ಸಂಗೀತ ಕಲಾನಿಧಿ ಮೈಸೂರು ಟಿ. ಚೌಡಯ್ಯ ನಾದಸ್ವರ ಪ್ರಕರಣ
ನಾನು ಪ್ರೌಢಶಿಕ್ಷಣವನ್ನು ನನ್ನ ಗ್ರಾಮದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದ ಆಗಿನ ತಾಲ್ಲೂಕು ಕೇಂದ್ರವಾಗಿದ್ದ ಚಾಮರಾಜನಗರದಲ್ಲಿನ ಮುನಿಸಿಪಲ್ ಪ್ರೌಢಶಾಲೆಯಲ್ಲಿ ಪಡೆಯುತ್ತಿದ್ದ ಸಮಯ (ಸುಮಾರು 1960ರಿಂದ 1963 ಸಮಯ). ಆಗಿನ ಕಾಲದಲ್ಲಿ ಈಗಿನಂತೆ ಪ್ರೌಢಶಿಕ್ಷಣ ಶಾಲೆಗಳು ಎಲ್ಲ ಊರುಗಳಲ್ಲಿಯೂ ಇರುತ್ತಿರಲಿಲ್ಲ. ನನ್ನ ಸ್ವಗ್ರಾಮದಿಂದ ಸೈಕಲ್ ತುಳಿದುಕೊಂಡು ಚಾಮರಾಜನಗರಕ್ಕೆ ಬಂದು ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಎಸ್ಸಸ್ಸೆಲ್ಸಿ ತರಗತಿಗೆ ಬಂದ ಮೇಲೆ, ದಿನಾ ಸೈಕಲ್ಲು ತುಳಿದು ಕೊಂಡು ಬಂದರೆ ಸಮಯ ವ್ಯರ್ಥವಾಗುತ್ತದೆ ಎಂದು, ನನ್ನ ಅಪ್ಪ ನನ್ನನ್ನು ಚಾಮರಾಜನಗದಲ್ಲಿಯೇ ತಂಗಿ ಓದು ಮುಂದುವರಿಸುವಂತೆ ಏರ್ಪಾಡು ಮಾಡಿದರು. ತಿಂಗಳಿಗೆ ಎಂಟು ರೂಪಾಯಿ ಬಾಡಿಗೆಗೆ ಒಂದು ರೂಮು ಏರ್ಪಾಡು ಮಾಡಿಕೊಟ್ಟರು. ಊಟ ತಿಂಡಿಗೆ ಅವರ ಸ್ನೇಹಿತರೊಬ್ಬರು ನಡೆಸುತ್ತಿದ್ದ ಹೋಟೆಲಿನಲ್ಲಿ ನನಗೆ ಊಟ, ತಿಂಡಿ, ಕಾಫಿಗೆ ಏರ್ಪಾಡಾಯಿತು. ನಾನು ಆ ಹೋಟೆಲಿನಲ್ಲಿ ಯಾವಾಗ ಬೇಕಾದರೂ ನನ್ನಿಷ್ಟ ಬಂದಂತೆ ತಿಂಡಿ, ಊಟ, ಕಾಫಿ ಮುಂತಾದುವುಗಳನ್ನು ತಿನ್ನಲು ಯಾವ ನಿರ್ಭಂದವೂ ಇಲ್ಲದಂತೆ ಅನುಕೂಲ ಮಾಡಿದ್ದರು. ಹೋಟೆಲಿನ ಯಜಮಾನರು ನನ್ನಪ್ಪನಿಗೆ ಸ್ನೇಹಿತರಾಗಿದ್ದರಿಂದ, ಆ ಹೋಟೆಲಿನಲ್ಲಿ ನನಗೆ VIP treatment ಮೀಸಲಾಗಿತ್ತು.
ಇಂದು ಚಾಮರಾಜನಗರ ಜಿಲ್ಲಾ ಕೇಂದ್ರವಾಗಿದೆ. ಆಗಿನ ಕಾಲಕ್ಕೆ ಅದು ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಷ್ಟೆ. ನನ್ನ ಸ್ವಗ್ರಾಮಕ್ಕೂ ತಾಲ್ಲೂಕು ಕೇಂದ್ರವಾದ ಚಾಮರಾಜನಗರಕ್ಕೂ ಮೂಲಭೂತವಾಗಿ ಅಷ್ಟೇನೂ ವ್ಯತ್ಯಾಸಗಳು ಇರಲಿಲ್ಲ. ಅಬ್ಬಬ್ಬಾ ಎಂದರೆ ಇಡೀ ಊರಿನ ಮೂಲಕ ಹಾದು ಹೋಗುವ ಎರಡು ಹೆದ್ದಾರಿಗಳು – ಒಂದು ಸತ್ಯಮಂಗಲದ ಕಡೆಗೆ ಮತ್ತೊಂದು ಬಿಳಿಗಿರಿರಂಗನ ಬೆಟ್ಟದ ಕ್ಯಾತೇದೇವರಗುಡಿ ಕಡೆಗೆ. ಇವೆರಡು ದಾರಿಗಳು ಮಾತ್ರ ಡಾಂಬರು ಹಾಕಿದ ದಾರಿಗಳು. ಮಿಕ್ಕ ಒಳಗಿನ ರಸ್ತೆಗಳೆಲ್ಲಾ ಬರೀ ಮಣ್ಣು ರಸ್ತೆಗಳೇ.
ನನ್ನ ಗ್ರಾಮಕ್ಕೂ ಈ ತಾಲ್ಲೂಕು ಕೇಂದ್ರಕ್ಕೂ ಇದ್ದ ವ್ಯತ್ಯಾಸಗಳೆಂದರೆ, ಚಾಮರಾಜನಗರದಲ್ಲಿ ವೈದ್ಯಕೀಯ ಸೌಲಭ್ಯಗಳು ಇದ್ದವು. ಆ ಊರಿನಲ್ಲಿ ಇಬ್ಬರು ಪ್ರಸಿದ್ಧ ವೈದ್ಯರುಗಳು ಇದ್ದರು. ಒಂದು ಸರ್ಕಾರಿ ಆಸ್ಪತ್ರೆ, ಒಂದೆರೆಡು ಔಷಧಿ ಅಂಗಡಿಗಳು ಇದ್ದವು. ಎರಡು ಹೋಟೆಲ್ಲುಗಳು ಮತ್ತು ಎರಡು ಚಲನಚಿತ್ರ ಮಂದಿರಗಳು ಮತ್ತು ಒಂದು ದನದ ಆಸ್ಪತ್ರೆ ಇವಿಷ್ಟು ಸೌಲಭ್ಯಗಳು ಮತ್ತೆ, ತಾಲ್ಲೂಕಿನ ಆಡಳಿತಕ್ಕೆ ಸಂಭಂದ ಪಟ್ಟಂತೆ ಇರಬೇಕಾದ, ತಾಲ್ಲೂಕು ಕಛೇರಿ, ಒಂದು ಪೋಲೀಸ್ ಠಾಣೆ ಮತ್ತು ಇತರೆ ಅಷ್ಟು ಮುಖ್ಯವಲ್ಲದ ಸರ್ಕಾರಿ ಕಛೇರಿಗಳು, ಇವಿಷ್ಟೇ ತಾಲ್ಲೂಕು ಕೇಂದ್ರದ ವಿಶೇಷಗಳು. (ಸಾಮಾನ್ಯ ಜನರು “ದನದ ಆಸ್ಪತ್ರೆ” ಅಂತಾನೆ ಕರೆಯುತ್ತಾರೆ, ಸಂಸ್ಕೃತೀಕರಣವಾಗಿ “ಪಶುವೈದ್ಯ ಶಾಲೆ” ಅಂತ ಸಾಮಾನ್ಯವಾಗಿ ಹೇಳುವುದಿಲ್ಲ. ದನದ ಆಸ್ಪತ್ರೆಯಲ್ಲಿ ದನಗಳಲ್ಲದೆ ಇತರೆ ಪ್ರಾಣಿಗಳಿಗೂ ಚಿಕಿತ್ಸೆ ನೀಡಿದರೂ ಸಹ, ದನಗಳು ಸಂಖ್ಯೆ ಹೆಚ್ಚಾಗಿರುವುದರಿಂದ “ದನದ ಆಸ್ಪತ್ರೆ” ಅಂತಾನೆ ಅದು ಕರೆಸಿಕೊಳ್ಳುತ್ತದೆ).
