅಕ್ಕಿ ಸಿಕ್ಕಿತಲ್ಲ ಎಂದು. ಅಲ್ಲಿಂದಾಚೆಗೆ ಅಲ್ಲಿಗೆ ಯಾರೆ ಹೋದರೂ ಹೊರಲು ಸಾಧ್ಯವಿದ್ದಷ್ಟು ಅಕ್ಕಿ ತಂದು ಎಲ್ಲರೂ ಹಂಚಿಕೊಳ್ಳುವ ಪರಿಪಾಠ ಆರಂಭವಾಯ್ತು. ಅದೆ ಅಭ್ಯಾಸ, ಹೆಪ್ಪು ಹಾಕಲು ಬಳಸುವ ಮೊಸರಿಗೂ ವಿಸ್ತಾರಗೊಂಡಿತ್ತು - ಅಲ್ಲಿ ಸಿಕ್ಕುವ ಸಿಹಿ ಯೋಗರ್ಟಿನಲ್ಲಿ ಮೊಸರು ಹೆಪ್ಪು ಹಾಕಲು ಸಾಧ್ಯವಾಗದೆ. 

ಇಷ್ಟಾದರೂ ಸೂಪರ ಮಾರ್ಕೆಟ್ಟಿನಲ್ಲಿ ಸಿಗುವ ಕೆಲವು ತರದ ಬೇಕರಿ ಹಿಟ್ಟು ಬಿಟ್ಟರೆ ಚಪಾತಿ, ಪೂರಿ, ನಾನ್ ಇತ್ಯಾದಿಗಳ ಮೂಲ ಸರಕಾದ ಗೋಧಿ ಹಿಟ್ಟಾಗಲಿ, ಆಟ್ಟಾ ಆಗಲಿ ಲಭ್ಯವಿರಲಿಲ್ಲ. ಒಂದಿಬ್ಬರಿಗೆ ಇದು ದೊಡ್ಡ ತೊಡಕೆ ಆಗಿತ್ತು ಬರಿಯ ಅನ್ನ ತಿನ್ನುವ ಅಭ್ಯಾಸವಿಲ್ಲದ ಕಾರಣ. ಅದಿನ್ನು ಥಾಯ್ಲ್ಯಾಂಡಿನಲ್ಲಿ ಸಿಗುವ ಸಾಧ್ಯತೆ ಇಲ್ಲವೆನಿಸಿದಾಗ ತಟ್ಟನೊಂದು ಆಲೋಚನೆ ಹೊಳೆದಿತ್ತು ಅವರಲೊಬ್ಬನಿಗೆ. ಹೇಗೂ ಊರಿಂದ ಬರುತ್ತಿರುವ ಸಂಸಾರದ ಸರಕಿನ ಜತೆ ಎಷ್ಟು ಸಾಧ್ಯವೊ ಅಷ್ಟು ಆಟ್ಟ ಮತ್ತಿತರ ಅವಶ್ಯಕ ಸಾಮಾಗ್ರಿ ತಂದುಬಿಡುವುದು. ಕಂಪನಿಯಿಂದ ಸಿಕ್ಕಿದ್ದ ಪರವಾನಗಿ ಬಳಸಿ ಪ್ರತಿಯೊಬ್ಬರು ಒಂದೊಂದು ಬಾರಿ ತಮಗೆ ಬೇಕಾದ ಲಗೇಜ್ ತರಲು ಅನುಮತಿಯಿತ್ತು. ಅದನ್ನೆ ಬಳಸಿಕೊಳ್ಳ್ವುದರ ಜತೆಗೆ, ಯಾರಾದರೂ ಭಾರತದಿಂದ ಪ್ರವಾಸ ಬರುತ್ತಿದ್ದಾರೆಂದು ಅರಿವಾಗುತ್ತಿದ್ದ ಹಾಗೆಯೆ ಪ್ರತಿಯೊಬ್ಬರಿಗೂ ಒಂದೈದೈದು ಕೇಜಿ ಪ್ಯಾಕೆಟ್ ಹಿಡಿದು ಬರಲು ಕೇಳುವುದು ಸಾಮಾನ್ಯವಾಗಿಬಿಟ್ಟಿತು - ತರಿಸುತ್ತಿರುವುದು ತಮಗಲ್ಲವಾದರೂ ! ಈ ಸಹಕಾರಿ ಮನೋಭಾವ ಯಾವ ಮಟ್ಟಕ್ಕೋಯಿತೆಂದರೆ ಅಲ್ಲಿರುವ ಎರಡು ವರ್ಷಗಳು ಯಾರೂ ಯಾವತ್ತು ಆಟ್ಟಾದ ಕೊರತೆಯಿದೆ ಎಂದು ಹೇಳಲೆ ಇಲ್ಲ. ಶ್ರೀನಾಥನಿಗೆ ಖುಷಿಯಾಗಿದ್ದು ಅಕ್ಕಿ-ಆಟ್ಟಾ ಸಹಕಾರಕ್ಕಿಂತ , ಅದರ ಪ್ರೇರೇಪಣೆಯಿಂದಾಗಿ ಯಾವುದೆ ಹೊರ ಪ್ರಯತ್ನವಿಲ್ಲದೆ ಇಡೀ ಗುಂಪು ಒಂದು