ಸಂಪನ್ಮೂಲಗಳ ಪ್ರಾಮಾಣಿಕ ಬಳಕೆ, ಸರ್ಕಾರವನ್ನಷ್ಟೇ ದೂರುವುದೇಕೆ?

ಸಂಪನ್ಮೂಲಗಳ ಪ್ರಾಮಾಣಿಕ ಬಳಕೆ, ಸರ್ಕಾರವನ್ನಷ್ಟೇ ದೂರುವುದೇಕೆ?

ಈ ಲೇಖನ 26 ಏಪ್ರಿಲ್ 2014ರಂದು ಕನ್ನಡ ಪ್ರಭ (ಪುಟ8) ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ.
Click Here 
or
Click Here

ಚುನಾವಣಾ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಭರಪೂರ ಭರವಸೆಗಳು,ಆಶ್ವಾಸನೆಗಳು. ಅಸ್ತಿತ್ವದಲ್ಲಿರುವ ಸರ್ಕಾರದಿಂದ ವಿವಿಧ ಯೋಜನೆಗಳ ಪ್ರಾರಂಭ. ಪದವಿ ಮುಗಿಸಿದ ನಿರುದ್ಯೋಗಿಗಳಿಗೆ, 40ವರ್ಷವಾದರೂ ಮದುವೆಯಾಗದ ಹೆಂಗಸರಿಗೆ ಮಾಸಾಶನಗಳು. 1ರೂಗೆ ಅಕ್ಕಿ ಮತ್ತು ಹಲವು. ಇದೆಲ್ಲದಕ್ಕೇ ಬೇಕಾಗಿರುವುದು ಹಣ,ಹಣ,ಹಣ. ಇದಕ್ಕೆಲ್ಲಾ ಖರ್ಚು ಮಾಡುವುದು ನಮ್ಮದೇ ಹಣ. ದಿನವಿಡೀ ಬೆವರು ಸುರಿಸಿ ದುಡಿದು ತೆರಿಗೆ ಕಟ್ಟಿದ ಹಣ ಏನೇನಾಗುತ್ತಿದೆ ನೋಡಿ. ಯಾವುದೇ ವಿಚಾರದಲ್ಲಾಗಲೀ ಹಣಕಾಸಿನ ನಿರ್ವಹಣೆ ತುಂಬಾ ಮುಖ್ಯವಾದದ್ದು. ಸರ್ಕಾರದ ಖಜಾನೆಯಲ್ಲಿರುವ ಹಣವನ್ನು ಉಪಯೋಗಿಸಿಕೊಂಡು ನಾನು ಬೇಕಾದರೂ ಉತ್ತಮ ನಗರವನ್ನು ನಿರ್ಮಿಸಬಲ್ಲೆ. ಉತ್ತಮ ಯೋಜನೆಗಳನ್ನು ಕೊಡಬಲ್ಲೆ. ಇದೆಲ್ಲವನ್ನು ಬಿಟ್ಟು ಬೇರೆ ಏನೋ ಹೊಸ ಮಾರ್ಗ ಅನುಸರಿಸುವ ನಾಯಕನ ಅವಶ್ಯಕತೆ ಇದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಹಾಗೂ ಹೆಚ್ಚು ಆದಾಯವನ್ನು ಗಳಿಸುವುದಕ್ಕೆ ತಂತ್ರ ಹೂಡುವ ಚಾಣಾಕ್ಷತೆ ಸರ್ಕಾರವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಅಥವಾ ಪ್ರಧಾನಿಗೆ ಮುಖ್ಯವಾಗಿ ಇರಬೇಕು. ಹೆಚ್ಚು ಆದಾಯ ಎಂದಾಕ್ಷಣ ತೆರಿಗೆಗಳನ್ನು