ಅಲ್ಲಿನ ಜನರೂ ಸಹಾ ಅಷ್ಟೇನೂ ತರಾತುರಿಯಿಂದ ಜೀವನ ನಡೆಸುವ ಶೈಲಿಯನ್ನು ಅನುಸರಿಸುತ್ತಿರಲಿಲ್ಲ. ನನ್ನ ಸ್ವಗ್ರಾಮದಲ್ಲಿ ಕಾಣುವಂತೆಯೇ, ಬೆಳಿಗ್ಗೆ ಎದ್ದು ಅಲ್ಲಲ್ಲಿ ಬೆಳೆದು ನಿಂತ ಮರಗಳ ನೆರಳಿನಲ್ಲಿ ನಿಂತೋ ಅಥವಾ ಕುಳಿತೋ, ಅತ್ತಿತ್ತ ನೋಡುತ್ತ ತಮ್ಮ ಸುತ್ತಲಿನ ವಿದ್ಯಮಾನಗಳನ್ನು ಒಂದು ರೀತಿಯಾದ ತತ್ವಜ್ಞಾನಿಯ ನೋಟದಿಂದ ಅವಲೋಕಿಸುತ್ತಾ, ಬೀಡಿ ಅಥವಾ ಸಿಗರೇಟನ್ನು ಎಳೆಯುತ್ತಾ ಇರುವವರೇ ಹೆಚ್ಚೆಗೆ ಕಂಡು ಬರುತ್ತಿದ್ದರು. ನಮ್ಮ ದೇಸೀ ಸಂಸ್ಕೃತಿ ಅಥವಾ ಭಾರತೀಯರ “signature style” ಎನ್ನಬಹುದಾದ ಒಂದು ವಿಶಿಷ್ಟ ಅಭ್ಯಾಸ “ಕಂಡ ಕಂಡಲ್ಲಿ ಕ್ಯಾಕರಿಸಿ ಉಗಿಯುವುದನ್ನು” ತಪ್ಪದೇ ಅನುಸರಿಸುತ್ತಿದ್ದರು.
ಇದಲ್ಲದೆ ಆ ಊರಲ್ಲಿ ಇದ್ದ ಎರಡು ಮುಖ್ಯರಸ್ತೆಗಳ ಬದಿಯಲ್ಲಿಯೇ ಕೋಳಿ, ಕುರಿ ಮಾಂಸ ಮಾರುವ ಅಂಗಡಿಗಳು ಕಾಣಬರುತ್ತಿದ್ದವು. ಸಾಬರ ಮಾಂಸದ ಅಂಗಡಿ ಎಂದರೆ ಇಡೀ ಕೋಳಿಯನ್ನು ಸುಲಿದು ಹಾಗೆಯೇ ನೇತುಹಾಕಿರುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು. ನಾನು ಸಾಬರು ಎಂಬ ಪದ ಉಪಯೋಗಿಸಿದ್ದೇನೆ, ಮುಸಲ್ಮಾನ ಎಂಬ ಪದ ಬಳಸಿಲ್ಲ. ಈ ಸಾಬರು ಪದದ ವುತ್ಪತ್ತಿಯನ್ನು ನೋಡಿದರೆ, ಇಂಗ್ಲೀಷಿನವರು ಆಡಳಿತ ನಡೆಸುತ್ತಿದ್ದಾಗ, ಉತ್ತರ ಭಾರತದಲ್ಲಿ ಅವರನ್ನು ಸಾಹೇಬ್ ಎಂದು ಸಂಭೋದಿಸುತ್ತಿದ್ದರು. ಅದು ಗ್ರಾಮ್ಯ ಭಾಷೆಯಲ್ಲಿ ಸಾಬರು ಎಂದಾಗಿದೆ. ಏಕೆಂದರೆ ಮುಸಲ್ಮಾನರೂ ಸಹ ಆಡಳಿತ ನಡೆಸಿದ್ದರಿಂದ ಅವರನ್ನು ಸಾಹೇಬರೇ ಎಂದು ಕರೆದಿರಬಹುದು. ತಮಿಳುನಾಡಿನ ಕಡೆ ಆಂಗ್ಲರನ್ನು “ದೊರೆ” ಎಂದು ಕರೆಯುತ್ತಿದ್ದರು. ಒಟ್ಟಿನಲ್ಲಿ ಯಾರೇ ಅಧಿಕಾರದಲ್ಲಿದ್ದರೂ ಅವರನ್ನು ಸಾಹೇಬ್ ಎಂದೋ ಅಥವಾ ದೊರೆ ಎಂದೋ ಕರೆದು ನಾವು ನಮ್ಮ ಗುಲಾಮ ಪ್ರವೃತ್ತಿಯನ್ನು ಬಹಳ ಚೆನ್ನಾಗಿಯೇ ಮೆರೆದಿದ್ದೇವೆ ಎಂದು ನನ್ನ ಭಾವನೆ. ಅದು ಹಾಗಿರಲಿ ಮತ್ತೆ ಚಾಮರಾಜನಗರದ ಅಂದಿನ ಚಿತ್ರಣಕ್ಕೆ ಬರೋಣ.
