ಕಥೆ: ಪರಿಭ್ರಮಣ..(16)

ಕಥೆ: ಪರಿಭ್ರಮಣ..(16)

(ಪರಿಭ್ರಮಣ..(15)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಮಳೆಯಿಂದ ತಂಪಾದ ವಾತಾವರಣದಲ್ಲಿ ಎದುರಿಗಿದ್ದ ಕಾಫಿ ಬಾರೊಂದರ ಹೊರಗೆ ಹಾಕಿದ್ದ ಟೇಬಲ್ಲೊಂದನು ಹಿಡಿದು ಒಂದು 'ಕೆಫೆ ಲತೇ' ಕಾಫಿಗೆ ಆರ್ಡರು ಮಾಡಿದ ಶ್ರೀನಾಥ. ಅಲ್ಲಿ ಸಿಗುತ್ತಿದ್ದ ಕಹಿ ಕಾಫಿಗಳಲ್ಲಿ ಇದೊಂದು ಮಾತ್ರ ಸೊಗಸಾದ, ಹಿತವಾದ ಸುವಾಸನೆಯೊಂದಿಗೆ ಕುಡಿಯಲು ಮುದವೆನಿಸುತ್ತಿದ್ದ ಕಾಫಿಯಾದ ಕಾರಣ ಶ್ರೀನಾಥ ಸಾಧಾರಣ ಇದನ್ನೆ ಆರ್ಡರು ಮಾಡುತ್ತಿದ್ದುದೆ ಹೆಚ್ಚು. ಇದು ಸಿಗದ ಕಡೆ ಮಾತ್ರ 'ಕಪುಚಿನೋ' ಮೊರೆ ಹೋಗುತ್ತಿದ್ದುದು. ಭಾರತೀಯ ಕಾಫಿ ಟೀ ಬೇಕೆಂದರೆ ಭಾರತೀಯ ರೆಸ್ಟೋರೆಂಟುಗಳಿಗೆ ಮಾತ್ರವೆ ಹೋಗಬೇಕಾಗಿ ಬರುತ್ತಿದ್ದ ಕಾರಣ ಈ ರುಚಿಗಳನ್ನು ಪತ್ತೆ ಹಚ್ಚಿ ಅಭ್ಯಾಸ ಮಾಡಿಕೊಂಡಿದ್ದ. ಮಳೆ ಬಂದು ನಿಂತ ವಾತಾವರಣಕ್ಕೆ ಸೂಕ್ತವಾಗಿದ್ದ ಕಾಫಿಯನ್ನು ಹೀರುತ್ತಲೆ ತಟ್ಟನೆ ನೆನಪಾಗಿದ್ದು - ಮುಂದಿನ ವಾರ ಕಳೆದ ನಂತರ ಬರುವ ಸೋಮವಾರದಿಂದ ಆರಂಭವಾಗಬೇಕಾಗಿದ್ದ ಟ್ರೈನಿಂಗ್ ಕಮ್ ಟೆಸ್ಟಿಂಗಿನ ಕುರಿತು. ಅದಕ್ಕೆ ಸರಿಯಾದ ಸೂಕ್ತ ಅಳತೆಯ ಟ್ರೈನಿಂಗ್ ಹಾಲ್ ಸಿಕ್ಕದೆ ಅದೆಷ್ಟು ಪರದಾಡುವಂತಾಗಿತ್ತು? ಸದ್ಯ, ಕಾಫಿಯ ಜತೆಗೆ ನೆನಪಾಗಿದ್ದ ಕುನ್. ಸೂ ವಿನ ಸಮಯೋಚಿತ ಚತುರತೆಯ ನೆರವಿನಿಂದಾಗಿ ಆ ಟ್ರೈನಿಂಗ್ ರೂಮಿನ ಬೆಟ್ಟದಂತಹ ದೊಡ್ಡ ಸಮಸ್ಯೆ ಹತ್ತಿಯಷ್ಟು ಹಗುರವಾಗಿ ಕರಗಿಹೋಗಿತ್ತು. ಇಂತಹ ಟ್ರೈನಿಂಗ್ ಹೊರಗಿನ ಹೋಟೇಲ್ಲುಗಳಲ್ಲಿಯೂ ಮಾಡುವಂತಿರಲಿಲ್ಲ - ಅಲ್ಲಿ ಟ್ರೈನಿಂಗಿಗೆ ಬೇಕಾದ ಸಲಕರಣೆ ಸಿಗುತ್ತಿದ್ದರೂ ಅಲ್ಲಿಂದ ಸಿಸ್ಟಮ್ಮಿಗೆ ಕನೆಕ್ಟ್ ಮಾಡಲೂ ಆಗುತ್ತಿರಲಿಲ್ಲ. ತಾಂತ್ರಿಕ ಸಲಕರಣೆಯ ಜತೆಗೆ ಸುರಕ್ಷತೆ ಇತ್ಯಾದಿಗಳೆಲ್ಲ ಸೇರಿ ಆಫೀಸಿನಲ್ಲೆ ಜಾಗ ಹುಡುಕುವಂತೆ ಪ್ರೇರೇಪಿಸಿದ್ದವು. ಆ ಜಾಗದಲ್ಲಿದ್ದ ಒಂದೆ ಒಂದು ತೊಡಕೆಂದರೆ ಅದನ್ನು ಕಸ್ಟಮರ ಟ್ರೈನಿಂಗಿಗೆ ಬಳಸುತ್ತಿದ್ದ ರೀತಿ. ಆ ವಿಧಾನದಲ್ಲಿ ಕೂರುವ ಜಾಗದ ವ್ಯವಸ್ಥೆ ಶ್ರೀನಾಥನ ಟ್ರೈನಿಂಗ್ ರೀತಿಗೆ ಹೊಂದಿಕೆಯಾಗದ ಕಾರಣ ಆ ಇಡೀ ಲೇಔಟನ್ನು ತಾತ್ಕಾಲಿಕವಾಗಿಯಾದರೂ ಬದಲಿಸಿಕೊಳ್ಳಬೇಕಿತ್ತು. ಆ ಬದಲಿಕೆಗೆ ಅದೆಷ್ಟು ಹೊತ್ತು ಹಿಡಿಯುವುದೊ ಗೊತ್ತಿರಲಿಲ್ಲ. ಅಲ್ಲದೆ ಮುಂದಿನವಾರ ಅಲ್ಲಿ ಬೇರೆ ಕಸ್ಟಮರ ಟ್ರೈನಿಂಗ್ ನಡೆಯುತ್ತಿದ್ದ ಕಾರಣ ಎಲ್ಲಾ ಬದಲಾವಣೆಯೂ ಮುಂದಿನ ಶನಿವಾರ ಅಥವಾ ಭಾನುವಾರದೊಳಗೆ ಮುಗಿಸಬೇಕಿತ್ತು. ವಾರಾಂತ್ಯವಾದ ಕಾರಣ ಉಳಿದವರಾರಿಗೂ ಬರ ಹೇಳಲು ಮನಸಾಗದೆ ತಾನೊಬ್ಬನೆ ಬರಲು ನಿರ್ಧರಿಸಿಕೊಂಡಿದ್ದ. ಆದರೆ ಅಲ್ಲಿನ ಟೇಬಲ್ ಚೇರುಗಳ ಎಳೆದಾಟ, ಸ್ವಚ್ಚಗೊಳಿಸುವಿಕೆಗೆ ಸಹಾಯಕರು ಬೇಕೆಂದು ಯಾರನ್ನಾದರೂ ಕಳಿಸಲು ಎಚ್ಹಾರ್ಗೆ ಮನವಿ ಮಾಡಿಯೂ ಆಗಿತ್ತು. ಸಾಧ್ಯವಾದರೆ ಮುಂದಿನ ಶನಿವಾರವೆ ಎಲ್ಲಾ ಮಾಡಿ ಮುಗಿಸಿಬಿಡಬೇಕೆಂಬ ಅನಿಸಿಕೆಯೊಡನೆ ಕೊನೆಯ ಸಿಪ್ ಮುಗಿಸಿ ಕಪ್ ಕೆಳಗಿಡುವ ಹೊತ್ತಿಗೆ ಸರಿಯಾಗಿ ಅಲ್ಲಿದ್ದ ಜಾಹಿರಾತಿನ ಪತ್ರಿಕೆಯೊಂದು ಕಣ್ಣಿಗೆ ಬಿತ್ತು. ಅದೇನೆಂದು ಕುತೂಹಲದಿಂದ ಎತ್ತಿಕೊಂಡು ನೋಡಿದರೆ - ವಿವರಣೆ ಇಂಗ್ಲಿಷಿನಲ್ಲು ಇತ್ತು : ಅದು ಥಾಯ್ಲ್ಯಾಂಡಿನ ಹೆಸರಾಂತ "ತೇಲುವ ಮಾರುಕಟ್ಟೆ (ಫ್ಲೋಟಿಂಗ್ ಮಾರ್ಕೆಟ್ಟು)' ಕುರಿತದ್ದು. 