ವ್ಯವಸ್ಥಿತ ತಂಡವಾಗಿ ಕೆಲಸ ಮಾಡಲಾರಂಭಿಸಿದ್ದು. ಯಾರೂ ಹೇಳದೆಲೆ ತಮ್ಮ ತಮ್ಮಲೆ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಪರಸ್ಪರರಿಗೆ ಸಹಕರಿಸುತ್ತ ತೊಂದರೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಿದ್ದರೆ ಅದನ್ನು ನೋಡಿದ ಶ್ರೀನಾಥನಿಗೆ ಮಾತ್ರವಲ್ಲದೆ ಸ್ಥಳೀಯ ಸಹೋದ್ಯೋಗಿಗಳಿಗೂ ಅಚ್ಚರಿಯಾಗುವಂತಿತ್ತು. ಇವರ ಕೆಲಸದ ರೀತಿಯನ್ನು ಗಮನಿಸಿ ಭಾರತದಲ್ಲಿ ಎಲ್ಲರೂ ಹೀಗೆ ಟೀಮಿನಂತೆಯೆ ಕೆಲದ ಮಾಡುತ್ತಾರೆಯೆ ಎಂದು ಕೇಳಿದ್ದಾಗ , ಹೌದೆನ್ನಬೇಕೊ, ಇಲ್ಲವೆನ್ನಬೇಕೊ ಅರಿವಾಗದೆ ಹೆಸರಾಂತ ಭಾರತೀಯ ಶೈಲಿಯಲ್ಲಿ ಎರಡೂ ಅಲ್ಲದ ರೀತಿಯಲ್ಲಿ ಉದ್ದುದ್ದ ಮತ್ತು ಅಡ್ಡಡ್ಡವಾಗಿ ತಲೆ ಕುಣಿಸುತ್ತ ಹಲ್ಲು ಕಿರಿದಿದ್ದ. ಇದೆಲ್ಲದರ ಪ್ರಭಾವ ಸ್ಥಳೀಯರಿಗು ಹಬ್ಬಿ , ಅವರಲ್ಲೇನೆ ಒಳ ತೊಡಕುಗಳಿದ್ದರೂ ಪ್ರಾಜೆಕ್ಟ್ಟಿನ ವಿಷಯದಲ್ಲಿ ಮಾತ್ರ ಇವರನ್ನು ಸರಿಗಟ್ಟಲು ಯತ್ನಿಸುತಿದ್ದುದರಿಂದ ಎಲ್ಲ ಇನ್ನು ಹೆಚ್ಚು ಸುಗಮ ರೀತಿಯಲ್ಲಿ ಮುನ್ನಡೆಯುತ್ತ ನಿರೀಕ್ಷೆಗಿಂತಲು ಹೆಚ್ಚಿನ ಪ್ರಗತಿ ತೋರಿಸಲು ಸಹಾಯಕವಾಗಿತ್ತು . ಇದನ್ನರಿತ ಚಾಣಕ್ಷ್ಯ ಪ್ರಾಜೆಕ್ಟ್ ಮ್ಯಾನೇಜರ ಶ್ರೀನಾಥ ತಮ್ಮವರ ನಡುವೆ ಯಾವುದೆ ಭಿನ್ನಾಭಿಪ್ರಾಯ, ಭೇಧ ಬರದಂತೆ ಆಗ್ಗಾಗ್ಗೆ ಅವರನ್ನೆಲ್ಲ ಸಂಧರ್ಭಾನುಸಾರ ಹಬ್ಬ ಹರಿದಿನಗಳಲ್ಲಿ ಒಂದೂಗೂಡಿಸುತ್ತ ಲಂಚು ಡಿನ್ನರು ನೆಪದಲ್ಲಿ ಒಂದೆಡೆ ಸೇರುವಂತೆ ಮಾಡುತ್ತಿದ್ದ, ಅವರ ಸಂಸಾರದ ಜತೆಯಲ್ಲಿ. ಹಬ್ಬ ಹರಿದಿನಗಳಂದು ಸರತಿಯಲ್ಲಿ ಯಾರಾದರೊಬ್ಬರ ಮನೆಯಲ್ಲಿ ಸೇರಿವುದು ಸಹ ಖಾಯಂ ಪದ್ದತಿಯಾಗಿ ಹೋಗಿತ್ತು. ಶ್ರೀನಾಥನ ಸರದಿ ಬಂದಾಗ ಅವರೆಲ್ಲ ಒಟ್ಟಾಗಿ ಬಂದು ಅವನ ಮನೆಯಲ್ಲಿ ತಾವೆ ಅಡಿಗೆ ಮಾಡಿದ್ದರು - ಅವನೊಬ್ಬನೆ ಇರುವುದು ಗೊತ್ತಿದ್ದ ಕಾರಣ. 

