ದಪ್ಪು - ಲಕ್ಷ್ಮೀಕಾಂತ ಇಟ್ನಾಳ

ದಪ್ಪು - ಲಕ್ಷ್ಮೀಕಾಂತ ಇಟ್ನಾಳ

 ದಪ್ಪು

ಅಪ್ಪನ  ಬಯಲಾಟದ ಹಾಡುಗಳಲ್ಲಿ ಹೆಜ್ಜೆಗಳೊಂದಿಗೆ ಕುಣಿದಿತ್ತು  ಆ ದಪ್ಪು
ತಿರುಗುತ್ತ, ನೆಗೆಯುತ್ತ ಎದೆಗಪ್ಪಿ, ಲಯ ನಾದ ಹೊಮ್ಮುತ್ತ, ಆ  ದಪ್ಪು

ಅಪ್ಪನ ಕೈಬೆರಳುಗಳು ನುಡಿಸುತ್ತಿದ್ದರೆ, ಗೋಣುಗಳು ಅದು ಹೇಗೆ ತೂಗುತ್ತಿದ್ದವು
ಮುಂಗಾಲುಗಳ ಮೇಲೆ ಕುಣಿಯುವಾಗ,  ‘ಹೌದೌದು’ ಗಳ ಧ್ವನಿ ತೇಲುತ್ತಿದ್ದವು

ರಂಭೆ ಊರ್ವಶಿ ಸಾವಿತ್ರಿ  ದ್ರೌಪದಿ,  ಶೂರ್ಪಣಖಿಯರನ್ನು  ನೋಡಿದ್ದೇ ಅಲ್ಲಿ
ಭೀಮ, ದುರ್ಯೋಧನ, ಕೀಚಕ, ಅರ್ಜುನ, ರಾಮ, ಕೃಷ್ಣರೆಲ್ಲರೂ ನೆರೆದಿದ್ದರಲ್ಲಿ

ದ್ರೌಪದಿಯ ವಸ್ತ್ರಾಪಹರಣಕ್ಕೆ ಊರಿಗೆ ಊರೇ ನೆರೆದಿತ್ತು, ಧಾವಂತದಲ್ಲಿ ಓಡಿ
ತಮ್ಮ  ಸೀರೆಯನ್ನು ಎಲ್ಲಿ ಜೋಡಿಸಿದ್ದಾರೆ ಎನ್ನುವ ಕೂತೂಹಲವೂ ಕೂಡಿ

ಹೆಜ್ಜೆಗಳನೆತ್ತಿ ಹುಡುಗರು ಕುಣಿಯುತ್ತಿದ್ದರೆ,  ಹುಡುಗಿಯರಿಗೂ ಕೋಡು ಮೂಡುತ್ತಿದ್ದವು
ಬಯಲಾಟಗಳಲ್ಲಿ  ಭಾವ ಬಣ್ಣದೊಂದಿಗೆ ಬದುಕುಗಳೂ ಚಿಗುರುತ್ತಿದ್ದವು

ಬೆಳಗಾದಂತೆ ಅಪ್ಪನ ಕೈಬೆರಳುಗಳಲ್ಲಿ ಪುಟಿಯುತ್ತಿತ್ತು ರಕ್ತ, ಆವೇಶವಲ್ಲವೇ
ತನ್ನ  ಮೈಯನ್ನೇ ಸಡಿಲಗೊಳಿಸುತ್ತಿತ್ತು ಆ  ದಪ್ಪು, ಗೆಳೆಯನಲ್ಲವೆ!

ಅಪ್ಪನಿಲ್ಲದ  ಊರಿಗೆ ಹೋದಾಗ, ಬಯಲಾಟದ ಆ  ಜಾಗಕ್ಕೆ ಹೋದೆ,
ಮನೆಯೊಂದರ ಹಿತ್ತಲಲ್ಲಿ  ನೇತಾಡುತ್ತಿತ್ತು, ನೇಣುಹಾಕಿದಂತೆ  ದಪ್ಪು

 

Rating
No votes yet