ಅಭಿವೃದ್ಧಿ ಕಾರ್ಯಗಳು ಮತ್ತು ಜನಜಾಗೃತಿ

ಅಭಿವೃದ್ಧಿ ಕಾರ್ಯಗಳು ಮತ್ತು ಜನಜಾಗೃತಿ

    ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವಾಗಿಯೇ ಅವರು ಅಧಿಕಾರಕ್ಕೆ ಬಂದದ್ದು, ಅದು ತಮ್ಮ ಕರ್ತವ್ಯ ಎಂಬುದನ್ನು ಮರೆಯುತ್ತಾರೆ. ಇಷ್ಟಕ್ಕೂ ಆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಜನರ ಹಣದಿಂದಲೇ ಹೊರತು, ಪಕ್ಷದ ಅಥವ ನಾಯಕರುಗಳ ಅಥವ ಸ್ವಂತ ಹಣದಿಂದಲ್ಲ ಅಲ್ಲವೇ? ಜನರ ಅಭಿವೃದ್ಧಿಯ ಸಲುವಾಗಿ ಮಾಡಲೇಬೇಕಾದ ಕಾರ್ಯಕ್ರಮಗಳನ್ನು ತಮ್ಮದೇ ಕಾರ್ಯಕ್ರಮ, ತಮ್ಮ ಪಕ್ಷದ್ದೇ ಕಾರ್ಯಕ್ರಮ ಎಂದು ಬಿಂಬಿಸುವ ಪರಂಪರೆ ಪ್ರಧಾನಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರ ಅಧಿಕಾರಾವಧಿಯಿಂದ ವಿಜೃಂಭಿತವಾಗಲಾರಂಭವಾಗಿ ಈಗ ಆ ಪದ್ಧತಿ ಉತ್ತುಂಗ ಸ್ಥಿತಿಗೆ ತಲುಪಿದೆ. ದೇಶ ಅಭಿವೃದ್ಧಿಯ ಬದಲಿಗೆ ಅಧೋಗತಿಗೆ ತಲುಪುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಘೋಷಿಸುವ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದ ನಂತರದಲ್ಲಿ ತಮ್ಮ ನೇತಾರರುಗಳ ಹೆಸರಿನಲ್ಲಿ ಜಾರಿಗಳಿಸಲು ಪ್ರಾರಂಭಿಸಿದವು. ಹಿಂದಿದ್ದ ಯೋಜನೆ, ಕಾರ್ಯಕ್ರಮಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ತಮ್ಮದೇ ಕಾರ್ಯಕ್ರಮವೆಂಬಂತೆ ಬಿಂಬಿಸತೊಡಗಿದವು. ಇಂದು ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಹೆಸರಿನಲ್ಲಿ ದೇಶದಲ್ಲಿ ಎಷ್ಟು ಸರ್ಕಾರಿ ಸಂಸ್ಥೆಗಳು, ಯೋಜನೆಗಳು, ಕಟ್ಟಡಗಳು ಇವೆಯೋ ಅದರ ಲೆಕ್ಕ ಯಾರಿಗೂ ತಿಳಿದಿರಲಾರದು. ಕಾಂಗ್ರೆಸ್ಸೇತರ ಸರ್ಕಾರಗಳ ಕಥೆಯೂ ಇದೇ. ರಾಜ್ಯ ಸರ್ಕಾರಗಳೂ ಕೇಂದ್ರ ಸರ್ಕಾರದ ಹಿರಿಯಕ್ಕನ ಚಾಳಿಯನ್ನೇ ಮುಂದುವರೆಸಿಕೊಂಡು ಬರುತ್ತಿವೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮದೇ ಕಾರ್ಯಕ್ರಮವೆಂಬಂತೆ ಚುನಾವಣೆಯಲ್ಲಿ ಮತಗಳಿಕೆಯ ದೃಷ್ಟಿಯಿಂದ ಪತ್ರಿಕೆಗಳಲ್ಲಿ, ದೃಷ್ಯಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಮಾಡುವ ಸಲುವಾಗಿಯೇ ವೆಚ್ಚ ಮಾಡುವ ಕೋಟಿ ಕೋಟಿ ಸರ್ಕಾರದ ಹಣದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಜನಸಾಮಾನ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವುದಾದರೂ, ಸಂವಿಧಾನ ಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದಾದರೂ ಅವುಗಳಿಗೆ ಪಕ್ಷಗಳ ಸಾಧನೆಯೆಂಬಂತೆ ಬಿಂಬಿಸುವ ಪ್ರವೃತ್ತಿ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

