ಯುಗಾದಿ ೨೦೧೪

ಯುಗಾದಿ ೨೦೧೪

ಯುಗಾದಿ ಅನ್ನುವ ಹೆಸರಿನಲೆ ಯುಗದ-ಆದಿಯೆನ್ನುವ ಅರ್ಥವನ್ನು ಹಾಸುಹೊಕ್ಕಾಗಿಸಿಕೊಂಡ ಅರ್ಥದ ಮೂಲವನ್ನು ಪರಂಪರೆಯ ತೊಟ್ಟು ಹಿಡಿದು ತುಸು ಅವಲೋಕಿಸಿದರೆ, ಕಣ್ಮುಂದೆ ನಿಲ್ಲುವ ದೃಶ್ಯ - ನಾಲ್ಕು ಯುಗಗಳ ಕಲ್ಪನೆಯನ್ನು ಕುರಿತದ್ದು ; ಸತ್ಯ ಧರ್ಮಗಳೆ ಆಧಾರವಾಗಿ ನಾಲ್ಕು ಪಾದಗಳಾಗಿ ನೆಲೆಸಿದ್ದ ಸತ್ಯ ಯುಗದಿಂದ ಆರಂಭವಾಗಿ, ಮೂರು ಕಾಲಿನ ತೇತ್ರಾಯುಗವಾಗಿ, ಎರಡು ಕಾಲಿನ ದ್ವಾಪರವೂ ಕಳೆದು ಈಗ ಒಂಟಿಕಾಲಲ್ಲಿ ನಿಂತು ನಮ್ಮನ್ನೆಲ್ಲ ಸಾಕುತ್ತಿರುವ ಕಲಿಯುಗದವರೆಗೆ. ಆದರೂ ನನಗೇಕೊ ಪ್ರತಿ ವರ್ಷದ ಮೊದಲ ದಿನವನ್ನು ಯುಗದ - ಆದಿ ಎಂದು ಕರೆಯುವುದು ತಾರ್ಕಿಕವಾಗಿ ಸಂಪೂರ್ಣ ಸರಿಯೆನಿಸುವುದಿಲ್ಲ. ಸಾಂಕೇತಿಕವಾಗಿ ಈ ಯುಗದ ಆದಿಯಾದ ಅಥವಾ ಆರಂಭವಾದ ದಿನದ ನೆನಪಿಗಾಗಿ ಈ ಸ್ಮರಣೆ ಎನ್ನುವುದು ಸರಿಯಾದ, ಸೂಕ್ತವಾದ ವಿವರಣೆಯೆ ಎಂದಿಟ್ಟುಕೊಂಡರೂ, ಅದರ ಜತೆಗೆ ಸಮೀಕರಿಸಿಕೊಳ್ಳಲು 'ಯುಗದ - ಹಾದಿ' ಎಂತಲೂ ಅರ್ಥೈಸಿಕೊಂಡರೆ, ಈ ಕಲಿಯುಗ ಸಾಗುತ್ತಿರುವ ಹಾದಿಯ ಸಾಂಕೇತಿಕತೆಯೂ ಸೇರಿ ಸಂಪೂರ್ಣತೆ ಬಂದಂತಾಗುತ್ತದೆಯೆಂದು ನನ್ನ ಭಾವನೆ.

