ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗಳಿಗೆ ಮಿತಿಯೇ ಇಲ್ಲವಾಗಿ ಮನುಷ್ಯನ ಸುಗಮ ಜೀವನಕ್ಕೆ ಅವಶ್ಯಕ ಅಲ್ಲದಿದ್ದರೂ ಐಶಾರಾಮಿ ಭೋಗಸಾಮಗ್ರಿಗಳನ್ನು ಹೊಂದುವ ಅವಿವೇಕಿ ಪ್ರವೃತ್ತಿ ಇಂದು ಎಲ್ಲೆಡೆ ಕಂಡುಬರುತ್ತಿದೆ.  ಉದಾಹರಣೆಗೆ ಮನುಷ್ಯನಿಗೆ ವಾಸಕ್ಕೆಮನೆ ಬೇಕು.  ಐದಾರು ಸದಸ್ಯರು ಇರುವ ಒಂದು ಸಂಸಾರದ ಸುಗಮ ಜೀವನಕ್ಕೆ ಹೆಚ್ಚೆಂದರೆ ಏಳೆಂಟು ಕೊಠಡಿಗಳಿರುವ ಮನೆ ಧಾರಾಳ ಸಾಕು.  ಆದರೆ ಹಣದ ಮದ ತಲೆಗೇರಿದ ಧನಿಕರು ಇಂದು ಹಲವಾರು ಅಂತಸ್ತುಗಳುಳ್ಳ ಹಲವು ಕೊಠಡಿಗಳನ್ನು ಹೊಂದಿರುವ ಮನೆಗಳನ್ನು ಕಟ್ಟಿಸುತ್ತಿದ್ದಾರೆ.  ಹಣ ಉಳ್ಳವರು ತಮಗೆ ಬೇಕಾದಷ್ಟು ದೊಡ್ಡ ಮನೆ ಕಟ್ಟಿಸುತ್ತಾರೆ ಇದರಿಂದ ಏನು ತೊಂದರೆ, ನಿಮಗೇಕೆ ಹೊಟ್ಟೆಕಿಚ್ಚು ಎಂದು ಬಂಡವಾಳಶಾಹಿ ವ್ಯವಸ್ಥೆಯ ಸಮರ್ಥಕರು ಕೇಳುತ್ತಾರೆ.  ವಾಸ್ತವವಾಗಿ ಇದರಿಂದ ಪರಿಸರ ಸಮತೋಲನಕ್ಕೆ ನಿಶ್ಚಿತವಾಗಿಯೂ ತೊಂದರೆ ಇದೆ ಹೇಗೆಂದರೆ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿದಷ್ಟೂ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ, ಪರಿಸರ ಮಾಲಿನ್ಯ ಹೆಚ್ಚುತ್ತದೆ.  ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಲು ಅಪಾರ ಪ್ರಮಾಣದಲ್ಲಿ ಕಬ್ಬಿಣ, ಸಿಮೆಂಟು, ಮರಳು, ಜಲ್ಲಿ ಇತ್ಯಾದಿಗಳು ಬೇಕಾಗುತ್ತವೆ.  ಇದರಿಂದಾಗಿ ಹೆಚ್ಚು ಹೆಚ್ಚು ಗಣಿಗಾರಿಕೆ ಮಾಡಬೇಕಾಗುತ್ತದೆ.  ಕಬ್ಬಿಣ ಅದಿರು ಅಗೆಯಲು, ಅದನ್ನು ಸಾಗಿಸಲು, ಅದಿರನ್ನು ಕರಗಿಸಿ ಕಬ್ಬಿಣವಾಗಿ ಮಾಡಲು ಅಪಾರ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನ ಬಳಕೆಯಾಗುತ್ತದೆ.  ಇದರಿಂದ ಇಂಗಾಲನಿಲ ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿ ಹಸಿರು ಮನೆ ಪರಿಣಾಮ ಉಂಟಾಗುತ್ತದೆ.  ವಾತಾವರದಲ್ಲಿ ಇಂಗಾಲನಿಲಗಳು ಸೂರ್ಯನ ಶಾಖವನ್ನು ಹಿಡಿದು ಇಡುವುದನ್ನು ಹಸಿರು ಮನೆ ಪರಿಣಾಮ ಎನ್ನಲಾಗುತ್ತದೆ.  ಇದರಿಂದಾಗಿ ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುತ್ತಿದೆ.  ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುವುದರ ಪರಿಣಾಮ ಎಲ್ಲರ ಮೇಲೆಯೂ ಆಗುತ್ತದೆ.  ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳನ್ನು ಕಟ್ಟಿ ಪರಿಸರ ಸಮತೋಲನ ಕೆಡಿಸುವ ಶ್ರೀಮಂತರ ದೊಡ್ಡಸ್ಥಿಕೆಯ ಪ್ರದರ್ಶನದಿಂದ ಎಲ್ಲರ ಮೇಲೆಯೂ ದುಷ್ಪರಿಣಾಮ ಆಗುತ್ತದೆ.  ಹೀಗಾಗಿ ಇದನ್ನು ಬಡವರ ಹೊಟ್ಟೆಕಿಚ್ಚು ಎಂದು ತಳ್ಳಿಹಾಕುವಂತಿಲ್ಲ.  ರಿಲಯನ್ಸ್ ಕಂಪನಿಯ ಒಡೆಯ ಮುಖೇಶ್ ಅಂಬಾನಿ ಮುಂಬಯಿಯಲ್ಲಿ 27 ಅಂತಸ್ತುಗಳುಳ್ಳ 4,00,000  ಚದರ ಮೀಟರ್ ವಿಸ್ತೀರ್ಣದ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ ಭಾರೀ ಬಂಗಲೆಯನ್ನು ಈ ದೃಷ್ಟಿಯಿಂದ ನೋಡಬೇಕು.  ಕೆಲವರು ಇದನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುತ್ತಾರೆ.  ಇದರಿಂದಾಗಿ ಉದ್ಯೋಗಾವಕಾಶ ಹೆಚ್ಚುತ್ತದೆ, ಹೆಚ್ಚು ಹೆಚ್ಚು ನಿರ್ಮಾಣ ಚಟುವಟಿಕೆ ನಡೆದಷ್ಟೂ ಆರ್ಥಿಕತೆಗೆ ಹೆಚ್ಚಿನ ಬಲ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.  ಇದು ನಿಜವಾಗಿಯೂ ಒಂದು ಅತ್ಯಂತ ಬೇಜವಾಬ್ದಾರಿಯ ಮೂರ್ಖ ಚಿಂತನೆಯಾಗಿದೆ.  ಈ ರೀತಿಯ ಚಿಂತನೆ ಆತ್ಮಹತ್ಯಾಕಾರಕ ಎಂದೇ ಹೇಳಬೇಕಾಗುತ್ತದೆ.  ಇದು ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳ, ಎಲ್ಲ ಮಾನವರ ಹಿತಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡುವ ಚಿಂತನೆ ಆಗಿರುವುದಿಲ್ಲ.  ಅವಶ್ಯಕತೆಗಿಂತ ಹೆಚ್ಚಿನ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿ ಶ್ರೀಮಂತರು ಲಂಗುಲಗಾಮಿಲ್ಲದೆ ಬೃಹತ್ ಬಂಗಲೆಗಳನ್ನು ಕಟ್ಟಿಸುವುದರ ದುಷ್ಪರಿಣಾಮ ಬಡವರ, ಮಧ್ಯಮ ವರ್ಗದವರ ಜೀವನ ದುಸ್ತರವಾಗಲೂ ಕಾರಣವಾಗುತ್ತದೆ ಹೇಗೆಂದರೆ ಹೆಚ್ಚು ಹೆಚ್ಚು ಕಬ್ಬಿಣ, ಸಿಮೆಂಟ್, ಹೊಯಿಗೆ, ಜಲ್ಲಿ ಇತ್ಯಾದಿಗಳನ್ನು ಅವಶ್ಯಕತೆ ಇಲ್ಲದಿದ್ದರೂ ಶ್ರೀಮಂತರು ಅತಿಯಾಗಿ ಬಳಸುವುದರಿಂದ ಅವುಗಳ ಬೇಡಿಕೆ ಮಿತಿಮೀರಿ ಹೆಚ್ಚಿ ಅವುಗಳ ಬೆಲೆಯಲ್ಲಿ ವಿಪರೀತ ಹೆಚ್ಚಳವಾಗುತ್ತದೆ.  ಇದರಿಂದ ಬಡವರು, ಮಧ್ಯಮ ವರ್ಗದವರು ತಮ್ಮ ಸ್ವಂತ ಮನೆ ಕಟ್ಟಿಸುವುದು ದುಸ್ತರವಾಗುತ್ತದೆ.  ಹೀಗಾಗಿ ಶ್ರೀಮಂತರಿಂದ ಪ್ರಾಕೃತಿಕ ಸಂಪನ್ಮೂಲಗಳ ಅತಿ ಬಳಕೆ ಬಡವರ, ಮಧ್ಯಮ ವರ್ಗದವರ ಜೀವನ ದುಸ್ತರವಾಗಲು ಕೂಡ ಕಾರಣವಾಗುತ್ತಿದೆ.  ಈ ಬಗ್ಗೆ ಶ್ರೀಮಂತರು ಆಲೋಚಿಸಿ ತಮ್ಮ ಆಡಂಬರ ಹಾಗೂ ದುಂದುವೆಚ್ಚದ, ಅವಶ್ಯಕವಲ್ಲದ ಬಂಗಲೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವುದು ಮನುಕುಲದ ಹಿತ ದೃಷ್ಟಿಯಿಂದ ಅಗತ್ಯ.