ಈ ಹುಡುಕಾಟ ತಡಕಾಟಗಳಲ್ಲೆ ಅವರೆಲ್ಲರು ಬಹುತೇಕ ಮೊದಲ ಬಾರಿಗೆ ಎಡತಾಕಿದ್ದು ಬ್ಯಾಂಕಾಕಿನ 'ಹೈಪರ ಮಾಲ್' ಸಂಸ್ಕೃತಿಯನ್ನು. ದೊಡ್ಡ ದೊಡ್ಡ ನಗರಗಳಲ್ಲಿ ಮಾಲ್ ಸಂಸ್ಕೃತಿ ಹಾಸುಹೊಕ್ಕಾಗಿರುವುದು ಸಾಮಾನ್ಯ ಸಂಗತಿಯಾದರೂ, ಭಾರತದಲ್ಲಿನ್ನು ಅದನ್ನು ಪ್ರತ್ಯಕ್ಷವಾಗಿ ಕಂಡ ಅನುಭವವಿಲ್ಲದ ಅವರು ಮೊದಲ ಬಾರಿಗೆ ಆ ಮಟ್ಟದ ವಿಶಾಲವಾದ ಹೈಪರ ಮಾರ್ಟುಗಳನ್ನು ಕಂಡು ಬೆಕ್ಕಸ ಬೆರಗಾಗಿದ್ದರು. ಶ್ರೀನಾಥನಿಗೆ ಈಗಾಗಲೆ ಸುತ್ತಾಡಿದ ಅನುಭವದಿಂದಾಗಿ ಮಾಲ್ ಸಂಸ್ಕೃತಿ ಹೊಸದಲ್ಲವಾದರೂ ಇಲ್ಲಿನ ಗಾತ್ರ, ವೈಶಾಲ್ಯಗಳು ತುಸು ಅತಿಶಯವೆ ಎನಿಸಿತ್ತು. ಅಲ್ಲೂ ಸೆಂಟ್ರಲ್, ರಾಬಿನ್ಸನ್ ತರದ ಸಾಕಷ್ಟು ಬ್ರಾಂಡೆಡ್ ಮಳಿಗೆಗಳ ನಡುವೆ ಇವರೆಲ್ಲರಿಗೂ ಪ್ರಥಮ ನೋಟದಲ್ಲೆ ಮೆಚ್ಚಿಗೆಯಾದದ್ದು ' ಟೆಸ್ಕೊ ಲೋಟಸ್..'. ಬ್ಯಾಂಕಾಕಿನಾದ್ಯಂತ ಸುಮಾರು ಶಾಖೆಗಳನ್ನು ಹೊಂದಿದ್ದ ಈ ಹೈಪರ ಮಾರ್ಟ್, ಆಫೀಸಿನ ಹತ್ತಿರದಲ್ಲಿರದಿದ್ದರೂ ಟ್ಯಾಕ್ಸಿಯಲ್ಲಿ ಕನಿಷ್ಠ ಮೀಟರಿನ ಬಾಡಿಗೆಯಲ್ಲಿ ತಲುಪಬಹುದಾಗಿತ್ತು. ಟ್ಯಾಕ್ಸಿಯಲ್ಲಿ ಸಹ 'ಟೆಸ್ಕೊ ಲೋಟಾಸ್..ರಾಮಾ ಫೋರ್' ಅಂದರೆ ಸಾಕು, ಎಲ್ಲಾ ಟ್ಯಾಕ್ಸಿಯವರಿಗೂ ಗೊತ್ತಿರುವ ತಾಣವಾದ ಕಾರಣ ಭಾಷೆಯ ಯಾವ ಗೊಂದಲವೂ ಇಲ್ಲದೆ ತಲುಪುವ ಅನುಕೂಲವೂ ಇತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಶ್ರೀನಾಥನ ಗಮನ ಸೆಳೆದ ಅಂಶವೆಂದರೆ ಆ ಮಳಿಗೆಯ ಮಾರಾಟ ವಹಿವಾಟಿನ ಸಮಯ - ಬೆಳಿಗ್ಗೆ ಆರು ಗಂಟೆಗೆ ಆರಂಭವಾದರೂ, ಮತ್ತೆ ನಡು ರಾತ್ರಿ ಕಳೆದು ಬೆಳಗಿನ ಜಾವ ಎರಡು ಗಂಟೆಯವರೆಗೂ ಬಾಗಿಲು ತೆರೆದಿರುತ್ತಿತ್ತು! ಒಂಭತ್ತು, ಹತ್ತು ಗಂಟೆಗಳಿಗೆಲ್ಲ ಅಂಗಡಿ ಮುಚ್ಚುವುದನ್ನು ಕಂಡ ಅಭ್ಯಾಸವಿದ್ದ ಇವರಿಗೆಲ್ಲ ಮಧ್ಯರಾತ್ರಿಯನ್ನು ಮೀರಿಯೂ ವ್ಯಾಪಾರ ಮಾಡುವುದೆ ಒಂದು ರೀತಿಯ ಸೋಜಿಗವೆನಿಸಿತ್ತು. ಜತೆಗೆ ಆ ಹೊತ್ತಿನಲ್ಲಿ ಹೋಗಿ ವ್ಯಾಪಾರ ಮಾಡುವವರಾದರೂ ಯಾರಪ್ಪಾ? ಏನ್ನುವ ಅಚ್ಚರಿ ಸಹ. ಆದರೆ ದಿನಗಳೆದಂತೆ ಬ್ಯಾಂಕಾಕಿನ ಅರ್ಧಕರ್ಧ ವಾಣಿಜ್ಯವೆ ರಾತ್ರಿಯ ವ್ಯವಹಾರದ ಸಂಕಲಿತ ಮೊತ್ತವೆಂದರಿವಾದಾಗ ಅದು ಸಾಮಾನ್ಯವೆನಿಸಿಬಿಟ್ಟಿತ್ತು. ಜತೆಗೆ ಮತ್ತೊಂದು ಆಯಾಚಿತ ಅನುಕೂಲವೂ ಬಂದು ಸೇರಿದಂತಾಗಿತ್ತು - ರಾತ್ರಿಯ ಹೊತ್ತಿನಲ್ಲಿ ಹಗಲಿನ ಹಾಗೆ ಜನ ಸಂದಣಿ ಇರುತ್ತಿರಲಿಲ್ಲವಾಗಿ ಶಾಪಿಂಗ್ ಟ್ರಾಲಿಯೊಂದನ್ನು ಹಿಡಿದು ಯಾವುದೆ ಅಡ್ಡಿ ಆತಂಕಗಳಿಲ್ಲದೆ ಮಹಾರಾಜರ ಹಾಗೆ ಒಳಗೆಲ್ಲ ಅಡ್ಡಾಡಬಹುದಿತ್ತು; ಸಾಲದೆಂಬಂತೆ ವಾರದ ಕೊನೆಯ ಬಿಡುವಿಗೆಂದೆ ಕಾಯದೆ ಯಾವ ವಾರದ ದಿನವಾದರೂ ಸರಿ ಆಫೀಸು ಮುಗಿದ ನಂತರ ಆರಾಮವಾಗಿ ಊಟ ಮುಗಿಸಿಕೊಂಡೆ ಹೊರಟು ಬಿಡಬಹುದಾಗಿತ್ತು. ಉಳಿದವರಿಗಿಂತ ಹೆಚ್ಚಾಗಿ ಈ ಅನುಕೂಲವನ್ನು ಅತಿಯಾಗಿ ಮೆಚ್ಚಿ ಬಳಸಿಕೊಂಡವನು ಶ್ರೀನಾಥನೆ ಎಂದು ಹೇಳಬೇಕು. ಒಬ್ಬನೆ ಇದ್ದ ಕಾರಣ ಮಾಡಲೇನಿಲ್ಲದ ಹೊತ್ತಲ್ಲಿ ಯಾವಾಗೆಂದರೆ ಆವಾಗ ಹೋಗಿ ಬರಲು ಇದು ಸರಾಗವಾಗಿತ್ತು. ಸಾಲದ್ದಕ್ಕೆ 'ರೆಡಿ ಟು ಈಟ್' ತರಹದ ಮೈಕ್ರೊವೇವಿಗಿಟ್ಟೊ, ಬಿಸಿ ನೀರಿಗೆ ಬೆರೆಸಿಯೊ ತಿನ್ನಬಹುದಾದ ಹಲವಾರು ತಿನಿಸಿನ ಪ್ಯಾಕೆಟ್ಟುಗಳು, ಬ್ರೆಡ್ಡು, ಕೇಕು, ಬಿಸ್ಕತ್ತು, ಕುಕ್ಕಿ, ಚಾಕೋಲೇಟು ತರಹದ ಸಿದ್ದ ತಿನಿಸುಗಳು ಹೇರಳವಾಗಿ ಸಿಗುತ್ತಿದ್ದ ಕಾರಣ ಅವನ ಬ್ರಹ್ಮಚಾರಿ ಬದುಕಿಗೆ ತೂಕಡಿಸುವವನಿಗೆ ಹಾಸಿ ಕೊಟ್ಟ ಹಾಸಿಗೆಯಂತೆ ಆಗಿಬಿಟ್ಟಿತ್ತು ಆ 'ಟೆಸ್ಕೊ ಲೋಟಸ್' ಹೈಪರ ಮಾರ್ಟ್.