ಶ್ರೀನಾಥನಿಗೆ ತಿಳಿದಂತೆ ಇಡೀ ಥಾಯ್ಲ್ಯಾಂಡಿನಲ್ಲಿರುವುದು ಈ ರೀತಿಯ ಐದು ಮುಖ್ಯ ತೇಲು ಮಾರುಕಟ್ಟೆಗಳು. ಅದರಲ್ಲಿ ಬ್ಯಾಂಕಾಕಿಗೆ ತೀರಾ ಸಮೀಪವಾಗಿರುವುದು 'ಡಮ್ನೋಯನ್ ಸಡುವಾಕ್' ಹೆಸರಿನ ತೇಲುವ ಮಾರುಕಟ್ಟೆ ಮತ್ತು ಮಿಕ್ಕೆಲ್ಲದ್ದಕ್ಕಿಂತ ದೊಡ್ಡದು ಹೌದು. ಇದು ಬ್ಯಾಂಕಾಕಿಗೆ ಸಮೀಪದ್ದೆಂದೊ, ದೊಡ್ಡದೆಂದೊ ಇಲ್ಲಿಗೆ ಬರುವ ಪ್ರವಾಸಿಗಳೆಲ್ಲ ಹೆಚ್ಚಾಗಿ ಈ ಸ್ಥಳಕ್ಕೆ  ಹೋಗುವುದು. ಹೀಗಾಗಿ ಅಲ್ಲಿಗೆ ಹೋದರೂ ಸ್ಥಳೀಯರನ್ನು ಕಾಣುವುದು ಕಡಿಮೆಯೆ. ಜತೆಗೆ ಪ್ರವಾಸಿ ಆಕರ್ಷಣೆಯ ಮತ್ತೊಂದು ಸಹಜಾಂಗವಾದ 'ಟೂರಿಸ್ಟ್ ಫ್ರೆಂಡ್ಲೀ ಪ್ರೈಸಿಂಗ್' ನಿಂದಾಗಿ ಬೆಲೆಗಳೆಲ್ಲ ಒಂದಕ್ಕೆ ಮೂರು ಪಟ್ಟು ಹೆಚ್ಚು... ಬಹುಶಃ ಸ್ಥಳೀಯರ ಸಂದಣಿ ಅಲ್ಲಿ ಹೆಚ್ಚಾಗಿ ಕಾಣದಿರುವುದಕ್ಕೆ ಅದು ಒಂದು ಕಾರಣವೇನೊ? ಆದರೆ ಪ್ರವಾಸಿಗಳಾಗಿ ಮೂರು ದಿನದ ಖುಷಿಗೆ ಬರುವ ಪ್ರತಿಯೊಬ್ಬರೂ ಎಲ್ಲಾ ವಿಚಾರ ವಿವರಿಸಿಕೊಂಡು ಬಂದಿರುವುದಿಲ್ಲವಲ್ಲಾ? ಅಲ್ಲದೆ ಇರುವ ಸಮಯದಲ್ಲಿಯೆ ಹೆಚ್ಚು ಜಾಗ ಮುಗಿಸುವ ಅವಸರವಿದ್ದವರಿಗೆ ಸಮಯಾಭಾವದಿಂದ ಸೂಕ್ತವಾದ ತಾಣವೂ ಹೌದಾಗಿ, ಅಲ್ಲಿ ಹೋದರೆ ಬರಿ ವಿದೇಶಿ ಪ್ರವಾಸಿಗರಿಂದ ಮಾತ್ರವೆ ಗಿಜಿಗುಡುವ ಗದ್ದಲದ ಜಾಗ ಎಂದು ಕೇಳಿದ್ದ ಶ್ರೀನಾಥ. ಸುಮಾರು ದಿನಗಳಿಂದ ಅಲ್ಲೆ ವಾಸವಾಗಿದ್ದರೂ ಯಾಕೊ ಆ ಜಾಗಕ್ಕೆ ಹೋಗಲಿಕ್ಕೆ ಮನಸೆ ಆಗಿರಲಿಲ್ಲ. ತೇಲುವ ಮಾರುಕಟ್ಟೆಯೆಂದರೆ ಬ್ಯಾಂಕಾಕಿನ ವಿಲಾಸಿ ಆಧುನಿಕ ಜೀವನದ ದೃಷ್ಟಿಬೊಟ್ಟಿನಂತೆ ಅಂಟಿಕೊಂಡಿರುವ ಇತಿಹಾಸದ ಹಳತಿನ ಕೊಂಡಿ. ಇಲ್ಲಿನ ವಿಶೇಷವೆಂದರೆ ಪುಟ್ಟ ಪುಟ್ಟ ದೋಣಿ, ದೋಣಿ ಮನೆಗಳಲ್ಲಿ ಬರುವ ಸುತ್ತಮುತ್ತಿನ ಆ ಬೋಟಿನಲ್ಲೆ ಬದುಕುತ್ತ ಜೀವನ ದೂಡುವ ಜನರು ಆ ದೋಣಿಗಳಲ್ಲೆ ಸ್ಥಳೀಯವಾದ ಹಣ್ಣು, ತರಕಾರಿ ಮುಂತಾದ ಸರಕನ್ನು ಮಾರುತ್ತಾರೆ. ಹಾಗೆ ನದಿಯ ಈ ಓಣಿಗಾಲುವೆಯಲ್ಲೆ ಮುಂದುವರೆಯುತ್ತ ಪೂರ್ವ ನಿಯೋಜಿತ ಸ್ಥಳಗಳಲ್ಲಿ ತಮ್ಮ ವಹಿವಾಟನ್ನು ನಡೆಸುತ್ತಾರೆ. ಅದರಲ್ಲಿ ಕೆಲವು ಜಾಗಗಳಲ್ಲಿ ಬರಿ ಹಣ್ಣು ಹಂಫಲ ತರಕಾರಿಗಳು ಮಾತ್ರವಲ್ಲದೆ ಬೋಟಿನಲ್ಲೆ ಬೇಯಿಸಿ ಸಿದ್ದಪಡಿಸಿದ ಥಾಯ್ ಆಹಾರವನ್ನು ಮಾರುವುದು ಈಚಿನ ಬೆಳವಣಿಗೆ. ಇಡೀ ನೀರಿನ ತುಂಬಾ ತುಂಬಿಕೊಂಡ ದೋಣಿಗಳ ಮೇಲೆ ಸರಕನ್ನಿಟ್ಟುಕೊಂಡೆ ದಡದಂತಿರುವ ಮೇಲ್ಚಾವಣಿ ಹೊದಿಸಿದ ಅಂಗಳದಲ್ಲಿ ಬರುವ ಗಿರಾಕಿಗಳಿಗೆ ಕೇಳಿದ್ದು ಕಟ್ಟಿಕೊಡುವ ವೇಗ, ಚಾಕಚಕ್ಯತೆ ಅಮೋಘವಾದದ್ದು. ಬೋಟಿನ ತುಂಬಾ ತುಂಬಿಕೊಂಡ ಬಣ್ಣಬಣ್ಣದ ಫಲಾದಿಗಳ ಜತೆಗೆ ಮೂಲ ಥಾಯ್ ಜನರ ಬದುಕು ಸಂಸ್ಕೃತಿಯ ತುಣುಕನ್ನು ಪರಿಚಯಿಸುವುದೆಂಬ ಒಂದು ಕಾರಣಕ್ಕಾಗಿಯೆ ಅಲ್ಲಿಗೆ ಬರುವ ಪ್ರವಾಸಿಗಳ ಸಂಖ್ಯೆ ಹೆಚ್ಚೆಂದು ಎಲ್ಲೊ ಓದಿದ್ದ ನೆನಪು ಶ್ರೀನಾಥನಿಗೆ.

