ನಿರೀಕ್ಷೆ (ಗಜಲು) - ಲಕ್ಷ್ಮೀಕಾಂತ ಇಟ್ನಾಳ

ನಿರೀಕ್ಷೆ (ಗಜಲು) - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ನಿರೀಕ್ಷೆ     (ಗಜಲು)

ಅವಳೂರಿಗೆ ಹೋದಾಗ, ಕಾಲುಗಳು ಜಾರುತ್ತವೆ, ಅವಳ ಮನೆಯತ್ತ ಇಂದಿಗೂ

ದೂರದಿಂದಲೇ ಗುರುತು ಹಿಡಿದು ತೊನೆದು ತೂಗುವುದು ಆ ಅರಳಿ ಇಂದಿಗೂ

ಕಂಬನಿಯಾಗುತಿದ್ದೆ ಬುಡದಲಿ ನಿಂತು, ನನಗಾಗಿ ಅರಳಿ ಹನಿಯಾಗುವುದು ಇಂದಿಗೂ

ಎಳೆ ಬೆಳದಿಂಗಳು, ತಬ್ಬಿ ತಂಪೆರೆದು ನಮಗೆ, ಮನಹಗುರಾಗಿಸಿದ್ದು, ನೆನಪಿದೆ ಇಂದಿಗೂ

 

ಮೌನಗಳು, ನೋಟಗಳು, ಹೇಗಾದರು ಸರಿಯೆ, ಮಾತಾಗಿಹವು ಇಂದಿಗೂ

ಕೆನ್ನೆ ರಂಗೇರಿದ, ಒಲವು ಒಯ್ಯಾರದ ನೆನಪಲಿ, ತುಳುಕಾಡುತಿದೆ ಅರಳಿ ಇಂದಿಗೂ

ಬಿಸಿಲಲ್ಲಿ, ನಿಶೆಯಲ್ಲಿ, ಬದುಕಲ್ಲಿ ಬುದ್ಧನಿದು, ಅರಳಿ ಗೆಳೆಯನಾಗಿದೆ ಇಂದಿಗೂ

ಮರಳಿಸುವುದು ಅಂದಿನ ಕಂಬನಿಯ ಹನಿಗಳನು, ನನ್ನ ಭೇಟಿಯಲಿ, ಇಂದಿಗೂ

 

ಮುಡಿದಿಹೆನು ಮುಂಗುರುಳ, ನಗು, ನಡೆ, ಜಡೆಗಳ ಚಿತ್ರ, ಕಣ್ಣಲಿ ಇಂದಿಗೂ

ಸೆರಗನು ಸೋಕಿದ ಪರಿಮಳದ ನಿನಾದದ, ಕಿವಿಯೋಲೆಗಳ ಧರಿಸಿರುವೆ ಇಂದಿಗೂ

ನವಿಲುಗರಿಯಲಿ, ಮರೆಮಾಚಿದವಳ ಕಳ್ಳ ನೋಟಗಳು, ತಲೆತಿನ್ನುತಿವೆ ಇಂದಿಗೂ

ತುಂಟತನದಲಿ ಮೈಯಾರೆ ಸುಳಿದಾಡಿದ ಕಣ್ಣ ಪುಳಕಗಳು ಎದೆಯಲಿವೆ ಇಂದಿಗೂ

 

ಮಾರು ದೂರದಲವಳು ಸಾಗುವಲಿ, ಕಾವೇರಿ ಮೈಬಿಸಿ, ಹಾಗೆಯೇ ಇದೆ ಇಂದಿಗೂ

ಕಾದ ಕ್ಷಣ ಕ್ಷಣ ನೋವು, ಸಿಹಿಯಾದ ಕಲೆಯಾಗಿ, ನನ್ನೊಡನೆ ಇಹುದು ಇಂದಿಗೂ

ವಯಸನ್ನು ಅರೆದು, ಕ್ಷಣಗಳಲಿ ಕಡಿದು, ದಿನ ರಾತ್ರಿ ಇಹುದು ನಿರೀಕ್ಷೆ ಇಂದಿಗೂ

ಭೂಮಿ ಗುಂಡು ಎಂಬ ಮೇಷ್ಟ್ರ ಮಾತನು ನಂಬಿ, ಕಾದಿರುವೆ ಅವಳಿಗೆ ಇಂದಿಗೂ

Rating
No votes yet

Comments

Submitted by nageshamysore Tue, 05/13/2014 - 06:53

ಇಟ್ನಾಳರಿಗೆ ನಮಸ್ಕಾರ. ನಿರೀಕ್ಷೆ ಸೊಗಸಾಗಿದೆ - ಗಜಲ್ ಬಗ್ಗೆ ಹೆಚ್ಚು ಗೊತ್ತಿರದ ನನಗೆ ನಿಮ್ಮ ಗಜಲ್ ನೋಡಿಯೆ ಅದರ ಕೆಲವು ಪ್ರಮುಖ ಲಕ್ಷಣಗಳ ಪರಿಚಯವಾಯಿತು. ಯಾವುದೆ ನಿರೀಕ್ಷೆಯಾದರೂ ಅಷ್ಟೆ - ಆಶಾವಾದದ ಬೆನ್ನೇರಿದರೆ ಭೂಮಿಯನ್ನು ಗುಂಡಾಗಿಸುತ್ತದೆ; ನಿರಾಶಾವಾದ ಚಪ್ಪಟೆಯಾಗಿಸುತ್ತದೆ. ಆದರೆ ಪ್ರೀತಿ-ಪ್ರೇಮದ ತುಣುಕು-ಪಲುಕುಗಳ ನಿರೀಕ್ಷೆಯಲ್ಲಿ ಭೂಮಿ ಸದಾ ಗುಂಡೆ :-)

Submitted by H A Patil Wed, 05/14/2014 - 19:37

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
'ನಿರೀಕ್ಷೆ' ನಮ್ಮ ಜೀವನದ ಎಲ್ಲ ಮಜಲುಗಳನ್ನು ಸಮರ್ಥವಾಗಿ ನಿರೂಪಿಸುವ ಗಜಲ್ ಮನಕ್ಕೆ ಮುದ ನೀಡಿತು..ಸುಂದರ ಗಜಲ್ ನೀಡಿದ್ದೀರಿ ಧನ್ಯವಾದಗಳು.

Submitted by lpitnal Thu, 05/15/2014 - 23:30

In reply to by H A Patil

ಹಿರಿಯರಾದ ಹೆಚ್ ಏ ಪಾಟೀಲ ಸರ್ ಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಆತ್ಮೀಯ ಪ್ರೀತಿಯ ನುಡಿಗಳಿಗೆ ಧನ್ಯ ಸರ್.