ಹೆಚ್ಚಿಸುವುದಲ್ಲ. ಸರ್ಕಾರಕ್ಕೆ ಬರುವ ಹಣ ಎಲ್ಲೆಲ್ಲಿ ಪೋಲಾಗುತ್ತಿದೆ, ಏಕೆ ಪೋಲಾಗುತ್ತಿದೆ, ಅದರ ಕಡಿವಾಣ ಹೇಗೆ ಹಾಗು ಅನಾವಶ್ಯಕ ಖರ್ಚು ಎಲ್ಲಾಗುತ್ತಿದೆ ಹಾಗೂ ಅದರ ಕಡಿವಾಣ ಹೇಗೆ ಎಂಬುದರ ಬಗ್ಗೆ ಯೋಚಿಸುವ ಮತ್ತು ಅದನ್ನು ನಿಯಂತ್ರಿಸುವ ಶಕ್ತಿ ಇರಬೇಕು. ಸರ್ಕಾರದ ಸಂಸದರ/ಶಾಸಕರ ನಿಧಿಯನ್ನು ನಿರ್ವಹಣೆ ಇರಲಿ ಅದನ್ನೂ ಉಪಯೋಗಿಸಲೂ ಬಾರದ ಕೆಲವು ಸಂಸದ/ಶಾಸಕರಿದ್ದಾರೆ. ಇಂತವರಿಂದ ಉತ್ತಮ ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯ. ನನ್ನ ಕಣ್ಮುಂದೆ ನಡೆದ ಕೆಲವು ಘಟನೆಗಳನ್ನು ಬಿಚ್ಚಿಡುತ್ತಿದ್ದೇನೆ ಓದಿ.
ನನ್ನ PUC ವಿದ್ಯಾಭ್ಯಾಸದ ನಂತರ ಕೃಷಿಕರ ಕೋಟಾದಡಿ ಬಿ.ಎಸ್ಸಿ(ಕೃಷಿ)ಗೆ ಸೇರಲು “ಕೃಷಿಕ ಪ್ರಮಾಣ ಪತ್ರ” ಪಡೆಯಲು ನೆಮ್ಮದಿ ಕೇಂದ್ರಕ್ಕೆ ಹೋದೆ. ನಮ್ಮ ವ್ಯವಸಾಯ ಭೂಮಿಯ 30 ವರ್ಷದ ಪಹಣಿ(RTC)ಯನ್ನು ತರಲು ಅಲ್ಲಿ ಸೂಚಿಸಿದರು. ಅದನ್ನು ಪಡೆಯಲು ಕೆ.ಆರ್.ಪುರಂ ತಾಲೂಕು ಕಚೇರಿಗೆ ಹೋದೆ. ಅರ್ಜಿ ಸಲ್ಲಿಸಿ 15ದಿನ ಬಿಟ್ಟು ಬರುವಂತೆ ಸೂಚಿಸಿದರು. ಆದರೆ ನನಗೆ ಸಮಯ ಇರಲಿಲ್ಲ. ಅದಕ್ಕಾಗಿ ಅದರ ಮಾರನೇ ದಿನ ನನ್ನ ತಂದೆಯನ್ನು ಕಳಿಸಿ ದಲ್ಲಾಳಿಯ ಮೂಲಕ 2000ರೂ ಕೊಟ್ಟು ಕೇವಲ 3ಘಂಟೆಯಲ್ಲಿ 30ವರ್ಷದ ಪಹಣಿಯನ್ನು ಪಡೆದೆ. ತಿಂಗಳಿಗೆ 2500-5000 ರೂ ಸಂಬಳ ಪಡೆಯುವವರ ಪಾಡೇನು.? ಮೊದಲನೆಯದಾಗಿ ಯಾವುದೇ ಸರ್ಕಾರಿ ಕಚೇರಿಯ ರೆಕಾರ್ಡ್ ರೂಂ ಬಳಿ ಸಾರ್ವಜನಿಕರು ಹೋಗುವಂತಿಲ್ಲ. ತಮಗೆ ಬೇಕಾದ ರೆಕಾರ್ಡ್ಸ್ ಅನ್ನು ಅರ್ಜಿ ಸಲ್ಲಿಸಿ ಪಡೆಯಬೇಕು. ಅದಕ್ಕಾಗೇ ಪ್ರತ್ಯೇಕ ಜಾಗವಿರುತ್ತದೆ. ಆದರೆ ಸರ್ಕಾರಿ ಕಚೇರಿಯ ರೆಕಾರ್ಡ್ ರೂಂ ಬಳಿ ಸಾಲು ಸಾಲು ಜನ ನಿಂತಿರುತ್ತಾರೆ.