ಅದೇನೆ ಇರಲಿ ಹೊಸ ವರ್ಷದಾಗಮನ ಬದಲಾವಣೆಯ ಹರಿಕಾರ. ಪರಿವರ್ತನೆಯ ಸಂದೇಶವನ್ನು ಪ್ರಕೃತಿಯ ಬದಲಾವಣೆಗಳಾಗಿ ಮಾರ್ಪಡಿಸಿ ಬಿತ್ತರಿಸುತ್ತ ಜಡ್ಡು ಹಿಡಿಯಲ್ಹವಣಿಸುವ ಮನಗಳಿಗೆ ಚೇತನ ತುಂಬಿಸುವ ಚೇತೋಹಾರಿ ದೂತ. ಹೆಚ್ಚು ಕಡಿಮೆ ಕೃಷ್ಣನ ನಿರ್ಗಮನದೊಂದಿಗೆ ದ್ವಾಪರಕ್ಕೆ ತೆರೆ ಬೀಳಲಾರಂಭವಾಗಿ, ಕಲಿಯುಗ ಹೆಜ್ಜೆಯಿಡಲಾರಂಭಿಸಿತೆನ್ನುವುದು ಪುರಾಣ - ಪರಂಪರೆಯ ಹಿನ್ನಲೆಯಿಂದ ಮೂಡಿಬರುವ ಉವಾಚ. ಅಂತೆಯೆ ನಾಲ್ಕು ಯುಗಗಳ ಕಾಲಮಾನಕಗಳೂ ಸಹ ನಾಲ್ಕು- ಮೂರು - ಎರಡು - ಒಂದರ ಅನುಪಾತದಲ್ಲೆ ವಿಭಾಗವಾಗಿ ಹಂಚಿಹೋಗಿವೆಯೆನ್ನುವುದು ಮತ್ತೊಂದು ಆಸಕ್ತಿದಾಯಕ ಅಂಶ. ಯುಗಾಂತರದಲ್ಲಿ ಸಾಗಿ ಬಂದ ಈ ಸೋಜಿಗದ ಸೃಷ್ಟಿಕ್ರಿಯೆ ಅವ್ಯಾಹತವಾಗಿ ಮುಂದುವರೆದು ಅದಾರೊ ಕಲ್ಕಿಯೆಂಬುವನ ಬರುವಿಕೆಗಾಗಿ ಕಾದಿದೆ, ತನ್ನ ಆತ್ಮಾಹುತಿಗಾಗಿ ಎನ್ನುವುದು ಈ ಬ್ರಹ್ಮಾಂಡದ ಭವಿಷ್ಯ ನುಡಿವವರ ಪಾಲಿನ ಘಂಟಾನಾದ. ನಿಜವೊ ಸುಳ್ಳೊ - ಈ ಕತ್ತಿ ಹಿಡಿದು ಕುದುರೆಯೇರಿ ಬರುವ ಕಲ್ಕಿಯವತಾರದ ಮಹಾನುಭಾವ ಸರಿಯಾಗಿ ಯುಗಾದಿಯ ದಿನವೆ ಬಂದು ಸವರುತ್ತಾನಾ, ಅಥವಾ ಅದಕ್ಕೆಂದೆ ಮತ್ತೊಂದು ವಿಶೇಷ ದಿನ ನಿಗದಿಯಾಗಿದೆಯೆ ಎನ್ನುವ ಜಿಜ್ಞಾಸೆ, ತಾಂತ್ರಿಕ ಅನುಮಾನ ಮತ್ತಲವರನ್ನು ಕಾಡುವ ಪೆಡಂಭೂತ.

ಇದೆಲ್ಲದರ ಮಧ್ಯೆ ತಣ್ಣಗೆ ದಿನದೂಡುತ್ತ ನಂಬುವುದೊ, ಬಿಡುವುದೊ ತಲೆಕೆಡಿಸಿಕೊಳ್ಳದೆ ತಂತಮ್ಮ ವೃತ್ತಿ, ಪ್ರವೃತ್ತಿಗನುಸಾರವಾಗಿ ಹಬ್ಬ ಹರಿದಿನ ಸಂಪ್ರದಾಯಾದಿಗಳ ಆಚರಣೆಯಲ್ಲಿ ತಲ್ಲೀನರಾಗಿ ಯಾಂತ್ರಿಕರಾಗಿಯೊ, ಭಾವುಕರಾಗಿಯೊ ದಿನದೂಡುತ್ತ ಜೀವನದ ಗಾಲಿ ಸವೆಸಿರುವ ಪ್ರಭೃತಿಗಳೂ ಉಂಟು; ತಲೆ ಬುಡ ಸೋಸಿ ಮೂಲಕೆ ಧಾಳಿಯಿಡ ಹೊರಣ ಚಿಕಿತ್ಸಕ ಮನಗಳು ಸಾಕಷ್ಟು. ಯಾಂತ್ರಿಕತೆ ಭಾವುಕತೆ ನಡುವೆ ಸಿಲುಕಿಯೂ ಕಳುವಾಗಲೊಲ್ಲದ ಹೋರಾಟದಲ್ಲಿ ನಿರತರಾಗಿ ಸೋಜಿಗಗಳನ್ನೆ ಪ್ರಶ್ನೆಗಳಾಗಿಸಿಕೊಂಡು ಕಾರ್ಯನಿರತರಾದ ಕ್ರಿಯಾಶೀಲರೂ ಉಂಟು.

