ಇದು ಇಂದಿನ ರಾಮಾಯಣ !!

ಇದು ಇಂದಿನ ರಾಮಾಯಣ !!

ಎಲೈ ಮರ್ಯಾದಾ ಪುರುಷೋತ್ತಮನೇ, ಒಂದಂತೂ ನಿಜ ಅಲ್ಲಲ್ಲ ಒಂದಂತೂ ಸೂರ್ಯ-ಚಂದ್ರರಿರುವಷ್ಟೇ ಸತ್ಯ ! ನೀನೊಬ್ಬ ಆದರ್ಶ ಪುರುಷ. ನಿನ್ನ ಗುಣಗಳನ್ನು ಮತ್ತು ಜೀವನವನ್ನು ಅನುಕರಣೆ ಮಾಡಿ ನೆಡೆಯುವವರಲ್ಲಿ ಕಲಿಯುಗದ ಮಾನವರು ಖಂಡಿತ ಹಿಂದೆ ಬಿದ್ದಿಲ್ಲ ಎಂದು ನಿನಗೆ ನಾ ಹೇಳಲು ಸಂತೋಷಿಸುತ್ತೇನೆ. ಕಾಲಕ್ಕೆ ತಕ್ಕಂತೆ ಸ್ವರೂಪ ಬದಲಾಗಿರಬಹುದು ಅಷ್ಟೇ !

೧. ಒಂದು ಕಾಲದಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಮೂರು ರಾಮರಾಜ್ಯವಾಗಿತ್ತು. ಕರ್ನಾಟಕದಲ್ಲಿ ರಾಮಕೃಷ್ಣ, ಆಂಧ್ರದಲ್ಲಿ ರಾಮರಾಯ, ತಮಿಳುನಾಡಿನಲ್ಲಿ ರಾಮಚಂದ್ರ. ಇಂದು ಘನ ಕರ್ನಾಟಕದಲ್ಲಿ ಜನ ಸೇವೆ ಮಾಡಲು ಸದಾ ಸಿದ್ದರಾಗಿರೋ ರಾಮನೊಬ್ಬ ಇದ್ದಾರೆ.  ನಿನ್ನ ಹೆಸರಿಟ್ಟುಕೊಳ್ಳುವ ಪರಿಪಾಠವಂತೂ ಇದೆ ಅಷ್ಟೇ !!

 

೨. ನೆಮ್ಮದಿಯಾಗಿ ಅರಮನೆಯಲ್ಲಿದ್ದ ನೀನು, ಯಾರದೋ ಮಾತಿನಿಂದ ಏನೇನೋ ಆಗಿ ಪರಿವಾರದೊಡನೆ ಕಾಡು-ಮೇಡು ಅಲೆಯಬೇಕಾಯ್ತು. 

ನಿಜ, ಇಂದಿಗೂ ಹಲವು ಕಡೆ ಹೀಗೆ. ಹೊಟ್ಟೆಪಾಡು ಎಂಬೋ ಹತ್ತಾರು ತಲೆಶೂಲೆಯ ರಾವಣನ ದೆಸೆಯಿಂದಾಗಿ ಗಂಡ ಒಂದು ಕಡೆ, ಹೆಂಡತಿ ಒಂದು ಕಡೆ ಅಂತ ಒಟ್ಟಿಗಿದ್ದೂ ದೂರ ಆಗ್ತಾರೆ. ಕಾಲಿಗೊಬ್ಬರು ಕೈಗೊಬ್ಬರು ಎಂದು ಸೇವೆ ಮಾಡಿಸಿಕೊಂಡಿದ್ದ ಜನ, ಎಲ್ಲ ಬಿಟ್ಟು, ನಾರು ಮಡಿಯುಟ್ಟು (ಒಗೆಯದೇ ಕೊಳೆತು ನಾರೋ ಜೀನ್ಸ್) ಪರದೇಶಕ್ಕೆ ಬಂದು ಎಲ್ಲ ಕೆಲಸ ತಾವೇ ಮಾಡಿಕೊಳ್ಳುತ್ತ ಕೆಲಸವೆಂಬೋ ಪತ್ನಿಯನ್ನು ಅರಸುತ್ತ ಅಲೆಯುತ್ತಿರುತ್ತಾರೆ!

 

೩. ಮಹರ್ಷಿ ವಿಶ್ವಾಮಿತ್ರರ ಮಾತಿನ ಮೇರೆಗೆ ಸ್ವಯಂವರಕ್ಕೆ ಹೋದ ನೀನು, ಬಿಲ್ಲನ್ನು ಹೆದೆಯೇರಿಸುವ ಭರದಲ್ಲಿ ಬಿಲ್ಲನ್ನೇ ಮುರಿದ ಮಹಾಶೂರ. 

ಐನಾತಿ ಐಟಿ ಜೀವನದಲ್ಲೂ ಅಷ್ಟೇ, ಹೆದೆಯೇರಿಸುವ ಕೆಲಸ ಬಿಟ್ಟು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಾಜಕ್ಟನ್ನೇ ಮುರಿದ ಮಹಾಶೂರರು ಇದ್ದಾರೆ !

