ಸೋಲು-ಗೆಲುವು - ಲಕ್ಞ್ಮೀಕಾಂತ ಇಟ್ನಾಳ

ಸೋಲು-ಗೆಲುವು - ಲಕ್ಞ್ಮೀಕಾಂತ ಇಟ್ನಾಳ

ಸೋಲು-ಗೆಲುವು

ಗೆದ್ದವರೆಲ್ಲ ಗೆಲ್ಲುವುದಿಲ್ಲ

ಸೋತವರೆಲ್ಲ ಸೋಲುವುದಿಲ್ಲ

 

ಗೆದ್ದು ಸೋತವರೆಷ್ಟೋ, ಸೋತು ಗೆದ್ದವರೂ ಅಷ್ಟೆ

ಬಿಂಬ ಪ್ರತಿಬಿಂಬಗಳಂತೆ ತಿರುಗುಮುರುಗು ಅಷ್ಟೆ

ಸೋಲಿನಲ್ಲೂ ಗೆಲುವಿದೆ, ಅದರಂತರವಿಷ್ಟೆ

ಗೆದ್ದು ಸೋತವರಿಗೆ ಬದುಕು ಸಿಗದು, ತಿಳಿಯಿಷ್ಟೆ

ಸೋತು ಗೆದ್ದವರ ಕಾಲಿಗೆ ಬದುಕು ಬೀಳುವುದಷ್ಟೆ

 

ಗೆಲುವಿಗೆ ಸೋಲಿನ ಭೀತಿ, ಸೋಲಿಗೆ ಗೆಲುವಿನ ಪ್ರೀತಿ

ಸೋಲುಗಳೇ ಸಂಶೋಧನೆಗೆ ಮೂಲ ನೀತಿ

ಗೆದ್ದ ಸುಖ ಕ್ಷಣಿಕವಾದರೆ, ಸೋಲಿನ ಸುಖಕೆ ಹತ್ತು ರೀತಿ

ಅದು ಬದುಕಿನುದ್ದಕ್ಕೂ ಹೆಣೆದುಕೊಳ್ಳುವ ಬಾಳಗೆಣತಿ

 

ಗೆದ್ದ ಸಂಬಂಧಗಳಿಗಿಂತ ಸೋತ ಸಂಬಂಧಗಳಿಗೆ ಆಯು ಹೆಚ್ಚು

ಗೆಲುವು ತಲೆಗೇರಬಾರದು, ಸೋಲು ಎದೆ ಸೇರಬಾರದು

ಸೋಲಿಗೆ ನೆಲವೆ ಬೇರಾದರೆ, ಗೆಲುವಿನ ನೆಲೆ ಬೇರೆ

ಅದಕೆ,ಸೋತವರು ಮರುಕಗೊಳ್ಳಬೇಕಿಲ್ಲ

ಸೋತವರಷ್ಟು ಸುಖಿಗಳು ಬೇರಿಲ್ಲ

ಸೋತು ಗೆದ್ದವರು ಸುಖಿಗಳು

ಅದಕೆ, ಸೋತು ಗೆಲ್ಲಬೇಕು!

Rating
Average: 5 (1 vote)

Comments

Submitted by bhalle Tue, 05/13/2014 - 06:35

"ಗೆಲುವು ತಲೆಗೆ ಏರಬಾರದು, ಸೋಲು ಎದೆಗೆ ಏರಬಾರದು" ಚೆನ್ನಾಗಿ ಹೇಳಿದ್ದೀರ ...
'ಗೆದ್ದೋನ್ ಸೋತ, ಸೋತೋನ್ ಸತ್ತ' ಅಂತ ಕೋರ್ಟ್ ಕೇಸ್ ಹಾಕಿದವರ ಬಗ್ಗೆ ಹೇಳೋ ಮಾತು ನೆನಪಿಗೆ ಬಂತು

Submitted by H A Patil Wed, 05/14/2014 - 19:42

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಮನುಷ್ಯ ಜೀವನದ ಸೋಲು ಗೆಲುವುಗಳ ಕುರಿತು ತುಲನಾತ್ಮಕವಾಗಿ ವಸ್ತುನಿಷ್ಟವಾಗಿ ಕವನ ರೂಪ ಗೊಂಡಿದೆ. ಸೋಲು ಗೆಲುವುಗಳು ಒಂದು ನಾಣ್ಯದ ಎರಡು ಮುಖಗಳು. ಅರ್ಥಪೂರ್ಣ ರಚನೆ ಧನ್ಯವಾದಗಳು.

Submitted by naveengkn Wed, 07/02/2014 - 11:44

"ಇತ್ನಾಳರ ಇಟ್ಟಿಗೆಯ ಕವನ" ಎಂದು ಪುನರ್ ಹೆಸರಿಸಬಹುದೇನೊ!!!! ಬರಿಯ ಸೋಲು ಮತ್ತು ಗೆಲುವು ಎಂಬ ಎರಡು ಇಟ್ಟಿಗೆಗಳನ್ನು ಇಟ್ಟುಕೊಂಡು ಇಷ್ಟು ದೊಡ್ದ ಕಾವ್ಯದರಮನೆ ಕಟ್ಟಲು ಹೇಗೆ ಸಾಧ್ಯವಾಯಿತು ? ಒಳ ಅರ್ಥ ಬಹಳವಿದೆ ಅನ್ನಿಸಿತು (ಅರ್ಥ ಮಾಡಿಕೊಳ್ಳುವ ಪ್ರೌಡತೆ ದಕ್ಕಿಲ್ಲ ಎನ್ನುವ ಖೇದದೊಂದಿಗೆ),,,, ಬರಹ ಸಾಗಲಿ, ಧನ್ಯವಾದಗಳು