ಅಕ್ಕಪಕ್ಕದ ಮನೆಯವರ ಸಂಭಾಷಣೆ !
"ಗುಡ್ ಮಾರ್ನಿಂಗ್ ರಮ್ಯಾ! ಹೇಗಿದ್ದೀರಿ?"
"ಓ! ಮಾರ್ನಿಂಗ್ ಶಕ್ಕೂ!! ಆರಾಮಾನ?"
"ಏನ್ ಕಂಜೂಸಪ್ಪ ನೀವು ... ನಾನು ಟೈಮ್ ಮಾಡಿಕೊಂಡು ಗುಡ್ ಮಾರ್ನಿಂಗ್ ಅಂದ್ರೆ ನೀವು ಬರೀ ಮಾರ್ನಿಂಗ್ ಅಂತ ಮುಗಿಸೋದೇ? ಜೊತೆಗೆ ನನ್ ಹೆಸರು ಬೇರೆ ತುಂಡ್ ಹಾಕಿದ್ರಿ"
"ಬೆಳ್ ಬೆಳಿಗ್ಗೆ ಯಾಕ್ ಬೇಜಾರು ಮಾಡ್ಕೋತೀರಾ ಬಿಡಿ ... ಪೂರ್ತಿ ಹೇಳ್ತೀನಿ ... ಗುಡ್ ಮಾರ್ನಿಂಗ್ ಶಕುಂತಲಮಣಿ ರಘುರಾಮಚಂದ್ರರಾವ್"
"ಆ! ಯಾರ್ರೀ ಅದ್ದೂ?"
"ಶಕ್ಕು ಅಂದ್ರೂ ತುಂಡು ಅಂತೀರಾ, ಪೂರ್ತಿ ಹೆಸರು ಕರೆದರೆ ನೀವೇ ಮರೆತಿರ್ತೀರಾ .... ಒಳ್ಳೇ ಮಜಾ ಕಣ್ರೀ ನೀವು"
"ಓ! ನನ್ ಹೆಸರೇ ಅಲ್ವಾ? ರ್ರೀ, ನೀವು ಒಳ್ಳೇ ತಮಾಷೆ ಬಿಡಿ, ನಾನು ಹೇಳಿದ್ದು ಶಕ್ಕು, ಕುಕ್ಕು, ಬುಕ್ಕು, ಲುಕ್ಕು, ಅನ್ನೋದು ಬಿಟ್ಟು ಶಕುಂತಲ ಅನ್ನಬಾರದೇ ಅಂತ"
"ಓ! ಹಂಗೆ !! ಜಗತ್ತೇ ಇಷ್ಟು ಫಾಸ್ಟ್ ಆಗಿರೋವಾಗ, ಪೂರ್ತಿ ಹೆಸರು ಕರೆದರೆ ಜನ ಬೇಜಾರು ಮಾಡಿಕೊಳ್ತಾರೆ ಕಣ್ರೀ. ಪುಣ್ಯಕ್ಕೆ ನಿಮ್ ಹೆಸರು ಇನ್ನೂ ಶಕ್ಕು ಅಂತಿದೆ. ಬರೀ "ಶ್" ಆಗಲಿಕ್ಕೆ ಕಾಲ ದೂರ ಇಲ್ರೀ. ಈಗ ನೋಡಿ, ನರೇಂದ್ರ ಮೋದಿಯವರ ಹೆಸರು ನಮೋ ಆಗಿಲ್ವೇ ಹಾಗೆ ! "
"ಅದೂ ನಿಜಾ ಅನ್ನಿ, ಯಡ್ಡಿ, ಕುಮ್ಮಿ, ಸಿದ್ದು ಅನ್ನೋ ಹಾಗೆ ನಮೋ ಅನ್ನೋದು ಕೂಡ ನಿಮ್ ಹೆಸರಿನ ತರಹ ಬಟನ್ ಚಾಕು ಇದ್ದ ಹಾಗೆ ಪುಟ್ಟದಾಗಿದೆ .. ಕರೆಯೋದು ಸುಲಭ. ನನ್ ಹೆಸರೋ ಲಾಂಗ್ ಇದ್ದ ಹಾಗಿದೆ"
"ಅಬ್ಬಬ್ಬ! ರಾಜಕೀಯದ ವಿಚಾರ ಬಂದ ಕೂಡ್ಲೇ ನಿಮ್ಮ ವರಸೆ ನೋಡ್ರೀ ಹೀಗಾಯ್ತು? ಚಾಕು, ಚೂರಿ, ಲಾಂಗು ಅಂತ!!"
