ನಾ ಕಂಡ ನಾ. ಕಸ್ತೂರಿ

ನಾ ಕಂಡ ನಾ. ಕಸ್ತೂರಿ

ಚಿತ್ರ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹುಟ್ಟು ಹಾಕಿದವರು ಈ ಇಬ್ಬರು ಮಹನೀಯರುಗಳು. ಕೈಲಾಸಂರವರು ಈ ನಿಟ್ಟಿನಲ್ಲಿ ಸಾಕಷ್ಟು ಕೃಷಿ ಮಾಡಿದ್ದರೂ ಹಾಸ್ಯ ಸಾಹಿತ್ಯದ ಅಧ್ವರ್ಯುಗಳೆಂದರೆ ರಾ.ಶಿ. ಮತ್ತು ಕಸ್ತೂರಿ ಎಂದೇ ಗುರುತಿಸಲ್ಪಟ್ಟಿದ್ದಾರೆ.

ಶ್ರೀ ರಾ.ಶಿ.ಯವರು ಕನ್ನಡಿಗರಾದರೆ ಶ್ರೀ ನಾ.ಕಸ್ತೂರಿ ಅವರು ಹುಟ್ಟಾ ಮಲಯಾಳಿಗಳು. ಕೇರಳದಲ್ಲಿ ಹುಟ್ಟಿ ಬೆಳೆದ ಇವರು ಕನ್ನಡ ಸಾಹಿತ್ಯದಲ್ಲಿ ಮಾಡಿರುವ ಕೃಷಿ ಅವಿಸ್ಮರಣೀಯ. ಅವರ ಪೂರ್ತಿ ಹೆಸರು ನಾರಾಯಣ ಕಸ್ತೂರಿ ರಂಗನಾಥ ಶರ್ಮ. ಇವರು ಕೇರಳರಾಜ್ಯದ ತಿರುವಾಂಕೂರು ಸಂಸ್ಥಾನದಲ್ಲಿ ಜನಿಸಿದರು. ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡಿದ್ದು ಕೇರಳದಲ್ಲಾದರೂ ಅವರು ಅಧ್ಯಾಪಕ ವೃತ್ತಿ ಮಾಡಿದ್ದು ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ.

ಮಲಯಾಳಿಯಾದರೂ ಕನ್ನಡ ಭಾಷೆಯನ್ನು ಕಲಿತು ಅದರಲ್ಲಿ ಪಾಂಡಿತ್ಯಗಳಿಸಿ ಮರೆಯಲಾಗದಂಥ ಕೃತಿರಚನೆ ಮಾಡಿದ್ದು ಕಸ್ತೂರಿಯವರೆ ಹೆಗ್ಗಳಿಕೆ.

ಹಾಸ್ಯರಸ ಭರಿತವಾದ 'ಅನರ್ಥಕೋಶ' ಎಂಬ ನಿಘಂಟು ರಚನೆ ಮಾಡಿದ್ದು ಅವರ ಹಾಸ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ. ನಿತ್ಯಜೀವನದ ಅನೇಕ ಕ್ಷಣಗಳಲ್ಲಿ ಹಾಸ್ಯ ಸಂದರ್ಭಗಳನ್ನು ಗುರುತಿಸಿ ಕನ್ನಡಿಗರಿಗೆ ಹಾಸ್ಯ ರಸಾಯನವನ್ನು ಉಣಬಡಿಸಿದವರು ನಾ.ಕಸ್ತೂರಿ. ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿದ ಯಶಸ್ಸು ಕೂಡ ಕಸ್ತೂರಿಯವರಿಗೇ ಸಲ್ಲಬೇಕು.

ಪ್ರಪ್ರಥಮವಾಗಿ ರೇಡಿಯೋ ಪ್ರಸಾರ ಪ್ರಾರಂಭವಾಗಿದ್ದು ಮೈಸೂರಿನಲ್ಲಿ. ಈ ಮಹತ್ತರವಾದ ರೇಡಿಯೋ ಪ್ರಸಾರದಲ್ಲಿ ನಾ. ಕಸ್ತೂರಿಯವರು ಸಕೃಯರಾಗಿ ಪಾಲ್ಗೊಂಡಿದ್ದರು ಎಂದು ತಿಳಿಯಬರುತ್ತದೆ. 'ಆಕಾಶವಾಣಿ' ಎಂಬ ಪದವನ್ನು ರೇಡಿಯೋ ಪ್ರಸಾರಕ್ಕೆ ಮೊತ್ತಮೊದಲು ನಾಮಕರಣ ಮಾಡಿದ್ದು ನಾ. ಕಸ್ತೂರಿಯವರು ಎಂದು ಒಂದು ಅಭಿಪ್ರಾಯವಿದೆ. ಮೈಸೂರು ರೇಡಿಯೋ ಕೇಂದ್ರವನ್ನು ಪ್ರಾರಂಭಿಸಿದ ಶ್ರೀ ಗೋಪಾಲಸ್ವಾಮಿ ಅವರು ಆಕಾಶವಾಣಿ ಎಂದು ನಾಮಕರಣ ಮಾಡಿದರು ಎಂಬ ಅಭಿಪ್ರಾಯ ಸಹ ಇದೆ.

ಅದೇನೇ ಇರಲಿ ಕನ್ನಡ ಭಾಷೆಯಲ್ಲಿ ಅನೇಕ ಹೊಸ ಆಡು ಮಾತುಗಳನ್ನು ಸೃಷ್ಟಿಸಿ ಚಾಲ್ತಿಗೆ ತಂದದ್ದು ಶ್ರೀ ನಾ. ಕಸ್ತೂರಿಯವರು ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ಉದಾಹರಣೆ, ಕತ್ತು ಹಿಡಿದು ತಳ್ಳುವುದಕ್ಕೆ 'ಅರ್ಧಚಂದ್ರ ಪ್ರಯೋಗ', ಚಪ್ಪಲಿಯಲ್ಲಿ ಹೊಡೆಯುವುದಕ್ಕೆ 'ಪಾದಪೂಜೆ' ಹೀಗೆ ಹಲವು ಹೊಸ ಶಬ್ಧಗಳನ್ನು ಸೃಷ್ಟಿ ಮಾಡಿದವರು ಅವರು. ಅದೂ ಅಲ್ಲದೆ ಈಗಾಗಲೇ ಚಾಲ್ತಿಯಲ್ಲಿದ್ದ ಅನೇಕ ಪದಗಳಿಗೆ ಹೊಸ ಹಾಸ್ಯಮಯವಾದ ಅರ್ಥಗಳನ್ನು ಹುಟ್ಟುಹಾಕಿದ ಶಬ್ದ ಬ್ರಹ್ಮ ನಾ. ಕಸ್ತೂರಿ. ಅವರ ಅನರ್ಥಕೋಶ ಓದಿದರೆ ಕಸ್ತೂರಿಯವರ ಹಾಸ್ಯ ಪ್ರಜ್ಞೆ ವೇದ್ಯವಾಗುತ್ತದೆ.

