ಕಥೆ: ಪರಿಭ್ರಮಣ..(18) (ಭಾಗ 4. ಆರೋಹಣ)

ಕಥೆ: ಪರಿಭ್ರಮಣ..(18) (ಭಾಗ 4. ಆರೋಹಣ)

(ಪರಿಭ್ರಮಣ..(17)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಮುಂದಿನ ದಿನಗಳಲ್ಲಿ ಕೆಲಸದ ಒತ್ತಡ ಹಾಗು ನಿರಂತರ ಚಟುವಟಿಕೆಗಳ ಭರಪೂರದಿಂದಾಗಿ ಎಡಬಲ ನೋಡಲಾಗದ ಪರಿಸ್ಥಿತಿ; ಕೆಲವು ಕೊನೆಗಳಿಗೆಯ ಅನಿರೀಕ್ಷಿತ ತೊಡಕುಗಳು ಉದ್ಭವಿಸಿ, ಅವುಗಳನ್ನೆಲ್ಲ ನಿವಾರಿಸಿಕೊಂಡು ಅಂತಿಮ ಗಮ್ಯಕ್ಕೆ ಧಕ್ಕೆ ಬರದ ರೀತಿ ಮುನ್ನಡೆಯುವಲ್ಲಿ ಅಪಾರ ಸಮಯ ವ್ಯಯಿಸಬೇಕಾಗಿ ಬಂದು, ನಿದ್ರೆಯ ಹೊತ್ತು ಬಿಟ್ಟರೆ ಮಿಕ್ಕೆಲ್ಲಾ ಹೊತ್ತು ಆಫೀಸೆ ಎನ್ನುವಂತಾಗಿತ್ತು. ಎಂದಿನಂತೆ ಕುನ್.ಸು ಜತೆಗಿನ ಕಾಫಿ, ಚಹಾದ ವ್ಯವಹಾರ ನಡೆದುಕೊಂಡು ಹೋಗುತ್ತಿದ್ದರೂ, ಆ ದಿನದ ಘಟನೆಯ ನಂತರ ಸೂಕ್ಷ್ಮವಾಗಿ ಗಮನಿಸಿದರೆ ಅವಳಲ್ಲೇನೋ ಬದಲಾವಣೆ ಆಗಿರುವಂತೆ ಕಾಣಿಸುತ್ತಿತ್ತು. ಮೊದಲಿನ ಸಾಮಾನ್ಯ ಒಡನಾಟದ ಸಲಿಗೆ ಈಗೀಗ ಕಂಡೂ ಕಾಣದ ಒಂದು ವಿಧದ ಹಕ್ಕು ಚಲಾಯಿಸುವ ಅಧಿಕಾರವಾಗಿ ಮಾರ್ಪಾಡಾಗುತ್ತಿದೆಯೇನೊ ಅನಿಸುತ್ತಿತ್ತು. ಮುಖಾಮುಖಿ ಭೇಟಿಯಲ್ಲಿ ಮಾತ್ರವಲ್ಲದೆ ಬೇರೆ ಮೀಟಿಂಗುಗಳಲ್ಲೂ ಈ ಸಲಿಗೆ, ಆರಾಧನ ಭಾವದ ಕಣ್ಣೋಟ, ಹಾತೊರೆಯುತ್ತ ಅವನ ಸಂಬಂಧಪಟ್ಟ ಕೆಲಸಗಳನ್ನು ಮಾಡುವ ರೀತಿ, ಹೆಚ್ಚು ಸಲಿಗೆಯಲ್ಲಿ ಎಲ್ಲರ ಮುಂದೆಯೂ, ಅಕಸ್ಮಾತಾಗೇನೊ ಆದಂತೆ ಕೈಕೈ ತಗುಲಿಸುವ ಸ್ಪರ್ಷಾವೇಶ - ಇದೆಲ್ಲ ಹೊರನೋಟಕ್ಕೆ ಸಾಮಾನ್ಯವೆಂಬಂತೆ ಕಾಣಿಸುವಂತಿದ್ದರೂ, ಜತೆಯಲ್ಲಿ ಕೆಲಸ ಮಾಡುವ ಇತರೆ ಸ್ತ್ರೀ ಸಹೋದ್ಯೋಗಿಗಳ ಕಣ್ಣಿನಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇಂತಹ ವಿಷಯಗಳಲ್ಲಿ ಗಂಡಸರಿಗಿಂತ ಹೆಂಗಸರಿಗೆ ಸೂಕ್ಷ್ಮ ದೃಷ್ಟಿ ಹೆಚ್ಚು; ಸಾಲದಕ್ಕೆ ಇಂತಹ ಅನುಭೂತಿಗಳುಂಟಾದ ಹೆಣ್ಣಿನ ಭಾವಗಳು ಸ್ವತಃ ಅವರಿಗೆ ಅರಿವಿಲ್ಲದೆಯೆ ತಂತಾನೆ ಆಯಾಚಿತವಾಗಿ ಪ್ರಕಟವಾಗಿಬಿಡುವುದರಿಂದ, ಅವರಿಗೆ ಗೊತ್ತಿರದ ಹಾಗೆ ಸುಳಿವು ಬಿಟ್ಟುಕೊಡುವ ಸಾಧ್ಯತೆಯೂ ಹೆಚ್ಚು. ಹೀಗಾಗಿ ಕೆಲಸದ ನೆಪದಲ್ಲಿ ಈಚೀಚೆಗೆ ಶ್ರೀನಾಥನೂ ಅವಳ ಒಡನಾಟ, ಸಾಂಗತ್ಯವನ್ನು ಎಷ್ಟು ಸಂಕ್ಷಿಪ್ತವಾಗಿರಿಸಲು ಸಾಧ್ಯವೊ ಅಷ್ಟಕ್ಕೆ ಸೀಮಿತಗೊಳಿಸಲು ಯತ್ನಿಸುತ್ತಿದ್ದ.

