ಯುಗ ಯುಗಾದಿ ಕಳೆದರೂ......

Submitted by Shashikant P Desai on Mon, 03/31/2014 - 00:12

 

     ಬದುಕಿನಲ್ಲಿ ಸದಾ ಸುಖವನ್ನೇ ಬಯಸುವ,ಸಿಹಿಯನ್ನೇ ಅರಸುವ,ಗೆಲುವನ್ನೇ ಅಪೇಕ್ಷಿಸುವ ನಾವುಗಳು ಅವುಗಳ ವೈರುಧ್ಯವನ್ನು ಸರ್ವಥಾ ಒಪ್ಪುವುದಿಲ್ಲಾ ಹಾಗೂ ಇಷ್ಟ ಪಡುವುದಿಲ್ಲಾ. ಈ ಸಿದ್ಧಾಂತವೇ ನಮ್ಮನ್ನು ಮತ್ತಷ್ಟು ಕಷ್ಟ, ನಿರಾಶೆಗಳಿಗೆ ಮತ್ತು ಮುಖ್ಯವಾಗಿ ಖಿನ್ನತೆಗೆ ದೂಡಿ ಬದುಕನ್ನು ಬರ್ಬರವಾಗಿಸುತ್ತದೆ. ಕೇವಲ ಬದುಕಿನ ಒಂದು ಮುಖವನ್ನು ಪ್ರೀತಿಸುವ ನಾವು ಇನ್ನೊಂದರ ಬಗ್ಗೆ ನಿಕೃಷ್ಟ ಭಾವವನ್ನು ತಾಳುತ್ತೆವೆ. ನಮ್ಮ ಬದುಕು ಹೇಗೆಂದರೆ, ಇಂದು ಅಂಗಡಿಗಳಲ್ಲಿ, “ಒಂದನ್ನು ಖರೀದಿಸಿ, ಇನ್ನೊಂದನ್ನು ಉಚಿತವಾಗಿ ಪಡೆಯಿರಿ” ಎಂಬ ಜಾಹಿರಾತಿನಂತೆ. ಸುಖದ ಜೊತೆಗೆ ದುಃಖ, ಸಿಹಿ ಜೊತೆಗೆ ಕಹಿ, ಗೆಲುವಿನ ಜೊತೆಗೆ ಸೋಲು, ನಲಿವಿನ ಜೊತೆಗೆ ನೋವು ಹೀಗೆ ಒಂದಕ್ಕೊಂದು ಜೊತೆಜೊತೆಯಲ್ಲಿಯೇ ಇರುತ್ತವೆ. ಆದರೂ ನಾವು ಕೇವಲ ಮೊದಲನೆಯದ್ದನ್ನೆ ಬಯಸುತ್ತೇವೆ,ಆಶಿಸುತ್ತೇವೆ. ಎರಡನೇ ವಿಷಯ ನಮಗೆ ಬೇಡವೇ ಬೇಡ ಎಂಬ ಧೋರಣೆ. ಆದರೆ ನಾವು ತಳೆದ ಧೋರಣೆಗಳ ಮೇಲೆ ಬದುಕು ಸಾಗುತ್ತದೆಯೇ? ಇಲ್ಲ. ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವ ಹಾಗೆ, ನಾವು ಒಲ್ಲೆ ಎಂದರೆ ಆಗುತ್ತದೆಯೇ. ಹುಟ್ಟು ಹೇಗೆ ಆಕಸ್ಮಿಕವೋ ಹಾಗೆಯೇ ಸಾವು ನಿಶ್ಚಿತ. ಆದ್ದರಿಂದ ನಾವು ಬಯಸುವ ಸುಖ, ಸಿಹಿ, ಗೆಲುವು, ನಲಿವು ಈ ಎಲ್ಲವುಗಳೂ ಬದುಕಿನ ಕೆಲವು ಕಾಲಗಳಲ್ಲಿ ಆಕಸ್ಮಿಕವಾಗಿಯೇ ಬರುವವು. ಅದರಂತೆ ದುಃಖ, ಕಹಿ, ಸೋಲು, ನೋವು ಇವುಗಳೂ ನಿಶ್ಚಿತ. ಒಂದು ವಿಷಯ ನಿಶ್ಚಿತ ಎಂದಾದಮೇಲೆ ಅದರ ಕುರಿತು ಮಾನಸಿಕವಾಗಿ ಸಿದ್ಧರಾಗಿರುವುದೂ ಅನಿವಾರ್ಯ.ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಳ್ಳುವುದರಿಂದ ಭಯಂಕರ ಸ್ಥಿತಿಯಲ್ಲಿಯೂ ಬದುಕನ್ನು ಸಾವರಿಸಿಕೊಂಡು ಹೋಗಬಹುದು. ಕೇವಲ ಸುಖ, ವೈಭೋಗ, ವಿಲಾಸ, ಗೆಲುವಿನ ಮೆಟ್ಟಿಲುಗಳನ್ನೇ ಏರುತ್ತ ಹೋಗುವಾಗ ಎಲ್ಲವೂ ಅದೆಷ್ಟು ಚೆನ್ನಾಗಿದೆ ಎಂದು ಅದೇ ಸ್ಥಿತಿಗೆ ಒಗ್ಗಿಕೊಂಡು ಇರುವಾಗ ಒಮ್ಮಿಂದೊಮ್ಮೆಲೆ ಸುನಾಮಿಯಂತೆ ಅಪ್ಪಳಿಸುವ ದುಃಖ, ನೋವುಗಳು ನಮ್ಮ ಬದುಕನ್ನೆ ಕಂಗೆಡಿಸಿಬಿಡುತ್ತವೆ. ಇವುಗಳನ್ನು ಎದುರಿಸುವ ತಾಕತ್ತು ಇಲ್ಲದವರಿಗೆ ಬದುಕೇ ಕಷ್ಟವಾಗಿ, ಕೆಲವರಂತೂ ಒಂದರೆಕ್ಷಣ ಕೆಟ್ಟ ನಿರ್ಧಾರಕ್ಕೆ ಕೈ ಹಾಕಿ ಬದುಕಿಗೇ ಇತಿಶ್ರೀ ಹಾಡಿದ ಅನೇಕ ಉದಾಹರಣೆಗಳಿವೆ. “ ಬಂದದ್ದೆಲ್ಲಾ ಬರಲಿ...