ಅವೆಲ್ಲದರ ನಡುವೆಯೆ 'ಯುಗದ ಆದಿ ಯುಗಾದಿಯೆ?' ಎಂಬ ಕುತೂಹಲವನ್ನೆ ಕಾವ್ಯವಾಗಿಸಿ, 'ಏನ್ಹುಡುಕಲಿ ವರ್ಷದ್ಹುಡುಕಲಿ?' ಎಂಬ ನಿರೀಕ್ಷಾ ಕನ್ನೆಯ ಕಾವ್ಯ ಶಿಶುವನ್ನು ಜತೆಗೂಡಿಸಿ 'ಯುಗಾದಿ ೨೦೧೪'ರ ಬೇವು ಬೆಲ್ಲದಲ್ಲಿ ಸಂಕಲಿಸಿ ನಿಮ್ಮ ಮುಂದಿಡುವ ಪುಟ್ಟ ಯತ್ನ ಈ ಪಾಮರನ ಪಾಲಿಗೆ !

ಚಿತ್ರಗಳು: ಸ್ವಯಂಕೃತಾಪರಾಧ :-)

೦೧. ಯುಗದ ಆದಿಯೆ ಯುಗಾದಿ?
____________________________

ಯುಗ ಮನ್ವಂತರ ದಾಟಲಗಾಧ ಬ್ರಹ್ಮಾಂಡ
ಕೋಟಿಕೋಟಿ ವರ್ಷಗಳ ಸುತ್ತ ಕರ್ಮಕಾಂಡ
ಸವೆಸಿದಗಣಿತ ವರ್ಷಗಳ ಸರಿದ ಮಸ್ತಕದಲೆ
ವರ್ಷವಾಯ್ತೆ ತೆರೆಸಿತೆ ಹೊಸ ಪುಸ್ತಕದ ಹಾಳೆ? ||

ಏಕೆನ್ನುವರೊ ಆದಿ ಯುಗದ ಮೊದಲ ದಿನವೆ?
ವರ್ಷವರ್ಷ ನೆನಪಿಸುತ ಹುಟ್ಟುಹಬ್ಬದ ತರವೆ
ಸುತ್ತುವ ಚಕ್ರದ ಗಾಲಿ, ಋತುಗಳ ಮರುಕಳಿಸಿ
ಮುತ್ತುಗದೆಲೆ ಜೋಡಿಸಿದಂತೆ, ಹೂ ತೇರನಿಳಿಸಿ ||

ಗಿಡ ಹೂವ್ವಾಗಿ ಕಾದು, ದುಂಬಿಯಲಿ ಪರಕಾಯ
ಕಾಯಿ ಹಣ್ಣಾಗೊ ಹೆಣ್ಣಾಗೊ ಬಿಸಿಬಿಸಿಲ ಪ್ರಾಯ
ನಿರ್ದಯೆಯಿಂದಾ ನಿಸರ್ಗ ಇಡಿಸಿತೆ ಬಳೆ ಶಾಸ್ತ್ರ
ಪ್ರಕೃತಿ ಹಸಿರಂಚಿನ ಸೆರಗಿಗೂ, ಬಣ್ಣಬಣ್ಣದ ವಸ್ತ್ರ ||

