ನಮ್ಮ ಮನೆಯೊಳಗೆ ಕೊಲೆಗಡುಕರು, ಲಫಂಗರು, ಮುಕ್ತವಾಗಿ ಪ್ರವೇಶಿಸುತ್ತಿದ್ದಾರೆ, ಎಚ್ಛರ!!

ನಮ್ಮ ಮನೆಯೊಳಗೆ ಕೊಲೆಗಡುಕರು, ಲಫಂಗರು, ಮುಕ್ತವಾಗಿ ಪ್ರವೇಶಿಸುತ್ತಿದ್ದಾರೆ, ಎಚ್ಛರ!!

ಮೊಗೆದಷ್ಟೂ ನೀರು ಎನ್ನುವ ಮಾತು ಕೇಳಿದ್ದೇವೆ. ವೇದದ ವಿಚಾರದಲ್ಲಿ ಇದು ನೂರಕ್ಕೆ ನೂರು ಸತ್ಯ. ಬದುಕಿನ ಯಾವ ವಿಚಾರವನ್ನು ಹುಡುಕುತ್ತಾ ಹೋದರೂ ವೇದದಲ್ಲಿ ಅದಕ್ಕೆ ಮಾರ್ಗದರ್ಶನವಿದೆ. ಅಥರ್ವಣ ವೇದದ ಒಂದು ಮಂತ್ರದ ಬಗ್ಗೆ ಇಂದು ವಿಚಾರ ಮಾಡೋಣ.

 

ಯನ್ಮೇ ಮನಸೋ ನ ಪ್ರಿಯಂ ನ ಚಕ್ಷುಸೋ ಯನ್ಮೇ ಬಭಸ್ತಿ ನಾಭಿನಂದತಿ |

ತದ್ ದುಷ್ವಪ್ನ್ಯಂ  ಪ್ರತಿಮುಂಚಾಮಿ ಸಪತ್ನೇ ಕಾಮಂ  ಸ್ತುತ್ವೋದಹಂ ಭಿದೇಯಮ್ ||

[ಅಥರ್ವ ಕಾಂಡ-೯, ಸೂಕ್ತ-೨, ಮಂತ್ರ-೨ ]

