ತಂತಿ ತಂದ ತಾಪ

ತಂತಿ ತಂದ ತಾಪ

ಹಿಂದೆ ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಕಾಲದಲ್ಲಿ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪಬೇಕಾದರೆ ಅದು ಮುಖತಃ ತಲುಪಬೇಕಿತ್ತು. ಇದನ್ನು ಹೊರತುಪಡಿಸಿ, ಪೋಸ್ಟ್‌ಕಾರ್ಡ್‌, ಇನ್‌ಲ್ಯಾಂಡ್ ಅಂಚೆ ಮೂಲಕ ಬಹಳ ನಿಧಾನವಾಗಿ ತಲುಪುತ್ತಿತ್ತು. ಜರೂರಾದ ಸಂದೇಶಗಳು ತಂತಿಯ ಮೂಲಕ ತಲುಪುತ್ತಿದ್ದವು. ದೂರವಾಣಿ ಸೌಕರ್ಯ ಪಟ್ಟಣ ಪ್ರದೇಶಗಳಲ್ಲಿ ಕೆಲವೇ ಕೆಲವು ಶ್ರೀಮಂತರಿಗೆ ಮಾತ್ರ ಲಭ್ಯವಿತ್ತು.

ನನ್ನ ಅಪ್ಪ ತನ್ನ ಜೀವಮಾನವನ್ನೆಲ್ಲ ಇಂಥ ಕಾಲದಲ್ಲಿಯೇ ಕಳೆದಿದ್ದು. ಅಂದೆಲ್ಲ ತಂತೀ / ತಾರು ಬಂದರೆ, ಅದನ್ನು ಓದಿನೋಡುವ ಮುಂಚೆಯೇ ಎಲ್ಲರಲ್ಲಿಯೂ ಅತೀವ ದುಗುಡ, ಆತಂಕ ಮೂಡುತ್ತಿತ್ತು. ಏನು ಅನಾಹುತವಾಗಿದೆಯೋ, ಯಾರು ಸತ್ತರೋ, ಮತ್ತೇನೋ ಅಪಘಾತ ನಡೆಯಿತೋ ಎಂಬ ಹಲವಾರು ಯೋಚನೆಗಳು ಮೂಡಿ ಬಿಡುತ್ತಿದ್ದವು. ಅದಲ್ಲದೆ ತಂತೀ ಸಂದೇಶಗಳು ಸಾಮಾನ್ಯವಾಗಿ ಅಶುಭವಾರ್ತೆಯನ್ನೇ ತರುತ್ತಿದ್ದದ್ದೂ ಇದಕ್ಕೆ ಕಾರಣವಿರಬಹುದು.

ಜನರು ಯೋಗಕ್ಷೇಮ ವಿಚಾರಿಸಲು ಪೋಸ್ಟ್‌ಕಾರ್ಡ್‌ನ್ನೇ ಬಳಸುತ್ತಿದ್ದರು. ಈಗಿನ ಪೀಳಿಗೆಯವರಿಗೆ ಅಂದಿನ ಆ ಸ್ಥಿತಿಯ ಬಗ್ಗೆ ಅಷ್ಟಾಗಿ ಅರಿವಿಲ್ಲ. ಈಗೇನಿದ್ದರೂ ಕ್ಷಣಾರ್ಧದಲ್ಲಿ ಮೊಬೈಲ್, ಇಅಂಚೆ, ಅಂತರ್ಜಾಲದ ಮೂಲಕ, ಯೂಟ್ಯೂಬು, ಆಟ್ಯೂಬು, ಈಟ್ಯೂಬು ಹೀಗೆ ಹಲವಾರು ಮಾಧ್ಯಮದ ಮೂಲಕ ಜಗತ್ತಿನ ಮೂಲೆಮೂಲೆಗೂ ಸಂದೇಶ ರವಾನೆ ಆಗಿಬಿಡುತ್ತದೆ. ಎಸ್ಸೆಮೆಸ್ಸು ಸೌಲಭ್ಯವೂ ಇರುವುದರಿಂದ ಸಂದೇಶ ರವಾನೆಯಲ್ಲಿ ಕ್ರಾಂತಿಯೇ ಆಗಿ ಹೋಗಿದೆ. ಆಗಿನ ಕಾಲಕ್ಕೆ ಸಂದೇಶ ರವಾನೆಯೇ ಒಂದು ಸಮಸ್ಯೆಯಾಗಿದ್ದರೆ, ಈಗ ಈ ಸಂದೇಶ ಪ್ರಸರಣವನ್ನು ತಡೆಹಿಡಿಯುವುದೇ ದೊಡ್ಡ ಸಮಸ್ಯೆ. ಅನೇಕ ಸೂಕ್ಷ್ಮವಾದ ಸಂದೇಶಗಳನ್ನು ತಡೆಹಿಡಿಯಲು, ಸರ್ಕಾರಗಳು ಅಂತರ್ಜಾಲ ತರಂಗಗಳನ್ನು ಜ್ಯಾಂ (internet censorship) ಮಾಡುತ್ತವೆ. ಹೀಗಿದ್ದೂ ಇದು ಪ್ರಯಾಸಕರ ಕೆಲಸವೇ ಆಗಿದೆ.

ನಮ್ಮ ಬಾಲ್ಯದಲ್ಲಿ ಪುರಾಣ ಕಥೆಗಳಲ್ಲಿ ನಾವು ಓದಿ ತಿಳಿದ ದೇವ/ದಾನವ ಪಾತ್ರಗಳು ಕ್ಷಣಮಾತ್ರದಲ್ಲಿ ಹದಿನೆಂಟು ಲೋಕಗಳಲ್ಲಿ ಸಂಚಾರಮಾಡಿ ಎಲ್ಲೆಂದರೆ ಅಲ್ಲಿ ಪ್ರತ್ಯಕ್ಷವಾಗುತ್ತಿದ್ದವು ಎಂದು ಕೇಳಿದ್ದೇವೆ. ಈಗ ಆ ಚಮತ್ಕಾರವೆಲ್ಲ ನಮ್ಮ ಕಣ್ಣೆದುರೇ ನಡೆಯುತ್ತಲಿವೆ.

ಆಫ್ರಿಕಾ ಖಂಡದ ಯಾವುದೋ ಮೂಲೆಯಲ್ಲಿ ಚಲಿಸುತ್ತಿರುವ ಪ್ರಾಣಿಯನ್ನೋ, ಮನುಷ್ಯನನ್ನೋ ಅಥವಾ ಕೀಟವನ್ನೋ ಛಾಯಾಚಿತ್ರಣದಲ್ಲಿ ಸೆರೆಹಿಡಿದು, ವೀಡಿಯೋ ಮಾಡಿ, ನಮ್ಮ ಕರ್ನಾಟಕದ ಯಾವುದೋ ಕುಗ್ರಾಮದಲ್ಲಿ ಕುಳಿತು ಲೈವಾಗಿ ನೋಡಬಹುದಾಗಿದೆ. ಇವೆಲ್ಲ ನಾನು ಬಾಲ್ಯದಲ್ಲಿ ಕಥೆ ಕೇಳಿ ಕಲ್ಪನೆ ಮಾಡಿಕೊಂಡದ್ದಕ್ಕಿಂತ ಅದ್ಭುತ ಮತ್ತು ನಿಜ.

ಅಂದಿನ ಕಾಲದ ಜನರಿಗೆ ಈ ರೀತಿಯಾದ ಕಲ್ಪನೆಯೂ ಸಹ ಬಂದಿರಲು ಸಾಧ್ಯವಿಲ್ಲ. ನನ್ನ ಅಪ್ಪನ ಕಾಲದಲ್ಲಿ, ಅವರ ಪ್ರೌಢ ವಯಸ್ಸಿನಲ್ಲಿ ಹೀಗೆಲ್ಲ ಕಲ್ಪನೆ ಮೂಡಿರಲು ಸಾಧ್ಯವೇ ಇರಲಿಲ್ಲ. ಅರವತ್ತೆರೆಡು ವರ್ಷ ಪ್ರಾಯ ಸಂದಿರುವ ನನಗೇ ನನ್ನ ಬಾಲ್ಯದಲ್ಲಿ ಈ ಮಟ್ಟದ ಕಲ್ಪನೆ ಇರಲಿಲ್ಲ. ಆಗ ದಿನ ನಿತ್ಯದಲ್ಲಿ ನಡೆಯುವ ಪ್ರತಿ ಘಟನೆಯೂ ವಿಸ್ಮಯಕಾರಿಯಾಗಿಯೇ ಇರುತ್ತಿತ್ತು. ಇಷ್ಟೆಲ್ಲಾ ಪೀಠಿಕೆ ಮುಂದೆ ನಾನು ದಾಖಲಿಸಲಿರುವ ಒಂದು ಸ್ವಾರಸ್ಯಕರ ಘಟನೆಗೆ ಅತೀ ಮುಖ್ಯವಾಗಿದೆ.

