ತೆರೆ ಮೇಲೆ ಗ್ರಾಮವಾಸ್ತವ್ಯದ ವಾಸ್ತವ..!
ಗ್ರಾಮ ವಾಸ್ತವ್ಯ,..ಇದು ಸಿ.ಎಂ.ಕುಮಾರ್ ಸ್ವಾಮಿ ಕಲ್ಪನೆ. ಈ ಕಲ್ಪನೆಯಿಂದ ಆದ ಲಾಭ ಎಷ್ಟೋ. ಗೊತ್ತಿಲ್ಲ. ಜನರ ಮನಸ್ಸಿನಲ್ಲಿ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಅಚ್ಚಾಗಿ ಉಳಿದಿದೆ. ಇದರ ಸುತ್ತ ಒಂದು ಸಿನಿಮಾ ಬರಬಹುದೆಂಬ ಅಂದಾಜು ಮೋಸ್ಟ್ಲಿ ಯಾರಿಗೂ ಇದ್ದಿರಲಿಕಿಲ್ಲ. ಅಂತ ಒಂದು ಪ್ರಯತ್ನವೂ ಈಗ ಆಗಿದೆ. ಅದಕ್ಕೆ ರಾಷ್ಟ್ರೀಯ ಮನ್ನಣೆನೂ ಸಿಕ್ಕಿದೆ. ಅದರ ಸುತ್ತ ಒಂದಷ್ಟು ಬರೆಯೋ ತುಡಿತ ಇತ್ತು. ಬರೀತಾಯಿದ್ದಿನಿ. ಇತ್ತೀಚಿಗೆ ಸಿನಿಮಾನೂ ನೋಡಿ ಬಂದ್ದಿನಿ..
----
ಸಿನಿಮಾ ಶುರುವಾಗೋದೇ ನಸುಕಿನ ಚೆಂಬೆಳಕಿನಲ್ಲಿ. ಆ ಬೆಳಕು ಜೀವನೋತ್ಸಾಹಕ್ಕೂ ಒಂದು ಸ್ಪೂರ್ತಿ. ದಿನಚರಿಯ ಆರಂಭವೂ ಹೌದು. ಹಳ್ಳಿಗಾಡಿನಲ್ಲಿ ನಮಗೆ ಗೊತ್ತಿರೋ ಹಾಗೆ, ಮುಂಜಾನೆ ಹೊತ್ತಲ್ಲಿ, ಮನೆ ಬಾಗಿಲಿಗೆ ಜೋಗಮ್ಮ ಬರೋದು ಆಗ ತುಂಬಾ ಸಹಜ. ಈಗ ಅದು ವಿರಳ. ಅಂತಹ ಒಂದು ಪರಿಕಲ್ಪನೆಯಲ್ಲಿಯೇ ಚಿತ್ರ ತೆರೆದುಕೊಳ್ಳುತ್ತದೆ. ಪುಟ್ಟ ಮನೆ. ಆ ಮನೆಯುಲ್ಲಿ ರೊಟ್ಟಿ ಬಡೆಯು ಸದ್ದು. ಆ ಸದ್ದು ಮಾಡ್ತಿರೋದು ದೇವಕ್ಕ. ರೊಟ್ಟಿ ದೇವಕ್ಕ ಅಂತ ಫೇಮಸ್. ಈ ಹೆಣ್ಮಗಳ ರೊಟ್ಟಿ ರುಚಿ ನೋಡಿದವ್ರು ಸುತ್ತ-ಮುತ್ತಲು ಇದ್ದಾರೆ. ತಮ್ಮ ಮನೆಯಿಂದ ಕಾಲು ನಡೆಗೆಯಲ್ಲಿ ಹೋಗಿ, ರೊಟ್ಟಿ ಮಾರಾಟ ಮಾಡಿ ಬರೋದು ದೇವಕ್ಕನ ಕೆಲಸ. ಕೆಲಸಕ್ಕೆ ಸಾಥ್ ನೀಡೋರು ಯಾರು ಇಲ್ಲ. ಕಂಕಳಲ್ಲಿ ಒಂದು ಪುಟ್ಟ ಮಗಳನ್ನ ಇಟ್ಟುಕೊಂಡು ಹೋಗೋದೇ ದೈನಂದಿನ ಕೆಲಸ..
