ಕಥೆ: ಪರಿಭ್ರಮಣ..20

ಕಥೆ: ಪರಿಭ್ರಮಣ..20

(ಪರಿಭ್ರಮಣ..19ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಕುನ್. ಸೋವಿಯ ಮಾತಿನಲ್ಲಿದ್ದ ಆತಂಕಕ್ಕೆ ಕಾರಣವಿರದೆ ಇರಲಿಲ್ಲ. ಸರಾಸರಿ ದಿನಕ್ಕೆ ನೂರರಿಂದ ನೂರೈವತ್ತು ಇನ್ವಾಯ್ಸ್ ಪ್ರಿಂಟ್ ಮಾಡುವ ವಾತಾವರಣದಲ್ಲಿ ಕನಿಷ್ಟ ಒಂದು ಇನ್ವಾಯ್ಸಿಗೆ ಹದಿನೈದೇ ನಿಮಿಷ ಹಿಡಿದರೂ ನೂರಕ್ಕೆ ೧೫೦೦ ನಿಮಿಷ; ಅಂದರೆ ದೈನಂದಿನ ಸರಾಸರಿ ೨೫ ಗಂಟೆ ! ಈಗ ಅರ್ಧ ಮುಕ್ಕಾಲು ಗಂಟೆಯಲ್ಲಿ ಎಲ್ಲಾ ಪ್ರಿಂಟಿಂಗ್ ಮುಗಿಸಿ ನಂತರದ ಸಮಯವನ್ನು ವೇರ್ಹೌಸಿನ ಭೌತಿಕ ಚಟುವಟಿಕೆಗೆ ಬಳಸುವ ಪದ್ಧತಿ ಅನುಸರಣೆಯಲ್ಲಿದ್ದು ಕಂಪ್ಯೂಟರಿನ ಮುಂದೆ ಕಳೆಯುವ ಸಮಯ ತೀರಾ ಕಡಿಮೆ. ಆದರೆ ಈ ಹೊಸ ಪದ್ಧತಿ ಅನುಷ್ಠಾನಗಿಳಿಸಿದರೆ ದಿನದಲ್ಲಿನ ಎರಡು ಶಿಫ್ಟಿನ ಪೂರ್ತಿ ಯಾರಾದರೊಬ್ಬರು ಕಂಪ್ಯೂಟರಿನ ಮುಂದೆ ಸದಾ ಕೂತು ಪ್ರಿಂಟು ಹಾಕುತ್ತಿರಬೇಕು... ಅಲ್ಲದೆ  ಎರಡು ಶಿಫ್ಟಿನಲ್ಲಿ ಸಿಗುವ ಹದಿನಾರು ಗಂಟೆಗಳಲ್ಲಿ ಕೇವಲ ಅರ್ಧದಷ್ಟೆ ಇನ್ವಾಯ್ಸ್ ಮುಗಿಸಲು ಸಾಧ್ಯ... ಆ ಹದಿನಾರರಲ್ಲೂ ಗರಿಷ್ಟ ಶೇಕಡಾ ಎಂಭತ್ತರಷ್ಟು ಉತ್ಪಾದಕತೆ (ಪ್ರೊಡಕ್ಟಿವಿಟಿ) ಮಾತ್ರ ಪರಿಗಣಿಸಲು ಶಕ್ಯ. ಇದರರ್ಥ ಒಬ್ಬರ ಬದಲು ಇಬ್ಬರು ಒಟಾಗಿ ಕೂತು ಒಂದೆ ಸಮನೆ ಎರಡು ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿದ್ದರೂ ದಿನಕ್ಕೆ ನೂರಷ್ಟೆ ಮುಟ್ಟಲು ಸಾಧ್ಯ.. ಗರಿಷ್ಟ ಮಿತಿಯ ೧೫೦ ರ ಮಟ್ಟ ಮುಟ್ಟುವುದು ಬಹುತೇಕ ಅಸಾಧ್ಯ.. ಒಂದು ವೇಳೆ ಹೇಗೊ ಓವರ್ಟೈಮ್ ಮತ್ತಿತರ ವಿಧಾನಗಳಿಂದ ಸಾಧ್ಯವಾಗಿಸಬಹುದೆಂದೆ ಅಂದುಕೊಂಡರು ಅದು ಬರಿ ಮಾತಿನಲ್ಲಷ್ಟೆ ಸುಲಭಸಾಧ್ಯವೇ ಹೊರತು ಕೃತಿಯಲ್ಲಲ್ಲ.. ಯಾಕೆಂದರೆ, ಪ್ರಸ್ತುತ ಆ ಕೆಲಸ ಕೇವಲ ಒಂದೆರಡು ಗಂಟೆ ಮಾತ್ರ ಹಿಡಿಸುವಂತಾದ್ದು.. ಇರುವ ಸಿಬ್ಬಂದಿಯಲ್ಲೆ ತುಸು ಪರವಾಗಿಲ್ಲ ಎನ್ನುವವನೊಬ್ಬನನ್ನು ಹಿಡಿದು ಕೆಲಸ ಮುಗಿಸಿಬಿಡಬಹುದು.. ಅಲ್ಲದೆ ಮಾಡಬೇಕಾದ ಕೆಲಸವೂ ತುಂಬಾ ಸರಳವಾದ ಕಾರಣ ತೀರಾ ಪರಿಣಿತಿಯಾಗಲಿ, ಆಳದ ತರಬೇತಿಯಾಗಲಿ ಬೇಕಿಲ್ಲ.. ಆದರೆ ಹೊಸ ವ್ಯವಸ್ಥೆಗೆ ಪರಿಣಿತಿ, ತರಬೇತಿ ಜತೆಗೆ ಹೆಚ್ಚು ಸಮಯವೂ ಬೇಕು - ಸರಳವಾಗಿ ಹೇಳುವುದಾದರೆ ಹೊಸ ವ್ಯವಸ್ಥೆ ಯಶಸ್ವಿಯಾಗಿ ನಡೆಯಬೇಕೆಂದರೆ ಹೊಸ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಇಬ್ಬರು ನುರಿತ ಹೊಸ ಸಿಬ್ಬಂದಿ ಬೇಕೆಂದರೆ ತರುವುದೆಲ್ಲಿಂದ? ಮೊದಲೇ ಹೆಡ್ ಕೌಂಟ್ ವಿಷಯಕ್ಕೆ ಬಂದರೆ ಗಾಬರಿ ಬಿದ್ದು ಎಗರಾಡುವ ಮ್ಯಾನೇಜ್ಮೆಂಟಿಗೆ ಕಡೆಗಳಿಗೆಯಲ್ಲಿ ಹೋಗಿ ಪ್ರಾಜೆಕ್ಟಿನಿಂದ ಹೊಸ ಸಿಬ್ಬಂದಿ ನೇಮಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆಯೆಂದು ಹೇಳಿದರೆ ಪ್ರಾಜೆಕ್ಟಿನ ಜತೆ ತನ್ನನ್ನು ಆಚೆಗೆ ಹಾಕುತ್ತಾರೆ... ಒಂದು ವೇಳೆ ಜನರಿದ್ದರು ಎಂದೆ ಇಟ್ಟುಕೊಂಡರೂ, ಆ ಹೊಸಬರ ಕೆಲಸಕ್ಕೆ ಬೇಕಾದ ಕಂಪ್ಯೂಟರು ಇತ್ಯಾದಿಗಳ ವ್ಯವಸ್ಥೆ ಕ್ಷಿಪ್ರಗತಿಯಲ್ಲಿ ಮಾಡಬೇಕಾಗುತ್ತದೆ..ನೂರೆಂಟು ತರದ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ.. ಕುನ್. ಸೋವಿಯ ತಲೆಯಲ್ಲಿ ಇಷ್ಟೆಲ್ಲ ಆಳದ ಆಲೋಚನೆ ಬರದಿದ್ದರೂ ದಿನಕ್ಕೆ ನೂರರಿಂದ ನೂರೈವತ್ತು ಇನ್ವಾಯ್ಸ್ ಮಾಡುವ ಗುರಿಯ ಮಾನದಂಡ (ಕೇಪಿಐ) ಹೇಗೆ ಸಾಧಿಸುವುದು ಎಂಬ ಚಿಂತೆಯಂತೂ ಖಂಡಿತ ಕಾಡಿರಬೇಕು. ಅಳೆಯಲ್ಪಡುವ ಮಾನಕಗಳೆಲ್ಲ ಸ್ವಯಂರೂಪಿತವಾಗಿ ತಾವಾಗಿಯೆ ಹೊಸ ಸಿಸ್ಟಮ್ಮಿನಲ್ಲಿ ವರದಿಯ ರೂಪದಲ್ಲಿ ಪ್ರಕಟವಾಗುವುದರಿಂದ ಮೇಲಿನವರ ಒತ್ತಡ, ಆತಂಕ, ಪ್ರಶ್ನೆಗಳು ದಿನಂಪ್ರತಿ ಬರಲಾರಂಭಿಸುತ್ತವೆ. ಕೆಲಸದ ಸಹಜ ಒತ್ತಡದ ಜತೆ ಮೇಲಿನವರ ಸತತ 'ಪರಿಸ್ಥಿತಿ ವಿಚಾರಣಾ ಕರೆ' ಗಳು ಸೇರಿಕೊಂಡರೆ ವೇರ್ಹೌಸಿನ ಮಾಮೂಲಿ ಕೆಲಸಗಳು ಕೂಡ ದೈನಂದಿನ ನರಕವಾಗಿಬಿಡುತ್ತವೆ. ಇದೆಲ್ಲ ಮೊದಲೆ ಗೊತ್ತಿರದ ಕಾರಣ ಆರಾಮವಾಗಿದ್ದ ಕುನ್. ಸೋವಿಯ ಮುಖ ಈಗ ಮಂಕು ಹಿಡಿದಂತಾಗಿದ್ದು ಈ ಕಾರಣಕ್ಕಾಗಿಯೆ. ಆದರೆ ಜತೆಯಲ್ಲಿದ್ದ ಸೌರಭ್ ದೇವನಿಗೆ ಇನ್ನು ಪೂರ್ಣ ಆಘಾತದ ಅರಿವಿದ್ದಂತಿಲ್ಲ... ತಾಂತ್ರಿಕವಾಗಿ ಪ್ರಿಂಟ್ ಆಗುವ ಸಮಯದ ತೊಡಕಷ್ಟೇ ಅವನ ಚಿಂತೆಯ ಮೂಲ.. ಆದರೀಗ ಈ ಸಂಕಷ್ಟದ ಪರಿಸ್ಥಿತಿಯಿಂದ ಪಾರಾಗಲು ಅವನು ವಹಿಸಬೇಕಾದ ಭೂಮಿಕೆಯೂ ಬಲು ಮುಖ್ಯವಾದದ್ದು. ಆದಕಾರಣ ಪರಿಸ್ಥಿತಿಯ ಪೂರ್ಣ ತೀವ್ರತೆಯನ್ನು ಅವನಿಗೂ ಮನವರಿಕೆ ಮಾಡಿಕೊಡಬೇಕು.. ಈ ನಡುವೆ ಸಂಜಯ್ ಶರ್ಮನನ್ನು ನಿಭಾಯಿಸಬೇಕು - ಅವನ ಭಾವನೆಗಳು ಹರ್ಟ್ ಆಗದಂತೆ.. ಆದರೆ ಮೊದಲಿನದು ಮೊದಲು - ಈ ಸೌರಭ್ ದೇವ್ ನ ಕಡೆ ಗಮನ ಹರಿಸಿ ನಂತರ ಮಿಕ್ಕೆಲ್ಲ ತರದ ದುರಸ್ತಿಯತ್ತ ನೋಡಬೇಕು .... ಹೀಗೆಲ್ಲಾ ಆಲೋಚನೆಯ ಚಕ್ರದ ಗಿರಿಗಿಟ್ಟಲೆ ತಲೆಯಲ್ಲಿ ಸುತ್ತುತ್ತಿರುವಂತೆ ದೇವ್ ನತ್ತ ತಿರುಗಿ ಅವನ ಅನಿಸಿಕೆಯ ವರದಿಯೇನು ? ಎನ್ನುವಂತೆ ಹುಬ್ಬೇರಿಸಿದ.. ಕೆಲವು ಕೆಣಕುವ ಪ್ರಶ್ನೆಗಳನ್ನು ಕೇಳದಿದ್ದರೆ ಅವನಿಂದ ಸೂಕ್ತ ಉತ್ತರ ಸಿಗುವ ಹಾಗಿರಲಿಲ್ಲ; ಪ್ರೋಗ್ರಾಮರನಾಗಿ ಅವನಿಗೆಲ್ಲಾ ಅರ್ಥವಾಗದೆಂದು ಅರಿವಿದ್ದರೂ, ಅವನಿಗೆಷ್ಟು ಅರ್ಥವಾಗಿದೆಯೆಂಬುದರ ಮೇಲೆ ಅವಲಂಬಿಸಿ ಮಿಕ್ಕ ವಿವರದತ್ತ ಗಮನ ಕೊಡಲು ಆಲೋಚಿಸಬೇಕಿತ್ತು.