ನಾ.ಕಸ್ತೂರಿಯವರ ವಿದ್ಯಾರ್ಥಿಯಾಗಿದ್ದ ನನ್ನ ಚಿಕ್ಕಪ್ಪ, ತಮ್ಮ ಗುರುಗಳಬಗ್ಗೆ ವರ್ಣಮಯವಾಗಿ ವಿವರಿಸುತ್ತಿದ್ದುದನ್ನು ನಾನು ನನ್ನ ಚಿಕ್ಕವಯಸ್ಸಿನಲ್ಲಿ ಕೇಳಿದ್ದೆ. ಇಂಥ ಮಹನೀಯರನ್ನು ಕಂಡು ಅವರ ಮಾತುಗಳನ್ನು ಕೇಳಬೇಕೆಂಬ ಹೆಬ್ಬಯಕೆ ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೇ ಬೇರೂರಿತ್ತು. ಆದರೆ ಎಲ್ಲದಕ್ಕೂ ಸಮಯ ಸಂದರ್ಭ ಒದಗೆ ಬರಬೇಕಲ್ಲ. ನನ್ನ ಪುಣ್ಯವೋ ಏನೋ ನನಗೆ ಅಂಥ ಒಂದು ಸುವರ್ಣಾವಕಾಶ ಒದಗಿ ಬಂದೇ ಬಿಟ್ಟಿತು.

ನಾನು ನನ್ನ ಪದವಿ ವ್ಯಾಸಂಗವನ್ನು ಮೈಸೂರಿನಲ್ಲಿ ಪೂರ್ತಿಗೊಳಿಸಿ, ಕಾನೂನು ಪದವಿ ವ್ಯಾಸಂಗವನ್ನು ಮುಂದುವರಿಸಲು ಬೆಂಗಳೂರಿಗೆ ಬಂದು ನನ್ನ ಚಿಕ್ಕಪ್ಪನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ನನ್ನ ಚಿಕ್ಕಪ್ಪ ಪೋಲೀಸು ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇತಿಹಾಸ ವಿಭಾಗದಲ್ಲಿ ಬಿ.ಎ. ಆನರ್ಸ್ ಪದವಿ ಪಡೆದವರು. ವಿದ್ಯಾರ್ಥಿದೆಸೆಯಲ್ಲಿಯೇ ಹಿಂದಿಯಲ್ಲಿ ರಾಷ್ಟ್ರಭಾಷಾ ವಿಶಾರದ ಪದವಿ ಪಡೆದು ಆ ಪದವಿ ಪತ್ರವನ್ನು ಸ್ವಯಂ ಮಹಾತ್ಮಾ ಗಾಂಧಿಯವರ ಹಸ್ತದಿಂದಲೇ ಪಡೆದ ಭಾಗ್ಯಶಾಲಿ ಅವರು. ಇತಿಹಾಸ ವಿಭಾಗದಲ್ಲಿ ಡಾ॥ಎಸ್. ಶ್ರೀಕಂಠಶಾಸ್ತ್ರಿ, ಡಾ॥ಎಂ. ಎಚ್. ಕೃಷ್ಣ ಮುಂತಾದ ಘನ ವಿದ್ವಾಂಸರುಗಳ ಮಾರ್ಗದರ್ಶನದಲ್ಲಿ ಪದವಿ ಶಿಕ್ಷಣ ಪಡೆದು ಪದವಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಚಿನ್ನದ ಪದಕ ಪಡೆದಿದ್ದ ವಿದ್ವಾಂಸರು ನನ್ನ ಚಿಕ್ಕಪ್ಪ. ಮೊದಲೇ ಅಪಾರ ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿ, ಶಿಸ್ತಿಗೇ ಹೆಸರಾದ ಪೋಲೀಸು ಇಲಾಖೆಯ ಉನ್ನತ ಅಧಿಕಾರಿಯಾಗಿದ್ದ ಅವರೊಡನೆ ಲಘುವಾಗಿ ವ್ಯವಹರಿಸಲು ಆಸ್ಪದವೇ ಇರಲಿಲ್ಲ. ನಾನು ಸ್ನಾತಕೋತ್ತರ ಪದವಿಗೆ ಓದುತ್ತಿದ್ದರೂ ಸಹ ವಿದ್ಯಾಭ್ಯಾಸದ ವಿಷಯದಲ್ಲಿ ಅವರು ಚಂಡಶಾಸನರು. ಸ್ವಲ್ಪ ಕೂಡ ವಿರಾಮ ತೆಗೆದುಕೊಂಡು, ಅಲ್ಲಿ ಇಲ್ಲಿ ತಿರುಗಾಟ ಮಾಡಲು ಅವಕಾಶ ನೀಡುತ್ತಲೇ ಇರಲಿಲ್ಲ. ಯಾವಾಗಲೂ ಓದಿನ ಬಗ್ಗೆಯೇ ಗಮನವಿರ ಬೇಕಿತ್ತು. ಹೀಗದ್ದರೂ ಯಾವುದಾದರೂ ಮುಖ್ಯವಾದ ಸಭೆಗಳು, ಸಂಗೀತ ಕಛೇರಿಗಳು, ವಿದ್ವಾಂಸರುಗಳ ಭಾಷಣಗಳು ಮುಂತಾದ ಕಾರ್ಯಕ್ರಮಗಳಿಗೆ ಹೋಗಿ ಬರಲು ನನಗೆ ಅನುಮತಿ ಇರುತ್ತಿತ್ತು. ಕೆಲವು ಮುಖ್ಯ ಕಾರ್ಯಕ್ರಮಗಳಿಗೆ ಅವರೂ ಸಹಾ ಜತೆಗೆ ಬಂದು ಭಾಗವಹಿಸುತ್ತಿದ್ದರು. ನಗರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸದಾ ಗಮನ ಹರಿಸುತ್ತಿದ್ದ ಅವರು ಒಂದು ದಿನ ಸಂಜೆ ಬೆಂಗಳೂರಿನ ಪುರಭವನದಲ್ಲಿ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಮುಖ್ಯ ಅತಿಥಿಗಳು, ಶ್ರೀ ನಾ. ಕಸ್ತೂರಿ, ಶ್ರೀ. ಜಿ.ಪಿ. ರಾಜರತ್ನಂ ಎಂದು ತಿಳಿಸಿ, ನೀನೂ ಬಾರೋ ಎಂದು ನನ್ನನ್ನೂ ಕರೆದುಕೊಂಡು ಪುರಭವನಕ್ಕೆ ಬಂದರು. ನಾ. ಕಸ್ತೂರಿಯವರನ್ನು ಕಣ್ಣಾರೆ ಕಾಣುವ ಸೌಭಾಗ್ಯ ಹೀಗೆ ಅನಾಯಾಸವಾಗಿ ನನ್ನ ಪಾಲಿಗೆ ಒದಗಿಬಂತು.