ಈ ವ್ಯವಹಾರದ ತಾಣ ಶ್ರೀನಾಥನಿಗೆ ಮೆಚ್ಚಿಗೆಯಾಗಲಿಕ್ಕೆ ಇವೆಲ್ಲಕ್ಕು ಬಲವಾದ ಮತ್ತೊಂದೆರಡು ಕಾರಣಗಳಿದ್ದವು. ಮೊದಲನೆಯದಾಗಿ ಅಲ್ಲಿನ ಬೆಲೆಗಳು - ಅವು ಸ್ಥಳೀಯರಿಗಾಗಿ ಇದ್ದ ವ್ಯವಹಾರ ತಾಣಗಳಾದ ಕಾರಣ ಮಾಮೂಲಿ ಪ್ರವಾಸಿಗಳು ಭೇಟಿ ಕೊಡುತಿದ್ದ ಜಾಗೆಗಳಿಗೂ ಇಲ್ಲಿನ ಬೆಲೆಗು ಭಾರಿ ವ್ಯತ್ಯಾಸವಿರುತ್ತಿತ್ತು. ಜತೆಗೆ ತೀರಾ ದುಬಾರಿಯಲ್ಲದ ಬ್ರಾಂಡುಗಳಿಂದ ಹಿಡಿದು ಅಗ್ಗದ ದರದಲ್ಲಿ ಮಾರುವ ಕಳಪೆಯಲ್ಲದ ಸರಕುಗಳೆಲ್ಲ ಒಂದೆ ಚಪ್ಪರದಡಿ ದೊರಕುತಿದ್ದವಾಗಿ ಒಂದು ಶಾಪಿಂಗ್ ಟ್ರಾಲಿ ಹಿಡಿದು ಹೊರಟರೆ ಬೇಕಾದ್ದೆಲ್ಲ ಒಂದೆ ಸುತ್ತಿನಲ್ಲಿ ಖರೀದಿಸಿಬಿಡಬಹುದಿತ್ತು. ಪ್ರತಿ ಬಾರಿಯೂ ಯಾವುದಾದರೂ ಪ್ರಮೋಶನ್ನಿನ ನೆಪದಲ್ಲಿ ಕೆಲವು ವಸ್ತುಗಳು ತೀರಾ ಅಗ್ಗದಲ್ಲಿ ಸಿಕ್ಕಿಬಿಡುತ್ತಿದ್ದುದು ಉಂಟು. ಶ್ರೀನಾಥನಿಗಷ್ಟು ಅಗತ್ಯವಿರದಿದ್ದರೂ ಅಡುಗೆ ಮನೆಯ ತರಕಾರಿ, ಖಾದ್ಯಗಳಿಗೂ ಅಲ್ಲೆ ಒಂದು ವಿಭಾಗವಿದ್ದೂ ಕೆಲವೊಮ್ಮೆ ಅಲ್ಲಿಂದಲೆ ಹಣ್ಣು ಹಂಪಲ ಕೊಳ್ಳುವ ಸಾಧ್ಯತೆಯೂ ಇತ್ತು. ತುಸು ನಿಶಾಚಾರ ಸ್ವಭಾವದ ಶ್ರೀನಾಥನಿಗೆ ಈ ಹೊತ್ತಲ್ಲದ ಹೊತ್ತಿನ ಶಾಪಿಂಗೆ ಆಕರ್ಷಣೆಯೆನಿಸಿ ವಾರಕ್ಕೆರಡು ಮೂರು ಬಾರಿ ಅಲ್ಲಿಗೆ ಹೋಗುವುದು, ಸುಮ್ಮನೆ ವಿಂಡೋ ಶಾಪಿಂಗ್ ಮಾಡಿಕೊಂಡು ಬರುವುದು ಸಾಮಾನ್ಯವಾಗಿ ಹೋಗಿತ್ತು. ಅಲ್ಲೆ ಮೇಲ್ಮಹಡಿಯ ಕೊನೆಯ ಹಂತದಲ್ಲಿ ತಿನ್ನುವ ಅಂಗಡಿಗಳ ಸಾಲು ಮಳಿಗೆಯೆ ಅಲ್ಲದೆ, ಮಾಮೂಲಿ ಇತರೆ ರೆಸ್ಟೋರೆಂಟುಗಳು ಇದ್ದ ಕಾರಣ ಕೆಲವೊಮ್ಮೆ ಊಟ ತಿಂಡಿಯೂ ಅಲ್ಲೆ ಆಗಿಬಿಡುತ್ತಿತ್ತು. ತೀರಾ ಲಗೇಜು ಇದ್ದ ದಿನ ಟ್ಯಾಕ್ಸಿ ಹಿಡಿದು ಬಂದರೆ, ಇಲ್ಲದ ದಿನ ಚಿಲ್ಲರೆ ಕಾಸಿನಲ್ಲೆ ಬಸ್ಸು ಹಿಡಿದು ಬರುವುದನ್ನು ರೂಢಿಸಿಕೊಂಡಿದ್ದ ಶ್ರೀನಾಥನಿಗೆ ಆ ಜಾಗೆಯಿರದಿದ್ದರೆ ತಾನು ಹೇಗೆ ಸಮಯ ಕಳೆಯಲು ಸಾಧ್ಯವಾಗುತ್ತಿತ್ತೆಂದು ಅಚ್ಚರಿಯೂ ಆಗುತ್ತಿತ್ತು. ಆದರೆ ಈ ರೀತಿ ಅಲ್ಲಿ ಹೋದಾಗೆಲ್ಲ ಬೇಕಿರಲಿ, ಬಿಡಲಿ ಏನಾದರೂ ಕೊಂಡು ತರುವ ಪ್ರಲೋಭನೆಯುಂಟಾಗುತಿದ್ದ ಕಾರಣ ಕೆಲವೊಮ್ಮೆ ಬೇಡದ ವಸ್ತುಗಳನ್ನು ತಂದು ಪೇರಿಸಿಡುವಂತಾಗುತ್ತಿತ್ತು. ಆ ಅಗ್ಗದ ಬೆಲೆಗಳನ್ನು ನೋಡಿ, ಸೇಲಿನ ಡಿಸ್ಕೌಂಟ್ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದೆ ಭಾರತದಲ್ಲಾದರೂ ತೆಗೆದುಕೊಂಡು ಹೋಗಿ ಬಳಸಬಹುದೆಂಬ ನೆಪ ಹುಡುಕಿ ಸಮಾಧಾನ ಮಾಡಿಕೊಂಡು ಕೊಳ್ಳುವ ಪ್ರೇರೇಪಣೆಗಿಳಿಸುತ್ತಿತ್ತು. ಹಾಗೆ ಕೊಂಡ ಐಟಂಗಳಲ್ಲಿ ಅವನು ಬಲುವಾಗಿ ಮೆಚ್ಚಿ ಕೊಂಡುಕೊಂಡ ವಸ್ತುವೆಂದರೆ ' ಡೂ ಇಟ್ ಯುವರ್ಸೆಲ್ಫ್' ರೀತಿಯ ಮರದ ಫರ್ನೀಶರುಗಳು. ಟೀವಿಯೊ, ಮತ್ತೊಂದನ್ನೊ ಇಡುವ ಅಥವಾ ಬುಕ್ ಶೆಲ್ಪಿನ ರೀತಿಯ ಸರಕುಗಳನ್ನು, ಪೂರಾ ಬಿಡಿಭಾಗಗಳಾಗಿಸಿ ರಾಡು-ನಟ್ಟು-ಬೋಲ್ಟುಗಳ ಸಮೇತ ಒಂದು ಪುಟ್ಟ ಆಯತಾಕಾರದ ಪ್ಯಾಕೆಟ್ಟಿನಲ್ಲಿ ತುಂಬಿಸಿಟ್ಟ ರೀತಿಯೆ ಅದ್ಭುತವಾಗಿ ಕಂಡಿತ್ತು - ಅದರ ಬೆಲೆಯೂ ಸೇರಿದಂತೆ. ಅದನ್ನೇನು ಅಲ್ಲಿ ಬಳಸುವ ಅಗತ್ಯ ಕಾಣದಿದ್ದರೂ ಊರಿಗೆ ಒಯ್ಯುವ ಹೆಸರಿನಲ್ಲಿ ನಾಕಾರು ಮಾದರಿಗಳನ್ನು ತಂದಿಟ್ಟುಕೊಂಡುಬಿಟ್ಟಿದ್ದ, ಆ ಕಡಿತ ಮಾರಾಟ ದರದಲ್ಲಿ..