ನನ್ನ ಅಪ್ಪ ತನ್ನ ಜೀವಮಾನ ಕಾಲದಲ್ಲಿ ಅನೇಕ ಸಾಧನೆಗಳನ್ನು ಮಾಡಿದ ಒಬ್ಬ ಧೀಮಂತ ಪುರುಷ. ತನ್ನ ಜೀವನದಲ್ಲಿ ಎದುರಾದ ಅನೇಕ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಅಡೆತಡೆಗಳನ್ನು ಮೆಟ್ಟಿನಿಂತು, ಒಂದು ಆದರ್ಶಪ್ರಾಯವಾದ ಬದುಕನ್ನು ಬದುಕಿದ ‘ಬಂಗಾರದ ಮನುಷ್ಯ’

ಯಾವುದೇ ಸಮಸ್ಯೆ ಎದುರಾದರೂ, ಬಹಳ ನಿಧಾನವಾಗಿ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಅವರಲ್ಲಿ ಕೆಲವು ವಿಲಕ್ಷಣ ಪ್ರವೃತ್ತಿಗಳಿದ್ದವು. ಕ್ಲಿಷ್ಟ ಪರಿಸ್ಥಿತಿಗಳನ್ನು ಸಮಚಿತ್ತದಿಂದ ಎದುರಿಸುತ್ತಿದ್ದ ಅವರು, ಕೆಲವು ಸಾಮಾನ್ಯ ಸಂಧರ್ಭಗಳಲ್ಲಿ ಎಲ್ಲರಂತೆ ಪ್ರತಿಕೃಯಿಸುತ್ತಿರಲಿಲ್ಲ. ಸ್ವಲ್ಪ ಮುಂಗೋಪ ಇದ್ದರೂ ಯಾವಾಗಲೂ ಆ ಮುಂಗೋಪವನ್ನು ಹೊರತೋರುತ್ತಿರಲಿಲ್ಲ. ಅವರ ಸ್ವಭಾವದಲ್ಲಿ ಒಂದಿಷ್ಟು “Unpredictable Element” ಇತ್ತು. ನಾನು ಅವರನ್ನು ಸನಿಹದಿಂದ ಕಂಡಂತೆ, ನನ್ನ ಅರಿವಿಗೆ ಬಂದದ್ದು ಏನೆಂದರೆ, ಅನೇಕ ಸಂದರ್ಭಗಳಲ್ಲಿ ಮನೆಯಲ್ಲಿ ಏನೋ ಒಂದು ವಸ್ತುವನ್ನು ಕೊಳ್ಳಬೇಕು, ಅದಕ್ಕೆ ಅಪ್ಪನ ಅಪ್ಪಣೆ ಬೇಕು, ಕೇಳಿದರೆ ಕೋಪಿಸಿಕೊಳ್ಳಲಾರರು ಎಂದು ಕೊಂಡು ಅವರಲ್ಲಿ ಪ್ರಸ್ತಾಪಮಾಡಿದರೆ, ನಮ್ಮೆಲ್ಲರ ನಿರೀಕ್ಷೆಗೆ ಎದುರಾಗಿ, ರೇಗಿಬಿಟ್ಟು ಬೇಡ ಎಂದು ಬಿಡುತ್ತಿದ್ದರು. ಮತ್ತೆ ಕೆಲವು ಸಾರಿ, ಇದು ಬಹಳ ಮುಖ್ಯವಾದ ವಿಚಾರ, ಅಪ್ಪನನ್ನು ಕೇಳಿದರೆ ಖಂಡಿತ ರೇಗುತ್ತಾರೆ, ಅಥವಾ ಕಪಾಳಮೋಕ್ಷ ಗ್ಯಾರಂಟಿ ಎಂದುಕೊಂಡು, ಅವರಿಂದ ಸ್ವಲ್ಪ ದೂರವೇ ನಿಂತು, ಹೇಳಲೂ ಆಗದೆ, ಹೇಳದೇ ಇರಲೂ ಆಗದೆ ತಬ್ಬಿಬ್ಬಾಗಿ ಅವರಲ್ಲಿ ಪ್ರಸ್ತಾಪಿಸಿದರೆ, ನಾವು ಭಾವಿಸಿದಂತೆ ರೇಗದೆ, ಸಲೀಸಾಗಿ OK ಎಂದು ಬಿಡುತ್ತಿದ್ದರು. ಅಪ್ಪನ ಈ ನಡವಳಿಕೆ ಎಷ್ಟೋಸಲ ನಮಗೆ ಅರ್ಥವೇ ಆಗುತ್ತಿರಲಿಲ್ಲ. ಅದನ್ನು ತಿಳಿದೇ ತಮ್ಮ ಸ್ವಭಾವದಲ್ಲಿ ಅಳವಡಿಸಿಕೊಂಡಿದ್ದರೋ ಅಥವಾ ಸ್ವಾಭಾವಿಕವಾಗಿಯೇ ಅವರು ಹಾಗೆಯೇ ಇದ್ದರೋ ನಮಗೆ ತಿಳಿಯದು.

ಈಗ ನಾನು ಹೇಳ ಹೊರಟಿರುವುದು ಒಂದು ತಂತಿ ಸಮಾಚಾರ ತಂದ ಗಡಿಬಿಡಿಯ ವಿಷಯ. ಈ ಘಟನೆ ನಡೆದು ಸುಮಾರು 60ರಿಂದ 70 ವರ್ಷಗಳೇ ಸಂದಿವೆ. ಇದನ್ನು ನನಗೆ ಹೇಳಿದ್ದು ನನ್ನ ಸೋದರತ್ತೆ ಮಗ. ಈ ಘಟನೆಯಲ್ಲಿ ಅವನು ಪ್ರಮುಖ ಪಾತ್ರಧಾರಿ. ಅವನ ಹೆಸರು ಶೀನು ಎಂದು. ನನ್ನ ಅಪ್ಪನ ಹೆಸರೇ ಅವನಿಗೂ ಶ್ರೀನಿವಾಸನ್ ಎಂದು. ಶ್ರೀನಿವಾಸನ್ ಮನೆಯಲ್ಲಿ ಕರೆಯುವಾಗ ಶೀನು ಆಗಿ ಬಿಟ್ಟ. ಈ ಶ್ರೀನಿವಾಸನ್ ಭಾರತ ಅಂಚೆ ಮತ್ತು ತಂತಿ ವಿಭಾಗದಲ್ಲಿ ಮೊದಲು ಟೆಲಿಗ್ರಾಫಿಸ್ಟ್ ಆಗಿ ಸೇರಿ, ಹಂತ ಹಂತವಾಗಿ ಬಡ್ತಿ ಹೊಂದಿ, ಪೋಸ್ಟ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದ. ತನ್ನ ಸೇವಾ ಅವಧಿಯಲ್ಲಿ ಭಾರತ ಸೇನಾ ವಿಭಾಗಕ್ಕೆ, ಅಂಚೆ ತಂತಿ ಇಲಾಖೆಯಿಂದ ಎರವಲು ಸೇವೆಯಲ್ಲಿ ಸೇರಿ, ಸೇನಾಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ. ಬಾಂಗ್ಲಾದೇಶದ ಯುದ್ಧದಲ್ಲಿ ಭಾಗವಹಿಸಿ ಪದಕಗಳಿಸಿದ ಧೀರ.

ಶೀನುವಿಗೂ ನನ್ನ ಅಪ್ಪನಿಗೂ ಬಹಳ ಒಡನಾಟವಿತ್ತು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಶೀನುವಿಗೆ ನನ್ನ ಅಪ್ಪನೇ ಎಲ್ಲ. ಚಿಕ್ಕಂದಿನಿಂದಲೇ ಸೋದರಮಾವನ ಆಶ್ರಯದಲ್ಲಿಯೇ ಬೆಳೆದ. ಮಾವ ಎಂದರೆ ಶೀನುವಿಗೆ ಎಲ್ಲಿಲ್ಲದ ಪ್ರೇಮ ಮತ್ತು ವಾತ್ಸಲ್ಯ. ಮಾವನನ್ನು ಕೇಳದೇ ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಮೈಸೂರಿನಲ್ಲಿ ವಾಸವಾಗಿದ್ದ ಶೀನು, ಸಮಯ ಸಿಕ್ಕಾಗಲೆಲ್ಲ ನನ್ನೂರಿಗೆ ಬಂದು ಮಾವನನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದ. ಮೈಸೂರಿನಿಂದ ಬಸ್ಸಿನಲ್ಲಿ ಚಾಮರಾಜ ನಗರಕ್ಕೆ ಬಂದು, ಅಲ್ಲಿಂದ 8 ಕಿ.ಮೀ. ದೂರದಲ್ಲಿದ್ದ ನನ್ನ ಹಳ್ಳಿಗೆ ಬಾಡಿಗೆ ಸೈಕಲ್ಲಿನಲ್ಲಿ ಬರುವುದು ಅವನ ವಾಡಿಕೆ.

