ನೂರು ತುಂಬಿದ ಸೀತಜ್ಜಿಗೆ, ಎಷ್ಟೊಂದು ತಯ್ಯಾರಿ ?

ನೂರು ತುಂಬಿದ ಸೀತಜ್ಜಿಗೆ, ಎಷ್ಟೊಂದು ತಯ್ಯಾರಿ ?

ಡಾ.  ಎಚ್ಚೆಸ್ವಿರವರ    'ಉತ್ತರಾಯಣ ಮತ್ತು'.... ಕವನ ಗುಚ್ಛದಿಂದ ಆಯ್ದ ವಿಶೇಷ  ಕವನವಾಗಿದೆ.  ಎಚ್ಚೆಸ್ವಿಯವರ ಜೀವನದಲ್ಲಿ ಭೀಮಜ್ಜಿ ಮತ್ತು ಸೀತಜ್ಜಿಯವರ ಪಾತ್ರ ಬಹಳ ಮಹತ್ವದ ಪಾತ್ರವಹಿಸಿರುವುದನ್ನು ಅವರ ಆತ್ಮ ಕಥನದಲ್ಲಿ ಕಾಣಬಹುದು . ಬಹಳ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಅವರು (ತಂದೆಯ ಮುಖವನ್ನೇ ಕಾಣದ ದುರದೃಷ್ಟವಂತರು)  ಬಾಲ್ಯ ಸ್ನೇಹಿತರಾದ ಎಚ್ಚೆಸ್ವಿಯವರ ಜೊತೆ ಬಹಳ ನಿಕಟ ಸಂಬಂಧವಿದದ ನನಗೆ ಮುಂಬೈಗೆ ಬಂದ ಮೇಲೆ ಬಹಳ ವರ್ಷಗಳೇ ಅವರ ಸಾನ್ನಿಧ್ಯ ಲಭ್ಯವಾಗುತ್ತಿಲ್ಲ. ಕಾರಣಗಳು ಹಲವು. ಒಟ್ಟಿನಲ್ಲಿ ಅವರ  ಸೀತಜ್ಜಿ ಬಗ್ಗೆ ಮತ್ತೆ ಮತ್ತೆ ಓದುವ ಆಶೆ ನನಗೆ ! ಏಕೆಂದರೆ ಮೂರ್ತಿಗಳ ಅಜ್ಜಿ ನನಗು ಅಜ್ಜಿ ಅಲ್ಲವೇ ?!
 
ಈ ಕವಿತೆ ವಿಶೇಷ ಕವಿತೆಗಳಲ್ಲೊಂದು ಎಂದು ಹೇಳಲು ಅರ್ಹವಾಗಿದೆ. ಏಕೆಂದರೆ ವೆಂಕಟೇಶ ಮೂರ್ತಿಯವರು, ಬಾಲ್ಯದಲ್ಲಿ ಬೆಳೆದದ್ದೇ ಅವರ ಸೀತಜ್ಜಿ, ಭೀಮಜ್ಜಿಯವರ ತೊಡೆಯಮೇಲೆ ಮಲಗಿ. ತಾಯಿ, ನಾಗರತ್ನಮ್ಮನವರು ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದರು. ತಂದೆಯವರು ಅವರು ಜನಿಸುವ ಮೊದಲೇ ತೀರಿಕೊಂಡಿದ್ದರು. ೧೫  ಅಥವಾ ೧೬ ವಯಸ್ಸಿನ  ಎಳೆಯವಯಸ್ಸಿನ  ತಾಯಿಗೆ ವೈಧವ್ಯದ ಪಟ್ಟ ಬಹಳ ಬೇಗ  ಬಂದು ಆಕೆ ತಮ್ಮ  ಇಡೀ ಜೀವನವನ್ನು ಮಗನ ಏಳಿಗೆಗೇ ಮುಡುಪಾಗಿಟ್ಟರು. ಇನ್ನು ಮೂರ್ತಿಯವರ ಇಬ್ಬರು  ಅಜ್ಜಿಯರೋ ನಿಸ್ವಾರ್ಥ ಸ್ವರೂಪದ ಮಹಾನ್  ದೇವತೆಯರು. ಯಾಕಂದರೆ ಸೀತಜ್ಜಿ, ಮತ್ತು ಭೀಮಜ್ಜಿಯರೂ ಬಹಳ ಬಾಲ್ಯದಲ್ಲೇ ತಮ್ಮ ಪತಿಗಳನ್ನು ಕಳೆದುಕೊಂಡು  ಮೂರ್ತಿಯವರ ಲಾಲನೆ ಪಾಲನೆಯಲ್ಲೇ ತಮ್ಮ ಜೀವನದ ಅರ್ಥವನ್ನುಕಂಡುಕೊಂಡರು. ಅದಕ್ಕಾಗಿಯೇ  ವೆಂಕಟೇಶ ಮೂರ್ತಿಯವರಿಗೆ ಅವರಿಬ್ಬರನ್ನು ಕಂಡರೆ ಪ್ರಾಣ ! ಈ ಪದ್ಯದಲ್ಲಿ ಎಚ್ಚೆಸ್ವಿಯವರು 'ಸೀತಜ್ಜಿಯವರ ಶತಮಾನೋತ್ಸವಕ್ಕೆ ತಮ್ಮ ಹಾರ್ದಿಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ'. 
 