ಕರ್ನಾಟಕದಲ್ಲಿ 220 ತಾಲೂಕುಗಳಿವೆ. ಪ್ರತಿ ತಾಲೂಕಿನಲ್ಲಿ ಕೇವಲ ರೆಕಾರ್ಡ್ ರೂಂನಲ್ಲಿ ದಿನಕ್ಕೆ10,000 ರೂ ಹಣ ಪೋಲಾಗುತ್ತಿದೆ ಎಂದಾದರೆ 220 ತಾಲೂಕುಗಳಲ್ಲಿ ತಿಂಗಳಿಗೆ ಅಂದಾಜು ಬರೋಬ್ಬರಿ 5.50 ಕೋಟಿ ಹಣ ಅಧಿಕಾರಿಗಳ ಜೇಬಿಗೆ ಹೋಗುತ್ತಿದೆ. ಇದು ಕೇವಲ ರೆಕಾರ್ಡ್ ರೂಂನ ಕಥೆಯಾದರೆ ಉಳಿದ ವಿಭಾಗಗಳ ಲೆಕ್ಕ.? ಆಯಾ ತಾಲೂಕಿನ ತಹಶೀಲ್ದಾರ್ ತೆಗೆದುಕೊಳ್ಳುವ ಲಂಚ ಲಕ್ಷಗಳಲ್ಲಿ ಮಾತ್ರ. ಅದಕ್ಕೆ ಇರಬೇಕು ನಮ್ಮ ಜನ ಸರ್ಕಾರಿ ಉದ್ಯೋಗ ಪಡೆಯಲು ಪಡುವ ಪಾಡು ನೋಡಲಿಕ್ಕಾಗುವುದಿಲ್ಲ. ಕರ್ನಾಟಕದಲ್ಲಿ 30 ಜಿಲ್ಲೆಗಳು. ಅದರಲ್ಲಿ 30ಡಿ‌ಸಿ ಹಾಗೂ 30ಎಸಿ. ಎಸಿ ಕೋರ್ಟ್ ನಲ್ಲಿರುವ ಕೇಸಿಗೆ ಲಂಚ ನೀರಿನ ರೀತಿ ಹರಿಯುತ್ತಿದೆ. ದಾಖಲೆಗಳನ್ನು ತಿರುಚುವುದರಲ್ಲಿ ಎಸಿ ಕೋರ್ಟ್ ಎತ್ತಿದ ಕೈ. ದುಡ್ಡಿರುವ ಶ್ರೀಮಂತ ಲಕ್ಷಗಟ್ಟಲೇ ಲಂಚ ಕೊಡುತ್ತಾನೆ. ವಾರ್ಷಿಕ ಆದಾಯ ಕೇವಲ 10000-25000 ಇರುವ ಬಡವ ಹೇಗೆ ಬದುಕಲಾರ.? ಇಂತಹ ಕಾರಣಗಳಿಂದಲೇ ಭಾರತ ಇವತ್ತಿಗೂ ಮುಂದುವರಿಯುತ್ತಿರುವ ದೇಶವೇ ಆಗಿದೆ.