ಈ ಶೀನು ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಗ್ರಾಫಿಸ್ಟ್ ಹುದ್ದೆಗೆ ಅರ್ಜಿಹಾಕಿ, ಪ್ರವೇಶಕಾಗಿ ಇದ್ದ ಪರೀಕ್ಷೆಯನ್ನು ಪಾಸ್ ಮಾಡಿ ಬೆಂಗಳೂರಿಗೆ ತರಬೇತಿಗೆ ಹೋಗಿದ್ದ. ಆ ಹುದ್ದೆಗೆ, ಆರು ತಿಂಗಳು Theory ತರಗತಿಗಳು, ಮತ್ತೆ ಮೂರು ತಿಂಗಳು ತಂತೀ ಕಛೇರಿಯಲ್ಲಿ, ತಂತಿ ಸಂದೇಶ ಸ್ವೀಕರಿಸುವ ಮತ್ತು ರವಾನಿಸುವ ತರಬೇತಿ ಕೆಲಸ, ನಂತರ ಮೂರು ತಿಂಗಳು “Probationer” ಆಗಿ ಕೆಲಸ, ಹೀಗೆ ಒಂದು ವರ್ಷ ಮುಗಿದನಂತರ, ಕೆಲಸ ಖಾಯಂ, ಮತ್ತು ಪೂರ್ತಿ ಸಂಬಳ. ಆಗಿನ ಕಾಲದಲ್ಲಿ ಕೆಲಸ ಸಿಗುವುದೇ ಬಹಳ ದುರ್ಲಭ, ಅದರಲ್ಲಿಯೂ ಕೇಂದ್ರ ಸರ್ಕಾರದ ಅಂಚೆ ಮತ್ತು ತಂತಿ ಇಲಾಖೆಯ ಕೆಲಸ ಅಂದರೆ ಕೇಳಬೇಕೆ, ಅದು ಕೈಗೆಟುಕದ ಮಾವಿನ ಹಣ್ಣು. ಹೀಗುರುವಾಗ ಇಂಥ ಕೆಲಸ ಸಿಕ್ಕಿ, ಬೆಂಗಳೂರಿಗೆ ತರಬೇತಿಗಾಗಿ ಹೋಗಿದ್ದ ಶೀನುವಿಗೆ ಸ್ವರ್ಗ ಮೂರೇ ಗೇಣು ಎಂಬಂತ್ತಿತ್ತು. ಅವನು ಹೀಗೆ ಬೆಂಗಳೂರನಲ್ಲಿ ತರಬೇತಿ ಪಡೆಯುತ್ತಿದ್ದಾನೆ ಎಂಬುದು ನನ್ನ ಅಪ್ಪನಿಗೆ ತಿಳಿದಿತ್ತು.

ಶೀನು ಬೆಂಗಳೂರಿನಲ್ಲಿ ಲಿಖಿತ ಪರೀಕ್ಷೆಗಳನ್ನು ಬಹಳ ಯಶಸ್ವಿಯಾಗಿ ಮುಗಿಸಿದ. ಆರು ತಿಂಗಳು ಕಾಲದ ಲಿಖಿತ ತರಬೇತಿಯನ್ನು ಕೇವಲ ಮೂರೇ ತಿಂಗಳಿಗೆ ಮುಗಿಸಿಬಿಟ್ಟ. ತಂತೀ ಸಂದೇಶ Morse code ಎಂದು ಕರೆಯಲ್ಪಡುವ ಶಬ್ದ ತರಂಗಗಳ ತಂತ್ರಜ್ಞಾನ. ಆ ಕಾಲದಲ್ಲಿ ಈ Morse code ತಂತ್ರಜ್ಞಾನದ ಮೂಲಕವೇ ತಂತೀ ಸಂದೇಶಗಳು ರವಾನೆಯಾಗುತ್ತಿತ್ತು. ಶೀನು, ತನ್ನ ಜತೆಯಲ್ಲಿ ಕಲಸಕ್ಕೆ ಸೇರಿದವರಿಗಿಂತ ಬಹಳ ಶೀಘ್ರವಾಗಿ ಈ Morse codeನ್ನು ಕರಗತ ಮಾಡಿಕೊಂಡುಬಿಟ್ಟ. ಇವನ ಈ ಕೌಶಲ್ಯವನ್ನು ಮನಗಂಡ ಇವನ ಮೇಲಧಿಕಾರಿಗಳು ಕೇವಲ ಮೂರು ತಿಂಗಳಿನಲ್ಲಿಯೇ ಮೈಸೂರಿನ ಕೇಂದ್ರ ತಂತಿ ಕಛೇರಿಗೆ ಹೆಚ್ಚಿನ ತರಬೇತಿಗಾಗಿ ಕಳುಹಿಸಿಬಿಟ್ಟರು. ಆರು ತಿಂಗಳು ನಡೆಯಬೇಕಾದ ತರಬೇತಿಯನ್ನು ಮೂರೇ ತಿಂಗಳಿನಲ್ಲಿ Rank ಪಡೆದುಕೊಂಡು ಮುಗಿಸಿದ್ದು ಶೀನುವಿಗೆ ಬಹಳ ಸಂತಸ ತಂದಿತು.

ಸರಿ ಮೈಸೂರಿಗೆ ಬಂದದ್ದಾಯಿತು. ಕೇಂದ್ರ ತಂತೀ ಕಛೇರಿಯಲ್ಲಿ ಸಂದೇಶ ರವಾನೆ / ಸ್ವೀಕರಣೆ ಕೆಲಸದ ತರಬೇತಿಯನ್ನು ಶುರು ಮಾಡಿದ್ದಾಯಿತು. Morse codeನ್ನು ಕರಗತ ಮಾಡಿಕೊಂಡಿದ್ದ ಶೀನುವಿಗೆ ಈ ಸಂದೇಶ ರವಾನೆ / ಸ್ವೀಕರಣೆ ಕೆಲಸ ಅಷ್ಟೇನೂ ಕಷ್ಟಕರವಾಗಿ ತೋರಲಿಲ್ಲ.

ಆಗ ಮೈಸೂರಿನ ಕೇಂದ್ರ ತಂತೀ ಕಛೇರಿಯ ಮುಖ್ಯಸ್ಥರಾಗಿದ್ದವರು ನಾಯರ್ ಎಂಬ ಅಧಿಕಾರಿ. ಅವರು ಬಹಳ ಖಡಕ್ ಆಸಾಮಿ. ನಾಯರ್ ಅಂದರೆ ಅಲ್ಲಿನ ಕೆಲಸಗಾರರಿಗೆ ಸಿಂಹಸ್ವಪ್ನ. ಕೆಲಸದಲ್ಲಿ ಒಂದು ಸಣ್ಣ ತಪ್ಪು ಮಾಡಿದರೂ ನಾಯರ್ ಸಹಿಸುತ್ತಿರಲಿಲ್ಲ. ತಪ್ಪು ಮಾಡಿದವನಿಗೆ ಶಿಕ್ಷೆ ತಪ್ಪಿದ್ದಲ್ಲ. “ಈ ನಾಯರ್ ಕೆಳಗೆ ನೀನು ಕೆಲಸ ಮಾಡುವುದು ಅಷ್ಟು ಸುಲಭವಲ್ಲ, ಅದಲ್ಲದೆ ನಿನ್ನ ಕೆಲಸ ಇನ್ನೂ ಖಾಯಂ ಆಗಿಲ್ಲ. ಏನಾದರೂ ತಪ್ಪು ಮಾಡಿದೆಯೋ, ನಿನ್ನನ್ನು ಭೂಗತ ಮಾಡಿ ಬಿಡುತ್ತಾನೆ” ಎಂದೆಲ್ಲಾ ಶೀನವನ್ನು ಅವನ ಸಹೋದ್ಯೋಗಿಗಳು ಹೆದರಿಸಿಬಿಟ್ಟರು.

ಶೀನು ಮಾತ್ರ ಹೇಗಾದರಾಗಲೀ, ಮಾಡೋ ಕೆಲಸ ಮಾಡಿದ್ದಾಯಿತು. “ಆದಂಗೆ ಆಗಲಿ ಮಾದಪ್ಪನ ಜಾತ್ರೆ” ಎಂಬ ಗಾದೆ ಮಾತಿನಂತೆ ನಿರ್ಲಿಪ್ತ ಭಾವನೆಯಿಂದ ಕೆಲಸ ಮಾಡುತ್ತಿದ್ದ.