ದೇವ್ ಉತ್ಸಾಹದಿಂದಲೆ ಪ್ರಿಂಟರಿನತ್ತ  ಹೊರಟಿದ್ದರೂ ಅಲ್ಲಿ ತಲುಪಿ ಕೆಲಸ ಆರಂಭಿಸುವತನಕ, ನಿಜವಾದ ತೊಡಕಿರುವುದು ತಂತ್ರಾಂಶದ ತಾಂತ್ರಿಕತೆಯಲ್ಲಲ್ಲ, ಅದನ್ನು ಮೀರಿಸಿದ ಬಾಹ್ಯಾವಲಂಬಿ ಅಂಶಗಳಲ್ಲಿ ಎಂದು ಹೊಳೆದೇ ಇರಲಿಲ್ಲ. ಮೊದಲಿಗೆ ಇನ್ವಾಯ್ಸ್ ಪ್ರಿಂಟಿಂಗ್ ಆರಂಭಿಸುತ್ತಿದ್ದಂತೆ ಎಲ್ಲಕ್ಕೂ ಮೊದಲು ಆ ಡಾಟ್ ಮ್ಯಾಟ್ರಿಕ್ಸಿನಲ್ಲಿ ಲ್ಯಾಂಡ್ಸ್ಕೇಪ್ ಆಯಾಮದಲ್ಲಿ ಪೇಪರು ಫೀಡ್ ಮಾಡಬೇಕಿತ್ತು... ಅದು ಎರಡು ಬದಿಯಲ್ಲಿ ರಂಧ್ರಗಳಿರುವ ಪೇಪರು ಆದಕಾರಣ ಒಮ್ಮೆ ಜೋಡಿಸಿದರೆ ಆ ಕಟ್ಟು ಮುಗಿಯುವತನಕ ಮಧ್ಯೆಮಧ್ಯೆ ಬದಲಿಸುವ ಚಿಂತೆಯಿಲ್ಲದೆ, ಬೇರೆ ಕೆಲಸದ ಕಡೆ ಗಮನ ಕೊಡಬಹುದಾಗಿತ್ತು. ಆದರೆ ಈಗಿನ ಹೊಸತರದ ಪ್ರೋಗ್ರಾಮ್ ಬದಲಾವಣೆಯಿಂದ ಅದೀಗ ಸಾಧ್ಯವಿಲ್ಲದೆ ಹೋಗಿತ್ತು. ಮೊದಲ ಹೆಜ್ಜೆಯಲ್ಲಿ ಇನ್ವಾಯ್ಸ್ ಮುದ್ರಿಸಿ ಮುಗಿದ ಕೂಡಲೆ ಅದರ ಹಿಂದೆಯೆ, ಪೇಪರು ಬದಲಿಸಲೂ ಅವಕಾಶ ಕೊಡದೆ ಡೆಲಿವರೀ ನೋಟ್ ಮುದ್ರಿಸಿ, ತದನಂತರ ಅದರ ಬೆನ್ನಲ್ಲೇ ವೇಬಿಲ್ ಕೂಡ ಇನ್ವಾಯ್ಸಿನ ಕಾಗದದ ಮೇಲೆ ಪ್ರಿಂತು ಮಾಡತೊಡಗಿತ್ತು. ಟೆಸ್ಟಿಂಗ್ ಮಾಡುವಾಗ ಫಾರಂ ಬಳಸದೆ ಬರಿಯ ಖಾಲಿ ಹಾಳೆ ಬಳಸುವ ಕಾರಣ ಇದು ಎದ್ದು ಕಾಣುತ್ತಿರಲಿಲ್ಲ ಮತ್ತು ಗಣನೀಯವೆಂದು ಪರಿಗಣಿಸುತ್ತಿರಲಿಲ್ಲ ಕೂಡ. ಈಗಿನ ಸ್ಥ್ತಿಯಲ್ಲಿ ಇದನ್ನು ಸಂಭಾಳಿಸಲು ಸಾಧ್ಯವಿದ್ದ ಒಂದೇ ಒಂದು ವಿಧಾನವೆಂದರೆ ಬಂಡಲಿನಲ್ಲಿ ಪೇಪರು ಹಾಕದೆ ಪ್ರತಿ ಫಾರ್ಮನ್ನು ಒಂದೊಂದೆ ಪ್ರತಿಯಾಗಿ ಪ್ರಿಂಟರಿಗೆ ಹಾಕುತ್ತ ಹೋಗುವುದು.. ಒಂದು ಇನ್ವಾಯ್ಸ್ ಪ್ರತಿ ಪ್ರಿಂಟಿಂಗ್ ಮುಗಿದು ಪೇಪರಿಲ್ಲದೆ ಕಾಯುವ ಸ್ಥಿತಿಯಲ್ಲಿದ್ದಾಗ ಪ್ರಿಂಟರಿಗೆ ಒಂದೆ ಒಂದು ಡೆಲಿವರೀ ನೋಟಿನ ಪೇಪರನ್ನು ಪೋರ್ಟ್ರೇಟ್ ಆಯಾಮದಲ್ಲಿ ಸೇರಿಸುವುದು. .. ಅದು ಮುಗಿಯುತ್ತಿದ್ದಂತೆ ವೇಬಿಲ್.... ಹೀಗೆ ಇದೇ ಚಕ್ರವನ್ನು ಪ್ರತಿ ಸಾಗಾಣಿಕೆಯ ಅವಶ್ಯಕತೆಗೂ ಅದೇ ಸರದಿಯಲ್ಲಿ ಪುನರಾವರ್ತಿಸಬೇಕಾಗುತ್ತಿತ್ತು. ಹೀಗೆ ಪದೇಪದೇ ಪೇಪರು ಹಾಕುತ್ತ, ತೆಗೆಯುತ್ತ ಎರಡು ಸೆಟ್ ಮುಗಿಸಲೇ ಸುಮಾರು ಹೊತ್ತು ಹಿಡಿದಿತ್ತು. ಅದೇ ಹೊತ್ತಿನಲ್ಲಿ ಪ್ರಸ್ತುತ ಸಿಸ್ಟಮ್ಮಿನಲ್ಲಿ ಬಳಸುತ್ತಿದ್ದ ವಿಧಾನದಲ್ಲಿ, ಒಂದೇ ಏಟಿಗೆ ಎಲ್ಲಾ ಇನ್ವಾಯ್ಸ್, ಡೆಲಿವೆರೀ ನೋಟ್ಸ್, ವೇಬಿಲ್ ಪ್ರಿಂಟು ಹಾಕಿಕೊಂಡು ಹೋದದನ್ನು ಪಕ್ಕದ ಕಂಪ್ಯೂಟರಿನ ಮೂಲಕ ಕಣ್ಣಂಚಿನಲ್ಲಿ ಗಮನಿಸಿದ ದೇವ್-ನಿಗೆ ತಮ್ಮ ಹೊಸತಿನ ವಿಧಾನ ಎಷ್ಟು ಆಮೆಯ ವೇಗದ್ದು ಎಂದು ಅರ್ಥವಾಗಿತ್ತು. ಜತೆಗೆ ಯಾಕೆ ಶ್ರೀನಾಥ ಅವನನ್ನೆ ಸ್ವತಃ, ಮುಖತಃ ಹೋಗಿ ಮುದ್ರಿಸಲು ಹೇಳಿದ್ದನೆಂದು ಆಗಷ್ಟೆ ಅರಿವಾಗಿತ್ತು. ಅಲ್ಲಿಗೆ ಹೋಗುವಾಗ ಅವನ ಮೇಲೊಂದು ರೀತಿಯ ಪ್ರಕಟಿಸಲಾಗದ ಕ್ರೋಧ, ಆಕ್ರೋಶದಲ್ಲೆ ನಡೆದಿದ್ದರೂ, ಈಗ ಅಲ್ಲಿನ ವಾಸ್ತವಿಕತೆಯ ನೈಜ್ಯ ಚಿತ್ರಣ ಸಿಕ್ಕಿದ ಮೇಲೆ ನಾಚಿಕೆ, ಅವಮಾನದಿಂದ ತಲೆ ತಗ್ಗಿಸುವಂತೆ ಆಗಿಬಿಟ್ಟಿತ್ತು. ಹೀಗಾಗಿ ಶ್ರೀನಾಥನ ಮಾತಿನಲ್ಲಿದ್ದ ಸಂಜ್ಞೆಯ ಅರಿವಾದರೂ ಏನೂ ಉತ್ತರಿಸಲಾಗದೆ  ಸುಮ್ಮನೆ ಕುಳಿತುಬಿಟ್ಟಿದ್ದ. ಜತೆಗೆ ಎದುರಲ್ಲಿ ಕುನ್. ಸೋವಿ ಬೇರೆ ಕುಳಿತದ್ದು ಇನ್ನೊಂದಷ್ಟು ಇರಿಸುಮುರಿಸಿಗೆ ಕಾರಣವಾಗಿತ್ತು. ಇದೆಲ್ಲದರ ಜತೆಗೆ ಈ ವಿಷಯದ ಜವಾಬ್ದಾರಿ ಹೊತ್ತವನು ಶರ್ಮ - ಇದಕ್ಕೆ ಅವನು ಉತ್ತರಿಸಬೇಕೆ ಹೊರತು ತಾನಲ್ಲ; ಅವನು ಹೇಳಿದಂತೆ ಮಾಡಲು ತಾನು ಕೊನೆಗಳಿಗೆಯಲ್ಲಿ ದಿನಗಟ್ಟಲೆ ನಿದ್ದೆಗೆಟ್ಟು ಒದ್ದಾಡಿ ಮುಗಿಸಿದ್ದೇನೆ - ಎನ್ನುವ ನ್ಯಾಯಾನ್ಯಾಯ ವಾದದ ಮನ್ನಣೆಯೂ ತಲೆಯಲ್ಲಿ ಗುಂಯ್ಗುಡುತ್ತಿತ್ತು. ತಾರ್ಕಿಕವಾಗಿ ಅವನ ಚಿಂತನೆಯಲ್ಲಿ ಹುರುಳೂ ಇತ್ತು. ಇದು ಶ್ರೀನಾಥನಿಗೂ ಗೊತ್ತಿದ್ದರೂ, ಬರಿಯ ಪ್ರೋಗ್ರಾಮಿಂಗ್ ಜಗತ್ತಿನಲ್ಲೇ ಮುಳುಗಿ, ಸುತ್ತಮುತ್ತಲ ವಾಸ್ತವ ಪ್ರಪಂಚದ ಆಗುಹೋಗುಗಳ ಪರಿಗಣನೆಯತ್ತ ಗಮನ ಕೊಡದ ಈ ಪ್ರೋಗ್ರಾಮರುಗಳ ಮೇಲೆ ಅವನಿಗೂ ಸ್ವಲ್ಪ ಕೋಪವಿತ್ತು. ಆ ಕಾರಣದಿಂದಲೆ ಸುಮ್ಮನಿರದೆ ದೇವ್-ನನ್ನು ಮತ್ತೆ ಪ್ರಚೋದಿಸಿದ್ದ - ' ಯಾಕೆ ದೇವ್ ? ಅಲ್ಲೇನಾಯ್ತು ?' ಎಂದು ಕೇಳುತ್ತ.

ತುಸುಹೊತ್ತು ಮಾತನಾಡದೆ ಮೌನವಾಗಿ ತಲೆತಗ್ಗಿಸಿಕೊಂಡೆ ಏನೋ ಯೋಚಿಸುತ್ತಿದ್ದವನಂತೆ ಕುಳಿತಿದ್ದ ದೇವ್, ಅರೆಗಳಿಗೆಯ ನಂತರ ನಿಧಾನವಾಗಿ ತಲೆಯೆತ್ತುತ್ತ, 'ವೇರಹೌಸಿನಲ್ಲಿರುವುದು ಮೂರು ಫಾರಂಗಳಿಗೂ ಸೇರಿ ಒಂದೇ ಪ್ರಿಂಟರು, ಎಂದು ಗೊತ್ತಿರಲಿಲ್ಲ ಸಾರ್..' ಎಂದಿದ್ದ ನೇರ ಸಮಸ್ಯೆಯ ಕೇಂದ್ರಕ್ಕಿಳಿಯುತ್ತ. ಸುತ್ತು ಬಳಸದೆ ನೇರ ವಿಷಯದಾಳಕ್ಕಿಳಿದ ಅವನ ಬುದ್ದಿವಂತಿಕೆಯನ್ನು ಗಮನಿಸುತ್ತ ಅವನು ಮರೆತ ನಾಲ್ಕನೇ ಪಿಕ್-ಸ್ಲಿಪ್ಪಿನ ಫಾರಂ ಹೊರಗೆ ಲೇಸರ್ ಪ್ರಿಂಟರಿನಲ್ಲಿ ಮುದ್ರಿತವಾಗುವ ವಿಷಯ ನೆನಪಿಸಬೇಕೆಂದುಕೊಳ್ಳುವಾಗಲೆ, ಅದು ಫಾರಂಗಳಿಗೆ ಸಂಬಂಧಿಸದೆ ಸ್ವತಂತ್ರವಾಗಿ ಅನಿರ್ಬಂಧಿತವಾಗಿರುವುದು ನೆನಪಾಗಿ ಅದರ ಸಂಗತಿಯನ್ನು ಬದಿಗಿಟ್ಟು ಈ ತೊಡಕಿನ ಮೂರರ ಮೇಲೆ ಗಮನ ಹರಿಸಲು ನಿರ್ಧರಿಸಿದ ಶ್ರೀನಾಥ. ಕಡೆ ಗಳಿಗೆಯ ಬದಲಾವಣೆಯ ಮೊದಲು ಪ್ರತಿಯೊಂದು ಬೇರೆ ಬೇರೆಯಾಗಿಯೆ ಪ್ರಿಂಟು ಆಗುತ್ತಿದ್ದಾಗ, ಈಗ ಎದುರಿಸುತ್ತಿರುವ ತೊಡಕಿನ ಪ್ರಶ್ನೆ ಇರಲಿಲ್ಲ. ಆ ವಿಧಾನ ಹೆಚ್ಚುಕಡಿಮೆ ಹಳೆಯ ವಿಧಾನಕ್ಕೆ ಸಾಕಷ್ಟು ಹತ್ತಿರವಾಗಿ ಸಹ ಇತ್ತು. ನೈಜ್ಯ ಪರಿಸ್ಥಿತಿಯ ನಿರ್ಬಂಧಗಳನ್ನು ಪರಿಗಣಿಸದೆ ಬರಿ ತಾಂತ್ರಿಕ ನೈಪುಣ್ಯತೆಯ ಪ್ರಖರ ಮಾನದಂಡದಲಷ್ಟೆ ತುಲನೆ ಮಾಡಿ, ಆ ಮೂರನ್ನು ಒಟ್ಟಾಗಿ ಸೇರಿಸಿದ್ದೆ ಎಲ್ಲಾ ತೊಡಕಿಗೆ ಮೂಲಕಾರಣವಾಗಿತ್ತು. ಆ ಹಿನ್ನಲೆಯನ್ನೆ ಚಿಂತಿಸುತ್ತ ಶ್ರೀನಾಥ, 'ಮತ್ತೆ ಮೂರನ್ನು 'ಡೀ ಲಿಂಕ್' ಮಾಡಿ ಬೇರ್ಪಡಿಸಲು ಸಾಧ್ಯವೇ? ಹಳೆಯ ಪ್ರೋಗ್ರಾಮಿನ ಆವೃತ್ತಿ ಇನ್ನೂ ಇದೆಯೇ ಇಲ್ಲವೇ ? ' ಎಂದು ವಿಚಾರಿಸಿದ್ದ - ಕನಿಷ್ಠ ಹಳೆಯ ವಿಧಾನಕ್ಕೆ ಮರಳುವ ಸಾಧ್ಯತೆಯನ್ನು ಪರಿಶೀಲಿಸಲು. ದುರದೃಷ್ಟಕ್ಕೆ ಲಿಂಕ್ ಮಾಡುವ ಉದ್ವೇಗಾವಸರದಲ್ಲಿ ಮೂಲ ಪ್ರೋಗ್ರಾಮಿನ ಕೆಲವು ಅಂಶಗಳನ್ನು ಬದಲಿಸಬೇಕಾಗಿ ಬಂದಿದ್ದ ಕಾರಣ ಆ ಮಾರ್ಗ ಹೆಚ್ಚು ಅಪಾಯಕಾರಿಯಾಗಿ ಕಂಡಿತ್ತು. ಹಾಗೇನಾದರೂ ಮತ್ತೆ ಬೇರ್ಪಡಿಸಿ ಬಳಸಬೇಕೆಂದಿದ್ದರೂ, ಮತ್ತೆ ಸೂಕ್ತ ರೀತಿಯ ಟೆಸ್ಟಿಂಗ್ ಮಾಡದೆ ಮುಂದುವರೆಯಲಾಗದು; ಅದಕ್ಕೆಲ್ಲ ಸಾಕಾಗುವಷ್ಟು ಸಮಯವೂ ಇಲ್ಲ.. ಈಗೇನಿದ್ದರೂ ಸದ್ಯದ ಆವೃತ್ತಿಯನ್ನೇ 'ಹೇಗಾದರೂ, ಏನಾದರೂ ಮಾಡಿ' ಬಳಸುವ ರೂಪಕ್ಕೆ ತಂದು ಹೇಗೊ ಗೋಲೈವ್ ನಿಭಾಯಿಸಿದರೆ, ನಂತರ ಸಮಾನಾಂತರವಾಗಿ ಕೆಲಸ ಮಾಡುತ್ತ ಮತ್ತೆ ಮೊದಲಿನ ವಿಧಾನಕ್ಕೆ ಟ್ರ್ಯಾಕ್ ಬದಲಿಸಿಕೊಳ್ಳಬೇಕು.. ಆ ಪರಿಭ್ರಮಣತೆಯ ಜತೆಯಲ್ಲೆ ಯಾವರೀತಿ ನಿಭಾಯಿಸಿದರೆ ಈ ಸಂಕಷ್ಟದಿಂದ ತಕ್ಷಣಕ್ಕೆ ಪಾರಾಗಬಹುದು? ಎಂಬುದನ್ನೇ ಚಿಂತಿಸುತ್ತ ಶ್ರೀನಾಥ ಕುನ್. ಸೋವಿಯತ್ತ ತಿರುಗಿ, ಈಗಿರುವುದಲ್ಲದೆ ಬೇರೆ ಯಾವುದಾದರೂ ಪ್ರಿಂಟರು ಬೇರೆ ವಿಭಾಗಗಳಿಂದ ಸದ್ಯಕ್ಕೆ ತಾತ್ಕಾಲಿಕ ಬಳಕೆಗೆ ಸಿಗುವ ಸಾಧ್ಯತೆಯಿದೆಯೇ ಎಂದು ವಿಚಾರಿಸಿದಾಗ ಉತ್ತರ ನಕಾರಾತ್ಮಕವಾಗಿ  ಬಂದಿತ್ತು. ಲೇಸರ್ ಪ್ರಿಂಟರುಗಳಾದರೆ ಹೇಗೊ ಒದಗಿಸಬಹುದಾಗಿತ್ತಲ್ಲದೆ, ಡಾಟ್ ಮ್ಯಾಟ್ರಿಕ್ಸ್ ಅಥವಾ ಲೈನ್ ಪ್ರಿಂಟರುಗಳು ಸಾಧ್ಯವಿರಲಿಲ್ಲ. ಅಲ್ಲಿಗೆ ಆ ಹಾದಿಯೂ ಮುಚ್ಚಿದಂತಾಗಿ ಮತ್ತೇನು ಮಾಡುವುದೆಂದು ಕಾಣದೆ ಕಣ್ಣು ಮುಚ್ಚಿ ಯೋಚಿಸುತ್ತಾ ಕುಳಿತ ಶ್ರೀನಾಥನನ್ನೆ ಏನು ಮಾಡಲರಿಯದೆ ಪೆಚ್ಚಾಗಿದ್ದ ಮುಖದಲ್ಲೇ ನಿರ್ಭಾವದಲ್ಲಿ ನೋಡುತ್ತಿದ್ದ ದೇವ್. ಅವರಿಬ್ಬರ ನಡುವಿನಲ್ಲಿ ಆ ಗಳಿಗೆಯಲ್ಲಿ ತಾನೇನೂ ಮಾಡಲಿಕ್ಕಿಲ್ಲವೆಂಬುದರ ಅರಿವಾಗಿ ಅಲ್ಲಿಂದೆದ್ದು ಉಗ್ರಾಣದ ಒಳಗೆ ನಡೆದಿದ್ದ ಕುನ್. ಸೋವಿ. 

