ಬನ್ನಿ, ಪ್ರೀತಿಯಿಂದ ಬದಲಾಯಿಸೋಣ ಭಾರತವನ್ನು

ಬನ್ನಿ, ಪ್ರೀತಿಯಿಂದ ಬದಲಾಯಿಸೋಣ ಭಾರತವನ್ನು

ಬನ್ನಿ, ಪ್ರೀತಿಯಿಂದ ಬದಲಾಯಿಸೋಣ ಭಾರತವನ್ನು

                         

ಭಾರತ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಅನ್ನಿಸುವುದು, ಈ ದೇಶದ ತುಂಬಾ ಬರಿ ಸಮಸ್ಯೆಗಳ ಸಾಗರವೆ ಇದೆ ಅನ್ನುವಂತಹ ಭಾವನೆ . ನನ್ನ ಪ್ರಶ್ನೆ, ಈ ಸಮಸ್ಯೆಗಳ ಕಾರಣಕರ್ತರು ಯಾರು ???  ಇದಕ್ಕೆ ಉತ್ತರ ಹುಡಕಲು ಹೊರಟರೆ "ಮೊಟ್ಟೆ ಮೊದಲ-ಕೋಳಿ ಮೊದಲ" ಅನ್ನೋ ಪ್ರಶ್ನೆಗಳೇ ನಮಗೆ ಸಿಗೋ ಉತ್ತರಗಳು .  ಕೆಲವರು ಸರ್ಕಾರಗಳೇ ಇದಕ್ಕೆ ಕಾರಣವೆಂದರೆ, ಈ ಸರ್ಕಾರಗಳು ರಚಿಸಲ್ಪಟ್ಟಿದ್ದು ನಮ್ಮಂತಹ ಜನ ಸಾಮಾನ್ಯರಿಂದಲ್ಲವೇ.. ಅನ್ನೋ ಪ್ರಶ್ನೆಗಳ ಸರಣಿ ಮುಂದುವರೆಯುತ್ತದೆ ವಿನಹ ಉತ್ತರ ಸಿಗುವುದಿಲ್ಲ .

ಹೋಗ್ಲಿ ಬಿಡಿ ನಾವು ಏನು ಮಹಾ  ಮಾಡೋಕೆ ಆಗುತ್ತೆ, ಈ ವ್ಯವಸ್ತೆ ಇರೋದೆ ಹೀಗೆಂದು, ಆ ವ್ಯವಸ್ಥೆಯಲ್ಲಿ ನಮ್ಮ ಪಾತ್ರವೇನು ಇಲ್ಲ ಎಂಬಂತೆ ನುಣಿಚಿಕೊಳ್ಳುತ್ತಾ  ಸಾಗಿದ್ದೇವೆ ಅಲ್ಲವೇ? ಈ ಭ್ರಷ್ಟ ವ್ಯವಸ್ತೆಯಲ್ಲಿ  ಯಾವುದಾದರು ಒಂದು ರೀತಿಯಲ್ಲಿ ನಾವು ಕೂಡ ಭ್ರಷ್ಟಾಚಾರಕ್ಕೆ ಸಹಾಯ ಮಾಡಿದ್ದೇವೆ ಅಥವಾ  ಸಹಾಯ ಪಡೆದುಕೊಂಡಿದ್ದೇವೆ ಅಲ್ಲವೇ ?. ಇಂದಿನ ನಮ್ಮ ಭಾರತದಲ್ಲಿ ಮತ್ತೊಮ್ಮೆ ಏನಾದರೂ  ಬುದ್ಧ ಹುಟ್ಟಿದ್ದರೆ "ಸಾವಿಲ್ಲದ ಮನೆಯಲ್ಲಿ ಸಾಸಿವೆ" ತೆಗೆದುಕೊಂಡು ಬಾ ಎಂದು ಹೇಳುವದರ ಬದಲು "ಭ್ರಷ್ಟಾಚಾರ ಇಲ್ಲದ ಜಾಗದಿಂದ ಅಥವಾ ಭ್ರಷ್ಟಾಚಾರವನ್ನೇ ಮಾಡದ ವ್ಯಕ್ತಿಯನ್ನು" ಹುಡುಕಿಕೊಂಡು ಬಾ ಎಂದು ಹೇಳಿರುತ್ತಿದ್ದನೇನೋ ..!