ಅರ್ಥ :-

ಯತ್ ಮೇ ಮನಸಃ ನಪ್ರಿಯಂ ನ = ಯಾವುದು ನನ್ನ ಮನಸ್ಸಿಗೆ ಪ್ರಿಯವಾಗಿಲ್ಲವೋ

ಯತ್ ಮೇ ಚಕ್ಷುಷಃ ಪ್ರಿಯಂ ನ = ಯಾವುದು ನನ್ನ ಕಣ್ಣಿಗೆ ಪ್ರಿಯವಾಗಿಲ್ಲವೋ

ಯತ್ ಮೇ ಬಭಸ್ತಿ = ಯಾವುದು ನನ್ನನ್ನು ಭಯಪಡಿಸುತ್ತದೋ

ನ ಅಭಿನಂದತಿ = ಆನಂದವನ್ನುಂಟುಮಾಡುವುದಿಲ್ಲವೋ

ತತ್ ದುಷ್ವಪ್ನ್ಯಂ = ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು,

ಸಪತ್ನೇ ಪ್ರತಿಮುಂಚಾಮಿ = ವಿರೋಧಿಯೇ, ವಿಸರ್ಜಿಸಿಬಿಡುತ್ತೇನೆ

ಅಹಂ ಕಾಮಂ ಸ್ತುತ್ವಾ = ನಾನು ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ

ಉತ್ ಭಿದೇಯಮ್ = ಉದ್ಧಾರಹೊಂದುತ್ತೇನೆ ಅಥವಾ ಭಯದಿಂದ ಮೇಲೇಳುತ್ತೇನೆ

ಭಾವಾರ್ಥ :-

ಯಾವುದು ನನ್ನ ಮನಸ್ಸಿಗೆ ಪ್ರಿಯವಾಗಿಲ್ಲವೋ, ಯಾವುದು ನನ್ನ ಕಣ್ಣಿಗೆ ಪ್ರಿಯವಾಗಿಲ್ಲವೋ, ಯಾವುದು ನನ್ನನ್ನು ಭಯಪಡಿಸುತ್ತದೋ, ಯಾವುದು ಆನಂದವನ್ನುಂಟುಮಾಡುವುದಿಲ್ಲವೋ, ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು, ವಿಸರ್ಜಿಸಿಬಿಡುತ್ತೇನೆ, ನಾನು ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ, ಉದ್ಧಾರಹೊಂದುತ್ತೇನೆ ಅಥವಾ ಭಯದಿಂದ ಮೇಲೇಳುತ್ತೇನೆ.

ಬಹುಷ: ಗಾಂಧೀಜಿಯವರು ಈ ವೇದ ಮಂತ್ರಾರ್ಥವನ್ನು ತಿಳಿದೇ ಮೂರು ಮಂಗಗಳನ್ನು ಚಿತ್ರಿಸಿರಬೇಕು. ಕೆಟ್ಟದ್ದನ್ನು ನೋಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟ ಮಾತನಾಡುವುದಿಲ್ಲ, ಎಂಬ ಸಂದೇಶವನ್ನು ಗಾಂಧೀಜಿಯವರು ಕೊಡಬೇಕಾದರೆ ಈ ವೇದ ಮಂತ್ರವು ಅವರಿಗೆ ಸ್ಪೂರ್ಥಿ ನೀಡಿರಬೇಕು. ಯಾವುದು ನನ್ನ ಮನಸ್ಸಿಗೆ, ಕಣ್ಣಿಗೆ ಪ್ರಿಯವಾಗಿಲ್ಲವೋ, ಯಾವುದು ನನ್ನನ್ನು ಭಯಪಡಿಸುತ್ತದೋ,ಯಾವುದು ಆನಂದ ಉಂಟುಮಾಡುವುದಿಲ್ಲವೋ, ಅಂತಹಾ ಅನಿಷ್ಟಗಳನ್ನು ನನ್ನಿಂದ ಹೊರಹಾಕಿ ಬಿಡುವೆ. ಹಾಗೂ ಸಕಲಲೋಕಕಾಮ್ಯನಾದ ಭಗವಂತನನ್ನು ಸ್ತುತಿಸಿ ಉದ್ಧಾರ ಹೊಂದುತ್ತೇನೆ, ಭಯದಿಂದ ಮೇಲೇಳುತ್ತೇನೆ.

ಎಷ್ಟು ಅದ್ಭುತವಾಗಿದೆ ಈ ವೇದ ಮಂತ್ರ! ನನ್ನ ಮನಸ್ಸಿಗೆ, ಕಣ್ಣಿಗೆ ಪ್ರಿಯವಲ್ಲದ ಅಂದರೆ ಏನು? ಇಲ್ಲಿ ನಾವು ಸರಿಯಾಗಿ ಅರ್ಥಮಾಡಿಕೊಂಡರೆ  ಮಾತ್ರ ಉಪಯೋಗವಾಗುತ್ತದೆ.ಇಲ್ಲವಾದರೆ ಪ್ರಯೋಜನವಾಗಲಾರದು. ನನ್ನ ಮನಸ್ಸು ಏನು ಬಯಸಬೇಕು, ನನ್ನ ಕಣ್ಣು ಏನು ನೋಡಬೇಕೆಂಬ ಅರಿವು ನಮಗಿದ್ದಾಗ ಮಾತ್ರ ಯಾವುದು ಅಪ್ರಿಯವೆಂದು ಅರಿವಾಗುತ್ತದೆ. ಪ್ರತಿನಿತ್ಯ ಮಾಡುವ     ಅಗ್ನಿಹೋತ್ರದ ಆರಂಭದಲ್ಲಿ ಹೇಳುವ ಅಂಗಸ್ಪರ್ಷ ಮಂತ್ರಗಳಲ್ಲಿ ಹೇಳುತ್ತೇವೆ. . . . . . .