ಸಾಬರು ಎನ್ನುವ ಪದದೊಂದಿಗೆ ಆ ಕಾಲದಲ್ಲಿ ಅನೇಕ ವೃತ್ತಿಪರ ಪದಗಳೂ ಸಹ ತಳುಕು ಹಾಕಿಕೊಂಡಿದ್ದದ್ದು ನನ್ನ ಗಮನಕ್ಕೆ ಬಂದಿದೆ. ಮಾಂಸದ ಅಂಗಡಿ ಸಾಬಿ, ಲಾಳದ ಸಾಬಿ, ಜಟಕಾ ಸಾಬಿ, ರೇಷ್ಮೆ ಮೊಟ್ಟೆ ಸಾಬಿ, ಕಲಾಯದ ಸಾಬಿ, ಬೀಡಿ ಅಂಗಡಿ ಸಾಬಿ, ಹೀಗೆ ಅವರು ಮಾಡುತ್ತಿದ್ದ ವೃತ್ತಿಯೊಂದಿಗೆ ಅವರ ಕೋಮೂ ಸಹಾ ಸೇರಿಕೊಂಡು ಬಿಟ್ಟಿತ್ತು. ಮೇಲೆ ಹೇಳಿದ ಎಲ್ಲ ವೃತ್ತಿಗಳೂ ಸಾಬರಿಗೇ ಮೀಸಲಾಗಿದ್ದ ವೃತ್ತಿಗಳು. ನಾನು ಕಂಡಂತೆ ಬೇರೆ ಯಾವ ಕೋಮಿನವರೂ ಈ ವೃತ್ತಿಗಳನ್ನು ಮಾಡುತ್ತಿರಲಿಲ್ಲ. ಇವೆಲ್ಲ ಸಾಬರ monopolyಗೆ ಒಳಪಟ್ಟಿದ್ದವು. ಎತ್ತುಗಳಿಗೆ ಲಾಳ ಹೊಡೆಯಲು ಸಾಬರೇ ಬೇಕು. ರೇಷ್ಮೆ ಮೊಟ್ಟೆ ಖರೀದಿಗೆ, ಕಲಾಯಕ್ಕೆ, ಬೀಡಿ ತಯಾರಿಕೆಗೆ ಸಾಬರಿಲ್ಲದೆ ನಡೆಯುತ್ತಿರಲಿಲ್ಲ. ನಿತ್ಯ ಜೀವನದಲ್ಲಿ ಹೀಗೆ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದರೂ ಸಹ ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ, ಕೋಮು ಗಲಭೆಗಳೂ ಸಹಾ ಚಾಮರಾಜನಗರದಲ್ಲಿ ಕೆಲವೊಮ್ಮೆ ಭುಗಿಲೆದ್ದು ಬಿಡುತ್ತಿತ್ತು. ಇವುಗಳ ಹಿಂದೆ ಯಾರ ಕುಮ್ಮಕ್ಕು ಇತ್ತೋ ಹುಡುಗರಾದ ನಮಗೆ ಆಗ ತಿಳಿಯುತ್ತಿರಲಿಲ್ಲ. ನಾನು ಕಂಡಂತೆ, ಹಿಂದುಗಳು ಭಾನುವಾರಗಳಂದು ಸಾಬರ ಮಾಂಸದ ಅಂಗಡಿಯಿಂದಲೇ ಕುರಿ ಮಾಂಸ ಖರೀದಿಸಿ, ಅಡುಗೆ ಮಾಡಿ ತಿನ್ನುತ್ತಿದ್ದರು. ಹೀಗಿ ತಿನ್ನುವುದು ಸಾಬರ ಅಂಗಡಿಯ ಕುರಿಯ ಮಾಂಸವಾದರೂ, ತಿಂದ ಮೇಲೆ, ಅದನ್ನು ತಿಂದವರು ಹಿಂದುಗಳಾಗಿ, ಮುಸಲ್ಮಾನರಾಗಿ ಪರಿವರ್ತಿತರಾಗಿ ಬಿಟ್ಟು ಭುಸುಗುಡುತ್ತಿದ್ದರು. ಈ ಪ್ರವೃತ್ತಿ ಅದ್ಯಾವ ದೇವರಿಗೆ ಪ್ರೀತಿಯೋ ನಾನಂತೂ ಅರಿಯೆ.
ನನ್ನ ಕಣ್ಣಿಗೆ ಕಂಡ, ನನ್ನ ಅರಿವಿಗೆ ಬಂದಂಥ ವಿಚಾರಗಳನ್ನು ನಾನು ತಿಳಿದಂತೆ ಓದುಗರೊಂದಿಗೆ ಹಂಚಿಕೊಂಡಿದ್ದೇನೆ ಅಷ್ಟೇ ವಿನಃ, ಇದು ಕೋಮುವಾದದ ಬಗ್ಗೆಯಾಗಲೀ, ಮಾಂಸಾಹಾರದ ಬಗ್ಗೆಯಾಗಲೀ ನನ್ನ ವೈಯುಕ್ತಿಕ ವ್ಯಾಖ್ಯಾನವಲ್ಲ. ಸರಳ ಮನಸ್ಸಿನ ಆಳದಲ್ಲಿ ಮೂಡಿದ ಸರಳ ಅನಿಸಿಕೆ ಅಷ್ಟೆ. ಪ್ರಾಜ್ಞರಾದ ಓದುಗರು ನನ್ನ ಈ ಅನಿಸಿಕೆಗಳನ್ನು ಅಪಾರ್ಥ ಮಾಡಿಕೊಳ್ಳಬಾರದೆಂದು ವಿನಂತಿ. ಅದೂ ಅಲ್ಲದೆ ನಾನು ಸಮಾಜ ಸುಧಾರಕನೂ ಅಲ್ಲ, ವೈಚಾರಿಕತೆಯ ರೂವಾರಿಯೂ ಅಲ್ಲ, ಪಥ ನಿರ್ಮಾಪಕನಂತೂ ಅಲ್ಲವೇ ಅಲ್ಲ. ಆ ರೀತಿಯ ಭ್ರಮೆ ನನಗಿಲ್ಲವೇ ಇಲ್ಲ.
ಈ ತಾಲ್ಲೂಕು ಕೇಂದ್ರದಲ್ಲಿ ನಾನು ಹೈಸ್ಕೂಲು ವ್ಯಾಸಂಗ ಮುಗಿಸಲು ರೂಮು ಬಾಡಿಗೆಗೆ ಪಡಿದು ತಂಗಿದ್ದಾಯಿತು. ನನ್ನ ಸಹಪಾಠಿಗಳಿಗೆಲ್ಲ ಇದೊಂದು ಅತ್ಯಂತ ವೈಭವಯುತ ನಡವಳಿಕೆ ಎಂದು ತೋರಿತು. ಏಕೆಂದರೆ ತನಗಾಗಿಯೇ ಒಂದು ಪ್ರತ್ಯೇಕ ವ್ಯವಸ್ಥಿತ ರೂಮು, ಹೋಟೆಲಿನಲ್ಲಿ ಊಟದ ವ್ಯವಸ್ಥೆ ಇದೆಲ್ಲ ಒಬ್ಬ ಸಾಮಾನ್ಯ ವಿದ್ಯಾರ್ಥಿಗೆ ಎಟುಕುವಂಥ ವೈಭವವಲ್ಲ. ನನ್ನ ರೂಮಿನಲ್ಲಿ ನಾನು ಕುಳಿತುಕೊಂಡು ವ್ಯಾಸಂಗ ಮಾಡಲು ಒಂದು ಕಬ್ಬಿಣದ ಮಡಚುವ ಟೇಬಲ್ಲು (folding table ಅಡಿಸನ್ (Addison) ಕಂಪನಿಯಿಂದ ತಯಾರಿಸಲ್ಪಟ್ಟಿದ್ದು) ಮತ್ತು ಕುರ್ಚಿಯನ್ನು ಸಹಾ ಖರೀದಿಮಾಡಿದ್ದರು ನನ್ನ ಅಪ್ಪ. ಅಂದು ಆ ಟೇಬಲ್ಲಿಗೆ ಎಷ್ಟು ಬೆಲೆ ಗೊತ್ತೇ? ಬರೋಬ್ಬರಿ ರೂ 55/- ಆ ಟೇಬಲ್ಲು ಈಗಲೂ ನನ್ನ ಬಳಿ ಇದೆ. ಅಪ್ಪನ ಆಸ್ತಿಯಲ್ಲಿ ಬೇರೇನೂ ದಕ್ಕದೇ ಹೋದರೂ ಇದೊಂದು ಮಾತ್ರ ಇನ್ನೂ ಉಳಿದಿದೆ.