ಗೋವಿಂದನ ದಯೆ ಒಂದಿರಲಿ” ಎಂಬ ದಾಸೋಕ್ತಿಯಂತೆ, ಸುಖಕ್ಕೆ ಹಿಗ್ಗದೇ, ದುಃಖಗಳಿಗೆ ಕುಗ್ಗದೇ ಸಮಚಿತ್ತದಿಂದ ಎರಡನ್ನೂ ಸ್ವೀಕರಿಸುವುದೇ ಆರೋಗ್ಯಕರ ಮನಸ್ಸು. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎಂಬ ಕವಿವಾಣಿಯಂತೆ ಪ್ರತಿ ವರುಷವೂ ಹೊಸ ಹರುಷಗಳಿಂದ ಹಬ್ಬವು ಹೇಗೆ ಬರುತ್ತದೆಯೋ ಹಾಗೆಯೇ ಈ ಸುಖ,ದುಃಖಗಳು ನಮ್ಮ ಬಾಳಿನಲ್ಲಿ ಬರುತ್ತವೆ. ಯುಗಾದಿ ಹಬ್ಬದ ಆಚರಣೆಯಲ್ಲಿಯೇ ಎಲ್ಲವೂ ಸಾಂಕೇತಿಕವಾಗಿ ಅಡಗಿದೆ. ಬೆಲ್ಲವನ್ನು ಸವಿಯುವುದರ ಜೊತೆಜೊತೆಗೆ ಬೇವನ್ನೂ ನಾವು ತಿನ್ನಲೇಬೇಕು. ನಮ್ಮ ಪೂರ್ವಜರು ಆಯಾ ಋತುಮಾನಗಳಿಗೆ ಮತ್ತು ಸಂಧರ್ಭಗಳಿಗೆ ಅನುಗುಣವಾಗಿ ಹಬ್ಬಗಳನ್ನೂ ಹೊಂದಿಸಿಟ್ಟಿದ್ದಾರೆ. ಹಬ್ಬಗಳ ಆಚರಣೆಯಲ್ಲಿನ ನಿಜಾರ್ಥ ತಿಳಿದುಕೊಂಡು ಅವುಗಳನ್ನು ಆಚರಿಸಿದರೆ ಅದು ನಮ್ಮ ಆರೋಗ್ಯಕ್ಕೂ ಒಳ್ಳೆಯದು, ಮುಖ್ಯವಾಗಿ ಸಮಚಿತ್ತದಿಂದ ಬದುಕಿನ ಬಂಡಿಯನ್ನು ಎಳೆದುಕೊಂಡು ಹೋಗಲು ಅನುಕೂಲವಾಗುತ್ತದೆ. ಜಯನಾಮ ಸಂವತ್ಸರವು ಎಲ್ಲರಿಗೂ ಜಯವನ್ನೇ ತಂದುಕೊಡಲಿ ಎಂಬ ಧನಾತ್ಮಕ ಆಶಯದೊಂದಿಗೆ ಈ ಯುಗಾದಿ ಹಬ್ಬವನ್ನು ಆಚರಿಸೋಣ. ಜಯದೊಂದಿಗೆ ಸೋಲು ಬಂದಾಗಲೂ ಧೃತಿಗೆಡದೇ ಮುನ್ನುಗ್ಗುವ ಧೈರ್ಯವನ್ನು ಆ ದೇವರು ಕೊಡಲಿ ಎಂದು ಆಶಿಸೋಣ. ಚುನಾವಣೆಯೂ ಹೊಸ್ತಿಲಲ್ಲೇ ಇದೆ. ಈ ಚುನಾವಣೆಯೂ ಒಂದು ರೀತಿಯ ಯುಗಾದಿ ಹಬ್ಬದ ಆಚರಣೆಯಂತಿದೆ. ಮತದಾರ ಪ್ರಭು ಯಾರಿಗೆ ಬೆಲ್ಲ ತಿನ್ನಿಸುತ್ತಾನೋ, ಯಾರಿಗೆ ಬೇವಿನ ಕಹಿ ನೀಡುತ್ತಾನೋ? ಒಟ್ಟಿನಲ್ಲಿ ಒಂದು ಸುಭದ್ರ ಸರಕಾರ ರಚನೆಯಾಗಲಿ ಎಂಬುದೇ ಎಲ್ಲರ ಆಶಯ. ಗೆದ್ದವರು ಗೆಲುವಿನ ಅಮಲಿನಲ್ಲಿ ತೇಲದೇ ಜನರ ಆಶೋತ್ತರಗಳಿಗೆ ಸ್ಪಂದಿಸಲಿ. ಸೋತವರು ಅಳುಕದೇ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲಿ. ಸಮಸ್ತರಿಗೂ ಜಯನಾಮ ಸಂವತ್ಸರದ ಮತ್ತು ಯುಗಾದಿ ಹಬ್ಬದ ಶುಭಾಶಯಗಳು.