ಇಲ್ಲಿಯ ತನಕ ನಾವೆಲ್ಲರೂ ಮಲಗಿದ್ದು ಸಾಕು, ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವದನ್ನು ಕೊನೆ ಮಾಡಿ - ನಮ್ಮ ಕೈಯಲ್ಲಿ  ಏನನ್ನಾದರೂ ಮಾಡಲು ಸಾದ್ಯವೇ ಎಂದು ಆಲೋಚಿಸೋಣ.  ನಾವೆಲ್ಲರೂ ಇಂದು ಒಂದಲ್ಲ-ಇನ್ನೊಂದು ರೀತಿಯಲ್ಲಿ ಸಹಾಯ ಮಾಡುವಷ್ಟು ಶಕ್ತಿ ಇದೆ ಅಲ್ಲವೇ? ಇಂದಿನ ವ್ಯವಸ್ತೆ ಎಷ್ಟೊಂದು ಹಾಳಗಿದ್ದರು ಕೂಡ, ನೀವು ಇಂದು ಡಾಕ್ಟರ್,ಇಂಜಿನಿಯರ್,ಶಿಕ್ಷಕ,ಅಧಿಕಾರಿಗಳು, ಮತ್ತು ಬೇರೆಲ್ಲಾ ಏನೇ ಆಗಿದ್ದರು ಕೂಡ, ಅದರ ಹಿಂದೆ ಹಲವಾರು ವ್ಯಕ್ತಿಗಳ ಪರಿಶ್ರಮ  ಇರುತ್ತದೆ  ಮತ್ತು ಅವರೆಂದು ನಿಮ್ಮಿಂದ ಏನನ್ನು ಬಯಸದೆ ನಿಮ್ಮ ಒಳಿತಿಗೋಸ್ಕರ ಖುಷಿಯಿಂದ ದುಡಿದವರು ಅಲ್ಲವೆ. ಅವರೆಲ್ಲರನ್ನು ನಾವು ಎಂದಾದರು ನೆನಪಿಸಿಕೊಂಡಿದ್ದಿವಾ? ಅವರೆಲ್ಲಾ,  ನೀವು ಇಂದು ಇಂಜಿನಿಯರ್ ಅಥವಾ ಡಾಕ್ಟರ್ ಅಥವಾ ಇತ್ಯಾದಿ..  ಎಂದು ತಿಳಿದರೆ  ಅವರ ಮಕ್ಕಳೇ  ಆ ಕೆಲಸವನ್ನು ಪಡೆದಂತೆ ಆನಂದ ಪಡುವ ಎಷ್ಟೊಂದು ಮುಗ್ಧ ಮನಸಿನವರು ಅವರುಗಳಲ್ಲವೇ ? ಈ ತರಹದ ವ್ಯಕ್ತಿಗಳು  ನಿಮ್ಮ ಜೀವನದಲ್ಲಿಯೂ ಕೂಡ ಇದ್ದಾರೆ ಅಲ್ಲವೇ..?.