ಈ ನಡುವೆ ನಿಧಾನಗತಿಯಲ್ಲಿ, ಅವನರಿವಿಗೆ ಬಾರದಂತೆಯೆ ಮತ್ತೊಂದು ಬೆಳವಣಿಗೆಯಾಗುತ್ತಿರುವುದು ಅವನ ಗಮನಕ್ಕೆ ಬಂದಿತ್ತು. ಆ ದಿನದ ಅನಿರೀಕ್ಷಿತ ಮಿಲನದ ಸಂಘಟನೆಯಾದ ಮೇಲೆ ಎಷ್ಟೋ ದಿನಗಳಿಂದ ಕಾಡುತ್ತಿದ್ದ ಹೇಳಲಾಗದ ಅಯಾಮಾತೀತ ಮಾನಸಿಕ ಅತೃಪ್ತಿ, ಅಸಹನೆ, ಅಸಂಪೂರ್ಣತೆ, ಕೀಳರಿಮೆಯ ಭಾವ,  ಇತ್ಯಾದಿಗಳೆಲ್ಲ ಬದಿಗೆ ಸರಿದು ಅದಾವುದೊ ತರದ ಪ್ರಶಾಂತ ಭಾವನೆ ಮನೆ ಮಾಡಿಕೊಂಡಿರುವಂತೆ ಭಾಸವಾಗುತ್ತಿತ್ತು. ಆ ಸಂಗಮ ಪೂರ್ವದಲ್ಲಿದ್ದ ಮೊದಲಿನ ಅಸ್ಪಷ್ಟತೆಯಾಗಲಿ, ಚಂಚಲತೆಯಾಗಲಿ ಕಾಡದೆ ಕೀಳರಿಮೆಯ ಜಾಗದಲ್ಲಿ ಯಾವುದೊ ಹೊಸ ಆತ್ಮವಿಶ್ವಾಸದ ಗಾಳಿ, ಉತ್ಸಾಹದ ಹವಾ ಕಾಣಿಸಿಕೊಳ್ಳತೊಡಗಿತ್ತು. ಅಚ್ಚರಿಯೆಂದರೆ, ಆ ಸಮಾಗಮದ ಸುಖಾನುಭವದ ನಂತರವೂ ಮರು ಮಿಲನದ ಪ್ರಲೋಭನೆಗೊಳಗಾಗದ ನಿರ್ಲಿಪ್ತತೆ ಆವರಿಸಿ, ಮತ್ತೆ ಅದೆ ಸುಖದ ಹವಣಿಕೆಯಲ್ಲಿ ಅವಳತ್ತ ನೋಡುವ ಆಸ್ಥೆಯೆ ಕುಗ್ಗಿ ಹೋಗುವಂತೆ ಮಾಡಿಬಿಟ್ಟಿತ್ತು. ಇದಂತೂ ಸ್ವತಃ ಅವನಿಗೂ ಅಚ್ಚರಿ ತಂದ ವಿಷಯವಾಗಿತ್ತು... ಅಂದಿನ ಸುಖಿಸಿದ ಗಳಿಗೆಯ ಮಾನಸಿಕ ದಿಗ್ವಿಜಯ ಮತ್ತಷ್ಟು ಪ್ರಲೋಭನೆಗೆ ಪ್ರೇರೆಪಣೆಯಾಗುವ ಬದಲು, ಆ ಸುಖೋತ್ಕರ್ಷದ ನೆನಪನ್ನೆ ಸವಿಯುತ್ತ, ಆ ಉನ್ನತಾನುಭವದ ನೆಲೆಗಟ್ಟು ತಲುಪಿಸಿದ ಸಂತೃಪ್ತಿಯ ಔನ್ನತ್ಯ, ಆ ಪ್ರಜ್ಞಾಸ್ತರದ ಸ್ವಾನುಭವ ಗ್ರಾಹ್ಯ ನಿಲುಕನ್ನು ಕದಲಿಸದೆ, ಅದೇ ಪರಿಪೂರ್ಣತೆಯ ಸ್ಥಿತಿಯಲ್ಲಿ ಹಾಗೆಯೆ ನಿರಂತರವಾಗಿಸುವ ಹುನ್ನಾರವೆ ಹೆಚ್ಚು ಕ್ರಿಯಾಶೀಲವಾಗಿರುವಂತೆ ಭಾಸವಾಗುತ್ತಿತ್ತು. ಮರು ಸಮಾಗಮದಲ್ಲಿ ಮತ್ತೆ ಆ ಮಟ್ಟವನ್ನು ಮುಟ್ಟಲಸಾಧ್ಯವೆಂಬ ಅನಿಸಿಕೆಯೊ ಅಥವ ಅದು ಮೊದಲ ಮಿಲನೋತ್ಕರ್ಷದ ಹೋಲಿಕೆಯಡಿ ಪೇಲವವಾಗಿ ಯಾಂತ್ರಿಕವೆನಿಸಿಬಿಡುವುದೊ ಎನ್ನುವ ಭೀತಿಯೊ? ಅದನ್ನೊಂದು ಜತನದ ನೆನಪಿನ ಪೆಟ್ಟಿಗೆಯಲ್ಲಿ ಚಿತ್ತ-ಚಿತ್ತಾರದ ಮುತ್ತಿನಹಾರವಾಗಿ ಕಾಪಿಡುವ ಹಂಬಲವೊ? - ಒಟ್ಟಾರೆ ಅವಳು ಪದೆ ಪದೆ ನೀಡುತ್ತಿದ್ದ ಇಂಗಿತಗಳನ್ನೂ, ಸಂಕೇತಗಳನ್ನು ಮೀರಿ, ಕಾಮನೆಗಳ ಹಂಬಲವನ್ನು ನಿರಾಯಾಸವಾಗಿ ಮೆಟ್ಟಿ, ಪ್ರಶಾಂತವಾಗಿ ವಿಹರಿಸುತಿತ್ತು ಶ್ರೀನಾಥನ ಚಿತ್ತ ಫ್ರಭೆ. ಆದರೆ ಜನ್ಮತಃ ಚಂಚಲ ಚಿತ್ತನಾಗಿದ್ದ ಶ್ರೀನಾಥನಿಗೆ ಅರಿವಾಗದಿದ್ದ ವಿಷಯವೆಂದರೆ ಈ ಸಂತೃಪ್ತಿಯ ಭಾವ ಎಷ್ಟು ದಿನ ಗಟ್ಟಿಯಾಗಿ ನೆಲೆ ನಿಲ್ಲಬಲ್ಲದು ಎಂಬುದು. ಅದರಲ್ಲೂ ಆ ಘಟನಾನಂತ ತಕ್ಷಣದಲ್ಲಿ ಉಂಟಾದ ಮಾನಸಿಕ ಚಿಂತನಾ ಕ್ಷೋಬೆ ಕನಿಷ್ಠ ಆರಂಭದಲ್ಲಿಯಾದರೂ ಚಿಂತಾಕ್ರಾಂತ ಭಾವನೆಯನ್ನುಕ್ಕಿಸಿ ಕಳವಳಗೊಳ್ಳುವಂತೆ ಮಾಡಿತ್ತು. ಆದರೀಗ ಸಾಧನಾ ನಂತರದ ಸಂತೃಪ್ತಿ ಉಂಟು ಮಾಡುವ ತಾತ್ಕಾಲಿಕವೊ-ಶಾಶ್ವತವೊ ಆದ ಪ್ರಶಾಂತ ಭಾವ, ಸಾಧನೆಯ ನೈತಿಕಾನೈತಿಕ ಸಾಧಕಭಾಧಕಗಳನ್ನೆಲ್ಲ ಮರೆಮಾಚಿ, ಸದ್ಯಕ್ಕೆ ಬರಿಯ ಅಹಂ ತೃಪ್ತಿಗೊಳಿಸುವ ಗೆಲುವಿನ ಭ್ರಾಮಕ ಜಗದಲ್ಲಿ ವಿಹರಿಸುವಂತೆ ಮಾಡಿತ್ತು. ಆದರೆ ಚಿತ್ತ ಚಂಚಲತೆಯ ಹುನ್ನಾರದಡಿ ಅದು ಎಂದು ಮತ್ತೊಂದು ತುದಿಗೆ ಜಾರಿ ಸಂಪೂರ್ಣ ವಿರುದ್ಧಾರ್ಥಕ ಭಾವನಾ ಲೋಕಕ್ಕೆ ಜಾರಿಸಿ ಬಿಡುವುದೆಂದು ಅವನಿಗೂ ಗೊತ್ತಿರಲಿಲ್ಲ. ಬಹುಶಃ ಈಗಿನ ಕೃತಾರ್ಥ ಭಾವನೆಗೆ, ಮಿಲನ ಸೌಖ್ಯದ ನಂತರವೂ ಕುನ್. ಸು ಕಡೆಯಿಂದ ಮತ್ತಾವ ತೊಡಕು, ತೊಂದರೆಯೂ ಬಾರದೆ ಎಲ್ಲವೂ ಒಂದು ರೀತಿ ಸುಖಾಂತವಾಗಿ ಮುಗಿದ ಅಂತರಂಗಿಕ ಉತ್ಸಾಹವೂ ಕಾರಣವಿರಬಹುದೆನಿಸಿತ್ತು; ಒಟ್ಟಾರೆ ಆ ಹರ್ಷೋಲ್ಲಾಸದ  ಪಲುಕನ್ನು ಮನದಿಂದ ಜಾರಬಿಡದೆ ಮನಸಾರೆ ಅನುಭವಿಸಲು ನಿರ್ಧರಿಸಿದಂತಿತ್ತು ಶ್ರೀನಾಥನ ಪುಷ್ಪಕ ವಿಮಾನದಂತೆ ಹಾರಾಡುತ್ತಿದ್ದ ಹರ್ಷೋದ್ಗೃತ ಮನಸು.

ಇದಕ್ಕೂ ಮೀರಿದ ಮತ್ತೊಂದು ಅಂತರಂಗಿಕ ಸೂಕ್ಷ್ಮವೂ ಸಹ ಆ ಸಹಜಾತೀತಾನುಭವದ ಆಕರ್ಷಣೆಯನ್ನು ಮೀರಿಸಿ ಸಂಯಮದಲಿರುವಂತೆ ಪ್ರಭಾವ ಬೀರಿತ್ತೆಂದು ಅವನಿಗೆ ಅನಿಸಲು ಆರಂಭವಾಗಿತ್ತು. ಆ ಸೂಕ್ಷ್ಮತೆಯೊಂದೆ ಈ ಹೊಸ ನಿರಾಸಕ್ತಿ ಅಥವಾ ಸಂಯಮದ ಕಡಿವಾಣಕ್ಕೆ ಸಂಪೂರ್ಣವಾಗಿ ಕಾರಣವಾಗಿತ್ತೊ ಅಥವಾ ಭಾಗಶಃ ಮಾತ್ರವೇ? ಎಂದು ಅವನಿಗರಿವಾಗದಿದ್ದರೂ, ಆ ಸಾಧ್ಯತೆಯ ನೆನಪು ಭಾಧಿಸಿದಾಗೆಲ್ಲಾ ಯಾವುದೊ ವಿಚಿತ್ರ - ವಿಷಣ್ಣ ಭಾವ ಆವರಿಸಿ ಮಂಕು ಹಿಡಿಸಿಬಿಡುತ್ತಿತ್ತು. ಅದರದೇನಾದರೂ ಪರಿಣಾಮ ಬೀರಿದ್ದೆ ಕಾರಣವಾಗಿ ಈ ನಿರಾಸಕ್ತಿಗೆ ಕುಮ್ಮುಕ್ಕಾಗಿದೆಯೆ ಎಂಬ ಸಂಶಯವೂ ಈಚೀಚೆಗೆ ಹೆಚ್ಚಾಗಿ ಕಾಡತೊಡಗಿತ್ತು. ಆ ಹೊತ್ತಿನ ಮೆಲುಕು  ಹಾಕಿದಾಗೆಲ್ಲ, ಆ ಗಳಿಗೆಯ ರೋಚಕ ರಮ್ಯತೆಗಳ ಪಲುಕಿಗಿಂತ ಹೆಚ್ಚಾಗಿ, ಮೊದಮೊದಲು ಬೇಡವೆನ್ನುತ್ತಿದ್ದ ಅವಳ ಹುಸಿ ಪ್ರತಿರೋಧ ಸ್ತಬ್ದವಾಗಿ ಸಕಾರಾತ್ಮಕ ಸಹಕಾರವಾಗಿ ಬದಲಾಗಿದ್ದಷ್ಟೆ ಅಲ್ಲದೆ ಈಗಿನ ಆರಾಧನ ಭಾವದತ್ತ ತಿರುಗಲಿಕ್ಕೆ ಕಾರಣವೇನಿರಬಹುದು? ಎಂಬ ಅನುಮಾನದ ಕೀಟ ಕೊರೆಯಲು ಆರಂಭವಾಗಿ, ಏನೇನೋ ಸಾಧ್ಯತೆಗಳನ್ನೆಲ್ಲ ಚಿಂತಿಸಿ, ಮಥಿಸಿ ಅಂತಿಮವಾಗಿ - ಈ ಮಿಲನೋತ್ತರ ಬದಲಾವಣೆಗೆ ಪ್ರಚೋದನೆಯಾದದ್ದು ಅವಳ ಕೈ ಸೇರಿದ ಗಣನೀಯ ಮೊತ್ತದ ಹಣದ ಪ್ರಭಾವದಿಂದಲೊ ಏನೊ..? ಎನ್ನುವ ಅರೆಬರೆ ಅನುಮಾನ ಬೆರೆತ ತೀರ್ಮಾನವಾಗುವತ್ತ ನಡೆಯಲ್ಹತ್ತಿತ್ತು. ಮೊದಮೊದಲಿನ ಅರೆಬರೆ ಅನುಮಾನದ ಅನಿಸಿಕೆ ಮತ್ತೆ ಮತ್ತೆ ತೀವ್ರವಾಗಿ ಕಾಡಲಾರಂಭಿಸಿ, ಅವಳಷ್ಟೆಲ್ಲ ಒನಪು-ವಯ್ಯಾರ, ಕೊಂಕು ನೋಟದ ತುಂಟ ನಗೆಯೆಲ್ಲ ಬರಿ ಕೃತಿಮವೆ ಅನಿಸಿಬಿಟ್ಟಿತ್ತು. ಆದರ ಹಿಂದೆಯೆ 'ಛೆ..ಛೆ..ಇರಲಾರದು.. ತಾನಾಗಿ ಹಣ ಕೊಡುವ ಮೊದಲು ಅವಳೇನು ಹಣದ ಕುರಿತು ಯಾವ ಮಾತೂ ಆಡಿರಲಿಲ್ಲ.. ಆ ಇಂಗಿತದ ತುಣುಕನ್ನು ಕೂಡ ನೀಡಿರಲಿಲ್ಲ... ಅದೆಲ್ಲ ಕೇವಲ ಕನಸಿನ ಲೋಕದಲ್ಲಿ ನಡೆದಂತೆ ಆಯಾಚಿತವಾಗಿ ಸಂಭವಿಸಿ ಸರಿದು ಹೋಗಿದ್ದಂತೆ ಅನಿಸಿತ್ತಲ್ಲ?' ಎಂದು ವಾದ ಹೂಡಿದರೆ, ಮನದಾಳದ ಮತ್ತೊಂದು ಮೂಲೆಯಲ್ಲಿ, 'ಇಷ್ಟು ದಿನದ ಒಡನಾಟದಲ್ಲಿದ್ದ ಪರಿಚಯ ಹಣದ ಮಾತನ್ನು ನೇರ ಎತ್ತದಿರುವಷ್ಟು ಸೂಕ್ಷ್ಮ ತಿಳುವಳಿಕೆಯನ್ನು ನೀಡಿರಲೂ ಸಾಕು; ಒಂದಲ್ಲ ಒಂದು ದಿನ ತಮ್ಮ ಸಾಂಗತ್ಯ ಈ ಹಾದಿ ಹಿಡಿಯುವುದೆಂದು ಅವಳು ಮೊದಲೆ ಊಹಿಸಿರಲೂಬಹುದೇನೊ...? ಸಮಯ ಸಂಧರ್ಭಾನುಸಾರತೆಯನುಸರಿಸಿ ಆ ರೀತಿಯ ಅವಕಾಶದ ಸೃಷ್ಟಿಗೆ ಪೋಷಣೆಯೀಯುತ್ತ, ಪರೋಕ್ಷ ಪ್ರೇರಕವಾಗಿ ಇದ್ದಿರಲೂ ಸಾಕು... ಒಂದು ವೇಳೆ ಇದನ್ನೆಲ್ಲಾ ಯಾವುದೋ ಪ್ರತಿ ವಾದದಿಂದ ಅಲ್ಲಗಳೆಯುವುದಾದರೂ, ಹಾಗಾಗಿರಲಿಲ್ಲವೆಂದು ನೂರಕ್ಕೆ ನೂರು ಖಚಿತವಾಗಿ ಹೇಳುವುದಾದರೂ ಹೇಗೆ?' ಎನ್ನುವ ಶಂಕಿತ ಭಾವದ ಪ್ರಕ್ಷೇಪ. ಒಟ್ಟಾರೆ, ಸುಲಭದಲ್ಲಿ ಕೈಗೆಟುಕಿದ ಕಾರಣಕ್ಕೋ ಏನೋ ಯಾವುದೋ ನಿರಾಶಾ ಪ್ರೇರಿತ ಭ್ರಮನಿರಸನತೆ ಅದರ ಮೌಲ್ಯವನ್ನೆಲ್ಲ ಕುಗ್ಗಿಸಿ, ಅವಳ ಮೂಲ ಆಶಯವನ್ನೆ ಶಂಕಿಸುವ ಮಟ್ಟಕ್ಕೆ ತಂದು ನಿಲ್ಲಿಸಿಬಿಟ್ಟಿತ್ತು. 

