ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 3
ಇವಳೆನ್ನ ಕಾಪಿಡುವ ದೇವಿ!
ಅನಲೆಯ ಮೇಲೆ ಸೀತೆಯ ಪ್ರಭಾವ ಆಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಚಂದ್ರನಖಿಯೇ ಸೀತೆಯ ಸದ್ಗುಣಕ್ಕೆ, ತಪಕ್ಕೆ ಬದಲಾಗಿದ್ದಾಳೆ! ಇನ್ನು ಅನಲೆ, ವಿಭೀಷಣನ ಮಗಳು ಬದಲಾಗದಿರುವಳೆ?. ಸೀತೆಗೆ ಅನಲೆಯ ಬಗ್ಗೆ ಮಾತೃವಾತ್ಸಲ್ಯ ಮೂಡಿದೆ. ಪರಸ್ಪರ ಗೌರವದಿಂದ ಇದ್ದಾರೆ. ಆದರೆ ಅದರ ಪರಿಣಾಮ, ಮುಖ್ಯವಾಗಿ ರಾವಣನ ಮೇಲೆ ಹೇಗಿದ್ದಿರಬಹುದು? ಅಂತಹ ಒಂದು ಸಂದರ್ಭದಲ್ಲಿ ಮತ್ತೆ ಅನಲೆ ಕಾಣಿಸಿಕೊಳ್ಳುತ್ತಾಳೆ. (ಹಾಗೆ ನೋಡಿದರೆ, ಅನಲೆ ಹಾಗೆ ಬಂದು ಹೀಗೆ ಹೋಗುವ ಪಾತ್ರ ಅಲ್ಲವೇ ಅಲ್ಲ. ಶ್ರೀರಾಮಾಯಣದರ್ಶನಂ ಕಾವ್ಯದ ಒಟ್ಟು ಚಲನಶೀಲತೆಯ ಸಂಕೇತದಂತೆ ಅವಳ ಪಾತ್ರ ಬಂದಿದೆ, ಕಾವ್ಯದುದ್ದಕ್ಕೂ.)
ರಾವಣ ಒಮ್ಮೆ ಸೀತೆಯನ್ನು ನೋಡಲು ಬರುತ್ತಾನೆ. ಚಂದ್ರನಖಿಯೂ ಜೊತೆಯಲ್ಲಿರುತ್ತಾಳೆ. ತ್ರಿಜಟೆ ಸೀತೆಯ ಯೋಗಕ್ಷೇಮದ ಜವಾಬ್ದಾರಿಯನ್ನು ಹೊತ್ತಿರುತ್ತಾಳೆ. ಸೀತೆಯ ಮನಸ್ಸನ್ನು ಬದಲಾಯಿಸಬೇಕೆಂದು ರಾವಣ ತ್ರಿಜಟೆಗೆ ಸೂಚಿಸಿರುತ್ತಾನೆ. ಆದರೆ, ಪುಣ್ಯಮನಪ್ಪುವ ಪಾಪದಂತೆ ತ್ರಿಜಟೆ ಸೀತೆಯ ಪ್ರಭಾವಲಯಕ್ಕೆ ಸಿಕ್ಕಿಕೊಂಡಿರುತ್ತಾಳೆ. ರಾವಣ ನೇರವಾಗಿ ಸೀತೆಯನ್ನು ಎದುರಿಸಲಾರ; ಮಾತನಾಡಿಸಲಾರ. ಅದಕ್ಕಾಗಿ ಆತ ತ್ರಿಜಟೆಯನ್ನು ಅವಲಂಬಿಸುತ್ತಾನೆ. ಆಕೆಯ ಮುಖಾಂತರ ಸೀತೆಯನ್ನು ವಿಚಾರಿಸುತ್ತಾನೆ, ಎಚ್ಚರಿಸುತ್ತಾನೆ. ತನ್ನ ಬಗೆಗಿನ ಸೀತೆಯ ’ಧಿಕ್’ ಭಾವನೆಯನ್ನು ಕಂಡು ತ್ರಿಜಟೆಯ ಮೇಲೆ ಕೋಪಗೊಳ್ಳುತ್ತಾನೆ. "ನೆನೆವಳಾ ರಾಮಚಂದ್ರನಂ ಮೂರುವೊಳ್ತುಂ ಸ್ವಾಮಿ" ಎಂಬ ತ್ರಿಜಟೆಯ ಮಾತುಗಳು ಆತನಿಗೆ ಸಿಡಿಲನಂತೆ ಎರಗಿವೆ. ಜೊತೆಗೆ "ಸೀತೆ ಪೆಣ್ಣಲ್ತು ನಮ್ಮನ್ನರೊಲ್, ದೈತ್ಯರಾಜೇಂದ್ರ: ದೇವಿಯಯ್; ನೀನಾಕೆಯಂ ಮೊದಲ್ ಕರೆದವೊಲ್ ('ನಿನ್ನ ಸೇವಾಫಲಮೊ ಮೇಣ್ ಸ್ತ್ರೀಸಹಜ ಛಲಮೊ? ದೇವಿಗೀ ಪಾಂಗಿದೇನ್, ತ್ರಿಜಟೆ?' - ಎಂದು ಸೀತೆಯ ಕುರಿತು ವಿಚಾರಿಸಿಕೊಂಡಿರುತ್ತಾನೆ.) ಆ ಪೂಜ್ಯೆ ದೇವಿಯೆ ದಿಟಂ!" ಎಂದು ಆತನ ತಂಗಿ, ಸೀತೆಯ ಅಪಹರಣಕ್ಕೆ ಬೀಜ ಬಿತ್ತಿದವಳೇ ಆದ ಚಂದ್ರನಖಿ ಧೈರ್ಯವಾಗಿ ಅವನೆದುರಿಗೇ ನುಡಿಯುತ್ತಾಳೆ. ಇದನ್ನಂತೂ ಆತ ನಿರೀಕ್ಷಿಸಿರಲೇ ಇಲ್ಲ. ಮುಂದುವರೆದ ಚಂದ್ರನಖಿ ರಾವಣನನ್ನು ಕುರಿತು,
....ನಿನ್ನ ಕೈಯಿಂದೆ ಹತನಾದನೆನ್ನ ಪತಿ ಪಾತಾಳಯುದ್ಧದೊಳ್.
ನೀನಿತ್ತ ವೈಧವ್ಯದಿಂದ ಉರಿದೆನ್ ಆಂ.