ತಾವಿಬ್ಬರೆ ಮಾತನಾಡಿಕೊಳ್ಳಲನುವಾಗುವಂತೆ ಎದ್ದು ಹೋದವನ ಸೂಕ್ಷ್ಮ ಸಮಯಪ್ರಜ್ಞೆಯನ್ನು  ಮನದಲ್ಲೆ ವಂದಿಸುತ್ತಾ, ದೇವ್ ಜತೆಗೆ ಮುಂದಿರುವ ಪರಿಹಾರದ ದಾರಿ ಕುರಿತು ಚರ್ಚಿಸಲಾರಂಭಿಸಿದ ಶ್ರೀನಾಥ. ಪ್ರಸ್ತುತ ಪರಿಸ್ಥಿತಿಯಲ್ಲಿ ಏನಾದರೂ ಮಾಡದಿದ್ದರೆ ತೀರಾ ವಿಪರೀತಕ್ಕೆ ಹೋಗುವ ಎಲ್ಲ ಸಾಧ್ಯತೆಗಳು ನಿಚ್ಛಳವಾಗಿತ್ತು. ಸಾಲದೆಂಬಂತೆ ಗೋಲೈವಿಗೆ ಒಂದು ದಿನ ಮೊದಲು ಸಿದ್ದತೆಯ ಪಕ್ವತೆ, ಪರಿಪೂರ್ಣತೆಯನ್ನು ಪರಿಶೀಲಿಸುವ 'ಗೋ - ನೋ ಗೋ' ನಿರ್ಧಾರಕ ದಿನ ('ಸಿದ್ದವಾ ಇಲ್ಲ ಬಿದ್ದೆವಾ' ನಿರ್ಧಾರ ದಿನ), ಕುನ್. ಸೋವಿ ಈ ತೊಡಕನ್ನು ಸ್ಟೀರಿಂಗ್ ಕಮಿಟಿಯ ಮುಂದೆ ಚರ್ಚೆಗೆ ತರುವುದು ಖಂಡಿತವಿತ್ತು. ಅಷ್ಟರೊಳಗೆ ಸೂಕ್ತ, ಸಿದ್ದ ಪರಿಹಾರವಿರದಿದ್ದರೆ ಗೋಲೈವ್ ದಿನಾಂಕವನ್ನು ಉಳಿಸಿಕೊಳ್ಳಲಾಗದೆ ಮುಂದೂಡಬೇಕಾದ ಸಂಧರ್ಭ ಬರುವ ಎಲ್ಲಾ ಸಾಧ್ಯತೆಯೂ ಇತ್ತು. ಹಾಗೇನಾದರೂ ಆದಲ್ಲಿ ಶ್ರೀನಾಥನಿಗೆ ಮತ್ತು ತಂಡಕ್ಕೆ ಅದೊಂದು ದೊಡ್ಡ ಏಟೆ ಸರಿ; ಪ್ರಾಜೆಕ್ಟುಗಳಲ್ಲಿ ತಡವೆಂದರೆ ಹೆಚ್ಚು ಸಮಯ ವ್ಯಯ.. ಮಿಕ್ಕೆಲ್ಲಾ ಅವಲಂಬಿತ ಪ್ರಕ್ರಿಯೆಗಳು ತಡವಾಗುವುದು ಮಾತ್ರವಲ್ಲದೆ, ಅದರೆಲ್ಲಾ ಸಂಬಂಧಿತ ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾದ ಅನಿವಾರ್ಯವುಂಟಾಗುವುದು ಸಾಮಾನ್ಯ. ಆಗ ಪ್ರಾಜೆಕ್ಟು ತಡವಾಗಿ ಮುಗಿಯುವ ಮುಜುಗರದ ಕಳಂಕದ ಜತೆಗೆ ಮಿಕ್ಕೆಲ್ಲ ಅಪಯಶಸ್ಸಿನ ಅಂಕಿಅಂಶಗಳು ಶಾಶ್ವತ ಕಪ್ಪು ಚುಕ್ಕೆಗಳಾಗಿ ಉಳಿದುಬಿಡುತ್ತವೆ ಪ್ರಾಜೆಕ್ಟಿನ ಅಂಕಿ-ಅಂಶದ ಕಡತದಲ್ಲಿ. ಅದಕ್ಕೆ ಶ್ರೀನಾಥನ ತಂಡವೆ ನೇರ ಕಾರಣವಾದರಂತೂ ಕಂಪನಿ ಹೆಸರಿಗೂ ಕಳಂಕ, ಹೆಚ್ಚುವರಿ ವೆಚ್ಚವೂ ತಲೆಗೆ ಕಟ್ಟಿಕೊಳ್ಳಬಹುದಾದ ಅಪಾಯ. ಇದೆಲ್ಲಾ ಒಟ್ಟಾರೆ ಪರಿಣಾಮದ ಭೀತಿಯೂ ಜತೆಗೆ ಸೇರಿಕೊಂಡು ಶ್ರೀನಾಥನ ಆತಂಕಕ್ಕೆ ನೀರೆರೆಯುತ್ತಿತ್ತು. ಆದರೆ ಇದೆಲ್ಲಾ ಪ್ರಾಜೆಕ್ಟ್ ಮ್ಯಾನೇಜರನಾಗಿ ಅವನ ಹೊಣೆಗಾರಿಕೆ - ದೇವ್ ಪಾಲಿನ ಹೊಣೆ ಕೇವಲ ಪ್ರೋಗ್ರಾಮಿಂಗ್ ಮಟ್ಟಕ್ಕಷ್ಟೆ ಸೀಮಿತ. ಅದರಲ್ಲೂ ಈ ವಿಷಯದಲ್ಲಿ ಏಮಾರಿರುವುದು ಶರ್ಮನೆ ಹೊರತು ದೇವ್ ಅಲ್ಲ.. ದುರದೃಷ್ಟವಶಾತ್ ಯಾರದು ಸರಿ, ಯಾರದು ತಪ್ಪು ಎಂದು 'ಪೋಸ್ಟ್ ಮಾರ್ಟಂ' ಮಾಡಿ ನೋಡುತ್ತ ಕೂರುವ ವೇಳೆ ಇದಲ್ಲ. ಸದ್ಯದ ಆದ್ಯತೆ ಸಮಸ್ಯೆಯ ಪರಿಹಾರವಷ್ಟೇ ಮುಖ್ಯ ಗುರಿ... ಹೀಗೆಲ್ಲ ಯೋಚಿಸಿ ಆ ಉದ್ದೇಶವನ್ನಷ್ಟೆ ಮನದಲ್ಲಿ ಗುಣುಗುಣಿಸುತ್ತ, 

' ದೇವ್, ಫಸ್ಟ್ ವೀ ನೀಡ್ ಎ ಕ್ವಿಕ್ ಫಿಕ್ಸ್ ... ನಾಳೆಯ ಒಳಗೆ ಸುಮಾರಾಗಿ ಕೆಲಸ ಮಾಡುವಂತಹ ಏನಾದರೂ ಉಪಾಯವನ್ನು ಹುಡುಕಬೇಕು - ಇಲ್ಲವಾದರೆ ದೊಡ್ಡ ಇಕ್ಕಟ್ಟಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ, ನಾವೆಲ್ಲರೂ ..' ಎಂದ. ಅವನ  ಚಿಂತಾಕ್ರಾಂತ ದನಿಯಲ್ಲಡಗಿದ್ದ ಹತಾಶೆಯನ್ನರಿತಿದ್ದವನಂತೆ ಏನಾದರೂ ಪರಿಹಾರ ಮಾರ್ಗ ಕಾಣುತ್ತದೆಯೆ ಎಂದು ತಲೆಯೊಳಗೆ ಹುಡುಕಾಟ ನಡೆಸಿದ್ದ ದೇವ್, 

'ಸದ್ಯಕ್ಕೆ ಬೇಕಾದರೆ ಪ್ರತಿ ಫಾರಂ ಪ್ರಿಂಟಿಂಗ್ ನಡುವೆ ಒಂದು ಬ್ರೇಕ್ ಕಮಾಂಡ್ ಹಾಕಿ, ಅವರು 'ಎಸ್' ಅನ್ನು ಒತ್ತುವವರೆಗೆ ಪ್ರಿಂಟಿಂಗ್ ಶುರುವಾಗದ ಹಾಗೆ ನೋಡಿಕೊಳ್ಳಬಹುದು ಸರ್.. ಅದೊಂದು ಅರ್ಧ ಗಂಟೆ ಕೆಲಸ ಅಷ್ಟೆ... ಜತೆಗೆ ಇನ್ನೊಂದು ದಿನ ಸಿಕ್ಕಿದರೆ ಆ ಪ್ರೋಗ್ರಾಮನ್ನೆ ಸ್ವಲ್ಪ ರಿಪೇರಿ ಮಾಡಿ ಇನ್ವಾಯ್ಸುಗಳೆಲ್ಲ ಒಟ್ಟಾಗಿ, ಡೆಲಿವರಿ ನೋಟ್ ಮತ್ತೊಂದು ಗುಂಪಾಗಿ, ಕೊನೆಗೆ ವೇಬಿಲ್ ಇನ್ನೊಂದು ಗುಂಪಾಗಿ ಪ್ರಿಂಟ್ ಮಾಡುವ ಹಾಗೆ ಬದಲಿಸಲು ಯತ್ನಿಸಬಹುದು.. ಸ್ವಲ್ಪ ಕಷ್ಟಪಟ್ಟರೆ ಅದನ್ನೇ ಗೋಲೈವಿಗೆ ರೆಡಿ ಮಾಡಿಕೊಳ್ಳಬಹುದು ಅನಿಸುತ್ತದೆ ..ಆದರೆ..'

'ಆದರೇನು?'

'ಶರ್ಮಾ ಸಾರ್ ಏನನ್ನುತ್ತಾರೋ ಗೊತ್ತಿಲ್ಲ ..'

'ಶರ್ಮಾ ವಿಷಯ ನನಗೆ ಬಿಡು...ನಾನು ಮಾತನಾಡುತ್ತೇನೆ. ಈ ಪ್ರೋಗ್ರಾಮಿನಲ್ಲಿರುವ ಸಂಕೀರ್ಣ ಲಾಜಿಕ್ ನೋಡಿದರೆ ರಿಪೇರಿ ಅಷ್ಟು ಸುಲಭವಿರುವಂತೆ ಕಾಣುವುದಿಲ್ಲ... ಅದರ ಬದಲು ಪ್ರತಿ ಫಾರಂಗು ಬೇರೆ ಬೇರೆ ಪ್ರಿಂಟ್ ಕಮಾಂಡ್ ಆಗಿ ಬದಲಿಸಲು ಸಾಧ್ಯವಿದೆಯೇ? ಆಗ ಮೂರು ಬಾರಿ ಮಾಡಬೇಕಾದರೂ ಡಿಪೆಂಡೆನ್ಸಿ ಇರುವುದಿಲ್ಲ, ಜತೆಗೆ ಈಗ ಮುದ್ರಿಸುವ ಹಾಗೆ ಕಂತೆ ಕಂತೆಗಳಲ್ಲಿ ಗುಂಪಾಗಿ ಮುದ್ರಿಸಬಹುದು..'

' ಅದೇನೊ ಸುಲಭದ ಕೆಲಸವೇ. ಆದರೂ ಒಂದೆ ದಿನದಲ್ಲಿ ಆಗುವುದು ಅನುಮಾನ ..ಮೂರ್ನಾಲ್ಕು ದಿನವಾದರೂ ಹಿಡಿಯಬಹುದು...ಟೆಸ್ಟಿಂಗ್ ಕೂಡ ಪೂರ್ತಿ ಹೊಸದಾಗಿ ಮಾಡಬೇಕಾಗುತ್ತದೆ..'

ಅವನ ಮಾತುಗಳನ್ನೇ ಆಲಿಸುತ್ತ , ಹಿನ್ನಲೆಯಲ್ಲಿ ಮತ್ತೇನೋ ಯೋಜನೆ ಹಾಕುತ್ತ ಇದ್ದ ಶ್ರೀನಾಥ ಕಡೆಗೇನೊ ನಿರ್ಧಾರಕ್ಕೆ ಬಂದವನ ಹಾಗೆ,

'ಓಕೆ..ಹೀಗೆ ಮಾಡೋಣ.. ಸದ್ಯಕ್ಕೆ ಇವತ್ತು 'ಪ್ರಿಂಟಿಂಗ ಬ್ರೇಕ್' ಹಾಕಿಬಿಡು. ನಾನು ಕುನ್. ಸೋವಿಯ ಹತ್ತಿರ ಮಾತನಾಡುತ್ತೇನೆ. ಜತೆಗೆ ಆ ಮೂರು ಪ್ರಿಂಟ್ ಬೇರೆ ಬೇರೆ ಆಗುವ ರೀತಿ ಸೆಪರೇಟ್ ಮಾಡಿಬಿಡು. ಒಂದೆರಡು ದಿನ ತಡವಾದರೂ ಇಲ್ಲಿನ ವ್ಯವಸ್ಥೆಗೆ ಅದೇ ಸೂಕ್ತ...'