ಚಾರಿತ್ರಿಕವಾಗಿ ನೋಡುವುದಾದರೆ ಅದರಲ್ಲಿ ಸಾಕಷ್ಟು ಸತ್ಯವೂ ಇತ್ತು. ಮೊದಲಿಗೆ ಥಾಯ್ಲ್ಯಾಂಡ್ ಬಹುತೇಕ ಪೂರ್ತಿಯಾಗಿ ನದಿಗಳಿಂದಾವರಿಸಿಕೊಂಡಿದ್ದ ಭೂಭಾಗ. ಹೀಗಾಗಿ ಇಲ್ಲಿನ ಜನರ ಓಡಾಟಕ್ಕೆಲ್ಲ ಭೂಮಿಯ ಮೇಲಿನ ರಸ್ತೆಗಿಂತ ನೀರಿನ ಮೇಲಿನ ಸಾಗಾಣಿಕೆಯೆ ಹೆಚ್ಚು ಪ್ರಚಲಿತವಾಗಿದ್ದ ಮಾರ್ಗ. ಹೀಗಾಗಿ ಆ ಹೊತ್ತಿನಲ್ಲಿ ವಿಕಸಿತವಾಗಿದ್ದ ನಾಗರೀಕತೆಯೆಲ್ಲ ನದಿ ತಟದ, ನೀರಿನ ಒಡನಾಟದ ಪ್ರಭಾವದಿಂದಲೆ ಬೆಳೆದು ಬಂದಿದ್ದು. ಜನ ಸಾಮಾನ್ಯರ ಓಡಾಟ, ಒಡನಾಟ, ಸಾಗಾಣಿಕೆ, ಸಹಚರ್ಯೆಗಳೆಲ್ಲ ನೀರಿನ ಮೇಲೆ ಅವಲಂಬಿತವಾಗಿ ನೀರಿನ ಮುಖೇನವೆ ನಡೆಯುತ್ತಿದ್ದ ಸಮಯ. ಆ ಹೊತ್ತಿನಲ್ಲಿ ಹುಟ್ಟಿಕೊಂಡ ಸರಳ ಸಹಜ ವ್ಯವಹಾರ ವಿನಿಮಯ ಪದ್ದತಿಯೆ ಈ ತೇಲುವ ಮಾರುಕಟ್ಟೆ. ತಮ್ಮ ಸರಕನ್ನು ಸಾಗಾಣಿಕೆ ಮಾಡಿಕೊಂಡು ದೋಣಿಗಳ ಮುಖೇನವೆ ಮಾರಿ ಬಂದ ಹಣದಿಂದ ತಮಗೆ ಬೇಕಾದ್ದು ಖರೀದಿಸಿ ಪರಸ್ಪರ ಪೂರಕವಾಗಿ ಜೀವನ ನಡೆಸುವ ಈ ಪ್ರಧಾನವಾಗಿ ಪ್ರಚಲಿತವಾಗಿದ್ದ ಪದ್ದತಿಯಿಂದಾಗಿ ಆ ಕಾಲದ ಬ್ಯಾಂಕಾಕನ್ನು 'ಪೂರ್ವದ ವೆನ್ನಿಸ್' ಎಂದು ಕರೆಯುತ್ತಿದ್ದುದು. ಒಂದು ರೀತಿ ಇಡೀ ಜನ ಸಮುದಾಯ ಜೀವನಾಂಗವೆ ನೀರಿನ ಕಾಲುವೆಗಳಿಂದ ಸಂಪರ್ಕಿಸಲ್ಪಟ್ಟು ಇಡಿ ನಗರವೆ ಈ ರೀತಿಯ ಜಲ ಸಂಪರ್ಕ ಜಾಲದಿಂದ ಬಂಧಿಸಲ್ಪಟ್ಟಿತ್ತು. ಆದರೆ ಕಾಲಾಂತರದ ನಾಗರೀಕತೆ ತನ್ನ ಸಮ್ಮೋಹನಾಸ್ತ್ರದ ಪ್ರಭಾವ ಬೀರುತ್ತ ಬಂದ ಹಾಗೆ ಹೊಸ ಹೊಸ ರಸ್ತೆಗಳು ಸಾಗರೋಪಾಧಿಯಲ್ಲಿ ನಿರ್ಮಾಣಗೊಂಡಾಗ ಈ ಜಲ ಜಾಲ ಹಿಂದೆಗೆಯದೆ ಬೇರೆ ದಾರಿಯಿರಲಿಲ್ಲ. ನಿಧಾನವಾಗಿ ನವ ನಾಗರೀಕತೆ ತನ್ನ ಕಬಳಿಕೆಯ ಹಸ್ತ ಚಾಚುತ್ತ ಬಂದ ಹಾಗೆ ಒಂದೊಂದಾಗಿ ನದಿ ನೀರಿನ ಚಾಚು ಕಣಿವೆಗಳನೆಲ್ಲ ನುಂಗುತ್ತ ಇಡಿ ನಗರದ ರೂಪುರೇಷೆಯನ್ನೆಲ್ಲ ಬದಲಿಸತೊಡಗಿದವು. ಒಂದು ಕಾಲದಲ್ಲಿ ಪ್ರಮುಖವಾಗಿದ್ದ ಜಲ ಮಾರ್ಗಗಳೆಲ್ಲ ನಶಿಸಿ ಹೋಗಿ ರಸ್ತೆ ವಾಣಿಜ್ಯ ಪ್ರಮುಖ ಅಂಗವಾಗಿಹೋಯ್ತು. ಈಗ ಉಳಿದಿರುವ ಕೆಲವೆ ಕೆಲವು ತೇಲು ಮಾರುಕಟ್ಟೆಗಳು ಈ ಪುರಾತನ ವೈಭವದ ಪಳೆಯುಳಿಕೆಯ ತುಣುಕುಗಳಷ್ಟೆ. ಅವುಗಳು ಸಹ ಸಾಂಸ್ಕೃತಿಕ ಸಂಕೇತವಾಗಿ ಉಳಿಸಿಕೊಳ್ಳಬೇಕೆಂಬ ಪ್ರಜ್ಞಾಪೂರ್ವಕ ಸ್ಮೃತಿಯ ಅವಶೇಷಗಳಾಗಿ ಬದುಕಿವೆಯೆ ಹೊರತು ಅದರ ಮೂಲ ಸೌಂದರ್ಯ, ಉದ್ದೇಶ, ನೈಸರ್ಗಿಕ ಸೊಬಗು ಪ್ರಮುಖವಾಗಿ ಉಳಿದಿಲ್ಲ. ಸ್ಥಳೀಯ ಸಾಂಸ್ಕೃತಿಕತೆಯೆಂಬ ಹೆಸರಿನಲ್ಲಿ ಅಲ್ಲಿ ಬರಿಯ ವಿದೇಶಿ ತಲೆಗಳೆ ಕಂಡರೆ ಅದನ್ನು ಸಾಂಸ್ಕೃತಿಕ ಸರಕೆಂದು ಕರೆಯುವುದಾದರೂ ಹೇಗೆ? ಆದರೂ ಹಳತನ್ನು ಪ್ರತ್ಯಕ್ಷ ಕಣ್ಣಾರೆ ಕಂಡಿರದ ಹೊಸ ಪೀಳಿಗೆಗೆ ಆ ಪುರಾತನ ವೈಭವದ ತುಣುಕು ಪರಿಚಯವಾಗುವುದು ಅಲ್ಲಿನವರ ಹಾಗೆಯೆ ದೋಣಿಯೊಂದರಲ್ಲಿ ಕುಳಿತು ಆ ವಿಶಾಲ ನದಿಯಲ್ಲಿ ತೇಲುತ್ತಲೆ ಹೋಲಿಕೆಯಲ್ಲಿ ಇಕಾಟ್ಟಾದ ಸುಮಾರು ಐವತ್ತರಿಂದ ನೂರಡಿಯಷ್ಟು ಅಗಲದ ಕಾಲುವೆಗಳಲ್ಲಿ ಚಲಿಸುತ್ತ ಎರಡು ಬದಿಯಲ್ಲಿರುವ ಮನೆಗಳನ್ನು, ಸಂಸಾರಗಳನ್ನು, ಆ ವಾತಾವರಣದಲ್ಲೆ ಬೆಳೆದು ನಳನಳಿಸುವ ಸಸ್ಯ ರಾಶಿ - ಜೀವರಾಶಿಗಳನ್ನು ಗಮನಿಸುತ್ತ ನಡೆದಾಗಲಷ್ಟೆ. ಕಳೆದ ಬಾರಿ ಬಾಸಿನ ಬ್ಯಾಂಕಾಕ್ ಭೇಟಿಯಲ್ಲಿ ಇಡಿ ತಂಡದ ಜತೆ ಬೋಟೊಂದನ್ನು ಬಾಡಿಗೆಗೆ ಪಡೆದು ಒಂದೆರಡು ತಾಸಿನ ದೊಡ್ಡ ಸುತ್ತು ಹಾಕಲು ಹೊರಟಿದ್ದ ಕಾರಣ ಆ ಸೌಂದರ್ಯದ ತುಣುಕಿನ ಪರಿಚಯವೂ ಶ್ರೀನಾಥನಿಗಾಗಿತ್ತು. 