ಬರಿ ಹಣಕ್ಕಾಗಿ ಅವಳಾ ಗಳಿಗೆಗೆ ಸಿದ್ದಳಾದಳೇನೊ ಎಂಬ ಅನುಮಾನ ಕಾಡುವ ಮೊದಮೊದಲು - 'ಛೆ..ಛೆ..ಇರಲಾರದು..' ಎನ್ನುತ್ತಿದ್ದ ಮನಸು, ಯಾವಾಗ ಅದು ಪದೇಪದೇ ಬಂದು ಅನುರಣಿಸುತ್ತ ತಲೆಯಲ್ಲಿ ಗುಂಯ್ಗುಡಲಾರಂಭಿಸಿತೊ, ಆಗ ಮತ್ತಾವುದೊ ಒಳದನಿ ನಿಧನಿಧಾನವಾಗಿ, 'ಯಾಕಿರಬಾರದು?' ಎನ್ನುವ ಅನಿಸಿಕೆಗೆ ಚಂದಾದಾರನಾಗುವ ಆರಂಭಿಕ ಲಕ್ಷಣಗಳನ್ನು ತೋರತೊಡಗಿತು. ಯಾವಾಗ ಅನಿಸಿಕೆ ಮೊಳೆಯಲು ಅವಕಾಶವಾಯ್ತೊ, ಅದು ನಿಧಾನವಾಗಿ ಬೇರೂರುತ್ತಾ ಬಲವಾದ ನಂಬಿಕೆಯ ರೂಪವನ್ನು ಪಡೆಯುವುದರಲ್ಲಿ ತೀರಾ ಹೊತ್ತೇನೂ ಹಿಡಿಯಲಿಲ್ಲ. ಆದರೆ ಆ ಭಾವನೆ ಬಲಿತು ಬಲವಾಗುತ್ತ ಹೋದ ಹಾಗೆ, ಪಾಟ್ಪೋಂಗ್ ನಲ್ಲಿ ಹಣಕ್ಕೆ ಪಕ್ಕ ಬಂದು ಕುಳಿತ ಸುಂದರಿಗು, ಹಣವನೆಣಿಸಿಕೊಂಡು ಸುಖವುಣಿಸುವ ದೇಹ ವ್ಯಾಪಾರಕ್ಕೆ ಮನೆಗೆ ಬಂದವಳಿಗೂ, ಹಾಗೆಯೆ ಸುಖಕ್ಕನುವು ಮಾಡಿಕೊಟ್ಟ ನಂತರ ಹಣ ಪಡೆದ ಇವಳಿಗೂ ಏನು ವ್ಯತ್ಯಾಸ? ಅನಿಸಿಬಿಟ್ಟಿತ್ತು. ಬಹುಶಃ ಇವಳೂ ಆಫೀಸಿನಲ್ಲಿ ಕೆಲಸ ಮಾಡಿಕೊಂಡೆ ಆಗ್ಗಾಗ್ಗೆ ಈ ರೀತಿಯ ದಂಧೆಯಲ್ಲಿರುವವಳೆ ಆಗಿರಬಹುದೆಂಬ ಸಂಶಯವೂ ಕಾರಣವಿಲ್ಲದೆ ಕಾಡತೊಡಗಿತ್ತು. ಎಂದು ಇಲ್ಲದವಳು ಅಂದು ಬೇಕೆಂದೆ ಆ ರೀತಿ ಪ್ರಚೋದಿಸುವ ದಿರುಸಿನಲ್ಲಿ ಬಂದಿರಬಾರದೇಕೆ? ಅಂದು ತಾವಿಬ್ಬರೆ ಇರುವ ವಿಷಯವೂ ಅವಳಿಗೆ ಚೆನ್ನಾಗಿ ತಿಳಿದಿರಲೇಬೇಕಾಗಿ, ಇದೆಲ್ಲ ಅವಳು ಸೂಕ್ಷ್ಮವಾಗಿ ಹೆಣೆದ ಯೋಜನೆಯಾಕಾಗಿರಬಾರದು?... ತಾನಾಗೆ ಅಂದು ಹಣದ ಕವರು ಕೊಟ್ಟಿದ್ದರೂ, ಅವಳಾ ರೀತಿಯವಳಲ್ಲವಾಗಿದ್ದಿದ್ದರೆ ಆ ಹಣವನ್ನು ಹಿಂತಿರುಗಿಸಲು ಯತ್ನಿಸಬಹುದಿತ್ತಲ್ಲ? ಕಾಟಾಚಾರಕ್ಕಾದರು ಆ ದಿಸೆಯಲ್ಲಿ ಅವಳು ಪ್ರಯತ್ನಿಸಲಿಲ್ಲ.. ಆ ಗಳಿಗೆಯ ತನಕ ಅವಳು ತನ್ನ ಕುರಿತಾದ ಸಹಜವಾದ ಮೋಹಪಾಶದಲ್ಲಿ ಬಿದ್ದಿರುವಳೆಂದುಕೊಂಡಿದ್ದವನಿಗೆ ಅದರ ಹಿನ್ನಲೆಯ ಪ್ರೇರಣೆ ಹಣವಿರಬಹುದೇ ಹೊರತು ಪ್ರೀತಿ, ಪ್ರೇಮವಲ್ಲ ಎನ್ನುವ ಅನಿಸಿಕೆ ಬಲವಾಗುತಿದ್ದಂತೆ, ಪಿಚ್ಚನೆ ಭಾವವುದಿಸಿ ಅಲ್ಲಿಯತನಕ ಅವಳ ಮೇಲಿದ್ದ ವಿಶೇಷ ಭಾವವೆಲ್ಲ ಕರಗಿ ನೀರಾಗಿ ಹೋದಂತಾಗಿತ್ತು. ಅಂದ ಮಾತ್ರಕ್ಕೆ ಆ ಗಳಿಗೆಯ ಅನುಭವವೆ ನಿರ್ಲಿಪ್ತವಾಯ್ತೆಂದು ಹೇಳಲೂ ಬರುವಂತಿರಲಿಲ್ಲ. ಆ ಘಟನೆಯ ನಂತರ ಅವನಲ್ಲೆ ಅಭೂತಪೂರ್ವ ಬದಲಾವಣೆಯಾದಂತೆ ಭಾಸವಾಗಿ ಯಾವುದೊ ಹೊಸತಿನ ದಿವ್ಯ ಪ್ರಶಾಂತ ಹೊಳಹು ಮೈಯೆಲ್ಲಾ ಹರಿದಾಡಲಾರಂಭಿಸಿತ್ತು. ಅವನ ಜೀವನದಲ್ಲೆ ಪಡೆದ ಅತ್ಯದ್ಭುತ ಅನುಭವವಾಗಿತ್ತು ಆ ಸಾಂಗತ್ಯದ ಬೇಟ. ಆದರೆ ಮಿಲನೋತ್ತರ ಚಿಂತನೆಯಲ್ಲಿ ರಾಡಿಯೆಬ್ಬಿಸಿದ ಕಲುಷಿತ ಮನೋಕ್ಲೇಷ, ರಸಾನುಭವದ ಸಿಹಿ ನೆನಪಿನ ನಡುವೆ ಮೊಸರನ್ನದ ಕಲ್ಲಿನಂತೆ ಈ ಕಿರುಸಂಶಯದ ರೂಪದಲ್ಲಿ ಗೊಂದಲವೆಬ್ಬಿಸಿ, ಇಡಿ ಅನುಭವದ ಪಾತಿವ್ರತ್ಯಕೆ ಕೆಸರಿನ ರಾಡಿಯನ್ಹಚ್ಚಿಸಿಬಿಟ್ಟಿತ್ತು. ಇದೆಲ್ಲಾ ಭಾವಸಂಕರ ಉಂಟುಮಾಡಿದ ಕಹಿ ಶ್ಲೇಷ್ಮದಿಂದಾಗಿ ಮತ್ತೆ ಆ ಪರಮ ಸುಖಾನುಭವದತ್ತ ಮನ ಹರಿಸಲಾಗಲೂ ಬಿಡದೆ, ಆ ಮರುಬಯಕೆಯ ಕಿಡಿಯೂ ಮತ್ತೆ ಸಿಡಿಯುವ ಸಿಡಿಮದ್ದಾಗದೆ, ಬರಿ ಹಳತಿನ ಮಧುರಾನುಭವದ ಸವಿ ನೆನಪಿನ, ಸಿಹಿ ನೋವಿನೊಳಗೆ ತೊಳಲಿಕೊಂಡಿರಲು ತೀರ್ಮಾನಿಸಿದಂತಿತ್ತು - ನಿಜ ಮಿಲನಕ್ಕಿಂತ, ಆ ನೆನಪಿನನುಭೂತಿಯೆ ಹೆಚ್ಚು ಸೊಗವೆನ್ನುವಂತೆ.