ಆದರೆ, ಈ ದೇವಕ್ಕನಿಗೆ ಕಿರಣ ಅನ್ನೋ ಶಾಲೆಗೆ ಹೋಗುವ ಮಗನೂ ಇದ್ದಾನೆ. ಕಾಲು ಊಣ ಮಾಡಿಕೊಂಡಿರೊ ಪತಿ ರಾಯನೂ ಇದ್ದಾನೆ. ಆತ ಹಿಟ್ಟಿನ ಗಿರಿಣಿಯಲ್ಲಿ ಕೆಲಸ ಮಾಡ್ತಾನೆ. ಅದರಿಂದ ಬಂದ ದುಡ್ಡು ಎಷ್ಟೋ.. ಜೀವನ ಸಾಗಿಸೋದು ಇನ್ನೆಷ್ಟು. ಇವರ ಈ ಕತೆಯಲ್ಲಿ ಹೆಚ್ಚೇನೂ ತಿರುವುಗಳಿಲ್ಲ. ಹತ್ತು..ಹಲವು ಶಾಕ್ ಕೊಡುವ ದೃಶ್ಯಗಳೂ ಇಲ್ಲ. ಎಲ್ಲವೂ ಸರಳವಾಗಿ...ಸರಾಗವಾಗಿ ಸಾಗುತ್ತದೆ...
ಇವರ ಈ ಬಡತನದ ಬದುಕಿನಲ್ಲಿ ಒಮ್ಮೆ ಕೃಷ್ಣ ಬಂದು ಬಿಡ್ತಾನೆ. ಕುಚೇಲನ ಮನೆಗೆ ಕೃಷ್ಣ ಬಂದ ಹಾಗೆ. ನಿಜ, ಬಡವನ ಮನೆಗೆ ಆಗಿನ ಸಿ.ಎಂ.ಬರೋದು ಖಾತ್ರಿ ಆಗುತ್ತದೆ. ಆಗ ಇವರ ಪಾಳು ಬಿದ್ದ ಮನೆಗೆ ಹೊಸ ಅಲಂಕಾರ. ಹೊಸ ರೂಪ. ಎಂದೂ ಕಾಣದ ಟಿ.ವಿ. ಬರುತ್ತದೆ. ಫ್ರಿಜ್ ಕಾಣಿಸಿಕೊಳ್ಳುತ್ತದೆ. ಫ್ಯಾನ್ ಗರ..ಗರನೇ ತಿರುಗುತ್ತದೆ. ಇದರಿಂದ ಊರಲ್ಲಿ ಈ ದೇವಕ್ಕನ ಫ್ಯಾಮಿಲಿ ಫುಲ್ ಫೇಮಸ್ ಆಗುತ್ತದೆ. ಒಂದು ರೀತಿ ರಾತ್ರೋ ರಾತ್ರಿ ಹೀರೋ ಆದ ಹಾಗೆ...
ಸಿ.ಎಂ. ಬರೋದು ಖಚಿತ ಆದ್ಮೇಲೆ. ಇವರ ಕೈಗಳಲ್ಲಿ ಲಕ್ಷ್ಮೀನು ಓಡಾಡುತ್ತಾಳೆ. ಈಕೆಯ ದಶೆಯಿಂದ ಹೊಸ ಬಟ್ಟೆ..ಹೊಸ ಕನಸುಗಳು ತೆರೆದುಕೊಳ್ಳುತ್ತವೆ. ಸಿ.ಎಂ.ಮನೆಗೆ ಬಂದ್ರೆ ಏನು ಕೇಳಬೇಕೆಂಬ ಅಂದಾಜು ಶುರುವಾಗುತ್ತದೆ. ಊರ ಮಂದಿ ಕೂಡ ಇವರ ಕೈಯಲ್ಲಿ ಮನವಿನೂ ಕೊಡ್ತಾರೆ. ಅಂದು ಕೊಂಡಂತೆ, ಸಿ.ಎಂ. ಡಿಸೆಂಬರ್-1 ಕ್ಕೆ ದೇವಕ್ಕನ ಮನೆಗೆ ಬರುತ್ತಾರೆ. ಬಂದು ದೇವಕ್ಕನ ರೊಟ್ಟಿನೂ ತಿನ್ನುತ್ತಾರೆ. ಒಂದಿನ ಮನೆಯಲ್ಲೂ ಉಳಿದುಕೊಂಡು ಮುಂಜಾನೆ ಎದ್ದು ಹೊರಟೂ ಹೋಗುತ್ತಾರೆ. ಆದರೆ, ಬೆಂಗಳೂರಲ್ಲಿ ಸೈಟ್ ಕೇಳಬೇಕೆಂಬ ದೇವಕ್ಕನ ಕನಸು ಭಗ್ನ ಗೊಳ್ಳುತ್ತದೆ. ಇದ್ದ ಬದ್ದ ಮರ್ಯಾದೆನೂ ಹೋಗುತ್ತದೆ..