 

ಓಂ ವಾಂಙ್ಮ ಆಸ್ಯೇಸ್ತು || ಓಂ ನಸೋರ್ಮೇ ಪ್ರಾಣೋಽಸ್ತು||

ಓಂ ಅಕ್ಷ್ಣೋರ್ಮೇ ಚಕ್ಷುರಸ್ತು|| ಓಂ ಕರ್ಣಯೋರ್ಮೇ ಶ್ರೋತ್ರಮಸ್ತು||

ಓಂ ಬಾಹ್ವೋರ್ಮೇ ಬಲಮಸ್ತು|| ಓಂ ಊರ್ವೋರ್ಮೇ ಓಜೋಸ್ತು||

ಓಂ ಅರಿಷ್ಟಾನಿ ಮೇs೦ಗಾನಿ ತನೂಸ್ತನ್ವಾ ಮೇ ಸಹಸಂತು ||

 

ಭಾವಾರ್ಥ :-

ನಮ್ಮ ತುಟಿಗಳಲ್ಲಿ ಒಳ್ಳೆಯ ಮಾತೇ ಬರಲಿ, ಮೂಗಿನಿಂದ ಒಳ್ಳೆಯ ಪ್ರಾಣವಾಯುವನ್ನು ಸ್ವೀಕರಿಸುವಂತಾಗಲಿ,  ಕಣ್ಗಳು ಒಳ್ಳೆಯದನ್ನೇ ನೋಡುವಂತಾಗಲೀ, ಕಿವಿಗಳು ಒಳ್ಳೆಯದನ್ನೇ ಕೇಳುವಂತಾಗಲೀ, ಬಾಹುಗಳಲ್ಲಿ ಬಲವಿರಲಿ, ತೊಡೆಗಳಲ್ಲಿ ಶಕ್ತಿ ಇರಲಿ, ನನ್ನ ಎಲ್ಲಾ ಅಂಗಾಗಳಲ್ಲೂ ಶಕ್ತಿ ಇರಲಿ|

ನನ್ನ ಎಲ್ಲಾ ಅಂಗಾಂಗಗಳಿಗೂ ಶಕ್ತಿ ಸಿಗಲಿ, ಎಂದು ದೇವರನ್ನು ಪ್ರಾರ್ಥಿಸಿದೊಡನೆ ಶಕ್ತಿ ಸಿಕ್ಕಿಬಿಡುತ್ತದೋ? ಖಂಡಿತಾ ಇಲ್ಲ. ಭಗವಂತನನ್ನು ಪ್ರಾರ್ಥಿಸಿ ನಾವು ಅಗತ್ಯವಾದ ಆಹಾರ ಸೇವನೆ, ಮಾಡುವ ವ್ಯಾಯಾಮ, ನಮ್ಮ ಸದ್ವಿಚಾರಗಳು ನಮಗೆ ಶಕ್ತಿ ತುಂಬುತ್ತವೆ. ಭಗವಂತನೇ ಕೊಡುವವನು ಹೌದು, ಆದರೆ ಅವನು ಸುಮ್ಮನೆ ಕೊಡುವುದಿಲ್ಲ, ಯೋಗ್ಯರಿಗೆ,ಅರ್ಹರಿಗೆ ಮಾತ್ರ ಕೊಡುತ್ತಾನೆ. ಅಂದರೆ ಆರೋಗ್ಯಯುತವಾದ ಪುಷ್ಟಿದಾಯಕವಾದ ಆಹಾರದ  ಹಿತಮಿತವಾದ ಸೇವನೆ, ಸೂಕ್ತವ್ಯಾಯಾಮ,ಧ್ಯಾನ,ಸಚ್ಚಿಂತನೆಗಳಿಂದ ಮಾನಸಿಕವಾಗಿ,ಬೌದ್ಧಿಕವಾಗಿ ಮತ್ತು ಶಾರೀರಿಕವಾಗಿಯೂ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ನಮ್ಮ ಆತ್ಮಬಲವನ್ನೂ ಹೆಚ್ಚಿಸಿಕೊಳ್ಳಬಹುದು.