ಅಂದು 'ಸುಹಾಸ' ಎಂಬ ಹಾಸ್ಯ, ವಿಡಂಬನೆ, ಅಣಕ, ಕುಚೋದ್ಯ, ಪರಿಹಾಸ, ವ್ಯಂಗ್ಯ ಬರಹಗಳ ಬೃಹತ್ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭ, ದಿನಾಂಕ ೨೧.೧೨.೧೯೭೪ರಂದು ಈ ಸಮಾರಂಭ ಏರ್ಪಾಡಾಗಿತ್ತು. ಈ ಬೃಹತ್ ಸಂಕಲನದ ಸಂಪಾದಕರು ಶ್ರೀ. ಸೂರ್ಯನಾರಾಯಣ ಚಡಗ ಮತ್ತು ಸಹ ಸಂಪಾದಕರು ಶ್ರೀ ಕುಮಾರಜನ್ನ. ನಂದನ ಪ್ರಕಾಶನದವರು ಹೊರತಂದ ಈ ಹಾಸ್ಯಬರಹಗಳ ಸಂಕಲನವನ್ನು ಹಿರಿಯ ನೆಗೆಗಾರರಾದ ಶ್ರೀ. ನಾ. ಕಸ್ತೂರಿ ಮತ್ತು ಶ್ರೀ. ಎಂ. ಎಸ್. ಸುಂಕಾಪುರ ಅವರುಗಳಿಗೆ ಸಮರ್ಪಣೆ ಮಾಡಲು ಈ ಸಮಾರಂಭವನ್ನು ಆಯೋಜಿಸಿದ್ದರು.

ಹಳಗನ್ನಡದ ಕಾಲದಿಂದ ಇಂದಿನವೆರೆಗೂ ಕನ್ನಡ ಸಾಹಿತ್ಯದಲ್ಲಿ ಹಾಸ್ಯ ವಿಡಂಬನೆ, ಕುಚೋದ್ಯ ಮುಂತಾದ ವಿಚಾರಗಳನ್ನು ಗುರುತಿಸಿ ಅದಕ್ಕೆ ಸಂಬಂಧಿಸಿದ ಲಘು ಪ್ರಬಂಧಗಳನ್ನು ಈ 'ಸುಹಾಸ' ಎಂಬ ಸಂಕಲನದಲ್ಲಿ ದಾಖಲಿಸಲಾಗಿದೆ. ಸಾವಿರದ ನೂರ ಇಪ್ಪತ್ತು ಪುಟಗಳ ಈ ಗ್ರಂಥದಲ್ಲಿ ಕನ್ನಡದ ಹಾಸ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಎಲ್ಲಾ ಲೇಖಕರ ಬರಹಗಳನ್ನು, ಗ್ರಂಥದ ಇತಿಮಿತಿಗೆ ಒಳಪಟ್ಟು ಸಂಗ್ರಹಿಸಲಾಗಿದೆ.

ಗ್ರಂಥದ ಸಂಪಾದಕರಾದ ಸೂರ್ಯನಾರಯಣ ಚಡಗ ಅವರ ಮಾತಿನಲ್ಲಿ ಹೇಳುವುದಾದರೆ,

"ಇಷ್ಟಾದರೂ 'ಸುಹಾಸ' ಹಲವು ದೃಷ್ಟಿಯಿಂದ ತನ್ನತನವನ್ನು ಹೊಂದಿದೆ. ಯಾವುದೇ ಒಂದು ಕೃತಿ ಸಾಹಿತ್ಯದ ಮೈಲುಗಲ್ಲಾಗದೇ ಹೋಗಬಹುದು. ಒಂದು ಮೈಲಿಯನ್ನು ಪೂರ್ಣಗೊಳಿಸುವ ಎಂಟು ಫರ್ಲಾಂಗು ಕಲ್ಲುಗಳಲ್ಲಿ ಒಂದು ಕಲ್ಲಂತೂ ಆಗುವುದು ಸತ್ಯ - ಅಷ್ಟೇ ಸಮಾಧಾನ, ಅದೇ ಸಾರ್ಥಕತೆ"

ಇದಿಷ್ಟೂ 'ಸುಹಾಸ' ಪುಸ್ತಕದ ಬಗ್ಗೆ ಒಂದು ಕಿರುಪರಿಚಯ. ಇನ್ನು ಅಂದಿನ ಮುಖ್ಯ ಸಮಾರಂಭದ ವಿಚಾರಕ್ಕೆ ಬರೋಣ.

ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಸಮಾರಂಭ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ. ನಾ. ಕಸ್ತೂರಿ, ಶ್ರೀ. ಜಿ.ಪಿ. ರಾಜರತ್ನಂ ಮತ್ತು ಶ್ರೀ. ಎಂ. ಎಸ್. ಸುಂಕಾಪುರ ಅವರು ಆಗಮಿಸಿದರು. ಸಮಾರಂಭದ ಆಯೋಜಕರು ಆಹ್ವಾನಿತರನ್ನು ವೇದಿಕೆಗೆ ಕರೆತಂದರು. ಔಪಚಾರಿವಾಗಿ ಮಾಲಾರ್ಪಣೆ, ಸ್ವಾಗತ, ಅತಿಥಿಗಳ ಪರಿಚಯ ಮುಂತಾದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು. ಇನ್ನು ಮುಖ್ಯವಾದ ಕಾರ್ಯಕ್ರಮ 'ಪುಸ್ತಕ ಬಿಡುಗಡೆ'. ಗ್ರಂಥವನ್ನು ಬಿಡುಗಡೆ ಮಾಡಿ ಶ್ರೀ. ನಾ. ಕಸ್ತೂರಿ ಮತ್ತು ಶ್ರೀ. ಎಂ. ಎಸ್. ಸುಂಕಾಪುರ ಅವರಿಗೆ ಸಮರ್ಪಿಸಲಾಯಿತು.