ಹೆಚ್ಚು ಹೆಚ್ಚು ಐಶಾರಾಮಿ ವಾಹನಗಳ ತಯಾರಿಕೆ ಹಾಗೂ ಬಳಕೆ ಕೂಡ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ.  ಉದಾಹರಣೆಗೆ ಮನುಷ್ಯನ ಅನುಕೂಲಕ್ಕೆ ಒಂದು ಕುಟುಂಬಕ್ಕೆ ಒಂದು ಸಾಮಾನ್ಯ ಕಾರು ಧಾರಾಳ ಸಾಕು ಅದೂ ಹೆಚ್ಚೆಂದರೆ ಏಳೆಂಟು ಲಕ್ಷ ಬೆಲೆಯ ಕಾರು ಸಾಕು.  ಆದರೆ ಇಂದು ಶ್ರೀಮಂತರು 20 ಲಕ್ಷ, 50 ಲಕ್ಷ ಬೆಲೆಯ ಬೃಹದಾಕಾರದ ಕಾರುಗಳನ್ನು ಕೊಂಡು ಆ ಕಾರುಗಳಲ್ಲಿ ಒಬ್ಬನೇ ಓಡಾಡುತ್ತಾ ಪರಿಸರಕ್ಕೆ ಅಪಾರ ಹಾನಿ ಮಾಡುತ್ತಿದ್ದಾರೆ.  ಇಂಥ ಹಾನಿಯನ್ನು ಮನುಷ್ಯನು ವಿವೇಕವನ್ನು ಬಳಸಿದರೆ ತಡೆಯಲು ಸಾಧ್ಯ ಆದರೆ ಪ್ರಪಂಚದಲ್ಲಿ ಇರುವ ಶ್ರೀಮಂತರಿಗೆ ಇಂದು ವಿವೇಕದ ಅಭಾವ ಇದೆ.  ದೊಡ್ಡ ದೊಡ್ಡ ಐಶಾರಮಿ ಕಾರುಗಳು ಮಾನವನಿಗೆ ಅಗತ್ಯವೇ ಇಲ್ಲ.  ದೊಡ್ಡ ದೊಡ್ಡ ಕಾರುಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಾದಷ್ಟೂ ಪರಿಸರಕ್ಕೆ ಹಾನಿ ತಪ್ಪಿದ್ದಲ್ಲ.  ಹೇಗೆಂದರೆ ದೊಡ್ಡ ದೊಡ್ಡ ಐಶಾರಾಮಿ ಕಾರುಗಳನ್ನು ತಯಾರಿಸಲು ಕಬ್ಬಿಣ, ಫೈಬರ್, ಪ್ಲಾಸ್ಟಿಕ್ ಇನ್ನಿತರ ಘಟಕಗಳು ಹೆಚ್ಚು ಹೆಚ್ಚು ಬೇಕಾಗುತ್ತದೆ.  ಇವುಗಳನ್ನು ಹೆಚ್ಚು ಹೆಚ್ಚು ಬಳಸಿದಷ್ಟೂ ಅದರ ದುಷ್ಪರಿಣಾಮ ಪರಿಸರದ ಮೇಲೆ ಆಗುತ್ತದೆ ಎಂಬ ಚಿಂತನೆ ಬಂಡವಾಳಶಾಹಿ ಆರ್ಥಿಕ ಚಿಂತಕರಿಗೆ ಇಲ್ಲ.  ಅವರ ದೃಷ್ಟಿ ಇರುವುದು ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉದ್ಯೋಗಾವಕಾಶ, ಜನರು ಹೆಚ್ಚು ಹೆಚ್ಚು ಶ್ರೀಮಂತರಾಗುವುದು ಮಾತ್ರ.  ಹೀಗಾದರೆ ಮಾತ್ರ ಅದು ಅಭಿವೃದ್ಧಿ ಎಂಬುದು ಬಂಡವಾಳಶಾಹಿ ಆರ್ಥಿಕ ಚಿಂತಕರ ದೂರದೃಷ್ಟಿಯಿಲ್ಲದ ಚಿಂತನೆಯಾಗಿದೆ.  ಯೋಚನಾಶಕ್ತಿಯಿರುವ ಏಕೈಕ ಪ್ರಾಣಿಯಾದ ಮಾನವನಿಗೆ ಭಾರೀ ಐಶಾರಾಮಿ ಬಂಗಲೆ, ಐಶಾರಾಮಿ ಕಾರುಗಳು ಇಲ್ಲದೆಯೂ ಆರಾಮವಾಗಿ ಬದುಕಬಹುದು ಎಂಬ ಚಿಂತನೆ ಇಲ್ಲದೆ ಇರುವುದು ಶೋಚನೀಯ.