ಯಜ್ಞವನ್ನು ಮಾಡುವಾಗ ಇದಂ ನಮಮ ಎಂದು ಹೇಳುತ್ತೇವೆ. ಅಂದರೆ ಇದು ನನಗಾಗಿ ಅಲ್ಲ.ಹಾಗಾದರೆ ಯಾರಿಗಾಗಿ ಯಜ್ಞ ಮಾಡಬೇಕು? ಅಂದರೆ ನನಗಾಗಿ ಅಲ್ಲ ನಾನು ಮಾಡುತ್ತಿರುವುದು ಈ ಸಮಾಜದ ಹಿತಕ್ಕಾಗಿ. ನಾನೂ ಕೂಡ ಈ ಸಮಾಜದಲ್ಲಿದ್ದೀನಲ್ಲವೇ?  ಸಮಾಜವು ಚೆನ್ನಾಗಿದ್ದರೆ ತಾನೇ ನಾನೂ ಕೂಡ ಚೆನ್ನಾಗಿರಲು ಸಾಧ್ಯ! ನಾನು ಮಾತ್ರ ಚೆನ್ನಾಗಿರುತ್ತೀನೆಂದರೆ ನನ್ನ ಸುತ್ತ ಮುತ್ತಿನ ಅತೃಪ್ತರು ನನ್ನನ್ನು ಚೆನ್ನಾಗಿರಲು ಬಿಡಲು ಸಾಧ್ಯವೇ ಇಲ್ಲ. ಆದ್ದರಿಂದ ನಾನು ಮಾಡುತ್ತಿರುವುದು ಸಮಾಜದ ಹಿತಕ್ಕಾಗಿ ಎಂಬ ಅರಿವು ನಮ್ಮಲ್ಲಿರಬೇಕು. ಅದಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ, ನಮಗೆ ಇಂತಹ ಪವಿತ್ರ ಕೆಲಸ ಮಾಡಲು ಶಕ್ತಿ ಕೊಡು

 

ಯಾವುದು ನನ್ನ ಮನಸ್ಸಿಗೆ ಪ್ರಿಯವಾಗಿಲ್ಲವೋ, ಯಾವುದು ನನ್ನ ಕಣ್ಣಿಗೆ ಪ್ರಿಯವಾಗಿಲ್ಲವೋ, ಎನ್ನುವಾಗ ಮೇಲಿನ ವಿಚಾರಗಳು ನಮ್ಮ ಕಣ್ಮುಂದೆ ಬರಬೇಕು. ಯಾವುದು ಈ ವಿಚಾರಗಳಿಗೆ ವಿರುದ್ಧವಾಗಿದೆಯೋ. . . . . ತದ್ ದುಷ್ವಪ್ನ್ಯಂ  ಪ್ರತಿಮುಂಚಾಮಿ ಸಪತ್ನೇ ಕಾಮಂ  ಸ್ತುತ್ವೋದಹಂ ಭಿದೇಯಮ್|| ಎಂಬ ಈ ಮಂತ್ರ ಭಾಗದಲ್ಲಿ ನಾವು ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು, ವಿಸರ್ಜಿಸಿಬಿಡುತ್ತೇನೆ, ನಾನು ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ, ಉದ್ಧಾರಹೊಂದುತ್ತೇನೆ ಅಥವಾ ಭಯದಿಂದ ಮೇಲೇಳುತ್ತೇನೆ- ಎಂದು ಈ ವೇದಮಂತ್ರವು ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.