ಮುಂದೆ, ಶ್ರೀ. ಜಿ.ಪಿ. ರಾಜರತ್ನಂ ರವರು ತಮ್ಮ ಕಂಚಿನ ಕಂಠದಿಂದ, 'ಪುರುಷ ಸರಸ್ವತಿ' ಎಂಬ ಬಿರುದಿಗೆ ತಕ್ಕಂತೆ ಭಾಷಣ ಮಾಡಿ ನೆರೆದ ಜನರೆಲ್ಲರನ್ನು ತಮ್ಮ ಮಾತಿನ ಮೋಡಿಗೆ ಒಳಪಡಿಸಿಬಿಟ್ಟರು.

ಶ್ರೀ. ಎಂ.ಎಸ್. ಸುಂಕಾಪುರ ಅವರೂ ಸಹ ಲಘು ಹಾಸ್ಯ ಮಿಶ್ರಿತ ಶೈಲಿಯಲ್ಲಿ ಮಾತನಾಡಿ ಪುಸ್ತಕ ಸಮರ್ಪಣೆಗಾಗಿ ಸಂಪಾದಕರು ಮತ್ತು ಇತರರನ್ನು ಅಭಿನಂದಿಸಿದರು.

ಇವೆಲ್ಲ ಕಾರ್ಯಕ್ರಮಗಳು ನಡೆಯುತ್ತಿರುವಾಗ ಶ್ರೀ. ನಾ. ಕಸ್ತೂರಿಯವರು ವೇದಿಕೆ ಮೇಲೆ ಕುಳಿತು ಗಂಭೀರವಾಗಿ ಎಲ್ಲವನ್ನೂ ಗಮನಿಸುತ್ತಲೇ ಇದ್ದರು. ಅಲ್ಲಿ ನೆರೆದಿದ್ದ ಜನರಿಗೆಲ್ಲ ಶ್ರೀ. ನಾ. ಕಸ್ತೂರಿಯವರು ಯಾವಾಗ ತಮ್ಮ ಭಾಷಣ ಪ್ರಾರಂಭಿಸುತ್ತಾರೆ ಎಂಬ ಕುತೂಹಲ ಇತ್ತು. ಶ್ರೀ. ನಾ. ಕಸ್ತೂರಿಯವರ ಮಾತುಗಳು ಎಂದರೆ ಅಲ್ಲಿ ಹಾಸ್ಯ, ಕುಚೋದ್ಯ, ವಿಡಂಬನೆ ಇವುಗಳು ಇದ್ದೇ ಇರುತ್ತವೆ ಎಂಬ ವಿಚಾರ ಅಲ್ಲಿ ಸೇರಿದ್ದವರಿಗೆಲ್ಲ ತಿಳಿದಿತ್ತು.

ಎಲ್ಲರ ಮಾತುಗಳು ಮುಗಿದ ಮೇಲೆ ಕಡೆಯಲ್ಲಿ ಶ್ರೀ. ನಾ. ಕಸ್ತೂರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಇದ್ದು ನಿಂತರು. ಎಲ್ಲರೂ ಶ್ರೀ. ನಾ. ಕಸ್ತೂರಿಯವರು ಏನು ಮಾತನಾಡುತ್ತಾರೆ, ಯಾವ ವಿಷಯದ ಬಗ್ಗೆ, ಎಂದೆಲ್ಲ ಯೋಚಿಸಿ ಕುತೂಹಲದಿಂದ ಅವರ ಮಾತುಗಳನ್ನು ಕೇಳುವುದಕ್ಕೆ ಚಡಪಡಿಸುತ್ತಿದ್ದರು.

ಶ್ರೀ. ನಾ. ಕಸ್ತೂರಿಯವರು ಮಾತು ಪ್ರಾರಂಭಿಸಿದರು. ಮೊದಲು ಒಂದೆರೆಡು ಔಪಚಾರಿಕ ಮಾತುಗಳನ್ನು, ಸುಹಾಸ ಪುಸ್ತಕದ ಬಗ್ಗೆ, ಅದರ ಸಂಪಾದಕರು ಪ್ರಕಾಶಕರು ಇವರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಇದಾದ ನಂತರದಲ್ಲಿ ಕಸ್ತೂರಿಯವರ ಹಾಸ್ಯದ ಪ್ರವಾಹ ಶುರುವಾಗಿ ಬಿಟ್ಟಿತು.

ಅವರು ತಮ್ಮ ಮಾತಿನ ಮೊದಲ ಗುರಿಯಾಗಿ ಶ್ರೀ. ಜಿ.ಪಿ. ರಾಜರತ್ನಂರವರನ್ನು ಆರಿಸಿಕೊಂಡರು.  ಶ್ರೀ. ಜಿ.ಪಿ. ರಾಜರತ್ನಂರವರು ಪ್ರೌಢಶಾಲೆಯ ವಿದ್ಯಾಭ್ಯಾಸ ಮಾಡುವಾಗ ಶ್ರೀ. ನಾ. ಕಸ್ತೂರಿಯವರ ಶಿಷ್ಯರಾಗಿದ್ದರು ಎಂಬ ವಿಚಾರ ಅನೇಕರಿಗೆ ತಿಳಿದಿರಲಾರದು. ಅಂದು ಶ್ರೀ. ನಾ. ಕಸ್ತೂರಿಯವರು, ಅಲ್ಲಿಂದಲೇ ವಿಷಯ ಪ್ರಾರಂಭಮಾಡಿದರು. ಅಂದು ಶ್ರೀ. ನಾ. ಕಸ್ತೂರಿಯವರು ನುಡಿದ ನುಡಿಗಳನ್ನು ನಾನು ಕೇಳಿಸಿಕೊಂಡ ಹಾಗೆ, ನೆನೆಪಿನಿಂದ ಆದಷ್ಟೂ ಮೂಲ ಮಾತುಗಳು ಬದಲಾಗದಂತೆ ಈ ಕೆಳಗೆ ದಾಖಲಿಸಿದ್ದೇನೆ. ಇನ್ನು ಮುಂದಿನ ಸಾಲುಗಳು ಕಸ್ತೂರಿಯವರ ಮಾತುಗಳು, ಅವರು ಅಂದು ಅಂದಂತೆ:

"ಈ ರಾಜರತ್ನಂ ಇದಾನಲ್ಲ, ಇವನು ನನ್ನ ಶಿಷ್ಯ, ಬಹಳ ಪಾಕಡಾ ಶಿಷ್ಯ, ಇವನಿಗೆ ಪಾಠ ಕಲಿಸೋವಾಗ ನಾನು ಇವನಿಗೆ ಬಯ್ದಿರಬಹುದು, ಒಂದೆರೆಡೇಟೂ ಸಹ ಹೊಡೆದಿರಬೇಕು, ನನಗೆ ನೆನಪಿಲ್ಲ.