ಅದಾವ ಪ್ರಲೋಭನೆಯೂ ಇಲ್ಲದೆ ತುಂಬಾ ಸಹಜ ರೀತಿಯಲ್ಲಿ ಮೆಚ್ಚಿಗೆಯಾಗಿದ್ದ ಮತ್ತೊಂದು ವಸ್ತುವೆಂದರೆ ಶರಟಿನೊಳಗಡೆ ಧರಿಸುವ ಬನಿಯನ್ನು..ಬಂದಿದ್ದ ಹೊಸದರಲ್ಲಿ ಭಾರತದಲ್ಲಿ ಧರಿಸುವಂತಹ ಬನಿಯನ್ನುಗಳಿಗೆ ಹುಡುಕಾಡಿದ್ದರೂ ಬರಿ ಕತ್ತಿನ ಪೂರ್ತಿ ತುಂಬುವ ಟೀ ಶರ್ಟುಗಳಷ್ಟೆ ದೊರಕುತಿದ್ದ ಕಾರಣ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ತುಂಬು ಕತ್ತು ಬೇಡವೆಂದರೆ, ಕೆಲವೆಡೆ ಸ್ಯಾಂಡೊಜ್ ರೀತಿಯವು ಸಿಕ್ಕಿದರೂ ಬರಿ ಅರ್ಧ ತೋಳಿನವನ್ನೆ ಧರಿಸಿ ಅಭ್ಯಾಸವಿದ್ದ ಶ್ರೀನಾಥನಿಗೆ ಸ್ಯಾಂಡೊಜ್ ಧರಿಸಿದರೂ ಸಮಾಧಾನವಿರುತ್ತಿರಲಿಲ್ಲ. ಅಲ್ಲದೆ ಅವು ಮಾಮೂಲಿನಂತೆ ಧರಿಸುವ ಹೊರ ಉಡುಪುಗಳೆ ಹೊರತು ಒಳ ಉಡುಗೆಗಳಲ್ಲ... ಹೀಗೊಮ್ಮೆ ಅಲ್ಲೆ ಅಡ್ಡಾಡುತ್ತ ವಸ್ತ್ರದ ವಿಭಾಗಕ್ಕೆ ಬಂದಾಗ ಭಾರತದಲ್ಲಿ ಸಿಕ್ಕುವ ರೀತಿಯದೆ ಬನಿಯನ್ ಕಣ್ಣಿಗೆ ಬಿದ್ದಿತ್ತು - ಅದರಲ್ಲು ಅರ್ಧ ತೋಳಿನದೂ ಕೂಡ. ಸದ್ಯ ಸಿಕ್ಕಿತಲ್ಲ ಎಂದುಕೊಂಡು ತಂದು ಧರಿಸಿದವನಿಗೆ ಅದೊಂದು ಅದ್ಭುತ ಅನುಭೂತಿಯಾಗಿ ಮಾರ್ಪಾಡಾಗಿ ಹೋಗಿತ್ತು. ಅದುವರೆಗು ಬೆವರದಂತಿರಲೊ, ಚಳಿಯಾಗಿಸದಿರಲೊ ಮೈ ಮೇಲೊಂದು ಹೊದಿಕೆಯೆಂಬ ದೃಷ್ಟಿಯಲಷ್ಟೆ ನೋಡಿ ಅಭ್ಯಾಸವಿದ್ದವನಿಗೆ ಇಡಿ ಮೈ ಮೇಲೆ ಹಗುರವಾದ, ಮಲ್ಲಿಗೆ ಮೆತ್ತೆಯ ಹೂವಿನ ನವಿರಾದ ಸ್ಪರ್ಷವೊಂದು ಬಂದು ಅಪ್ಪಿ ಹಿಡಿದಂತೆ ಕೂತ ಸುಂದರವಾದ ಅನುಭೂತಿ. ಕೇವಲ ಹಿತವಾದ ಉಡುಗೆಯೊಂದು ಇಷ್ಟರಮಟ್ಟಿಗಿನ ಸುಖಾನುಭೂತಿ ನೀಡಬಲ್ಲದೆಂಬ ಅನುಭವ, ಅರಿವೂ ಎರಡು ಇಲ್ಲದವನಿಗೆ ಆ ಅನುಭೂತಿ ಅದರ ಹಗುರ ಹಂದರದ್ದೊ, ಬಳಸಿದ ಹತ್ತಿ ಮತ್ತಿತರ ಮೂಲ ಸಾಮಾಗ್ರಿಯದೊ ಅಥವಾ ಅದಕ್ಕೆ ಸಿದ್ದ ಉಡುಪಾಗಿಸುವ ಮುನ್ನ ಕೊಟ್ಟಿರಬಹುದಾದ ವಿಶೇಷ ರಾಸಾಯನಿಕ ಉಪಚಾರದ್ದೊ - ಒಟ್ಟಾರೆ ಆ ಉಡುಪಿನ ಕುರಿತು ಮೊದಲ ಬಾರಿಗೆ ಗೌರವ ಪೂರ್ಣ ಆದರವನ್ನುಂಟು ಮಾಡುವಲ್ಲಿ ಸಫಲವಾಗಿತ್ತು ಆ ವಸ್ತ್ರದ ತುಂಡು. ಆದಾದ ಮೇಲೆ ಅದೇ ರೀತಿಯ ಬನಿಯನ್ನುಗಳು ಕೆಲವೆಡೆ ಕಣ್ಣಿಗೆ ಬಿದ್ದಿದ್ದರೂ ಆಕಾರವಷ್ಟೆ ಸೂಕ್ತವಾಗಿ ಹೊಂದಿಕೆಯಾಗಿತ್ತೆ ಹೊರತು, ಆ ನಯವಾದ ನವಿರು ಅನುಭವ ಅವುಗಳಲ್ಲಿರಲಿಲ್ಲ. ಅದರ ಮುಂದೆ ನುಣುಪಾದ ರೇಷ್ಮೆಯ ಅನುಭವವೂ ಕೃತಕವೆನಿಸುವಷ್ಟು ಸಹಜವಾದ ಮೃದುವಾದ ಹೂವಿನ ಎಸಳುಗಳಿಂದ ಒತ್ತಿದಂತೆ ಫೀಲಾಗಿಸುವ ಅನುಭವ ಆ ಅಗ್ಗದ ಬಟ್ಟೆಯ ತುಂಡಿಗೆ ಬಂದಿದ್ದಾದರೂ ಹೇಗೆಂದು ಅಚ್ಚರಿಗೊಳ್ಳುತ್ತಲೆ ಟೆಸ್ಕೊ ಲೋಟಸ್ಸಿನಿಂದ ನಾಲ್ಕೈದು ಜೊತೆಗಳನ್ನು ತಂದು ಸ್ಟಾಕಿಟ್ಟುಕೊಂಡುಬಿಟ್ಟಿದ್ದ..!