ಈ ನಡುವಿನಲ್ಲಿ ಘಟಿಸಿದ ಮತ್ತೆರಡು ಬೆಳವಣಿಗೆಗಳು, ಇದ್ದಕ್ಕಿದ್ದಂತೆ ಇಡಿ ಸನ್ನಿವೇಶದ ಮೇಲೆ ತನ್ನದ ಆದ ವಿಲಕ್ಷಣ ಪ್ರಭಾವ ಬೀರಿ ಅಲ್ಲಿಯತನಕದ ಕಥೆಯ ರಂಗಮಂಚದ ವೇದಿಕೆಯನ್ನೆ ಬದಲಿಸಿಬಿಟ್ಟವು. ಅದರಲ್ಲಿ ಮೊದಲನೆಯದು ಕುನ್.ಸು ಗೆ ನೇರ ಸಂಬಂಧಿಸಿದ್ದರೆ ಮತ್ತೊಂದು ಅವಳಿಗಾವ ಸಂಬಂಧ ಇರದಿದ್ದರೂ ಬಹುಶಃ ಅವಳಿಗಿಷ್ಟವಾಗದ ಬೆಳವಣಿಗೆ. ಅಂದೊಂದು ದಿನ ಕಾಫಿ ತಂದಿಟ್ಟ ಮೊಗದಲ್ಲಿ ಎಂದಿನ ನಗೆ, ಮಿಂಚಿನ ಕಣ್ಣೋಟದ ಬದಲು ಮ್ಲಾನವದನಳಾಗಿದ್ದಂತೆ ಕಂಡಳು. ಯಾಕೋ ಎಂದಿನ ಹುರುಪು, ಉತ್ಸಾಹ ಕಾಣಿಸದೆ ಹುಷಾರಾಗಿದ್ದಾಳೊ, ಇಲ್ಲವೊ ಎಂಬ ಅನುಮಾನದಿಂದ 'ಏನಾಯ್ತೆಂದು' ಪ್ರಶ್ನಿಸಿದವನಿಗೆ ಮಾರುತ್ತರವಾಗಿ 'ಪೊಂ..ಮೀ ಪನ್ ಹಾ..(ಥಾಯ್ ಭಾಷೆಯಲ್ಲಿ 'ನಾನು ತೊಂದರೆ / ಕಷ್ಟದಲ್ಲಿದ್ದೇನೆ')' ಎಂದಳು. ಯಥಾರೀತಿ ಅವಳ್ಹೇಳಿದ್ದರಲ್ಲಿ ಅರ್ಧಕ್ಕರ್ಧ ಅರ್ಥವಾಗದಿದ್ದರೂ, ಸಾಂಧರ್ಭಿಕ-ಸನ್ನಿವೇಶಕ್ಕನುಗುಣವಾಗಿ ಮತ್ತು ಅಲ್ಪಸ್ವಲ್ಪ ಭಾಷಾಜ್ಞಾನ ಬೆರೆಸಿದಾಗ ಅರ್ಥವಾಗಿದ್ದು, ಅವಳೇನೊ ಆಸ್ಪತ್ರೆಯ ಸಮಾಚಾರ ಕುರಿತು ಹೇಳುತ್ತಿದ್ದಾಳೆಂದು. ಬಹುಶಃ ಅವಳಿಗೆ ಅಥವಾ ಅವಳ ಹತ್ತಿರದವರಿಗೆ ಕಾಯಿಲೆಯೊ, ಆಸ್ಪತ್ರೆಗೆ ಸೇರುವ ಪರಿಸ್ಥಿತಿಯೊ ಉದ್ಭವಿಸಿದೆಯೆಂದು ಹೇಳುತ್ತಿದ್ದಳೆಂದು ಅರಿವಾಗಿತ್ತು. ತನ್ನಲ್ಲಿ ಅದನ್ನು ಹೇಳುವ ಉದ್ದೇಶವಿನ್ನೇನಿತ್ತೆಂದು ಅಂದುಕೊಳ್ಳುತ್ತಲೇ, ಬಹುಶಃ ಸಹಾಯ ಹಸ್ತ ಬೇಡಲಿಕ್ಕೇನಾದರೂ ಹವಣಿಸುತ್ತಿರಬೇಕೆಂದು ಊಹಿಸುತ್ತಲೆ, 'ಹಣ ಬೇಕಾಗಿತ್ತೆ?' ಎಂದು ವಿಚಾರಿಸಿದಾಗ ಹೌದೆಂದು ತಲೆಯಾಡಿಸಿದ್ದಳು. ಎಲ್ಲೋ ಐನೂರೊ, ಸಾವಿರವೊ ಕೇಳುವಳೆಂದುಕೊಂಡು 'ಎಷ್ಟು' ಬೇಕೆಂದು ಕೇಳಿದಾಗ, ಐದು ಸಾವಿರವನ್ನು ಅಂಕೆಯಲ್ಲಿ ಬರೆದ ಚೀಟಿಯೊಂದನ್ನು ತೋರಿಸಿದಾಗ ಬೆಚ್ಚಿಬಿದ್ದ ಶ್ರೀನಾಥನಿಗೆ ದಿಗ್ಭ್ರಮೆಯಾಗಿತ್ತು. ತಮ್ಮ ಮಿಲನ ಸಾಂಗತ್ಯದ ಸಲಿಗೆಯನ್ನು ಹಣಗಳಿಕೆಯ ಮೂಲವನ್ನಾಗಿಸುವ ಹುನ್ನಾರದಲ್ಲಿದ್ದಾಳೊ, ಅಥವಾ ನಿಜವಾಗಿಯು ಆಸ್ಪತ್ರೆಯ ಬಿಕ್ಕಟ್ಟಿನಲ್ಲಿ ಸಿಕ್ಕಿದ್ದಾಳೊ ಗೊತ್ತಾಗದ ಪರಿಸ್ಥಿತಿ; ಬೇರಾರಿಗೂ ಈ ಸಲಿಗೆ, ಸಂಬಂಧದ ಸೂಕ್ಷ್ಮವು ತಿಳಿಯಬಾರದಾದ ಕಾರಣ ಬೇರೆ ಯಾರಲ್ಲೂ ಹೇಳುವಂತೆಯೂ ಇಲ್ಲ, ಸಹಾಯ ಕೇಳುವಂತೆಯೂ ಇಲ್ಲ. ಬಹುಶಃ ಇದೂ ಅವಳಿಗೆ ಚೆನ್ನಾಗಿ ತಿಳಿದಿರುವುದರಿಂದ ಆ ದೌರ್ಬಲ್ಯದ ದುರುಪಯೋಗ ಪಡಿಸಿಕೊಳ್ಳುತ್ತಿರಬಹುದೆ? - ಅನ್ನುವ ಮತ್ತೊಂದು ಶಂಕೆ. ಅಷ್ಟು ಚೆನ್ನಾಗಿ ಒಡನಾಡಿಕೊಂಡಿರುವವಳನ್ನು ಕೇವಲ ಹಣಕ್ಕಾಗಿ ಕಾಡುವವಳ ರೂಪದಲ್ಲಿ ಚಿತ್ರಿಸಿಕೊಳ್ಳಲೆ ಅಸಾಧ್ಯವಾಗುವ ಮನಃಸ್ಥಿತಿ ಒಂದೆಡೆ ತೇಪೆ ಹಾಕಲೆತ್ನಿಸುತ್ತಿದ್ದರು, ಇದೆಲ್ಲಾ ಯಾವುದೋ ದೊಡ್ಡ ವ್ಯವಸ್ಥಿತ ಯೋಜನೆ, ಒಳಸಂಚಿನ ಸಣ್ಣ ಭಾಗವಾಗಿರಬಾರದೇಕೆ? ಎನ್ನುವ ಅನುಮಾನದಿಂದ ಹೊರಬರಲು ಅವನಿಗೆ ಸಾಧ್ಯವಾಗಲೆ ಇಲ್ಲ. ಸರಿ, ಈ ಬಾರಿ ಹಾಳಾಗಲಿ ಹಣ ಕೊಟ್ಟು ಕಳಿಸಿಬಿಡುವ ಅಂದುಕೊಂಡರೂ, ಅಷ್ಟು ಸಿದ್ದ ಹಣ ಕೈಯಲಿರಲಿಲ್ಲ. ಸಂಜೆ ಆರಕ್ಕೆ ರಸ್ತೆಯ ತುದಿಯಲ್ಲಿದ್ದ ಏಟಿಏಮ್ ಹತ್ತಿರ ಬರಲು ಹೇಳಿ, ಮತ್ತೆ ಕೆಲಸದತ್ತ ಗಮನ ಹರಿಸಿದ್ದ ಅನ್ಯಮನಸ್ಕತೆಯಲ್ಲೇ. ಅಂದು ಸಂಜೆ ಬ್ಯಾಂಕಿನಿಂದ ಹಣ ತೆಗೆದುಕೊಟ್ಟಾಗಲೂ ಯಾಕೊ ಖಾಲಿಯಾಗುತ್ತಿರುವ ಭಾವ, ಅಸಮಧಾನದ ಬೇಗುದಿ. ಹೀಗೆ ಆರಂಭವಾಗುತ್ತಿರುವ ಈ ಹಣದ ವ್ಯವಹಾರ ಎಲ್ಲಿ ನಿಯಮಿತವಾಗಿ ಕಾಡುವ ಪ್ರಕ್ರಿಯೆಯಾಗಿಬಿಡುವುದೊ ಎಂಬ ದುಗುಡಪೂರ್ಣ ಆತಂಕ ಮುಸುಕಿ, ಹೇಳಿಕೊಳ್ಳಲಾಗದ ಮಂಕು ಭಾವನೆ ಮನದ ಪೂರಾ ಆವರಿಸಿಕೊಂಡು ಖಿನ್ನನಾಗಿಬಿಟ್ಟ ಶ್ರೀನಾಥ.  