ಆದರೆ ಇದನ್ನೆಲ್ಲ ಈ ರಾಜರತ್ನಂ ಮರೆತಿಲ್ಲ ಅಂತ ಕಾಣುತ್ತೆ. ಅದಕ್ಕೇನೆ, ಅದನ್ನೆಲ್ಲ, ಜ್ಞಾಪಕದಲ್ಲಿಟ್ಟುಕೊಂಡು ಅನೇಕ ವರ್ಷಗಳಾದ ಮೇಲೆ ಒಂದು ಪದ್ಯ ಬರೆದು ಬಿಟ್ಟು, ಆ ಪದ್ಯದ ಸಾಲುಗಳನ್ನೆಲ್ಲ ಇಡೀ ಕರ್ನಾಟಕದ ಮಕ್ಕಳ ಬಾಯಲ್ಲಿ ಹೇಳಿಸಿ ನನಗೆ ಸರಿಯಾದ ಶಾಸ್ತಿ ಮಾಡಿಸಿದ್ದಾನೆ. ಏನು ಮಾಡಿದ್ದಾನೆ ನೋಡಿ, ಆ ಪದ್ಯದಲ್ಲಿ,

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಕಾಸಿಗೆ ಕೊಂಡನು ಕಸ್ತೂರಿ ಅಂತ ಹೇಳಿ ನನ್ನನ್ನು ಮೂರು ಕಾಸಿನ ಕಸ್ತೂರಿ ಅಂತ ಹೇಳಿಸಿದ್ದಾನೆ. ಅಷ್ಟಕ್ಕೇ ಬಿಟ್ಟನೆ, ಎಷ್ಟು ದಿನಗಳ ಕೋಪ ನನ್ನ ಮೇಲಿತ್ತೋ ಏನೋ, ಮುಂದಿನ ಸಾಲುಗಳಲ್ಲಿ ನನ್ನ ಮೇಲಿದ್ದ ಕೋಪಾನೆಲ್ಲ ಹೀಗೆ ತೀರಿಸಿಕೊಂಡುಬಿಟ್ಟ.

ಕಸ್ತೂರಿ ನಡೆದನು ಬೀದಿಯಲಿ

ಜಂಭದ ಕೋಳಿಯ ರೀತಿಯಲಿ

ಬರೀ ಕಾಸಿಗೆ ಕಸ್ತೂರಿ ಅಂತ ಹೇಳಿಸಿದ್ದು ಸಾಲದ್ದು ಅಂತ ನನ್ನನ್ನ "ಜಂಭದ ಕೋಳಿ" ಅಂತ ಸಹ ಮಕ್ಕಳ ಬಾಯಲ್ಲಿ ಹೇಳಿಸಿಬಿಟ್ಟ.

ಅಷ್ಟಕ್ಕೇ ಇವನಿಗೆ ಸಮಾಧಾನ ಆಗಿಲ್ಲ, ಕಡೇ ಸಾಲಿನಲ್ಲಿ "ಜಂಭದ ಕೋಳಿಗೆ ಗೋಳಾಯ್ತು" ಅಂತ ಹೇಳಿಸಿ ತನ್ನ ಕೋಪಾನೆಲ್ಲ ಎಲ್ಲ ಮಕ್ಕಳ ಬಾಯಲ್ಲೂ ನನ್ನನ್ನು ಜಂಭದ ಕೋಳಿ ಅಂತ ಹೇಳಿಸಿ ತೀರಿಕೊಂಡು ಬಿಟ್ಟ ಈ ರಾಜರತ್ನಂ"

ಶ್ರೀ. ನಾ. ಕಸ್ತೂರಿಯವರು ಶ್ರೀ. ರಾಜರತ್ನಂ ಅವರ "ಬಣ್ಣದ ತಗಡಿನ ತುತ್ತೂರಿ" ಪದ್ಯ ಎಷ್ಟು ಜನಪ್ರಿಯವಾದ ಪದ್ಯ, ಅದನ್ನು ರಚಿಸಿದ ರಾಜರತ್ನಂರವರ ಪ್ರತಿಭೆಯನ್ನು ಎಷ್ಟೊಂದು ನಾಜೂಕಾಗಿ ಹಾಸ್ಯಮಯವಾಗಿ ಅಂದು ಹೊಗಳಿದರು. Subtle and cultured humour ಅಂದ್ರೆ ಇದು.

ಕಸ್ತೂರಿಯವರ ಈ ಮಾತುಗಳನ್ನು ವೇದಿಕೆಯ ಮೇಲೆ ಕುಳಿತಿದ್ದ ರಾಜರತ್ನಂ ಕೇಳಿಸಿಕೊಂಡು, ಅಲ್ಲಿಯೇ ಎದ್ದು ನಿಂತು, ಕಸ್ತೂರಿಯವರಿಗೆ ಕೈ ಮುಗಿದು, "ಗುರುಗಳೇ ನಾನು ಆ ಉದ್ದೇಶದಿಂದ ಬರೆದಿಲ್ಲ" ಅಂತ ನಗು ನಗುತ್ತಾ ತಲೆಬಾಗಿದರು. ಈ ಸನ್ನಿವೇಶವನ್ನು ಕಣ್ಣಾರೆ ಕಂಡು ಆನಂದಿಸಿದರು.