'ಸರಿ ಸಾರ್..'

'ಮತ್ತೊಂದು ವಿಷಯ.. ಇವಾಗಿನಿಂದ ಮುಂದಿನ ಒಂದು ವಾರ ಪೂರ್ತಿ ನಾನೂ ನೀನೂ ಇಬ್ಬರೂ ಇಲ್ಲೇ ವಾಸ್ತವ್ಯ ಹಾಕೋಣ.. ಆಫೀಸಿಗೆ ಹೋಗದೆ ನೇರ ಇಲ್ಲೇ ಬಂದುಬಿಡೋಣ.. ಟೆಸ್ಟಿಂಗ್ ಟೈಮ್ ಪೂರ್ತಿ ಕಡಿತವಾಗುತ್ತದೆ ....ಜತೆಗೆ ಏನೇ ತೊಡಕು ಬಂದರೂ ತಕ್ಷಣವೆ ಗೊತ್ತಾಗುತ್ತದೆ, ಕೂಡಲೆ ಪರಿಹರಿಸಿಬಿಡಬಹುದು ..'

'ಆಯ್ತು..' ಎಂದು ನುಡಿದ ದೇವ್, ಆ ದಿನ ಕೂಡ ಮತ್ತೆ ಆಫೀಸಿಗೆ ಹಿಂದಿರುಗಿ ಹೋಗುವ ಅವಶ್ಯಕತೆಯಿಲ್ಲವೆಂದು ಗೊತ್ತಾಗಿ, ಅಲ್ಲೇ ಎದುರಿಗೆ ಖಾಲಿಯಿದ್ದ ಟೇಬಲ್ಲೊಂದರ ಮೇಲೆ ಲ್ಯಾಪ್ ಟಾಪ್ ಹರಡಿಕೊಂಡು ನೆಟ್ವರ್ಕಿಗೆ ಕೇಬಲ್ ತಗುಲಿಸಿ ತಕ್ಷಣದಿಂದಲೆ ತನ್ನ ಕೆಲಸ ಆರಂಭಿಸಿದ. ಇನ್ನು ಹೇಗಾದರೂ ಕುನ್. ಸೋವಿಯ ಮನವೊಲಿಸಿ ಈ ತಾತ್ಕಾಲಿಕ ಪರಿಹಾರಕ್ಕೆ ಕೈಗೂಡಿಸಿ ಸಹಕರಿಸುವಂತೆ ತಯಾರು ಮಾಡಬೇಕೆಂದು ಹೊರಟಿದ್ದ ಶ್ರೀನಾಥ, ಏನೋ ನೆನಪಾದವನಂತೆ ಮತ್ತೆ ದೇವ್ ನತ್ತ ತಿರುಗಿ, ' ಶರ್ಮನಿಗೆ ಈಗಲೆ ಏನೂ ಹೇಳುವುದು ಬೇಡ... ನಾನು ನೇರ ಮಾತಾಡುತ್ತೇನೆ ...' ಎಂದಿದ್ದ. ಇಲ್ಲಿನ ಪರಿಸ್ಥಿತಿಯ ತೀವ್ರತೆಯ ಅರಿವಿಲ್ಲದೆ, ಅವನು ಎಗರಾಡಲು ಆರಂಭಿಸಿ ಮತ್ತಷ್ಟು ಗೊಂದಲವಾಗಿ ಇನ್ನಷ್ಟು ತಡವಾಗುವುದು ಆ ಹೊತ್ತಿನಲ್ಲಿ ಬೇಡದ ವಿಷಯವಾಗಿತ್ತು. 

ವೇರ್ಹೌಸಿನ ಮಸುಕಾಗಿದ್ದ ಸರಕು ಓಣಿಯೊಂದರ ಹತ್ತಿರ ಕನ್ನಡಕವನ್ನೆತ್ತಿ ತಲೆಯ ಮೇಲೆ ಕೂರಿಸಿ, ತೆರೆದ ಪೆಟ್ಟಿಗೆಯೊಂದರಲ್ಲಿ ಪ್ಲಾಸ್ಟಿಕ್ಕಿನಲ್ಲಿ ಮಾಡಿದ ಸಣ್ಣಸಣ್ಣ ವಸ್ತುಗಳನ್ನು,  ಬರಿಗಣ್ಣಿನಿಂದ ನೋಡುತ್ತಿದ್ದ ಕುನ್. ಸೋವಿಯ ಜಾಡು ಹಿಡಿಯಲು ತುಸುಹೊತ್ತೆ ಹಿಡಿದರೂ, ಕೊನೆಗೂ ಕೈಗೆ ಸಿಕ್ಕಾಗ ನಿಟ್ಟುಸಿರುಬಿಡುವಂತಾಗಿತ್ತು ಶ್ರೀನಾಥನಿಗೆ. ಅವನು ನಿಂತಿದ್ದ ಜಾಗಕ್ಕೆ ಸರಸರ ನಡೆದವನೆ ಅಲ್ಲೆ ಅವನೊಂದಿಗೆ ಮಾತಿಗಿಳಿದಿದ್ದ. ಸಹಜವಾಗಿಯೆ ಸಾಧು ಹಾಗೂ ಉದಾರ ಸ್ವಭಾವದವನಾಗಿದ್ದ ಕುನ್. ಸೋವಿ ಶ್ರೀನಾಥನ ಯೋಜನೆಯನ್ನು ಆಲಿಸುತ್ತ ತಲೆಯಾಡಿಸುತ್ತಿದ್ದರೂ, ಕೊನೆಯಲ್ಲಿ ಶ್ರೀನಾಥ ಹೇಳಿದ ಮಾತು ಅವನಿಗೂ ಪಥ್ಯವಾಗಿರಲಿಲ್ಲ. ಇದು ಮೊದಲೆ ಸೀರಿಯಸ್ಸಾದ ವಿಷಯ.. ಯಾವುದೇ ಕಾರಣಕ್ಕೆ ಗ್ರಾಹಕರಿಗೆ ಸರಕು ಕಳಿಸಲಾಗಲಿಲ್ಲವೆಂದರೂ ಅದಕ್ಕೆ ಉತ್ತರ ಕೊಡಬೇಕಾದವನು ತಾನೆ ಆದ ಕಾರಣ, ಗೋ-ನೋಗೋ ಮೀಟಿಂಗಿನಲ್ಲಿ ಯಾವುದೇ ತೊಡಕಿಲ್ಲವೆಂದು, ಎಲ್ಲಾ ಸರಿಯಾಗಿದೆಯೆಂದು ಸಾರಾಸಗಟಾಗಿ ಹೇಳಲು ಅವನಿಗೆ ಧೈರ್ಯವಿರಲಿಲ್ಲ.  ಆ ಆತಂಕವನ್ನು ಅವನು ಸಂಕೋಚದಿಂದಲೆ ಪ್ರಕಟಿಸಿದಾಗ, ಶ್ರೀನಾಥ ಕನಿಷ್ಠ ತೊಡಕಿನ ಪರಿಮಾಣವನ್ನು ತೀರಾ ಎತ್ತಿ ಹಿಡಿಯದಂತೆ, ಮೆಲುವಾಗಷ್ಟೆ ಗಮನಕ್ಕೆ ತರಲು ಕೋರಿದ್ದ.. 'ಸಣ್ಣ ಪುಟ್ಟ ಒಂದೆರಡು ತೊಡಕುಗಳು ನಿವಾರಣೆಯ ಪರಿಹಾರದ ಕಡೆಯ ಹಂತದಲ್ಲಿದ್ದು, ಒಂದೆರಡು ದಿನಗಳಲ್ಲಿ ಪೂರ್ತಿ ಸುಸ್ಥಿತಿಯತ್ತ ತಲುಪುವ ಭರವಸೆಯಿದೆಯೆಂದು' ಹೇಳಲು ವಿನಂತಿಸಿಕೊಂಡ. ಆ ಹೊತ್ತಿನಲ್ಲೆ ದೇವ್ ಈಗಾಗಲೆ ತಾತ್ಕಾಲಿಕ ಪರಿಹಾರದ ಹಾದಿಯಲ್ಲಿ ಕೆಲಸ ಆರಂಭಿಸಿರುವುದನ್ನು ತಿಳಿಸಿ, ಅವನು ಮಾಡಲಿರುವ ಹೊಸ ಬದಲಾವಣೆಯನ್ನು ವಿವರಿಸಿದ. ಇದೆಲ್ಲದರ ಜತೆಗೆ ಮೊದಲ ಒಂದು ವಾರ ಪೂರ್ತಿ ಅಲ್ಲೆ ವೇರ್ಹೌಸಿನಲ್ಲೆ ಇದ್ದು ಎಲ್ಲಾ ತೃಪ್ತಿಕರವಾಗಿ ಬದಲಾಯಿಸಲ್ಪಡುವ ತನಕ ಸಹಕಾರಿಸುವುದಾಗಿ ಮತ್ತೆ ಮತ್ತೆ ಭರವಸೆ ಕೊಟ್ಟ ಮೇಲೆ, ಅರೆ ಮನಸಿನಿಂದಲೆ ಒಪ್ಪಿಕೊಂಡಿದ್ದ ಕುನ್.ಸೋವಿ.  ಅದೃಷ್ಟಕ್ಕೆ ಆ ಮಾತುಕತೆ ನಡೆಯುತ್ತಿದ್ದ ಹೊತ್ತಿನಲ್ಲೆ ಅಲ್ಲಿಗೆ ಓಡುತ್ತ ಬಂದಿದ್ದ ದೇವ್, ಅರ್ಜೆಂಟಾಗಿ ಮಾಡಬೇಕಿದ್ದ 'ಫಾರಂ ಬ್ರೇಕ್' ಬದಲಾವಣೆ ಈಗಾಗಲೆ ಸಿದ್ದವೆಂದು, ಒಮ್ಮೆ ಪುಟ್ಟ ಟೆಸ್ಟು ಮಾಡಿಕೊಂಡು ತಕ್ಷಣದಿಂದಲೆ ಬಳಸಬಹುದೆಂದು ಸುದ್ದಿ ಕೊಟ್ಟಾಗ, ಕ್ಷಿಪ್ರ ಬದಲಾವಣೆ ಮಾಡಬಲ್ಲ ಅವನ ಸಾಮರ್ಥ್ಯದ ಮೇಲೆ ತುಸು ನಂಬಿಕೆ ಬಂದಂತಾಗಿ ಮತ್ತಷ್ಟು ವಿಶ್ವಾಸದಿಂದ ಸಮ್ಮತಿ ಸೂಚಿಸಿದ. ಜತೆಗೆ ಇಬ್ಬರಿಗೂ ವಾರದ ಮಟ್ಟಿಗೆ ಕೂರಲು ವ್ಯವಸ್ಥೆ ಮಾಡುವುದಾಗಿ ಹೇಳಿ ಹೊರಟಾಗ ಇಬ್ಬರಿಗೂ ನಿರಾಳವಾಗಿತ್ತು. ಸರಿಯಾದ ಹೊತ್ತಿಗೆ  ಅವನ ಆತ್ಮವಿಶ್ವಾಸ ಹೆಚ್ಚಿಸುವ ಸುದ್ದಿ ತಂದ ದೇವ್ ಬಗೆಯೂ ಮೆಚ್ಚುಗೆ ಮೂಡಿತಲ್ಲದೆ, ಹೇಳಿದ್ದಕ್ಕಿಂತ ಮೊದಲೆ ಕೆಲಸ ಮುಗಿಸುವನೆಂಬ ಆಶಾವಾದವೂ ಜತೆಗೂಡಿ ಈ ಸಂಕಟದ ಸಂಧರ್ಭವನ್ನು ಯಶಸ್ವಿಯಾಗಿ ನಿಭಾಯಿಸಬಹುದೆಂಬ ಧೈರ್ಯವೂ ಹೆಚ್ಚಾಗತೊಡಗಿತ್ತು. ಆ ಹೊತ್ತಿನ ನಿರಾಳ ಭಾವ ತಂದ ಸಮಾಧಾನದ ಹುರುಪಿನ ಹಿಂದೆಯೆ, ಊಟದ ಹೊತ್ತಾಯಿತೆಂದು ಸಂಜ್ಞೆ ಮಾಡುತ್ತ ಕೈಯಾಡಿಸುತ್ತಿದ್ದ ಕುನ್. ಸೋವಿಯ ದನಿಯೂ ಕಿವಿಗೆ ಬಿದ್ದಾಗ ತಟ್ಟನೆ ಹೊಟ್ಟೆ ಚುರುಗುಟ್ಟುತ್ತಿರುವ ಅನುಭವ ಗಮ್ಯಕ್ಕೆ ನಿಲುಕಿದಂತಾಗಿ ದೇವ್ ಜತೆ ಕುನ್. ಸೋವಿಯ ಕಾರಿನತ್ತ ಹೆಜ್ಜೆ ಹಾಕಿದ್ದ. 