ಅಂದರೆ ಭಗವಂತನ ಮುಂದೆ ಕುಳಿತು ಭಗವಂತಾ ನನ್ನಲ್ಲಿ ಸದ್ವಿಚಾರವನ್ನು ತುಂಬು, ದುಷ್ಟ ಚಿಂತನೆ ದೂರಮಾಡು ಎಂದರೆ ಸಾಕಾಗುವುದಿಲ್ಲ. ನಮಗೆ ಸದ್ವಿಚಾರಗಳ-ದುರ್ವಿಚಾರಗಳ, ಪ್ರಿಯ ಮತ್ತು ಅಪ್ರಿಯ ವಿಚಾರಗಳ ಬಗ್ಗೆ ಸರಿಯಾದ ಕಲ್ಪನೆ ಇರಬೇಕು. ಹಾಗಿದ್ದರೆ ನಾವು ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ಬಿಡಬೇಕು, ಎಂಬುದನ್ನು ಸ್ವಯಂ ನಿರ್ಧರಿಸಲು ಶಕ್ತರಾಗುತ್ತೇವೆ. ಅದಕ್ಕೆ ಸೂಕ್ತ ಶಕ್ತಿಕೊಡೆಂದು ಮಾತ್ರ ಭಗವಂತನಲ್ಲಿ ನಾವು ಪ್ರಾರ್ಥಿಸಬಹುದಷ್ಟೆ.

ಈ ಮಂತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ನಮ್ಮ ನಿತ್ಯಜೀವನದಲ್ಲಿ ಏನು ನೋಡಬೇಕು, ಏನು ಕೇಳಬೇಕು,ಏನು ಮಾಡಬೇಕೆಂಬ ವಿಚಾರದಲ್ಲಿ  ಸ್ಪಷ್ಟತೆಯನ್ನು ಪಡೆಯಬಹುದು. ಶ್ರೀ ಜಗ್ಗಿ ವಾಸುದೇವ್ ಅವರ ಲೇಖನ ಒಂದನ್ನು ಓದುತ್ತಿದ್ದೆ. ಅವರ ನೇರ ನುಡಿಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ ಹಿಂದೆಲ್ಲಾ ನಾವು ಮನೆಗೆ ಯಾರನ್ನು ಕರೆಯಬೇಕು? ಯಾರನ್ನು ಬಿಡಬೇಕು? ಯಾರನ್ನು ದೂರವಿಡಬೇಕು ? ಎಂದೆಲ್ಲಾ ಯೋಚಿಸಿ ಅದರಂತೆ ನಡೆಯುತ್ತಿದ್ದೆವು. ಇಂದು ಈ ನಿರ್ಧಾರ ನಮ್ಮ ಕೈಲಿಲ್ಲ. ನಮ್ಮ ಮನೆಯಲ್ಲಿ ಟಿ.ವಿ. ಎಂಬ ಪೆಡಂಬೂತ ಬಂದು ಬಿಟ್ಟಿದೆ. ಅದರ ಮೂಲಕ ನಮ್ಮ ಮನೆಯೊಳಗೆ ಕೊಲೆಗಡುಕರು, ಅತ್ಯಾಚಾರಿಗಳು, ದರೋಡೆಕೋರರು, ಲಫಂಗರು, ಎಲ್ಲರೂ ಮುಕ್ತವಾಗಿ ಪ್ರವೇಶಿಸುತ್ತಾರೆ