ಬೆಂಗಳೂರಿನಲ್ಲಿ 42 ಟ್ರಾಫಿಕ್ ಪೊಲೀಸ್ ಸ್ಟೇಷನ್ ಗಳನ್ನೊಳಗೊಂಡ 7 ಸಬ್ ಡಿವಿಷನ್ ಗಳಿವೆ. ಟ್ರಾಫಿಕ್ ಪೊಲೀಸರು ವಿವಿಧ ಕಾರಣಗಳಿಗಾಗಿ ವಾಹನಗಳ ಮೇಲೆ ಹಾಕುವ ಬಹುತೇಕ ಫೈನ್ ಗಳಿಗೆ ರಸೀದಿಯನ್ನು ಕೊಡುವುದಿಲ್ಲ. ನಮ್ಮ ಜನ ಕೇಳುವುದೂ ಇಲ್ಲ. ಏಕೆಂದರೆ 100ರೂ ಕೊಡುವ ಜಾಗದಲ್ಲಿ 50ರೂ ಕೊಡಬಹುದಲ್ಲವೇ. ಇಂತಹ ವಿಚಾರಗಳಲ್ಲಿ ಸರ್ಕಾರವನ್ನು ಬೈಯ್ಯುವ ಬದಲು ನಮ್ಮ ಮುಖಕ್ಕೆ ನಾವೇ ಉಗಿದುಕೊಳ್ಳಬೇಕು. 42 ಜಾಗಗಳಲ್ಲಿ ದಿನಕ್ಕೆ 2000ರೂನಂತೆ ರಸೀದಿಯಿಲ್ಲದೆ ಪಡೆಯುವ ಹಣ ಪೊಲೀಸರ ಜೇಬಿಗೆ ಹೋಗುತ್ತಿದೆ. ಅಂದರೆ ದಿನಕ್ಕೆ 84000, ತಿಂಗಳಿಗೆ ಸರಾಸರಿ 2520000ರೂ. ನಮ್ಮ ಜನ ಕೊಡುವುದು 100ರೂಗಳಿಗೆ 50ರೂ. ಇದರ ಲೆಕ್ಕದ ಪ್ರಕಾರ ತಿಂಗಳಿಗೆ ಬೆಂಗಳೂರು ಒಂದೇ ನಗರದಿಂದ ಸರ್ಕಾರಕ್ಕೆ ನಷ್ಟವಾಗುತ್ತಿರುವ ಹಣ ಬರೋಬ್ಬರಿ 50 ಲಕ್ಷ. ಅದು 2000ರೂ ಬದಲು 4000ರೂ ಆಗಿದ್ದರೆ ತಿಂಗಳಿಗೆ 1ಕೋಟಿ. ಇದು ಸರ್ಕಾರಕ್ಕೆ ಬರಬೇಕಾಗಿದ್ದ ಆದಾಯದಲ್ಲಿ ಪೋಲಾಗುತ್ತಿರುವ ಮೊತ್ತ. ಇದನ್ನು ಪೊಲೀಸರು ನಿರಾಕರಿಸುವ ಹಾಗಿಲ್ಲ. ಒಂದು ವೇಳೆ ತಮ್ಮ ಹೃದಯದ ಮೇಲೆ ಕೈಯ್ಯಿಟ್ಟು ನಿರಾಕರಿಸುವಂತಿದ್ದರೆ ಅಂತಹ ಪೊಲೀಸರಿಗೊಂದು ಸೆಲ್ಯೂಟ್. ಈ ಪೋಲಾಗುತ್ತಿರುವ ಹಣ ಸರ್ಕಾರಕ್ಕೇ ಬಂದರೆ ಬಿ‌ಪಿ‌ಎಲ್ ಕಾರ್ಡುದಾರರಿಗೆ ಕೊಡುವ ಅಕ್ಕಿಯನ್ನು ರೂ 23ರಂತೆ ತಿಂಗಳಿಗೆ 2,15,000 ಕೆ‌ಜಿ ಅಕ್ಕಿಯನ್ನು ಖರೀದಿಸಬಹುದು. ಇಂತಹ ಆಲೋಚನೆಗಳನ್ನು ಹಣಕಾಸು ಸಚಿವರು ಮಾಡಿದರೆ ಆದಾಯ ಹೆಚ್ಚಿಸಬಹುದು. ಹತ್ತು ಸಲ, ಹದಿನೈದು ಸಲ ಬಜೆಟ್ ಮಂಡಿಸಿದರೆ ಏನು ಬಂತು. ಅದೇ ರಾಗ ಅದೇ ತಾಳ ಹೊಸದಂತು ಏನೂ ಇಲ್ಲ. ಬಂಡವಾಳ ಹೂಡಿಕೆದಾರರಿಂದ ಬಂಡವಾಳ ಹೂಡಿಸಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗವನ್ನು ನಿವಾರಿಸಬಹುದೇ ವಿನಹ ಸರ್ಕಾರಕ್ಕೆ ಹೆಚ್ಚಿನ ರೀತಿಯಲ್ಲಿ ಆದಾಯ ಗಳಿಸುವುದಿಲ್ಲ. ಕುಳಿತು ತಿನ್ನುವವನಿಗೆ ಕೊಪ್ಪರಿಗೆ ಹೊನ್ನಿದ್ದರೂ ಸಾಕಾಗುವುದಿಲ್ಲ. 100ರೂ ಆದಾಯ ಬರುವ ಬಳಿ 200 ಖರ್ಚು ಮಾಡುವ ಸರ್ಕಾರ ಮುಂದಿನ ಪೀಳಿಗೆಗೆ ಸಾಲವನ್ನು ಉಡುಗೊರೆಯಾಗಿ ನೀಡಬೇಕಾಗುತ್ತದೆ.
ಜನಸೇವೆಗಾಗಿ ಬಂದು ನಮ್ಮ ಬಳಿ ಮತ ಕೇಳಿ ಸಂಸದರಾಗುವವರಿಗೆ ಸರ್ಕಾರದಿಂದ ಸಿಗುವ ಸವಲತ್ತು ಬಹುಶಃ ಆ ದೇವರಿಗೂ ಇರುವ ಹಾಗಿಲ್ಲ. ನಮಗೇನೂ ಬೇಡ, ನಾನು ಸಾಮಾನ್ಯನಂತೆ ಇರುತ್ತೇನೆ ಎಂದು ಆಯ್ಕೆಯಾಗುವವರು ಸಹ ನಂತರ ಎಲ್ಲಾ ಸೌಲಭ್ಯ ಪಡೆಯುತ್ತಾರೆ ಉದಾಹರಣೆಗೆ ಅರವಿಂದ್ ಕೇಜ್ರಿವಾಲ್. ನಮ್ಮ ಸಂಸದರಿಗೆ(ಎಮ್.ಪಿ) ಸರ್ಕಾರದಿಂದ ಕೊಡುವ ಸಂಬಳ ವರ್ಷಕ್ಕೆ ಅಂದಾಜು 70 ಲಕ್ಷ. ಅಂದರೆ 543 ಸಂಸದರಿಗೆ 5 ವರ್ಷಕ್ಕೆ ಬರೋಬ್ಬರಿ 1700+ ಕೋಟಿ ರೂ ವ್ಯರ್ಥವಾಗುತ್ತಿದೆ. ನಿಜವಾಗಲೂ ಇಷ್ಟೊಂದು ಸಂಬಳ ಅಥವಾ ಸವಲತ್ತು ಸಂಸದರಿಗೆ ಬೇಕಾ.? ಇಷ್ಟೊಂದು ಸಂಬಳ ಪಡೆಯಲು ಇವರು ಅರ್ಹರಾ.? ಭಾರತದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಆದರೆ ಬಡವರು ಅದೇ ಗುಡಿಸಲು. ಅದೇ ಚಾಪೆಯ ಮೇಲೆ ಮಲಗುವ ಸ್ಥಿತಿ. ಬಡವರ ಸೇವೆ ಹೆಸರಲ್ಲಿ ಬರುವ ಜನನಾಯಕರು ಬಡವರನ್ನು ಶ್ರೀಮಂತರನ್ನಾಗಿ ಮಾಡಿದರೆ ಎಲ್ಲಿ ನಮ್ಮ ಸಮಾನಕ್ಕೆ ಬರುತ್ತಾರೋ ಎಂದು ಅವರ ಏಳಿಗೆಗೆ ಶ್ರಮಿಸುವಲ್ಲಿ ವಿಫಲರಾಗಿದ್ದಾರೆ. ಜನಪ್ರತಿನಿಧಿಗಳ ಆಸ್ತಿ ಏರಿಕೆಯಾಗುತ್ತಲೇ ಇರುತ್ತದೆ. ಬಡವ ಗುಡಿಸಿಲಲ್ಲೇ ಇರುತ್ತಾನೆ.