ಮೋದಕೊ ಆಮೋದಕೊ ಮಾನಾನುಮಾನಕೊ
ಎಲ್ಲರದು ಅದೆ ಪಾಡು ಹೇಗೊ ಹಸಿರಾಗೊ ಛಲ
ವರ್ಣ ಚಿತ್ತಾರದ ಹೂ ಹಣ್ಹಣ್ಗಳ ಕಳಿತ ಫಲ ಕಟ್ಟಿ
ತೂಗುತಿರೆ ರೆಂಬೆ ಕೊಂಬೆಯೂ ಜೋತಾಡೊ ಜಟ್ಟಿ ||

ಉದುರಿದ ಹಣ್ಣನ್ಹೆಕ್ಕಿ, ಉದುರದವರನು ಕೆಡವುತ
ಮಾವಿನೆಲೆಗಳ ತೋರಣ, ಬೇವಿನ ಜೊಂಪೆಗೆ ಸುತ್ತ
ಹೊಸ ದಿರುಸಿನಲಿ ಬಿನ್ನಾಣ, ಬಂಗಾರದ ಆಭರಣ
ತೊಟ್ಟ ಲಲನೆ ಸೊಬಗೆ ಹೊಸವರ್ಷದ ಸಂಭ್ರಮಣ ||

-----------------------------------------------------------
ನಾಗೇಶ ಮೈಸೂರು, ಸಿಂಗಾಪುರ
------------------------------------------------------------

೦೨. ಏನ್ಹುಡುಕಲಿ ವರ್ಷದ್ಹುಡುಕಲಿ ?
________________________

ಏನ್ಹುಡುಕಲಿ ವರ್ಷದ್ಹುಡುಕಲಿ
ಬೇವು ಬೆಲ್ಲ ಎಲ್ಲಾ ನಕಲಿ
ಮನ ತುಂಬಿ ತುಳುಕಿದೆ ಬುಗ್ಗೆ
ಯುಗಾದಿ ಸಂಭ್ರಮಿಸಿದ ಬಗೆ ||

ಮನವೆ ಮಂತ್ರದ ಮಲ್ಲಿ
ಜಾದು ಗಳಿಗೆಗೆ ಕೊನೆಯೆಲ್ಲಿ
ಜೋತುಬಿದ್ದ ಅವೆ ಜೊಂಪೆ
ಜೊಂಪಿಡಿಸಿದ ಹುಸಿ ಕಂಪೆ ||

ಇಂದು ಎಚ್ಚರ ಮನದೆಲ್ಲ
ಮೂಲೆಗೂ ಜಾಗೃತ ಕುಲ
ಹೆಜ್ಜೆಯಿಡುವಲ್ಲೆಲ್ಲ ಭೂಗತ
ಜಾತಕ ಸರಿ ತಪ್ಪಿನ ಸ್ವಗತ ||

ಈ ಜಾಗೃತಿಯದೆ ಸನ್ಮತಿ
ಜತೆಗೂಡಿರಲಿ ವರ್ಷಪೂರ್ತಿ
ಆರಿ ಹೋಗದಲೆ ಪ್ರಣತಿ
ಬಿಟ್ಟು ಹೋಗದಾ ಸರತಿ ||

ಹಾಳು ನಿರೀಕ್ಷೆಗಳು ಬೇಡ
ಆತಂಕ ಪರೀಕ್ಷೆಗಳು ಬೇಡ
ನಿರಾತಂಕವಿರಲಿ ಮೋಡ
ಸುರಿಯಲಿ ಸರಳದೆ ಬಿಡ ||

------------------------------------------------------------
ನಾಗೇಶ ಮೈಸೂರು, ಸಿಂಗಾಪುರ
------------------------------------------------------------