ಶ್ರೀನಾಥನ ಜತೆ ಬಂದವರಿಗಿದ್ದ ಆಸಕ್ತಿಯೆ ತುಸು ಬೇರೆಯದಾಗಿದ್ದು ಅವರ ಕಣ್ಣು ಮೊದಲು ಓಡುತ್ತಿದ್ದುದ್ದು ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ. ಅಲ್ಲಿರುತ್ತಿದ್ದ ಟೀವಿ, ಕ್ಯಾಮೆರ, ತರಹೆವಾರಿ ಪ್ಲೇಯರುಗಳು, ಮೊಬೈಲುಗಳೆಲ್ಲ ಇನ್ನು ಶೈಶವಾವಸ್ಥೆಯ ಹಂತವನ್ನು ಮಾತ್ರ ಕಂಡುಬಂದಿದ್ದವರಿಗೆ ಅದ್ಭುತ ಲೋಕವನ್ನೆ ತೆರೆದಿಟ್ಟಾಂತಾಗಿತ್ತು. ಅವರೆಲ್ಲ ಕನಸಿನಲ್ಲು ಕಾಣದ ಬಗೆಬಗೆಯ ವಿದ್ಯುನ್ಮಾನ ಪರಿಕರ, ಸಲಕರಣೆಗಳು ಅದೂ ತೀರಾ ಕೈಗುಟುಕುವ ದರದಲ್ಲಿ ಕಣ್ಣಿಗೆ ಬಿದ್ದಾಗ, ಕೊಳ್ಳಲಿ ಬಿಡಲಿ ಅದರ ಮುಂದೆ ಹೋಗಿ ನಿಂತು ಗಂಟೆಗಟ್ಟಲೆ ನೋಡುವುದನ್ನಂತೂ ತಪ್ಪಿಸುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ  ತೀರಾ ಆಕರ್ಷಣೆಗೆ ಬಿದ್ದವರಂತೆ ಏನಾದರೂ ಕೊಳ್ಳುತಿದ್ದುದು ಅಪರೂಪವಾಗಿರಲಿಲ್ಲ. ಈಗಾಗಲೆ ಎಲ್ಲರ ಬಳಿ ಪುಟ್ಟ ಪೋರ್ಟಬಲ್ ಸಿಡಿ ಪ್ಲೇಯರುಗಳು ಸೇರಿಕೊಂಡಿದ್ದು ಹೋದ ಬಂದೆಡೆಗೆಲ್ಲ ಕಿವಿಗೆ ಹೆಡ್ಪೋನ್ ಹಾಕಿಕೊಂಡೆ ಹಾಡು ಕೇಳುತ್ತಾ ಅಡ್ಡಾಡುವುದು ಸಾಮಾನ್ಯವಾಗಿ ಹೋಗಿತ್ತು - ಬಸ್ಸು, ಟ್ರೈನು, ರಸ್ತೆಗಳಲ್ಲಿಯೂ ಸೇರಿದಂತೆ. ಅದರಲ್ಲೂ ಅಲ್ಲಿದ್ದ ಒಂದು ವಿಶೇಷ ವಿಭಾಗದಲ್ಲಿ ಡಿಸ್ಪ್ಲೇಗೆಂದು ಇಡುತ್ತಿದ್ದ ಸರಕುಗಳನ್ನೆಲ್ಲ ಅದರ ನಿಗದಿತ ಅವಧಿಯ ಆಯಸ್ಸು ಮುಗಿಯುತ್ತಿದ್ದಂತೆ ಚೆನ್ನಾಗಿ ಕೆಲಸ ಮಾಡುವ ಕಂಡೀಶನ್ನಿನಲ್ಲೆ ಅರ್ಧಕ್ಕರ್ಧ ಬೆಲೆಗೆ ಮಾರಾಟಕ್ಕಿಡುತ್ತಿದ್ದರು. ಕೆಲವರ ಕಣ್ಣು ಸದಾ ಅದೇ ಗುಂಪಿನತ್ತ - ಯಾವುದಾದರೂ ತಮಗೆ ಬೇಕಾದ ವಸ್ತು ಆ ಗುಂಪಿಗೆ ಹೊಸದಾಗಿ ಸೇರಿದೆಯೆ ಎಂದು ಗಮನಿಸಲು; ಬೇರೆಯವರ ಕಣ್ಣಿಗೆ ಬಿದ್ದು ಮಾಯವಾಗಿಬಿಡುವ ಮೊದಲೆ ಅಗ್ಗದಲ್ಲೆ ಖರೀದಿಸಿಬಿಡುವ ಹವಣಿಕೆ. ಆದರೆ ಬಹುತೇಕ ಬಾರಿ ಅಲ್ಲಿಗೆ ಬರುವ ಮೊದಲೆ ಅಲ್ಲಿನ ಸ್ಟ್ಯಾಫಿನ ಮುಖಾಂತರ ಇನ್ನಾರಿಗೊ ಬಿಕರಿಯಾಗಿ ಬಿಡುತಿದ್ದುದು ಉಂಟು. ಸಾಮಾನ್ಯವಾಗಿ, ಇವರು ಕಂಡ ಡಿಸ್ಪ್ಲೇ ಸರಕು ಇದ್ದಕ್ಕಿದ್ದಂತೆ ಮಾಯವಾದಾಗ, ಅಗ್ಗದ ಸರಕಿನ ಗುಂಪಿಗೆ ಸೇರಿಸಿರಬೇಕೆಂದು ಅಲ್ಲಿಗೆ ಓಡಿದರೆ ಅಲ್ಲೂ ಆ ವಸ್ತು ಕಾಣದೆ ನಿರಾಶೆಯಾಗುತ್ತಿದ್ದುದೆ ಹೆಚ್ಚು. ಆದರೆ ಇವರೆಲ್ಲರಿಗೂ ಮುದ ನೀಡುವಂತೆ ಕೆಲವು ಸಂಧರ್ಭಗಳಲ್ಲಿ, ಅದರಲ್ಲೂ ವರ್ಷದ ಕೊನೆಯ ತೀರುವಳಿ ಮಾರಾಟಗಳಲ್ಲಿ ಹೊಸತಾದ ಬಳಸದ ಸರಕಿಗೂ ದೊಡ್ಡ ದೊಡ್ಡ ಮೊತ್ತದ ಕಡಿತವನ್ನು ಪ್ರಕಟಿಸಿ ಮಾರಲಿಡುತ್ತಿದ್ದರು - ಎಲ್ಲಾ ಸರಕಿನ ಮೇಲೆ. ಆಗಂತೂ ಕೊಳ್ಳುವವರ ಸುಗ್ಗಿಯೊ ಸುಗ್ಗಿ...ಇವರುಗಳೂ ಮೇಲಿಂದ ಮೇಲೆ ನುಗ್ಗಿ, ಕೊಂಡಿದ್ದೆ ಕೊಂಡಿದ್ದು. 