"ಅಯ್ಯೋ ಶಿವನೇ, ಹೌದಲ್ವೇ?"
"ಹೋಗ್ಲೀ ಬಿಡಿ, ಇನ್ ಹದಿನೈದು ದಿನಕ್ಕೆ ಅವರ ಬೇಳೆ ಬೇಯುತ್ತೆ. ನಿಮ್ಮ ಮನೇಲಿ ಬೇಳೇ ಬೇಯ್ತಾ ಹೇಗೆ? ಓ! ಅಂದ ಹಾಗೆ ರಾತ್ರಿಯೆಲ್ಲ ನಿಮ್ ಟಾಮಿ ಸಿಕ್ಕಾಪಟ್ಟೆ ಬೊಗುಳ್ತಿತ್ತು? ಹುಷಾರಿಲ್ವಾ?"
"ಇಲ್ರೀ, ಈಗ ಬೇಯಕ್ಕೆ ಇಟ್ಟಿದ್ದೀನಿ"
"ಆ? ಟಾಮೀನ್ನ ಬೇಯಿಸ್ತಿದ್ದೀರಾ?"
"ಅಯ್ಯೋ ರಾಮಾ! ನೀವೊಳ್ಳೇ ! ಬೇಳೆ ಬೇಯಕ್ಕೆ ಇಟ್ಟಿದ್ದೀನಿ ಅಂತ ನಾನು ಹೇಳಿದ್ದು"
"ಸದ್ಯ! ಅಂದ ಹಾಗೆ ಈಗ ಮನೆಯವರಿಗೆ ಸುಸ್ತು ಕಡಿಮೆ ಆಯ್ತಾ?"
"ಇಲ್ಲ ಕಣ್ರೀ ! ಪಾಪ, ಬೊಗಳೀ ಬೊಗಳೀ ಸುಸ್ತಾಗಿ ಸುಮ್ಮನಿರೋದು ಅಷ್ಟೇ !! ಇನ್ನೂ ಹಾಗೇ ಇದೆ"
"ಆ?"
"ಸುಸ್ತು ಕಡಿಮೆಯಾಗಿದೆ. ನಾನೇ ಹಗುರಾಗಿರಲಿ ಅಂತ ಬಿಸ್ಕೆಟ್ ಕೊಟ್ಟೆ"
"ನನಗೆ confuse ಆಗ್ತಿದೆ. ಹೋಗ್ಲಿ, ಡಾಕ್ಟರ್ ಏನಂದ್ರು?"
"ಎರಡು ಹೊತ್ತಿಗೆ ಔಷದಿ ಕೊಟ್ಟಿದ್ದಾರೆ. ಓಡಾಡಿದ್ರೆ ನೋವು ಜಾಸ್ತಿ ಆಗುತ್ತೆ ಅಂತ ಹೇಳಿದ್ರು. ಅದಕ್ಕೇ ಕಟ್ಟಿಹಾಕಿದ್ದೀನಿ. ಪಾಪ, ನೋಡಿದ್ರೆ ಬೇಜಾರಾಗುತ್ತೆ"
"ಆ? ಮತ್ತೆ ಬಿಸ್ಕೆಟ್?"
"ಬಿಸ್ಕೆಟ್ ತಿನ್ನೋದ್ರಿಂದ ಸ್ವಲ್ಪ ಎನರ್ಜಿ ಬರುತ್ತೆ ಅಂತ. ಸ್ವಲ್ಪ ಹದವಾಗಿದ್ರೆ ವಾಸಿ ನೋಡಿ ... ಇಲ್ದಿದ್ರೆ ವಯಕ್ ಅಂತ ವಾಂತಿ ಆದ್ರೆ ಅಂತ"
"ವಯಕ್ ಆದ್ರೆ ಇನ್ನೂ ಆಯಾಸ ಹೆಚ್ಚುತ್ತೆ. ಎನರ್ಜಿ ಬಿಸ್ಕೆಟ್ ಅಂದ್ರೆ ಯಾವುದು? ನಾವು ತರೋದು ಮಿಲ್ಕ್-ಬೋನ್ ಅಂತ"
"ಹೌದೇ? ಹೆಸರು ಕೇಳಿದ್ರೆ calcium ಬಿಸ್ಕೆಟ್ ಇರೋ ಹಾಗಿದೆ. ಹೇಗಿದೆ?"