ಮತ್ತೆ, ನಿನ್ನ ದೆಸೆಯಿಂದೆನಗೆ ಅನುತ್ತಮದ ಜೀವಿತಂ ಮೊದಲಾಯ್ತು!
ಪಾಪಿ ನೀನ್ ಎನ್ನನುಂ ಪಾಪಕ್ಕೆ ನೂಂಕಿದಯ್.
ನಿನ್ನವೋಲೆನಗುಂ ಆ ಪಾಪಮೇ ರುಚಿಯಾಯ್ತು.
ಆ ಕೂಪಕಿನ್ನೆಂದುಂ ಇಳಿಯೆನಯ್.
ನಿನ್ನನುಂ ಪ್ರಾರ್ಥಿಪೆನ್ ಇಳಿಯದಂತೆ
ಎಂದು ಹೇಳಿದ ಮಾತುಗಳನ್ನು ಕೇಳಿದ ಮೇಲೆ, ಆತನಿಗೆ ವಿವೇಕವೇ ಹಾರಿಹೋಗುತ್ತದೆ. ತನ್ನ ಮನೆಯವರೇ ತನಗೆ ಶತ್ರುಗಳಾಗಿದ್ದಾರೆ ಎಂದು ಭಾವಿಸುತ್ತಾನೆ. ಅವರೆಲ್ಲರೂ ಆತನ ಆತ್ಮೋದ್ಧಾರಕ್ಕೆ ಕಾತರಿಸಿದ್ದಾರೆ ಎಂಬುದು ರಾವಣನಿಗೆ ಅರ್ಥವಾಗುವ ಹೊತ್ತು ಇನ್ನೂ ಬಂದಿಲ್ಲ. ಆತನ ಸಿಟ್ಟು ಚಂದ್ರನಖಿಯ ನೆಪದಲ್ಲಿ ಅನಲೆಯ ಮೇಲೆ ತಿರುಗಿಬಿಡುತ್ತದೆ. ಚಂದ್ರನಖಿಯ ಬದಲಾವಣೆಯ ಹಿಂದೆ, ಆತನಿಗೆ ಸೀತೆಗಿಂತ ಅನಲೆಯ ಕೈವಾಡವೇ ಕಾಣುತ್ತದೆ. (ತಾರಾಕ್ಷಿಯ ವಿಷಯದಲ್ಲಿ ಇಂದ್ರಜಿತುವೂ ಸಹ ಅನಲೆಯ ಕೈವಾಡವನ್ನೇ ಕಂಡಿದ್ದನ್ನು ಗಮನಿಸಿದ್ದೇವೆ). ಜೊತೆಗೆ, ಸೀತೆಯನ್ನು ರಾವಣ ಏನೂ ಮಾಡಲಾರ! ತಪೋಧೀಕ್ಷೆಯನಾಂತು ವ್ರತಿಯಾಗಿರುವ ಅವಳನ್ನು ನೇರವಾಗಿ ಎದುರಿಸಲಾರ. ಎಲ್ಲರಿಗೂ ಸೇರಿಸಿ, "ನೀನಾದೊಡಂ, ಅನಲೆಯಾದೊಡಂ, ಮತ್ತಂ ಇನ್ನಾರಾದೊಡಂ ಇತ್ತಲೀ ಬನಕೆ ಕಾಲಿಟ್ಟುದಂ ಕೇಳ್ದೆನಾದೊಡೆ....ಕೊರಳ್ ಉರುಳ್ದಪುದು" ಎಂದು ಎಚ್ಚರಿಕೆ ಕೊಡುತ್ತಾನೆ. ಇದು ಕೇವಲ ಆತ ತನ್ನ ದರ್ಪದಿಂದ, ಮುಖವನ್ನುಳಿಸಿಕೊಳ್ಳಲು ಆಡಿದ ಮಾತುಗಳು ಅಷ್ಟೆ. ಅದೂ, ಮಾತನ್ನು ತುಂಡರಿಸಿ ಹೇಳುತ್ತಾನೆ. 'ಕೊರಳ್ ಉರುಳ್ದಪುದು' ಎಂಬುದು ಅವರನ್ನು ಉದ್ದೇಶಿಸಿಯೊ ಅಥವಾ ತನ್ನ ಮೇಲೆ ಆಲವಾಣದ ಕೆಂಪುಹೂವನ್ನು ಬೀಳಿಸಿದ ಹೂಕುಡಿವ ಹಕ್ಕಿಗೊ ಎಂಬ ಸಂಧಗ್ದತೆ ಓದುಗನಿಗೆ ತೋರಿದರೆ ಆಶ್ಚರ್ಯವಿಲ್ಲ. ಏಕೆಂದರೆ, ಅನಲೆಯ ಬಗ್ಗೆ ಆತನಿಗೆ ಅಗಾಧವಾದ ವಾತ್ಸಲ್ಯವಿದೆ. ಮುಂದೆ ಆತ ಸೀತೆಯ ಭೇಟೆಗೆ ಬಂದಾಗ ಅನಲೆಯೂ ಇರುತ್ತಾಳೆ. ಅಲ್ಲಿ ನಡೆದ ಘಟನೆಗಳನ್ನು ಮಂಡೋದರಿಗೂ ತಿಳಿಸುತ್ತಾಳೆ. ಆದರೆ ರಾವಣ ಕುಪಿತನಾಗುವುದಿಲ್ಲ! ಇದು ಅನಲೆಯ ವ್ಯಕ್ತಿತ್ವವನ್ನು ತೋರಿಸುತ್ತದೆಯಲ್ಲದೆ, ರಾವಣ ಅವಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾನೆ ಎಂಬುದನ್ನು ಸೂಚಿಸುತ್ತದೆ. (ರಾವಣ ಅನಲೆಯನ್ನು ತನ್ನ ಮಗಳೆಂದು ಭಾವಿಸಿದ್ದಾನೆ ಎಂಬುದಕ್ಕೆ ಮುಂದೆ ಸೂಚನೆಗಳಿವೆ.) ಚಂದ್ರನಖಿಯನ್ನು ಬದಲಾಯಿಸಿದಷ್ಟು ಸುಲಭವಲ್ಲ, ರಾವಣನನ್ನು ಬದಲಾಯಿಸುವುದು. ಸೀತೆಯ ದೃಢನಿಲುವುನ್ನು ಕದಲಿಸಲಾರದೆ, ಕೊನೆಗೆ ಆತನಾಡುವ
ನಿರಶನವ್ರತ ರೂಪದ ಆತ್ಮಹತ್ಯಯಿನ್ ಆಕೆ ಮಡಿಯುವೊಡೆ,
ಅದೆ ಚಿತೆಯನೇರುವೆನ್;
ಪೆಣದೆಡೆಯೆ ಪವಡಿಪೆನ್;
ಭಸ್ಮರೂಪದಿನ್ ಆದೊಡಂ ಕೂಡಿ
ಪೊಂದುವೆನ್ ಸಾಯುಜ್ಯಮಂ!