ಹೀಗೆ ಅಲ್ಲಿ ಕೆಲಸ ಮಾಡುತ್ತಾ ಹಾಗೆ ಹೀಗೆ ಒಂದು ತಿಂಗಳು ಕಳೆಯಿತು. ಆ ಕಛೇರಿಯಲ್ಲಿ ಒಂದು ತಂತೀ ವಿಭಾಗ ಬಹಳ ಕಷ್ಟವಾದ ವಿಭಾಗ ಎನಿಸಿಕೊಂಡಿತ್ತು. ಆ ವಿಭಾಗದಲ್ಲಿ ಪ್ರತಿ ನಿಮಿಷಕ್ಕೆ 25 ಸಂದೇಶಗಳು ಬರುತ್ತಿದ್ದವು ಮತ್ತು ಪ್ರತಿ ನಿಮಿಷಕ್ಕೆ 25 ಸಂದೇಶಗಳನ್ನು ಹೊರಕ್ಕೆ ರವಾನಿಸಬೇಕಿತ್ತು. ಈ ವಿಭಾಗವನ್ನು ಬಹಳ ಅನುಭವ ಇರುವ, ತಾಂತ್ರಿಕ ಕೌಶಲ್ಯ ಇರುವ ವ್ಯಕ್ತಿಯೇ ನಿಭಾಯಿಸಬೇಕಾಗಿತ್ತು. ಹೊಸಬರು ಆ ಜಾಗಕ್ಕೆ ಲಾಯಕ್ಕಾದವರಲ್ಲ. ಒಮ್ಮೆ ಆ ವಿಭಾಗ ನಿಭಾಯಿಸುತ್ತಿದ್ದ ನೌಕರರು, ಏನೋ ತುರ್ತು ಕೆಲಸದ ಪ್ರಯುಕ್ತ ಐದು ದಿನಗಳ ರಜೆಯಲ್ಲಿ ಹೋಗಬೇಕಾಯಿತು. ಆಗ ಮುಖ್ಯಾಧಿಕಾರಿ ನಾಯರ್ ರವರು ಶೀನುವನ್ನೇ ಆ ವಿಭಾಗವನ್ನು ನಿಭಾಯಿಸುವಂತೆ ಹೇಳಿಬಿಟ್ಟರು. ಶೀನುವಿಗೆ ಇದು ಅತೀ ಆಶ್ಚರ್ಯಕರವಾದ ಸಂಗತಿಯಾಗಿತ್ತು. ಕಛೇರಿಯಲ್ಲಿ ಅನೇಕ ಅನುಭವೀ ನೌಕರರು ಇರುವಾಗ ನನ್ನನ್ನು ಏಕೆ ಇಲ್ಲಿಗೆ ಹಾಕಿದರು ಎಂದು ಯೋಚಿಸತೊಡಗಿದ. ಆದರೆ ಹೆದರದೆ ಒಂದು ಕೈ ನೋಡಿಯೇ ಬಿಡುವ ಅಂತ ನಿರ್ಧರಿಸಿಬಿಟ್ಟ. ಅವನೂ ನನ್ನ ಅಪ್ಪನಂತೆ ಬಹಳ ಸಾಹಸೀ ಪ್ರವೃತ್ತಿಯ ಮನುಷ್ಯ. ಸುಮಾರು ಐದು ದಿನಗಳ ಕಾಲ ಶೀನು ಆ ವಿಭಾಗವನ್ನು ನಿಭಾಯಿಸಿದ. ಏನೂ ತಪ್ಪು ನಡೆಯಲಿಲ್ಲ. ಇವನ ಕಾರ್ಯ ವೈಖರಿಯನ್ನು ಇವನಿಗೆ ತಿಳಿಯದೇ ನಾಯರ್ ಗಮನಿಸುತ್ತಿದ್ದಾರೆ ಎಂಬುದು ಶೀನುವಿಗೆ ತಿಳಿಯದು. ಇವನಾದರೋ ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದ.

ಒಂದು ದಿನ ಮಧ್ಯಾನ್ಹ, ಶೀನು ಸಂದೇಶಗಳನ್ನು ಸ್ವೀಕರಿಸುತ್ತಿದ್ದಾನೆ ಮತ್ತು ಹೊರಕ್ಕೆ ರವಾನಿಸುತ್ತಿದ್ದಾನೆ. ಇದ್ದಕ್ಕಿದ್ದಂತೆ ಕಛೇರಿ ಮುಖ್ಯಸ್ಥರಾದ ನಾಯರ್, ಶೀನು ಕುಳಿತಿದ್ದ ಸ್ಥಳಕ್ಕೆ ಬಂದು ಶೀನುವನ್ನು ಅಲ್ಲಿಂದ ಎಬ್ಬಿಸಿ, ಅವನ ಜಾಗದಲ್ಲಿ ತಾನೇ ಕುಳಿತು ಸಂದೇಶವಾಹಕವನ್ನು ಕೈಗೆ ತೆಗೆದುಕೊಂಡು ಸಂದೇಶ ರವಾನೆ ಮಾಡಲು ಪ್ರಾರಂಭಿಸಿಬಿಟ್ಟರು. ಶೀನುವಿಗೆ ಇವರು ಏತಕ್ಕೆ ಹೀಗೆ ಮಾಡುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ಸ್ವಲ್ಪ ಸಮಯ ಹೀಗೆ ಸಂದೇಶ ರವಾನಿಸಿದ ನಾಯರ್, ಶೀನುವನ್ನು ಕೆಲಸ ಮುಗಿದ ಮೇಲೆ ತನ್ನ ಕೋಣೆಗ ಬಂದು ಕಾಣಲು ತಿಳಿಸಿ ಹೊರಟು ಹೋದರು. ಧಿಢೀರ್ ಎಂದು ನಡೆದುಹೋದ ಈ ಸಂಭವದಿಂದ ಶೀನು ತಬ್ಬಿಬ್ಬಾದ. ಅವನಿಗೆ ಒಳಗೇ ಅಚ್ಚರಿ ಮತ್ತು ಭಯ ಶುರುವಾಯಿತು. ಏನಾಯಿತು, ಎಲ್ಲ ಸರಿಯಾಗಿಯೇ ಇದೆಯಲ್ಲ, ಇದೇನಪ್ಪಾ ಗ್ರಹಚಾರ ಎಂದುಕೊಂಡು ತನ್ನ ಮೇಲಧಿಕಾರಿ ನಾಯರ್ ಅವರ ಕೋಣೆಗೆ ಹೋದ.