     ಜನಸಾಮಾನ್ಯರ ಪ್ರಾಥಮಿಕ ಅಗತ್ಯತೆಗಳಾದ ಕುಡಿಯುವ ನೀರು ಒದಗಿಸುವುದು, ಉತ್ತಮ ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು, ಮೂಲಭೂತ ಸೌಕರ್ಯಗಳಾದ ಸಂಪರ್ಕ ರಸ್ತೆಗಳು, ಚರಂಡಿಗಳ ನಿರ್ಮಾಣ ಮತ್ತು ನಿವಃಹಣೆ, ಉತ್ತಮ ಆರೋಗ್ಯ ಪಾಲನೆ ಮತ್ತು ಸುಯೋಗ್ಯ ಚಿಕಿತ್ಸಾ ವ್ಯವಸ್ಥೆ, ಇತ್ಯಾದಿ ಹತ್ತು ಹಲವು ಪ್ರಾಥಮಿಕ ಅಂಶಗಳನ್ನು ಮುಂದಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳವರೂ ಒಟ್ಟಾಗಿ ದೇಶಕ್ಕೆ ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಯಾವುದೇ ಪಕ್ಷದ ಸರ್ಕಾರ ಬಂದರೂ ಈ ಸಾಮಾನ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದುದು ಅವುಗಳ ಮೂಲಭೂತ ಜವಾಬ್ದಾರಿಯಾಗಬೇಕು. ಈ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿ ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ ಎಂದೆಲ್ಲಾ ಹೇಳಬಾರದು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ಈ ಸಾಮಾನ್ಯ ಕಾರ್ಯಕ್ರಮಗಳಿಗೆ ಬದ್ಧರಾಗಿರುತ್ತೇವೆಂದು ಸಹಿ ಮಾಡಬೇಕು. ನಮ್ಮ ಚುನಾವಣಾ ಆಯೋಗ ಇದನ್ನು ಏಕೆ ಕಡ್ಡಾಯ ಮಾಡಬಾರದು? ಚುನಾವಣಾ ಸಮಯಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಆಗ ಗಣನೀಯವಾಗಿ ಕಡಿಮೆಯಾದಾವು. ಜನರನ್ನು ಸೋಮಾರಿಗಳನ್ನಾಗಿಸುವ ಅಗ್ಗದ ಕಾರ್ಯಕ್ರಮಗಳಿಗೆ ಕಡಿವಾಣ ಬೀಳಬೇಕು. ಇಂತಹ ಚುನಾವಣೆಯಲ್ಲಿ ಮತಗಳಿಕೆ ಉದ್ದೇಶದಿಂದ ಸರ್ಕಾರದ ಹಣದಲ್ಲಿ ಜಾರಿಗೆ ತರುವ ಅಗ್ಗದ ಜನಪ್ರಿಯ ಕಾರ್ಯಕ್ರಮಗಳಿಂದ ದೇಶದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಲ್ಲದೆ, ರೂಪಾಯ ಮೌಲ್ಯ ಕುಸಿಯುವುದಕ್ಕೂ ಕಾರಣವಾಗುತ್ತದೆ. ಒಂದು ವೇಳೆ ತಮ್ಮದೇ ಆದ, ತಮ್ಮ ಪಕ್ಷದ್ದೇ ಆದ ಹೊಸದಾದ, ಜನಸಾಮಾನ್ಯರ ಮೇಲೆ ಪರೋಕ್ಷ ಅಥವ ಅಪರೋಕ್ಷ ಆರ್ಥಿಕ ಹೊರೆ ಬೀಳುವಂತಹ ಕಾರ್ಯಕ್ರಮಗಳು, ಯೋಜನೆಗಳನ್ನು ಮಾಡಬಯಸಿದರೆ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ಅವರದೇ ಹಣ ಬಳಸಿ ಮಾಡಲಿ ಮತ್ತು ಅವರ ಹೆಸರುಗಳನ್ನೇ ಬಳಸಲಿ.