ಎಷ್ಟೊಂದು  ತಯ್ಯಾರಿ ?   ಕಾಲೊದರೊದರಿ 
ಸೂರೆ ಹಾರುವ ಹಾಗೆ ಒದರಿದ್ದು 
ಕಾಡವ್ವ ಓಡೋಡಿ ಬಂದು ಅವಸರದಲ್ಲಿ 
ಗುಂಡಿಯನ್ನೇ  ಕಿತ್ತು ಮೊಲೆ  ಕೊಟ್ಟದ್ದು.  
 
ಸರ್ರೆಂದಿಳಿದ  ಸೊರೆಗೆ ಉಸುರು ಹತ್ತಿ 
ನೀಲಿ ಮೊಗವಾಗಿ ಕಣ್ ಕಣ್ ಬಿಡಿಸಿದ್ದು 
ನಿಧನಿಧಾನಕ್ಕೆ,ಮುಂದೆಂದೊ ಹಾಲಿನ ಹಳ್ಳ 
ರಕ್ತದೋಕುಳಿಪ್ರವಾಹ ಹರಿಸಿದ್ದು. 
 
ಆಶಾಢದಬ್ಬರದ ಒನಕೆ ಕುಟ್ಟುವ ಮಳೆಗೆ 
ಉಡಿಬಿಚ್ಚಿ ಮೈ ಇಡೀ ತೋಯ್ದದ್ದು 
ತೊಟ್ಟಿಲಲ್ಲಿಟ್ಟು ರತ್ನದ ಗಿಂಡಿ ನಕ್ಕು ಅಳುತ್ತ 
ಕಂಭ  ಕಂಭದ ನಡುವೆ ಹಾಡ ತೂಗಿದ್ದು. 
 
ಎಷ್ಟೊಂದು  ತಯ್ಯಾರಿ ?   ಮೆಲ್ಲ ಮೆಲ್ಲಗೆ ಕೂದ-
ಲುದುರಿ ಕಣ್ಣಿನ ಕೆಳಗೆ ಕಪ್ಪು ಗೆರೆ ಗಯ್ಯಾಳಿ 
ಎಳೆದದ್ದು, ಕನ್ನಡಿಯಲ್ಲಿ ನೋಡುತ್ತ ನೋಡುತ್ತ 
ಕಣ್ಣು ಮಂಕಾದದ್ದು,  ಸಾದುಗಪ್ಪನ್ನಿಟ್ಟು. 
 
ಕುಂಕುಮವನಳಿಸಿದ್ದು, ಇಲಿಯ ಡೊಗರಿಗೆ ಕಲ್ಲ 
ಜಬ್ಬಿ, ಬಚ್ಚಲ ನೀರ ಕಬ್ಬಾಳೆ, ಮಂದಾರಕ್ಕೆ 
ಹರಿಸಿ, ಮೊಮ್ಮಗನ ಬೆಳ್ಳನೆ ನಗೆಯ 
ಕನ್ನಡಕದಂಚಲ್ಲಿ ಜಾಲಿಸಿದ್ದು, ತೊದಲುಲಿಯ ಆಲಿಸಿದ್ದು ..
 
ಎಷ್ಟೊಂದು  ತಯ್ಯಾರಿ ?  ರಸ ಇಂಗಿ ಒಣಗಿದ ಹಣ್ಣು 
ಉಡಿ ತುಂಬ ಸುಕ್ಕಿನ ನಿರಿಯ ಬಿಡಿಸಿದ್ದು 
ಮಂಚದಿಂದಿಳಿದು ನೆಲಕ್ಕೆ ಅಪ್ಪಳಿಸಿ ಬಿದ್ದದ್ದು 
ಹೊಸಿಲದಾಟುವ ಹಟಕ್ಕೆ ಮತ್ತೆ ಎದ್ದದ್ದು ...
 
ಎಷ್ಟೊಂದು  ತಯ್ಯಾರಿ... ? !  (೨೦೦೮ ರಲ್ಲಿ ಬರೆದದ್ದು, ಮರು ಪ್ರಕತಿಸುತ್ತಿದ್ದೆನೆ)
ಮಾರ್ಚ್, ೨೯, ೨೦೧೪  
 
-ಹೊರಂಲವೆಂ