ಆದರೆ ಅದೆ ದೋಣಿ ವಿಹಾರದ ಯಾತ್ರೆಯಲ್ಲೆ ಶ್ರೀನಾಥನಿಗೊಂದು ವಿಪರ್ಯಾಸದ ಪರಿಚಯವೂ ಆಗಿತ್ತು. ಗಂಟೆಗಳ ಲೆಕ್ಕಾಚಾರದಲ್ಲಿ ಬೋಟೇನೊ ಬಾಡಿಗೆಗೆ ಪಡೆದು ಹೊರಟಿದ್ದಾಗಿತ್ತು. ಅದೊಂದು ನಾಲ್ಕೈದು ಜನ ಕೂರಬಹುದಾದ ಸಾಧಾರಣ ಮೋಟಾರು ಬೋಟು. ಟಾರ್ಪಾಲಿನ ಮೇಲು ಹೊದಿಕೆಯಂತಹ ಮರೆಯೊಂದನ್ನು ಕಂಬಿಗಳಿಗೆ ಸಿಕ್ಕಿಸಿದ್ದ ನಡುಭಾಗವನ್ನು ಬಿಟ್ಟರೆ ಮತ್ತೆರಡು ತುದಿಯೂ ತೆರೆದುಕೊಂಡಂತಿದ್ದ ಭಾಗ. ಒಂದೆಡೆ ಅದರ ಚಾಲಕ ಬೋಟು ನಡೆಸುತಿದ್ದ ಕಾರಣ ಇವರೆಲ್ಲ ನಡುವಲ್ಲಿ ಮತ್ತು ಇನ್ನೊಂದು ತುದಿಯತ್ತ ಮುಖ ಮಾಡಿ ಕುಳಿತುಕೊಳ್ಳಬೇಕಾಗಿತ್ತು. ಜತೆಗೆ ಈ ದೋಣಿಗಳ ಅಗಲ ತೀರಾ ಕಡಿಮೆ. ಮೂರು ಜನ ವಯಸ್ಕರು ಒಬ್ಬರ ಪಕ್ಕ ಒಬ್ಬರು ಅಂಟಿಕೊಂಡು ನಿಂತರೆ ಸಾಕು - ಮಧ್ಯಭಾಗವೆಲ್ಲ ತುಂಬಿಕೊಂಡುಬಿಡುವಷ್ಟು ಕಿರಿದು. ಕೂತವರಿಗು ಕೈ ಪಕ್ಕಕ್ಕಿಟ್ಟರೆ ಸಾಕು, ಕೇವಲ ಗೇಣಿನಳತೆಯೊಳಗೆ ನೀರು ಕೈಗೆಟಕುವಷ್ಟು ಹತ್ತಿರದ ನೀರಿನ ಸಂಸರ್ಗ. ಹೀಗಾಗಿ ಹೊರಟ ಆರಂಭದಲ್ಲಿನ ಓಣಿಯಂತಹ ಕಾಲುವೆಗಳಲ್ಲಿ ನೀರಲ್ಲಿ ಕೈಯಾಡಿಸುತ್ತಲೊ, ಆ ಬೋಟಿನ ಸಾಗುವ ವೇಗಕ್ಕೆ ಮರು ಎರಚಲಾಗಿ ಸಿಂಪಡಿಸಿ ಮುದಗೊಳಿಸುವ ಸಿಂಚನಕ್ಕೆ ಮೊಗವಿಟ್ಟು ಕಣ್ಮುಚ್ಚಿದ ಆತಂಕದಲ್ಲಿ ಆನಂದಿಸುವ ವಿಸ್ಮೃತಿಯನ್ನು ಅನುಭವಿಸುತ್ತಲೊ ಸಾಗುವಾಗ ಅದರ ಉದ್ದಗಲದ ಪರಿಮಿತಿಗಳು ಯಾರ ಪ್ರಜ್ಞೆಯ ಅರಿವಿಗೂ ಬಂದಿರಲಿಲ್ಲ. ಸಾಲದ್ದಕ್ಕೆ ಆ ಕಾಲುವೆಯ ನೀರು ಪ್ರವಾಹರಹಿತ ಸ್ಥಿರನೆಲೆಯ ಹೊದಿಕೆ ಹೊತ್ತಂತೆ ಹೆಚ್ಚಿನ ಚಲನೆಯಿಲ್ಲದೆ ಜಡವಾಗಿರುವುದರಿಂದಲೊ ಏನೊ ಆ ಪುಟ್ಟ ಗಾತ್ರವುಂಟು ಮಾಡಿದ ನೀರಿನ ಸಮೀಪ ಸಾಂಗತ್ಯ ಒಂದು ರೀತಿಯ ಉಲ್ಲಾಸ, ಆಹ್ಲಾದಗಳನ್ನೆ ಉದ್ದೇಪಿಸುವ ಅನುಭೂತಿಯನ್ನೊದಗಿಸುವಲ್ಲಿ ಸಫಲವಾಗಿತ್ತು. ಆ ಉದ್ಘೋಷಾವೃತ ಮನಸ್ಥಿತಿಯಲ್ಲೆ ದಾರಿಯಲ್ಲಿ ಕಂಡ ಜಲ ವಸತಿಯೊಂದರ ಮುಂದಿನ ಪುಟ್ಟ ತೆಪ್ಪವೊಂದರಲ್ಲಿ ಹಣ್ಣು ಮಾರುತ್ತಿದ್ದ ಥಾಯ್ ವೃದ್ಧೆಯೊಬ್ಬಳಿಂದ ಸವಿಯಾದ ಮಾವಿನ ಹಣ್ಣು, ಪರಂಗಿ ಹಣ್ಣು ಖರೀದಿಸಿ ತಿಂದು ಖುಷಿ ಪಟ್ಟಿದ್ದರು. ಆ ಮುದುಕಿ ಹಾಗೆಯೆ ತೆಪ್ಪದೊಳಗೆ ಸುಟ್ಟು ಬೇಯಿಸುತ್ತಿದ್ದ ಸಾಗರೋತ್ಪನ್ನದ ಸರಕುಗಳಾದ ಏಡಿ, ಪ್ರಾನು, ಸ್ಕ್ವಿಡ್ಗಳಂತಹ ಕಡ್ಡಿಗೆ ಚುಚ್ಚಿದ ಆಹಾರಗಳನ್ನು ತೋರಿಸಿದಾಗ ಬಾಸು ಸೇರಿದಂತೆ ಕಟ್ಟಾ ಸಸ್ಯಾಹಾರಿಗಳಾದ ಕೆಲವರು ಮುಖ ಹಿಂಡಿ, ಒಂದು ಕೈ ನೋಡೋಣವೆಂದುಕೊಂಡಿದ್ದ ಮಿಕ್ಕ ಇಬ್ಬರೂ ತಲೆಯಾಡಿಸಿ ಪೆಚ್ಚುನಗೆ ನಗುತ್ತ ಬೇಡವೆಂದು ಸನ್ನೆ ಮಾಡಿದ್ದರು. ಈ ರೀತಿಯ ಕಾಲುವೆಯ ಜಾಲದಲ್ಲಿ ಸಾಗಿರುವ ತನಕ ಪ್ರಯಾಣ ಚೆನ್ನಾಗಿಯೆ ಇತ್ತು. ಸಾಕಷ್ಟು ಸಂದಿಗೊಂದಿಗಳೆಲ್ಲ ಸುತ್ತಾಡಿಸಿಕೊಂಡು ಬಂದಂತೆ ಕಂಡ ಈ ಪಯಣ ಮಧ್ಯದ ಹಂತದಲ್ಲೊ ಏನೊ ಇದ್ದಕ್ಕಿದ್ದಂತೆ ನದಿಯ ವಿಶಾಲ ಪಾತ್ರಕ್ಕೆ ಸರಿದುಕೊಂಡಿತು. ಈ ಪಾತ್ರವನ್ನು ದಾಟಿದರಷ್ಟೆ ಆಚೆ ಕಡೆಗಿನ ಬದಿಯಲಿದ್ದ ಫ್ಲೋಟಿಂಗ್ ಮಾರ್ಕೆಟ್ಟಿಗೆ ಹೋಗಲಿಕ್ಕೆ ಸಾಧ್ಯವಿತ್ತು. ಆದರೆ ಇದು ಸೌಮ್ಯತೆಯ ಸರಾಗ ನೀರಿನ ಕಾಲುವೆಯಾಗಿರದೆ ಗಳಿಗೆಗೊಮ್ಮೆ ಅಲೆಗಳೊಡನೆ ಮೇಲೆಬ್ಬಿಸಿ ಕೆಳಗಿಳಿಸುವ ಮಹಾನದಿ. ಪುಟ್ಟ ದೋಣಿಯು ನೀರಿನ ಮೇಲ್ಮೆಯೊಡನಿಟ್ಟುಕೊಂಡ ನೇರ ಸಂಪಕದಿಂದಾಗಿ ಅದರೆಲ್ಲ ಮಿಡಿತ, ತುಡಿತ, ಸೆಳೆತ, ಚೆಲ್ಲಾಟಗಳು ಬೋಟಿನ ತೆಳು ಪದರವನ್ನು ವೇಗವಾಗಿ, ಸಲೀಸಾಗಿ ದಾಟಿ ಒಳಗೆ ಕೂತವರ ಭೌತಿಕ ಪ್ರಜ್ಞೆಯ ನಿಲುಕಿಗೆ ರವಾನಿಸಿಬಿಡುತ್ತದೆ. ಯಾವಾಗ ಇದಾಗುತ್ತದೆಯೊ ಆಗ ನೀರಿನ ಪ್ರತಿ ತುಯ್ದಾಟವೂ ನೇರ ತನುವಿಗನುಭವಗಮ್ಯವಾಗಿ, ಸಾಹಸಿಗಳಲ್ಲಾದರೆ ಉದ್ರೇಕೋತ್ಸಾಹವನ್ನು ಅಳ್ಳೆದೆಯವರಲ್ಲಿ ನಖಶಿಖಾಂತ ಭೀತಿಯ ಕಂಪನವನ್ನು ಹುಟ್ಟಿಸಿಬಿಡುತ್ತದೆ. ಇವರಿದ್ದ ದೋಣಿಯೊ ಆ ಆಗಾಧ ಜಲ ವೈಶಾಲ್ಯದ ಮುಂದೆ ಒಂದು ಗುಂಡುಸೂಜಿಯ ಮೊನೆಯಷ್ಟೂ ಇಲ್ಲ..ಕಣ್ಣು ಹಾಯಿಸಿದೆಡೆಯೆಲ್ಲ ಬರಿ ನೀರೆ ನೀರು..ಜತೆಗೆ ಎರಡು ಕೈಯಲ್ಲೂ ಬಿಗಿಯಾಗಿ ಕಂಬಿಯನ್ನು ಹಿಡಿದುಒಂದೆ ಕುಳಿತಿದ್ದರೂ ಇನ್ನೇನು ಬಿದ್ದೆ ಬಿಡುವರೇನೊ , ಇನ್ನೇನು ಹೊರಗಿನ ನೀರೆಲ್ಲ ಒಳಗಡೆ ಚೆಲ್ಲಿಕೊಂಡುಬಿಡುವುದೇನೊ ಎಂಬ ಭೀತಿಯುಟ್ಟಿಸುವಷ್ಟು ಹೊಯ್ದಾಟ. ಆ ಹೊತ್ತಿನ ಭ್ರಮೆಯಲ್ಲಿ ಹರಿಯುವ ನೀರಿನ ಚಲನೆಯೆ ಗೊಂದಲವೆಬ್ಬಿಸುತ್ತ ಚಲಿಸುತ್ತಿರುವುದು ನೀರೊ, ತಮ್ಮ ದೋಣಿಯೊ ಎಂದೆಲ್ಲ ಅಯೋಮಯವಾಗಿಸಿ ತಲೆ 'ಧಿಂ' ಅನಿಸುವ ಅನುಭವ. ಜತೆ ಜತೆಗೆ ಇನ್ನೇನು ದೋಣಿ ಈ ಹೊಯ್ದಾಟದಲ್ಲಿ ಸಿಲುಕಿ ಮೊಗಚಿಕೊಂಡೆ ಬಿಡುತ್ತದೆಯೇನೊ ಅನ್ನುವ ಆತಂಕ. ದೊಡ್ಡ ದೋಣಿಗಳಲ್ಲಿ ಈ ಹೊಯ್ದಾಟಗಳೆಲ್ಲ ಅರ್ಧಕ್ಕರ್ಧ ದೋಣಿಯ ಗಾತ್ರ ಭಾರಗಳೆ ಹೀರಿಕೊಂಡುಬಿಡುವುದರಿಂದ ಒಳಗೆ ಕುಳಿತವರ ಅನುಭವಕ್ಕೆ ಸಿಕ್ಕುವುದು ಮಿಕ್ಕುಳಿದ ಭಾಗವಷ್ಟೆ. ಇನ್ನು ಸಾಗರದ ಹಡಗುಗಳಲ್ಲಂತೂ ಆ ದೈತ್ಯ ಗಾತ್ರವೆ ಎಲ್ಲವನ್ನು ಹೀರಿಕೊಂಡುಬಿಟ್ಟಿರುತ್ತದೆ. ಆದರಿಲ್ಲಿ ಇವರು ಕುಳಿತ ತೆಪ್ಪಕ್ಕಿಂತ ಒಂದು ಸ್ತರ ಹೆಚ್ಚಿನದಿರಬಹುದೆನ್ನಬಹುದಾದ ದೋಣಿ, ಒಂದೆ ಏಟಿಗೆ ಎಲ್ಲರಲ್ಲೂ ತರತರದ ಕಂಪನಾನುಭೂತಿಯ್ಹುಟ್ಟಿಸಿ ನಡುಗಿಸತೊಡಗಿತು. ಮುಂದೆ ಸಾಗಬೇಕಾದರೆ ಕನಿಷ್ಟ ತೀರವನ್ನು ಕಂಡಾಗಲಾದರೂ ಇನ್ನು ಸ್ವಲ್ಪ ದೂರ ತಾನೆ ಎಂದು ಜೀವ ಬಿಗಿ ಹಿಡಿದು ಬಿಗಿಯಾಗಿ ಕಣ್ಮುಚ್ಚಿಕೊಂಡು ಕೂತಿರಬಹುದು. ಇಲ್ಲೋ ದೂರದಲ್ಲಿಯೂ ಕೂಡ ತೀರವೆನ್ನುವುದರ ಸುಳಿವೆ ಕಾಣದೆ ಭೀತಿಯ ಮಜಲು ಮತ್ತಷ್ಟು ಹೆಚ್ಚಿಸುವಂತಾಗಿತ್ತು..ಬೋಟಿನ ಸುತ್ತ ಕಣ್ಣಾಡಿಸಿದರೆ ತುದಿಗೆ ತಗಲಿಸಿದ ಎರಡು ಟೈರುಗಳ ಹೊರತಾಗಿ ಬೇರಾವ ಜೀವರಕ್ಷಣಾ ಉಡುಪೂ ಕಾಣಿಸುತ್ತಿಲ್ಲ.. ಇದರ ಜತೆಗೆ ಅಲ್ಲಿ ಯಾರಿಗೂ ಈಜು ಬರದು! ಹೀಗೆ ಅದೆಷ್ಟು ಹೊತ್ತು ಸಾಗುತ್ತಿತ್ತೊ ನೀರಿನ ಆ ಕಂಗೆಡಿಸುವ ಹೊಯ್ದಾಟದ ಜತೆಗೆ ಅವರೆಲ್ಲರ ಮನಸಿನ ಹೊಯ್ದಾಟ - ಇದ್ದಕ್ಕಿದ್ದಂತೆ ಹೆಚ್ಚುಕಡಿಮೆ ಕಿರುಚುವ ದನಿಯಲ್ಲೆ ಬಂದಂತಿದ್ದ ಬಾಸಿನ ದನಿ ಕೇಳಿರದಿದ್ದರೆ..." ಎನಫ್..ಎನಫ್..ಸ್ಟಾಪ್..ಆಸ್ಕ್ ಹಿಮ್ ಟು ಗೊ ಬ್ಯಾಕು....!"