ಮನುಷ್ಯನ ವಿವೇಕ ಮರೆಯಾಗಿ ಪ್ರದರ್ಶನದ ಹುಚ್ಚು ಹೆಚ್ಚಾಗಲು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಕಾರಣವಾಗುತ್ತಿದ್ದು ಮೇರೆಯಿಲ್ಲದ ಭೋಗ ಜೀವನ ಜಗತ್ತಿನಾದ್ಯಂತ ಹೆಚ್ಚುತ್ತಿದೆ.  ಈ ರೀತಿಯ ಅಭಿವೃದ್ಧಿಯ ಹುಚ್ಚು ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಿದೆ.  ಬಹಳಷ್ಟು ಶ್ರೀಮಂತರಿಗೆ ವಿವೇಕ ಪ್ರಜ್ಞೆ ಇಲ್ಲದೆ ಇರುವುದರಿಂದಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ತೊಂದರೆಯಾಗುವ ಸಂಭವ ಕಂಡುಬರುತ್ತಿದೆ.  ಭೂಮಿಯ ಉಷ್ಣಾಂಶ ಏರುತ್ತಿರುವುದರಿಂದಾಗಿ ಹಲವು ಪ್ರಾಣಿ, ಸಸ್ಯ ಪ್ರಭೇದಗಳು ಕಣ್ಮರೆಯಾಗುತ್ತಿವೆ.  ಎಲ್ಲರ ಹಿತಚಿಂತನೆ ಮಾಡದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೇ ಇದಕ್ಕೆ ಕಾರಣ.   ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಶ್ರೀಮಂತರಿಗೆ ಮಾತ್ರ ಗೌರವ ಇರುವುದರಿಂದಾಗಿ ಎಲ್ಲರೂ ಶ್ರೀಮಂತರಾಗುವ ಹುಚ್ಚು ಓಟದಲ್ಲಿ ಸ್ಪರ್ಧಿಸುತ್ತಿದ್ದಾರೆ.  ಈ ಹುಚ್ಚು ಸ್ಪರ್ಧೆಯ ಪರಿಣಾಮವಾಗಿ ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳು, ಐಶಾರಾಮಿ ವಾಹನಗಳನ್ನು ಹೊಂದುವ ಚಟ ಮನುಷ್ಯನಲ್ಲಿ ಬೆಳೆಯುತ್ತಿದೆ.  ಇದು ಅವಶ್ಯಕತೆ ಇದ್ದು ನಡೆಯುವ ಓಟವಲ್ಲ ತಾನು ಇತರರಿಗಿಂತ ಮೇಲು ಎಂದು ತೋರಿಸುವ ಸಲುವಾಗಿ ನಡೆಯುತ್ತಿರುವ ಮಾನವನ ಅವಿವೇಕವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯ ಚಿಂತಕರು ಲಂಗುಲಗಾಮಿಲ್ಲದ ಅಭಿವೃದ್ಧಿಯ ಹುಚ್ಚನ್ನು ನಿಯಂತ್ರಿಸದೆ ಇದ್ದರೆ ಭವಿಷ್ಯ ಅದರಲ್ಲೂ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಬಹುದು.

ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಬಳಸಿ ಬಿಸಾಡುವುದು ಅಭಿವೃದ್ಧಿಯ ಮಾನದಂಡವಾಗಿದೆ.  ಇದರಿಂದ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ, ಬೆಳವಣಿಗೆಯ ದರ ಹೆಚ್ಚುತ್ತದೆ ಎಂಬುದು ಈ ತರಹದ ಅಭಿವೃದ್ಧಿಯ ಸಮರ್ಥಕರ ದೂರದೃಷ್ಟಿಯಿಲ್ಲದ ವಾದವಾಗಿದೆ.   ಹೀಗಾಗಿ ಮಾನವನ ಸುಗಮ ಜೀವನಕ್ಕೆ ಅನಿವಾರ್ಯವಲ್ಲದ ಹಲವು ವಸ್ತುಗಳು ಇಂದು ಮಾರುಕಟ್ಟೆಯಲ್ಲಿದ್ದು ಅವುಗಳ ಮಾರಾಟಕ್ಕಾಗಿ ಬಂಡವಾಳಶಾಹಿಗಳಿಂದ ನಿಯಂತ್ರಿಸಲ್ಪಡುವ ಟಿವಿ ಮಾಧ್ಯಮ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.  ಜಾಹೀರಾತುಗಳೇ ಟಿವಿ ಮಾಧ್ಯಮದ ಜೀವಾಳವಾಗಿರುವ ಕಾರಣ ನೈತಿಕತೆ ಎಂಬುದು ಟಿವಿ ಮಾಧ್ಯಮದಿಂದ ಬಹುತೇಕ ಕಣ್ಮರೆಯಾಗಿದೆ.  ಹೀಗಾಗಿ ಅವಶ್ಯಕವಲ್ಲದ ಹಲವು ಸಾಮಗ್ರಿಗಳ ಜಾಹೀರಾತುಗಳು ಟಿವಿ ಹಾಗೂ ಇತರ ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದು ಜನರ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಿ ಪರಿಸರದ ಮೇಲೆ ಹಾನಿ ಮಾಡಲು ಪರೋಕ್ಷ ಕಾರಣವಾಗಿದೆ.  ನಗರಗಳಲ್ಲಿ ಹೆಚ್ಚು ಹೆಚ್ಚು ವಿದ್ಯುತ್ ಬಳಕೆ ಮಾಡಿದಷ್ಟೂ ಅದು ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ.  ಅವಶ್ಯಕತೆ ಇಲ್ಲದಿದ್ದರೂ ನಗರಗಳಲ್ಲಿ ವಿದ್ಯುತ್ ದೀಪಗಳು ಹಗಲು ರಾತ್ರಿ ಎಂಬ ಪರಿವೆ ಇಲ್ಲದೆ ಉರಿಯುತ್ತಿರುತ್ತವೆ.  ಚಳಿಗಾಲ, ಮಳೆಗಾಲದಲ್ಲಿಯೂ ಸೆಕೆ ಇಲ್ಲದಿದ್ದರೂ ಹವಾನಿಯಂತ್ರಣ ಸಾಧನ ಬಳಕೆ, ಫ್ಯಾನುಗಳ ಬಳಕೆ ನಿರಂತರವಾಗಿ ನಡೆಯುತ್ತಿರುತ್ತದೆ ಮತ್ತು ಈ ರೀತಿಯ ಜೀವನವೇ ಶ್ರೇಷ್ಠ ಎಂಬ ಚಿಂತನೆಯನ್ನು ಬಂಡವಾಳಶಾಹಿ ವ್ಯವಸ್ಥೆ ಜನರಲ್ಲಿ ಬಿತ್ತಿ ಬೆಳೆಸಿದೆ.  ಹೀಗಾಗಿ ಎಷ್ಟು ವಿದ್ಯುತ್ ಉತ್ಪಾದನೆ ಆದರೂ ಸಾಕಾಗುವುದಿಲ್ಲ.  ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅಗ್ಗದ ವಿದ್ಯುತ್ ಉತ್ಪಾದಿಸಲು ಉಷ್ಣ ವಿದ್ಯುತ್ ಒಂದೇ ಮಾರ್ಗವಾಗಿರುವುದರಿಂದ ವಾತಾವರಣದಲ್ಲಿ ಹಸಿರು ಮನೆ ಅನಿಲ ಪರಿಣಾಮ ಉಂಟು ಮಾಡುವ ಇಂಗಾಲದ ಅನಿಲಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.  ಯಾವುದು ಜೀವನಕ್ಕೆ ಅವಶ್ಯಕ, ಯಾವುದಕ್ಕೆಜೀವನದಲ್ಲಿ ಮಹತ್ವ ನೀಡಬೇಕು ಎಂಬುದು ಅತ್ಯ್ನಂತ ಹೆಚ್ಚು ವಿದ್ಯಾವಂತ ಹಾಗೂ ಉನ್ನತ ಹುದ್ದೆಗಳಲ್ಲಿ ಇರುವ ಜನತೆಗೂ ತಿಳಿಯದೆ ಹೆಚ್ಚು ಹೆಚ್ಚು ಹಣ ಮಾಡುವುದು, ಹೆಚ್ಚು ಹೆಚ್ಚು ಆಸ್ತಿಪಾಸ್ತಿ ಮಾಡಿಡುವುದು, ಹೆಚ್ಚು ಹೆಚ್ಚು ಭೋಗಸಾಧನಗಳನ್ನು ಕೊಂಡು ಪೇರಿಸುವುದು ಶ್ರೇಷ್ಠ ಜೀವನ ವಿಧಾನ ಎಂಬ ಸಮೂಹ ಸನ್ನಿಯನ್ನು ಆಧುನಿಕ ಬಂಡವಾಳಶಾಹಿ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹುಟ್ಟು ಹಾಕಿದೆ.  ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಮುಕ್ತ ಮಾರುಕಟ್ಟೆಯು ಹುಟ್ಟು ಹಾಕಿರುವ ಎಂದೆಂದೂ ತೀರದ ದಾಹದ ಬಗ್ಗೆ ಮರುಚಿಂತನೆ ಮಾಡದೆ ಇದ್ದರೆ ಪ್ರಾಕೃತಿಕ ವಿಕೋಪಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿ ಜನರ ಜೀವನ ದುರ್ಬರವಾಗಲಿದೆ.  ಇದರ ಮುನ್ಸೂಚನೆ ಈಗಾಗಲೇ ಹೆಚ್ಚುತ್ತಿರುವ ಬರಗಾಲ, ಚಂಡಮಾರುತ, ಸುಂಟರಗಾಳಿ, ಅತಿವೃಷ್ಟಿ, ವಿಪರೀತ ಸೆಕೆ, ಹೆಚ್ಚುತ್ತಿರುವ ಕಾಡ್ಗಿಚ್ಚು ಮೊದಲಾದವುಗಳ ರೂಪದಲ್ಲಿ ಆರಂಭವಾಗಿದೆ.  ಆದರೂ ಅಭಿವೃದ್ಧಿಯ ಹುಚ್ಚಿಗೆ ಬಲಿಯಾಗಿರುವ ನಮಗೆ ಈ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ.  ಇದನ್ನೆಲ್ಲಾ ಜನತೆಯ ಮುಂದೆ ಚರ್ಚಿಸಿ ಜಾಗೃತಿ ಮೂಡಿಸಬೇಕಾಗಿರುವ ಮಾಧ್ಯಮಗಳೇ ಬಂಡವಾಳಶಾಹಿ ಹಾಗೂ ಜಾಹೀರಾತುಗಳ ಕೃಪೆಯಲ್ಲಿ ಬದುಕಿರುವುದರಿಂದ ಜನರನ್ನು ಎಚ್ಚರಿಸುವವರೇ ಇಂದು ಇಲ್ಲವಾಗಿದ್ದಾರೆ.  ಈ ಬಗ್ಗೆ ಪರ್ಯಾಯ ಮಾಧ್ಯಮಗಳು ಇಂದು ಚಿಂತಿಸುವುದು ಅಗತ್ಯವಿದೆ.

(ಚಿತ್ರ ಕೃಪೆ: ಗೂಗಲ್ ಇಮೇಜಸ್)