ಮತ್ತೊಂದು ದಿನ ಪುರುಸೊತ್ತೇ ಇಲ್ಲದ ಅಗಾಧ ಕೆಲಸದೊತ್ತಡದ ನಡುವೆಯೇ ತುಸು ಬಿಡುವು ಸಿಕ್ಕಿ ನಿರಾಳವಾಗಿ ಕುಳಿತು ಬಾಕಿಯಿದ್ದ ಹಳೆ ಮಿಂಚಂಚೆಗಳನ್ನೆಲ್ಲ ಓದುತ್ತಿದ್ದವನಿಗೆ, ಭಾರತದಿಂದ ಹೆಂಡತಿಯ ತಮ್ಮ ಕಮಲಾಕರ ಕಳುಹಿಸಿದ್ದ ಪುಟ್ಟ ಮಗಳ ಕಾಲು ಬಡಿಯುತ್ತ ಬೆರಳು ಚೀಪುತ್ತಿರುವ ಭಾವಚಿತ್ರವನ್ಹೊತ್ತು ತಂದಿದ್ದ ಮಿಂಚಂಚೆಯೂ ಕಂಡುಬಂದಾಗ ಉದ್ವೇಗ, ಆತುರ, ಕುತೂಹಲದಿಂದ ತೆರೆದುಕೊಳ್ಳಲು ತೀರಾ ಹೊತ್ತು ಮಾಡಿಕೊಂಡು ಕಿರಿಕಿರಿ ಮಾಡುತ್ತಿದ್ದ ಜಿಪ್ ಫೈಲನ್ನು ತೆಗೆದು ನೋಡುತ್ತಿದ್ದ. ಸುತ್ತಲಿನ ಪರಿವೆಯಿಲ್ಲದೆ ಎಲ್ಲವನ್ನೂ ಮರೆತವನಂತೆ ತಲ್ಲೀನನಾಗಿ ದಿಟ್ಟಿಸಿ ನೋಡುತ್ತಾ ಕುಳಿತಿದ್ದವನಿಗೆ, ಹಿಂದಿನಿಂದ ಕುನ್. ಸು ಬಂದು ನಿಂತಿದ್ದು ಅರಿವಾಗಿರಲಿಲ್ಲ; ಜತೆಗೆ ಅವಳು ಅವನಿಗರಿವಿಲ್ಲದ ಹಾಗೆ ಅವನು ನೋಡುತ್ತಿದ್ದ ಅದೇ ಚಿತ್ರಗಳನ್ನು ಅಷ್ಟೇ ಆಸ್ಥೆಯಿಂದ, ಅತೀವ ಆಸಕ್ತಿಯಿಂದ ನೋಡುತ್ತಿದ್ದುದು ಗೊತ್ತಾಗಿರಲೇ ಇಲ್ಲ. ಮೈಮರೆತವನಂತೆ ನೋಡಿದ್ದ ಅವೇ ಚಿತ್ರಗಳನ್ನೇ ಪದೇ ಪದೇ ಒಂದೊಂದನ್ನೆ ಮತ್ತೆ ಮತ್ತೆ ತೆರೆದು, ತದೇಕಚಿತ್ತನಾಗಿ ನೋಡುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಹಿಂದಿನಿಂದ 'ಸುವೈ ಮಾಕ್..(ಸುಂದರವಾಗಿದೆ)' ಎಂದ ಸ್ವರ ಕೇಳಿ ಬೆಚ್ಚಿಬಿದ್ದಂತೆ ಹಿಂದೆ ತಿರುಗಿ ನೋಡಿದರೆ - ಕುನ್.ಸು...! ಅದೆಷ್ಟು ಹೊತ್ತಿನಿಂದ ಸದ್ದೇ ಮಾಡದೆ ಹಾಗೆಯೇ ನಿಂತುಕೊಂಡು ನೋಡುತ್ತಿದ್ದಳೊ, ಏನೋ?  - ಬಹುಶಃ ಹೆಂಡತಿಯ , ಮಗಳ ಮತ್ತವರಿಬ್ಬರೂ ಜತೆಯಿದ್ದ ಎಲ್ಲಾ ಪೋಟೊಗಳನ್ನೂ ನೋಡಿರಬೇಕೆನಿಸಿತು. ಅವಳು ಮಾತ್ರ ಯಾವ ಭಾವನೆಯನ್ನು ಹೊರಗೆಡವದ ಅದೇ ಮಂದಸ್ಮಿತ ವದನವನ್ಹೊತ್ತ ಚಹರೆಯಲ್ಲೆ,  ಆ ಚಿತ್ರಗಳು ಯಾರದ್ದೆಂದು ಕೇಳಿದ್ದಳು.  ಮೊದಮೊದಲು ಸತ್ಯ ಹೇಳಬಾರದೆಂದು ಅನಿಸಿದರೂ, ತನಗೆ ಮದುವೆಯಾಗಿ ಹೆಂಡತಿಯಿರುವ ವಿಷಯ ಅವಳಿಗೂ ಗೊತ್ತಿರುವ ಕಾರಣ, ಸುಳ್ಳಾಡಿ ಮುಚ್ಚಿಟ್ಟು ಮತ್ತಾವುದಾವುದೋ ಅನಾವಶ್ಯಕ ಗದ್ದಲ, ಗೊಂದಲಗಳಿಗೊಳಗಾಗುವ ಬದಲು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಹೇಳಿಬಿಡುವುದೇ ಉಚಿತವೆನಿಸಿ ನಿಜವನ್ನೆ ಉಸುರಿದ್ದ. ಅದೇ ಇರಬಹುದೆಂದು ಊಹಿಸಿದ್ದರೂ ಭಾವಚಿತ್ರಗಳು ಅವನ ಹೆಂಡತಿ, ಮಗುವಿನದೆಂದು ಹೇಳುತ್ತಲೆ ಬಿಳಿಚಿಕೊಂಡ ಹಾಗೆ ಅವಳ ಮುಖದ ಬಣ್ಣವೆಲ್ಲ ಬದಲಾಗಿ, ಮುಖದ ಕಾಂತಿಯೆಲ್ಲ ಹೀರಿಹೋದಂತೆ ವಿವರ್ಣವಾಗಿಹೋಗಿತ್ತು...ಅವರಿರುವ ವಿಷಯ ಅವಳಿಗೆ ಮೊದಲೇ ತಿಳಿದಿದ್ದರೂ, ನೇರ ಚಿತ್ರದಲ್ಲಿ ಅವರನ್ನು ನೋಡಿದ ಆಘಾತಕ್ಕೊ, ಅಥವಾ 'ಮಿಲನೋತ್ತರ' ಸಾಂಗತ್ಯದ ಸಖ್ಯ ಆವಾಹಿಸಿದ ಅಧಿಕಾರಕ್ಕೆ ತಾನು ಕೇವಲ ಅನಧಿಕೃತ ವಾರಸುದಾರಿಣಿಯಷ್ಟೆ ಎಂಬ ಸತ್ಯವನ್ನು ರಾಚುವಂತೆ ಸಾರುವ ಅಧಿಕೃತ ವಾರಸುದಾರರನ್ನು ನೋಡಿದ ತರುವಾಯ  ಉಂಟಾದ ಕಳವಳಪೂರ್ಣ ಈರ್ಷಾಘಾತಕ್ಕೊ - ಒಂದು ರೀತಿಯ ಹೇಳಲಸದಳವಾದ ದಿಗ್ಭ್ರಮೆ ಮೂಡಿಸಿರಲೂ ಸಾಕು... ಹಿಂದೊಂದು ದಿನ ಅವಳೆ ಅವಳ ಕುಟುಂಬದ ಆಲ್ಬಮ್ಮನು ಹೊತ್ತು ತಂದಾಗ ಅದರಲ್ಲಿದ ಮಗಳು, ನಾಲ್ಕಾರು ಮಕ್ಕಳ ಜತೆ ಮತ್ತಿತರ ನೆಂಟರೆಲ್ಲರ ಭಾವಚಿತ್ರಗಳನ್ನು ತೋರಿಸಿದ್ದಳು. ಆ ಹೊತ್ತಿನಲ್ಲೆ ಅವನ ಪತ್ನಿ ಮತ್ತು ಮಗುವಿನ ಕುರಿತು ವಿಚಾರಿಸುತ್ತ, ಶ್ರೀನಾಥನನ್ನು ಅವರ ಭಾವಚಿತ್ರಗಳನ್ನು ತೋರಿಸೆಂದು ಕೇಳಿದ್ದಾಗ, ತಾನು ಸಾಧಾರಣವಾಗಿ ಪರ್ಸಿನಲ್ಲಿಟ್ಟುಕೊಂಡಿರುತ್ತಿದ್ದ ಪಾಸ್ಪೋರ್ಟ್ ಗಾತ್ರದ ಇಬ್ಬರ ಚಿತ್ರಗಳನ್ನು ತೋರಿಸಿದ್ದ. ಈಗ ಅವರದೆ  ಹೊಸ ಚಿತ್ರಗಳನ್ನು ಕಂಪ್ಯೂಟರಿನಲ್ಲಿ ದೊಡ್ಡದಾಗಿ ಕಂಡಿದ್ದಕ್ಕಿಂತ ಹೆಚ್ಚಾಗಿ, ಅವರನ್ನು ಹೀಗೆ ಏಕಾಏಕಿ ಏಕೆ ಮೈಮರೆತು ನೋಡುತ್ತಾ ಕುಳಿತಿರುವೆನೆಂಬ ಅಸೂಯೆಯೆ ಹೆಚ್ಚು ಭಾದಿಸಿ ಹೆಚ್ಚು ತಳಮಳಗೊಂಡವಳಂತೆ ಕಂಡಿದ್ದಳು. ಅವಳ ಮುಖದಲ್ಲಿ ಮೂಡಿ ಮಿಂಚಿ ಮರೆಯಾಗುತ್ತಿದ್ದ ಭಾವಾನುಸ್ಪಂದನೆಯನ್ನೆಲ್ಲ ಅಪ್ರಜ್ಞಾಪೂರ್ವಕವಾಗಿಯೆ ಗ್ರಹಿಸಿ, ಅದರ ಒಳಗಡಗಿರಬಹುದಾದ ಸಂವೇದನೆಯನ್ನು ಬಿಡಿಸಿಡಲು ಹೆಣಗುತ್ತಿದ್ದವನನ್ನು ಅವನ ಚಿಂತನಾ ಸ್ತರದಿಂದೆಳೆದು ಇಹಕ್ಕೆ ತರುವವಳಂತೆ , 'ಹೆಂಡತಿ ಮಗಳಿಬ್ಬರೂ ಇವನಿಗೆ ಜತೆಯಾಗಿರಲು ಬ್ಯಾಂಕಾಕಿಗೆ ಬರುತ್ತಿರುವರೆ?' ಎಂದೂ ವಿಚಾರಿಸಿಕೊಂಡಾಗ ಇನ್ನೂ ಆ ಕುರಿತು ಇನ್ನು ಖಚಿತವಾಗಿ ಏನೂ ಯೋಚಿಸಿರದಿದ್ದರೂ, ಯಾಕೊ ಏನೊ 'ಹೌದು' ಎನ್ನಬೇಕೆನಿಸಿ ಆ ಅನಿಸಿಕೆ ಬರುವಂತೆ ತಲೆಯಾಡಿಸಿದ್ದ. ಅದನ್ನು ಕೇಳುತ್ತಿದ್ದ ಹಾಗೆ ಕ್ಷಿಪಣಿಯ ವೇಗದಲ್ಲಿ, 'ಯಾವಾಗ? ಏನು? ಎತ್ತ?' ಎಂದೆಲ್ಲ ಪುಂಖಾನುಪುಂಖವಾಗಿ ಪ್ರಶ್ನೆ ಹಾಕುತ್ತ ಮತ್ತೆ ವಿಚಾರಿಸಲಾಗಿ, 'ಅತೀ ಶೀಘ್ರದಲ್ಲೆ..' ಎನ್ನುವ ಅರ್ಥ ಬರುವ ಹಾಗೆ ಸಂಕೇತದಲ್ಲೆ ಸೂಚಿಸಿ ಕೈಯನ್ನು ವಿಮಾನದಂತೆ ಗಾಳಿಯಲ್ಲಿ ಹಾರಾಡಿಸಿದ್ದ. ಅವನ ಆ ಉತ್ತರವನ್ನು ಕಂಡ ಕೂಡಲೆ, ಅವನರಿವಿಲ್ಲದೆ ಪ್ರಕಟವಾಗಿ ಅನಾವರಣಗೊಳ್ಳುತ್ತಿದ್ದ ಅವನ ಉತ್ಸಾಹದ ಪಲುಕಿಗೆ ನಿರುತ್ತೇಜನಗೊಂಡೊ ಏನೊ, ದುರ್ದಾನ ತೆಗೆದುಕೊಂಡವಳಂತೆ ಚಹಾದ ಕಪ್ಪನ್ನು ಸಾಸರಿನ ಸಮೇತ ಕುಕ್ಕಿ ಅಲ್ಲಿಂದ ಹೊರಟು ಹೋಗಿದ್ದಳು. 