ಆ ಹೊತ್ತಿನಲ್ಲೂ ಬಾಸಿನ ಆ ಕಂಪಿಸುವ ದನಿ, ಭಯ ಭೀತ ಮುಖ ಚಹರೆಯನ್ನು ನೋಡಿ ಅಚ್ಚರಿಪಟ್ಟಿದ್ದ ಶ್ರೀನಾಥ. ಅನುಭವವೇನೊ ಮುದವೆನಿಸುವಂತಿರದಿದ್ದರೂ ಅವನ ಮಟ್ಟಿಗೆ ಅಸಹನೀಯ ಅನ್ನುವುದಕ್ಕಿಂತ 'ಥ್ರಿಲ್ಲಿಂಗ್' ಅನಿಸುವ ಮಟ್ಟದಲ್ಲೆ ಇದ್ದಂತೆನಿಸಿತ್ತು. ಆದರೆ ಬಾಸಿನ ಮುಖವನ್ನು ನೋಡುತ್ತಿದ್ದಂತೆ ಬೇರೇನೂ ಅರಿವಾಗದಿದ್ದರೂ ಅವರಿಗೆ ಭಯಂಕರ ನೀರಿನ ಭಯ ಇರುವುದಂತೂ ಖಚಿತವೆನಿಸಿಬಿಟ್ಟಿತ್ತು. ಆ ಬಾಸೆನು ಕಡಿಮೆಯ ಆಳಲ್ಲ; ಮಾತಿಗಿಳಿದರೆ ಎಂತಹವರನ್ನು ಮಂತ್ರ ಮುಗ್ದವಾಗಿಸುವಷ್ಟು ಗತ್ತು, ಅಧಿಕಾರ, ನಿಯಂತ್ರಣದೊಂದಿಗೆ ಎಲ್ಲೆಲ್ಲಿಂದಲೊ ಓದಿದ್ದ, ಯಾವುದಾವುದೊ ವಿಷಯಗಳನ್ನು ಗೋಲಿಯಾಟದಷ್ಟೆ ಸಲೀಸಾಗಿ ಎತ್ತಿ ತಂದು ಉದಾಹರಿಸುವಷ್ಟು ಸಾಮರ್ಥ್ಯವಿದ್ದವ. ಬರಿ ವಿಷಯವೇನು ಬಂತು?  ನೆನಪಿಡಲೆ ಅಸಾಧ್ಯವೆನಿಸುವ ಯಾವುದ್ಯಾವುದೊ ಅಂಕಿ ಅಂಶಗಳನ್ನೆಲ್ಲ ಜೇಬಿನಿಂದ ಚಿಲ್ಲರೆ ತೆಗೆಯುವಷ್ಟೆ ಸಹಜವಾಗಿ ತೆಗೆದುದುರಿಸುವಷ್ಟು ಚಾಕಚಕ್ಯತೆ. ಜ್ಞಾನ, ಪಾಂಡಿತ್ಯ, ಅನುಭವವೆಲ್ಲಕ್ಕು ಕಲಶವಿಟ್ಟಂತೆ ದೇವರು ಕೊಟ್ಟ ವರವಾಗಿದ್ದ ಮಾತುಗಾರಿಕೆ - ಇವೆಲ್ಲವುಗಳಿಂದ ಇವರೆಲ್ಲರ ಕಣ್ಣಲ್ಲಿ ಆತನ ವ್ಯಕ್ತಿತ್ವವನ್ನು ಉನ್ನತ ಶಿಖರದ ಮಟ್ಟಕ್ಕೇರಿಸಿತ್ತು. ಆದರಿಲ್ಲಿ ಈ ಪರಿಸ್ಥಿತಿಯಲ್ಲಿ ನೋಡಿದರೆ ಎಂತಹ ಸಮರ್ಥನೂ ಒಂದಲ್ಲಾ ಒಂದು ಪರಿಸರ, ಪರಿಸ್ಥಿತಿಯಲ್ಲಿ ಯಾವುದಾದರೊಂದು ದೌರ್ಬಲ್ಯದ ಅಡಿಯಾಳಾಗಿಯೊ, ಭಾಧಿಸಲ್ಪಟ್ಟವನೊ ಆಗಿರುವುದು ಕಂಡು ಸೋಜಿಗವಾಗಿತ್ತು. ಆ ಭೀತಿಯ ಮುಖವನ್ನು ಕಂಡಿರದಿದ್ದರೆ ಬಹುಶಃ ಆತನನ್ನು ದೇವತ್ವದ ಉನ್ನತ ಸ್ತರದಿಂದಿಳಿಸಿ ಸಾಮಾನ್ಯ ಮನುಷ್ಯನನ್ನಾಗಿಸಿ ನೋಡಲು ಸಾಧ್ಯವೆ ಇರುತ್ತಿರಲಿಲ್ಲವೊ ಏನೊ? ಅಂತೂ ಬಾಸಿನ ಆ ಭಯಂಕರ 'ವಾಟರ್ ಪೋಬಿಯ' ದಿಂದಾಗಿ ಆ ದಿನದ ಮಿಕ್ಕರ್ಧ ಪಯಣವನ್ನು ತುಂಡಿರಿಸಿ ಹತ್ತಿರದ ಮತ್ತೊಂದು ದಡಕ್ಕೆ ಕೊಂಡೊಯ್ಯುವಂತೆ ಹೇಳಿದ್ದಾಯ್ತು. ಆ ದಡವೆ ಸುಮಾರು ಹದಿನೈದು ನಿಮಿಷಗಳ ಹಾದಿಯಾಗಿ ಬ್ಯಾಂಕಾಕಿನ ಅರಮನೆಯ ಹಿಂದಿನ ತಟವನ್ನು ತಲುಪಿಸುವತನಕ ಅರೆಜೀವದಂತೆ ಮುಖ ಮಾಡಿಕೊಂಡು ಕುಳಿತ ಬಾಸಿನ ಬಡಬಡಿಕೆಯ ಮುಖ ಚಹರೆಯ ಚಿತ್ರ ಶ್ರೀನಾಥನ ಮನದಲ್ಲಿ ಅಚ್ಚೊತ್ತಿದ್ದಂತೆ ನೆಲೆಸಿಬಿಟ್ಟಿತ್ತು. ಅದರಿಂದಾಗಿ ತೇಲುವ ಮಾರುಕಟ್ಟೆಯನ್ನು ಹೋಗಿ ನೋಡುವ ಯೋಜನೆಯೂ ಅಲ್ಲಿಗೆ ಬರಖಾಸ್ತಾಗಿ ಹೋಗಿತ್ತು. ವಿಕ್ಟರಿ ಮಾನ್ಯುಮೆಂಟಿನ ಎದುರಿನ ಕಾಫಿ ಬಾರಿನಲ್ಲಿ ಆ ಹೊತ್ತಿನಲ್ಲಿ ಕಾಫಿ ಕುಡಿಯುತ್ತ ನೋಡಿದ್ದ ಆ ತೇಲುವ ಮಾರುಕಟ್ಟೆಯ ಜಾಹೀರಾತು ಅದೆಲ್ಲಾ ನೆನಪುಗಳನ್ನು ಜಾಡಿಸಿಕೊಂಡು ತಂದಿತ್ತು...