ಈ ರೀತಿಯ ಟೇಬಲ್ಲು, ಕುರ್ಚಿ, ಮುಂತಾದ ಎಲ್ಲಾ ಅನುಕೂಲಗಳೂ ಇರುವ ಪ್ರತ್ಯೇಕ ರೂಮನ್ನು ಬಾಡಿಗೆಗೆ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಆಗಿನ ಕಾಲದಲ್ಲಿ ತೀರ ವಿರಳ. ಇದೇ ಕಾರಣಕ್ಕೆ ನಾನು ಶ್ರೀಮಂತ ವಿದ್ಯಾರ್ಥಿಗಳ ಗುಂಪಿನಲ್ಲಿ ನನಗರಿಯದಂತೆಯೇ ಗುರುತಿಸಲ್ಪಟ್ಟೆ. ಆದರೆ ನನಗೆ ಈ ರೀತಿಯಾದ ಒಂದು status jump ಸಿಕ್ಕಿದೆ ಎಂದು ನನಗೆ ಅಷ್ಟಾಗಿ ಅರಿವಿಗೆ ಬಂದಿರಲಿಲ್ಲ. ಆ ಊರಿನ ಲೀಡರುಗಳು ಮತ್ತು ಅವರುಗಳ ಮನೆಗಳಲ್ಲಿ ನನಗೆ ಸಲೀಸಾಗಿ entry ಸಿಗುತ್ತಿತ್ತು ಮತ್ತು ಅವರುಗಳ ಮಕ್ಕಳು ನನ್ನ ಸಹಪಾಠಿಗಳಾಗಿದ್ದರಿಂದ ಒಂದು ರೀತಿಯಾದ Elite groupನ ಮೆಮ್ಬರ್ಷಿಪ್ ನನಗರಿವಿಲ್ಲದಂತೆಯೇ ನನ್ನದಾಗಿತ್ತು. ಆ ಪ್ರಾಯದಲ್ಲಿ ನನಗೆ ಸಮಾಜವಾದ ಮುಂತಾದ ಇಸಂಗಳ ಪರಿಚಯ ಇರಲಿಲ್ಲವಾದ್ದರಿಂದ, ನಾನೂ ಸಹ ನನ್ನ ಹೊಸ statusಗೆ ಹೊಂದಿಕೊಂಡು ಆರಾಮವಾಗಿ ವ್ಯಾಸಂಗ ಮುಂದುವರಿಸುತ್ತಿದ್ದೆ.
ಚಾಮರಾಜನಗರದ ಪ್ರಸಿದ್ಧವಾದ Landmarkಎಂದರೆ ಚಾಮರಾಜೇಶ್ವರ ಸ್ವಾಮಿ ದೇವಾಲಯ. ಇದು ಸಾಕಷ್ಟು ಪುರಾತನವಾದ ಮತ್ತು ಇತಿಹಾಸ ಪ್ರಸಿದ್ಧವಾದ ದೇವಾಲಯ. ಆ ದೇವಾಲಯದ ಎರಡೂಕಡೆ ಪ್ರಮುಖ ಬೀದಿಗಳಿವೆ. ಆ ಬೀದಿಯಲ್ಲಿ ಊರಿನ ಪ್ರಮುಖ ವರ್ತಕರು, ವೈದ್ಯರು, ರೈತ ಮುಖಂಡರು ಎಲ್ಲ ಸೇರಿಕೊಂಡು, ಒಂದು ಶ್ರೀರಾಮ ಸೇವಾ ಸಮಿತಿಯೊಂದನ್ನು ಪ್ರಾರಂಭಿಸಿದ್ದರು. ಈ ಸಮಿತಿಯಲ್ಲಿ ಪ್ರತಿವರ್ಷ ಶ್ರೀರಾಮನವಮಿ ಸಂದರ್ಭದಲ್ಲಿ ಸುಮಾರು 15 ದಿನಗಳ ಕಾಲ ನಾಡಿನ ಹೆಸರಾಂತ ಸಂಗೀತ ವಿದ್ವಾಂಸರುಗಳ ಸಂಗೀತ ಕಛೇರಿಗಳನ್ನು ಏರ್ಪಾಡು ಮಾಡಿ, ರಾಮನವಮಿಯನ್ನು ವಿಶೇಷವಾಗಿ ಕೊಂಡಾಡುವ ಕಾರ್ಯಕ್ರಮವನ್ನು ರೂಪಿಸಿದ್ದರು.
ಅಲ್ಲಿನ ಆ ರಾಮ ಮಂದಿರದಲ್ಲಿ ಈ 15 ದಿನಗಳ ಸಂಗೀತೋತ್ಸವಕ್ಕೆ ನಾಡಿನ ಅನೇಕ ಘಟಾನು ಘಟಿಗಳಾದ ಗಾಯಕರು, ಪಿಟೀಲು ವಿದ್ವಾಂಸರುಗಳೆಲ್ಲಾ ಆಗಮಿಸಿ ಕಛೇರಿ ನಡೆಸಿ, ಜನರ ಮನ ಸೂರೆಗೊಳ್ಳುತ್ತಿದ್ದರು.
ನಾನು ಚಾಮರಾಜನಗದಲ್ಲಿ ವ್ಯಾಸಂಗ ಮಾಡಲು ಬಂದು ತಂಗುವುದಕ್ಕೆ ಹಲವಾರು ವರ್ಷಗಳ ಮುಂಚೆಯೇ ಈ ರಾಮ ಮಂದಿರ ಪ್ರಾರಂಭವಾಗಿ ರಾಮನಮವಿಯ ಏರ್ಪಾಡೆಲ್ಲ ಅಡೆತಡೆಯಲ್ಲಿದೆ ನಡೆದುಕೊಂಡು ಬಂದಿತ್ತು. ಕಮಿಟಿಯ ಆಡಳಿತ ಮಂಡಳಿ ಸದಸ್ಯರುಗಳು ವರ್ಷ ವರ್ಷ ಚುನಾಯಿತರಾಗಿ ಬದಲಾಗುತ್ತಿದ್ದರು. ನಾನು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ರಾಮಮಂದಿರದ ಆಡಳಿತ ಮಂಡಳಿ ಸದಸ್ಯರುಗಳಲ್ಲಿ ಬಹುಪಾಲು ನನ್ನ ತಂದೆಯವರ ಪರಿಚಿತರು. ಈ ಕಾರಣಕ್ಕೆ ನನ್ನನ್ನು ಅವರೆಲ್ಲ ಬಹಳ ಸಲಗೆಯಿಂದ ಮಾತನಾಡಿಸುತ್ತಿದ್ದರು ಮತ್ತು ಅವರ ಮನೆಗಳಲ್ಲಿ ನನಗೆ ಬಹಳ ಸಲೀಸಾಗಿ entry ಇರುತ್ತಿತ್ತು ಮತ್ತು ಹಬ್ಬದ ದಿನಗಳಲ್ಲಿ ಭರ್ಜರಿ ಊಟ ಗ್ಯಾರಂಟಿ ಇರುತ್ತಿತ್ತು. ಪಡ್ಡೆ ಹುಡುಗನಾದ ನನಗೆ ಬೇರೇನು ಬೇಕಿತ್ತು.
