ಭೂಮಿ ನುಂಗಿ ಅರಗಿಸಿಕೊಂಡವರು!

ಭೂಮಿ ನುಂಗಿ ಅರಗಿಸಿಕೊಂಡವರು!

     ಹಿಂದಿನ ಲೇಖನದಲ್ಲಿ ಸಾರ್ವಜನಿಕರಿಗೆ ತಲುಪಬೇಕಾಗಿದ್ದ ಸಾವಿರಾರು ಟನ್ನುಗಳಷ್ಟು ಪಡಿತರ ಆಹಾರ ಸಾಮಗ್ರಿಗಳು ಕಾಳಸಂತೆಯ ಮೂಲಕ ವಿಲೇವಾರಿಯಾಗಿ ಹೇಗೆ ಅಧಿಕಾರಿಗಳ ಮತ್ತು ಅಂಗಡಿ ಮಾಲಿಕರುಗಳ ಜೇಬುಗಳು ಭರ್ತಿಯಾದವು ಮತ್ತು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಹೇಗೆ ಪಾರಾದರು ಎಂಬುದನ್ನು ತಿಳಿದೆವು. ಈಗ ಭೂಗಳ್ಳತನದ ಒಂದು ಕಿರುದರ್ಶನ ಮಾಡೋಣ. ಭೂಗಳ್ಳತನ ಹೆಚ್ಚಲು ಯಾರು ಕಾರಣ, ಭೂಗಳ್ಳತನ ಮಾಡಿಯೂ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನು ನೋಡಿ ಆಶ್ಚರ್ಯಪಡೋಣ.

     ಕಳೆದ ವರ್ಷ ಒಂದು ಮಾಸಪತ್ರಿಕೆಗಾಗಿ ವಿಶೇಷ ಸಂದರ್ಶನ ಲೇಖನ ಸಿದ್ಧಪಡಿಸಲು ಒಬ್ಬರು ಸರ್ಕಾರದ ಹಿರಿಯ ಆಧಿಕಾರಿಯವರ ಸಂದರ್ಶನ ನಡೆಸಿದ್ದೆ. ಆಗ ಅವರು ಹೇಳಿದ್ದ ಈ ಸಂಗತಿ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುತ್ತದೆ. ಮೈಸೂರು ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ೫೦ ಎಕರೆ ಜಾಗವನ್ನು ೫ ಜನರಿಗೆ ಭೂರಹಿತ ಕೃಷಿಕಾರ್ಮಿಕರಿಗೆ ಮಂಜೂರು ಮಾಡಿದ್ದರು. ಭೂರಹಿತ ಕೃಷಿಕಾರ್ಮಿಕರೆಂದರೆ ಸ್ವತಃ ಜಮೀನು ಇಲ್ಲದೆ ಜೀವನೋಪಾಯಕ್ಕಾಗಿ ಕೃಷಿ ಜಮೀನುಗಳಲ್ಲಿ ಕೂಲಿ ಕೆಲಸ ಮಾಡಿ ಹೊಟ್ಟೆ ಹೊರೆಯುವವರು. ಈ ಪ್ರಕರಣದಲ್ಲಿ ಜಮೀನು ಮಂಜೂರಾತಿ ಪಡೆದ ಭೂರಹಿತ ಕೃಷಿಕಾರ್ಮಿಕರ ಪೈಕಿ ಶ್ರೀಯುತರಾದ ಸುಬ್ಬರಾವ್, ಕೃಷ್ಣಮೂರ್ತಿ, ರಜನೀಕಾಂತ್ ಇವರುಗಳೂ ಸೇರಿದ್ದರು. ಇವರು ಯಾರೂ ಮೈಸೂರು ಜಿಲ್ಲೆಯವರಲ್ಲ, ಬೆಂಗಳೂರಿನ ಸದಾಶಿವನಗರದಲ್ಲಿದ್ದವರು. ಸುಬ್ಬರಾವ್ ಅನ್ನುವವರು ಅಖಿಲ ಭಾರತ ಮಟ್ಟದ ಕೈಗಾರಿಕಾ ಸಂಸ್ಥೆಯೊಂದರ ಅಧ್ಯಕ್ಷರು. ಸುಪ್ರಸಿದ್ಧ ರಜನೀಕಾಂತ್ ಬಗ್ಗೆ ತಿಳಿಯದವರಾರು? ಎಲ್ಲರೂ ಕೋಟ್ಯಾಧೀಶ್ವರರೇ. ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಪ್ರಮಾಣಪತ್ರ ಕೊಟ್ಟವರು, ಅದನ್ನು ಒಪ್ಪಿ ಜಮೀನು ಮಂಜೂರು ಮಾಡುವವರನ್ನು ಏನೆಂದು ಹೇಳಬೇಕು? ಇವರುಗಳು ಯಾರೂ ಭೂರಹಿತ ಕೃಷಿಕಾರ್ಮಿಕರಲ್ಲ, ಕೋಟ್ಯಾಧೀಶ್ವರರು, ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಧೃಢೀಕರಣ ಪತ್ರ ಪಡೆದಿದ್ದರೆ ಅದು ತಪ್ಪು ಎಂದು ಹೇಳಲು ಯಾವ ಕಾನೂನಿನ ತಿಳಿವಳಿಕೆಯೂ ಅಗತ್ಯವಿಲ್ಲ. ಸಾಮಾನ್ಯ ತಿಳುವಳಿಕಸ್ಥನಿರಲಿ, ಮೂರ್ಖನಿಗೂ ಗೊತ್ತಾಗುವ ಸಂಗತಿಯಿದು. 