ಆ ಜಾಹೀರಾತಿನಲಿದ್ದುದು ಶ್ರೀನಾಥನ ಪಾಲಿಗೆ ತೀರಾ ವಿಶೇಷವಾದದ್ದೇನೂ ಆಗಿರಲಿಲ್ಲ. ಅದರಲಿ ಕೇವಲ ವಾರದ ಕೊನೆಯಲ್ಲಿ ಮಾತ್ರ ನಡೆಯುವ 'ಅಂಪಾವ' ಫ್ಲೋಟಿಂಗ್ ಮಾರ್ಕೆಟ್ಟೂ ಈ ಬಾರಿ ಹಬ್ಬದ ಸಮಯವಾದ್ದರಿಂದ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆಯೆಂಬ ಸುದ್ದಿಯಷ್ಟೆ ಅಲ್ಲಿದ್ದುದು. ಅಂಪಾವ ತೇಲುವ ಮಾರುಕಟ್ಟೆ ಬ್ಯಾಂಕಾಕಿನಿಂದ ತುಸು ದೂರವೆ ಇರುವ ಜಾಗವಾದರೂ ಒಂದು ದಿನದಲ್ಲಿ ಹೋಗಿ ಬರಬಹುದಾದ ತಾಣ, ಬ್ಯಾಂಕಾಕಿನಲ್ಲಿರುವುದಕ್ಕಿಂತ ಚಿಕ್ಕದಾದರೂ ಇಲ್ಲಿಗೆ ಪ್ರವಾಸಿಗಳ ಹೊಡೆತ ಕಮ್ಮಿ. ಜತೆಗೆ ಸ್ಥಳೀಯ ಥಾಯ್ ಜನರೂ ಇಲ್ಲಿಗೆ ಹೋಗಿ ಬರುವುದೆ ಹೆಚ್ಚು - ತಮ್ಮ ಸಂಸಾರಗಳ ಜೊತೆಗೆ. ಹೀಗಾಗಿ ಬೆಲೆಗಳೂ ಸ್ಥಳೀಯವೆ; ಅದಕ್ಕು ಮೀರಿಸಿದ ವಿಷಯವೆಂದರೆ ಈ ತಾಣ ವಾಣಿಜ್ಯೀಕರಿಸದೆ ತನ ಸ್ವಾಭಾವಿಕ ಹಾಗೂ ಸಹಜ ನೈಸರ್ಗಿಕತೆಯನ್ನು ಹಾಗೆ ಉಳಿಸಿಕೊಂಡಿರುವ ಜಾಗ. ಅಂತೆಯೆ ಜನಜಂಗುಳಿಯೂ ಕಡಿಮೆಯಿರುವ ಮಾರುಕಟ್ಟೆ. ಮಧ್ಯದ ರಜೆಯ ದಿನದಲೊಮ್ಮೆ ಪರಿಚಿತ ಕುನ್. ಸುರಿನ್ ತನ್ನ ಕುಟುಂಬದ ಜೊತೆ ಕಾರಿನಲ್ಲಿ ಅಲ್ಲಿ ಹೋಗುವ ಹೊತ್ತಿನಲ್ಲಿ ಶ್ರೀನಾಥನ ತಂಡವನ್ನು ಆಹ್ವಾನಿಸಿದ್ದ. ಮಿಕ್ಕವರಾರೂ ಬರದಿದ್ದರೂ ಶ್ರೀನಾಥನೊಬ್ಬನೆ ಅವರ ಜತೆ ಹೋಗಿ ಬಂದ ಕಾರಣ ಆ ಜಾಗದ ಪರಿಚಯವಾಗಿತ್ತು. ಆ ಪ್ರಶಾಂತ ವಾತಾವರಣದಲ್ಲಿ, ನದಿಯ ನೀರಿನ ಪಕ್ಕದ ತಂಪು ಗುಡಿಸಿಲ ನೆರಳಿನಡಿ ಕೂತು ಅದೆಷ್ಟೊ ಹೊತ್ತು ಮೌನವಾಗಿ ಕಳೆದ ಗಳಿಗೆಗಳು ದೈನಂದಿನ ಬದುಕಿನ ರೇಜಿಗೆಯೆಲ್ಲವನ್ನು ಮರೆಯುವಂತೆ ಮಾಡಿ ಪ್ರಶಾಂತ ಮನದ ಭಾವಾನುಭೂತಿ ಒದಗಿಸಿದ್ದು ಇನ್ನು ಮನದಲ್ಲಿ ಹಸಿರಾಗಿತ್ತು. ಅದೇ ರೀತಿಯ ಮಿಕ್ಕ ತೇಲು ಮಾರುಕಟ್ಟೆಗಳಾದ ಕ್ಲೊಂಗ್ ಲಾಕ್ ಮಯೋಮ್, ಟಲಿಂಗ್ ಚಾನ್, ಬಂಗ್ ನಾಮ್ ಪುಯೆಂಗ್ ಗಳಲ್ಲೂ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವಿದೆಯೆಂದು ವಿವರಣೆ ನೀಡುತ್ತಿದ್ದ ಕಾಗದವನ್ನು ಮಡಿಸಿ ಜೇಬಿಗಿಕ್ಕುತ್ತ ಮೇಲೆದ್ದ ಶ್ರೀನಾಥನಿಗೆ ಆ ಹೊತ್ತಿನಲ್ಲೂ ಮತ್ತೆ ಧುತ್ತನೆ ಬಂದು ಕಾಡಿದ್ದು ಮುಂದಿನ ದಿನಗಳ ಟ್ರೈನಿಂಗ್, ಟೆಸ್ಟಿಂಗಿನ ಸಿದ್ದತೆಯ ಕುರಿತದ್ದೆ. ಸೋಮವಾರದಿಂದಲೆ ಎಲ್ಲಾ ಸಿದ್ದತೆ ಸರಿಯಿದೆಯೆ ಎಂದು ನೋಡಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಲೆ ಟ್ರೈನ್ ಸ್ಟೇಷನಿನತ್ತ ನಡೆದ ಶ್ರೀನಾಥ. 

ನಂತರದ ವಾರವೆಲ್ಲ ಹೀಗೆ ಸಿದ್ದತೆಯಲ್ಲೆ, ತೀರಾ ಬಿಜಿಯಾಗಿಯೆ ಕಳೆದಿತ್ತು. ಅದರಲ್ಲೂ ಭಾನುವಾರ ಇವನೊಬ್ಬನೆ ಬರಲಿರುವುದರಿಂದ ಇವನ ಪ್ರವೇಶಕ್ಕೆ ಅಗತ್ಯವಾದ ಕಾರ್ಡಿನ ಸಿದ್ದತೆಗೆ ಅರ್ಧ ದಿನ ಹಿಡಿದಿತ್ತು. ಇನ್ನು ಅಂದು ಬರುವವರಾರೊ ಗೊತ್ತಿಲ್ಲವಾಗಿ, ಅವರ ಜತೆ ಮಾತನಾಡಲು ಅಗತ್ಯಬಿದ್ದರೆ ಇರಲೆಂದು ಕೆಲವು ಸಹೋದ್ಯೋಗಿಗಳ ಫೋನ್ ನಂಬರನ್ನು ತೆಗೆದಿಟ್ಟುಕೊಂಡಿದ್ದ. ಆ ದಿನಗಳಲ್ಲದೆಷ್ಟರ ಮಟ್ಟಿಗೆ ಕೆಲಸವಿತ್ತೆಂದರೆ ಶನಿವಾರವೂ ಕೂಡ ರಾತ್ರಿ ತುಂಬಾ ಹೊತ್ತಿನ ತನಕ ಕೆಲಸ ನಡೆದಿತ್ತು. ಕೊನೆಗೆ ಸೋಮವಾರದಿಂದ ಎಲ್ಲಾ ಸುಗಮವಾಗಿ ನಡೆಸಲು ಅನುವಾಗುವಂತೆ ಸಿದ್ದತೆಯಾಗಿದೆ ಎಂಬ ಆತ್ಮವಿಶ್ವಾಸ ಬಂದ ಮೇಲೆ, ಒಬ್ಬೊಬ್ಬರಾಗಿ ಎಲ್ಲರೂ ಖಾಲಿಯಾಗಿ ಇವನೆ ಕೊನೆಯವನಾಗಿ ಹೊರಟಿದ್ದ. ಹಾಗೆ ಹೊರಟರೂ ಇನ್ನೂ ಸಿದ್ದವಾಗಿರದಿದ್ದ ರೂಮಿನ ಕುರಿತಾದ ಆಲೋಚನೆ ಮೂಲೆಯಲೆಲ್ಲೊ ಇನ್ನು ಕೊರೆಯುತಿತ್ತು. ಮರುದಿನ ಅದೊಂದು ಮುಗಿಸಿಬಿಟ್ಟರೆ, ಎಲ್ಲವೂ ಸಿದ್ದವಾದಂತೆ - ಬೆಳಿಗ್ಗೆ ಮತ್ತೆ ಬರಬೇಕಿರುವುದರಿಂದ ತುಸು ನಿದ್ದೆ ಮಾಡಿಕೊಂಡರೆ ಒಳಿತೆಂದು ದಾಪುಗಾಲಿಕ್ಕಿದ್ದ ಆ ಅರ್ಧರಾತ್ರಿಯಲ್ಲೆ. ಆ ಹೊತ್ತಿನಲ್ಲೂ ಇನ್ನು ಕೆಲವರು ರಸ್ತೆಯಲ್ಲಿ ಓಡಾಡುತ್ತಿದ್ದುದು ಕಾಣುತ್ತಿತ್ತು. ಆ ಮಧ್ಯರಾತ್ರಿಯಲ್ಲೂ ಒಬ್ಬಂಟಿಯಾಗಿ ಓಡಾಡುವ ಕಸುಬಿನವರಲ್ಲದ ಮಾಮೂಲಿ ಹೆಂಗಸರು, ಆಫೀಸಿನ ಕೆಲಸದವರೂ ಆ ಹೊತ್ತಿನಲ್ಲಿ ಕೂಡ ಧೈರ್ಯವಾಗಿ ಒಬ್ಬೊಬ್ಬರೆ ಓಡಾಡುವುದು ಕಂಡು ಶ್ರೀನಾಥನಿಗೆ ಮೊದಮೊದಲು ಸೋಜಿಗವಾಗಿತ್ತು. ಬಹುಶಃ ಬೌದ್ದ ಧರ್ಮದ ಪ್ರಭಾವವೊ, ಅಥವಾ ಅಲ್ಲಿ ನಿರಾತಂಕವಾಗಿ ದೊರೆಯುವ 'ದೈಹಿಕ ಕಾಮನಾ ಪೂರೈಕಾ ತಾಣ'ಗಳ ಕಾರಣದಿಂದಲೊ ಅವನಿರುವಷ್ಟು ದಿನವೂ, ಒಮ್ಮೆಯೂ ಯಾರನ್ನಾದರೂ ಆಕ್ರಮಣ ಮಾಡಿದ್ದೊ, ಅತ್ಯಾಚಾರಕ್ಕೆಳೆಸಿದ್ದೊ ಕೇಳಿರಲೆ ಇಲ್ಲ - ವಿದೇಶಿ ಪ್ರವಾಸಿಗರನ್ನು ಸೇರಿದ ಹಾಗೆ. ಆತುರಾತುರವಾಗಿ ಮನೆ ಸೇರಿ ಮಲಗಿದರೂ ತೀರ ತಡವಾಗಿದ್ದಕ್ಕೊ, ಆಯಸಕ್ಕೊ ನಿದ್ದೆಯೆ ಸರಿಯಾಗಿ ಬರದೆ, ಕೊನೆಗೆ ಹಾಗೂ ಹೀಗೂ ಹೊರಳಾಡಿ, ಇನ್ನೇನು ಮಂಪರು ಹತ್ತಿತು ಎನ್ನುವಷ್ಟರಲ್ಲಿ 'ಅಲಾರಾಂ' ಹೊಡೆದು ಮತ್ತೆ ಎಚ್ಚರವಾಗಿಬಿಟ್ಟಿತ್ತು.