ಈ ಕೊನೆ ನಿಮಿಷದ ಸಹಯೋಗದಿಂದಾಗಿ, ಸಮಸ್ಯೆ ಪೂರ್ಣವಾಗಿ ಪರಿಹಾರ ಕಾಣದಿದ್ದರೂ ಗೊಲೈವಿನ ತನಕ ವಿಷಯವೇ ಗೊತ್ತಾಗಿರದಿದ್ದಿದ್ದರೆ ಉಂಟಾಗಬಹುದಿದ್ದ ದೊಡ್ಡ ಅನಾಹುತ, ನಿಯಂತ್ರಿಸಲಾಗದಷ್ಟು ಪ್ರಮಾಣಕ್ಕೆರದಂತೆ ತಡೆಯಲು ಸಾಧ್ಯವಾಗಿತ್ತು. ಈಗಲೂ ಕೊನೆ ನಿಮಿಷದ ಒತ್ತಡಪೂರ್ಣ ಹೋರಾಟದ ಅಗತ್ಯವಿದ್ದರೂ, ಕನಿಷ್ಠ ಆ ಯತ್ನವನ್ನು ಮಾಡಲಾದರೂ ಸಾಕಾಗುವಷ್ಟು ಅವಕಾಶ ಸಿಕ್ಕಿತ್ತು. ದೇವ್ ಇಡಿ ಪ್ರಕರಣದಲ್ಲಿ ತನ್ನ ಪ್ರೋಗ್ರಾಮಿನ ಕಾಣಿಕೆಯೂ ಸೇರಿದೆಯೆಂಬ ತಪ್ಪಿತಸ್ಥ ಭಾವ ಕೊರೆದ ಕಾರಣಕ್ಕೊ ಏನೊ, ಶೀಘ್ರ ಪರಿಹಾರಕ್ಕೆ ಸಾಧ್ಯವಿದ್ದ ಎಲ್ಲಾ ಯತ್ನ ಮಾಡತೊಡಗಿದ್ದುದು, ರಾತ್ರಿಯೂ ನಿದ್ದೆಗೆಟ್ಟಂತಿದ್ದ ಕಣ್ಣುಗಳನ್ನು ನೋಡಿದಾಗಲೆ ಗೊತ್ತಾಗುವಂತಿತ್ತು. ವೇರ್ಹೌಸಿನಲ್ಲೆ ಕೂತು ಕೆಲಸ ಮುಂದುವರೆಸಿದ ಕಾರಣದಿಂದಾದ ದೊಡ್ಡ ಅನುಕೂಲವೆಂದರೆ - ಅವನು ಮಾಡಬೇಕಿದ್ದ ಬದಲಾವಣೆಯನ್ನು ತಕ್ಷಣವೆ ಪರಿಶೀಲಿಸುವ ಅವಕಾಶ; ಅಲ್ಲಿ ಕಂಡು ಬಂದ ದೋಷಗಳನ್ನು ಅಲ್ಲೇ ತಿದ್ದಿ ಮರುಪರಿಶೀಲಿಸುವ ಸಾಧ್ಯತೆಯೂ ಜತೆ ಸೇರಿ ಮೇಲಿಂದ ಕೆಳಗೆ ಸರಿದಾಡುತ್ತ ವ್ಯಯವಾಗುತ್ತಿದ್ದ ಸಮಯವೆಲ್ಲ ಕಡಿತವಾಗಿ ಅಗತ್ಯವಿದ್ದ ಒಟ್ಟಾರೆ ಸಮಯವೂ ಕಡಿಮೆಯಾಗಿತ್ತು. ದಾಖಲೆಗಾಗಿ ವಿವರಗಳನ್ನೆಲ್ಲ ಬರೆದಿಡಬೇಕಾದ ಕೆಲಸಕ್ಕೆ ಸಮಯವಿರದಿದ್ದರೂ, ಅದನ್ನು ನಂತರ ಮಾಡಿಕೊಳ್ಳಬಹುದಾದ ಸಾಧ್ಯತೆ ಇದ್ದ ಕಾರಣ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಅದರ ಜತೆಗೆ ಮಧ್ಯವರ್ತಿಯಿರದೆ ಸಿಬ್ಬಂದಿಯ ಜತೆ ಸ್ವತಃ ನೇರ ವಹಿವಾಟಿಗಿಳಿದ ಕಾರಣ, ಎಲ್ಲ ವಿವರಗಳು ಸರಳವಾಗಿ ನೇರವಾಗಿ ಅರ್ಥವಾಗುತ್ತಿದ್ದುದಷ್ಟೆ ಅಲ್ಲದೆ ಅದರ ನೈಜ್ಯ ಬಳಕೆಯ ಸಾಧಕ ಭಾಧಕಗಳು ಕೂಡಲೆ ಗೊತ್ತಾಗುತ್ತಿತ್ತು. ಅವನ ಪ್ರೋಗ್ರಮರನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ 'ಇಷ್ಟು ಸರಳವಿರುವ ವಿಷಯಗಳನ್ನು ಯಾಕೆ ಮಧ್ಯವರ್ತಿ ಕನ್ಸಲ್ಟೆಂಟುಗಳು ಅಷ್ಟೊಂದು ಕಗ್ಗಂಟಾಗಿಸುವಂತೆ ತೋರ್ಪಡಿಸಿ ಅರೆಬರೆ ಅರ್ಥ ಮಾಡಿಸುವರಲ್ಲ?' ಎಂದು ಅಚ್ಚರಿಯೂ ಮೂಡಿತ್ತು. ಅದೇನು ಅವರ ದುರ್ಬಲ್ಯವೋ?ಅಥವಾ ತಾಂತ್ರಿಕ ರೂಪಿಗೆ ಬದಲಿಸುವಾಗ ಕಳುವಾಗಿ ಹೋಗುವ ಸರಳ ಚಿತ್ರಣವೊ? ಎಂದು ನಿಖರವಾಗಿ ನಿರ್ಧರಿಸಲಾಗಿರಲಿಲ್ಲ. ಆದರೆ ಒಂದನ್ನಂತು ಅವನ ಮನ ದೃಢವಾಗಿ ನಿರ್ಧರಿಸಿಬಿಟ್ಟಿತ್ತು - ಇನ್ನು ಮಂದೆ ಯಾವುದೆ ಪ್ರಾಜೆಕ್ಟಿನಲ್ಲಿ ಪ್ರೋಗ್ರಾಮಿಂಗಿಗೆ ಕೈ ಹಾಕುವ ಮುಂಚೆ, ಒಮ್ಮೆಯಾದರೂ ಅದರ ನೈಜ್ಯ ಬಳಕೆಯಿರುವ ಕಡೆ, ಮತ್ತು ಅದರ ನಿಜ ಬಳಕೆದಾರರ ಜತೆ ಭೇಟಿಮಾಡಿ ವಾಸ್ತವ ವಾತಾವರಣದ ಪರಿಚಯ ಮಾಡಿಕೊಳ್ಳಬೇಕೆಂದು. ಬರಿಯ ತಾಂತ್ರಿಕ ವಾತಾವರಣದಲ್ಲಿ ತಂತ್ರಾಂಶದ ಗಾಳಿಗೋಪುರಗಳನ್ನು ಮಾತ್ರ ಕಟ್ಟಿಯಷ್ಟೆ ಅಭ್ಯಾಸವಿದ್ದವನಿಗೆ ಇದೊಂದು ಸುಗಂಧಪೂರಿತ ತಂಗಾಳಿಯಂತಹ ಆಹ್ಲಾದಕರ ಅನುಭವದಂತೆ ಭಾಸವಾಗತೊಡಗಿತ್ತು. ಅದರ ಜತೆಯಲ್ಲೇ ಶ್ರೀನಾಥನತ್ತ ಅದುವರೆವಿಗೂ ಇದ್ದ ಕೋಪದ ಭಾವ ಮಾಯವಾಗಿ, ಕೊನೆಗಳಿಗೆಯಲ್ಲಿ ಪತ್ತೆದಾರನಂತೆ ಈ ಪ್ರಮುಖ ಸಮಸ್ಯೆಯನ್ನು ಅನಾವರಣಗೊಳಿಸಿದ ಸಾಮರ್ಥ್ಯದ ಕುರಿತ ಮೆಚ್ಚುಗೆಯ ತೆಳು ಆರಾಧನ ಭಾವವಾಗಿ ಪರಿವರ್ತಿತವಾಗತೊಡಗಿತ್ತು. ಆ ಭಾವವೆ ವೇಗವರ್ಧಕ ಪ್ರಚೋದಕದಂತೆ ಕೆಲಸ ಮಾಡಿ, ಹೇಗಾದರೂ ಸರಿ ಅವನಿಂದಲೆ 'ಸೈ' ಅನಿಸಿಕೊಳ್ಳಬೇಕೆಂಬ ಉತ್ಸಾಹದಿಂದ ತನ್ನೆಲ್ಲ ತಿಳುವಳಿಕೆ, ಶ್ರದ್ದೆಗಳನ್ನು ಪಣವಾಗಿಟ್ಟು ಕೆಲಸ ಮಾಡಲು ಪ್ರೇರೇಪಿಸಿತ್ತು. ಆ ಮನೋಭಾವದ ಅಂತರ್ಗತ ಅಪ್ರಕಟಿತ ಕಸುವು ಅವನ ಅಂಗಿಕಾನುನಯದಲ್ಲು ಅವನರಿವಿಲ್ಲದೆ ವ್ಯಕ್ತವಾಗತೊಡಗಿ, ಆಗೀಗೊಮ್ಮೊಮ್ಮೆ ಶ್ರೀನಾಥನ ಗಮನಕ್ಕೂ ಬರುವಂತಾಗಿತ್ತು. 

ವೇರ್ಹೌಸಿನಲ್ಲಿ ಆಫೀಸಿನ ಜಾಗ ಚಿಕ್ಕದಾಗಿದ್ದರೂ ಒಂದು ವಾರದ ಮಟ್ಟಿಗೆ ಕೂರಲು ಅನುಕೂಲವಾಗುವಂತೆ ತನ್ನ ಆಸನದ ಹತ್ತಿರವೆ ಮತ್ತೊಂದು ಟೇಬಲ್ ಹಾಕಿಸಿದ್ದ ಕುನ್. ಸೋವಿ. ಅಲ್ಲಿ ಇಕ್ಕಟ್ಟಾಗುವುದೆಂದು ಗೊತ್ತಿದ್ದ ದೇವ್ ಹೊರಗೆ ಪ್ರಿಂಟರಿನ ಹತ್ತಿರದ ಜಾಗದಲ್ಲಿಯೆ ಒಂದು ಆಸನ ಹಿಡಿದು ಕೂತಿದ್ದ. ಇದು ಒಂದು ರೀತಿ ಅವನ ಟೆಸ್ಟಿಂಗಿಗೂ ಅನುಕೂಲವಾಗಿತ್ತು. ಹೀಗಾಗಿ ಶ್ರೀನಾಥ ಕುನ್. ಸೋವಿಯ ಕೆಲಸವನ್ನು ಬಲು ಹತ್ತಿರದಿಂದ ನೋಡಬಹುದಿತ್ತು. ಆ ದಿನಗಳಲ್ಲಿ ಕೆಲಸದ ಒತ್ತಡವೂ ಹೆಚ್ಚಿದ್ದ ಕಾರಣ ಅವನು ಯಾವಾಗಲೂ ಬಿಜಿಯಾಗಿಯೆ ಇರುವುದು ಕಾಣುತ್ತಿತ್ತು. ಸದಾಸರ್ವದಾ ಯಾವುದಾದರೊಂದು ಪೋನ್ ಕರೆಯಲ್ಲಿ ಮುಳುಗಿ ನಡುನಡುವೆ ಸಿಕ್ಕ ಸಮಯದಲ್ಲೆ ಕಂಪ್ಯೂಟರಿನಲ್ಲಿ ಮೆಯಿಲ್ ಚೆಕ್ ಮಾಡುತ್ತಲೊ ಅಥವಾ ವೇರ್ಹೌಸಿನೊಳಗೆದ್ದು ಓಡಾಡುತ್ತಲೊ ಇರುತ್ತಿದ್ದವನು, ಮಧ್ಯೆಯಲ್ಲಿ ಹೇಗೊ ಸಮಯ ಹೊಂದಿಸಿಕೊಂಡು ಸಿಗರೇಟು ಸೇದಿ ಬರಲು ಹೊರಗೆದ್ದು ಹೋಗುತ್ತಿದ್ದ. ಅವನ ದಿನಚರಿಯನ್ನು ನೋಡುತ್ತಲೆ ಶ್ರೀನಾಥನಿಗೂ ವ್ಯಸನವಾಗುತ್ತಿತ್ತು - ಅಲ್ಲಿನ ಕಾರ್ಯಶೈಲಿ, ಒತ್ತಡಗಳ ನಡುವೆ ಕೆಲಸ ಮಾಡುವ ಅಲ್ಲಿನ ಜನರ ಪರಿ ಕಂಡು. ಆದರೆ ಸರಿ ಸುಮಾರು ಎಲ್ಲಾ ವೇರ್ಹೌಸಿನಲ್ಲೂ ಇದೆ ರೀತಿಯ ಹಣೆಬರಹ ಕಂಡಿದ್ದವನಿಗೆ ತೀರಾ ಅಚ್ಚರಿಯೂ ಆಗಿರಲಿಲ್ಲ. ಸದಾ ಸತತ ಕಾರ್ಯನಿರತನಾಗಿರುವ ಕಾರಣದಿಂದಲೊ ಏನೊ, ಯಾರೊಡನೆ ಏನೊ ಮಾತಾಡುವ ಹೊತ್ತಲ್ಲೂ ಒಳಗೇನೊ ಇನ್ನಾವುದೊ ಚಿಂತೆ ಭಾಧಿಸುತ್ತಿರುವಂತೆ ಅವನ ಹಣೆ ನೆರಿಗೆಗಟ್ಟಿರುತ್ತಿತ್ತು; ಒಂದು ಕೈ ಪೋನ್ ಹಿಡಿದಿದ್ದರೆ ಮತ್ತೊಂದು ಮೊಣ ಕೈ ಟೇಬಲ್ಲಿನ ಮೇಲೆ ಆಧಾರವಾಗಿ ಮಾಡಿಸಿಕೊಂಡು ಕುಳಿತು, ಹಸ್ತದ ಬೆರಳುಗಳು ತಲೆಯ ಕೂದಲನ್ನು ಅಪ್ಪಿ ಹಿಡಿದು ಕೂತಿರುತ್ತಿದ್ದವು - ಪ್ರಪಂಚವೆ ತಲೆಯ ಮೇಲೆ ಬಿದ್ದಂತೆ. ಮೊದಮೊದಲು ಅವನೇನೊ ಚಿಂತೆಯಲ್ಲಿ ಭಾಧಿತನಾಗಿರುವಂತೆ ಅನಿಸಿದರೂ ಬಹುಶಃ ಅವನ ಸಹಜ ವ್ಯಕ್ತಿತ್ವ ಇರುವುದೆ ಹಾಗೆಂದುಕೊಂಡು ಸುಮ್ಮನಾಗಿದ್ದ ಶ್ರೀನಾಥ. ಆದರೆ ಸ್ವಲ್ಪ ನೋಡಿ ನೋಡಿ ಪಳಗುತ್ತಿದ್ದಂತೆ, ಅವನ ಭಾಧಿತ ವ್ಯಕ್ತಿತ್ವ ಪ್ರಕಟವಾಗುವ ಸಂಧರ್ಭ ಮತ್ತು ವಿಧಾನದಲ್ಲಿ ಒಂದು ನಮೂನೆ ಕಾಣಿಸಿಕೊಂಡಂತಾಗಿ ತುಸು ಆಳವಾಗಿ ಗಮನಿಸತೊಡಗಿದಾಗ, ಆ ಭಾಧೆಗೊಂದು ಖಡಾಖಂಡಿತ ಹಿನ್ನಲೆಯಿರಬಹುದೆಂದು ಖಚಿತವಾಗಿ ಅನಿಸತೊಡಗಿತ್ತು. ಅವನ ಆ ಚಿಂತಾಕ್ರಾಂತ ಮುಖಭಾವ ಪ್ರಕಟವಾಗುವ ಹೊತ್ತಿಗೆ ಮುಂಚೆ ಪ್ರತಿಬಾರಿಯೂ ಅವನಿಗೆ ಯಾವುದೊ ಖಾಸಗಿ ಕರೆಯೊಂದು ಬರುವುದನ್ನು ಗಮನಿಸಿತ್ತು ಶ್ರೀನಾಥನ ಚುರುಕು ಕಣ್ಣು. ಆ ಕರೆ ಬಂದಾಗೆಲ್ಲ ಇದ್ದಕ್ಕಿದ್ದಂತೆ ಅವನ ಮುಖಚಹರೆ ಬದಲಾಗುತ್ತಿದ್ದುದು ಮಾತ್ರವಲ್ಲದೆ, ಸಾಮಾನ್ಯವಾಗಿ ಜೋರಾಗಿ ಮಾತಾಡುವ ಸ್ವಭಾವದ ಅವನು, ಏಕಾಏಕಿ ಕುಗ್ಗಿದ ದನಿಯಲ್ಲಿ ಪಿಸುಗುಟ್ಟುತ್ತ ಮಾತಾಡುವುದು ಸಹ ಗಮನಕ್ಕೆ ಬಂದಿತ್ತು. ಭಾಷೆಯ ತೊಡಕಿಂದಾಗಿ ಮಾತೇನೆಂದು ಅರ್ಥವಾಗದಿದ್ದರೂ, ಆಂಗಿಕ ಭಾವಗಳಿಂದಾಗಿ ಯಾವುದೊ ಸಂಕಷ್ಟದಲ್ಲಿ ಸಿಕ್ಕಿಬಿದ್ದವರು ಮಾತನಾಡುವಂತೆ ಅನಿಸತೊಡಗಿತ್ತು. ಆ ಕರೆ ಮುಗಿಯುತ್ತಿದ್ದಂತೆ ಮತ್ತೆ ಮಾಮೂಲಿ ವ್ಯಕ್ತಿಯಾಗಿ ಬದಲಾದರೂ, ಮತ್ತೆ ಕೆಲ ಹೊತ್ತಿನ ತರುವಾಯ ಅದೆ ಕರೆ ಬಂದಂತೆ ಮತ್ತದೆ ಅಂಗಿಕ ಭಾವ ಪ್ರಕಟವಾಗುತ್ತಿತ್ತು. ಪದೆಪದೆ ಬರುತ್ತಿದ್ದ ಆ ಕರೆಯ ತರಹ ನೋಡಿದರೆ ಒಂದೊ ಯಾರಾದರೂ ಅವನ ತೀರಾ ಸಮೀಪವರ್ತಿಗಳು ಎಡಬಿಡದೆ ಕಾಲ್ ಮಾಡಲೆತ್ನಿಸುತ್ತಿರಬೇಕು ಅನಿಸುತ್ತಿತ್ತು ; ಅಥವಾ ಯಾವುದಾದರೂ 'ಸಂಬಂಧದ' ತೊಡಕಲ್ಲಿ ಸಿಲುಕಿಕೊಂಡಿರಬೇಕು ಎನ್ನುವ 'ಗುಮಾನಿ' ಅನಿಸಿಕೆಯೂ ಬರುತ್ತಿತ್ತು. ತನ್ನಾಲೋಚನೆಗೆ ತಾನೆ ನಕ್ಕು, ಅವನ ವೈಯಕ್ತಿಕ ವಿಷಯದ ಉಸಾಬರಿ ತನಗೇಕೆಂದು ನಿರ್ಲಕ್ಷಿಸಲು ಯತ್ನಿಸಿದರೂ, ಅದರ ನಿಜವಾದ ತೀವ್ರತೆಯ ಅರಿವಾಗಿದ್ದು 'ಗೋ-ನೋಗೋ' ಮೀಟಿಂಗಿಗೆ ಪೂರ್ವಸಿದ್ದತೆ ನಡೆಸಲು, ಅವನೊಡನೆ ಮೀಟಿಂಗೊಂದರಲ್ಲಿ ಕೂತಾಗಲೆ. ನೆಟ್ಟಗೆ ಹತ್ತು ನಿಮಿಷವೂ ಮಾತನಾಡಲು ಬಿಡದಂತೆ ಆ ನಿಗೂಢ ಕರೆ ಮತ್ತೆ ಮತ್ತೆ ಬರತೊಡಗಿ, ಕೊನೆಗೆ ಅವನಿಗೆ ಭರಿಸಲಾಗದಂತಾಗಿ ಮೀಟಿಂಗನ್ನು ಮುಂದೂಡಿಸಿಕೊಂಡಿದ್ದ. ಆ ಪ್ರಕರಣವಾದ ನಂತರ ಕುನ್. ಸೋವಿ ಏನೊ ಸಮಸ್ಯೆಯಲ್ಲಿ ಸಿಕ್ಕಿ ಬಿದ್ದಿರುವುದು ಖಚಿತವಾದಂತಾಗಿ ಶ್ರೀನಾಥನಿಗೂ ತುಸು ಆತಂಕವಾಗತೊಡಗಿತ್ತು. ಗೋಲೈವ್ ಹೊತ್ತಿನಲ್ಲಿ ಅವನ ಮನಸ್ಥಿತಿ ಸರಿಯಿರದಿದ್ದರೆ ಎಲ್ಲಾ ಸುಗಮವಾಗಿ ನಡೆಯುವುದು ಅಸಾಧ್ಯ. ಆ ಮನಸ್ಥಿತಿಯಲ್ಲಿ ಯಾವುದೇ ಕೋರಿಕೆ ಮುಂದಿಟ್ಟರು ಮನಃಪೂರ್ವಕ ಸಿಗುವುದಿಲ್ಲ. ಆ ಕಾರಣದಿಂದಾದರೂ ಅವನ ಜತೆಗೊಮ್ಮೆ ಔಪಚಾರಿಕವಾಗಿ ಮಾತನಾಡಿ, ಸಂಧರ್ಭ ನಿರಾಳವಾಗಿಸಲು ಏನಾದರೂ ಸಹಾಯ ಮಾಡುವ ಸಾಧ್ಯತೆಯಿದೆಯೆ ಎಂದು ವಿಚಾರಿಸಿಕೊಳ್ಳಲು ನಿರ್ಧರಿಸಿದ್ದ ಶ್ರೀನಾಥ - ಆ ವಿಷಯ ಪ್ರಾಜೆಕ್ಟಿಗೆ ಮತ್ತೆ ತನಗೆ ನೇರ ಸಂಬಂಧಿಸಿರದಿದ್ದರೂ ಸಹ.

