ಪಕ್ಷಿಗಳ ಸ್ವಚ್ಚಂದದ ದಿನ !
ಶಾಲೆಗೆ ಒಯ್ಯಲು ಬಸ್ಸು ಬರುವಾ ಹೊತ್ತು
ಬಾಗಿಲು ತೆರೆದು ನಿಂತಿದ್ದೆ ಸ್ವಲ್ಪೇ ಹೊತ್ತು
ಗೂಡು ಬಿಟ್ಟ ನನ್ನ ಹಕ್ಕಿ ಹೊರಟಿದ್ದನು ಬಸ್ಸಿನೆಡೆ
ಮರದಲ್ಲಿನ ಗೂಡಿನಲ್ಲಿ ಕೇಳಿತ್ತು ಕಲವರ ಇನ್ನೊಂದೆಡೆ
ಮಣ ಭಾರದ ಬ್ಯಾಗನ್ನು ಹೊತ್ತ ಮಕ್ಕಳು ಸೊರಗಿದ್ದವು
ಗೂಡು ಬಿಟ್ಟು ಹಾರಿದ ಹಕ್ಕಿಗಳು ನಲಿಯುತ ಚಿಲಿಪಿಲಿಗುಟ್ಟಿದ್ದವು
ಕುಳಿರ್ಗಾಳಿಯಲ್ಲಿ ಚೆಂದದಿ ನಲಿದು ಹಾಡಿದ್ದವು ಆ ಹಕ್ಕಿಗಳು
ಕುಳಿರ್ಗಾಳಿಯ ಛಳಿಗೆ ಸಣ್ಣಗೆ ನಡುಗಿತ್ತು ನನ್ನ ಕೈಕಾಲ್ಗಳು
ಗೂಡ ಬಿಟ್ಟು ಇನ್ನೊಂದು ಗೂಡಿನೆಡೆ ಹೊರಟ್ಟಿದ್ದರು ನಮ್ ಹಕ್ಕಿಗಳು
ಗೂಡಿನಿಂದ ಗೂಡಿಗೆ ಹಾರಿ ಸೆಳೆದಿದ್ದರು ಗೆಳೆಯರ ಈ ಹಕ್ಕಿಗಳು
ಬೆಚ್ಚಗಿನ ಬಟ್ಟೆ ಮೈ ಕಚ್ಚಿದ್ದರೂ ನಮಗೇಕಾಗುತ್ತೋ ಛಳಿ
ಹುಟ್ಟುಡುಗೆಯಲ್ಲೇ ಸುತ್ತಾಡಿದರೂ ಇವಕ್ಕಿಲ್ಲ ಛಳಿಗಾಳಿಯ ಸುಳಿ
ಭೂಮಿ ಮೇಲೆ ಸುತ್ತೋ ನಮಗೆ ಏಕಿಷ್ಟು ಬಂಧನಗಳ ಕಾರಣ ?
ಹಾರೋ ಹಕ್ಕಿಗೆ ಒಂದೇ ನೆಲೆಯಿಲ್ಲ, ಸ್ವಚ್ಚಂದವೇ ಅವಕ್ಕೆ ತೋರಣ
ಎನ್ನ ಮನದ ಭಾವನೆಯ ತರಂಗ ಹಾಯಲು ಹಕ್ಕಿಗಳೆಡೆಗೆ
ಗೂಡೊಂದಕೆ ಹಾರ ಹೊರಟ ಹಕ್ಕಿಯೊಂದು ಪುರ್ರನೆ ಬಂದಿತ್ತು ಎನ್ನೆಡೆಗೆ
ಹಾರೋ ಹಕ್ಕಿಗೆ ಭಯವಿಲ್ಲ ಎಂಬೋ ಮಾತು ಸುಳ್ಳಯ್ಯ, ನಮ್ ಜೀವನ ನಿಮ್ ಹಾಗಿಲ್ಲ
ನಿಮ್ಮಂತೆ ನಮ್ಮೀ ಮನೆಗೆ ಬಾಗಿಲಿಲ್ಲ, ಬೀಗವಿಲ್ಲ, ಪಾಯವಿಲ್ಲ, ಅಪಾಯ ಇಲ್ಲದಿಲ್ಲ
ಛಳಿಯಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ, ನೆರಳಲ್ಲಿ ಬಸವಳಿದು ಹಾರದೇ ವಿಧಿಯಿಲ್ಲ
ಹಾರದೇ ಗುಬ್ಬನೆ ಕುಳಿತರೆ ಮನೆಯಲ್ಲಿ, ಮರಿಗಳ ಹೊಟ್ಟೆಗೆ ಊಟವಿಲ್ಲ
ನಿಮಗೆ ನಮ್ಮಲ್ಲಿ ಕೆಲವರು ಶುಭವಂತೆ, ಇನ್ನು ಹಲವರು ಅಶುಭವಂತೆ
ನಿಮ್ಮ ಪಾಪಪುಣ್ಯಗಳಿಗೆ ನಾವೇಕೆ ಶುಭಾಶುಭವೆಂಬುದೇ ಎನ್ನ ಚಿಂತೆ
ಮರದ ತುದಿಗೆ ಎತ್ತರದಾಗೆ ಕಟ್ಟಿದ್ರೇನು ಪುರುಳೆಗಳ ನಮ್ ಮನೆಯಾ?
ಕಟ್ಟಲು ನಿಮ್ಮೀ ಮನೆಯ, ಮರದ ಬುಡವನ್ನೇ ಬಗೆದೆತ್ತುವುದು ಸರಿಯಾ?
ಮನೆ ಕಳೆದುಕೊಂಡ ನಮ್ಮೀ ಆಕ್ರಂದನ, ಕೇಳುವರಿಲ್ಲದ ಅರಣ್ಯ ರೋದನ
ಮರಳಿಯತ್ನವ ಮಾಡಿ, ಬೇರೊಂದೆಡೆ ಹಾರಿ ನೆಡೆಸುವೆವು ಅಲೆಮಾರಿ ಜೀವನ
ನಮ್ಮನ್ನುರುಳಿಸಿ, ಓಡಿಸಿ, ಕೊಂದು ಕುಪ್ಪಳಿಸಿ ಬದುಕುವಿರಿ ಎನೂ ಅರಿಯದಂತೆ ನಮ್ ಉರಿ
ಎದುರಿಗೆ ಕಾಣದ ನಮ್ಮ ವರಿ, ನಿಮಗೆಂದೇ ಬಣ್ಣಕಟ್ಟಿ ತೋರುವರು ಆ ಡಿಸ್ಕವರಿ
ಗೆಳತಿಯದು ಹಂಸ ನಡಿಗೆಯಂತೆ, ಹಾಡಿದ್ದೇ ಹಾಡೋದು ಗಿಳಿಪಾಠವಂತೆ
ನೋಟವದು ಪಕ್ಷಿನೋಟವಂತೆ, ಹೋದರೆ ಹಾರೋದು ಪ್ರಾಣಪಕ್ಷಿಯಂತೆ
ಗುಬ್ಬಚ್ಚಿ ದಿನ, ಅಪ್ಪಚ್ಚಿ ದಿನ ಮಾಡುವುದ ತೊರೆದು ಮಾಡಿರಿ ದಿನವೂ ಪಕ್ಷಿಗಳ ದಿನ
ನೀವೂ ಬದುಕಿ ನಮಗೂ ಬದುಕಲು ಬಿಡಿ, ಆಗುವುದಂದೇ ನಮಗೆ ಸ್ವಚ್ಚಂದದ ದಿನ