ನಾವು ಚಿಕ್ಕ ಮಗುವಾಗಿದ್ದಾಗ, ಅಪ್ಪ- ಅಮ್ಮಂದಿರು ತಮ್ಮ ಕೆಲಸದ ನಿಮಿತ್ತ ತಮ್ಮ ಜಮೀನುಗಳಲ್ಲಿ, ಕೆಲವರು ಕಛೇರಿಗಳಲ್ಲಿ ದುಡಿಯಲು ಹೋದಂತಹ ಸಂಧರ್ಭಗಳಲ್ಲಿ ,ನಮ್ಮನ್ನು  ನೋಡಿಕೊಳ್ಳಲು ಪಕ್ಕದ ಮನೆಯ ಅಜ್ಜಿಯೋ ಅಥವಾ ಇನ್ನಾರೋ ಬಳಿಯಲ್ಲಿ ಬಿಟ್ಟಂತಹ ಸನ್ನಿವೇಶದಲ್ಲಿ ಅವರುಗಳು ನಮ್ಮನ್ನು ಪ್ರೀತಿಯಿಂದ ನೋಡಿಕೊಂಡಿಲ್ಲವೇ ? ಎಂದಾದರು ನಾವು ಅವರನ್ನು ನೆನಸಿದ್ದಿವಾ ?
ಶಾಲೆಗಳಲ್ಲಿ, ಯಾವದೋ ವಿಷಯಕ್ಕೆ ಮೇಷ್ಟ್ರು ನಮಗೆ  ಪ್ರೀತಿಯಿಂದ ಬೆನ್ನು ತಟ್ಟಿದ್ದುಕ್ಕೆ, ಮತ್ತೊಮ್ಮೆ ಇನ್ನಾರಿಗೋ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದಕ್ಕೆ  , ಅವರು ಹೇಳಿದ ಕೆಲವೊಂದು ಪ್ರೀತಿಯ ಮಾತುಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸಿಲ್ಲವೇ ?, ಅಂತಹ ಶಾಲೆ ಮತ್ತು ಶಿಕ್ಷಕರನ್ನು ಅದೆಷ್ಟು ಮಂದಿ ನೆನಪಿಸಿಕೊಂಡಿದ್ದೇವೆ ?. ಹಾಗೆ ಸುಮ್ಮನೆ ನಾವು ನಡೆದು  ಬಂದ ಹಾದಿಯನ್ನು ಒಮ್ಮೆ ತಿರುಗಿ ನೋಡಿದರೆ, ಹೊಟ್ಟೆ ಹಸಿದಾಗ ಸ್ನೇಹಿತನ ಡಬ್ಬಿಯಿಂದ ಅವನು ಕೊಟ್ಟಂಥಹ ತಿನಿಸು , ನಿಮ್ಮ ಭಾವನೆಗಳಿಗೆ ಸ್ಪಂದಿಸಿ ಸಮಾಧಾನ ಮತ್ತು ಸಾಂತ್ವಾನ ಹೇಳಿದ ಅದೆಷ್ಟೊಂದು ಗೆಳೆಯ/ತಿ  ಯರು, ನೀವೂ ಮನೆ ಬಿಟ್ಟು ಉನ್ನತ ವ್ಯಾಸಂಗಕ್ಕೆ ಹೋದಾಗ ಅಲ್ಲಿ  ನಿಮ್ಮ ನೋವು ನಲಿವುಗಳ ಅರ್ಥ ಮಾಡಿಕೊಂಡಂತ ಎಷ್ಟೊಂದು  ಸ್ನೇಹಿತರು, ಕೆಲವೊಮ್ಮೆ,  ಕಾಲೇಜಿನಲ್ಲಿ ಲೆಕ್ಟುರರ್ ಹೇಳಿದ್ದ್ದು ಅರ್ಥವಾಗಿಲ್ಲವೆಂದೊಡನೆ ನಿಮ್ಮ ಗೆಳೆಯರೇ ನಿಮಗೆ ಶಿಕ್ಷಕರಾಗಿದ್ದು ಉಂಟು ಅಲ್ಲವೇ ?, ಆಹಾ!  ಇಂತಹ ಅದೆಷ್ಟೊಂದು ಘಟನೆಗಳು, ಇವುಗಳನ್ನು ಮೆಲಕು ಹಾಕುವದೇ ಒಂದು ಖುಷಿ ಅಲ್ಲವೇ .

ಆದರೆ , ಇಂದು  ಆ  ಶಾಲೆ,ಸ್ನೇಹಿತರು,ಶಿಕ್ಷಕರು,ನಮ್ಮನ್ನು ನೋಡಿಕೊಂಡ ಅಜ್ಜಿಯಂದಿರು, ಇನ್ನು ಅದೆಷ್ಟೋ  ಮಂದಿ ಯಾವದನ್ನು ಆಪೇಕ್ಷಿಸದೆ ಸಹಾಯ ಮಾಡಿದವರನ್ನು   ನೆನಪಿಸಿಕೊಂಡು ಅವರಿಗೆ ನಾವು ಒಂಚೂರಾದರು ನಮ್ಮ ಧನ್ಯವಾದಗಳನ್ನು ಸಹಾಯದ ಮುಖಾಂತರ ಹೇಳೋಣ ಅಲ್ಲವೇ ?

ಬೇರೆಯವರನ್ನು ಮೇಲೆತ್ತಲು ನಾವು ಒಮ್ಮೆಯಾದರು, ಯಾವ ಆಪೇಕ್ಷಗಳನ್ನು  ಇಟ್ಟುಕೊಳ್ಳದೆ   ಕೈ ಕೊಟ್ಟು ನೋಡೋಣ, ಆದರೆ ಮೇಲೆತ್ತುವ ನೆಪದಲ್ಲಿ ಕೈಗೆ ಎಣ್ಣೆ ಹಚ್ಚಿಕೊಂಡು  ಅವರು ಮೇಲೇರುವ ಕನಸನ್ನೇ  ಜಾತಿ -ಮತಗಳ ಮತ್ತು ಇನ್ಯಾವುದೋ  ಹೆಸರಲ್ಲಿ ಜಾರಿಸುವುದು ಬೇಡ.

ನಾವ್ಯಾಕೆ ಬೇರೆಯವರಿಗೆ ಸಹಾಯ ಮಾಡಬೇಕು ನಮಗೆ ಯಾರು ಮಾಡಿಲ್ಲ ಅಂತಹ ಯೋಚನೆ ಮಾಡಿದರೆ, ಮುಂದೆ ನಿಮ್ಮ ಹಾಗೇನೆ ಎಲ್ಲರೂ ಕೈ ಚೆಲ್ಲಿ ಕುಳಿತುಕೊಳ್ಳುವುದು ಸಮಂಜಸವೇ? ನಮ್ಮ ಸಮಾಜ ನಮಗೇನು ಒಳ್ಳೆಯದನ್ನು ಮಾಡಿಲ್ಲವೆಂದು, ನಾವು ಕೂಡ ಅದೇ ಸಮಾಜಕ್ಕೆ ಒಳಿತನ್ನು  ಮಾಡದೇ ಹೋದರೆ! ನಮ್ಮ ಭವ್ಯ ಭಾರತದ ಕನಸು ನನಸಾಗುವುದೆಂದು ?