ಆ ದಿನ ಲಂಚಿಗೆ ಹೋದಾಗ ದೇವ್ ಜತೆ ಬಂದಿರಲಿಲ್ಲವಾಗಿ ಆ ಕುರಿತು ಮಾತನಾಡುವ ಅವಕಾಶವೂ ತಾನಾಗಿಯೇ ಒದಗಿಬಂದಿತ್ತು. ಆದರೂ ಸೂಕ್ಷ್ಮ ವಿಚಾರವಾದ ಕಾರಣ ತುಸು ಎಚ್ಚರದಿಂದ ನಿಭಾಯಿಸಬೇಕಿತ್ತು. ಅದೃಷ್ಟಕ್ಕೆ ಕುನ್. ಸೋವಿ ಸರಳ ಸ್ವಭಾವದ ನೇರ ಮಾತಿನ ಆಸಾಮಿಯಾದ ಕಾರಣ ತೀರಾ ಗಾಬರಿ ಬೀಳುವಂತೇನೂ ಇರಲಿಲ್ಲ. ಅಲ್ಲದೆ ಪ್ರಾಜೆಕ್ಟಿನ ಹಿತಾಸಕ್ತಿಯೂ ಪರೋಕ್ಷವಾಗಿ ಸೇರಿದ್ದ ಕಾರಣವಾಗಿ ಇನ್ನು ಹೆಚ್ಚಿನ ಧೈರ್ಯವುಂಟಾದಂತಾಗಿತ್ತು. ಆ ಚಿಂತನೆಯ ಅಳುಕಿನಲ್ಲೆ, ಏನಾದರೂ ತೊಡಕು ಕಾಡಿದಂತಿದೆಯಲ್ಲ? ಯಾಕೆ ಚಿಂತಿತನಾಗಿರುವನೆಂದು ಪ್ರಶ್ನಿಸಿದ್ದ. ಹಾಗೆಯೇ ಧೈರ್ಯ ತುಂಬುವ ದನಿಯಲ್ಲಿ, ತನ್ನಿಂದ ಏನಾದರೂ ಸಹಾಯವಾಗುವಂತಿದ್ದರೆ ಖಂಡಿತ ಮಾಡಲು ಸಿದ್ದವಾಗಿರುವುದಾಗಿ ಹೇಳುತ್ತಲೇ, ಹಾಗೇನಾದರೂ ಬೇಕಿದ್ದಲ್ಲಿ ನಿಸ್ಸಂಕೋಚವಾಗಿ ಕೇಳುವಂತೆ ಸಲಹೆ ನೀಡಿದ್ದ. ಮೊದಮೊದಲು ಹಿಂಜರಿದಂತೆ ಕಂಡರೂ ಒತ್ತಾಯಪೂರ್ವಕ ಆದರದ ಮಾತಿಗೆ ಕಡೆಗೂ ಸೋತವನಂತೆ ಕಂಡ ಕುನ್. ಸೋವಿ, ಆಕಸ್ಮಿಕವಾಗಿ ಅವನಿಗೊದಗಿರುವ ಹಣದ ತೊಡಕನ್ನು ಕುರಿತು ಹೇಳಿಕೊಂಡಿದ್ದ. ಆದರೆ ಅದು ಯಾವ ಕಾರಣದಿಂದ , ಯಾವ ಮೂಲದಿಂದ ಬಂದ ತೊಡಕು ಎಂದು ಹೇಳಿಕೊಳ್ಳಲಿಲ್ಲ. ಅದನ್ನು ಕೇಳುವುದು ಕೂಡ ಉಚಿತವಲ್ಲದ ಕಾರಣ, ಅದನ್ನು ಬದಿಗಿಟ್ಟು ಎಷ್ಟು ಹಣ ಬೇಕಿತ್ತೆಂದು ಕೇಳಿದ್ದ ಶ್ರೀನಾಥ. ಆದರೇಕೊ ಕುನ್. ಸೋವಿ ಅವನ ಬಳಿ ಹಣ ತೆಗೆದುಕೊಳ್ಳಲು ಒಪ್ಪದೆ ನಿರಾಕರಿಸಿದ್ದ. ಇದು ಸ್ನೇಹದ ಲೆಕ್ಕಾಚಾರದಲ್ಲಿ, ವೈಯಕ್ತಿಕವಾಗಿ ನಡೆಯುವ ವ್ಯವಹಾರವೇ ಹೊರತು ಪ್ರಾಜೆಕ್ಟಿನ ಕೆಲಸಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂದು ವಿವರಿಸಿ ಹೇಳಿದರೂ ಅವನಿಗೆ ಸಾಅತವಾದಂತೆ ಕಾಣಲಿಲ್ಲ. ಕಡೇಗೇನೇನೊ ಸರ್ಕಸ್ ಮಾಡಿ ಅವನಿಗೆ ಅಗತ್ಯವಿದ್ದುದು ಒಂದೈದು ಸಾವಿರ ಬಾತುಗಳಷ್ಟೆ ಎಂದರಿತಾಗ 'ಅರೆ, ಇಷ್ಟು ಸಣ್ಣ ಮೊತ್ತಕ್ಕೂ ಇಷ್ಟೊಂದು ಹೆಣಗಾಡಬೇಕೆ ಇಲ್ಲಿನ ಜನ?' ಎಂದು ಅಚ್ಚರಿ ಪಡುತ್ತಲೆ, ಬೇಕಿದ್ದರೆ ಅರ್ಜೆಂಟಿಗೆ ತಾನು ಸಾಲದ ರೂಪದಲ್ಲಿ ಕೊಟ್ಟಿರಬಲ್ಲೆನೆಂದು, ಅನುಕೂಲವಾದಾಗ ಹಿಂದಿರುಗಿಸಿದರೆ ಸಾಕೆಂದು ಪರಿಹಾರದ ದಾರಿ ತೋರಿದಾಗ ಕಡೆಗೆ ಅನುಮಾನಿಸುತ್ತಲೆ,  ಅರೆಮನಸಿನಿಂದಲೆ ಒಪ್ಪಿಕೊಂಡಿದ್ದ - ಹಿಂದಕ್ಕೆ ಪಡೆಯಲೇಬೇಕೆಂಬ ಷರತ್ತನ್ನು ವಿಧಿಸುತ್ತ. ಅದು ಮತ್ತೆ ವಾಪಸ್ಸು ಬರುವುದೋ, ಬಿಡುವುದೋ ಎನ್ನುವುದಕ್ಕಿಂತ ಹೀಗಾಗಿಯಾದರೂ ಅವನ ಆತಂಕ ಕಡಿಮೆಯಾಗಿ, ಕೆಲಸದತ್ತ ಮತ್ತು ಪ್ರಾಜೆಕ್ಟಿನತ್ತ ಸೂಕ್ತರೂಪದಲ್ಲಿ ಗಮನ ಹರಿಸಿ ಗೋಲೈವ್ ನಿರಾಳವಾಗಿಸುತ್ತಾನೆಂಬ ಭರವಸೆ ಮೂಡಿತ್ತು. ಆ ಗಳಿಗೆ ಮೀರಿದರೆ ಮತ್ತೆಲ್ಲಿ ಮನಸು ಬದಲಾಗಿಬಿಡುವುದೊ ಅನಿಸಿ, ಲಂಚಿನ ನಂತರ ಅಲ್ಲೇ ಹತ್ತಿರವಿದ್ದ ಏಟಿಎಮ್ ಒಂದರಲ್ಲಿ ಐದು ಸಾವಿರ ಬಾತ್ ಡ್ರಾ ಮಾಡಿ ಅವನ ಕೈಗಿತ್ತಿದ್ದ. ಆ ನಂತರದ ಇಡಿ ಮಧ್ಯಾಹ್ನ ಮೊದಲಿದ್ದ ಆತಂಕವೆಲ್ಲ ಮಾಯವಾಗಿ ಬರಿಯ ಹಸನ್ಮುಖೀ ಕುನ್. ಸೋವಿಯ ಚಿತ್ರ ಕಣ್ಣು ಕಟ್ಟಿದಾಗ, ' ಸದ್ಯಕ್ಕಂತೂ ಪ್ರಾಜೆಕ್ಟ್ ಪರೋಕ್ಷ ಆತಂಕ ತಪ್ಪಿತಲ್ಲಾ' ಎಂದು ಧೀರ್ಘ ನಿಟ್ಟುಸಿರು ಬಿಟ್ಟಿದ್ದ ಶ್ರೀನಾಥ. 