     ಪ್ರಾಮಾಣಿಕ ಅಧಿಕಾರಿಯಾಗಿದ್ದ ನಂಜನಗೂಡಿನ ಅಸಿಸ್ಟೆಂಟ್ ಕಮಿಷನರರ ಗಮನಕ್ಕೆ ಈ ವಿಷಯ ಗೊತ್ತಾಗಿ ಅವರು ಸ್ವತಃ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಜಮೀನನ್ನು ವಾಪಸು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಶಿಫಾರಸು ಮಾಡಿ ವಿವರವಾದ ವರದಿ ಸಲ್ಲಿಸಿದ್ದರು. ಅಸಿಸ್ಟೆಂಟ್ ಕಮಿಷನರರ ವರದಿಯನ್ನು ಜಿಲ್ಲಾಧಿಕಾರಿಯವರು ಹಗುರವಾಗಿ ಪರಿಗಣಿಸುವಂತಿರಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿಯವರು ಸಂಬಂಧಿಸಿದ ಮಂಜೂರಾತಿದಾರರಿಗೆ ನೋಟೀಸು ಕೊಟ್ಟು ವಿಚಾರಣೆ ನಡೆಸಿದರು. ಹಲವಾರು ತಿಂಗಳುಗಳು ವಿಚಾರಣೆಯಲ್ಲಿ ಕಳೆಯಿತು. ಅಂತಿಮವಾಗಿ ಅವರು ತೆಗೆದುಕೊಂಡ ನಿರ್ಣಯವೆಂದರೆ ಮಂಜೂರಿದಾರರು ಮಂಜೂರಾದ ಜಮೀನನ್ನು ಸಾಗುವಳಿಗೆ ತರುವುದಕ್ಕೆ ಬಹು ದೊಡ್ಡ ಹಣವನ್ನು ವೆಚ್ಚ ಮಾಡಿದ್ದಾರೆ, ಆದ್ದರಿಂದ ಜಮೀನನ್ನು ಮರಳಿ ಸರ್ಕಾರಕ್ಕೆ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು! ನಿಜವಾದ ಭೂರಹಿತ ಕೃಷಿಕಾರ್ಮಿಕರಿಗೆ ದಿನನಿತ್ಯದ ಊಟಕ್ಕೇ ತತ್ವಾರವಾಗಿರುವಾಗ, ಈ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಪ್ರತಿಷ್ಠಿತ ಭೂರಹಿತ ಕೃಷಿಕಾರ್ಮಿಕರು ಬಹಳ ದೊಡ್ಡ ಮೊತ್ತವನ್ನು ಮಂಜೂರಾದ ಜಮೀನಿಗೆ ಖರ್ಚು ಮಾಡಿದ್ದಾರೆ ಎಂದು ಮಂಜೂರಾತಿಯನ್ನು ಖಾಯಂಗೊಳಿಸಿ ಆದೇಶಿಸಿದ್ದರು.  ಈ ನಿರ್ಧಾರ ಸರಿಯಾದುದಲ್ಲವೆಂದು ಪ್ರಕರಣದ ಅರಿವಿದ್ದ ಯಾರಿಗೇ ಆಗಲಿ ಗೊತ್ತಾಗದಿರದು. ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರರು ಐ.ಎ.ಎಸ್. ಕೇಡರಿನವರಾಗಿದ್ದು, ಅವರಿಗೆ ಈ ಅದೇಶ ಸರಿಕಾಣದೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದರು. ಆ ದೂರು ಲೋಕಾಯುಕ್ತಕ್ಕೆ ಹೋಯಿತು. ವಿಚಾರಣೆಗೆ ಆದೇಶವಾಯಿತು. ಸಂಬಂಧಿಸಿದ ತಹಸೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್, ಸರ್ವೆಯರ್, ಗ್ರಾಮಲೆಕ್ಕಿಗರು ಎಲ್ಲರೂ ಅಮಾನತ್ತುಗೊಂಡರು. ಇಲಾಖಾ ವಿಚಾರಣೆಯೂ ನಡೆಯಿತು. ದೂರು ನೀಡಿದ್ದ ಅಸಿಸ್ಟೆಂಟ್ ಕಮಿಷನರರು ಸಾಕ್ಷ್ಯ ಸಹ ಹೇಳಿದ್ದರು, ಮಂಜೂರಾತಿಯಲ್ಲಿ ಅಕ್ರಮವಾಗಿದೆಯೆಂದು ತಿಳಿಸಿದ್ದರು. ದಾಖಲಾತಿಗಳೂ ಸತ್ಯ ಹೇಳುತ್ತಿದ್ದವು. ಆದರೂ, ಕೆಲವು ವರ್ಷಗಳ ನಂತರ ಎಲ್ಲರೂ ನಿರಪರಾಧಿಗಳೆಂದು ಆದೇಶವಾಯಿತು. ಕಾಲಕ್ರಮೇಣ ಪ್ರಕರಣ ಮುಚ್ಚಿಹೋಯಿತು. ಜನರೂ ಮರೆತುಬಿಟ್ಟರು. ನಂತರದಲ್ಲಿ ಆರೋಪಿಗಳಾಗಿದ್ದವರು ಸೇವಾಹಿರಿತನದ ಕಾರಣದಿಂದ ಬಡ್ತಿಯ ಬಹುಮಾನಗಳನ್ನೂ ಪಡೆದರು. ಲೋಪ ಇಲಾಖಾ ವಿಚಾರಣೆ ನಡೆಯುವ ರೀತಿಯಲ್ಲಿ, ನಡೆಸುವ ರೀತಿಯಲ್ಲಿ ಇದೆ ಎಂಬುದನ್ನು ತಿಳಿಯಲು ಕಾನೂನು ಪಂಡಿತರೇ ಆಗಬೇಕಿಲ್ಲ. ಹರ ಕೊಲ್ಲಲ್ ನರ ಕಾಯ್ವನೇ? ಹೊಲವನ್ನು ರಕ್ಷಿಸಬೇಕಾದ ಬೇಲಿಯೇ ಹೊಲವನ್ನು ಮೇಯತೊಡಗಿದರೆ ಮಾಡುವುದಾದರೂ ಏನು? ಜನರು ಜಾಗೃತರಾಗುವವರೆಗೂ ಇಂತಹ ಪರಿಸ್ಥಿತಿಗೆ ಮುಕ್ತಿ ಸಿಗದು.