"ಆ? ಹೇಗಿದೆ ಅಂದ್ರೇನ್ರೀ? ನಾನು ತಿಂದಿಲ್ಲಪ್ಪ !! ನಮ್ ಪಮ್ಮೀನ್ನ ಕೇಳಬೇಕು"
"ಸ್ವಲ್ಪ ಕೇಳಿ ಹೇಳ್ರೀ ಪ್ಲೀಸ್"
"ಒಳ್ಳೇ ಕಥೆ ಆಯ್ತು ಕಣ್ರೀ ನಿಮ್ದು. ಕೇಳಬೇಕು ಅಂತ ತಮಾಷೆ ಮಾಡಿದೆ. ನಮ್ ನಾಯಿಮರೀಗೆ ಮಾತು ಬರೋಲ್ಲ ರೀ"
"ಅಯ್ಯೊ! ಮಿಲ್ಕ್-ಬೋನ್ ಅನ್ನೋದು ನಿಮ್ ಪಮ್ಮಿ ಅಂದ್ರೆ ಪಾಮೋರಿನ್’ಗೆ ತಂದಿದ್ದಾ? ನಿಮ್ ಮಗಳು ಪರಿಮಳ ಬಗ್ಗೆ ಮಾತಾಡ್ತಿದ್ದೀರಿ ಅಂದುಕೊಂಡೆ"
"ಓ ಮೈ ಗಾಡ್! ನೀವು ನಿಮ್ ಟಾಮಿಗೆ ಬಿಸ್ಕೆಟ್ ಕೊಟ್ಟೆ ಅಂದಿದ್ದಕ್ಕೆ ನಾನು ಮಿಲ್ಕ್-ಬೋನ್ ಬಗ್ಗೆ ಹೇಳ್ದೆ"
"ಆ? ಟಾಮಿಗೆ ಕೊಟ್ಟೆ ಅಂತ ನಾನೆಲ್ಲಿ ಹೇಳ್ದೆ? ಅಲ್ರೀ, ಬಿಸ್ಕೆಟ್ ಕೊಟ್ಟೆ ಅಂತ ನಾ ಹೇಳಿದ್ದು ನಮ್ ಯಜಮಾನರಿಗೆ"
"ಬೊಗಳಿ ಬೊಗಳಿ ಸುಸ್ತು ಅದಕ್ಕೇ ಬಿಸ್ಕೆಟ್ ಕೊಟ್ಟೆ ಅಂದ್ರಲ್ರೀ !!"
"ಅಬ್ಬಬ್ಬಾ !!! ನೀವು ಸದ್ಯಕ್ಕೆ ಏನೂ ಟೈಪ್ ಮಾಡಬೇಡಿ. ಒಂದು ನಿಮಿಷ ನಾನು ಪೂರ್ತಿ ಟೈಪ್ ಮಾಡಿಬಿಡ್ತೀನಿ. ಜ್ವರದಿಂದ ಸುಸ್ತಾಗಿರೋ ನಮ್ಮೆಜಮಾನರಿಗೆ ಗ್ಲೂಕೋಸ್ ಬಿಸ್ಕೆಟ್. ಕಾಲು ಏಟು ಬಿದ್ದು ಸುಸ್ತಾಗಿರೋ ನಮ್ ಟಾಮೀನ್ನ ಕಟ್ಟಿ ಹಾಕಿರೋದು. ನೋವಿಗೆ ಬೊಗಳಿದ್ದು ಟಾಮಿ, ಸುಸ್ತಾಗಿರೋ ನಮ್ಮೆಜಮಾನರಲ್ಲ. ಮೊದಲೇ ಸುಸ್ತು, ಕುಯ್ ಅಂತ ಕೂತಿದ್ದಾರೆ, ಏನ್ ಬೊಗುಳ್ತಾರೆ? ಅರ್ಥ ಆಯ್ತಾ ? LOL"
"ಸಾರಿ ಕಣ್ರೀ ! ಮತ್ತೇ, ನೀವು LOL ಅಂದಿದ್ದು ನಕ್ಕಿದ್ದಾ? ಅಥವಾ ಟಾಮಿ ಬೊಗಳ್ತು ಅಂತ ಅಂದಿದ್ದಾ?"