ರಾತ್ರಿಯೆಲ್ಲ ಸರಿಯಾಗಿ ನಿದ್ರೆಯಿಲ್ಲದೆ ಹಾಳಾಗಿ ಭಾನುವಾರದ ಬೆಳಗಾದರೂ ತಡವಾಗಿ ಏಳಬಹುದಾಗಿದ್ದ ಸಾಧ್ಯತೆಗೂ ಕಲ್ಲು ಹಾಕಿದ ಬೆಳಗಿನ ಕೆಲಸಕ್ಕೆ ಮನದಲ್ಲೆ ಶಪಿಸುತ್ತಾ ಗಡಿಬಿಡಿಯಲ್ಲೆ ಎದ್ದು ಸ್ನಾನ ಮಾಡಿಕೊಂಡು ಸರಸರನೆ ಹೊರಟಿದ್ದ ಶ್ರೀನಾಥ. ಕೆಲಸದವರು ಬರುವ ಮೊದಲೆ ಹೋಗಿ ಬಾಗಿಲು ತೆಗೆಯದಿದ್ದರೆ, ಬಂದವರಿಗೆ ಒಳಹೋಗಲಾಗದ ಕಾರಣ ಹೊರಗೆ ಕಾಯುತ್ತಾ ನಿಂತಿರಬೇಕಾಗುತ್ತದೆ. ಕಾಯದೆ ಅವನೆಲ್ಲೊ ಹೋಗಿಬಿಟ್ಟನೆಂದರೆ ಮೊದಲೆ ಮುಖಾಮೂತಿ ಗೊತ್ತಿಲ್ಲದವನನ್ನು ಹುಡುಕುತ್ತಾ ಅಲೆಯುವುದಾದರೂ ಎಲ್ಲಿ? ಹೀಗೆಲ್ಲಾ ಚಿಂತನೆಗಳ ನಡುವೆಯೆ ದಾರಿಯಲೊಂದು ಕಾಫಿ ಖರೀದಿಸಿ ಧಡ ಬಡನೆ ಹೆಜ್ಜೆ ಹಾಕಿದವನಿಗೆ ಬಾಗಿಲ ಹತ್ತಿರ ಬಂದ ಹಾಗೆ ದೊಡ್ಡ ಅಚ್ಚರಿ ಕಾದಿತ್ತು! ಅಲ್ಲಿ ಹೊರಬಾಗಿಲಿನ ಹತ್ತಿರ ನಿಂತಿದ್ದವಳು ಕುನ್.ಸು. ಇವಳೇಕೆ ಈ ದಿನ ಇಲ್ಲಿ ಬಂದಿದ್ದಾಳೆ ಅದೂ ಇಷ್ಟು ಹೊತ್ತಿಗೆ ಎಂದುಕೊಳ್ಳುತ್ತಲೆ 'ಸವಾಡಿ ಕಾಪ್' ಎಂದ. ಅವಳೂ 'ಸಾವಾಡಿ ಕಾ..' ಎಂದವಳೆ ಬಾಗಿಲ ಹತ್ತಿರ ತೆರೆಯುವಂತೆ ಸಂಜ್ಞೆ ಮಾಡಿ ಕೈ ತೋರಿಸಿದಳು. ಇನ್ನು ಆರದಿದ್ದ ಅಚ್ಚರಿಯೊಡನೆ ಆಕ್ಸೆಸ್ ಕಾರ್ಡಿನಲ್ಲಿ ಬಾಗಿಲನ್ನು ತೆರೆಯುತ್ತಲೆ 'ಏನು ಬಂದಿದ್ದು?' ಎಂದು ಪ್ರಶ್ನಿಸಿದಾಗ ಅವಳು ಸಂಜ್ಞೆಯಲ್ಲೆ ಸಿದ್ದ ಮಾಡಬೇಕಿದ್ದ ರೂಮಿನತ್ತ ಕೈ ತೋರಿಸುತ್ತ ನಡೆದಾಗಲಷ್ಟೆ ಅರಿವಾಗಿದ್ದು - ಅವಳೆ ಈ ಕೊಠಡಿಯ ಸಿದ್ದತೆಗೆ ನೇಮಿಸಿದ ವ್ಯಕ್ತಿ ಎಂದು! ಅದು ಗೊತ್ತಾಗುತ್ತಿದ್ದಂತೆ ಯಾರೊ ಅಪರಿಚಿತರೊಡನೆ ವ್ಯವಹರಿಸಬೇಕಾಗುತ್ತದೆಂಬ ಅಳುಕಿನಿಂದಿದ್ದವನಿಗೆ ಇದ್ದಕ್ಕಿದ್ದಂತೆ ನಿರಾಳವಾಗಿ ರಾತ್ರಿಯೆಲ್ಲ ನಿದ್ದೆಯಿಲ್ಲದ ಆಯಾಸವೂ ಒಂದೇ ಬಾರಿ ಕರಗಿದಂತೆ ಮನ ಪ್ರಪುಲ್ಲವಾಗಿಹೋಯ್ತು. ಸೀಟಿನ ಬಳಿ ಬಂದು ಕೂತವನೆ ಉಳಿದಿದ್ದ ಕಹಿ ಕಾಫಿಯ ಕೊನೆಯ ತುಣುಕನ್ನು ಗುಟುಕರಿಸುವಷ್ಟರಲ್ಲಿ ಎಂದಿನಂತೆ ಕಪ್ಪು ಸಾಸರು ಹಿಡಿದವಳ ಕೈ ಪ್ರತ್ಯಕ್ಷ. ಆಗ ತಾನೆ ಕೈಯಲ್ಲಿ ಕಾಫಿ ಹಿಡಿದಿದ್ದನ್ನು ಗಮನಿಸಿದ್ದ ಚಾಣಾಕ್ಷ್ಯ ಹೆಣ್ಣು ಎಂದಿನಂತೆ ತರುವ ಕಾಫಿಯ ಬದಲು ಚಹಾ ಹಿಡಿದು ನಿಂತಿದ್ದಳು..!

ಕೈಯಲ್ಲಿ ಮತ್ತೊಂದು ಕಪ್ ಕಾಫಿ ಹಿಡಿದವಳನ್ನು ಎದುರಿನ ಕುರ್ಚಿಯೊಂದರಲ್ಲಿ ಕೂರಲು ಹೇಳಿ ಸೊಗಸಾದ ಚಹಾವನ್ನು ಗುಟುಕರಿಸುತ್ತಲೆ ಅವಳತ್ತ ದೃಷ್ಟಿ ಹರಿಸಿದವನಿಗೆ ತಟ್ಟನೆ ಅವಳಲ್ಲಿ ಏನೊ ಬದಲಾವಣೆ ಇರುವಂತೆ ಕಂಡಿತ್ತು. ಅದೇನೆಂದು ಗೊತ್ತಾಗಲೂ ಹೆಚ್ಚು ಹೊತ್ತು ಹಿಡಿಯಲಿಲ್ಲ... ದಿನವೂ ಒಂದೆ ಬಗೆಯ ಯುನಿಫಾರ್ಮಿನಲ್ಲಿ ಬಿಳಿ ಪ್ಯಾಂಟು ಶರಟಿನೊಡನೆ ಬರುತ್ತಿದ್ದವಳು ಇಂದೇನು ನಿರ್ಬಂಧವಿಲ್ಲದ ಕಾರಣ ಮಾಮೂಲಿನಂತೆ ತೊಡುವ ಸ್ಕರ್ಟೊಂದರ ಜತೆ ಸರಳವಾದ ಟೀ ಶರ್ಟೊಂದನ್ನು ಧರಿಸಿ ಬಂದಿದ್ದಳು. ಆದ್ದರಿಂದಲೆ ಈಗ ಕಾಣುತ್ತಿರುವ ನೋಟವೆ ತೀರಾ ಬೇರೆಯದಾಗಿತ್ತು. ಮೊದಲ ಬಾರಿಗೆ ಅವಳ ಕಾಲುಗಳತ್ತ ದೃಷ್ಟಿ ಹರಿದಾಗ ಒಂದು ರೀತಿಯ ಸಂಕೋಚವಾಗಿ ತಲೆ ಬೇರೆ ಕಡೆ ತಿರುಗಿಸಿದರೂ ತುದಿಗಣ್ಣಲ್ಲಿ ಕಣ್ಣು ಮತ್ತೆ ಮತ್ತೆ ಅತ್ತ ಕಡೆಗೆ ತುಯ್ಯುತ್ತಿತ್ತು. ಅಬ್ಬಾ! ಇವಳ ಕಾಲುಗಳೂ ಎಷ್ಟೊಂದು ಸುಂದರವಾಗಿವೆ? ದೇವರು ಇವಳೆಲ್ಲ ಅಂಗಗಳನ್ನು ಅಳೆದು ಸುರಿದು ಮಾಡಿರುವಂತಿದೆಯಲ್ಲ? ಎಂದುಕೊಳ್ಳುತ್ತಿರುವಾಗಲೆ ಇವನ ದೃಷ್ಟಿ ಎಲ್ಲೆಲ್ಲೊ ಹರಿಯುತ್ತಿರುವುದರ ಅರಿವಾಗಿ ನಾಚಿಕೆಗೊ, ಮುಜುಗರಕ್ಕೊ ತಟ್ಟನೆ ಮಂಡಿಯ ಮೇಲಾಡುತ್ತಿದ್ದ ಸ್ಕರ್ಟಿನ ತುದಿಯನ್ನು ಆದಷ್ಟು ಎಳೆಯುತ್ತ ಸಾಧ್ಯವಾದಷ್ಟು ಮುಚ್ಚಿಕೊಳ್ಳಲು ವಿಫಲ ಯತ್ನ ನಡೆಸಿ ತಡಬಡಾಯಿಸುತ್ತಿರುವುದನ್ನು ಕಂಡು, ತಾನು ಔಚಿತ್ಯದ ಎಲ್ಲೆ ಮೀರಿ ಅವಳನ್ನೆ ದಿಟ್ಟಿಸುತ್ತಿರುವುದರ ಅರಿವಾಗಿ ತಟ್ಟನೆ ಬೇರೆಡೆ ದಿಟ್ಟಿ ಹರಿಸಿದ ಶ್ರೀನಾಥ.