ಶ್ರೀನಾಥನ ಒಂದು ವಿಶಿಷ್ಠತೆಯೆಂದರೆ ಕೆಲಸಕ್ಕೆ ನೇರವಾಗಿ ಸಂಬಂಧಿಸಿರದ ಮಾನಸಿಕ ಸ್ತರದ ವೈಯಕ್ತಿಕ ತುಮುಲಗಳು ಆ ವ್ಯಕ್ತಿಗರಿವಿಲ್ಲದಂತೆಯೆ ಆತನ ಪ್ರಕ್ರಿಯೆಗಳಲ್ಲಿ ಪ್ರಕಟವಾಗುವ ಕುರಿತಾದ ಅರಿವಿನ ಪ್ರಜ್ಞೆ. ಅದು ವ್ಯಕ್ತಿಗತವಾದ ವಿಷಯವೆಂದು ನಿರ್ಲಕ್ಷಿಸಿ ಬದಿಗೆ ಸರಿಸುವ ಬದಲು  ಯಾವ ರೀತಿಯಲ್ಲಾದರೂ ಅದರ ಪರಿಹಾರ ಸಾಧ್ಯವಾಗುವುದಾದರೆ ಅದನ್ನು ಕಾರ್ಯಗತಗೊಳಿಸಲೆತ್ನಿಸುವ ಅವನ ಶೈಲಿಯಿಂದ ಸಾಕಷ್ಟು ಬಾರಿ ಪ್ರಯೋಜನವಾಗಿತ್ತು. ಕೆಲವೊಮ್ಮೆ ದುರುಪಯೋಗಪಡಿಸಿಕೊಂಡವರ ಉದಾಹರಣೆಯೂ ಇತ್ತು. ಆದರೆ ಕಾರ್ಯ ಕ್ಷೇತ್ರದ ಪರಿಧಿ ಮೀರಿ ಕೈ ಚಾಚುವ ಈ ಸ್ವಭಾವ ಒಂದು ರೀತಿಯ ಭಾವನಾತ್ಮಕ ಸ್ತರದಲ್ಲಿನ ಅವ್ಯಕ್ತ ಭಾಂಧವ್ಯವನ್ನು ಪ್ರೇರೇಪಿಸಿ ಅವನ ಗಮ್ಯದತ್ತ ನಡೆಸುವ ಕೆಲಸವನ್ನು ಸುಗಮವಾಗಿಸುತ್ತಿತ್ತು. ಇದರಿಂದಾಗಿಯೆ ಕುನ್. ಸೋವಿಯ ವಿಷಯದಲ್ಲೂ ಅವನ ತಳಮಳಕ್ಕೆ ಪರಿಹಾರ ಹುಡುಕುವ ಆಯಾಚಿತತೆ ಸಹಜವಾಗಿ ಬಂದಿತ್ತು. ಕೊಟ್ಟ ಹಣ ವಾಪಸ್ಸು ಬರುವುದೋ ಬಿಡುವುದೋ ಎನ್ನುವ ಪ್ರಶ್ನೆ ಕೂಡ ಮನದಲ್ಲಿ ಉದಿಸದೆ 'ತಾನು ಎಷ್ಟೊ ಕಡೆ ಮಾಡುವ ದಾನದಲ್ಲಿ ಇದೂ ಒಂದು' ಎನ್ನುವ ಮನೋಭಾವದಲ್ಲಿ ಕೊಟ್ಟುಬಿಡುತ್ತಿದ್ದ. ಅದು ಮಾತ್ರವಲ್ಲದೆ, ಆ ವ್ಯಕ್ತಿಗಳಿಗೆ ಆ ಕೃತಜ್ಞತಾ ಭಾವನೆ ಉರುಳಾಗದ ರೀತಿ ಇರಿಸಲು ನಿಷ್ಪಕ್ಷಪಾತವಾಗಿ ಆದಷ್ಟು ದೂರವಿರಲೂ ಯತ್ನಿಸುತ್ತಿದ್ದ. ಒಂದೆಡೆ ಪರಿಮಿತ ಸೀಮೆಯ ಎಲ್ಲೆ, ಗಡಿ ಮೀರಿ ಸಹಾಯ ಹಸ್ತ ಚಾಚುವ ಪರಿ, ಮಿಕ್ಕ ಸಮಯ ನಿರ್ಲಿಪ್ತನಂತೆ ದೂರವಿರುವ ತರಹ - ಎರಡು ಒಂದೆ ನಾಣ್ಯದ ಎರಡು ಮುಖಗಳಾಗಿ ಕಾಣಿಸದೆ ದ್ವಂದ್ವದ ವಿಪರ್ಯಾಸದಂತೆ ಅವನಿಗೆ ಅನಿಸಿತ್ತು ಅದೆಷ್ಟೊ ಬಾರಿ. ಆದರೆ ಆ ಪ್ರಕ್ರಿಯೆಗಳ ಫಲಾಫಲಗಳ ಕುರಿತು ತಲೆಕೆಡಿಸಿಕೊಳ್ಳದೆ ನಿರೀಕ್ಷಿತ ಫಲ ಕೊಟ್ಟರೆ ನಿರಾಳತೆಯಿಂದ, ವಿಫಲವಾದರೆ ಮುಂದೇನು ಎಂದು ಚಿಂತಿಸುವ ಸಮಯೋಚಿತತೆಯಿಂದ ಮುಂದುವರೆಯುವ ಅವನ ಸ್ವಭಾವವೆ ಅವನ ವೃತ್ತಿ ಜೀವನದ ಯಶಸ್ಸಿನ ಪ್ರೇರಕ ಶಕ್ತಿಯಾಗಿತ್ತೆನ್ನುವುದು ಅಷ್ಟೆ ನಿಜವಾಗಿತ್ತು. ಈ ಬಾರಿಯೂ ಸಂದಿಗ್ದ ಸ್ಥಿತಿಯಲ್ಲಿ ವಿಚಲಿತ ಮನಸ್ಥಿತಿ ಮಾಡಬಹುದಾದ ಅನಾಹುತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೆ ಕುನ್. ಸೋವಿಯ ತೊಳಲಾಟದತ್ತ ಗಮನ ಹರಿಸಿದ್ದ. ಈ ಹೊತ್ತಿನಲ್ಲಿ ಅವನ ಮನಸ್ಥಿತಿ ನಿರಾಳವಾಗಿದ್ದಷ್ಟು ಪ್ರಾಜೆಕ್ಟಿನ ಗೋಲೈವಿಗೆ ಬಲವೆನ್ನುವ ಚಾಣಾಕ್ಷ್ಯ ತಿಳುವಳಿಕೆ ಅದರ ಮೂಲ ಪ್ರೇರಣೆಯೂ ಆಗಿತ್ತು. 

ಶ್ರೀನಾಥನ ಒಂದು ವಿಶಿಷ್ಠತೆಯೆಂದರೆ ಕೆಲಸಕ್ಕೆ ನೇರವಾಗಿ ಸಂಬಂಧಿಸಿರದ ಮಾನಸಿಕ ಸ್ತರದ ವೈಯಕ್ತಿಕ ತುಮುಲಗಳು ಆ ವ್ಯಕ್ತಿಗರಿವಿಲ್ಲದಂತೆಯೆ ಆತನ ಪ್ರಕ್ರಿಯೆಗಳಲ್ಲಿ ಪ್ರಕಟವಾಗುವ ಕುರಿತಾದ ಅರಿವಿನ ಪ್ರಜ್ಞೆ. ಅದು ವ್ಯಕ್ತಿಗತವಾದ ವಿಷಯವೆಂದು ನಿರ್ಲಕ್ಷಿಸಿ ಬದಿಗೆ ಸರಿಸುವ ಬದಲು  ಯಾವ ರೀತಿಯಲ್ಲಾದರೂ ಅದರ ಪರಿಹಾರ ಸಾಧ್ಯವಾಗುವುದಾದರೆ ಅದನ್ನು ಕಾರ್ಯಗತಗೊಳಿಸಲೆತ್ನಿಸುವ ಅವನ ಶೈಲಿಯಿಂದ ಸಾಕಷ್ಟು ಬಾರಿ ಪ್ರಯೋಜನವಾಗಿತ್ತು. ಕೆಲವೊಮ್ಮೆ ದುರುಪಯೋಗಪಡಿಸಿಕೊಂಡವರ ಉದಾಹರಣೆಯೂ ಇತ್ತು. ಆದರೆ ಕಾರ್ಯ ಕ್ಷೇತ್ರದ ಪರಿಧಿ ಮೀರಿ ಕೈ ಚಾಚುವ ಈ ಸ್ವಭಾವ ಒಂದು ರೀತಿಯ ಭಾವನಾತ್ಮಕ ಸ್ತರದಲ್ಲಿನ ಅವ್ಯಕ್ತ ಭಾಂಧವ್ಯವನ್ನು ಪ್ರೇರೇಪಿಸಿ ಅವನ ಗಮ್ಯದತ್ತ ನಡೆಸುವ ಕೆಲಸವನ್ನು ಮತ್ತಷ್ಟು ಸುಗಮವಾಗಿಸುತ್ತಿತ್ತು. ಇದರಿಂದಾಗಿಯೆ ಕುನ್. ಸೋವಿಯ ವಿಷಯದಲ್ಲೂ ಅವನ ತಳಮಳಕ್ಕೆ ಪರಿಹಾರ ಹುಡುಕುವ ಆಯಾಚಿತತೆ ಸಹಜವಾಗಿ ಬಂದಿತ್ತು. ಕೊಟ್ಟ ಹಣ ವಾಪಸ್ಸು ಬರುವುದೋ ಬಿಡುವುದೋ ಎನ್ನುವ ಪ್ರಶ್ನೆ ಕೂಡ ಮನದಲ್ಲಿ ಉದಿಸದೆ 'ತಾನು ಎಷ್ಟೊ ಕಡೆ ಮಾಡುವ ದಾನದಲ್ಲಿ ಇದೂ ಒಂದು' ಎನ್ನುವ ಮನೋಭಾವದಲ್ಲಿ ಕೊಟ್ಟುಬಿಡುತ್ತಿದ್ದ. ಅದು ಮಾತ್ರವಲ್ಲದೆ, ಆ ವ್ಯಕ್ತಿಗಳಿಗೆ ಆ ಕೃತಜ್ಞತಾ ಭಾವನೆ ಉರುಳಾಗದ ರೀತಿ ಇರಿಸಲು ನಿಷ್ಪಕ್ಷಪಾತವಾಗಿ ಆದಷ್ಟು ದೂರವಿರಲೂ ಯತ್ನಿಸುತ್ತಿದ್ದ. ಒಂದೆಡೆ ಪರಿಮಿತ ಸೀಮೆಯ ಎಲ್ಲೆ, ಗಡಿ ಮೀರಿ ಸಹಾಯ ಹಸ್ತ ಚಾಚುವ ಪರಿ, ಮಿಕ್ಕ ಸಮಯ ನಿರ್ಲಿಪ್ತನಂತೆ ದೂರವಿರುವ ತರಹ - ಎರಡು ಒಂದೆ ನಾಣ್ಯದ ಎರಡು ಮುಖಗಳಾಗಿ ಕಾಣಿಸದೆ ದ್ವಂದ್ವದ ವಿಪರ್ಯಾಸದಂತೆ ಅವನಿಗೆ ಅನಿಸಿತ್ತು ಅದೆಷ್ಟೊ ಬಾರಿ. ಆದರೆ ಆ ಪ್ರಕ್ರಿಯೆಗಳ ಫಲಾಫಲಗಳ ಕುರಿತು ತಲೆಕೆಡಿಸಿಕೊಳ್ಳದೆ ನಿರೀಕ್ಷಿತ ಫಲ ಕೊಟ್ಟರೆ ನಿರಾಳತೆಯಿಂದ, ವಿಫಲವಾದರೆ ಮುಂದೇನು ಎಂದು ಚಿಂತಿಸುವ ಸಮಯೋಚಿತತೆಯಿಂದ ಮುಂದುವರೆಯುವ ಅವನ ಸ್ವಭಾವವೆ ಅವನ ವೃತ್ತಿ ಜೀವನದ ಯಶಸ್ಸಿನ ಪ್ರೇರಕ ಶಕ್ತಿಯಾಗಿತ್ತೆನ್ನುವುದು ಅಷ್ಟೆ ನಿಜವಾಗಿತ್ತು. ಈ ಬಾರಿಯೂ ಸಂದಿಗ್ದ ಸ್ಥಿತಿಯಲ್ಲಿ ವಿಚಲಿತ ಮನಸ್ಥಿತಿ ಮಾಡಬಹುದಾದ ಅನಾಹುತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೆ ಕುನ್. ಸೋವಿಯ ತೊಳಲಾಟದತ್ತ ಗಮನ ಹರಿಸಿದ್ದ. ಈ ಹೊತ್ತಿನಲ್ಲಿ ಅವನ ಮನಸ್ಥಿತಿ ನಿರಾಳವಾಗಿದ್ದಷ್ಟು ಪ್ರಾಜೆಕ್ಟಿನ ಗೋಲೈವಿಗೆ ಬಲವೆನ್ನುವ ಚಾಣಾಕ್ಷ್ಯ ತಿಳುವಳಿಕೆ ಅದರ ಮೂಲ ಪ್ರೇರಣೆಯೂ ಆಗಿತ್ತು. 