ಅಬ್ಭಾ! ಎಷ್ಟು ಸತ್ಯವಾದ ಮಾತಲ್ಲವೇ? ಒಳ್ಳೆಯ-ಕೆಟ್ಟ ಸಂಗತಿಗಳು ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ. ನಾವು ವೇದದ ಕರೆಯಂತೆ ನಮಗೆ ಅಪ್ರಿಯವಾದ ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು, ವಿಸರ್ಜಿಸಿಬಿಡುತ್ತೇವೆ, ಎಂದು ಹೇಳಬೇಕಾದರೆ ಮೊದಲು ನಾವು ಟಿ.ವಿ.ಗೊಂದು ನೀತಿ ರೂಪಿಸಬೇಕು. ಪ್ರದರ್ಶನವಾಗುವ ಎಲ್ಲಾ ಒಳ್ಳೆಯ-ಕೆಟ್ಟ , ಸಭ್ಯ-ಅಸಭ್ಯ , ದೃಶ್ಯಗಳನ್ನೆಲ್ಲವನ್ನೂ ನೋಡುತ್ತಾ, ಸುಶ್ರಾವ್ಯ ಸಂಗೀತದ ಜೊತೆಗೇ ಕರ್ಕಶ ಧ್ವನಿಯನ್ನೂ ಕೇಳುತ್ತಾ ನನ್ನಲ್ಲಿ ಸುಧಾರಣೆಯಾಗಬೇಕೆಂದು ಬಯಸಿದರೆ ಅದು ಸಾಧ್ಯವಿಲ್ಲ ಮೊದಲು ಮನೆಯಲ್ಲಿ ಟಿ.ವಿಗೊಂದು ನೀತಿ ರೂಪಿಸಬೇಕು. ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬ ಸ್ಪಷ್ಟ ಕಲ್ಪನೆ ನಮಗಿದ್ದರೆ ವೇದದ ಕರೆಯಂತೆ ನಾವು ಆ ದುಸ್ವಪ್ನವನ್ನು, ಅಶುಭದ ಕನಸನ್ನು, ಅನಿಷ್ಟವನ್ನು, ಅಮಂಗಲವನ್ನು, ವಿಸರ್ಜಿಸಿಬಿಡುತ್ತೇನೆ, ನಾನು ಸರ್ವಸಂಕಲ್ಪ ಸಿದ್ಧನಾದ ಸಕಲಲೋಕ ಕಾಮ್ಯನಾದ ಪರಮಾತ್ಮನನ್ನು ಸ್ತುತಿಸಿ, ಉದ್ಧಾರಹೊಂದುತ್ತೇನೆ ಅಥವಾ ಭಯದಿಂದ ಮೇಲೇಳುತ್ತೇನೆ-ಎಂಬ ವೇದದ ಕರೆಯಂತೆ ಸುಧಾರಣೆಯಾಗುವುದರಲ್ಲಿ ಸಂಶಯವಿಲ್ಲ.

Comments

Submitted by abdul Fri, 05/23/2014 - 13:14

ಶ್ರೀಧರ್, ಸುಂದರವಾದ ಆಧ್ಯಾತ್ಮಿಕ ಲೇಖನ ಬರೆದಿದ್ದೀರಿ, ಧನ್ಯವಾದಗಳು.

"ನಮ್ಮ ಮನೆಯಲ್ಲಿ ಟಿ.ವಿ. ಎಂಬ ಪೆಡಂಬೂತ ಬಂದು ಬಿಟ್ಟಿದೆ. ಅದರ ಮೂಲಕ ನಮ್ಮ ಮನೆಯೊಳಗೆ ಕೊಲೆಗಡುಕರು, ಅತ್ಯಾಚಾರಿಗಳು, ದರೋಡೆಕೋರರು, ಲಫಂಗರು, ಎಲ್ಲರೂ ಮುಕ್ತವಾಗಿ ಪ್ರವೇಶಿಸುತ್ತಾರೆ" ನೀವು ವರ್ಣಿಸಿದ ಮೂವರು ಮಾತ್ರವಲ್ಲ, ನೂರಾರು ನಮೂನೆಯ pervert ಗಳು ದೃಶ್ಯ ಮಾಧ್ಯಮದ ಮೂಲಕ ನಮ್ಮ ಮನೆ, ಮತಿಯನ್ನು ಆಕ್ರಮಿಸಿ ಕೊಂಡಿವೆ.

ಟೀ ವೀ ಬಂದ ಹೊಸತರಲ್ಲಿ ಮುಸ್ಲಿಂ ಧಾರ್ಮಿಕ ಗುರುಗಳು ಎಚ್ಚರಿಸಿದ್ದರು. ಹಣ ಕೊಟ್ಟು, ಶೈತಾನ್ (satan) ಅನ್ನು ಮನೆಯೊಳಗೇ ತರುತ್ತಿದ್ದೀರಿ ಎಂದು. ಅವರ ಮಾತಿಗೆ ನಾವು ಗೇಲಿ ಮಾಡಿದ್ದೆವು, ಆಧುನಿಕತೆಯನ್ನು ಅರಗಿಸಿ ಕೊಳ್ಳಲಾಗದವರು ಎಂದು. ಆದರೆ ಆಗಿದ್ದೇನು?