ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ
ಭಾರತದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ. ಹೊಸ ಸರ್ಕಾರ ಬಂದಿದೆ ಎಂದು ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಕಡಿಮೆಯಾಗಬಹುದೇ ಎಂದು ನೋಡಿದರೆ ಅಂಥ ಸಾಧ್ಯತೆ ಕ್ಷೀಣವಾಗಿದೆ. ಬೆಲೆಯೇರಿಕೆಗೆ ಪ್ರಧಾನ ಕಾರಣ ಪೆಟ್ರೋಲಿಯಂ ಉತ್ಪನ್ನಗಳು ನಿರಂತರವಾಗಿ ದುಬಾರಿಯಾಗುತ್ತಿರುವುದು. ಇದನ್ನು ಹೊಸ ಸರ್ಕಾರ ಬಂದರೂ ಕಡಿಮೆ ಮಾಡುವುದು ಸಾಧ್ಯವಾಗಲಿಕ್ಕಿಲ್ಲ ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಮುಕ್ತ ಮಾರುಕಟ್ಟೆಯ ತತ್ವಗಳ ಅನುಸಾರ ಬೇಡಿಕೆ ಹೆಚ್ಚಿದಷ್ಟೂ ಒಂದು ವಸ್ತುವಿನ ಬೆಲೆ ಹೆಚ್ಚುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗುವ ಸಂಭವ ಇಲ್ಲ. ಇತ್ತೀಚೆಗೆ ಅವಶ್ಯ ವಸ್ತುಗಳ ಬೆಲೆಯೇರಿಕೆಯಲ್ಲಿ ತೀವ್ರ ಹೆಚ್ಚಳವಾಗಲು ಪ್ರಧಾನ ಕಾರಣ ಡೀಸೆಲ್ ಬೆಲೆಯನ್ನು ಮುಕ್ತ ಮಾರುಕಟ್ಟೆಯ ಬೆಲೆಗೆ ಸರಿದೂಗಿಸಲು ಹಂತ ಹಂತವಾಗಿ ತಿಂಗಳು ತಿಂಗಳು ಅದರ ಬೆಲೆಯನ್ನು ಏರಿಸುತ್ತಾ ಬರುತ್ತಿರುವುದು. ಇದು ಉದಾರೀಕರಣ, ಜಾಗತೀಕರಣ, ಖಾಸಗೀಕರಣದ ಅಂಗವಾಗಿ ನಡೆಯುತ್ತಿರುವ ಆರ್ಥಿಕ ನೀತಿಯ ಫಲ. ಇದನ್ನು ಹೊಸ ಸರ್ಕಾರ ಹಿಂದೆಗೆದುಕೊಳ್ಳುವ ಧೈರ್ಯ ತೋರಿಸುವ ಯಾವುದೇ ಲಕ್ಷಣಗಳು ಇಲ್ಲ ಏಕೆಂದರೆ ಹೊಸ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪಕ್ಷದ ಆರ್ಥಿಕ ನೀತಿಗೂ ಹಿಂದಿದ್ದ ಸರ್ಕಾರದ ಆರ್ಥಿಕ ನೀತಿಗೂ ಹೇಳಿಕೊಳ್ಳುವ ವ್ಯತ್ಯಾಸ ಇಲ್ಲ. ಹೀಗಾಗಿ ಜನಸಾಮಾನ್ಯನಿಗೆ ಹೊಸ ಸರ್ಕಾರ ಬಂದರೂ ನಿರೀಕ್ಷಿತ ಪರಿಣಾಮ ಕಾಣಲಾರದು. ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಲು ಪ್ರಧಾನ ಕಾರಣ ಜಾಗತಿಕ ಆರ್ಥಿಕ ಹಿಂಜರಿತ. ಇದು ಯಾರ ಹಿಡಿತಕ್ಕೂ ಸಿಗದೇ ವಿಶ್ವದ ಮಹಾ ಆರ್ಥಿಕ ತಜ್ಞರನ್ನೂ ಕಕ್ಕಾಬಿಕ್ಕಿಯಾಗಿಸಿದೆ. ವಿಶ್ವ ಆರ್ಥಿಕ ಹಿಂಜರಿತ ಎಷ್ಟು ಸಮಯ ಹೀಗೇ ಇರುತ್ತದೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಏಕೆಂದರೆ ಮುಕ್ತ ಮಾರುಕಟ್ಟೆ ನೀತಿಯನ್ನು ಪ್ರಪಂಚದ ದೇಶಗಳು ಅಳವಡಿಸಿಕೊಂಡಿರುವುದು ಇದು ಪ್ರಥಮ . ಈ ಹಿಂದೆ ವಿಶ್ವದಲ್ಲಿ ಎಲ್ಲ ದೇಶಗಳೂ ಮುಕ್ತ ಮಾರುಕಟ್ಟೆ ಹಾಗೂ ಉದಾರೀಕರಣಕ್ಕೆ ತೆರೆದುಕೊಂಡಿರಲಿಲ್ಲ . ಇಂಥ ಪರಿಸ್ಥಿತಿ ಇತಿಹಾಸದಲ್ಲಿ ಪ್ರಥಮವಾಗಿ ರೂಪುಗೊಂಡಿದೆ. ಹೀಗಾಗಿ ಇದರ ಒಳಸುಳಿಗಳ ಪರಿಚಯ ಯಾವ ಮಹಾ ಆರ್ಥಿಕ ತಜ್ಞನ ಹಿಡಿತಕ್ಕೂ ಸಿಗದೇ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಮುಂದೆ ಈ ಬಂಡವಾಳಶಾಹಿ ಆರ್ಥಿಕ ಬಿಕ್ಕಟ್ಟು ಯಾವ ರೀತಿ ವರ್ತಿಸುತ್ತದೆ ಎಂಬುದು ಊಹಿಸಲಸಾಧ್ಯ. ವಿಶ್ವದ ಎಲ್ಲ ರಾಷ್ಟ್ರಗಳ ನಾಯಕರೂ ಈ ನಿಟ್ಟಿನಲ್ಲಿ ತಲೆ ಕೆಡಿಸಿಕೊಂಡು ಕಂಗಾಲಾಗಿದ್ದಾರೆ. ಆರ್ಥಿಕ ನೀತಿಯಲ್ಲಿ ನೈತಿಕತೆಗೆ ಸ್ಥಾನ ಕೊಡದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವ ಕಾರಣ ಹಾಗೂ ಲಾಭಗಳಿಕೆಯೊಂದೇ ಪ್ರಧಾನವಾದಾಗ ಮತ್ತು ಅದಕ್ಕಾಗಿ ಯಾವ ಹಾದಿಯನ್ನಾದರೂ ಹಿಡಿಯಲು ಸಿದ್ಧ ಎಂಬ ಬಂಡವಾಳಶಾಹಿ ಆರ್ಥಿಕ ನೀತಿಯ ಫಲವಿದು.