ಎಂಬ ಮಾತುಗಳು ಆತನ ಕಠಿಣ ವ್ಯಕ್ತಿತ್ವವನ್ನು ತೋರಿಸುತ್ತವೆ. ಅಷ್ಟಕ್ಕೂ ಬದಲಾವಣೆ ಹೊರಗಿನಿಂದ ಆಗುವಂತದ್ದಲ್ಲ; ಒಳಗಿನಿಂದ ಆಗಬೇಕಾದದ್ದು. ಅದು ಕವಿಗೂ ಗೊತ್ತು. ಆದ್ದರಿಂದಲೇ, ಅನಲೆ ಮೊದಲಾದ ಆತನ ಪರಿವಾರದ ಬಯಕೆ, ಪ್ರಯತ್ನ ಎಲ್ಲವೂ ತಪೋರೂಪದಲ್ಲಿಯೇ ಇರುತ್ತವೆ. ಆತನ ಪ್ರೀತಿಪಾತ್ರಳಾದ ಅನಲೆಯೂ ಸೇರಿದಂತೆ ಯಾರೂ ನೇರವಾಗಿ ಆತನೊಂದಿಗೆ ವಾದಕ್ಕೆ ಇಳಿಯುವುದಿಲ್ಲ; ಸ್ವಲ್ಪಮಟ್ಟಿಗೆ, ಮಂಡೋದರಿ ಮತ್ತು ವಿಭೀಷಣರನ್ನುಳಿದು.
ಬದಲಾವಣೆ ಒಳಗಿನಿಂದಲೇ ಆಗುವಂತದ್ದು ಎಂಬ ಮಾತಿಗೆ ಅನುಗುಣವಾಗಿ ರಾವಣ ಒಳಗೊಳಗೆ ದ್ರವಿಸಲಾರಂಬಿಸುತ್ತಾನೆ. ಸೀತೆಯ ದೃಢನಿಲುವು, ತನ್ನವರ ತಪೋರಕ್ಷೆ ಇವೆಲ್ಲವೂ ಸತ್ಕುಲವಂತನೇ ಆದ ಆತನನ್ನು ಅಲುಗಾಡಿಸಿಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಸಹೋದರ ವಿಭೀಷಣ ರಾಜಸಭೆಯಲ್ಲಿ ತನ್ನ ಇಚ್ಛೆಗೆ ವಿರುದ್ಧವಾದ ನಿಲುವನ್ನು ಪ್ರತಿಪಾದಿಸಿದ್ದು, ಆ ಮೂಲಕ ರಾವಣನ ಮನದ ಅಳುಕನ್ನು ಹೊರಹಾಕಿದ್ದು ಆತನನ್ನು ಚಿಂತೆಗೀಡುಮಾಡಿಬಿಟ್ಟಿದೆ. ಸಭೆಯಲ್ಲಿಯೇ ರಾವಣ ಅಸ್ವಸ್ಥನಾಗುತ್ತಾನೆ. ಆದರೆ ಅಣ್ಣನ ಮೇಲೆ ನಿಜವಾದ ಪ್ರೀತಿಯನ್ನೇ ಹೊಂದಿರುವ ವಿಭೀಷಣ, ಅಣ್ಣನ ಕ್ಷೇಮಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡುತ್ತಾನೆ. ತನ್ನ ಮಗಳು ಅನಲೆಯನ್ನು ಕರೆದು, ರಾವಣನ ಅಸ್ವಸ್ಥತೆಯನ್ನು ತಿಳಿಸಿ ಹೇಳಿ, ದೊಡ್ಡಮ್ಮನೊಂದಿಗೆ ಅಣ್ಣನ ಶುಶ್ರೂಷೆಯನ್ನು ಮಾಡುವಂತೆ ನೇಮಿಸುತ್ತಾನೆ. ಹೇಗೋ ಒಂದಿರುಳು ಕಳೆದ ವಿಭೀಷಣ, ಮರುದಿನ ಬೆಳಿಗ್ಗೆಯೇ ರಾವಣನನ್ನು ಕಾಣಲು ಬರುತ್ತಾನೆ. ರಾವಣನನ್ನು ಎತ್ತಿ ಆಡಿಸಿದ ವೃದ್ಧ ಅವಿಂದ್ಯ, ಸೂಚ್ಯವಾಗಿ ವಿಭೀಷಣನ್ನು ಕಂಡರೆ ಮತ್ತೆ ರಾವಣ ಉದ್ವೇಗಕ್ಕೆ ಒಳಗಾಗುತ್ತಾನೆ ಎಂದು, ಭೇಟಿ ಬೇಡವೆಂದರೂ ಕೇಳದೆ, ಬಾಗಿಲಿಗೆ ಬಂದಿದ್ದ ಮಗಳೊಂದಿಗೆ ರಾವಣ ಮಲಗಿದ್ದಲ್ಲಿಗೆ ಬರುತ್ತಾನೆ. ಇಲ್ಲಿ ಕವಿ ನೇರವಾಗಿ ಅನಲೆಯ ಬಗ್ಗೆ, ರಾವಣನಿಗಿದ್ದ ಪ್ರೀತಿಯನ್ನು "ಪೆಣ್ಮಕ್ಕಳಿಲ್ಲದ ದಶಗ್ರೀವನೆರ್ದೆಯ ಅಳ್ಕರೆಯ ಅರಗಿಳಿಯ ಹರಣಮಂ ಹೊರೆವ ಹಂಜರಮೆನಲ್ ಚೆಲ್ವುಕಣಿಯಾಗಿರ್ದ ಆತನ್ನ ಮಗಳ್ ಅನಲೆ" ಎಂದು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ.