ಈ ಕೊಳ್ಳುವಿಕೆಯ ಹಿನ್ನಲೆಯಲಿರುವ ಕಡಿತ ಮಾರಾಟದ ಸೂಕ್ಷ್ಮ ಮರ್ಮ ಅವರಿಗೆ ಅಷ್ಟು ಗೊತ್ತಾಗುತ್ತಿರಲಿಲ್ಲವಾದರೂ, ಕಂಪನಿಯ ಮಾರಾಟ ಮತ್ತು ಮಾರ್ಕೆಟಿಂಗ್ ವ್ಯವಹಾರಗಳಲ್ಲಿ ತುಸು ಕಣ್ಣಾಡಿಸಿ ಅನುಭವವಿದ್ದ ಶ್ರೀನಾಥನಿಗೆ ಚೆನಾಗಿ ಗೊತ್ತಿತ್ತು. ಕಂಪೆನಿಗಳಲ್ಲಿ ಅದರಲ್ಲೂ ಈ ಎಲೆಕ್ಟ್ರಾನಿಕ್ಸ್ ವಹಿವಾಟಿನಲ್ಲಿ ನಿರತವಾದವುಗಳಲ್ಲಿ ಒಂದು ಸಾಧಾರಣ ಅಭ್ಯಾಸವೆಂದರೆ ವರ್ಷಕೊಮ್ಮೆ ಪ್ರಸ್ತುತವಿರುವ ಮಾಡೆಲ್ಲಿನ ಜಾಗದಲ್ಲಿ ಹೊಸ ಮಾಡೆಲ್ ಬಿಡುಗಡೆ ಮಾಡುವುದು. ಸಾಧಾರಣ ಈ ಹೊಸದಕ್ಕು ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಮಾದರಿಗೂ ತೀರಾ ವ್ಯತ್ಯಾಸವಿರದಿದ್ದರೂ, ಕೆಲವು ಗೊತ್ತಾದ ನ್ಯೂನ್ಯತೆಗಳನ್ನು ಸರಿಪಡಿಸಿದ್ದಷ್ಟೆ ಅಲ್ಲದೆ, ಕೆಲವು ಹೊಸ ಸಾಧ್ಯತೆಗಳನ್ನು ಸೇರಿಸಿರುತ್ತಾರೆ. ಇನ್ನು ಕೆಲವೊಮ್ಮೆ ಈಗಿರುವ ಶಕ್ತಿ ಸಾಮರ್ಥ್ಯಗಳನ್ನು ವರ್ಧಿಸಿ ಹೆಚ್ಚು ಶಕ್ತಿಯುತವನ್ನಾಗಿಸಿರುತ್ತಾರೆ. ಚಹರೆ, ಗುಣಲಕ್ಷಣಗಳಲ್ಲಿ, ಹೆಚ್ಚುವರಿಯಾಗಿಸಿದ ಹೊಸ ವೈಶಿಷ್ಠ್ಯಗಳಲ್ಲಿ ವಿಶೇಷ ನಮೂನೆ ಸಿದ್ದಪಡಿಸಿ ಅದಕೊಂದು ಹೊಸ ಹೆಸರು ಕೊಟ್ಟು ಮಾರುಕಟ್ಟೆಗೆ ಹೊಸ ಮಾದರಿಯೆಂಬಂತೆ ಬಿಡುಗಡೆ ಮಾಡುತ್ತಾರೆ. ಕಾರ್ಯ ಕ್ಷಮತೆ ಮತ್ತು ಉದ್ದೇಶ ಸಾಧನೆಯ ದೃಷ್ಟಿಯಿಂದ ಚಾಲನೆಯಲ್ಲಿರುವ ನಮೂನೆಗಿಂತ ತೀರಾ ವ್ಯತ್ಯಾಸ ಇರದಿದ್ದರೂ ಸ್ಪರ್ಧೆಯ ದೃಷ್ಟಿಯಿಂದ ಮತ್ತು ಮಾರಾಟದ ವಹಿವಾಟಿನ ಅಗತ್ಯದ ಅನಿವಾರ್ಯತೆಯಿಂದ ಹೀಗೇನಾದರೂ ಸರ್ಕಸ್ ಮಾಡದಿದ್ದರೆ ಉಳಿಗಾಲವಿರುವುದಿಲ್ಲ. ಕೆಲವೊಮ್ಮೆಯಂತೂ ತಾಂತ್ರಿಕತೆಯೆ ಎಷ್ಟರ ಮಟ್ಟಿಗೆ ಬದಲಾಗಿ ಹೋಗುತ್ತಿರುತ್ತದೆಯೆಂದರೆ, ತಮ್ಮ ಮಾರಾಟದ ಸರಕಿನ ವಿನ್ಯಾಸ ಬದಲಿಸದೆ ಇರಲು ಸಾಧ್ಯವೆ ಇರುವುದಿಲ್ಲ. ಆದರೆ ಅಲ್ಲಿ ಸರಕಿನ ಜೀವನಚಕ್ರದ ಅನಿವಾರ್ಯತೆ ಪ್ರೇರಕ ಶಕ್ತಿಯಾಗಿ ಬದಲಾವಣೆಯನ್ನು ಪ್ರಕ್ಷೇಪಿಸುತ್ತದೆ. ಅದಿಲ್ಲದ ಮಾಮೂಲಿ ವಾರ್ಷಿಕ ಬದಲಾವಣೆಯೆಂದರೆ ಅರ್ಥ - ಹೊಸ ನಮೂನೆ ಬಂದಾಗ ಹಳೆಯದು ಮಾರುಕಟ್ಟೆಯಲ್ಲಿರಬಾರದು; ಗ್ರಾಹಕರಿಗೆ ಹೋಲಿಕೆಯಲ್ಲಿ ಎರಡು ಒಂದೆ ರೀತಿಯಲ್ಲಿದೆಯೆಂಬ ಅನುಮಾನವೂ ಬರಬಾರದು, ಮತ್ತು ಬೆಲೆಗಳನ್ನು ಹೋಲಿಸಿ ನೋಡಿ 'ಅರೆ! ಎರಡು ಒಂದೆ ರೀತಿಯದಾದರೂ ಇಷ್ಟು ವ್ಯತ್ಯಾಸವೆ? ತುಸು ಕಡಿಮೆ ವೈಶಿಷ್ಠ್ಯಗಳಿರುವಂತೆ ಕಂಡರೂ ಕಡಿಮೆ ಬೆಲೆಯದೆ ಸೂಕ್ತ' ಎಂದು ನಿರ್ಧಾರಕ್ಕೆ ಬರಬಾರದಲ್ಲ?  ಅದಕ್ಕೆ ಮೊದಲ ಹೆಜ್ಜೆಯಾಗಿ ಮಾರುಕಟ್ಟೆಯಲ್ಲಿರುವ ಹಳೆಯ ಸರಕೆಲ್ಲ ಖಾಲಿ ಮಾಡಲು ಕಡಿತದ ಬೆಲೆ ಘೋಷಿಸಿರುತ್ತಾರೆ, ವರ್ಷದ ಕೊನೆಯೊ ಅಥವಾ ಇನ್ನಾವುದೊ ಹಬ್ಬ ಹರಿದಿನದ ನೆಪದಲ್ಲಿ. ಖಾಲಿಯಾಗದೆ ಉಳಿದಿದ್ದನ್ನು ಹಿಂತೆಗೆದುಕೊಂಡು ಬರಿ ಹೊಸತಿನ ನಮೂನೆ ಮಾತ್ರ ಮಾರುಕಟ್ಟೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಅದೇನೆ ಇದ್ದರೂ ತೀರಾ ಹೊಸತಿನ ವೈಶಿಷ್ಠ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಗ್ರಾಹಕರಿಗೆ ಕಡಿತದ ಬೆಲೆಯಲ್ಲೆ ಮಾಲು ದೊರಕಿದ ಖುಷಿ. ಮಾರಾಟಗಾರನಿಗೆ ಹೊಸತರ ಅವತರಣಿಕೆಗೆ ಸರಾಗವಾದ ವಾತಾವರಣ....!