ಶೀನುವನ್ನು ಕಂಡ ನಾಯರ್ ಅವನಿಗೆ ಕುಳಿತುಕೊಳ್ಳುವಂತೆ ಹೇಳಿದರು. ಆಗಲೇ ಅವನಿಗೆ ಅರ್ಧ ಸಮಾಧಾನವಾಯಿತು. ಏನಾದರೂ ತಪ್ಪಾಗಿದ್ದರೆ ಬಯ್ಯುತ್ತಾರೆ, ಕುಳಿತುಕೊಳ್ಳುವಂತೆ ಹೇಳುವುದಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಂಡ. ನಾಯರ್ ಶೀನುವಿನೊಂದಿಗೆ ಸಾವಧಾನದಿಂದಲೇ ಮಾತನಾಡಲು ಪ್ರಾರಂಭ ಮಾಡಿದರು. ವಿಷಯ ಏನಾಗಿತ್ತು ಅಂದರೆ, ಅಂದು ಒಳಕ್ಕೆ ಬರುತ್ತಿದ್ದ ಸಂದೇಶಗಳು ದಿನಕ್ಕಿಂತ ಹೆಚ್ಚಿತ್ತು. ಸಂದೇಶಗಳನ್ನು ಸ್ವೀಕರಿಸುವಾಗ ಬಹಳ ಎಚ್ಚರಿಕೆಯಿಂದ ಸ್ವೀಕರಿಸಬೇಕು, ಮತ್ತು ತಪ್ಪು ಸಂದೇಶಗಳು ರವಾನೆಯಾಗಿಬಿಟ್ಟರೆ ಅನಾಹುತಗಳಾಗಿ ಬಿಡುತ್ತಿದ್ದವು. ಈ ಕಾರಣಕ್ಕಾಗಿ ಶೀನು ಸಂದೇಶಗಳನ್ನು ಬಹಳ ಸಾವಧಾನವಾಗಿ ಸ್ವೀಕರಿಸುತ್ತಿದ್ದ. ಆದರೆ ಮತ್ತೊಂದು ಕೇಂದ್ರದಿಂದ ಸಂದೇಶಗಳನ್ನು ಕಳುಹಿಸುತ್ತಿದ್ದ ಉದ್ಯೋಗಿ, ಸಂದೇಶ ಸ್ವೀಕೃತಿ ನಿಧಾನವಾದುದಕ್ಕೆ  Morse codeನಲ್ಲಿಯೇ, ಶೀನುವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆದರೆ ಶೀನು ಅದನ್ನು ಅಷ್ಟಾಗಿ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಅದನ್ನು ಉದಾಸೀನ ಮಾಡಿ ಮುಂದಿನ ಕೆಲಸ ಮಾಡ ತೊಡಗಿದ್ದಾನೆ. ಆದರೆ ಮೇಲಧಿಕಾರಿಯಾದ ನಾಯರ್ ಇದೆನ್ನೆಲ್ಲಾ ತನ್ನ ಕೊಠಡಿಯಿಂದಲೇ ಗಮನಿಸಿದ್ದಾರೆ. ತಂತೀ ಕಛೇರಿಯಲ್ಲಿ ಜವಾಬ್ದಾರಿ ಕೆಲಸದಲ್ಲಿರುವ ಉದ್ಯೋಗಿಗಳು, ಕಛೇರಿ ನಿಯಮವನ್ನು ಮೀರಿ ಹೀಗೆ ಕೀಳು ಮಟ್ಟದಲ್ಲಿ ವರ್ತಿಸುವುದು ಸರಿಯಲ್ಲ. ಇದರೆ ಬಗ್ಗೆ ಬಹಳ ಖಂಡಿತವಾಗಿದ್ದ ನಾಯರ್ ಸಹಜವಾಗಿಯೇ ಕೆರಳಿದ್ದರು. ಅದಕ್ಕಾಗಿಯೇ ಅವರು ಶೀನುವಿನ ಕೆಲಸದ ಸ್ಥಳಕ್ಕೇ ಬಂದು, ಆ ಉದ್ಯೋಗಿ ಯಾರು, ಯಾವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬೆಲ್ಲಾ ವಿವರಗಳನ್ನು ತಂತೀ ಮುಖಾಂತರವೇ ಪತ್ತೆಮಾಡಿ, ಆ ತಂತೀ ಕಛೇರಿ ಮುಖ್ಯಸ್ಥರಿಗೆ ಸಂದೇಶ ಕಳುಹಿಸಿ, ಅವನನ್ನು ಆ ತಕ್ಷಣವೇ ಅನುಚಿತ ವರ್ತನೆಗಾಗಿ ಅಮಾನತ್ತಿನಲ್ಲಿ ಇಡುವಂತೆ ನಿರ್ದೇಶನ ನೀಡಿದ್ದರು. ನಾಯರ್ ಶೀನುವನ್ನು ಎಬ್ಬಿಸಿ ಅವನ ಜಾಗದಿಂದಲೇ ತಾನೇ ಈ ಸಂದೇಶಗಳನ್ನು ರವಾನೆ ಮಾಡಿದ್ದು ಇದಕ್ಕಾಗಿಯೇ. “ಅವಾಚ್ಯ ಶಬ್ದಗಳಿಂದ ನಿನ್ನನ್ನು ನಿಂದಿಸಿದರೂ ನೀನು ಏಕೆ ಸುಮ್ಮನಿದ್ದೆ?” ಎಂದು ಶೀನುವನ್ನು ಕೇಳಿದ್ದಾರೆ ನಾಯರ್. ಅದಕ್ಕೆ ಶೀನು “ಅದೇನು ಅಷ್ಟು ಮುಖ್ಯವಲ್ಲ, ನನಗೆ ಮಾಡಬೇಕಾದ ಕೆಲಸ ತುಂಬಾ ಇತ್ತು, ಅದಕ್ಕೆ ಗಮನ ಹರಿಸದೆ, ಇದನ್ನೆಲ್ಲ ಉದಾಸೀನ ಮಾಡಿದೆ” ಎಂದ.

ಶೀನುವಿನ ಈ ಮನೋಭಾವನೆಯನ್ನು ನಾಯರ್ ಬಹಳವಾಗಿ ಮೆಚ್ಚಿಕೊಂಡು ಬಿಟ್ಟರು. ಅವನ ಕಾರ್ಯ ಕೌಶಲ್ಯವನ್ನು ಅವರಾಗಲೇ ಮನಗಂಡಿದ್ದರು. ಇದೆಲ್ಲದರಿಂದ ಸುಪ್ರೀತರಾದ ನಾಯರ್ ಶೀನುವಿಗೆ ತಕ್ಷಣ, ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ್ದಾನೆ ಎಂದು ಸರ್ಟಿಫಿಕೇಟ್ ನೀಡಿಬಿಟ್ಟರು. ಬೆಂಗಳೂರಿನಲ್ಲಿರುವ Postal Senior Superintendent ರವರಿಗೂ ಸಹ ತಂತೀ ಸಂದೇಶ ಕೊಟ್ಟು ಶೀನುವಿನ ಬಗ್ಗೆ ತಿಳಿಸಿಬಿಟ್ಟರು. ಶೀನುವಿಗೆ, ಇನ್ನು ನೀನು ಬೆಂಗಳೂರಿಗೆ ಹೋಗಿ, Senior Superintendentರವರನ್ನು ಕಂಡು ಕೆಲಸ ಖಾಯಂ ಆದುದಕ್ಕೆ ಪತ್ರ ಪಡೆದು, ಅವರು ಹೇಳಿದ ಜಾಗದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಹೇಳಿಬಿಟ್ಟರು.

ಶೀನುವಿಗಂತೂ ಈ ಅನಿರೀಕ್ಷಿತ ಘಟನೆಯಿಂದ ಏನು ಮಾಡಲೂ ತೋಚದಂತಾಗಿ ಬಿಟ್ಟಿತು. ಆರು ತಿಂಗಳ Theory ತರಬೇತಿ ಮೂರು ತಿಂಗಳಲ್ಲಿಯೇ ಮುಗಿಯಿತು. ಇನ್ನು ಮಿಕ್ಕ ಆರು ತಿಂಗಳುಗಳ ಕಾಲಾವಧಿ ಕೇವಲ ಒಂದುವರೆ ತಿಂಗಳಿನಲ್ಲಿಯೇ ಮುಗಿಯಿತಲ್ಲ, ಅದಲ್ಲದೆ ಕೆಲಸ ಖಾಯಂ, ಪೂರ್ತಿ ಸಂಬಳ, ಇನ್ನೇನು ಬೇಕು, ಹಿರಿಹಿರಿ ಹಿಗ್ಗಿ ಹೀರೇಕಾಯಿ ಆದ ಶೀನು.

ಇಂಥಾ ಸಿಹಿಸುದ್ದಿಯನ್ನು ತನಗೆ ಅತ್ಯಂತ ಆಪ್ತರಾದ ತನ್ನ ಸೋದರಮಾವನಿಗೆ ತಕ್ಷಣ ತಿಳಿಸುವ ಮನಸ್ಸಾಯಿತು ಶೀನುವಿಗೆ. ತಕ್ಷಣ ಅವರಿಗೆ ತಿಳಿಸುವ ಕಾತರದಿಂದ, ಅಲ್ಲಿಯೇ ತಂತೀ ಕಛೇರಿಯಿಂದ ನನ್ನ ಅಪ್ಪನಿಗೆ ಒಂದು ತಂತೀ ಸಂದೇಶ ಕಳುಹಿಸಿಬಿಟ್ಟ, “Job confirmed, Letter follows” ಎಂದು. ಹೀಗೆ ನನ್ನ ಅಪ್ಪನಿಗೆ ತಂತೀ ಸಂದೇಶ ಕಳುಹಿಸಿ ಕೆಲಸಕ್ಕೆ ಹಾಜರಾಗಲು ಬೆಂಗಳೂರಿಗೆ ಹೊರಟುಬಿಟ್ಟ.

ಇಲ್ಲಿಯವರೆಗಿನ ಘಟನೆಗಳು ಸರ್ವೇಸಾಮಾನ್ಯ ಎಂದು ಕೊಂಡರೂ, ಮುಂದೆ ಈ ತಂತೀ ಸಂದೇಶ ತಂದ ತಾಪತ್ರಯಗಳಿಗೆ ಮುನ್ನುಡಿಯಾಯಿತು.