’ಕಾಲಪುರುಷನಿಗೆ ಕಾಲೆ ಹೆಳವಾಯ್ತು’ ಎನ್ನುವಂತೆ ಕಾಲ ಕುಂಟುತ್ತದೆ. ಮೌನ ಮನೆ ಮಾಡುತ್ತದೆ. ತುಂಬಾ ಹೊತ್ತಿನ ನಂತರ, ರಾವಣ ಕಾಣುತ್ತಿದ್ದ ಕನಸೊಡೆದು ಎಚ್ಚರಗೊಳ್ಳುತ್ತಾನೆ. ಆದರೆ ಆತ ವಿಭೀಷಣನನ್ನು ಗುರುತಿಸುವುದೇ ಇಲ್ಲ! ಮುಂದಿನ ಭಾಗವಂತೂ ರಾವಣ-ಅನಲೆಯರ ಮನದಂತರಾಳವನ್ನು ಸಹೃದಯರ ಮುಂದೆ ತೆರೆದಿಡುವ ಕನ್ನಡಿಯಂತಾಗುತ್ತದೆ. ’ದಶಗ್ರೀವನೆರ್ದೆಯ ಅಳ್ಕರೆಯ ಅರಗಿಳಿಯ ಹರಣಮಂ ಹೊರೆವ ಹಂಜರಮೆನಲ್’ ಎನ್ನುವಲ್ಲಿ ಅನಲೆ ರಾವಣನ ಪ್ರಾಣಪಕ್ಷಿಯನ್ನು ಕಾಪಾಡುವ ಪಂಜರ ಮಾತ್ರವಲ್ಲ; ಆತನ ಉದ್ಧಾರದ ಸಂಕಲ್ಪರೂಪಿಯೂ ಹೌದು. ಏಕೆಂದರೆ ಆಕೆ, ಆತನ ಪ್ರಾಣವನ್ನು ಉಳಿಸಿಕೊಳ್ಳಲಾಗುವುದಿಲ್ಲ; ಆದರೆ ಆತನ ಆತ್ಮೋದ್ಧಾರಕ್ಕೆ ಬೆಳಕಾಗಬಲ್ಲಳು. ಈ ಸಂದರ್ಭ ಒಂದು ರೀತಿಯಲ್ಲಿ, ರಾವಣನ ಮನಸ್ಸಿನಲ್ಲಿ, ರಾವಣತ್ವ ಹಿಂದೆ ಸರಿದು, ರಾಮತ್ವ ಊರ್ಧ್ವಮುಖಿಯಾಗಿ ಹೊಮ್ಮುತ್ತಿರುವುದರ ಸಂಕೇತ! ಅನಲೆಯನ್ನು ಗುರುತಿಸಿದ ಆತನ ಮುಖದಲ್ಲಿ ಕಿರುನಗೆ ಮೂಡುತ್ತದೆ. ಕನಸಿನ ಪರಿಣಾಮದಿಂದ ಮುಖದ ಮೇಲೆ ಮೂಡಿದ್ದ ನಾಚಿಕೆಯನ್ನು ಹಿಂದೆ ಸರಿಸಿ, ಮೃದುಸ್ವರದಿಂದ ಅನಲಾ! ಎಂದು ಕರೆಯುತ್ತಾನೆ. ಮುಂದಕ್ಕೆ ಬೀಳುತ್ತಿದ್ದ ಜಡೆಯನ್ನು ಹಿಂದಕ್ಕೆ ತಳ್ಳಿದ ಅನಲೆ ತನ್ನ ದೊಡ್ಡಯ್ಯನ ಮೊಗದೆಡೆಗೆ ಬಾಗಿ, ಆತನ ದನಿಗೆ ಕಿವಿಯಾಗುತ್ತಾಳೆ.
ರಾವಣ:
ಅನಲಾ!
ಇರ್ಪೆಯೇನ್ ಇಲ್ಲಿ?
ಅನಲೆ:
ದೊಡ್ಡಯ್ಯ?
ರಾವಣ:
ಏನಿಲ್ಲ!
ನೀನ್ ಎನ್ನನ್ ಅಗಲಿದೋಲೆ ಎನಗೊಂದು ಕನಸಾದುದು ಅಕ್ಕ!
(ನಗುತ್ತಾನೆ; ಆದರೆ ’ದುಃಖದಾನಂದಕೆ ಉಕ್ಕಿದುವೆನಲ್, ತೆಕ್ಕನೊಳ್ಕಿದವು ಅಶ್ರುತೀರ್ಥಮಂ’)
ಅನಲೆ:
ನಿದ್ದೆಗೆಯ್, ದೊಡ್ಡಯ್ಯ,
ನಾನ್ ಎಲ್ಲಿಗೂ ತೆರಳ್ದೆನ್,
ಇಲ್ಲಿ ಈ ಎಡೆಯೆ ಇರ್ದಪೆನ್.
ರಾವಣ:
ದಿಟವೊರೆದೆ, ಅಕ್ಕ,
ಆರ್ ತೊರೆದೊಡಂ ನೀನೆನ್ನನುಳಿವಳಲ್ತು!
(ಇಲ್ಲಿ ’ಆರ್’ ಎಂದರೆ ವಿಭೀಷಣ ಎಂಬುದು ಸ್ಪಷ್ಟ. ಅದು ಅರ್ಥವಾದುದರಿಂದಲೇ ಅಪ್ಪನ ಮುಖವನ್ನು ಅನಲೆ ನೋಡುತ್ತಾಳೆ. ವಿಭೀಷಣ ಕುಳಿತಲ್ಲೆ ತನ್ನೊಳಗೆ ತಾನೇ ಬೇಯುತ್ತಾನೆ.)
ರಾವಣ:
(ಮತ್ತೆ ತೆಕ್ಕನೆ ತೆರೆಯುತೆವೆಗಳಂ, ಬಿಕ್ಕಳಿಸಿ ಬೆಸಗೊಂಡನ್ ಅಕ್ಕರೆ ಸುಳಿಗೆ ಸಿಕ್ಕ ರಕ್ಕಸಂ)
ಅಕ್ಕ,
ನಿನ್ನ ಅಯ್ಯನ್ ಎಮ್ಮಂ ಬಿಡಲ್?...
ಅನಲೆ:
ಬಿಡುವನೇನ್ ನಿನ್ನನ್?
ಒಡಹುಟ್ಟಿದವನ್ ಎನ್ನ ಪಡೆದಯ್ಯನ್?