 

೪. ಅರಣ್ಯದಲ್ಲಿದ್ದರೂ ಕೆಲಕಾಲ ನೆಮ್ಮದಿಯಾಗಿದ್ದ ಮೂವರು ನೀವು. ಐಷಾರಾಮ್ಯದಿಂದ ದೂರವಿದ್ದರೆ ನೆಮ್ಮದಿ ಎಂದು ತೋರಿಸಿಕೊಟ್ಟವ ನೀನು. 

ಕಾಡು ಮೇಡು ಬೆಟ್ಟಗಳ ಮಧ್ಯೆ ಸಿಗ್ನಲ್ ಸಿಗದ ಮೊಬೈಲುಗಳಿಂದ ದೂರವಿರೋ ನಮಗೂ ಕ್ಯಾಂಪಿಂಗ್’ನಲ್ಲಿ ಈ ಅನುಭವ ಆಗಿದೆ !!

 

೫. ಯಾಚಕನಾಗಿ ಬಂದವನ ಯಾಚಿಸುವ ಕೈಗೆ, ಸೀಮಾರೇಖೆ ದಾಟಿ ಬಂದು ನೀಡಿದವಳನ್ನೇ ಹೊತ್ತೊಯ್ದ ರಾವಣ. ಅಂದು ದೇಹಿ ಎಂದವಗೆ ನೀಡುವುದು ಕರ್ತವ್ಯವಾಗಿತ್ತು. ಕಾಡಿನ ಮೂಲೆಯಲ್ಲೆಲ್ಲೋ ಕಾವಿ ಧರಿಸಿ ದೇಹಿ ಎಂದವನಿಗೂ ನೀಡುವುದು ಕರ್ತವ್ಯವೇ ಆಗಿತ್ತು. 

ಇಂದೂ ಅಷ್ಟೇ, ಹೊರ ಜಗತ್ತಿಗೆ ಕಾಣದೇ ಇರುವಂತಹ ಬೀದಿಗಳಿಗೂ ನುಗ್ಗಿ ದೇಹಿ ಎನ್ನುತ್ತಿದ್ದಾರೆ ಬಿಳೀ ಬಟ್ಟೆ ರಾವಣರು. ಮತ ನೀಡುವುದು ಕರ್ತವ್ಯ. ನೀಡುವ ಬೇಡುವ ಕಾವಿ/ಖಾದಿ ಹಿಂದಿರುವ ಸತ್ಯದ ಅರಿವಾಗುವ ಹೊತ್ತಿಗೆ ಕಾಲ ಮೀರಿರುತ್ತದೆ !

 

೬. ಸೀತೆಯನ್ನು ಅಪಹರಿಸಿ, ನಿನ್ನನ್ನು ಲಂಕೆಗೆ ಬರುವಂತೆ ಮಾಡಿಸಿ, ನಿನ್ನೊಡನೆ ಯುದ್ದ ಮಾಡಿ, ತಾನೇ ಮಡಿದ ರಾವಣ. ಅವನನ್ನು ಕೊಂದು ಸೀತೆಯನ್ನು ಮರಳಿ ಪಡೆದ ಕಥೆಯಂತೂ ನಮ್ಮ ಚಲನಚಿತ್ರ ನಿರ್ಮಾಪಕರ ಅಚ್ಚುಮೆಚ್ಚು. 

ನಿನ್ನ ಕಥೆಯನ್ನು ತೆಗೆದುಕೊಂಡು ತಾವು ದುಡ್ಡುಮಾಡಿಕೊಂದು ನಿನ್ನ ಗುಡಿಯಲ್ಲಿರೋ ಹುಂಡಿಗೂ ನಾಲ್ಕು ಕಾಸು ಹಾಕಿದ್ದಾರೆ ಎಂದುಕೊಳ್ಳುತ್ತೇನೆ !

 

೭. ಸೀತಾಪಹರಣ ಮಾಡಿಕೊಂಡು ಹೋಗುತ್ತಿದ್ದವನನ್ನು ತಡೆಯಲು ದಶರಥನ ಸ್ನೇಹಿತನಾದ ಜಟಾಯು ಧಾವಿಸುತ್ತಾನೆ. ಕ್ರೋಧಗೊಂಡ ರಾವಣ ಜಟಾಯುವಿನ ರೆಕ್ಕೆಗಳನ್ನೇ ಕತ್ತರಿಸುತ್ತಾನೆ. 

ಈ ಉದಾಹರಣೆಯನ್ನು ನಾವು ಬಹಳ ಶ್ರದ್ದೆಯಿಂದ ಪಾಲಿಸುತ್ತೇವೆ. ಇಂದಿಗೂ ನಮ್ಮಲ್ಲಿ, ಇಬ್ಬರು ಕಾದಾಡುವಾಗ ನಾವು ಮಧ್ಯೆ ಮೂಗು ತೂರಿಸುವುದಿಲ್ಲ. ಮೂಗು ತೂರಿಸಲು ಹೋದರೆ ಮೂಗಿಗೆ ಕೆಲಸವೇ ಇರೋಲ್ಲ. ಉಸುರಿದ್ದರೆ ತಾನೇ ಮೂಗು ?

 

೮. ಅಪಹರಣಗೊಂಡು ಲಂಕೆ ಸೇರಿದ ಸೀತೆಯ ಸ್ಥಾನ ಅರಮನೆಯಲ್ಲ!  ಬದಲಿಗೆ ಅರಮನೆಯ ಹೊರಗಿನ ಉದ್ಯಾನವನದಲ್ಲಿ. ಮುಂದೆ ನೆಡೆದದ್ದು ಬರೀ ಕಾಯುವಿಕೆ. 

ಇಂದಿಗೂ ಇದು ಸತ್ಯ. ವೀಸಾ ಸರಿ ಇಲ್ಲದೇ ಬೇರೆ ದೇಶಕ್ಕೆ ಹೋಗಿ ಅಲ್ಲಿ ಸಿಕ್ಕಿಕೊಂಡರೆ ಕಾಯುವಿಕೆಯ ಸೆರೆವಾಸ ಖಂಡಿತ. ಅರಮನೆಗೆ ಪ್ರವೇಶವಿಲ್ಲ ! ಹಾಗೂ ಬಲಪ್ರದರ್ಶನ ಮಾಡಿ ಒಳಗೆ ನುಗ್ಗಿದರೆ ವಿಚಾರಣೆ ಮತ್ತು ಬಾಲ ಸುಡುವಿಕೆಯು ಕಟ್ಟಿಟ್ಟ ಬುತ್ತಿ !

 

೯. ಅಣ್ಣ-ತಮ್ಮಂದಿರು ಎಂದರೆ ಹೇಗಿರಬೇಕು ಎಂಬ ಆದರ್ಶ ತೋರಿದವ ನೀನು. ನಿನ್ನ ಮುಂದೆ, ಅಣ್ಣನ  ಮೇಲೇ ದೂರು ಹೇಳಿ ವಾಲಿಯನ್ನು ಶಿಕ್ಷಿಸಲು ಕೋರಿದವನು ಸುಗ್ರೀವ. ವಾಲಿಯನ್ನು ಶಿಕ್ಷಿಸುವ ಮೊದಲು, ಬುದ್ದಿ ಕಲಿಸಲೆಂದು ಸುಗ್ರೀವನಿಗೂ ದಂಡನೆ ಕೊಟ್ಟವ ನೀನು. ದೂರದಿಂದಲೇ ಇವರು ಕಿತ್ತಾಡುವುದನ್ನು ನೋಡಿ ನಂತರ ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ತಳೆದವ ನೀನು. 

ಹೌದು ರಾಮ, ಇಂದಿಗೂ ಅಷ್ಟೇ, ಇಬ್ಬರನ್ನು ಕಾಚ್ಚಾಡಲು ಬಿಟ್ಟು ದೂರ ನಿಂತು ನೋಡುವ ಮಂದಿ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದೀವಿ ನಾವು ಮಾನವರು !

 

೧೦. ನೆಮ್ಮದಿಯ ನಿನ್ನ ಜೀವನದಲ್ಲಿ ಅಗಸನೊಬ್ಬನ ಮಾತು ಕೇಳಿ ನೀ ಕೈಗೊಂಡ ನಿರ್ಧಾರದಂತೆಯೇ ಇಂದಿಗೂ ನೆಡೆಯುತ್ತದೆ. ಬಟ್ಟೆ ಒಗೆಯಲು ಬರುವ ಲಚ್ಚಿ, ಕೆಂಪಿಗಳು ಎಲ್ಲೋ ಕೇಳಿದ್ದನ್ನು ಉಪ್ಪು ಖಾರ ಬೆರೆಸಿ ಉಸುರಲು ಎಷ್ಟೋ ಸಂಸಾರಗಳು ಹಾಳಾಗಿವೆ. ಆಗಸ ಇರುವವರೆಗೂ ಇಂತಹ ಅಗಸರು ಇದ್ದೇ ಇರುತ್ತಾರೆ !

ಅಂದ ಹಾಗೆ, ಮತ್ತೊಂದು ವಿಷಯ ಇದೆ. ಆದರೆ ಈ ಒಂದು ವಿಷಯ ನಾವು ಪಾಲಿಸಿಲ್ಲ, ಪಾಲಿಸೋಲ್ಲ ! ಇದು ಇಂದಿನ ರಾಮಾಯಣ !!

೧೧. ಹದಿನಾಲ್ಕು ವರ್ಷವಾದರೂ ನೀ ಹಿಂದಿರುಗಿದ ನಂತರ ನಿನ್ನ ಸಿಂಹಾಸನ ನಿನಗೆ ದೊರಕಿತು. ನಮ್ಮಲ್ಲೆಲ್ಲ ಹಂಗೇನಿಲ್ಲ, ಎದ್ರೆ ಕುರ್ಚಿ ಸಿಕ್ಕೋದಿಲ್ಲ, ಟಾಯ್ಲೆಟ್’ಗೆ ಹೋದ್ರೂ ಖುರ್ಚಿ ಒಯ್ತಾರೆ!

Comments