(ಇನ್ನೂ ಇದೆ)
___________

 

Comments

Submitted by ಗಣೇಶ Sun, 12/14/2014 - 21:32

ನಾಗೇಶರೆ,
>>...ಅದರಲ್ಲಿ ಬ್ಯಾಂಕಾಕಿಗೆ ತೀರಾ ಸಮೀಪವಾಗಿರುವುದು 'ಡಮ್ನೋಯನ್ ಸಡುವಾಕ್( ಸಡಕ್ :) )' ಹೆಸರಿನ ತೇಲುವ ಮಾರುಕಟ್ಟೆ ಮತ್ತು ಮಿಕ್ಕೆಲ್ಲದ್ದಕ್ಕಿಂತ ದೊಡ್ಡದು ಹೌದು..
( https://www.youtube.com/watch?v=9gIPPzz4PJM )
>>>..ಜತೆಗೆ ಈ ದೋಣಿಗಳ ಅಗಲ ತೀರಾ ಕಡಿಮೆ. ಮೂರು ಜನ ವಯಸ್ಕರು ಒಬ್ಬರ ಪಕ್ಕ ಒಬ್ಬರು ಅಂಟಿಕೊಂಡು ನಿಂತರೆ ಸಾಕು - ಮಧ್ಯಭಾಗವೆಲ್ಲ ತುಂಬಿಕೊಂಡುಬಿಡುವಷ್ಟು ಕಿರಿದು. ಕೂತವರಿಗು ಕೈ ಪಕ್ಕಕ್ಕಿಟ್ಟರೆ ಸಾಕು, ಕೇವಲ ಗೇಣಿನಳತೆಯೊಳಗೆ ನೀರು ಕೈಗೆಟಕುವಷ್ಟು ಹತ್ತಿರದ ನೀರಿನ ಸಂಸರ್ಗ...ಸೌಮ್ಯತೆಯ ಸರಾಗ ನೀರಿನ ಕಾಲುವೆಯಾಗಿರದೆ ಗಳಿಗೆಗೊಮ್ಮೆ ಅಲೆಗಳೊಡನೆ ಮೇಲೆಬ್ಬಿಸಿ ಕೆಳಗಿಳಿಸುವ ಮಹಾನದಿ. ಪುಟ್ಟ ದೋಣಿಯು ನೀರಿನ ಮೇಲ್ಮೆಯೊಡನಿಟ್ಟುಕೊಂಡ ನೇರ ಸಂಪಕದಿಂದಾಗಿ ಅದರೆಲ್ಲ ಮಿಡಿತ, ತುಡಿತ, ಸೆಳೆತ, ಚೆಲ್ಲಾಟಗಳು ಬೋಟಿನ ತೆಳು ಪದರವನ್ನು ವೇಗವಾಗಿ, ಸಲೀಸಾಗಿ ದಾಟಿ ಒಳಗೆ ಕೂತವರ ಭೌತಿಕ ಪ್ರಜ್ಞೆಯ ನಿಲುಕಿಗೆ ರವಾನಿಸಿಬಿಡುತ್ತದೆ. ಯಾವಾಗ ಇದಾಗುತ್ತದೆಯೊ ಆಗ ನೀರಿನ ಪ್ರತಿ ತುಯ್ದಾಟವೂ ನೇರ ತನುವಿಗನುಭವಗಮ್ಯವಾಗಿ, ಸಾಹಸಿಗಳಲ್ಲಾದರೆ ಉದ್ರೇಕೋತ್ಸಾಹವನ್ನು ಅಳ್ಳೆದೆಯವರಲ್ಲಿ ನಖಶಿಖಾಂತ ಭೀತಿಯ ಕಂಪನವನ್ನು ಹುಟ್ಟಿಸಿಬಿಡುತ್ತದೆ. ಇವರಿದ್ದ ದೋಣಿಯೊ ಆ ಆಗಾಧ ಜಲ ವೈಶಾಲ್ಯದ ಮುಂದೆ ಒಂದು ಗುಂಡುಸೂಜಿಯ ಮೊನೆಯಷ್ಟೂ ಇಲ್ಲ..ಕಣ್ಣು ಹಾಯಿಸಿದೆಡೆಯೆಲ್ಲ ಬರಿ ನೀರೆ ನೀರು..ಜತೆಗೆ ಎರಡು ಕೈಯಲ್ಲೂ ಬಿಗಿಯಾಗಿ ಕಂಬಿಯನ್ನು ಹಿಡಿದುಒಂದೆ ಕುಳಿತಿದ್ದರೂ ಇನ್ನೇನು ಬಿದ್ದೆ ಬಿಡುವರೇನೊ , ಇನ್ನೇನು ಹೊರಗಿನ ನೀರೆಲ್ಲ ಒಳಗಡೆ ಚೆಲ್ಲಿಕೊಂಡುಬಿಡುವುದೇನೊ ಎಂಬ ಭೀತಿಯುಟ್ಟಿಸುವಷ್ಟು ಹೊಯ್ದಾಟ...
-ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಹಾಗೆ ವಿವರಿಸಲು ಸಾಧ್ಯವಿಲ್ಲ-ಆದರೆ ನನ್ನದೂ ಒಂದು ಅನುಭವ ಹೇಳುವೆ : ನಾವು ೩-೪ ಜನ ಸ್ನೇಹಿತರು ಹೀಗೆ ಒಮ್ಮೆ ನದಿ ದಾಟಲು ಈ ತರಹದ ದೋಣಿ (ಮೋಟಾರ್ ಅಲ್ಲ ಹುಟ್ಟು ಹಾಕಿ ನಡೆಸುವ)ಯಲ್ಲಿ ಹೋದೆವು. "ಪಂಚೆ" ಎತ್ತಿ ಕಟ್ಟಿ ದೋಣಿಯಲ್ಲಿ ಧೈರ್ಯವಾಗಿ ಇಳಿದೆವು. ಇನ್ನೂ ೩-೪ ಜನ ಹತ್ತುವಾಗ ದೋಣಿ ಮುಳುಗಿಯೇ ಹೋಗುವುದೋ ಎನಿಸಿತು! ಆತ ಹುಟ್ಟು ಹಾಕುವುದನ್ನು ಎಡ ಬದಿಯಿಂದ ಬಲ ಬದಿಗೆ ಬದಲಾಯಿಸುವಾಗ ಹೃದಯ ಬಾಯಿಗೆ ಬಂದು ನಮ್ಮ ಕತೆ ಮುಗಿಯಿತೇ ಎಂದೆನಿಸುತ್ತಿತ್ತು. ದೋಣಿಯನ್ನು ಎರಡೂ ಕೈಯಿಂದ ಗಟ್ಟಿಯಾಗಿ ಹಿಡಕೊಂಡು ಕೂತಿದ್ದೆವು. ಗಾಳಿಗೆ ನಮ್ಮಲೊಬ್ಬನ ಪಂಚೆ ಮೇಲೆ ಸರಿಯುತ್ತಿತ್ತು. ಮೆಲ್ಲನೇ ಸೂಚಿಸಿದೆವು.. ಆತ "ತೂಂಡ ತೂವೊಡು ಮಾರಾಯ..ಮುಳ್ಪ ಎನ್ನ ಪ್ರಾಣ ಪೋವೊಂದುಂಡು.." ಅಂದ. (ತುಳು ಭಾಷೆ)
>>>"." ಎನಫ್..ಎನಫ್..ಸ್ಟಾಪ್..ಆಸ್ಕ್ ಹಿಮ್ ಟು ಗೊ ಬ್ಯಾಕು....!"-ಬಾಸ್‌ನ ಮನಸ್ಸಿನ ತೊಯ್ದಾಟ ನಮಗಂದಾಗಿತ್ತು. :)

Submitted by nageshamysore Tue, 12/16/2014 - 11:05

In reply to by ಗಣೇಶ

ಗಣೇಶ್ ಜಿ ನಮಸ್ಕಾರ. ಕೊಂಚ ತಿಂಗಳ ಕೊನೆತನಕ ಬಿಜಿಯಿರುವ ಕಾರಣ ಸಂಪದದತ್ತ ಗಮನ ಹರಿಸಲಾಗುತ್ತಿಲ್ಲ . ಬಿಡುವಾಗುತ್ತಿದ್ದಂತೆ ಪ್ರತಿಕ್ರಿಯಿಸುತ್ತೇನೆ.

Submitted by nageshamysore Sat, 01/03/2015 - 16:47

In reply to by nageshamysore

ಗಣೇಶ್ ಜಿ ನಮಸ್ಕಾರ. ನಾಲ್ಕು ವಾರದಿಂದ ಅನಿವಾರ್ಯ ಕಾರ್ಯದಿಂದ ಬಿಡುವೆ ಸಿಕ್ಕಿರಲಿಲ್ಲ. ಅಂದ ಹಾಗೆ ಈ ಭಾಗದಲ್ಲಿ ಬರುವ ಬಾಸ್ ಹೆದರುವ ಅನುಭವ ಒಂದು ನೈಜ ಘಟನೆ. ಆ ಹೊತ್ತಿನಲ್ಲಿ ಜತೆಯಲ್ಲಿದ್ದ ನಾವು ಜೀವ ಕೈಲಿ ಹಿಡಿದುಕೊಂಡೆ ಕೂತಿದ್ದೆವೆನ್ನಿ ! ನೀವು ಕೊಟ್ಟ ವಿಡಿಯೋ ಲಿಂಕಿನಲ್ಲಿರುವಂತದೆ ಚಿಕ್ಕ ದೋಣಿ, ಆದರೆ ಅದು ಓಡುತ್ತಿದ್ದ ಹರವು ಮಾತ್ರ ವಿಡಿಯೋದಲ್ಲಿದ್ದ ಪುಟ್ಟ ಕಾಲುವೆಯಲ್ಲ. ಸುತ್ತ ಎತ್ತ ನೋಡಿದರೂ ನೀರು ಬಿಟ್ಟು ಮತ್ತೇನೂ ಕಾಣಿಸದಷ್ಟು ಅಗಾಧ ವಿಶಾಲತೆ. ಬರೆಯುವ ಹೊತ್ತಿನಲ್ಲೂ ಆ ನೀರಿನ ನಡು ಮಧ್ಯೆಯಲ್ಲಿ ಇನ್ನೇನು ಮುಳುಗಿಹೋದರೇನು ಕಥೆಯಪ್ಪ ? ಎಂದು ಒಳಗೊಳಗೆ ಕಳವಳಿಸುತ್ತಿದ್ದರು ಮೇಲೆ ಮಾತ್ರ ಹುಸಿ ಧೈರ್ಯದ ಪೆಚ್ಚು ನಗೆ ತೋರಿಸಿಕೊಂಡು ಕಂಬಿಯನ್ನು ಭದ್ರವಾಗಿ ಹಿಡಿದುಕೊಂಡು ಕೂತಿದ್ದೆವು. ಪುಣ್ಯಕ್ಕೆ ಅರ್ಧಕ್ಕೆ ನಿಲ್ಲಿಸಿ ವಾಪಸಾಗಿದ್ದರಿಂದ ನಾವೂ ನಿಟ್ಟುಸಿರುಬಿಟ್ಟೆವೆನ್ನಿ !