ರಾವಣ:
ನೀನೆ ನೋಡುವೆ, ಅಕ್ಕ,
ತೊರೆದಪನ್!
ಅನಲೆ:
ದೊಡ್ಡಯ್ಯ ತೆಗೆ ಈ ತೊದಲ್ ನುಡಿಗಳನ್!
ಬಿಡುವನ್ ಎಂದೇಕೆ ಕೆಮ್ಮನೆಯೆ ಶಂಕಿಪ್ಪೆ?
ಕಾಣ್, ನಟ್ಟು ಕುಳ್ತಿಹನ್, ಈ ಬಳಿಯೆ, ನಿನ್ನೆಡೆಯೆ,
ಇಂದು ಪೊಳ್ತರೆಯಿಂದೆ!
ಅಲ್ಲಿಯವರೆಗೂ ರಾವಣ ವಿಭೀಷಣನನ್ನು ಲಕ್ಷಿಸಿಯೇ ಇಲ್ಲ; ಆತ ಕಣ್ಣು ಬಿಟ್ಟಿದ್ದರೂ ಹೊರಗಿನ ಏನನ್ನೂ ಕಾಣುತ್ತಿಲ್ಲ. ಆತನಿಗೆ ಕಾಣುತ್ತಿರುವ ಅನಲೆ ಆತನ ಚೈತನ್ಯವೇ ಆಗಿದ್ದಾಳೆ. ಅನಲೆಯ ಉತ್ತರದಿಂದ ಆತನ ಹೊರಗಣ್ಣು ಕಾಣಲಾರಂಬಿಸುತ್ತದೆ. ಆತನ ದೃಷ್ಟಿ ಅನಲೆ ತೋರಿದ ಕೈಯ ಜೊತೆಯಲ್ಲೇ ವಿಭೀಷಣನೆಡೆಗೆ ತಿರುಗುತ್ತದೆ. ಆಗ ಆತನ ಮುಖದಲ್ಲಾದ ಬದಲಾವಣೆಯನ್ನು ಗಮನಿಸಿದ ಅನಲೆ-ಮಂಡೋದರಿಯರು ಭಯಭೀತರಾಗುತ್ತಾರೆ! ಅಲ್ಲಿವಯರೆಗೂ ಆತನನ್ನು ಆವರಿಸಿದ್ದ ’ಅನಲೆ’ ಎಂಬ ಮೋಹದ ತೆರೆ ಸರಿದು ಆತ ನಿದ್ರೆಯಿಂದ ಸಂಪೂರ್ಣ ಎಚ್ಚರಾಗುತ್ತಾನೆ. "ಬಿಟ್ಟರಾರೆನ್ನ ಬಳಿಗೆ ಈ ಕುಲದ್ರೋಹಿಯಂ, ಶತ್ರುಮಿತ್ರನಂ, ಗೃಹವೈರಿಯಂ, ಗರುಂಕೆ ಮುಸುಂಕಿ ಕಣ್ಗೊಳಿಪ ವಂಚನೆಯ ಶಿಥಿಲ ಮಲಕೂಪಮಂ?" ಎಂದು ವಿಭೀಷಣನ್ನು ನಿಂದಿಸುತ್ತಾನೆ. ಆತನನ್ನು ಒಳಗೆ ಬಿಟ್ಟ ’ಅವಿಂಧ್ಯನನ್ನು ಕರೆ’ ಎಂದು ಅನಲೆಗೆ ಆಜ್ಞಾಪಿಸುತ್ತಾನೆ! (ಪಾಪ, ಅವಿಂಧ್ಯ ವಿಭೀಷಣನನ್ನು ತಡೆಯುವ ವಿಫಲ ಯತ್ನವನ್ನು ನಡೆಸಿರುತ್ತಾನೆ) "ನೀಮೆಲ್ಲರು ಎನ್ನ ಕೊಲೆಗೆ ಒಳಸಂಚನ್ನು ಒಡ್ಡಿ ಈ ರಾಜ ವಿದ್ರೋಹಿಯಂ ರಾಜನ ಅರಮನೆಗಿಂತು ಪುಗಿಸಿರ್ಪಿರಲ್ತೆ!" ಎಂದು ಭೀಷಣನಾಗಿ ವಿಭೀಷಣನಿಗೆ ನುಡಿಯುತ್ತಾನೆ! ರಾವಣನನ್ನು ಬಾಲ್ಯದಲ್ಲಿ ಎತ್ತಿ ಆಡಿಸಿದ ಅವಿಂದ್ಯನನ್ನು ಕಂಡರೆ ರಾವಣನಿಗೆ ಏನೋ ವಾತ್ಸಲ್ಯ. ಆತ ಸಮಜಾಯಿಷಿ ನೀಡುತ್ತಾನೆ. ಅ ಸಮಾಜಾಯಿಷಿಯ, ಕೊನೆಯಲ್ಲಿ "ಮೇಣ್ ಅನಲೆಯ ಈ ಬೊಪ್ಪನನ್" ಎಂದು ಒತ್ತಿ ಹೇಳುತ್ತಾನೆ. ಇಲ್ಲಿ ’ಅನಲೆ’ ಎಂಬ ಹೆಸರು ರಾವಣನನ್ನು ಕರಗಿಸಿಬಿಡುತ್ತದೆ. ಅವಿಂಧ್ಯನ ಬಾಯಿಂದ ’ಅನಲೆ’ಯ ಹೆಸರು ಕೇಳಿದ ರಾವಣ ಒಮ್ಮೆ ಮಂಡೋದರಿಯನ್ನು ನೋಡಿ ಅನಲೆಯತ್ತ ತಿರುಗುತ್ತಾನೆ. ಆಕೆಯ ಕಣ್ಣಲ್ಲಿ ನೀರು! ರಾವಣನಿಗೆ ಹೇಗಾಗಿರಬೇಡ.
.......ಎರ್ದೆಯ ಮರುಕಂ ಉಕ್ಕಲ್ಕೆ.