ಕಸ್ತೂರಿಯವರ ಮಾತು ಮುಂದುವರೆಯಿತು. ಪುನಃ ಹಾಸ್ಯ ತರಂಗಗಳು ಸಭೆಯಲ್ಲಿ ಮೊರೆಯಲು ಪ್ರಾರಂಭವಾಯಿತು. ಮುಂದೆ ತಮ್ಮ ಭಾಷಣದಲ್ಲಿ ಕಸ್ತೂರಿಯವರು ತಮ್ಮ 'ಕಸ್ತೂರಿ' ಎಂಬ ಹೆಸರನ್ನೇ ಕೇಂದ್ರವಾಗಿಟ್ಟು ಕೊಂಡು ಕುಚೋದ್ಯ ಮಾಡಲು ಶುರುಮಾಡಿದರು. ಅವರು ಹೇಳಿದ ಮಾತುಗಳು,

"ನನ್ನ ಹೆಸರು ಕಸ್ತೂರಿ ಅಂತ. ಆದರೆ ಈ ಹೆಸರಿನಿಂದ ಆಗುವ / ಆಗಬಹುದಾದ ಅವಾಂತರಗಳು ಒಂದೆರೆಡಲ್ಲ. ನನ್ನನ್ನು ಹಲವಾರು ಸಮಾರಂಭ, ಸಭೆಗಳಿಗೆ ಆಹ್ವಾನಿಸುವಾಗ, ಸಾಮಾನ್ಯವಾಗಿ post card ಮುಖಾಂತರ ಆಹ್ವಾನ ಕಳುಹಿಸುತ್ತಿರುತ್ತಾರೆ. ಈ ಸಭೆ ಸಮಾರಂಭಗಳ ಆಯೋಜಕರುಗಳು ನನ್ನನ್ನು ನೇರಿನಲ್ಲಿ ನೋಡಿಲ್ಲವಾದ್ದರಿಂದ, ನನ್ನ ಹೆಸರನ್ನು ನೋಡಿ, ಕಸ್ತೂರಿ ಅಂದರೆ ಹೆಂಗಸೇ ಇರಬೇಕು ಅಂತ ತೀರ್ಮಾನಿಸಿ, ಆಹ್ವಾನ ಪತ್ರಿಕೆಯಲ್ಲಿ 'ಶ್ರೀಮತಿ ಕಸ್ತೂರಿಯವರು' ಅಂತಾನೇ ಬರೆದು ಬಿಡ್ತಾ ಇದ್ರು.

ನಾನೂ ಸಹ ಅದನ್ನು ಗಮನಿಸಿದರೂ, ಈ ರೀತಿ ಜನ ಭಾವಿಸೋದ್ರಲ್ಲಿ ವಿಶೇಷ ಏನೂ ಇಲ್ಲ. ನನ್ನ ಹೆಸರೇ ಹಾಗಿದೆಯಲ್ಲ ಅಂತ ಅನೇಕಸಲ ಸುಮ್ಮನಾಗಿ ಬಿಡುತ್ತಿದ್ದೆ. ಎದುರಿನಲ್ಲಿ ನೋಡಿದಾಗ ಅವರಿಗೇ ತಿಳಿಯುತ್ತೆದಲ್ಲ ಅಂತ ಸಮಾಧಾನ ಪಟ್ಟು ಕೊಳ್ತಾ ಇದ್ದೆ.

ಹೀಗೆ 'ಶ್ರೀಮತಿ ಕಸ್ತೂರಿ' ಅಂತ ನನ್ನನ್ನು ಹೆಂಗಸನ್ನಾಗಿ ಮಾಡಿದ್ರೆ ಮಾಡ್ಕೊಳ್ಳಲಿ ಅಂತ ಸುಮ್ಮನೆ ಇದ್ರೆ, ಕೆಲವರು ಇನ್ನೂ ಹೆಚ್ಚಿನ ಮುತುವರ್ಜಿ, ಆಸಕ್ತಿ ವಹಿಸಿ, ನನಗೆ ಪತ್ರ ಬರೆಯೋವಾಗ 'ಗಂಗಾ ಭಾಗೀರಥಿ ಸಮಾನರಾದ ಶ್ರೀಮತಿ ಕಸ್ತೂರಿಯವರಿಗೆ' ಅಂತ ಬರೆದು ಬಿಡೋದೇ? ನನ್ನನ್ನು ಹೆಂಗಸು ಅಂತ ತಿಳಿದ್ರೆ ತಿಳಿಕೊಳ್ಳಲಿ ಅಂತ ಸುಮ್ಮನಿದ್ರೆ, ನಾನು ಹೆಂಗಸು ಮತ್ತು ವಿಧವೆ ಕೂಡ ಅಂತ ತೀರ್ಮಾನ ಮಾಡಿಬಿಡೋದೆ, ಇದೇನೋಪ್ಪಾ ಗ್ರಹಚಾರ ಅಂತಾ ಗಾಬರಿಯಾಗಿಬಿಟ್ಟೆ. ನೋಡಿ ಇದು ನನ್ನ ಈ 'ಕಸ್ತೂರಿ' ಅಂತ ಇರೋ ಹೆಸರು ಸೃಷ್ಟಿ ಮಾಡಿದ ಅವಾಂತರ.

ಈ ಅವಾಂತರ ಇಷ್ಟಕ್ಕೆ ನಿಲ್ಲೋದಿಲ್ಲ, ಮುಂದೆ ಕೇಳಿ, ಯಾವುದಾದರೂ ಸಭೆ ಸಮಾರಂಭಕ್ಕೆ ಹೋಗುವಾಗ ಸಾಮಾನ್ಯವಾಗಿ ಆ ಸ್ಥಳಗಳಿಗೆ ರೈಲಿನಲ್ಲಿ ಹೋಗುತ್ತಿದ್ದೆ. ಆಗ ಜತೆಯಲ್ಲಿ ನನ್ನ ಶ್ರೀಮತಿಯನ್ನೂ ಕರೆದು ಕೊಂಡು ಹೋಗುತ್ತಿದ್ದೆ. ಸಮಾರಂಭದ ಆಯೋಜಕರು ರೈಲ್ವೇ ಸ್ಟೇಷನ್ನಿಗೆ ಬಂದು ಹಾರ ತುರಾಯಿ ಹಿಡುಕೊಂಡು ಸ್ವಾಗತಿಸಲು ಕಾಯುತ್ತಿರುತ್ತಿದ್ದರು. ನಾನು, ನನ್ನ ಹೆಂಡತಿ ರೈಲಿನಿಂದ ಇಳಿದ ಕೂಡ್ಲೆ, ಅವರೆಲ್ಲ ನನ್ನ ಹೆಂಡತಿಗೆ ಹಾರ ಹಾಕಿ ಕೈಲಿ ತುರಾಯಿ ಕೊಟ್ಟು ಬಿಡುತ್ತಿದ್ದರು. ನಾನು ಪೆದ್ದನ ಹಾಗೆ ಮಿಕ ಮಿಕ ನೋಡುತ್ತ ನಿಲ್ಲಬೇಕಿತ್ತು. 'ಕಸ್ತೂರಿ' ಅಂದ್ರೆ ಹೆಂಗಸೇ ಅಂತ ಅಷ್ಟು ಧೃಡವಾದ ನಂಬಿಕೆ ಅವರುಗಳಿಗೆ. ಹೀಗೆ ಕೆಲವು ಸಲ ಆದಮೇಲೆ, ಯಾವುದೇ ಸಮಾರಂಭವಾಗಲೀ ನಾನೊಬ್ಬನೇ ಹೋಗಲು ಶುರುಮಾಡಿದೆ. ಸ್ವಲ್ಪ ಮುಂಜಾಗರೂಕತೆ ವಹಿಸಿ ಹೆಂಡತಿಗೆ ನನ್ನೊಟ್ಟಿಗೆ ಬರೋ ಛಾನ್ಸ್ ಬಂದ್ ಮಾಡಿದೆ.