"ರ್ರೀ, ಒಂದು ನಿಮಿಷ ಇರಿ! ಈ ಚ್ಯಾಟ್ ತೆಗೆದು ಎಸೀರಿ. ನೀವು ಟೈಪ್ ಮಾಡಿದ್ದನ್ನು ನಾನು ಓದಿ ಅದಕ್ಕೆ ಉತ್ತರ ಕೊಡೋಷ್ಟರಲ್ಲಿ ಇನ್ನೇನೋ ಮಾತು ಬಂದಿರುತ್ತೆ. ಎಲ್ಲ ಕಲಸು ಮೇಲೋಗರ. ನೀವೇನೋ ಕೇಳಿರುತ್ತೀರಾ ನಾನೇನೋ ಹೇಳಿರುತ್ತೀನಿ. ಸುಮ್ನೆ ಹಿಂದುಗಡೆ ಕಾಂಪೌಂಡ್ ಹತ್ತಿರ ಬನ್ನಿ ... ಸಿಗೀತೀನಿ"
"ಬೇಜಾರು ಮಾಡ್ಕೋಬೇಡೀಪ್ಪ !! ಅಕ್ಕ-ಪಕ್ಕ ಇದ್ಮೇಲೆ ಇನ್ಮುಂದೆ ಈ ಚ್ಯಾಟ್ / ಈ-ಮೇಲ್ ಎಲ್ಲ ಬೇಡ. ಸಿಗೀತಿನಿ ಅನ್ನಬೇಡಿ"
"ಸಾರಿ ಕಣ್ರೀ ! ನಾನು ಸಿಗ್ತೀನಿ ಅಂತ್ಲೇ ಟೈಪ್ ಮಾಡಿದೆ.... ಆಟೋ-ಕರೆಕ್ಷನ್ ಗೋಳಿರಬೇಕು ... ಸಿಗ್ತೀನಿ ಅನ್ನೋದು ಹೋಗಿ ಸಿಗೀತೀನಿ ಆಯ್ತು"
"ಸರಿ ಹಾಗಿದ್ರೆ ! MYNC"
"ಏನ್ರೀ ಹಂಗಂದ್ರೆ?"
"Meet You Near Compound ಅಂತ"
"K SB"
"ಅಂದ್ರೇ?"
"Ok ಸದ್ಯಕ್ಕೆ ಬೈ ಅಂತ"
"K"
Comments
ಉ: ಅಕ್ಕಪಕ್ಕದ ಮನೆಯವರ ಸಂಭಾಷಣೆ !
:) :)ಭಲ್ಲೇಜಿ, ಪಕ್ಕಪಕ್ಕದ ಮನೆ ಚ್ಯಾಟ್ ಚೆನ್ನಾಗಿತ್ತು.
In reply to ಉ: ಅಕ್ಕಪಕ್ಕದ ಮನೆಯವರ ಸಂಭಾಷಣೆ ! by ಗಣೇಶ
ಉ: ಅಕ್ಕಪಕ್ಕದ ಮನೆಯವರ ಸಂಭಾಷಣೆ !
ಗಣೇಶ್'ಜಿ ಧನ್ಯವಾದಗಳು
ಎಂಥಾ ಕಾಲ ಬಂತು ನೋಡಿ ?
ಉ: ಅಕ್ಕಪಕ್ಕದ ಮನೆಯವರ ಸಂಭಾಷಣೆ !
ಬಲ್ ಸೊಗಸಾಗಿತ್ತು! ಅವರ ಯಜಮಾನರುಗಳದೂ ನಾಯಿಪಾಡೇ ಸರಿ! KSB - :)
In reply to ಉ: ಅಕ್ಕಪಕ್ಕದ ಮನೆಯವರ ಸಂಭಾಷಣೆ ! by kavinagaraj
ಉ: ಅಕ್ಕಪಕ್ಕದ ಮನೆಯವರ ಸಂಭಾಷಣೆ !
ಧನ್ಯವಾದಗಳು ಕವಿಗಳೇ !
ಯಜಮಾನರದು NPಯೇ ಸರಿ:-)
ಚೆನ್ನಾಗಿ ಹೇಳಿದ್ರಿ! .... KSB