ಬಿರುಕೊಡೆದು ಸೀಳಾಗಲಿಪ್ಪ ತನ್ನಾತ್ಮದ ಇಕ್ಕುಳದಲ್ಲಿ ಸಿಲ್ಕಿ
ಲಿವಿಲಿವಿಯೊದ್ದುಕೊಳುತಿರ್ದ ಕುದಿಬಗೆಯ ರಾವಣಂ ತೆಕ್ಕನೆದ್ದನ್;
ಪಿಡಿದು ಬರಸೆಳೆದು ತಕ್ಕಯ್ಸಿ, ಸಂತೈಸಿ, ಮುದ್ದಾಡಿದನ್
ತನ್ನ ಆ ಪ್ರೀತಿಪುತ್ಥಳಿಯನ್ ಅನಲೆಯಂ:
ಅಳದಿರು ಅಳದಿರೌ, ಅಕ್ಕ!
ಸಾವೊಪ್ಪಡಂ ನನಗೆ,
ನಿನಗೆ ಎಸಗೆನ್ ಆಂ ನೋವಪ್ಪುದಂ!
ಎನ್ನತ್ತ ಆಕೆಯನ್ನು ಎಳೆದು ತನ್ನೊತ್ತಿನಲ್ಲಿ ಕೂರಿಸಿಕೊಳ್ಳುತ್ತಾನೆ; ’ಇನ್ನೆಂದೂ ಬಿಡೆನು’ ಎನ್ನುವಂತೆ. ತನ್ನ ಸೆಜ್ಜೆಗೆ ಸೆಳೆದು ಕುಳ್ಳಿರಿಸಿ, ತಾನವಳ ಮೆಯ್ಯೊತ್ತಿನೊಳೆ ಕುಳಿತು ಎನ್ನುವಲ್ಲಿ ಆತನ ಅನಲೆಯ ಬಗೆಗಿನ ಪ್ರೀತಿ ಉತ್ಕಟವಾಗಿ ಅಭಿವ್ಯಕ್ತವಾಗಿದೆ. ಈ ಕ್ರಿಯೆಯಲ್ಲಿ ರಾವಣ ಮಾತ್ರವಲ್ಲ, ಅವನೊಂದಿಗೆ ಕವಿಯೂ, ಸಹೃದಯರೂ ಒಂದಾಗಿಬಿಡುತ್ತಾರೆ. ಆತನ ಆ ಕ್ರಿಯೆಯೇ, ಆತನಿಗೆ ಸಂಯಮವನ್ನು ಕಲ್ಪಿಸಿದೆ. ಅದಕ್ಕೆ, ಮೌನವಾಗಿ ಕುಳಿತು ಎಲ್ಲವನ್ನೂ ನೋಡುತ್ತಿದ್ದ ವಿಭೀಷಣನನ್ನು ಕುರಿತು ಶಾಂತವಾಗಿ, ಆದರೆ ನಿರ್ಧಾರಯುತವಾಗಿ ಆಜ್ಞೆಯ ರೂಪದಲ್ಲಿ ಹೀಗೆ ಘೋಷಿಸುತ್ತಾನೆ:
ಅನಲೆ ನಿನ್ನ ಮಗಳಲ್ತು,
ಎನ್ನವಳ್!
ಇವಳೆನ್ನ ಕಾಪಿಡುವ ದೇವಿ!
ಸೀತೆಯನ್ನು ಹೊತ್ತು ತಂದಾಗಲಿಂದ ರಾವಣನ ನಡೆನುಡಿಗಳಲ್ಲಿ ವ್ಯಕ್ತವಾಗುತ್ತಿದ್ದ ಅಳುಕು ಇಲ್ಲಿ ಮಾಯವಾಗಿದೆ. ’ಎನ್ನವಳ್’ ಎನ್ನುವಲ್ಲಿ ವ್ಯಕ್ತವಾಗುವ ಗರ್ವ, ಹೆಮ್ಮೆ ಓದುಗನ ಮನಸ್ಸನ್ನು ಹಿಡಿದು ನಿಲ್ಲಿಸಿಬಿಡುತ್ತದೆ. "ಆ ಪುಣ್ಯಮೆನಗಕ್ಕೆ" ಎಂದು ವಿಭೀಷಣ ಮೊದಲ ಮಾತನಾಡಿದಾಗ ಅಲ್ಲಿ 'ತಿಳಿನಗೆಯ ಸುಳಿ ಸುಳಿದುದಲ್ಲಿರ್ದರೆಲ್ಲರ ಮೊಗಂಗಳೊಳ್: ನಗೆವೆಳಗಿಗೆ ಉದ್ಭವಿಸಿದತ್ತಲ್ಲಿ ಮೈತ್ರಿಯ ನೆಳಲ್.' ಅನಲೆ ಆತನ ಆತ್ಮೋನ್ನತಿಯ ಮನುಷ್ಯರೂಪ ಮಾತ್ರ ಆಗಿದ್ದಾಳೆ. ಆತನ ಮನಸ್ಸು ಅದನ್ನು ಗುರುತಿಸಿದೆ; ’ಎನ್ನವಳ್’ ಎಂದು ಅಪ್ಪಿಕೊಂಡಿದೆ. ಇಲ್ಲಿಂದಲೇ ಆತನ ರಾವಣತ್ವ ಅಧೋಮುಖವಾಗುತ್ತದೆ. ಹೌದು, ಇಲ್ಲಿಂದ ಮುಂದಕ್ಕೆ ರಾವಣನ ಆತ್ಮ, -ಸಾವು ಎದುರಿಗಿದ್ದರೂ, ನಿಶ್ಚಯವಾಗಿದ್ದರೂ- ಮತ್ತೆಂದೂ ಅಧೋಮುಖಿಯಾಗುವುದಿಲ್ಲ! ಅದಕ್ಕೆ ಕಾರಣಳಾದ ಅನಲೆಯನ್ನು ಕುರಿತು "ಪುಣ್ಯಪ್ರಚೋದಿಯೆನಗೆ ಇದೊಂದೆ ಸೌಂದರ್ಯಂ ಅನಲೆಯ ಈ ಮುದ್ದು ಚೆಲ್ವು!" ಎಂದು ಹೆಮ್ಮೆಯಿಂದ ಹೇಳುತ್ತಾನೆ. ಆತನ ಮಾತುಗಳಿಗೆ "ತಾಯ್ ಸರಮೆ ಗಂಧರ್ವಕನ್ಯೆ, ತಂದೆಯುಂ ಅಂತೆ ಸತ್ತ್ವನಿಧಿ! ಕುವರಿಯಿಂತಿರ್ಪುದೇಂ ಸೋಜಿಗಮೆ?" ಎಂದು ಅವಿಂಧ್ಯ ಅಡಿಗೆರೆ ಎಳೆಯುತ್ತಾನೆ.