ಹಿಂದೆ ತಿಳಿಸಿದಂತೆ ನನ್ನ ಅಪ್ಪ ತನ್ನ ಮಾಸ್ತರಿಕೆ ಕೆಲಸವನ್ನು ರಾಜೀನಾಮೆ ಮಾಡಿ ನನ್ನ ಸ್ವಗ್ರಾಮದಲ್ಲಿ ಒಂದು ದಿನಸಿ ಅಂಗಡಿ ಪ್ರಾರಂಭ ನಡೆಸಿದ್ದ ಸಮಯವದು. ಪ್ರತಿ ದಿನ ನನ್ನೂರಿನಿಂದ 8 ಕಿ.ಮೀ. ದೂರದಲ್ಲಿದ್ದ ತಾಲ್ಲೂಕು ಕೇಂದ್ರವಾದ ಚಾಮರಾಜನಗರಕ್ಕೆ ಸೈಕಲ್ಲು ತುಳಿದು ಕೊಂಡು ಬಂದು, ಅಲ್ಲಿ ದಿನಸಿ ಪದಾರ್ಥಗಳನ್ನು ಖರೀದಿ ಮಾಡಿ, ಅಷ್ಟೆಲ್ಲ ಮೂಟೆಗಳನ್ನು ತನ್ನ ಸೈಕಲ್ಲಿಗೆ ಕಟ್ಟಿಕೊಂಡು ಮತ್ತೆ 8 ಕಿ.ಮೀ. ಸೈಕಲ್ಲು ತುಳಿದು ತನ್ನ ಊರಿಗೆ ವಾಪಸ್ಸಾಗುತ್ತಿದ್ದರು. ಪ್ರತಿದಿನಾ ತಪ್ಪದೇ ಚಾಮರಾಜನಗರಕ್ಕೆ ಬರುತ್ತಿದ್ದರು. ಈಗಿನಂತೆ ಜನಸಂಖ್ಯಾಸ್ಫೋಟದಿಂದ ತಲ್ಲಣಿಸುವ ಕಾಲವಲ್ಲ ಅದು, ಎಲ್ಲರೂ ಸರ್ವೇ ಸಾಮಾನ್ಯವಾಗಿ ಒಬ್ಬರಿಗೆ ಒಬ್ಬರು ಪರಿಚಿತರೇ ಆಗಿದ್ದರು.

ನನ್ನ ಅಪ್ಪ ನಗರಕ್ಕೆ ಬಂದರೆ ಅವರು ಯಾವ ಸಮಯದಲ್ಲಿ ಯಾವ ಜಾಗದಲ್ಲಿರುತ್ತಾರೆ ಎಂಬೆಲ್ಲ ವಿವರಗಳು ನಗರದ ಪೋಸ್ಟ್ ಮಾಸ್ಟರಿಗೆ, ಎಲ್ಲ ಪೋಸ್ಟ್ ಮ್ಯಾನ್ಗಳಿಗೆ ತಿಳಿದಿತ್ತು. ನನ್ನ ಹಳ್ಳಿಯ ವಿಳಾಸಕ್ಕೆ ತಂತೀ ಸಂದೇಶ ಬಂದರೆ, ಆ ಸಂದೇಶವನ್ನು ಲಕೋಟೆಯಲ್ಲಿ ಹಾಕಿ 8 ಕಿ. ಮೀ. ದೂರ ಸೈಕಲ್ಲು ತುಳಿದುಕೊಂಡು ಬರಬೇಕು. ಅಷ್ಟು ದೂರ ಸೈಕಲ್ಲು ತುಳಿಯ ಬೇಕಲ್ಲ ಎಂದುಕೊಂಡ ಅಂಚೆ ಪೇದೆ, ನನ್ನ ಅಪ್ಪನಿಗೆ ಶೀನು ಕಳುಹಿಸಿದ ತಂತಿ ಸಂದೇಶವನ್ನು ಹಿಡಿದುಕೊಂಡು ನಗರದಲ್ಲಿ ಆ ಸಮಯದಲ್ಲಿ ನನ್ನ ಅಪ್ಪ ಎಲ್ಲಿರುತ್ತಾರೆ ಎಂದು ಪತ್ತೆ ಮಾಡಿದ. ಸೈಕಲ್ಲುಗಳನ್ನು ಮತ್ತು ಅದರ ಬಿಡಿಭಾಗಗಳನ್ನು ಮಾರಾಟ ಮಾಡುವ ಸೈಕಲ್ ಅಂಗಡಿ ರಾಜಅಯ್ಯಂಗಾರ್ ಅಂಗಡಿಯಲ್ಲಿ ಆಗ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದರು ನನ್ನ ಅಪ್ಪ. ಅವರನ್ನು ಅಲ್ಲಿಯೇ ಕಂಡು, ಅವರಿಗೆ ಬಂದಿದ್ದ ತಂತೀ ಸಂದೇಶವನ್ನು ತಲುಪಿಸಿ ಅವರಿಂದ ರುಜು ಪಡೆದು ಪೋಸ್ಟ್ ಮ್ಯಾನ್ ಹೊರಟುಹೋದ.

ಹೀಗೆ ತಂತಿ ಸಂದೇಶವನ್ನು ಪಡೆದುಕೊಂಡ ನನ್ನ ಅಪ್ಪ ಅದನ್ನು ಬಿಡಿಸಿ ಓದುವ ಗೋಜಿಗೇ ಹೋಗಲಿಲ್ಲ. “ಆಗೋಯ್ತು, ರಾಜಯ್ಯಂಗಾರೇ, ನನ್ನ ತಾಯಿ ತೀರಿಕೊಂಡು ಬಿಟ್ಲು. ದೂರದ ತಿಪಟೂರಿನಲ್ಲಿ ನನ್ನ ತಮ್ಮನ ಮನೆಯಲ್ಲಿದ್ದ ಅವಳನ್ನು ಈಗ ಹೇಗೆ ಹೋಗಿ ನೋಡಲಿ? ಊರಿಗೆ ಹೋಗಿ ಹೆಂಡತಿ ಮಕ್ಕಳನ್ನು ಕರಕೊಂಡು ಹೋಗಬೇಕಲ್ಲ” ಎಂದು ಪ್ರಲಾಪಿಸ ತೊಡಗಿಬಿಟ್ಟರು.

ಇದನ್ನು ಕೇಳಿದ ರಾಜ ಅಯ್ಯಂಗಾರ್ ಸಹ ನನ್ನ ಅಪ್ಪನನ್ನು ಸಮಾಧಾನ ಮಾಡಲು ಶುರುಮಾಡಿದರು. ಅಲ್ಲಿದ್ದ ಇತರರೂ ಸಹ  ನನ್ನ ಅಪ್ಪನನ್ನು ಸ್ವಾಂತನಗೊಳಿಸಲು ಆರಂಭಿಸಿಬಿಟ್ಟರು. ಆದರೆ ಸ್ವಾರಸ್ಯ ಎಂದರೆ, ಅಲ್ಲಿದ್ದವರಲ್ಲಿ ಒಬ್ಬರಾದರೂ ಸಹ ಆ ತಂತಿ ಯಾರಿಂದ ಬಂತು, ಎಲ್ಲಿಂದ ಬಂತು, ಅದರಲ್ಲಿ ಅಂಥಾದ್ದು ಏನಿದೆ ಎಂದು ವಿಚಾರಿಸುವ ಗೋಜಿಗೇ ಹೋಗಲಿಲ್ಲ. ಪೋಸ್ಟ್ ಮ್ಯಾನ್ ಬಂದ, ತಂತೀ ಕೈಗೆ ಕೊಟ್ಟ, ಹೋದ ಅಷ್ಟೆ. ಅಲ್ಲಿದ್ದವರೆಲ್ಲ ತಂತಿ ಯಾರದೋ ಸಾವಿನ ಸುದ್ದಿಯನ್ನೇ ಹೊತ್ತು ತಂದಿದೆ ಎಂದು ನಿಶ್ಚಯ ಮಾಡಿಕೊಂಡರು ಎಂದು ಅನಿಸುತ್ತದೆ. ಇಷ್ಟಲ್ಲದೆ ನನ್ನ ತಾಯಿ ತಿಪಟೂರಿನಲ್ಲಿ ತೀರಿಕೊಂಡು ಬಿಟ್ಟಳು ಎಂದು ನನ್ನ ಅಪ್ಪ ಗೋಳಾಡಿದ್ದನ್ನು ಕೇಳಿಸಿಕೊಂಡಿದ್ದಾರೆ. ಮತ್ತೇಕೆ ಬಾಕಿ ವಿವರ. ರಾಜ ಅಯ್ಯಂಗಾರ್ ಸಹ ತನ್ನ ಸೈಕಲ್ ಷಾಪಿನ ಹತ್ತಿರದಲ್ಲಿಯೇ ಇದ್ದ ದಾಸಪ್ಪನ ಛತ್ರಕ್ಕೆ ಹೋಗಿ ಅಲ್ಲಿ ಮದುವೆಗೆ ಎಂದು ನೆಂಟರನ್ನು ದೂರದ ಊರಿನಿಂದ ಕರೆತಂದಿದ್ದ ಒಂದು ಬಾಡಿಗೆ ಕಾರಿನ ಡ್ರೈವರನ್ನು ಸಂಪರ್ಕಿಸಿದ್ದಾರೆ. ಅಂದೆಲ್ಲ ಮದುವೆಗೆ ಎಂದು ನೆಂಟರು ಬಂದರೆ, ಅವರು ಹೊರಡಲು ಎರಡರಿಂದ ಮೂರು ದಿನಗಳಾಗುತ್ತಿತ್ತು. ಈಗಿನ ಹಾಗೆ, ಹೀಗಿ ಬಂದು, ಹಾಗೆ ಹಾರಿಹೋಗುವ ಪರಿಪಾಠವಿರಲಿಲ್ಲ.