ಯಾಕೆ ಎಂಬೋ ಪಶ್ನೆಗೆ ಒಂದು ಗಂಭೀರ ಉತ್ತರವೂ ಸಿಗುತ್ತದೆ. ಸಿನಿಮಾ ನೋಡಿದಾಗ, ಕ್ಲೈಮ್ಯಾಕ್ಸ್ ನಲ್ಲಿ ರಿವೀಲ್ ಆಗೋ ಆ ಸತ್ಯವನ್ನ ತಿಳಿಯೋಕೆ ಚಿತ್ರ ಒಮ್ಮೆ ನೋಡಬೇಕು. ಆ ಬಗ್ಗೆ ನಿಮಗೆ ಈಗಲೇ ಒಂದು ಕುತೂಹಲ ಇದ್ದರೆ, ಒಂದು ಹಿಂಟ್ ಕೊಡ್ತಿನಿ. ಡಿಸೆಂಬರ್-1 ವಿಶ್ವ ಏಡ್ಸ್ ದಿನ. ಮುಂದಿನದು ನೀವೇ ಗೆಸ್ ಮಾಡಿ. ಥಿಯೇಟರ್ ಗೆ ಹೋಗಿ. ಇದೇ 25 ರಂದು ಇದು ರಿಲೀಸ್ ಕೂಡ ಆಗಿದೆ.
ಪಿ.ಶೇಷಾದ್ರಿ ನಿರ್ದೇಶನದ ಚಿತ್ರ'; ಡಿಸೆಂಬರ್ -1 ಪಿ.ಶೇಷಾದ್ರಿ ಅವರ ಚಿತ್ರ. ಕತೆ-ಚಿತ್ರಕತೆ ಮತ್ತು ನಿರ್ದೇಶನ ಇವರೇ ಮಾಡಿದ್ದಾರೆ. ಪತ್ರಿಕೆಯಲ್ಲಿ ಬಂದ ವರದಿಯನ್ನ ಆಧರಿಸಿಯೇ, ಗ್ರಾಮ ವಾಸ್ತವ್ಯದ ಇನ್ನಷ್ಟು ವಿಚಾರಗಳನ್ನ ಹೆಕ್ಕಿ ತೆಗೆದು ಸಿನಿಮಾ ಮಾಡಿದ್ದಾರೆ. ಸರಳವಾಗಿ ಮನಸ್ಸಿಗೆ ನಾಟೋ ನಿರೂಪನೆಯಿಂದ ಇದು ಇಷ್ಟವಾಗುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿಯೇ ಇಡೀ ಕಥೆ ನಡೆಯೋದರಿಂದ ಶೇಷಾದ್ರಿಯವರು, ಗದಗ ಹತ್ತಿರದ ಶಿರಗುಪ್ಪಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅಲ್ಲಿಯ ರಂಗಭೂಮಿಯ ಕಲಾವಿದರನ್ನೇ ಬಳಸಿಕೊಂಡಿದ್ದಾರೆ. ದತ್ತಣ್ಣ, ಶಶಿಕುಮಾರ್ ಹಾಗೂ ನಟಿ ಸ್ಮಿತಾ ಬೆಂಗಳೂರಿನವರು. ರೊಟ್ಟಿ ದೇವಕ್ಕನ ಪಾತ್ರವನ್ನ ಅವ್ವ ಚಿತ್ರ್ರ ಖ್ಯಾತಿಯ ಈ ಸ್ವಿತಾ ನಿರ್ವಹಿಸಿದ್ದಾರೆ. ದೇವಕ್ಕನ ಪತಿಯ ಪಾತ್ರ ಉ.ಕ.ದ ಸಂತೋಷ್ಮಾ ಉಪ್ಪಿನ ಮಾಡಿದ್ದಾರೆ.
ವಿ.ಮನೋಹರ್ ಸಂಗೀತ; ವಿ.ಮನೋಹರ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇರೋ ಕೆಲವೇ ಹಾಡುಗಳಲ್ಲಿ ಉತ್ತರ ಕರ್ನಾಟಕದ ಸೊಗಡು ಅಡಗಿದೆ. ಅಲ್ಲಿಯ ಲೋಕೇಶನ್ ಗಳೂ, ಅಲ್ಲಿಯ ದೈನಂದಿನ ಬದುಕನ್ನೂ ಕಟ್ಟಿಕೊಟ್ಟಿವೆ. ಭಾಷಾ ಬಳಕೆನೂ ಅಲ್ಲಿಯ ಮಂದಿಗೆ ಬೇಗ ನಾಟೋ ಹಾಗೆನೂ ಇವೆ. ಒಂದು ರೀತಿ ಡಿಸೆಂಬರ್-1 ಉತ್ತರ ಕರ್ನಾಟಕದ ಆಗಿನ ಬದುಕನ್ನ ಚಿತ್ರಿಸೋ ಕೆಲಸ ಮಾಡಿದೆ. ಆದರೆ, ಇಲ್ಲಿ ಗ್ರಾಮ ವಾಸ್ತವ್ಯ ಬಿಟ್ಟು ಹೋದ ಕಾರಳ ಸತ್ಯವನ್ನ ಇದು ಸಾರಿ...ಸಾರಿ ಹೇಳಿತ್ತಿದೆ...
-ರೇವನ್ ಪಿ.ಜೇವೂರ್