ಅಲ್ಲಿಯತನಕ ಆ ಕುರಿತು ಆಲೋಚಿಸಿಯೆ ಇರದಿದ್ದವನಿಗೆ, ಅವಳು ಹಾಗೆ ಕೇಳಿದ ಮೇಲೆ 'ಹೌದಲ್ಲಾ? ಯಾಕಾಗಬಾರದು? ಸಾಧ್ಯವಾದಷ್ಟು ಬೇಗನೆ ಕರೆಸಿಕೊಳ್ಳುವ ವಿಚಾರವೂ ಸಾಧುವಾದುದೆ ಅಲ್ಲವೇ?' ಎನಿಸಿ ಅವರಿಬ್ಬರೂ ಈಗಾಗಲೆ ವಿಮಾನದಲ್ಲಿ ಪಯಣಿಸುವ ಬಗ್ಗೆ ಮತ್ತು ಜತೆಯಲ್ಲಿ ನೋಡಿಕೊಳ್ಳುವ ಸಹಾಯಕ್ಕೆ ಅವರಮ್ಮನೊ, ಮತ್ತಿನ್ಯಾರಾದರೂ ಬರುವ ಸಾಧ್ಯತೆಯ ಬಗ್ಗೆ ವಿಚಾರಿಸಿ ಮೆಯಿಲ್ ಬರೆಯಲು ಕೋರಿ ಗೆಳೆಯನೊಬ್ಬನಿಗೆ ಮಿಂಚಂಚೆ ಕಳಿಸಿದ. ಬ್ಯಾಂಕಾಕಿನಿಂದ ಭಾರತಕ್ಕೆ ಮಾಡುವ ಕರೆಗಳು ತುಂಬಾ ದುಬಾರಿಯಾಗುತ್ತಿದುದರಿಂದ ಸಾಧ್ಯವಾದಷ್ಟು ಸಂವಹನವೆಲ್ಲ ಹೀಗೆ ಮೇಯ್ಲಿನ ಮುಖಾಂತರವೆ ಜರುಗುತಿತ್ತು. ವಾರಕ್ಕೊಮ್ಮೆ ಐದು-ಹತ್ತು ನಿಮಿಷದ ಫೋನ್ ಕಾರ್ಡಿನಲ್ಲಿ ಭಾನುವಾರವೊ, ಶನಿವಾರವೊ ಮಾತ್ರ ಪೋನ್ ಮುಖೇನ ಮಾತಾಡುತ್ತಿದ್ದ. ಕಾರ್ಡು ಬಳಸಿದರೂ ದುಬಾರಿಯೆ - ಐದು ಹತ್ತು ನಿಮಿಷಗಳೊಳಗಾಗಿ ಕಾರ್ಡಿನ ಹಣವೆಲ್ಲ ಮುಗಿದು ಹೋಗಿರುತ್ತಿತ್ತು. ಈ ತೊಡಕಿನಿಂದಾಗಿ ಸುಮಾರು ಮಾತುಕತೆಯೆಲ್ಲ ಮಿಂಚಂಚೆಯ ಮೂಲಕ ರವಾನಿಸಿ ಮುಖ್ಯವಾದದ್ದನ್ನು ಮಾತ್ರ ಪೋನಿನಲ್ಲಿ ಮಾತಾಡುವ ವಿಧಾನವನ್ನು ಟೀಮಿನ ಎಲ್ಲರೂ ಬಳಸುತ್ತಿದ್ದರು. ಆದರೂ ಅವರನ್ನು ಕರೆಸುವುದೆಂದರೆ ಸುಮ್ಮನೆ ಕರೆಸಿಬಿಡುವುದಾಗುತ್ತಿರಲಿಲ್ಲ. ಅವರು ಬಂದರೆ, ತನ್ನೆಲ್ಲ ಬಿಡುವಿಲ್ಲದ ಕೆಲಸದ ನಡುವೆ ಅವರತ್ತಲೂ ಗಮನ ಹರಿಸಬೇಕಲ್ಲದೆ ಚಿಕ್ಕ ಮಗುವಿನ ದೆಸೆಯಿಂದಾಗಿ ಮಾಮೂಲಿಗಿಂತ ಹೆಚ್ಚಿನ ಸಮಯ ವ್ಯಯಿಸಬೇಕಾದ ಅನಿವಾರ್ಯವೂ ಉಂಟಾಗುತ್ತಿತ್ತು. ಆದ ಕಾರಣ, ಅವರನ್ನು ನೋಡಿಕೊಳ್ಳಲು ಜತೆಗೆ ಯಾರಾದರೂ ಬಂದರೆ ಕನಿಷ್ಠ, ತೀರಾ ತಲೆ ಕೆಡಿಸಿಕೊಳ್ಳದೆ ನಿಭಾಯಿಸಬಹುದೆಂಬ ಧೈರ್ಯ. ಜತೆಗೆ ಬರುವವರ ವಿಮಾನಯಾನ ಇತ್ಯಾದಿ ಖರ್ಚು ವೆಚ್ಚಗಳ ಹೊರೆ ಬೀಳುವ ಕಾರಣ ಅದೊಂದು ದುಂದು ವೆಚ್ಚದ ಪ್ರಕ್ರಿಯೆಯಾಗುವುದಾದರೂ, ಈ ನೆಪದಲ್ಲಿಯಾದರೂ ಪ್ರಾಜೆಕ್ಟು ಮುಗಿದು ಹೋಗುವ ಮುನ್ನ ಅವರೆಲ್ಲರಿಗೂ ಆ ದೇಶ ತೋರಿಸಿದಂತಾಗುವುದೆಂಬ ಆಶಯವೂ ಜತೆ ಸೇರಿತ್ತು. ಊರಿಗೆ ಹೋದಾಗಲೆಲ್ಲ, ವಿದೇಶದಲ್ಲಿದ್ದುಕೊಂಡೂ ತಮ್ಮನ್ನಾರನ್ನು ಅಲ್ಲಿಗೆ ಕರೆಸಿಕೊಂಡು ಊರು ತೋರಿಸಿಲ್ಲವೆಂಬ ದೂರು, ಗೊಣಗಾಟ ಆಗಾಗ ಕೇಳಿಸುತ್ತಲೇ ಇತ್ತು. ಈಗಂತೂ ಮಗುವಿನ ಕಾರಣದಿಂದ ಹೇಗೂ ಯಾರಾದರೂ ಜತೆಗಿರಲೇಬೇಕಾದ ಅವಶ್ಯಕತೆಯಿರುವುದರಿಂದ ಖರ್ಚಿನ ಮೇಲೊಂದು ಖರ್ಚು ಎಂದು ಕರೆಸಿಕೊಂಡುಬಿಡಬಹುದು.. ಅವರ ದೂರಿಗೂ ಸಮಾಧಾನವಾದಂತಾಗುತ್ತದೆ... ತನ್ನ ಕೆಲಸವೂ ಆಗಿ 'ಸ್ವಾಮಿ ಕಾರ್ಯ ಮತ್ತು ಸ್ವಕಾರ್ಯ' - ಎರಡೂ ನೆರವೇರಿದಂತಾಗುತ್ತದೆ... ಹೀಗೆಲ್ಲಾ ಸಾಧಕ ಭಾಧಕಗಳನ್ನು ಆಲೋಚಿಸಿ ಬರುವವರಿಗೆಲ್ಲಾ ವೀಸಾ ಪಡೆಯಲು ಅಗತ್ಯವಿದ್ದ ಪಾಸ್ಪೋರ್ಟು, ಇನ್ಷ್ಯೂರೆನ್ಸುಗಳ ಕುರಿತು ಮೊದಲು ವಿಚಾರಿಸಿಕೊಂಡ. ಅದೃಷ್ಟವಶಾತ್ ಅವರೆಲ್ಲರ ಹತ್ತಿರವೂ ಪಾಸ್ಪೋರ್ಟು ಈಗಾಗಲೆ ಇದ್ದ ಕಾರಣ ಬರಿಯ ವೀಸಾ ಮಾತ್ರ ಮಾಡಿಸಿದರೆ ಸಾಕಾಗಿತ್ತು. ಮಗುವಿಗೆ ತಾಯಿಯ ಪಾಸ್ಪೋರ್ಟಿನಲ್ಲೆ ಎಂಟ್ರಿ ಮಾಡಿಸಿಕೊಂಡರೆ ಸಾಕಿತ್ತು. ಒಂದೆರಡು ದಿನದ ವಿಚಾರಣೆಯ ನಂತರ ಪಾಸ್ಪೋರ್ಟ್, ವೀಸಾಗಳ ಕುರಿತಾದ ಸಂಶಯಗಳೆಲ್ಲ ನಿವಾರಣೆಯಾದ ಬಳಿಕ ಅಲ್ಲಿಂದ ಹೆಂಡತಿ ಮಗುವಿನ ಜತೆ ಹೊರಟು ಬರುವುದು ಗಟ್ಟಿಯಾಯ್ತು - ಅವಳ ಅಪ್ಪ ಅಮ್ಮನ ಜತೆಗೂಡಿ. ಇನ್ನು ಇಲ್ಲಿಂದ ದಿನವನ್ನು ನಿರ್ಧರಿಸಿ ಟಿಕೆಟ್ ಬುಕ್ ಮಾಡುವ ಕೆಲಸ ಮುಗಿಸಿದರೆ ಅವರು ಹೊರಡಲು ಸಿದ್ದ ಎಂಬ ಸಂದೇಶ ಬಂತು. ಅಷ್ಟೆಲ್ಲ ಖಚಿತ ಮಾಹಿತಿ ಸಿಕ್ಕ ಮೇಲೆ ಯಾವುದಾದರೂ ಏಜೆನ್ಸಿಯ ಮುಖಾಂತರ ಮಗುವಿನ ಹೆಸರನ್ನು ಪಾಸ್ಪೋರ್ಟಿಗೆ ಸೇರಿಸುವ ಅರ್ಜಿ ಪ್ರಕ್ರಿಯೆಗೆ ಚಾಲನೆ ಕೊಡಲು ಹೇಳಿ, ಜತೆಗೆ ಯಾವುದಾದರೂ ಸೂಕ್ತ ಇನ್ಶೂರೆನ್ಸ್ ಕಂಪನಿಯ ಮೂಲಕ ಟ್ರಾವೆಲ್ ಇನ್ಶುರೆನ್ಸ್ ಮತ್ತು ಹೆಲ್ತ್ ಇನ್ಶುರೆನ್ಸ್ ಮಾಡಿಸಿಡಲು ಸೂಚಿಸಿ ತುಟ್ಟಿಯಲ್ಲದ ಸೂಕ್ತ ದರದ ವಿಮಾನದ ಟಿಕೆಟ್ಟುಗಳನ್ನು ಹುಡುಕುವತ್ತ ಗಮನ ಹರಿಸಿದ ಶ್ರೀನಾಥ. 