ಇದೆಲ್ಲಾ ಕೆಲವರ ತಿಳುವಳಿಕೆ ಕೊರತೆಯಿಂದ ಆಗಿರ ಬಹುದೇನೋ ಅಂತ ಬಿಟ್ಟು ಬಿಡೋಣ. ಅದಲ್ಲದೇ ಇವೆಲ್ಲ ಅಷ್ಟು ಅಪಾಯಕಾರಿಯಾದ ಗೊಂದಲಗಳೇನೂ ಅಲ್ಲ. ಇನ್ನು ಮುಂದೆ ನಡೆದ ಒಂದು ಘಟನೆ ಬಹಳ ಅಪಾಯಕಾರಿ ಘಟನೆ ಆಗೋಹಾಗಿತ್ತು.

ನನಗೆ ಕೆಲವು ತಿಂಗಳುಗಳ ಕಾಲ ಒಂದು ರೀತಿ ಹೊಟ್ಟೆ ಬೇನೆ, ಏನೋ ಹಿಂಸೆ, ಸರಿಯಾಗಿ ಜೀರ್ಣವಾಗೋಲ್ಲ, ತಿನ್ನಬೇಕು, ತಿನ್ನಬೇಡ ಹೀಗೆ ನಾನಾತರ ಹಿಂಸೆ ಶುರುವಾಗಿ ಬಿಟ್ಟಿತು. ಸರಿ ವೈದ್ಯರ ಸಲಹೆ ಪಡೆಯಲು ನನ್ನ ವೈದ್ಯರ ಬಳಿ consultationಗೆ ಹೋದೆ. ಅವರು ನನ್ನನ್ನು ವೈದ್ಯಕೀಯ ತಪಾಸಣೆ ಮಾಡಿ, "ಮೊದಲು ನಾನು ಈ ಮಾತ್ರೆಗಳನ್ನು ಕೊಡ್ತೇನೆ, ಒಂದು ವಾರ ತಗೋಳಿ, ನಿಮ್ಮ ಖಾಯಿಲೆ ಕಡಿಮೆ ಆದ್ರೆ ಸರಿ, ಇಲ್ದಿದ್ರೆ ಬೇರೆ ಮಾತ್ರೆ, ಮತ್ತೆ ಇನ್ನೂ ಹೆಚ್ಚಿನ ಪರೀಕ್ಷೆ ಮಾಡೋಣ" ಅಂತ ಹೇಳಿ ಕೆಲವು ಮಾತ್ರೆಗಳನ್ನು ಕೊಟ್ರು. ಒಂದು ವಾರ ಮಾತ್ರೆ ನುಂಗಿದ್ದಾಯ್ತು. ಏನೂ ಪ್ರಯೋಜನ ಇಲ್ಲ. ಪುನ: ಅವರ ಹತ್ರ ಹೋದೆ, "ಡಾಕ್ಟರೇ, ಹಾಗೇ ಇದೆ, ಏನೂ improvement ಇಲ್ಲಾ" ಅಂದೆ. ಅವರು “ಸರಿ ಹಾಗಾದ್ರೆ, ನೀವು ಒಂದು ಕೆಲಸ ಮಾಡಿ. ರಕ್ತ ಪರೀಕ್ಷೆಗೆ ಇಲ್ಲೇ ರಕ್ತ ತೆಗೊಳ್ತಾರೆ. ಮನೆಗೆ ಹೋದಮೇಲೆ ನಾಳೆ ಬೆಳಿಗ್ಗೆ ನೀವು ಪಾಯಿಖಾನೆಗೆ ಹೋಗೋವಾಗ, ಒಂದು ಸಣ್ಣ ಬಾಟಲಿಯಲ್ಲಿ ನಿಮ್ಮ ಪಾಯಿಖಾನೆಯನ್ನು ತುಂಬಿಸಿ, ನಿಮ್ಮ ಹೆಸರನ್ನು ಒಂದು ಚೀಟೀಲಿ ಬರೆದು ಅಂಟಿಸಿ ತನ್ನಿ. ಪಾಯಿಖಾನೆ ಪರೀಕ್ಷೇಲಿ ನಿಮ್ಮ problem ಏನು ಅಂತ ಖಂಡಿತ ತಿಳಿಯುತ್ತೆ" ಅಂತ ಹೇಳಿದರು.