“ಸರಿ ಈಗ ನೀನು ಇಲ್ಲಿಂದ ಹೊರಡಲು ಹೇಗೂ 3 ದಿನ ಬೇಕು, ಈಗ ಒಂದು ತುರ್ತು, ಅದೂ ಸಾವಿನ ಸಮಾಚಾರ. ಹೇಗಾದರೂ ಮಾಡಿ ಇವರನ್ನು ತಿಪಟೂರಿಗೆ ತಲುಪಿಸಿ ಬಿಡು, ಬಾಡಿಗೆ ಎಷ್ಟು ತಗೋತೀಯ” ಎಂದು ಆ ಕಾರಿನ ಡ್ರೈವರನ್ನು ವಿಚಾರಿಸಿದ್ದಾರೆ ರಾಜ ಅಯ್ಯಂಗಾರ್. ಅವನು ಸ್ವಲ್ಪ ಹಿಂದೂ ಮುಂದೂ ಯೋಚಿಸಿ “ಸರಿ ಬುದ್ದಿ, ಇಪ್ಪತೈದು ರೂಪಾಯಿ ಕೊಡಿಸಿಬಿಡಿ, ನಾನು ರೆಡಿ” ಅಂದಿದ್ದಾನೆ. ಸಧ್ಯ ಹೇಗೂ ಒಂದು ಏರ್ಪಾಟಾಯ್ತಲ್ಲ ಎಂಬ ಸಮಾಧಾನದಿಂದ, ನನ್ನ ಅಪ್ಪನಿಗೆ ಈ ವಿಷಯ ತಿಳಿಸಿದ್ದಾರೆ ರಾಜ ಅಯ್ಯಂಗಾರ್. ಸರಿ ಶೋಕ ತಪ್ತರಾಗಿದ್ದ ನನ್ನ ಅಪ್ಪ, ಈಗಲೇ ಊರಿಗೆ ಹೋಗಿ ನನ್ನ ಹೆಂಡತಿಯನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಸೈಕಲ್ಲು ತುಳಿದುಕೊಂಡು ಹೊರಟೇ ಬಿಟ್ಟರು. ಅಂದು ಅವರು ಗಮನಿಸಬೇಕಾಗಿದ್ದ ವ್ಯಾಪಾರ, ಖರೀದಿ ಎಲ್ಲಾ ಅಲ್ಲಿಗೇ ಬಿಟ್ಟಿದ್ದಾಯಿತು.

ಬಹಳ ಸುಸ್ತಾಗಿ, ದುಗುಡ ದುಮ್ಮಾನಗಳಿಂದ ಊರಿಗೆ ಬಂದರು ನನ್ನ ಅಪ್ಪ. ಸೈಕಲ್ಲನ್ನು ಜಗಲಿಗೆ ಆನಿಸಿ ಇಟ್ಟು, ಅಲ್ಲೇ ಕುಳಿತುಕೊಂಡು, ನನ್ನ ತಾಯಿಯನ್ನು ಕೂಗಿ ಕರೆದರು. ಒಳಗಿದ್ದ ನನ್ನ ಅಮ್ಮ, ಇದೇನಿದು, ಮನೆ ಒಳಕ್ಕೇ ಬಾರದೆ ಜಗಲಿಯಲ್ಲಿಯೇ ಕುಳಿತಿಕೊಂಡು ಹೀಗೇಕೆ ಕೂಗಿ ಕರೆಯುತ್ತಿದ್ದಾರೆ ಎಂದುಕೊಂಡು ಜಗಲಿಯ ಬಳಿ ಬಂದರು ನನ್ನ ಅಮ್ಮ. ಅವರನ್ನು ಕಂಡ ನನ್ನ ಅಪ್ಪ “ಲೇ ರೆಡಿ ಆಗು, ಈಗಲೇ ತಿಪಟೂರಿಗೆ ಹೋಗಬೇಕು, ನನ್ನ ತಾಯಿ ತೀರಿಕೊಂಡು ಬಿಟ್ಟಿದ್ದಾಳೆ” ಎಂದರು.

ಇದನ್ನು ಕೇಳಿ ದಿಗಿಲುಗೊಂಡ ನನ್ನ ಅಮ್ಮ “ಯಾರು ಹೇಳಿದರು, ಯಾವಾಗ ಹೋಗಿಬಿಟ್ಟರು, ಕಾಗದ ಬಂತೆ? ಏನಾಗಿತ್ತು ಅವರಿಗೆ? ಅಂಥದ್ದೇನೂ ಆಗಿರಲಿಲ್ಲವಲ್ಲ ಅವರಿಗೆ” ಎಂದರು.

“ಇನ್ನೇನು ಹೇಳೋದು, ಎಲ್ಲ ಮುಗಿದು ಹೋಯಿತು. ನೋಡು ತಂತೀ ಬಂದಿದೆ, ನಡೀ ಬೇಗ” ಎಂದರು. ತನ್ನ ಷರ್ಟಿನ ಜೇಬಿನಲ್ಲಿ ತಣ್ಣಗೆ ಕುಳಿತಿದ್ದ ಆ ತಂತಿಯನ್ನು ತೆಗೆದು ನನ್ನ ಅಮ್ಮನಿಗೆ ಕೊಟ್ಟರು.

ಲಕೋಟೆಯನ್ನು ತೆಗೆದುಕೊಂಡ ನನ್ನ ಅಮ್ಮನಿಗೆ ಅದನ್ನು ನೋಡಿ ಸ್ವಲ್ಪ ಅಚ್ಚರಿಯಾಯಿತು. ಏಕೆಂದರೆ ಆ ಲಕೋಟೆಯನ್ನು ಒಡೆದೇ ಇರಲಿಲ್ಲ. ಅಂಟಿಸಿದ ಹಾಗೇ ಇದೆ. ಇದ್ಯಾವ ರೀತಿ ತಂತಿ, ಒಡೆದೇ ಇಲ್ಲವಲ್ಲ ಎಂದುಕೊಂಡು ಆ ಲಕೋಟೆಯನ್ನು ಬಿಡಿಸಿ ಅದರಲ್ಲಿದ್ದ ಒಕ್ಕಣೆಯನ್ನು ಓದಿಕೊಂಡರು. ಅದರಲ್ಲಿದ್ದ ಸಂದೇಶವನ್ನು ಓದಿಕೊಂಡ ನನ್ನ ಅಮ್ಮನಿಗೆ, ನನ್ನ ಅಪ್ಪನ ಈ ನಡವಳಿಕೆಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

ಸ್ವಲ್ಪ ಕೋಪದ ಧ್ವನಿಯಲ್ಲಿ “ಯಾರು ನಿಮಗೆ ಹೇಳಿದ್ದು, ಅತ್ತೆ ತೀರಿಕೊಂಡರು ಅಂತ. ಬಂದ ತಂತಿಯನ್ನು ಓದದೆ ಹೀಗೆ ಅವಾಂತರ ಸೃಷ್ಟಿಸಿಬಿಟ್ಟರಲ್ಲ. ಇದು ಶೀನು ಕಳಿಸಿರೋ ತಂತಿ. ಅವನ ಕೆಲಸ ಖಾಯಂ ಆಗಿದೆ ಅಂತ ತಿಳಿಸಿದ್ದಾನೆ, ನೀವೂ, ನಿಮ್ಮ ಅವಾಂತರವೂ ಸಾಕು. ಒಳಗೆ ಬನ್ನಿ, ಕೈಕಾಲು ತೊಳೆದು ತಿಂಡಿ ತಿನ್ನಿ” ಅಂತ ಲಘುವಾಗಿ ಗದರಿಬಿಟ್ಟರು.

ಇದನ್ನು ಕೇಳಿದ ನನ್ನ ಅಪ್ಪನ reaction ಮಾತ್ರ ಬಹಳ ಸ್ವಾರಸ್ಯಕರ. ತನ್ನ ಗಾಬರಿಯಿಂದ ಆದ ಅವಾಂತರಗಳನ್ನು ಒಪ್ಪಿಕೊಳ್ಳದೇ “ಆ ಅಯೋಗ್ಯ ಶೀನು, ಈ ರೀತಿ ತಂತಿ ಕೊಟ್ಟು, ನನ್ನ ತಾಯಿಯನ್ನು ಕೊಂದು ಬಿಟ್ಟನಲ್ಲ” ಎಂದು ಉದ್ಗಾರ ಮಾಡುವುದೇ. ಕಡೆಗೂ ತನ್ನಿಂದ ಆದ ಪ್ರಮಾದವನ್ನು ಒಪ್ಪಿಕೊಳ್ಳಲೇ ಇಲ್ಲ.