ಇನ್ಶ್ಯುರೆನ್ಸಿನ ವಿಷಯಕ್ಕೆ ಬಂದರೆ ಶ್ರೀನಾಥ ಕಣ್ಣಾರೆ ಕಂಡಿದ್ದ ಕಹಿ ಅನುಭವವೊಂದರಿಂದ ಪ್ರಭಾವಿತನಾಗಿ ಸ್ವಲ್ಪ ಹುಷಾರಾಗಿಬಿಟ್ಟಿದ್ದ. ವಿದೇಶಗಳಲ್ಲಿ ಕೆಲಸಕ್ಕೆ ಹೋದವರು ತುಂಬಾ ಸಾಮಾನ್ಯವಾಗಿ ಎದುರಿಸುವ ಒಂದು ಪರಿಸ್ಥಿತಿಯೆಂದರೆ - ತಮ್ಮ ತಂದೆ, ತಾಯಿ, ಅತ್ತೆ, ಮಾವಂದಿರಂತಹ ಹತ್ತಿರದ ಬಳಗದವನ್ನು ಕಿರು ಪ್ರವಾಸದ ಸಲುವಾಗಿಯೊ ಅಥವಾ ಕೆಲವು ತಿಂಗಳುಗಳ ಮಟ್ಟಿಗೆ ಬಂದು ಇದ್ದು ಹೋಗುವ ಸಲುವಾಗಿಯೊ ಕರೆಸಿಕೊಳ್ಳುವುದು ತೀರಾ ಸಾಮಾನ್ಯ. ಇದರಲ್ಲಿ ಅಂತಹದ್ದೇನೂ ಕ್ಲಿಷ್ಟವಾದ ಸಮಸ್ಯೆಯಿರುವುದಿಲ್ಲ; ಆದರೆ ನಿಜವಾದ ಸಮಸ್ಯೆ ಬರುವುದು ಈ ಇನ್ಷ್ಯೂರೆನ್ಸ್ ವಿಷಯಕ್ಕೆ ಬಂದಾಗಲೆ. ಹೊರ ದೇಶಗಳಲ್ಲಿ ಏನಾದರೂ ಹೆಚ್ಚು ಕಮ್ಮಿಯಾಗಿ ಆರೋಗ್ಯ ಎಡವಟ್ಟಾದರೆ ಇನ್ಷ್ಯೂರೆನ್ಸ್ ಇಲ್ಲದವರ ಕಥೆ ದೇವರಿಗೇ ಪ್ರೀತಿ. ಪ್ರತಿ ಸಣ್ಣ ಪುಟ್ಟ ಕಾಯಿಲೆಗೂ ಕಣ್ಕಣ್ಣು ಬಿಡುವಷ್ಟು ದುಬಾರಿ. ಅದರಲ್ಲೂ ತೀರಾ ಹೆಚ್ಚುಕಮ್ಮಿಯಾಗಿ ಆಸ್ಪತ್ರೆಗೆ ಅಡ್ಮಿಟ್ ಆಗುವುದೋ, ಗ್ರಹಚಾರ ಕೆಟ್ಟು ಆಪರೇಷನ್ ಮಾಡಬೇಕಾದ ಅನಿವಾರ್ಯಕ್ಕೊಳಗಾಗುವುದೊ ಆಯಿತೆಂದರೆ ಕರೆಸಿಕೊಂಡವರ ಪಾಡು ಬಾಯಿ ಮಾತಲ್ಲಿ ಹೇಳಲಾಗದು. ಸಾಮಾನ್ಯವಾಗಿ ಹೀಗೆ ಬರುವವರು ವಯಸಾದವರೇ ಆದ ಕಾರಣ, ಬದಲಾದ ಹವಾ, ವಾತಾವರಣಕ್ಕೆ ಸುಲಭದಲ್ಲಿ ಹೊಂದಿಕೊಳ್ಳಲಾಗದೆ ಒದ್ದಾಡುವವರೆ ಹೆಚ್ಚು. ಹೀಗಾಗಿ ಅವರುಗಳು ಕಾಯಿಲೆ ಬೀಳುವ ಸಾಧ್ಯತೆಯನ್ನು ದೂರದ ಸಾಧ್ಯತೆಯೆನ್ನುವಂತಿಲ್ಲ. ನಮ್ಮೂರುಗಳಲ್ಲಿ ಕೆಲಸಗಳಲ್ಲಿರುವ ಮಂದಿಯನ್ನು ಬಿಟ್ಟರೆ ಬೇರಾವ ಹಿರಿ ತಲೆಗಳು ನಿಯ್ಯತ್ತಾಗಿ ವಿಮೆ ಮಾಡಿಸಿಕೊಂಡಿರುತ್ತಾರೆ? ಈ ರೀತಿಯ ಪ್ರಯಾಣ ಹೊರಟವರಲ್ಲಿ ಅದೆಷ್ಟು ಮಂದಿಗೆ ಈ ವಿಮೆಯ ಕುರಿತು ಅರಿವಿದ್ದೀತು? ಶ್ರೀನಾಥನ ಪರಿಚಿತರೊಬ್ಬರ ವಯಸ್ಸಾದ ಅತ್ತೆ ಮಾವಂದಿರು ಹೀಗೆ ಮಗಳನ್ನು ವಿದೇಶದಲ್ಲಿ ನೋಡಿಕೊಂಡುಬರುವ ಉತ್ಸಾಹದಲ್ಲಿ ಹೊರಟಾಗ ಆತ, ನಿಯ್ಯತ್ತಾಗಿ ಅವರಿಗೆ ಆರೋಗ್ಯ ವಿಮೆಯ ವಿವರವನ್ನೆಲ್ಲ ವಿವರಿಸಿ ಅಲ್ಲಿಂದ ಬರುವಾಗಲೇ ವಿಮೆ ಮಾಡಿಸಿಕೊಂಡು ಬರಲು ಹೇಳಿದ್ದ. ಅವರು ವಿಮಾನ ಹತ್ತುವ ಮೊದಲು ಕೂಡ ಮತ್ತೆ ಮತ್ತೆ ಕೇಳಿ ಖಚಿತಪಡಿಸಿಕೊಂಡಿದ್ದೂ ಆಗಿತ್ತು. ಯಾರೋ ಏಜೆಂಟನ ಮುಖಾಂತರ ಎಲ್ಲಾ ಮಾಡಿಸಿದ್ದಾರೆಂದು ಹೇಳಿದಾಗ ತುಸು ನಿರಾಳವೂ ಆಗಿತ್ತು. ದುರದೃಷ್ಟವಶಾತ್ ವಯಸ್ಸಾಗಿದ್ದ ಮಾವ ಒಂದು ದಿನ ಇದ್ದಕ್ಕಿದ್ದಂತೆ ತಲೆ ಹಿಡಿದುಕೊಂಡು ಕಣ್ಣು ಕತ್ತಲೆಗಿಟ್ಟಂತಾಗಿ ಪ್ರಜ್ಞಾಶೂನ್ಯರಾದಾಗ, ಅವಸರದಲ್ಲಿ ಆಸ್ಪತ್ರೆಗೆ ದಾಖಲು ಮಾಡಬೇಕಾಗಿ ಬಂದಿತ್ತು. ಮೆದುಳಿನ ಸ್ರಾವವಾಗಿರುವ ಕಾರಣ ಬದುಕುಳಿಯಬೇಕಾದರೆ ತಕ್ಷಣವೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದಾಗ ವಿಮೆಯ ಹುಡುಕಾಟ ಆರಂಭವಾಗಿತ್ತು.ಅಲ್ಲಿ ನೋಡಿದರೆ, ಎಲ್ಲಾ ಎಡಬಿಡಂಗಿ! ಯಾವುದೋ ಸಣ್ಣಪುಟ್ಟದ್ದಕ್ಕೆ ಬಿಟ್ಟರೆ ಮತ್ತಾವುದೂ ಆ ವಿಮೆಯ ವ್ಯಾಪ್ತಿಗೆ ಬರುತ್ತಿರಲಿಲ್ಲ. ಇರುವುದೂ ಕೂಡ ಅಬ್ಬಬ್ಬಾ ಎಂದರೆ ನೂರಿನ್ನೂರು ಡಾಲರು ಮಟ್ಟಕ್ಕೆ ಮಾತ್ರ ಪಾವತಿ ಮಾಡುವ ಕರಾರಿಗೆ ಒಳಪಟ್ಟಿದ್ದಂತಹವು. ಯಾರೋ ಏಜೆಂಟನು ನೂರಿನ್ನೂರು ರೂಪಾಯಿಗೆ ಅಗ್ಗದಲ್ಲಿ ಮಾಡಿಸಿಕೊಡುತ್ತೇನೆಂದ ಮಾತು ನಂಬಿ ಯಾವುದೋ ಕೆಲಸಕ್ಕೆ ಬಾರದ ವಿಮೆ ಮಾಡಿಸಿಕೊಂಡು ಬಂದಿದ್ದರು. ಈ ಪರಿಸ್ಥಿತಿಯಲ್ಲಿ ಅದು ರದ್ದಿ ಕಾಗದಕ್ಕಿಂತಲ್ಲು ಕಡೆಯಾಗಿ ಹೋಗಿತ್ತು, ಮೌಲ್ಯದ ಲೆಕ್ಕದಲ್ಲಿ. ಕೊನೆಗೆ ಇಡಿ ಆಪರೇಷನ್ನಿನ ವೆಚ್ಚವಾದ ಇಪ್ಪತ್ತು ಮುವ್ವತ್ತು ಸಾವಿರ ಡಾಲರುಗಳನ್ನು ಆತನೆ ಭರಿಸಬೇಕಾಗಿ ಬಂದಿತ್ತು ಅವರಿವರ ಕೈ, ಕಾಲು ಹಿಡಿದು ಹೊಂದಾಣಿಸುತ್ತ. ಎಲ್ಲಾ ಮುಗಿದು ಅವರು ತುಸು ಸುಧಾರಿಸಿಕೊಂಡು ಓಡಾಡುವ ಮಟ್ಟಕ್ಕೆ ಬರುತ್ತಿದ್ದ ಹಾಗೆಯೇ, ಮೊದಲು ಅವರನ್ನು ಊರಿಗೆ ವಿಮಾನ ಹತ್ತಿಸಿ ನಿಟ್ಟುಸಿರು ಬಿಟ್ಟಿದ್ದರಾತ. ಒಂದೆಡೆ ಖರ್ಚಿನ ಆತಂಕವಾದರೆ ಮತ್ತೊಂದೆಡೆ ಕರೆಸಿಕೊಂಡು ಹೀಗಾಯಿತಲ್ಲ? ಎನ್ನುವ ಭೀತಿ. ತೀರ ವಿಪರೀತಕ್ಕೆ ಹೋಗಿ ಸಾವೇನಾದರೂ ಸಂಭವಿಸಿಬಿಟ್ಟರಂತೂ ಕರೆಸಿಕೊಂಡವರ ತಿಥಿಯಾದಂತೆ ಲೆಕ್ಕ. ಇದೆಲ್ಲಾ ಹಿನ್ನಲೆಯ ಅರಿವಿದ್ದ ಕಾರಣ ಶ್ರೀನಾಥ ಯಾವುದೇ ಕಾರಣಕ್ಕೂ ವಿಮೆಯನ್ನು ಮಾತ್ರ ನಿರ್ಲಕ್ಷಿಸಿ ಉಢಾಪೆಯಿಂದಿರಲು ಸಿದ್ದನಿರಲಿಲ್ಲ. ಆದ ಕಾರಣವೆ ಅವರಿವರ ಮುಖೇನ ಯತ್ನಿಸದೆ ತಾನೇ ನೇರ ವಿಚಾರಿಸಿ ವಿಮೆ ಖರೀದಿಸಬೇಕೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದ.