2014ಕ್ಕೆ ನಡೆಯುವ ಲೋಕಸಭಾ ಚುನಾವಣೆಗೆ ಚುನಾವಣೆ ಆಯೋಗ ಅಂದಾಜಿಸಿರುವ ಖರ್ಚು 3500 ಕೋಟಿ. ಪ್ರತೀ ಕ್ಷೇತ್ರಕ್ಕೆ ಅಂದಾಜು 6.5ಕೋಟಿ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಚುನಾವಣೆ ಐದು ವರ್ಷಕ್ಕೊಮ್ಮೆ ನಡೆಯಲೇಬೇಕು ಅದು ನಮ್ಮ ವ್ಯವಸ್ಥೆ. ಆದರೆ ಇಂದು ಉಪಚುನಾವಣೆಗಳಿಗೆ ಕೋಟಿಗಟ್ಟಲೇ ಹಣ ವ್ಯರ್ಥವಾಗುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ 7 ಜನ ಹಾಲಿ ಶಾಸಕರು ಲೋಕಸಭಾ ಕಣದಲ್ಲಿದ್ದಾರೆ. ಆ 7ಜನ ಗೆದ್ದರೆ 7 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ. 2013ರ ಕರ್ನಾಟಕ ವಿಧಾನಸಭಾ ಚುನಾವಣೆಗೆ 200ಕೋಟಿ ಖರ್ಚಾಗಿತ್ತು. ಈ ಭಾರಿ ಈ ಏಳು ಜನ ಗೆದ್ದರೆ ಉಪ ಚುನಾವಣೆಗೆ ಅಂದಾಜು 6.5 ಕೋಟಿ ವ್ಯರ್ಥವಾಗುತ್ತಿದೆ. ಈ ಉಪಚುನಾವಣೆ ಪದ್ದತಿಯಿಂದ ಯಾವ ಪಕ್ಷವೂ ದೂರವಿಲ್ಲ. 2009ರಲ್ಲಿ ಸಂಸದರಾದ ಎಚ್.ಡಿ.ಕುಮಾರಸ್ವಾಮಿಯವರು 2013ರ ವಿಧಾನಸಭಾ ಚುನಾವಣೆಗೆ ಸ್ಪರ್ದಿಸಿ ಗೆದ್ದರು. ಈಗ ಮತ್ತೆ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಇನ್ನು ಒಂದು ವರ್ಷವೂ ಆಗಿಲ್ಲ. ಉಪಚುನಾವಣೆಗಳ ಖರ್ಚೆಷ್ಟು ಹಾಗೂ ಆ ಕ್ಷ್ತ್ರೆತ್ರದ ಜನರ ಪಾಡೇನು. ಮತದಾರರೇ ದಯವಿಟ್ಟು ಇಂತಹವರನ್ನು ತಿರಸ್ಕರಿಸಿ. ನಮ್ಮ ದೇಶದ ಆದಾಯವನ್ನು ವ್ಯರ್ಥ ಮಾಡುವ ನಾಯಕರು ನಮಗೆ ಬೇಕಾ.? ಇದೊಂದು ರೀತಿ ಪರೋಕ್ಷವಾಗಿ ಸರ್ಕಾರದ ಖಜಾನೆಯನ್ನು ಲೂಟಿ ಹೊಡೆಯುವುದು.