ಆದರೆ ಅಷ್ಟೆಲ್ಲ ವಿಶ್ವಾಸದಿಂದ ಆ ಸಿದ್ದಾಂತವನ್ನನುಕರಿಸುವ ಶ್ರೀನಾಥನಿಗೂ ಆಶ್ಚರ್ಯವಾಗುವಂತಹ ಫಲಿತಾಂಶಗಳು ಕ್ಷಿಪ್ರ ಗತಿಯಲ್ಲಿ ಕಾಣಿಸಿಕೊಂಡಾಗ ಇದೇನು ತನ್ನ ಮನೋಭಾವಕ್ಕೆ ಸಿಕ್ಕ ಸಮ್ಮತಿಯ ಮುದ್ರೆಯೊ ಅಥವಾ ಕಾಕತಾಳೀಯತೆಯೊ ಗೊತ್ತಾಗಿರಲಿಲ್ಲ; ಅಥವಾ ಕೊರೆಯುತ್ತಿದ್ದ ಸಮಸ್ಯೆಯ ಪರಿಹಾರದಿಂದ ನಿರಾಳಗೊಂಡು ಚುರುಕಿನ ಗತಿಯಲ್ಲಿ ಕೆಲಸ ಮಾಡಲಾರಂಭಿಸಿದ ಕುನ್. ಸೋವಿಯ ಮೆದುಳಿನ ಚಳಕವೊ ಎಂದೂ ತಿಳಿಯಲಿಲ್ಲ. ಇನ್ನೇನು ಹೊರಡುವ ಸಿದ್ದತೆಯಲ್ಲಿದ್ದ ಶ್ರೀನಾಥನನ್ನು ಓಡೋಡುತ್ತ ಬಂದ ಕುನ್. ಸೋವಿ, ಆತುರಾತುರವಾಗಿ ಏನೊ ತೋರಿಸಲಿದೆಯೆಂದು ಜತೆಗೆ ಕರೆದೊಯ್ದಿದ್ದ. ಒಂದಷ್ಟು ಹೆಜ್ಜೆ ನಡೆದು ವೇರ್ಹೌಸಿನ ಪಕ್ಕಕ್ಕೆ ಅಂಟಿಕೊಂಡಂತಿದ್ದ ಮತ್ತೊಂದು ಉಗ್ರಾಣದ ಒಳಗೆ ಕರೆದುಕೊಂಡು ಹೋದವನನ್ನೆ ಪ್ರಶ್ನಾರ್ಥ ಚಿಹ್ನೆಯೊಂದಿಗೆ ಮಿಕ್ಕರ್ಧ ಕುತೂಹಲದಿಂದ ಹಿಂಬಾಲಿಸುತ್ತ ನಡೆದಿದ್ದ ಶ್ರೀನಾಥ. ಆ ಜಾಗಕ್ಕೆ ಹಿಂದೆಂದು ಬಂದಿರದಿದ್ದರೂ, ಅದೊಂದು ತ್ಯಾಜ್ಯ ಸಾಮಾಗ್ರಿಗಳನ್ನು ಪೇರಿಸಿಡುವ , ವಿಲೇವಾರಿಗೆ ಬಳಸುವ ಜಾಗ ಎಂದು ಗೊತ್ತಿತ್ತು. ಭೂತ ಬಂಗಲೆಯಂತಿದ್ದ ಅದರ ಬಾಗಿಲ ಬೀಗ ತೆಗೆದು ಒಳಗೆ ಹೋಗುತ್ತಿದ್ದಂತೆ ಮೊದಲು ಗ್ರಾಹ್ಯವಾದದ್ದು ಅಲ್ಲಿನ ವಾತಾವರಣದ ಅರಾಜಕತೆ. ಉಗ್ರಾಣಗಳಲ್ಲಿ ಸಹಜವಾಗಿ ಕಾಣಬರುವ ಶಿಸ್ತು, ವ್ಯವಸ್ಥಿತ ಜೋಡಣೆ, ಸ್ವಚ್ಚತೆಯ ಪರಿಸರ - ಎಲ್ಲದರ ಬದಲು ಎಲ್ಲೆಂದರಲ್ಲಿ ಅವ್ಯವಸ್ಥಿತವಾಗಿ ಪೇರಿಸಿಟ್ಟ , ಕಲಸುಮೇಲೋಗರ ಸಾಮಾಗ್ರಿಗಳ ಗುಡ್ಡೆಯೆ ಕಾಣುತ್ತಿತ್ತು. ಅದರಲ್ಲಿ ಬಹುತೇಕ ಮುರಿದುಬಿದ್ದ ಸರಕುಗಳು, ಪರಿಕರಗಳು, 'ಸ್ಕ್ರಾಪ್' ಸೇಲಿಗಾಗಿ ಸಿದ್ದ ಮಾಡಿಟ್ಟ ತ್ಯಾಜ್ಯ ವಸ್ತುಗಳು. ಆರು ತಿಂಗಳಿಗೊ ವರ್ಷಕ್ಕೊ ಒಮ್ಮೆ ಯಾರಾದರೂ ಗುಜರಿಯವನಿಗೆ ಬಿಕರಿಯಾಗುವ ತನಕ ಅಲ್ಲೇ ಹಾಗೆಯೆ ಬಿದ್ದಿರುತ್ತದೆ ಹೇಳ ಕೇಳುವವರಿಲ್ಲದೆ. ಅಲ್ಲಿದ್ದ ಎಲ್ಲಾ ಸಮಷ್ಟಿಯಲ್ಲಿ ಎದುರಿನ ಗೋಡೆಗಾನಿಸಿದ್ದ ಖಾನೆಗಳಿದ್ದ ಕಬೋರ್ಡ್ ಒಂದನ್ನು ಬಿಟ್ಟರೆ ಮತ್ತಾವುದು ಕ್ರಮಬದ್ಧ ಸ್ಥಿತಿಯಲ್ಲಿತ್ತೆಂದು ಹೇಳಲಾಗುತ್ತಿರಲಿಲ್ಲ. ಬೇರೆಲ್ಲೂ ನಿಲ್ಲದೆ ಆ ಕಬೋರ್ಡಿನ ಹತ್ತಿರ ನೇರ ನಡೆದಿದ್ದ ಕುನ್. ಸೋವಿ ಅದರ ನಡುವಿನ ಖಾನೆಯೊಂದರತ್ತ ಕೈ ತೋರಿಸಿದ್ದ. ಅಲ್ಲೇನಿದೆಯೆಂದು ಕುತೂಹಲದಿಂದ ನೋಡಿದ ಶ್ರೀನಾಥನೂ ಬೆಚ್ಚಿ ಬೀಳುವಂತಾಗಿತ್ತು ಅಲ್ಲಿದ್ದ ವಸ್ತುವನ್ನು ನೋಡಿ - ಅಲ್ಲೊಂದು ಯಾವುದೋ ಓಬೀರಾಯನ ಕಾಲದ ಸಾಧಾರಣ ಗಾತ್ರದ ಎಪ್ಸನ್ ಪ್ರಿಂಟರೊಂದು ಮೇಲೊಂದು ಹೊದಿಕೆ ಹೊದ್ದುಕೊಂಡು ತಣ್ಣಗೆ ಕೂತಿತ್ತು! ಇದೇನು ನಿಜವೋ ಸುಳ್ಳೊ ಎಂಬ ಅಯೋಮಯದಲ್ಲಿಯೆ ಕುನ್. ಸೋವಿಯ ಮುಖದಲ್ಲಿ ಕಂಡೂ ಕಾಣದಂತಿದ್ದ ಹೆಮ್ಮೆಯ ಕಿರುನಗೆಯ ಭಾವವನ್ನು ಅವಲೋಕಿಸುತ್ತಿದ್ದ ಶ್ರೀನಾಥನಿಗೆ ಹಿನ್ನಲೆಯನ್ನು ವಿವರಿಸುತ್ತ, ಸಂಜೆ ಯಾವುದೊ ಕಾರಣಕ್ಕೆ ಈ ಉಗ್ರಾಣಕ್ಕೆ ಬಂದಾಗ ತುಂಬಾ ಹಿಂದೆ ಬಳಸುತ್ತಿದ್ದ , ಹೊಸ ಪ್ರಿಂಟರು ಬಂದ ಮೇಲೆ ಮೂಲೆಗುಂಪಾಗಿದ್ದ ಈ ಹಳೆ ಪ್ರಿಂಟರು ಕಣ್ಣಿಗೆ ಬಿತ್ತೆಂದು, ಸದ್ಯಕ್ಕೆ ಇದನ್ನು ಬಳಸಲು ಸಾಧ್ಯವೇ ? ಎನ್ನುವ ಪರಿಶೀಲನೆಗೆ ಇಲ್ಲಿಗೆ ಕರೆತಂದುದಾಗಿ ಹೇಳಿದ್ದ. ಡಾಟ್ ಮ್ಯಾಟ್ರಿಕ್ಸ್ ಆದ ಕಾರಣ ಫಾರಂ ಪ್ರಿಂಟಿಂಗಿಗೆ ಬಳಸಬಹುದೆಂದು ಶ್ರೀನಾಥನಿಗೆ ಅರಿವಿದ್ದರೂ, ಹಳೆಯ ಮಾದರಿಯಾದ ಕಾರಣ, ನಿಖರವಾಗಿ ಖಚಿತಪಡಿಸಿಕೊಳ್ಳಲು ದೇವ್ ಜತೆ ಕೇಳಬೇಕಾಗಿತ್ತು. ಅದಕ್ಕೂ ಮೊದಲು ಇದು ಕೆಲಸ ಮಾಡುವ ಸ್ಥಿತಿಯಲ್ಲಿದೆಯೆ? ಎಂದು ಖಚಿತ ಪಡಿಸಿಕೊಳ್ಳಬೇಕಾಗಿತ್ತು. 

' ಈಗಾಗಲೇ ಒಂದು ಬಾರಿ ಸ್ವಿಚ್ ಆನ್ ಮಾಡಿ ಟೆಸ್ಟ್ ಮಾಡಿಸಿದೆ.. ಕೆಲಸವಂತೂ ಮಾಡುತ್ತಿದೆ...' ಎಂದ ಕುನ್. ಸೋವಿಯ ಮಾತು ಆಶಾವಾದ ಹುಟ್ಟಿಸಿದರೂ ಯಾವುದಕ್ಕೂ ದೇವ್ ಜತೆ ಮಾತಾಡಿ ನಂತರ ನಿರ್ಧರಿಸುವುದು ಒಳಿತೆಂದು ಅಂದುಕೊಳ್ಳುವ ಹೊತ್ತಿಗೆ ಸರಿಯಾಗಿ ಹೆಗಲಿಗೆ ಬ್ಯಾಗು ನೇತುಹಾಕಿಕೊಂಡು ಹೊರಡಲು ಸಿದ್ದನಾದವನಂತೆ ಬಂದಿದ್ದ ಅವನ ದನಿಯೇ ಹಿಂದಿನಿಂದ ಕೇಳಿಸಿತ್ತು.., 

'ವಾಹ್...! ಇಲ್ಲೊಂದು ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ ಇದೆ?!'

ಹೊರಡುವ ಹೊತ್ತಲ್ಲಿ ಆಫೀಸಿನಲ್ಲೆಲ್ಲು ಕಾಣಲಿಲ್ಲವೆಂದು ಇಲ್ಲಿಗೆ ಹುಡುಕಿಕೊಂಡು ಬಂದಿದ್ದ. ಬಂದ ತಕ್ಷಣವೆ ಪ್ರಿಂಟರ್ ಕಣ್ಣಿಗೆ ಬಿದ್ದಾಗ ಚರ್ಚೆ ಯಾವುದರ ಬಗೆಯೆಂದು ಹೇಳದೆ ಸಹ ಗೊತ್ತಾಗಿತ್ತು.. 'ಈ ಪ್ರಿಂಟರು ಕೆಲಸ ಮಾಡುತ್ತಿದ್ದರೆ ಇನ್ವಾಯ್ಸಿಗಲ್ಲದಿದ್ದರೂ, ಡೆಲಿವರಿ ನೋಟಿಗೆ ಖಂಡಿತ ಬಳಸಬಹುದು...' ಎಂದವನ ಮಾತಿಂದ ಪ್ರಶ್ನೆ ಕೇಳುವ ಮೊದಲೇ ಉತ್ತರ ದೊರಕಿದಂತಾಗಿ ಕುನ್ ಸೋವಿಯ ಮುಖ ನೋಡಿದ್ದ ಶ್ರೀನಾಥ. 

' ಹಾಗಾದರೆ ಪ್ರತಿಬಾರಿ ಪೇಪರು ಬದಲಿಸುವ ಗೋಜಿಲ್ಲದೆ ಎರಡೂ ಕಡೆ ಒಟ್ಟಿಗೆ ಪ್ರಿಂಟು ಮಾಡಬಹುದೆ? ' ಎಂದು ಕೇಳಿದ ಕುನ್. ಸೋವಿಯ ಮಾತಿಗೆ ಶ್ರೀನಾಥ, ' ಅದು ಸಾಧ್ಯವಿದ್ದರೂ ವೇ ಬಿಲ್ ಪ್ರಿಂಟಿಂಗಿಗೆ ಪೇಪರ್ ಬದಲಿಸಲೇ ಬೇಕಲ್ಲ? ' ಎಂದ.

ಅರೆಗಳಿಗೆ ಚಿಂತಿಸಿದ ಕುನ್. ಸೋವಿ, 'ಡೆಲಿವರಿ ನೋಟಿಗೆ ಹೇಗೂ ಹೊಸ ಪ್ರಿಂಟರು ಬೇಕೆಂದು ಕೇಳಿದ್ದೇನೆ..ಒಂದೆರಡು ತಿಂಗಳಾಗಬಹುದಾದರೂ , ಅದು ಬಂದ ಮೇಲೆ ಈ ಹಳೆಯ ಪ್ರಿಂಟರನ್ನು ವೇಬಿಲ್ಲಿಗೆ ಮಾತ್ರ ಬಳಸಬಹುದು..'

'ಆದರದು ಹೊಸ ಪ್ರಿಂಟರು ಬಂದ ಮೇಲೆ...ಈಗ ಮ್ಯಾನೇಜ್ ಮಾಡಲಾಗದಲ್ಲ?'

ಅದಕ್ಕೆ ಕಿರುನಗೆಯಲ್ಲೇ ಉತ್ತರವಿತ್ತಿದ್ದ ಕುನ್. ಸೋವಿ, ' ಸದ್ಯಕ್ಕೆ ವೇಬಿಲ್ ಬರಿಗೈಯಲ್ಲೇ ಬರೆಯುತ್ತಿದ್ದುದು. ಹೊಸ ಸಿಸ್ಟಮ್ಮಿನಲ್ಲಿ ಆಟೋಮೇಟು ಆಗುತ್ತಿದೆಯಷ್ಟೆ.. ಈ ಪ್ರಿಂಟರಿನಲ್ಲಿ ಡೆಲಿವರೀ ನೋಟ್ ಪ್ರಿಂಟ್ ಆಗುವುದಾದರೆ, ಇನ್ನು ಸ್ವಲ್ಪ ದಿನದ ಮಟ್ಟಿಗೆ ವೇ ಬಿಲ್ ಕೈಯಲ್ಲೆ ಬರೆದು ನಿಭಾಯಿಸಬಹುದು..ಹೇಗೂ ಪ್ರೋಗ್ರಾಮಿನಲ್ಲಿ ಈಗ 'ಪ್ರಿಂಟ್ - ಎಸ್ / ನೊ' ಆಯ್ಕೆಯಂತೂ ಇದೆ..'

ದೇವ್ ಏನನ್ನುವನೊ ಎಂದು ಅವನತ್ತ ತಿರುಗಿದಾಗ, ಅವನಾಗಲೇ ಇನ್ನು ಹತ್ತು ಹೆಜ್ಜೆ ಮುಂದೆ ಹೋಗಿಬಿಟ್ಟಿದ್ದ, 'ನಾನು ನಾಳೆಯೆ ಪ್ರಿಂಟರ್ ಜೋಡಣೆಯ ಸೆಟ್ಟಿಂಗ್ ಮಾಡಿಬಿಡುತ್ತೇನೆ.. ಆದರೆ ಒಂದೆ ಒಂದು ಸಂಶಯ ..ಈಗ ಮಾಡುತ್ತಿರುವ 'ಸ್ಪ್ಲಿಟ್ ಪ್ರಿಂಟ್ ಪ್ರೋಗ್ರಾಮ್' ಮುಂದುವರೆಸಬೇಕಾ ಬೇಡವಾ ಎಂದು ಅನುಮಾನ..?'

ಅವನ ಪ್ರಶ್ನೆಯ ಹಿನ್ನಲೆ ಅರಿತವನಂತೆ ಶ್ರೀನಾಥ, ' ನೋನೋ ಡೊಂಟ್ ಸ್ಟಾಪ್ ಇಟ್.. ಒಂದು ವೇಳೆ ಈ ಹಳೆ ಪ್ರಿಂಟರ್ ಕೈ ಕೊಟ್ಟರೆ ಮತ್ತೆ ಇದೆ ಕೊಳ್ಳಕ್ಕೆ ಬೀಳುತ್ತೇವೆ..ಅದು ಹಾಗೆಯೆ ಮುಂದುವರೆಯಲಿ.. ಕುನ್. ಸೋವಿಗೆ ವೇಬಿಲ್ ತಾತ್ಕಾಲಿಕವಾಗಿ ಕೈಬರಹದಲ್ಲೇ ನಿಭಾಯಿಸುವ ಸಾಧ್ಯತೆಯಿದೆಯೆಂದಾದರೆ, ನನಗಂತೂ ಈ ಪರಿಹಾರ ತುಂಬಾ ಸೂಕ್ತವೆನಿಸುತ್ತಿದೆ..'

ಕುನ್. ಸೋವಿ ಆ ಜಾಗದಿಂದ ಪ್ರಿಂಟರ್ ಆಚೆ ತೆಗೆದು ಕೆಳಗಿಳಿಸುತ್ತ ' ವೇಬಿಲ್ ಚಿಂತೆ ನನಗೆ ಬಿಡಿ ' ಎಂದಿದ್ದ. 

ಗೋಲೈವಿಗೆ ಕೇವಲ ಒಂದೆ ದಿನ ಬಾಕಿ ಇದ್ದಾಗ ಒದಗಿ ಬಂದಿದ್ದ ಈ ಪರಿಹಾರ, ಗುಡ್ಡದಂತೆ ಬಂದಿದ್ದ ಸಮಸ್ಯೆಯನ್ನು ಹೂವೆತ್ತಿದಂತೆ ನಿಭಾಯಿಸಿ ನಿರಾಳವಾಗಿಸಿದ ವಿಚಿತ್ರ ಪರಿಯನ್ನು ಕಂಡು ಅದೇನು ಕನಸೊ ಅಥವಾ ವಾಸ್ತವವೊ ಎಂದು ಅಚ್ಚರಿ ಪಡದಿರಲು ಸಾಧ್ಯವಾಗಿರಲಿಲ್ಲ ಶ್ರೀನಾಥನಿಗೆ.  ಅದುದ್ದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳುತ್ತ ಮಿಕ್ಕ ಸಿದ್ದತೆಗಳತ್ತ ಒತ್ತಡರಹಿತ ಮನದಲ್ಲಿ ಗಮನ ಹರಿಸತೊಡಗಿದ್ದ ಶ್ರೀನಾಥ.

(ಇನ್ನೂ ಇದೆ)
__________