ಮುಂದೆ ರಾವಣ ವಿಭೀಷಣನ ನಡುವೆ ಮಾತು ಮುಂದುವರೆಯುತ್ತದೆ. ವಿಭೀಷಣ, ನೆನ್ನೆ ರಾಜಸಭೆಯಲ್ಲಿ ತಾನಾಡಿದ ಮಾತಿಗೆ ಕ್ಷಮೆ ಕೇಳುತ್ತಾನೆ. "ನಿನ್ನಭ್ಯುದಯಂ ಅಲ್ಲದೆ ಎನಗೆ ಎನ್ನ ನಾಲಗೆಗೆ ಬೇರಿಲ್ಲ ಗುರಿ" ಎನ್ನುತ್ತಾನೆ. "ಸಾವಧಾನದಿ ಮಥಿಸಿ ನನ್ನೆಂದುದಂ, ನಿರ್ಣಯಿಸು ಮುಂಬಟ್ಟೆಯಂ, ಬಾಳ್ವ ಬಟ್ಟೆಯಂ" ಎಂದು ರಾವಣನ ಅಂಗಳಕ್ಕೆ ಚೆಂಡನ್ನು ತಳ್ಳಿ ಮೌನವಾಗಿಬಿಡುತ್ತಾನೆ. ರಾವಣನ ನಿರ್ಧಾರ ಅಚಲವಾಗಿಬಿಟ್ಟಿದೆ. ಆತ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡಲಾರ. ಇತ್ತ, ಆತನ ತಮ್ಮ, ವಿಭೀಷಣನದೂ ಅದೇ ಸ್ಥಿತಿ.
ರಾಜಶಾಸನವಿರ್ಪೊಡಂ,
ಸೋದರನ ಕೊಲೆಗೆ ಕಾರಣಮಪ್ಪ ದುರ್ಯಶಕೆ ಪೇಸುವೆನ್....
ಮನವಿರಲ್ ನೆರವಾಗು.
ಇರದಿರಲ್ ಲಂಕೆಯನುಳಿದು ಪೋಗು.
ಅನ್ಯ ವಾದಕ್ಕಿಲ್ಲಿ ಕೇಳ್ ಇನಿತುಂ ಅನುವಿಲ್ಲ....
ನನ್ನ ಮಾರ್ಗಂ ನನಗೆ; ನಿನ್ನದು ನಿನಗೆ
ಎಂದು ರಾವಣ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತಾನೆ.
ವಿಭೀಷಣ:
ಕಟ್ಟಕಡೆ ನಿರ್ಣಯವೊ?
ರಾವಣ:
ಕೊಟ್ಟ ಕೊನೆ ನಿರ್ಣಯಂ!
ವಿಭೀಷಣ:
ನಿನಗೊಳ್ಳಿತಕ್ಕೆ! ಸದ್ಬುದ್ಧಿ ಬರ್ಕೆ!
ತಂದೆಯ ತಪದ ಮೈಮೆಯಿಂದಪ್ಪೊಡಂ
ನಿನ್ನಾತ್ಮಕುದ್ಧಾರಮಿರ್ಕೆ!
ಪೋಪೆನಿಲ್ಲಿಂದೆ, ಬೀಳ್ಕೊಡಿಮ್!
ರಾವಣ:
ಎತ್ತಣ್ಗೆ?
ವಿಭೀಷಣ:
ಅನಿಶ್ಚಿತಂ
ರಾವಣ:
ಕಡಲಾಚೆ ದಡದೆಡೆಗೊ? (ರಾವಣ ಈ ಮಾತಿನಲ್ಲಿ ವ್ಯಂಗ್ಯವಿದೆ; ಮುಂಗಾಣ್ಕೆಯಿದೆ)
ವಿಭೀಷಣ:
ಏನರ್ಥಮದಕೆ?
ರಾವಣ:
ಅರಿದಿದೆ ನಿನಗೆ;
ನೀಂ ಪೇಳಲಕ್ಕುಮಯ್!
ವಿಭೀಷಣ:
ನೀನಿನಿತು ಕೀಳ್ ಮನನ್ ಎಂದರಿದೆನಿಲ್ಲ ಇನ್ನೆಗಂ!
ರಾವಣ:
ಪರಸ್ಪರಮಲ್ತೆ ಪೇಳ್ ಆ ಅರಿವು!
ವಿಭೀಷಣ:
ನಮಸ್ಕಾರ
ಈ ಕ್ಷಣ, ಮೇಲಿನ ನಾಟಕದ ಕೊನೆಯ ಕ್ಷಣ, ನಮಸ್ಕರಿಸಿ ಮೇಲೆದ್ದ ವಿಭೀಷಣನ ಜೊತೆಯಲ್ಲಿ ಅನಲೆಯೂ ಎದ್ದುಬಿಡುತ್ತಾಳೆ! ಅವಳು ಎದ್ದುದನ್ನು ಕಂಡ ರಾವಣ, ವಾದದಲ್ಲಿ ಮುಳುಗಿಹೋಗಿದ್ದ ರಾಜೇಂದ್ರ, ದಾನವೇಂದ್ರ ರಾವಣ ತೆಕ್ಕನೆ ಎಚ್ಚೆತ್ತು ’ತಂದೆ’ ರಾವಣನಾಗುತ್ತಾನೆ!
ಆಜ್ಞೆಯಿಂ ಸಾಧ್ಯಮಪ್ಪೊಡಂ ಇದನ್ ಬೇಡುವೆನ್.