ರಾಮನವಮಿಯ ಸಂಗೀತೋತ್ಸವದ ಸಂಧರ್ಭದಲ್ಲಿ ಪ್ರತಿ ದಿನ ರಾಮ ಮಂದಿರವನ್ನು ಸಂಜೆಯ ಸಂಗೀತ ಕಛೇರಿಗೆ ಅಣಿಗೊಳಿಸುವ ಕೆಲಸವನ್ನು ಪ್ರೌಢಶಾಲೆಯ ಕೆಲವೇ VIP ಹುಡುಗರ ಪಾಲಿಗೆ ವಹಿಸುತ್ತಿದ್ದರು. ಆ VIP ಹುಡುಗರಲ್ಲಿ ನಾನೂ ಒಬ್ಬ. ಸಂಜೆಯ ಹೊತ್ತಿಗೆ ರಾಮಮಂದಿರದ ಹೆಬ್ಬಾಗಿಲು, ಬಾಗಿಲು, ಕಿಟಕಿಗಳಿಗೆ ಹೂವಿನ ಹಾರಗಳನ್ನು ಇಳಿ ಬಿಡುವುದು, ಶ್ರೀ ರಾಮದೇವರ ಮಂಟಪಕ್ಕೆ ಹೂವಿನ ಅಲಂಕಾರ ಮಾಡುವುದು, ಸಂಗೀತ ಕಛೇರಿಗೆ ವೇದಿಕೆ ಸಿದ್ಧ ಪಡಿಸುವುದು ಮುಂತಾದ ಕೆಲಸಗಳನ್ನು ಅತ್ಯಂತ ಶ್ರದ್ಧೆ ಮತ್ತು ಭಯ ಭಕ್ತಿಗಳಿಂದ ಮಾಡುತ್ತಿದ್ದೆವು. ಅದೂ ಅಲ್ಲದೆ ಆ ತಾಲ್ಲೂಕು ಕೇಂದ್ರದ ಪ್ರಮುಖ ಸಂಗೀತೋತ್ಸವಕ್ಕೆ ನಮ್ಮನ್ನು ಸೇರಿಸಿಕೊಂಡಿದ್ದೇ ಅತೀ ಹೆಮ್ಮೆಯ ವಿಷಯ. ನಾವುಗಳಂತೂ ರಾಮಮಂದಿರದ ಒಳಗೂ ಹೊರಗೂ ಸಡಗರದಿಂದ ಓಡಾಡುತ್ತಾ ಕೆಲಸ ಮಾಡುತ್ತಿದ್ದುದನ್ನು ಬೀದಿ ಜನರು ನೋಡುತ್ತಿದ್ದಾಗ, ನಮಗೆ ನಾವೇನೋ ಭಾರತದ ಪ್ರಧಾನ ಮಂತ್ರಿಮಂತ್ರಿಗಿರಿ ಮಾಡುತ್ತಿರುವಂತೆ ಒಂದು ಭ್ರಮೆ ಸೃಷ್ಟಿಯಾಗಿಬಿಡುತ್ತಿತ್ತು. ಈ ಭ್ರಮೆಯಲ್ಲಿಯೇ ತೇಲುತ್ತಾ ಮತ್ತಷ್ಟು ಉತ್ಸಾಹದಿಂದ ದಿನಾ ಈ ಕೆಲಸ ಮಾಡುತ್ತಿದ್ದೆವು. ಆಡಳಿತ ಮಂಡಳಿಯ ಸದಸ್ಯರುಗಳು ಕೆಲವರು ಆಗಾಗ ಬಂದು ನಮ್ಮ ಕೆಲಸದ ಉಸ್ತುವಾರಿ ಮಾಡುತ್ತಾ, ಸೂಕ್ತ ಸಲಹೆಗಳನ್ನು ಕೊಟ್ಟು, ಸರಿಯಾಗಿ ಕೆಲಸ ಮಾಡಿಸುತ್ತಿದ್ದರು.
ಹೆಸರಾಂತ ಸಂಗೀತಗಾರರು ಮಧ್ಯಾನ್ಹದ ಹೊತ್ತಿಗೇ ನಗರಕ್ಕೆ ಬಂದು ಸೇರುತ್ತಿದ್ದರು. ಅವರನ್ನು ಶ್ರೀರಾಮ ಮಂದಿರದ ಮುಖ್ಯ ಕಾರ್ಯದರ್ಶಿಯೋ ಅಥವಾ ಅಧ್ಯಕ್ಷರೋ ಮೈಸೂರಿನಿಂದ ಕರೆತಂದು ತಮ್ಮ ಮನೆಯಲ್ಲಿ ವಿಶ್ರಾಂತಿಗಾಗಿ ತಂಗುವ ಏರ್ಪಾಟು ಮಾಡಿಸುತ್ತಿದ್ದರು.
ಸಂಜೆ ಕಾರ್ಯಕ್ರಮ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಕಾರಿನಲ್ಲಿ ಇಡೀ ತಂಡ ರಾಮ ಮಂದಿರದ ಕಾರ್ಯದರ್ಶಿ ಅಥವಾ ಅಧ್ಯಕ್ಷರ ಜತೆ ಬಂದು ಇಳಿಯುತ್ತಿತ್ತು. ಅವರನ್ನು ಸ್ವಾಗತಿಸಿ ಹಾರ ತುರಾಯಿ ಅರ್ಪಣೆ ಮಾಡಿ ಒಳಗೆ ಕರೆದುಕೊಂಡು ಹೋಗಿ, ಶ್ರೀರಾಮ ದೇವರ ದರ್ಶನ ಮಾಡಿಸಿದ ಮೇಲೆ, ಅವರೆಲ್ಲ ವೇದಿಕೆಯ ಮೇಲೆ ಆಸೀನರಾಗಿ ಕಛೇರಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಈ ಹೆಸರಾಂತ ಸಂಗೀತ ವಿದ್ವಾಂಸರು ರಾಮ ಮಂದಿರದ ಬಳಿ ಬಂದಾಗ, ಅವರನ್ನು ಸ್ವಾಗತಿಸಿ ಹಾರ ತುರಾಯಿ ನೀಡಿ ಸತ್ಕರಿಸುತ್ತಿದ್ದರು ಎಂದು ತಿಳಿಸಿದೆನಲ್ಲ, ರಾಮ ಮಂದಿರದ ಕಾರ್ಯದರ್ಶಿ / ಅಧ್ಯಕ್ಷರಿಗೆ ಹಾರ ತುರಾಯಿಗಳನ್ನು ಪಕ್ಕದಲ್ಲಿಯೇ ನಿಂತು ಅವರ ಕೈಗೆ ಕೊಡುವ ಕೆಲಸ ಸಹ ನಮ್ಮ ಹುಡುಗರ ಪಾಲಿಗೇ ಬರುತ್ತಿತ್ತು. ಆ ಕ್ಷಣದಲ್ಲಿ ನಮ್ಮ ಮುಖಗಳನ್ನು ನೋಡಬೇಕಿತ್ತು. ಗೌರೀಶಂಕರ ಶಿಖರ ಏರಿದ ತೇನ್ ಸಿಂಗನ ಮುಖದಲ್ಲೂ ಸಹ ಅಂಥ ಗರ್ವ, ಆ ಪರಿಪೂರ್ಣತಾ ಭಾವ ಇತ್ತೋ ಇಲ್ಲವೋ ಸಂಶಯವೇ.