(ಇನ್ನೂ ಇದೆ)
___________

Comments

Submitted by nageshamysore Mon, 02/02/2015 - 03:58

In reply to by ಗಣೇಶ

ಗಣೇಶ್ ಜಿ, ಜಾರುವುದು ಸುಲಭ, ಏರುವುದೆ ಬಲು ಕಷ್ಟವಲ್ಲವೆ? ಅದರಲ್ಲೂ ಜಾರಿದ ಮೇಲೆ ಏರುವುದಾದರೆ ಇನ್ನೂ ಕಠಿಣ.. ಅದಕ್ಕೆ 'ಆರೋಹಣ' ಭಾಗ ಕೂಡ 18 ರಿಂದ 67ನೇ ಕಂತಿನವರೆಗು ಹತ್ತಬೇಕಾಗಿ ಬಂತು! ಟೆನ್ಷನ್ನಿನ ಹಿನ್ನಲೆ ಪಾತ್ರಗಳ ವ್ಯಕ್ತಿತ್ವಕ್ಕೆ ಪೂರಕವಾಗಿ ಮತ್ತು ನಿಜದನಾವರಣಕ್ಕೆ ಸಹಾನುವರ್ತಿಯಾಗಿ ಬರುವುದರಿಂದ, ನೈಜ ಆರೋಹಣಕ್ಕೆ ಬೇಕಾದ 'ಸಿದ್ದತಾ ವೇದಿಕೆಯಾಗಿ' ಭೂಮಿಕೆ ನಿಭಾಯಿಸಲಷ್ಟೆ ಆ ಕಾಠಿಣ್ಯದ ಪಾತ್ರ.

ಅದಿರಲಿ, ಇನ್ನು ಬಿಡುವು ಮಾಡಿಕೊಂಡು ಒಂದೊಂದಾಗಿ ಓದಲು ಯತ್ನಿಸುತ್ತಿದ್ದೀರಲ್ಲ, ಆ ಆರೋಹಣಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನನಗೀಗ ಹೊಸದೊಂದು ವಿಭಾಗಕ್ಕೆ ವರ್ಗಾವಣೆಯಾಗಿ, ಎಲ್ಲಾ ಹೊಸ ಕಲಿಕೆಯಾಗಿ ಸಮಯದ ಕೊರತೆ ಕಾಡತೊಡಗಿದೆ - ಜತೆಗೆ ಕೆಲಸದ  ಜಾಗ ಬದಲಿಸಬೇಕಾದ ಸಾಧ್ಯತೆಗಳು ಕಾಣಿಸತೊಡಗಿ ಸಂಪದದತ್ತ ಮೊದಲಿನ ಹಾಗೆ ಸಕ್ರೀಯವಾಗಿರಲು ಕಷ್ಟವಾಗುತ್ತಿದೆ. ಸ್ವಲ್ಪ ಹೊಸತಿನ ಭಾರ ಹಗುರಾಗುವತನಕ ಇದು ಹೀಗೆ ಏನೊ ಅನಿಸುತ್ತಿದೆ  :-)