(ಇನ್ನೂ ಇದೆ)
 

Comments

Submitted by kavinagaraj Sat, 03/29/2014 - 08:33

ಥಾಯ್ ಮಾರುಕಟ್ಟೆಯನ್ನೇ ಪ್ರತ್ಯಕ್ಷ ತೋರಿಸಿಬಿಟ್ಟಿರಿ. ಧನ್ಯವಾದಗಳು, ನಾಗೇಶರೇ.

Submitted by nageshamysore Sat, 03/29/2014 - 15:42

In reply to by partha1059

ಪಾರ್ಥಾ ಸಾರ್, ಮುಂದಿನ ಕಂತೂ ಈಗಾಗಲೆ ಬಿಡುಗಡೆಯಾಗಿದೆ ನೋಡಿ. ನಮ್ಮ ಯುಗಾದಿ ಹೊಸವರ್ಷದ ಜತೆಗೆ ಕೆಲವು ಥಾಯ್ ಹಬ್ಬಗಳ ಮಾಹಿತಿ ಸೇರಿಕೊಂಡಿದೆ - ಇದೆ ಏಪ್ರಿಲ್ಲಿನ ಆಸುಪಾಸಿನಲ್ಲಿ ಬರುವ ಥಾಯ್ ಹೊಸವರ್ಷವೂ ಸೇರಿದಂತೆ :-)

Submitted by nageshamysore Sat, 03/29/2014 - 15:36

In reply to by kavinagaraj

ಕವಿಗಳೆ ನಮಸ್ಕಾರ. ಈ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೊ ಪರಿಣಾಮ ಬೀರುವ ಮಾರುಕಟ್ಟೆಯ ಸಂಸ್ಕೃತಿ ಬೇಡವೆಂದರೂ ತೂರಿಕೊಂಡುಬಿಡುತ್ತದೆ. ಈಗ ಅದನ್ನು ನೋಡಲು ಹೊರದೇಶಕ್ಕೆ ಹೋಗಬೇಕಿಲ್ಲ. ನಮ್ಮಲ್ಲೆ ಕಾಣುತ್ತದೆ ಪ್ರಗತಿಯ ಹೆಸರಿನಲ್ಲಿ :-)

Submitted by ಗಣೇಶ Sun, 10/05/2014 - 23:54

>>ಅದೆ ಸ್ಥಳೀಯ ಸಹೋದ್ಯೋಗಿಗಳ ವಿಷಯಕ್ಕೆ ಬಂದರೆ ಸಂಪೂರ್ಣ ವ್ಯಾಸೋತ್ತರಮುಖಿ ಸ್ವಭಾವ.
-ನಾಗೇಶರೆ, ಈ "ವ್ಯಾಸೋತ್ತರಮುಖಿ" ಸ್ವಭಾವ ಗೊತ್ತಾಗಲಿಲ್ಲ. ಇದೇ ಪ್ರಥಮ ಬಾರಿಗೆ ಕೇಳುತ್ತಿರುವೆ. ಏನರ್ಥ?
ಥಾಯ್‌ನ "ಸ್ಟಿಕ್ಕಿ ರೈಸ್" ( http://en.wikipedia.org/wiki/Glutinous_rice ) ಮತ್ತು ಪರಿಮಳಯುಕ್ತ ಅಕ್ಕಿ ಬಗ್ಗೆ ವಿವರಿಸಿ, ಸೌತ್ ಇಂಡಿಯನ್ ಅನ್ನ ಸಿಗದೆ ಪಡುವ ಕಷ್ಟ ಬರೆದಿದ್ದೀರಿ. ಈಗ ಬೆಂಗಳೂರಲ್ಲೂ "ಸೌತ್ ಇಂಡಿಯನ್ ಊಟ" ಸಿಗಬೇಕಾದರೆ ಹೋಟಲ್ಲಿಗೆ ಎಂಟರಾಗುವ ಮೊದಲೇ ವಿಚಾರಿಸುವುದು ಒಳ್ಳೆಯದು. :)
ಅಲ್ಲದೇ ಮಾಲ್‌ನಲ್ಲಿ ಸಿಕ್ಕಿದ ಬನಿಯನ್ ಬಣ್ಣನೆ ಬಹಳ ಇಷ್ಟವಾಯಿತು.

Submitted by nageshamysore Mon, 10/06/2014 - 04:45

In reply to by ಗಣೇಶ

ಗಣೇಶ್ ಜಿ ನಮಸ್ಕಾರ. 'ವ್ಯಾಸೋತ್ತರಮುಖಿ' ಯನ್ನು ಎರಡು ಪದಗಳ ಸಂಯೋಜಿತ ರೂಪವಾಗಿ ಬಳಸಿದ್ದೆ - ವ್ಯಾಸ (ವೃತ್ತದ ವ್ಯಾಸ ಅನ್ನುವ ಅರ್ಥದಲ್ಲಿ) + ಉತ್ತರಮುಖಿ (ವಿರುದ್ಧ ದಿಕ್ಕು ಎನ್ನುವರ್ಥದಲ್ಲಿ, ಉತ್ತರಾ-ದಕ್ಷಿಣ). ಒಟ್ಟಾರೆ ಆಂಗ್ಲದ 'ಡಯಾಮೆಟ್ರಿಕಲಿ ಆಪೋಸಿಟ್' ಎಂಬುದರ ಸಮಾನಾರ್ಥಕ ಪದಪುಂಜ ಜೋಡಣೆಯಲ್ಲಿ ಈ ಪ್ರಯೋಗ ಮಾಡಿದ್ದೇನೆ. ಈ ರೀತಿಯ ಪದ-ಪುಂಜ ರೂಪವಾಗಿ ಈಗಾಗಲೆ ಬಳಕೆಯಲ್ಲಿದೆಯೊ, ಇಲ್ಲವೊ ಗೊತ್ತಿಲ್ಲ :-)

ನೀವು ಕೊಟ್ಟ ವಿಕಿ ಲಿಂಕಿನ ಮಾಹಿತಿ ಕೊಂಡಿಗೆ ಧನ್ಯವಾದಗಳು - ನಾನು ಬ್ಯಾಂಕಾಕಿನಲ್ಲಿ ಬಿದಿರಿನ ಟ್ಯೂಬಿನಲಿಟ್ಟ ಸ್ಟಿಕ್ಕಿ ರೈಸನ್ನು ಸುಮಾರು ಕಡೆ ನೋಡಿದ್ದೆ, ಅದರ ಚಿತ್ರವು ಈ ಲಿಂಕಿನಲ್ಲಿದೆ ಬರ್ಮೀಸ್ ಮತ್ತು ಥಾಯ್ ವೈವಿಧ್ಯತೆಗಳೊಂದಿಗೆ.