-ಕ.ವೆಂ.ನಾಗರಾಜ್.

**************

ಹಿಂದಿನ ಲೇಖನ: ಲೂಟಿಕೋರರಿಗಿದು ಸುಭಿಕ್ಷ ಕಾಲ : http://sampada.net/%E0%B2%B2%E0%B3%82%E0%B2%9F%E0%B2%BF%E0%B2%95%E0%B3%8B%E0%B2%B0%E0%B2%B0%E0%B2%BF%E0%B2%97%E0%B2%BF%E0%B2%A6%E0%B3%81-%E0%B2%B8%E0%B3%81%E0%B2%AD%E0%B2%BF%E0%B2%95%E0%B3%8D%E0%B2%B7%E0%B2%95%E0%B2%BE%E0%B2%B2

Comments

Submitted by H A Patil Fri, 05/30/2014 - 09:20

ಕವಿ ನಾಗರಾಜ ರವರಿಗೆ ವಂದನೆಗಳು
ಭೂಮಿನುಂಗಿ ಅರಗಿಸಿಕೊಂಡವರು ಲೇಖನ ವರ್ತಮಾನದ ಕಟು ವಾಸ್ತವಕ್ಕೆ ಹಿಡಿದ ಕೈಗನ್ನಡಿ. ಅಕ್ರಮಗಳಿಗೆ ಕಾನೂನುಬಾಹಿರ ಕೃತ್ಯಗಳಿಗೆ ಶಿಕ್ಷೆಯಿಲ್ಲದಿರುವುದೆ ಇಂದಿನ ಈ ಅರಾಜಕತೆಗೆ ಕಾರಣವೆಂದರೆ ತಪ್ಪಾಗದು. ಸಕಾಲಿಕ ಬರಹ ಧನ್ಯವಾದಗಳು.