ನಾನು ಮನೆಗೆ ವಾಪಸ್ಸು ಬಂದು ಮಾರನೇದಿನ ಬೆಳಿಗ್ಗೆ ಡಾಕ್ಟರು ಹೇಳಿದಂತೆ ಒಂದು ಸಣ್ಣ ಬಾಟಲಿಯಲ್ಲಿ ಪಾಯಿಖಾನೆ ತುಂಬಿಸಿ, ಅದರ ಮೇಲೆ "ಕಸ್ತೂರಿ" ಅಂತ ಬರೆದು ಅಂಟಿಸಿ ದೂರದ ಒಂದು ಸ್ಟೂಲ್ ಮೇಲೆ ಇಟ್ಟೆ. ವೈದ್ಯರಿಗೆ ತೆಗೆದುಕೊಂಡು ಹೋಗಿ ಕೊಡಲು ಇನ್ನೂ ಸಮಯ ಇತ್ತು ಅದಕ್ಕೆ. ಅಲ್ಲ "ಪಾಯಿಖಾನೆ" ತುಂಬಿದ ಬಾಟಲಿಯ ಮೇಲೆ "ಕಸ್ತೂರಿ" ಅಂತ ಬರೆದು ಅಂಟಿಸಿ ಇಟ್ಟಿದ್ದರೆ, ಯಾರಾದರೂ ಪ್ರಮಾದವಶಾತ್ ಕಸ್ತೂರಿ ಅಂತ ತಿಳುಕೊಂಡು ಉಪಯೋಗಿಸಿ ಬಿಟ್ಟಿದ್ದರೆ, ಎಂಥಾ ಅನಾಹುತ ಆಗಿ ಬಿಡುತ್ತಿತ್ತು.

ಶ್ರೀ ಕಸ್ತೂರಿಯವರು ಹೀಗೆಂದ ಕ್ಷಣದಲ್ಲಿ ಇಡೀ ಸಭೆ, ನೆಗೆಗಡಲಲ್ಲಿ ಮಿಂದೆದ್ದಿತು. ಶ್ರೀ ಕಸ್ತೂರಿಯವರು ಅಂದು, ತಮ್ಮ ಮೆಲುದನಿಯಲ್ಲಿ, ಸ್ವಲ್ಪ ಹುಸಿನುಗುಕೂಡಿದ ಶೈಲಿಯಲ್ಲಿ ನಿದಾನವಾಗಿ ಆಡಿದ ಮಾತುಗಳು ಹಾಸ್ಯ, ವಿಡಂಬನೆಗೆ ಬರೆದ ಹೊಸ ವ್ಯಾಖ್ಯಾನದಂತೆ ಇತ್ತು.

ಅವರಂಥ ಮಹನೀಯರನ್ನು ಕಣ್ಣಾರೆ ಕಂಡು ಅವರ ಮಾತುಗಳನ್ನು ಕೇಳುವ ಭಾಗ್ಯ ಅಂದು ನನ್ನದಾಯಿತು.

ಆ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಕಸ್ತೂರಿಯವರಿಗೆ ಮತ್ತು ಸುಂಕಾಪುರ ಅವರುಗಳಿಗೆ ಸಮರ್ಪಿತವಾದ "ಸುಹಾಸ" ಗ್ರಂಥ ನನ್ನ ಬಳಿ ಈಗಲೂ ಇದೆ. ಅಂದು ಅದರ ಬೆಲೆ ಮುವ್ವತ್ತೈದು ರೂಪಾಯಿಗಳು.

ಆ ದಿನ ಸಮಾರಂಭ ಸ್ಥಳದಲ್ಲಿಯೇ ಆ ಗ್ರಂಥದ ಮಾರಾಟವನ್ನು ಸಹ ಏರ್ಪಡಿಸಲಾಗಿತ್ತು. ಅಂದಿನ ವಿಷೇಶ ಎಂದರೆ, ನಾನು ಖರೀಧಿಸಿದ ಆ ಗ್ರಂಥದ ಒಳಪುಟದಲ್ಲಿ ಶ್ರೀ. ನಾ. ಕಸ್ತೂರಿ, ಶ್ರೀ. ಜಿ. ಪಿ. ರಾಜರತ್ನಂ ಮತ್ತು ಶ್ರೀ. ಎಂ.ಎಸ್. ಸುಂಕಾಪುರ ಅವರುಗಳ autograph ಪಡೆದಿದ್ದು.

ಈ ಮಹನೀಯರುಗಳ autograph ಇರುವ ಆ ಪುಟದ ಛಾಯಾ ಚಿತ್ರವನ್ನು ಈ ಲೇಖನದಲ್ಲಿ ಓದುಗರ ಗಮನಕ್ಕಾಗಿ ಕೊಟ್ಟಿದ್ದೇನೆ.

ಮೇಲೆ ನಾನು ದಾಖಲಿಸಿರುವ ಸಮಾರಂಭದ ವಿವರಗಳನ್ನು ಅಂದು ಯಾವ ಯಾವ ದಿನ ಪತ್ರಿಕೆಗಳು ವರದಿ ಮಾಡಿದ್ದವು ಎಂಬ ವಿವರ ಇಂದು ನನಗೆ ನೆನಪಿಲ್ಲ. ನಾನು ನೇರಿನಲ್ಲಿ ಕಂಡು ಕೇಳಿ ಆನಂದಿಸಿದ ಈ ವಿಶೇಷ ಸನ್ನಿವೇಶವನ್ನು ಕನ್ನಡದ ಓದುಗರಿಗಾಗಿ ದಾಖಲಿಸಿದ್ದೇನೆ.

 

Rating
No votes yet

Comments

Submitted by Aravind M.S Mon, 05/26/2014 - 13:00

ನಾ ಕಸ್ತೂರಿಯವರ ಬಗ್ಗೆ ಅನೇಕ ವಿವರ, ನಿಮ್ಮ ಅನುಭವ ಹಂಚಿಕೊಂಡಿರುವುದಕ್ಕೆ ಬಹಳ ಧನ್ಯವಾದಗಳು ಅರವಿಂದತನಯರಿಗೆ. ಅವರ ‘ಕುಂತಿ ಮದುವೆ’ ಕಥಾನಕ ಓದಿರುವೆ ಸುಮಾರು ಪುಟಗಳು. ಪೂರ್ತಿ ಓದೋಷ್ಟರಲ್ಲಿ ಕಳವಾಗಿಬಿಟ್ಟಿತ್ತು ! ಅವರ ಪದಪ್ರಯೋಗಗಳನ್ನ ಆಸ್ವಾದಿಸಿದ್ದ ನನಗೆ ನಿಮ್ಮ ಲೇಖನ ಇನ್ನೊಂದಿಷ್ಟು ಹೇಳಿಕೊಟ್ಟು ಉಪಕಾರ ಮಾಡಿದೆ. ಕುಂತಿ ಮದುವೆ ಕಥೆಯಲ್ಲಿ ಮುಕ್ತಕ ಪದಗಳು : ಸಾತಿವೃತ್ಯ (ಪಾತಿವೃತ್ಯದಿಂದ), ಸಿಗರೇಟಿನ ಮೇಲೆ ಸೇಡು ತೀರಿಸು (ಸೇದು), ಇತ್ಯಾದಿ.