ಇಷ್ಟೆಲ್ಲ ಗೊಂದಲ ಸೃಷ್ಟಿಸಿದ ಆ ತಂತಿಯ ಮೂಲ ಪುರುಷ ಶೀನು, ಸುಮಾರು ಎರಡು ತಿಂಗಳಿನ ನಂತರ ನನ್ನೂರಿಗೆ ಬರಬೇಕಾಯಿತು. ಎಂದಿನಂತೆ ಚಾಮರಾಜನಗರದವೆರಗೆ ಬಂದು ಅಲ್ಲಿಂದ ನನ್ನೂರಿಗೆ ಅದೇ ರಾಜಅಯ್ಯಂಗಾರ್ ಸೈಕಲ್ ಷಾಪಿನಲ್ಲಿ ಸೈಕಲನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಂದ. ತಾನು ಕಳುಹಿಸಿದ ತಂತಿ ಇಂಥ ಅನಾಹುತಕ್ಕೆ ಕಾರಣವಾಯಿತು ಎಂಬ ಸಂಗತಿ ಶೀನುವಿಗೆ ತಿಳಿಯದು. ಅದಲ್ಲದೆ ಶಾಲಾ ಮಾಸ್ತರಾಗಿದ್ದ ತನ್ನ ಸೋದರಮಾವ ತಂತಿಯನ್ನು ಏನಿದೆ ಎಂದು ಓದದೇ ಹೀಗೆಲ್ಲಾ ಅವಾಂತ ಸೃಷ್ಟಿಸುತ್ತಾರೆ ಎಂದು ಅವನಿಗೆ ತಾನೆ ಹೇಗೆ ತಿಳಿಯಬೇಕು.

ಸೈಕಲ್ಲನ್ನು ಬಾಡಿಗೆಗೆ ಕೇಳಲು ಬಂದ ಶೀನುವನ್ನು ಕಂಡ ರಾಜ ಅಯ್ಯಂಗಾರಿಗೆ ಎರಡು ತಿಂಗಳ ಹಿಂದೆ ನಡೆದ ಅವಾಂತರವೆಲ್ಲ ಜ್ಞಾಪಕೆಕ್ಕೆ ಬಂತು “ಅಲ್ಲಯ್ಯ ಶೀನು, ನೀನು ಹೀಗೆ ಒಂದು ತಂತೀ ಕಳುಹಿಸಿ ನಿನ್ನ ಮಾವನನ್ನು ಎಷ್ಟು ಗಾಬರಿ ಮಾಡಿಬಿಟ್ಟೆಯಲ್ಲ” ಎಂದು ನಡೆದಿದ್ದನ್ನು ಸ್ಥೂಲವಾಗಿ ಶೀನುವಿಗೆ ತಿಳಿಸಿದರು.

ಇದನ್ನು ಕೇಳಿದ ಶೀನುವಿಗೆ, ಮುಂಗೋಪಿಯಾದ ನನ್ನ ಮಾವ ಊರಲ್ಲಿ ನನ್ನನ್ನು ನೋಡಿದ ಕೂಡಲೇ ಏನು ಮಾಡಿಬಿಡುತ್ತಾರೋ ಎಂಬ ಭಯ ಶುರು ಆಯಿತು. ಈ ಅಳುಕಿನಿಂದಲೇ, ನಿಧಾನವಾಗಿ ಸೈಕಲ್ ತುಳಿದುಕೊಂಡು ನನ್ನೂರನ್ನು ತಲುಪಿದ ಶೀನು, ನನ್ನ ಮನೆಯ ಹತ್ತಿರ ಬಂದದ್ದಾಯಿತು. ನೋಡಿದರೆ ಅಲ್ಲೇ ಜಗಲಿಯ ಮೇಲೆಯೇ ಕುಳಿತಿದ್ದಾರೆ ನನ್ನ ಅಪ್ಪ. ಅವರನ್ನು ನೋಡಿದ ಶೀನುವಿಗೆ ಸಿಂಹ ದರ್ಶನವಾದಂತೆ ಆಗಿ ಪುಕ್ಕಲು ಶುರು ಆಯಿತು. ಏತಕ್ಕೂ ಸ್ವಲ್ಪ ಜಾಗ್ರತೆಯಿಂದ ಇರೋಣ ಅಂದುಕೊಂಡು, ಸೈಕಲ್ಲನ್ನು ಜಗಲಿಯ ಹತ್ತಿರದಲ್ಲಿ ನಿಲ್ಲಿಸಿ, ನನ್ನ ಅಪ್ಪನಿಂದ ಸ್ವಲ್ಪ ದೂರದಲ್ಲಿಯೇ ನಿಂತುಕೊಂಡು, “ಏನು ಮಾವ” ಎಂದ ಮೆಲ್ಲಗೆ.

ಅವನನ್ನು ಕಂಡ ನನ್ನ ಅಪ್ಪ “ಏಯ್ ಅಯೋಗ್ಯ, ನಿನಗೆ ಒಂಭತ್ತು ಕಾಸಿಗೆ ಗತಿ ಇರಲಿಲ್ಲವೇ, ಒಂದು ಕಾರ್ಡು ಗೀಚಿದ್ದರೆ ಆಗಿತ್ತು, ಯಾರೋ ನಿನಗೆ ತಂತಿ ಕೊಡೋಕೆ ಹೇಳಿದ್ದು” ಅಂತ ಜೋರು ಧ್ವನಿಯಲ್ಲಿ ಗದರಲು ಪ್ರಾರಂಭಿಸಿಬಿಟ್ಟರು. ಅಷ್ತರಲ್ಲಿ ಒಳಗಿದ್ದ ನನ್ನ ಅಮ್ಮ, ಇದೇನು ಗಲಾಟೆ, ಯಾರ ಮೇಲೆ ರೇಗಾಡುತ್ತಿದ್ದಾರೆ, ಎಂದುಕೊಂಡು ಜಗಲಿಯ ಬಳಿಗೆ ಬಂದರು.

ಅಲ್ಲಿ ದೂರದಲ್ಲಿ ಅಪರಾಧಿಯಂತೆ ಮುದುರಿಕೊಂಡು ನಿಂತಿದ್ದ ಶೀನುವನ್ನೂ ಜಗಲಿಯ ಮೇಲೆ ರೌದ್ರಾವತಾರಿಯಾಗಿ ಕುಳಿತಿದ್ದ ನನ್ನಪ್ಪನನ್ನೂ ಕಂಡರು. ಆ ತಕ್ಷಣ ಅವರಿಗೆಲ್ಲಾ ಅರ್ಥವಾಯಿತು. ನನ್ನ ಅಪ್ಪನ ಸ್ವಭಾವವನ್ನು ಚೆನ್ನಾಗಿ ಅರಿತಿದ್ದ ನನ್ನ ಅಮ್ಮ “ನೀವು ಮಾಡಿದ ಅವಾಂತರಕ್ಕೆ ಅವನನ್ನು ಯಾಕೆ ರೇಗುತ್ತೀರಿ. ಪಾಪ ಅವನೇನೂ ಮಾಡಿಲ್ಲ. ಎಲ್ಲ ನಿಮ್ಮ ಗಾಬರಿಯಿಂದಲೇ ಆದದ್ದು. ಲೋ ಶೀನು, ಬಾರೋ ಒಳಗೆ, ದೂರದಿಂದ ಬಂದಿದ್ದೀಯ ಕೈಕಾಲು ತೊಳಕೋ, ಊಟ ಮಾಡುವೆಯಂತೆ” ಎಂದು ಹೇಳಿ ಶೀನುವನ್ನು ಒಳಕ್ಕೆ ಕರೆದುಕೊಂಡು ಹೋದರು. ಸಧ್ಯ ಬದುಕಿದೆಯಾ ಬಡಜೀವವೇ ಎಂದುಕೊಂಡು ಶೀನು ಹುಲಿ ಬಾಯಿಂದ ತಪ್ಪಿಸಿ ಕೊಂಡವನಹಾಗೆ ಸರಕ್ಕನೆ ಮನೆ ಒಳಕ್ಕೆ ಹೋಗಿಬಿಟ್ಟ. ಮುಂದಿನ ದಿನಗಳಲ್ಲಿ ವಾತಾವರಣ ತಿಳಿಯಾಗಿ ನನ್ನಪ್ಪನ ಈ ಗಡಿಬಿಡಿ ಸಮಾಚಾರ ಬಹಳಷ್ಟು ದಿನಗಳು ಎಲ್ಲರಿಗೂ ಬಹಳ ಮನರಂಜನೆಯ ವಿಷಯವಾಯಿತು.

ಇದಾಗಿ ಎಷ್ಟೋ ವರ್ಷಗಳು ಸಂದಿದ್ದರೂ ಈಗಲೂ ಈ ತಂತಿ ತಂದ ತಾಪವನ್ನು ಮೆಲುಕು ಹಾಕಿದಾಗ ನಗದೇ ಇರಲು ಸಾಧ್ಯವಿಲ್ಲ.

Rating
No votes yet