ಇಲ್ಲಿಯತನಕ ಯಾರು ಕೂಡ  ತಾವು ಮಾಡುತ್ತಿರುವ ಕೆಲಸದಿಂದ ಸಂತೃಪ್ತಿ ಆಗಿದೆ ಎಂಬ ಮಾತನ್ನು ಹೇಳುವುದು, ನಿಜಕ್ಕೂ ಕನಸಿನ ಮಾತು. ಆದರೆ ನೀವು ಮಾಡುವ ಸಹಾಯದಿಂದ  ನಿಮ್ಮ ಕಣ್ಣೆದುರೇ ಆ ಮುಗ್ಧ ಮನಸ್ಸಿನವರು ಸಂತೋಷ ಪಡುತ್ತಾರಲ್ಲ ಆ ಆನಂದದ ಮಜಾ, ಸಂತೃಪ್ತಿ ಬೇರೆಲ್ಲೂ  ಎಷ್ಟು ದುಡ್ಡು ಕೊಟ್ಟರು ಸಿಗುವುದಿಲ್ಲ ..!  "ನಮ್ಮ ಸಹಾಯದಿಂದ, ಬೇರೆಯವರಿಗೆ ಆಗುವ ಸಂತೋಷವನ್ನು,  ನೋಡಿ ಅದರಿಂದ  ನಮಗೆ ಆಗುವ ಸಂತೋಷದ ಪರಿಗೆ ಎಲ್ಲೆಯೇ ಇಲ್ಲ...!!!!!

ಈ  ರೀತಿ ಎಲ್ಲರೂ ಬದಲಾಗಿದ್ದೇ ಆದರೆ,  ಕೊನೆಗೆ  ಹಣದ ಹಿಂದೆ ಬಿದ್ದು ಭ್ರಷ್ಟಾಚಾರ ಮಾಡುವುದು ನಶಿಸಿ, ಆ ಭ್ರಷ್ಟ  ಎಂಬ  ಪದದ ಬದಲಿಗೆ "ಪ್ರೀತಿ"  ಸೇರಿಕೊಂಡು  ಎಲ್ಲ ವ್ಯವಸ್ತೆಗಳು ಬದಲಾಗಿ,  ಈಗಿನ ಹಾಗೆ  ಹೆಚ್ಚು ದುಡ್ಡು ಸಂಪಾದಿಸಲು  ಬೇರೆ ದೇಶಕ್ಕೆ ಹೋಗಿ ದುಡಿಯುತ್ತಿರುವ , ದುಡಿಯಬೇಕೆಂಬ  ತುದಿಗಾಲಲ್ಲಿ ನಿಂತಿರುವ , ಬೇರೆ ದೇಶಕ್ಕೆ ಹೋಗಿ  ನಮ್ಮ ಮಕ್ಕಳು   ವ್ಯಾಸಂಗ ಅಥವಾ ಕೆಲಸ ಮಾಡಿದರೆ ಮಾತ್ರ  ನಮ್ಮ ಘನತೆ ಹೆಚ್ಚಾಗುತ್ತೆ ಅನ್ನೋ ಭಾವನೆಗಳನ್ನು ಹೊಂದಿರುವ ಕೆಲವು ಪೋಷಕರು,  ಮತ್ತು ಬೇರೆಲ್ಲಾ  ತರಹದ ಜನರ ಭಾವನೆಗಳು ನಶಿಸಿ,  ಭವ್ಯ ಭಾರತದಲ್ಲಿ  ಎಲ್ಲ ರೀತಿಯ ಸವಲತ್ತುಗಳು, ವಿದ್ಯೆಗೆ ತಕ್ಕಂತಹ ಕೆಲಸಗಳು, ಕೆಲಸಕ್ಕೆ ತಕ್ಕಂತೆ ಸಂಭಳ ಎಲ್ಲಾ  ಲಭಿಸುವಂತಹ  ಕಾಲ  ಬಹಳ ಹತ್ತಿರವಾಗಲಿ ಎಂದು ಆಶಿಸುತ್ತಾ.
                       " ಬನ್ನಿ , ಪ್ರೀತಿಯಿಂದ ಬದಲಾಯಿಸೋಣ ನಮ್ಮ ಈ ಭಾರತವನ್ನು "

Rating
No votes yet