21ನೇ ಶತಮಾನವಾದರೂ ನಾವಿನ್ನೂ ಮುಂದುವರಿಯುತ್ತಲೇ ಇದ್ದೇವೆ. 2020ಕ್ಕೆ ವಿಶ್ವಗುರುವಾಗಿ ಮಿಂಚಬೇಕೆಂದರೆ ಸಕಲ ಶ್ರಮ ಅಗತ್ಯ. ಮಾಡಿದ್ದನ್ನೇ ಮಾಡುವ ಬದಲು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಂತಹ ಏನಾದರೂ ಹೊಸ ಚಿಂತನೆ, ಆವಿಷ್ಕಾರ ಮಾಡುವ ಕೆಲಸಕ್ಕೆ ಸರ್ಕಾರ ಇಂದು ಕೈ ಹಾಕಬೇಕಿದೆ. ಯಾವುದೇ ಬಿಲ್ ಬಂದರೂ ಭ್ರಷ್ಟಾಚಾರ ನಿಲ್ಲುವುದಿಲ್ಲ. ಅದು ಜನರ ಮತ್ತು ಅಧಿಕಾರಿಗಳ ಮನಸ್ಸಿಗೆ ಬರಬೇಕು. ಒಮ್ಮೆ ಪ್ರಾಯೋಗಿಕವಾಗಿ ಚಿಂತಿಸಿ ನೋಡಿ,ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಯಾವುದು ಸಾಧ್ಯ ಹಾಗೂ ಎಲ್ಲಿಯವರೆಗೆ ಸಾಧ್ಯವೆಂದು. ಕೇವಲ ಓಟಿಗಾಗಿ ಪ್ರಣಾಳಿಕೆಯನ್ನು ಕೊಡುವ ಪಕ್ಷಗಳೇ ಎಲ್ಲ. ಹೊಸ ಚಿಂತನೆಯನ್ನೊಳಗೊಂಡ ಪ್ರಣಾಳಿಕೆಗಳು ತೀರಾ ಅಪರೂಪ.  ನಮಗೆ ಮಾತ್ರವಲ್ಲದೇ ನಮ್ಮ ಮುಂದಿನ ಪೀಳಿಗೆಗೂ ಉಪಯೋಗವಾಗುವಂತಹ ಯೋಜನೆಗಳು ಜಾರಿಯಾಗಬೇಕಿದೆ. 100ರೂ ಬಂಡವಾಳ ಹಾಕಿ 1000ರೂ ತೆಗೆಯುವ ಯೋಜನೆಗಳನ್ನು ತರುವಂತಹ ಪ್ರಯತ್ನಕ್ಕೆ ಕೈಜೋಡಿಸಬೇಕಾಗಿದೆ. ಜನರ ಮನಸ್ಸಿನಲ್ಲಿ ಆಸೆಗಳನ್ನು ಬಿತ್ತುವಂತಹ ಪ್ರಣಾಳಿಕೆಗಳಿಗೆ ಜನರು ಮಾರುಹೋಗುತ್ತಾರೆ. ಅವು ಕ್ಷಣ ಮಾತ್ರ. ಇನ್ನಾದರೂ ಸರ್ಕಾರಗಳು ನೂತನ ಯೋಜನೆಗಳಿಗೆ ಕೈ ಹಾಕುತ್ತಾ ನೋಡಬೇಕು. ಎಲ್ಲಾ ಅಧಿಕಾರಿಗಳೂ ಭ್ರಷ್ಟರಲ್ಲ. ಇಂತಹ ಕುಲಗೆಟ್ಟ ಸಮಾಜದಲ್ಲಿ ಭ್ರಷ್ಟಾಚಾರ ರಹಿತ ಅಧಿಕಾರಿಗಳಿದ್ದರೆ ನಿಮಗೊಂದು ಸಲ್ಯೂಟ್.
ರೂಪೇಶ್ ಆರ್
ಮೊ:91 9738020220