ಅನಲೆಯಂ ಕೊಂಡೊಯ್ದು,
ಸುಕುಮಾರಿಯಂ ಕಠಿನಕೊಡ್ಡದಿರ್
ತಮ್ಮ ವಿಭೀಷಣನನ್ನೇ ಬೇಡುತ್ತಿದ್ದಾನೆ ರಾವಣ. ಆಗ ಅನಲೆ ಮಾತನಾಡಲೇಬೇಕಾದ ಸಂದರ್ಭ ಬರುತ್ತದೆ. ಏಕೆಂದರೆ ರಾವಣ ವಿಭೀಷಣನ ಶತ್ರುವಲ್ಲ, ಅಣ್ಣ. ಸೀತಾಪಹರಣದ ಕಳಂಕವಿಲ್ಲದಿದ್ದಲ್ಲಿ ವಿಭೀಷಣ ತನ್ನ ಅಣ್ಣನ ವಿಷಯದಲ್ಲಿ ಕಠಿಣನಾಗುವ ಸಂದರ್ಭ ಬಂದಿರಲೇ ಇಲ್ಲ. ಅದಕ್ಕೆ, ಆತನಿಗೆ ರಾವಣನ ಈ ಬೇಡಿಕೆ ವಿಚಿತ್ರವೆನಿಸುವುದಿಲ್ಲ. ಅದರಿಂದಲೇ ಆತ ಮೌನವಹಿಸುತ್ತಾನೆ; ಮೌನವೇ ಸಮ್ಮತಿ ಎಂಬಂತೆ! ಆಗ,
ಅನಲೆ:
ಮನ್ನಿಸೆನ್ನನ್;
ತಂದೆಯೊಡವೋಗಿ, ಧರ್ಮಮನ್ ಸೇವಿಪೆನ್
ರಾವಣ:
ಇಲ್ಲಿರ್ದೆ ಧರ್ಮಕೆ ಸೇವೆಗೆಯ್!
ಅನಲೆ:
ಧರ್ಮಮಂ ಪೊರಗಟ್ಟಿ ಸೇವಿಪ್ಪುದೆಂತು!
ರಾವಣ: (ಅನಲೆಯ ಕೈಹಿಡಿದು)
ನನ್ನನ್ನರಂ ನಿನ್ನನ್ನರುಳಿಯೆ, ಧರ್ಮಂ ಉದ್ಧಾರಮಾದಪುದೆ?
ನಿನ್ನಯ್ಯಗಿಂ ಮಿಗಿಲ್ ನೀನ್ ವೇಳ್ಕುಮೆನಗಲ್ತೆ?
ಅನಲೆ: (ರಾವಣನ ತರ್ಕದ ಮುಂದೆ, ಅನಲೆ ಸೋಲುತ್ತಾಳೆ.)
ಬೊಪ್ಪನಪ್ಪಣೆಯೆನಗೆ ಬಟ್ಟೆ
(ಎಂದು ತಾನು ಎಲ್ಲಿರಬೇಕೆಂಬುದನ್ನು ವಿಭೀಷಣನ ತೀರ್ಮಾನಕ್ಕೆ ಬಿಡುತ್ತಾಳೆ)
ವಿಭೀಷಣ:
ಪಿರಿಯಯ್ಯನೆಂಬುದೆ ದಿಟಂ,
ಮಗಳೆ ನೀನಿರಲ್ ವೇಳ್ಕುಂ ಅದೆ ನೀತಿ.
ಅನಲೆ:
ತೊರೆವೆನೆ ನಿನ್ನ ಸಾನ್ನಿಧ್ಯಮಂ?
ರಾವಣ: (ದೈನ್ಯದಿಂದ)
ನಿನಗೆ ತಡೆಯುಂಟೆ, ಪೇಳಕ್ಕ?
ನಿನ್ನಯ್ಯನ್ ಎಲ್ಲಿರ್ದೊಡಲ್ಲಿಗೆ, ಏಗಳಾದೊಡಂ,
ಪೋಗಿ ಬರಲನುಮತಿಯನ್
ಅಂತೆಯೇ ವಿಮಾನಮನ್ ಪುಷ್ಪಕವನ್ ಈವೆನ್!
ಎಂದು ಅನಲೆಯ ಬಳಿ ನಿಲ್ಲುತ್ತಾನೆ. ರಾವಣನ ಆ ದೈನ್ಯದಲ್ಲಿ, ಆತನ ಉದ್ಧಾರಕರವಾದ ಭಾವಬೀಜವನ್ನು ವಿಭೀಷಣ ಗುರುತಿಸಿ, ಹರ್ಷಿಸಿ ಅವರನ್ನು ಬೀಳ್ಕೊಳ್ಳುತ್ತಾನೆ. ಇಲ್ಲಿ ಅನಲೆಯ ಒಲವು ನಿಲುವುಗಳು ಸುಂದರವಾಗಿ ಅಭಿವ್ಯಕ್ತಿಗೊಂಡಿವೆ. ಆಕೆ ವಿಭೀಷಣನಿಗೆ ಮಾತ್ರ ಮಗಳಲ್ಲ, ಇಡೀ ಕುಟುಂಬದ ಮಗಳು. ಆದ್ದರಿಂದ ಕುಟುಂಬದ ಯಜಮಾನನಾದ ರಾವಣ ಅಧಿಕಾರದಿಂದ ಮಾತ್ರವಲ್ಲ, ಅನಲೆಯ ಮೇಲಿಟ್ಟಿದ್ದ ತನ್ನ ಪರಿಶುದ್ಧ ಪ್ರೀತಿಯಿಂದಲೂ ಗೆಲ್ಲುತ್ತಾನೆ. ಆತನ ಮನಃಪರಿವರ್ತನೆಯಲ್ಲಿ ಅನಲೆಯ ಪಾತ್ರ ದೊಡ್ಡದು. ಕವಿ ಕುವೆಂಪು ರಾಮಾಯಣವನ್ನು ರಾಮಾಯಣದರ್ಶನವನ್ನಾಗಿಸಿದ್ದೇ ಊರ್ಧ್ವಾಭಿಲಾಷೆಯಿಂದ (ಪಾಪಿಗುದ್ಧಾರಮಿಹುದೌ ಸೃಷ್ಠಿಯ ಮಹದ್ ವ್ಯೂಹರಚನೆಯೊಳ್). ಅದಕ್ಕೆ ಕವಿಮಾನಸಪುತ್ರಿಯಾದ ಅನಲೆ ನೆರವಾಗದಿರುತ್ತಾಳೆಯೆ!?
[ನಾಳೆ : ನಮಗೆ ಅನಲೆಯೆ ದಿಟಂ!]
Comments
ಉ: ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 3
ಕುವೆಂಪು ಅವರ ‘ರಾಮಾಯಣ ದರ್ಶನಂ’ ಕಾವ್ಯದ ಭಾಗಕ್ಕೆ ಒಂದು ಅತ್ಯುತ್ತಮ ಭಾಷ್ಯ ಡಾ ಸತ್ಯನಾರಾಯನರವರ ಈ ಬರೆಹಗಳು. ಧನ್ಯವಾದಗಳು.