ಆಗಿನ ಕಾಲದಲ್ಲಿ ಫೋಟೋ, ವಿಡಿಯೋ ಮುಂತಾದ ಸೌಲಭ್ಯಗಳು ಇರಲಿಲ್ಲ, ಸ್ಟಿಲ್ ಫೋಟೋ ಇತ್ತು. ಆ ಊರಿನಲ್ಲಿದ್ದ ಒಂದು Photo Studio ಮಾಲೀಕ ಫೋಟೋ ತೆಗೆಯುತ್ತಿದ್ದ. ಆದರೆ ನಮ್ಮ ಪಡ್ಡೆ ಹುಡುಗರ ಮುಸುಡಿಗಳನ್ನು ಅವನು ಯಾಕೆ ಕ್ಲಿಕ್ಕು ಮಾಡ್ತಾನೆ, ಸಂಗೀತಗಾರರು ಮಾತ್ರ ಕಾಣುವ ಹಾಗೆ ಚಿತ್ರ ತೆಗೆಯುತ್ತಿದ್ದ. ಹೀಗಾಗಿ ಮೇಲಿನ ಮಧುರ ಕ್ಷಣಗಳ ಛಾಯಾಚಿತ್ರಗಳ ಧಾಖಲೆ ನನ್ನಲಿಲ್ಲ. ಸಂಗೀತಗಾರರು ಹಾಡಲು, ವಾದ್ಯನುಡಿಸಲು ವೇದಿಕೆ ಸಿದ್ಧಪದಿಸಿರುತ್ತಿತ್ತು. ಆ ವೇದಿಕೆ ಅಂದರೆ, ಐದಾರು ಬೆಂಚುಗಳನ್ನು ಚಚ್ಚೌಕವಾಗಿ ಒಂದಕ್ಕೊಂದು ತಾಗಿರುವಂತೆ ಜೋಡಿಸಿ, ಅದರ ಮೇಲೆ ಬಣ್ಣ ಬಣ್ಣದ ಜಮಖಾನ ಹಾಸಿ ಬಿಡುವುದು ಮತ್ತೆ ನಾಲ್ಕೂ ಕಡೆ ಚಿತ್ತಾರವಾಗಿ ಹೂವಿನ ಮಾಲೆಗಳನ್ನು ಅಂಟಿಸಿ ಬಿಡುವುದು. ಮುಗಿಯಿತು ವೇದಿಕೆಯ ಸಿದ್ಧತೆ. ಇನ್ನು ಮೈಕುಗಳನ್ನು, ಧ್ವನಿವರ್ಧಕಗಳನ್ನು ಆ ಊರಿನ Electrical contractor ಜೋಡಿಸಿಕೊಡುತ್ತಿದ್ದರು. ಜನರು ಕುಳಿತು ಸಂಗೀತ ಕೇಳಲು ರಾಮಮಂದಿರದ ನೆಲದ ಮೇಲೆ ಕಂಬಳಿ, ಜಮಖಾನಗಳನ್ನು ಹಾಸಿಬಿಡುತ್ತಿದ್ದರು. ಒಂದು ಡಜನ್ನಿನಷ್ಟು ಮಾತ್ರ ಕುರ್ಚಿಗಳು. ಅವುಗಳು ಆ ಊರಿನ ಪ್ರಮುಖಾತಿ ಪ್ರಮುಖರಿಗೆ ಮಾತ್ರ ಮೀಸಲು. ಮಿಕ್ಕವರು ಅದರ ಹತ್ತಿರ ಕೂಡ ಸುಳಿಯುವ ಹಾಗಿರಲಿಲ್ಲ. ಇಷ್ಟೆಲ್ಲಾ ಪೀಠಿಕಾ ಪ್ರಕರಣದ ನಂತರ ಈಗ ನಾವು ಈ ಗೆಪ್ತಿಯ ಶೀರ್ಷಿಕೆಯ ಸಂಗೀತ ಕಲಾನಿಧಿ ಟಿ. ಚೌಡಯ್ಯನವರ ಪ್ರಕರಣಕ್ಕೆ ಬರೋಣ. ಆ ವರ್ಷ ಶ್ರೀ ಟಿ. ಚೌಡಯ್ಯನವರ ಸೋಲೋ ವಯಲಿನ್ ವಾದನದ ಕಛೇರಿ ಏರ್ಪಾಟಾಗಿ ಬಿಟ್ಟಿತ್ತು.
ಮೈಸೂರು ಚೌಡಯ್ಯನವರು ಅಂದರೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಹುಲಿ ಎಂದು ಗುರುತಿಸಲ್ಪಟ್ಟಿದ್ದರು. ಮೈಸೂರಿನ ಚೌಡಯ್ಯನವರು ತಮಿಳುನಾಡಿನ ಸಂಗೀತ ದಿಗ್ಗಜರುಗಳ ಮಧ್ಯದಲ್ಲಿ, ಈಸಿ ಜೈಸಿ ಸೈ ಎನಿಸಿಕೊಂಡಿದ್ದ ಧೀರ ಧೀಮಂತ ಕಲಾವಿದ.
ಆ ಕಾಲದಲ್ಲಿ ತಮಿಳುನಾಡಿನ ಸಂಗೀತಕಾರರ ಅಧಿಪತ್ಯವನ್ನು ಮೆಟ್ಟಿನಿಂತು ತನ್ನದೇ ಆದ ಛಾಪುಮೂಡಿಸಿದ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಒಂಟಿ ಸಲಗದಂತೆ ನಡೆದ, ನಾಡು ಕಂಡ ಅಪರೂಪದ ಕಲಾವಿದ ಮೈಸೂರು ಟಿ. ಚೌಡಯ್ಯ. ಅನೇಕ ಶಿಷ್ಯರುಗಳನ್ನು ತಯಾರುಮಾಡಿ ಅವರುಗಳೂ ಸಹ ಸಂಗೀತ ಕ್ಷೇತ್ರದಲ್ಲಿ ನೆಲೆನಿಲ್ಲುವಂತೆ ಅವಕಾಶಗಳನ್ನು ಕಲ್ಪಿಸಿದ ಸ್ವರರಾಗ ಸುಧಾರಕರು ಟಿ. ಚೌಡಯ್ಯ.
ಅಂಥ ದಿಗ್ಗಜ ನಮ್ಮ ಚಾಮರಾಜನಗರಕ್ಕೆ ಪಿಟೀಲು ಕಛೇರಿ ನಡೆಸಿಕೊಡಲು ಬರುತ್ತಿದ್ದಾರೆ ಎಂಬ ಸುದ್ದಿ, ಎಲ್ಲರಲ್ಲಿ ವಿದ್ಯುತ್ ಸಂಚಾರದಂತೆ ಸಂಚಲನವನ್ನು ಮೂಡಿಸಿತ್ತು. ಚೌಡಯ್ಯನವರು ಅಂದರೇನೆ ಎಲ್ಲರಿಗೂ ಒಂದು ರೀತಿ ಭಯ, ಗೌರವ. ಅವರದ್ದು ಅಂಥ ಒಂದು Himalayan image. ರಾಮ ಮಂದಿರದ ಕಾರ್ಯದರ್ಶಿಯವರು ಅಂದು ಮಧ್ಯಾನ್ಹವೇ ಚೌಡಯ್ಯನವರನ್ನು ಚಾಮರಾಜನಗರಕ್ಕೆ ಕರೆತಂದರು. ಸಂಜೆ ಕಛೇರಿ ಚೌಡಯ್ಯನವರು ಮತ್ತು ಅವರ ತಂಡ ರಾಮಮಂದಿರಕ್ಕೆ ಬಂದಿದ್ದಯಿತು. ಇಡೀ ತಾಲ್ಲೂಕಿನ ಜನವೆಲ್ಲ ಅಲ್ಲಿ ಜಮಾಯಿಸಿ ಬಿಟ್ಟಿದ್ದರು.
ನಮ್ಮ ಪಡ್ಡೆ ಹುಡುಗರ ಗುಂಪು ರಾಮ ಮಂದಿರದ ಒಳಗೆ ಸ್ವಾಗತದ ಸಿದ್ಧತೆ ಮಾಡಿಕೊಂಡು ಬಾಗಿಲಲ್ಲಿಯೇ ಕಾದಿತ್ತು. ಚೌಡಯ್ಯನವರು ಬಂದಕೂಡಲೇ ಅವರಿಗೆ ಮಾಲಾರ್ಪಣೆ ಮಾಡಿ ಕಾರ್ಯದರ್ಶಿಯವರು ಒಳಕ್ಕೆ ಬರಮಾಡಿಕೊಂಡರು. ಗಂಭೀರವಾದ ನಡೆ, ಅತ್ತಿತ್ತ ನೋಟ ಹರಿಸುತ್ತಾ, ಚೌಡಯ್ಯನವರು ವೇದಿಕೆಯ ಮೇಲೆ ಆಸೀನರಾದರು. ಅವರ ತಂಡದ ಇತರ ಕಲಾವಿದರೆಲ್ಲ ತಮ್ಮ ತಮ್ಮ ಜಾಗಗಳಲ್ಲಿ ಕುಳಿತು, ತಂಬೂರಿ, ಮೃದಂಗ, ಪಿಟೀಲು ಮುಂತಾದ ಎಲ್ಲಾ ವಾದ್ಯಗಳನ್ನು, ಅವುಗಳಿಗೆ ಹೊದಿಸಿದ್ದ ಗೌಸು ತೆಗೆದು ಶೃತಿ ಮಾಡಲು ಪ್ರಾರಂಭಿಸಿದ್ದಾಯಿತು.
ಅಂದು ಚೌಡಯ್ಯನವರಿಗೆ ಮೃದಂಗದ ಸಾಥ್ ನೀಡಿದವರು ತಗಡೂರು ಮೂಗಯ್ಯ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಟಿ. ಎಂ. ಪುಟ್ಟಸ್ವಾಮಯ್ಯನವರು.
ಪುಟ್ಟಸ್ವಾಮಯ್ಯನವರು ಆಜಾನುಬಾಹು ಮತ್ತು ಗಂಭೀರ ಸ್ವಭಾವದವರು. ಮೃದಂಗವಾದನದಲ್ಲಿ ಬಹಳ ಹೆಸರು ಮಾಡಿದ್ದ ವಿದ್ವಾಂಸರು. ಚೌಡಯ್ಯನವರ ಕಛೇರಿಗಳಿಗೆ ಸಾಮಾನ್ಯವಾಗಿ ಪಟ್ಟಸ್ವಾಮಯ್ಯನವರೇ ಮೃದಂಗ ನುಡಿಸುತ್ತಿದ್ದರು. ಅಂದೂ ಸಹ ಪುಟ್ಟಸ್ವಾಮಯ್ಯನವರದ್ದೇ ಮೃದಂಗ ಪಕ್ಕವಾದ್ಯ. ಕಛೇರಿ ಪ್ರಾರಂಭ ವಾಯಿತು. ಚೌಡಯ್ಯನವರ ಪಿಟೀಲಿನಿಂದ ಅಂದು ಹೊರಹೊಮ್ಮಿದ ನಾದ ತರಂಗಗಳು ನೆರೆದಿದ್ದ ರಸಿಕರನ್ನು ಮಂತ್ರಮುಗ್ಧರನ್ನಾಗಿಸಿ, ಸಂಗೀತದ ಕಡಲಲ್ಲಿ ತೇಲಾಡಿಸಿ, ಆನಂದದ ಪರಮಾವಧಿಗೇ ಮುಟ್ಟಿಸಿ ಬಿಟ್ಟಿತು.
ಅಂದು ನಾನು ವೇದಿಕೆಯಿಂದ ತುಸು ಮುಂದೆಯೇ ಜಮಖಾನದ ಮೇಲೆ ಕುಳಿತು ಚೌಡಯ್ಯನವರ ಪಿಟೀಲಿನ ಮಾಂತ್ರಿಕತೆಯನ್ನು ಅನುಭವಿಸುತ್ತಿದ್ದೆ. ನನ್ನ ಬಳಿ ಸ್ವಲ್ಪ ಮುಂದೆ ಆ ಊರಿನ ಅನೇಕ ಪ್ರಮುಖರು ಕುಳಿತು ಸಂಗೀತ ಕೇಳುತ್ತಿದ್ದರು. ಸುಮಾರು ಎರಡು ಗಂಟೆಗಳ ಕಾಲ ಕಛೇರಿ ನಡೆದಿರಬಹುದು. ಚೌಡಯ್ಯನವರು ಒಂದು ಕೀರ್ತನೆ ನುಡಿಸಿ, ಮೃದಂಗದವರಿಗೆ ತನಿ ಆವರ್ತನ ನುಡಿಸುವ ಅವಕಾಶ ನೀಡಿದ್ದರು. ಪುಟ್ಟಸ್ವಾಮಯ್ಯನವರು ಅಮೋಘವಾಗಿ ಮೃದಂಗದ ತನಿ ನುಡಿಸಿದರು. ಸರಿ ಕೀರ್ತನೆಯನ್ನು ಮುಗಿಸಿ ಮತ್ತೊಂದು ಕೀರ್ತನೆ ನುಡಿಸುವುದಕ್ಕೆ ಮುಂಚೆ ಪಿಟೀಲನ್ನು ಹಿಡಿದು ಕಮಾನನ್ನು ಅದರ ಮೇಲೆ ಆಡಿಸುತ್ತಾ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರು ಚೌಡಯ್ಯ.
ಆ ಸಮಯದಲ್ಲಿ ನನ್ನ ಪಕ್ಕದಲ್ಲಿದ್ದ ಆ ಊರಿನ ಪ್ರಮುಖರು ಒಬ್ಬರು ನನ್ನನ್ನು ಬೆರಳಿನಿಂದ ಮೃದುವಾಗಿ ತಿವಿದು, ಹಿಂದಕ್ಕೆ ತಿರುಗಿದ ನನ್ನ ಕಿವಿಯಲ್ಲಿ “ಲೋ, ಚೌಡಯ್ಯನವರಿಗೆ ನಾದಸ್ವರ ನುಡಿಸು ಅಂತ ಕೇಳೋ” ಎಂದು ಪಿಸುಗುಟ್ಟಿದರು. ವಾಲಗಕ್ಕೆ ನಾಗಸ್ವರ / ನಾದಸ್ವರ ಎಂದು ಪರ್ಯಾಯವಾಗಿ ಕರೆಯುವುದು ರೂಢಿ. ಹೀಗಾಗಿ ವಾಲಗದಂತೆ ಎನ್ನುವ ಬದಲು ನಾದಸ್ವರದಂತೆ ಎಂದು ಹೇಳಿದ್ದು.
ಅವರು ಹೀಗೆ ಹೇಳಲು ಕಾರಣವೂ ಇತ್ತು. ಚೌಡಯ್ಯನವರು ಪಿಟೀಲಿನಲ್ಲಿ ವಾಲಗದ ಧ್ವನಿ ಬರುವಂತೆ ಬಹಳ ಚಾತುರ್ಯದಿಂದ ನುಡಿಸುತ್ತಿದ್ದರು. ಅವರ ಕಛೇರಿಗಳಲ್ಲಿ ಈ ರೀತಿ ಅವರು ನುಡಿಸುವುದು ಒಂದು ವಿಶೇಷ ಮತ್ತು ಅವರ ರಸಿಕರಿಗೆಲ್ಲ ಅವರ ಈ ರೀತಿಯಾದ ವ್ಯತ್ಯಾಸವಾದ ನುಡಿಗಾರಿಕೆ ಅತ್ಯಂತ ಪ್ರಿಯವಾದ ವಿಷಯವಾಗಿತ್ತು.
ಅಂದು ಕಛೇರಿಯಲ್ಲಿ ಚೌಡಯ್ಯನವರು ಈ ರೀತಿ ವಾಲಗದ ಧ್ವನಿಯಂತೆ ಪಿಟೀಲನ್ನು ನುಡಿಸಿರಲಿಲ್ಲ. ನಮ್ಮ ಊರಿನ ಪ್ರಮುಖರೂ ಸಹ ಅವರ ಪಿಟೀಲಿನಿಂದ ಈ ವಿಶೇಷ ಧ್ವನಿಯನ್ನು ಕೇಳಲು ಆಸೆ ಪಟ್ಟಿರಬೇಕು. ಆದರೆ ತಾವೇ ಎದ್ದು ನಿಂತು ಕೇಳಿದರೆ, ಎಲ್ಲಿ ಚೌಡಯ್ಯನವರು ರೇಗಿಬಿಡುತ್ತಾರೋ ಅಥವಾ ಬೇರೇನಾದರೂ ಹೇಳಿದರೆ ಎಲ್ಲರ ಮುಂದೆ ತಾನು ಮುಖಭಂಗ ಅನುಭವಿಸಬೇಕಾಗಬಹುದೋ ಎಂಬ ಅಳುಕಿನಿಂದ ಮುಂದೆ ಕುಳಿತ ನನ್ನನ್ನು ಪ್ರಚೋದಿಸಿರಬೇಕು.
ನಾನು ಚೌಡಯ್ಯನವರ ಪಿಟೀಲಿನ ನಾದ ಮಾಧುರ್ಯವನ್ನು ಮುಂದೆ ಕುಳಿತು ಸವಿಯುತ್ತಿದ್ದೆ. ನನ್ನ ಸಂಗೀತದ ಜ್ಞಾನ ಆ ವಯಸ್ಸಿಗೆ ಅಷ್ಟಕಷ್ಟೇ. ಆದರೆ ಸಂಗೀತವೆಂದರೆ, ಸಂಸ್ಕೃತದ ಈ ನುಡಿಯಂತೆ “ಶಿಶುರ್ವೇತ್ತಿ, ಪಶುರ್ವೇತ್ತಿ, ವೇತ್ತಿ ಗಾನರಸಂ ಫಣಿ . . . ಎಂದರೆ ಸಂಗೀತದ ಮಧುರ ನಾದ ತರಂಗಗಳು ಹೊಮ್ಮಿಸುವ ಕಂಪನಗಳನ್ನು, ಸಂಗೀತ ಸುಧಾರಸವನ್ನು ಶಿಶು, ಪಶು, ಪನ್ನಗ ಹೀಗೆ ಸಕಲ ಜೀವರಾಶಿಗಳೂ ಸವಿಯಬಹುದು” ಎಂಬಂತೆ, ನಾನು ಶಿಶುವೂ ಅಲ್ಲ, ಪಶುವೂ ಅಲ್ಲ, ಹಾವಂತೂ ಅಲ್ಲವೇ ಅಲ್ಲ, ಒಟ್ಟಿನಲ್ಲಿ ಏನೋ ಒಂದಾಗಿ, ತನ್ಮಯನಾಗಿ ಕೇಳುತ್ತಿದ್ದೆ. ಆಗಲೇ ಆ ಹಿರಿಯರು ನನಗೆ ಚೌಡಯ್ಯನವರನ್ನು ನಾದಸ್ವರ ನುಡಿಸುವಂತೆ ಕೇಳು ಎಂದು ಹೇಳಿದ್ದು.
ನಾನೂ ಕೂಡ ವಿಧೇಯನಾಗಿ ಎದ್ದು ನಿಂತೆ. ಮುಂದಿನ ಕೀರ್ತನೆ ನುಡಿಸಲು ತಯಾರಾಗುತ್ತಿದ್ದ ಚೌಡಯ್ಯನವರು ಎದ್ದು ನಿಂತ ನನ್ನನ್ನು ಕಂಡು “ಏನೋ” ಅಂದರು. ಆಗ ನಾನು ಅತೀ ನಮ್ರತೆಯಿಂದ “ಸಾರ್, ನಾದಸ್ವರ ನುಡಿಸಬೇಕಂತೆ” ಎಂದು ಒದರಿದೆ.
ಇದನ್ನು ಕೇಳಿದ ಚೌಡಯ್ಯನವರ ಪ್ರತಿಕ್ರಿಯೆ ಹೀಗಿತ್ತು “ನಾದ ಇಲ್ಲದ ಸ್ವರ ಯಾವುದೋ? ಕುತ್ಕೊಳೋ” ಎಂದು ಗದರಿ ಬಿಟ್ಟರು. ಈ ಮಾತನ್ನು ಹೇಳುವಾಗ ಚೌಡಯ್ಯನವರ ಮುಖದ ಮೇಲೆ ಒಂದು ಕೊಂಚ ಕೋಪ, ಸ್ವಲ್ಪ ತುಟಿಯಂಚಿನಲ್ಲಿ ಕಿರುನಗೆ ಮತ್ತೇನೋ ಒಂದು ರೀತಿಯಾದ ಗಾಂಭೀರ್ಯ ಹೀಗಿ ಹಲವು ಭಾವಗಳು ಅವರ ಮುಖದಲ್ಲಿ ಮೂಡಿ ಬಂದವು. ಆದರೂ ನನ್ನ ಕೋರಿಕೆಯನ್ನು ಅವರು ತಾತ್ಸಾರ ಮಾಡಲಿಲ್ಲ. ಪಿಟೀಲನ್ನು ನಾದಸ್ವರದ ಧ್ವನಿಯಲ್ಲಿ ನುಡಿಸಿ ಅಲ್ಲಿ ನೆರೆದಿದ್ದವರನ್ನೆಲ್ಲ ದಂಗು ಬಡಿಸಿಬಿಟ್ಟರು. ಸಾವಿರಾರು ಕಛೇರಿಗಳನ್ನು ದೇಶದ ಉದ್ದಗಲಕ್ಕೂ ನೀಡಿ ಅನುಭವವಿದ್ದ ಅವರಿಗೆ, ಈ ಕೋರಿಕೆ ಯಾರೋ ದೊಡ್ಡವರು, ಈ ಹುಡುಗನ ಮೂಲಕ ಹೇಳಿಸಿದ್ದಾರೆ ಎಂದು ತಿಳಿಯಲು ಬಹಳ ಸಮಯ ಬೇಕಿರಲಿಲ್ಲ.
ಆದರೆ ಅವರು ಅಂದು ನುಡಿದ ಮಾತುಗಳು ಇಂದಿಗೂ ನನ್ನನ್ನು ಆಳವಾಗಿ ಚಿಂತಿಸುವಂತೆ ಪ್ರಚೋದಿಸುತ್ತಲೇ ಇದೆ. ನಾದವೇ ಸಂಗೀತದ ಆತ್ಮ, ನಾದ ಮಾಧುರ್ಯವೇ ಸಂಗೀತದ ಸಾರ, ಹೂವಿಗೆ ಗಂಧದಂತೆ ಸಂಗೀತಕ್ಕೆ ನಾದವೇ ಆತ್ಮವಾದರೆ, ಸಾಹಿತ್ಯ ಶರೀರ. ನಾದ ಸ್ವರಗಳ ಸಮ್ಮೇಳನದಿಂದಲೇ ಆನಂದದ ಸಾಕ್ಷಾತ್ಕಾರ.
ಸಂಗೀತ ಸರಸ್ವತಿಯನ್ನು ತನ್ನ ಅವಿರತ ಸಾಧನೆಯಿಂದ ಸಾಕ್ಷಾತ್ಕಾರ ಮಾಡಿಕೊಂಡಿದ್ದ ಚೌಡಯ್ಯನವರಿಗೆ ಅಂದು ನನ್ನ ಕೋರಿಕೆ ಏನೆಂದು ತೋರಿತೋ ತಿಳಿಯದು. ಇಂದೂ ಸಹ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿದೆ ಚೌಡಯ್ಯನವರ ಆ ನುಡಿಗಳು
“ನಾದ ಇಲ್ಲದೆ ಯಾವುದೋ ಸ್ವರ?”