     ಯಾವುದೇ ಒಬ್ಬ ವ್ಯಕ್ತಿ ಹಳ್ಳಿಯೊಂದರಲ್ಲಿ ಸಾಯುವ ಸ್ಥಿತಿಯಲ್ಲಿದ್ದಾನೆ ಎಂದರೆ ಅವನನ್ನು ರಕ್ಷಿಸುವ ಹೊಣೆ ಸರ್ಕಾರದ್ದಾಗಿರುತ್ತದೆ. ಅವನು ಕಾಂಗ್ರೆಸ್ ಪಕ್ಷದವನು, ಬಿಜೆಪಿಯವನು, ಕಮ್ಯೂನಿಸ್ಟ್, ಸಮಾಜವಾದಿ ಪಕ್ಷದವನು, ಆ ಜಾತಿಯವನು, ಈ ಧರ್ಮದವನು, ನಮಗೆ ಮತ ನೀಡಿದವನು/ನೀಡದವನು,  ಇತ್ಯಾದಿ ನೋಡಬೇಕೇ? ಉತ್ತಮ ನೈರ್ಮಲ್ಯ ಪಾಲನೆಗೂ, ಒಳ್ಳೆಯ ಸಂಪರ್ಕ ಸಾಧನಗಳನ್ನು ಕಲ್ಪಿಸುವುದಕ್ಕೂ ರಾಜಕೀಯ ಬೆರೆಸಬೇಕೇ? ಕೆಲವು ಮಕ್ಕಳು ಕಾರುಗಳಲ್ಲಿ ಶಾಲೆಗಳಿಗೆ ಹೋಗುತ್ತಿದ್ದರೆ, ಕೆಲವರು ಶಿಕ್ಷಣ ವಂಚಿತರಾಗಿ ತುತ್ತು ಕೂಳಿಗೂ ಪರದಾಡುವ ಸ್ಥಿತಿಯಲ್ಲಿರಬೇಕೇ? ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಉಂಟಾಗುವುದು ಒಳ್ಳೆಯ ಕುಡಿಯುವ ನೀರಿನ ಪೂರೈಕೆಯ ಕೊರತೆಯಿಂದಲ್ಲವೇ? ಕುಡಿಯುವ ನೀರಿನ ಪೂರೈಕೆ ಒದಗಿಸುವುದು ಎಲ್ಲಾ ಸರ್ಕಾರಗಳ ಕರ್ತವ್ಯವಲ್ಲವೇ? ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ  ನೀಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿ ಮತ ಕೇಳುವುದು ಎಷ್ಟು ಸರಿ? ನೈರ್ಮಲ್ಯದ ಸಮಸ್ಯೆಗೆ ಪರಿಹಾರ ರೂಪಿಸುವುದಕ್ಕೆ ಯಾವ ಕಾನೂನು ಬೇಕು? ಯಾವ ಕ್ರಾಂತಿ ಆಗಬೇಕು? ಮಾಡಬೇಕೆಂಬ ಮನಸ್ಸು ಇದ್ದರೆ ಸಾಕಲ್ಲವೇ? ಇಂತಹ ಸಂಗತಿಗಳನ್ನು ಸೇರಿಸಿ ಒಂದು ಸಾಮಾನ್ಯ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲು ಒತ್ತಡ ತರಬೇಕಿದೆ. ರಾಜಕೀಯ ಧುರೀಣರ, ಸರ್ಕಾರದ ಹಣ ಬಳಸಿ ಜಾರಿಯಾಗುವ ವಿವಿಧ ಸರ್ಕಾರಿ ಯೋಜನೆಗಳಿಗೆ ಪಕ್ಷದ ನೇತಾರರುಗಳ ಹೆಸರಿಡುವುದನ್ನು ಮೊದಲು ನಿಷೇಧಿಸಬೇಕು. ಈಗ ಅಂತಹ ರಾಜಕೀಯ ನಾಯಕರುಗಳ ಹೆಸರಿನಲ್ಲಿ ಇರುವ ಸರ್ಕಾರೀ ಸಂಸ್ಥೆಗಳ ಹೆಸರುಗಳಲ್ಲಿ ಸ್ವಾತಂತ್ರ್ಯಾನಂತರದ ರಾಜಕೀಯ ನಾಯಕರ ಹೆಸರುಗಳನ್ನು ಕಿತ್ತುಹಾಕಬೇಕು. ಚುನಾವಣಾ ಆಯೋಗ ಮತ್ತು ಜನಸಾಮಾನ್ಯರ ಹಿತ ಬಯಸುವ ನೇತಾರರು ಇತ್ತ ಗಮನ ಹರಿಸಬೇಕು.

     ಅಗ್ಗದ ಪ್ರಚಾರ ಪಡೆದುಕೊಳ್ಳುವ ಪ್ರವೃತ್ತಿ ಇಂದು ಯಾವ ಹಂತಕ್ಕೆ ತಲುಪಿದೆಯೆಂದರೆ ಸಂಸದರ, ಶಾಸಕರ ಹೆಸರಿನಲ್ಲಿ ಸರ್ಕಾರಿ ಅನುದಾನಗಳು ಬಿಡುಗಡೆಯಾಗುತ್ತವೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಕೂಡ ಸದಸ್ಯರ ಹೆಸರುಗಳಲ್ಲಿ, ಅವರುಗಳು ಬಯಸಿದಂತೆ ಅನುದಾನಗಳು ಬಿಡುಗಡೆಯಾಗುತ್ತವೆಯೇ ಹೊರತು ಜನರ ಅಗತ್ಯ, ಅವಶ್ಯಕತೆಗಳಿಗನುಸಾರವಾಗಿ ಅಲ್ಲ. ಅದರಲ್ಲೂ ರಾಜಕೀಯ ತಾರತಮ್ಯವಿರುತ್ತದೆ. ಅವರುಗಳು ಬಯಸುವ ಕಾರ್ಯಕ್ರಮಗಳಿಗೆ ಅವುಗಳು ಬಳಕೆಯಾಗುತ್ತಿವೆ. ಸಂಸದರ, ಶಾಸಕರ ಹೆಸರುಗಳು ಸರ್ಕಾರಿ ಹಣದಿಂದ ಕಟ್ಟಲಾದ ಬಸ್ ನಿಲ್ದಾಣಗಳು, ಕಟ್ಟಡಗಳು, ಮುಂತಾದುವುಗಳ ಮೇಲೆ ರಾರಾಜಿಸುತ್ತವೆ. ಸಮುದಾಯ ಭವನದ ಹೆಸರಿನಲ್ಲಿ ಕಟ್ಟುವ ಕಟ್ಟಡಗಳಿಗೂ ಸಹ ಅಂತಹ ಹಣ ಹೋಗುತ್ತಿದೆ. ನಂತರದಲ್ಲಿ ಅವು ಕಲ್ಯಾಣ ಮಂಟಪಗಳಾಗಿ ಖಾಸಗಿಯವರು ಹಣ ಮಾಡಿಕೊಳ್ಳುವುದರಲ್ಲಿ ಅಂತ್ಯವಾಗುತ್ತಿದೆ. ಈ ರೀತಿಯಲ್ಲಿ ಸರ್ಕಾರಿ ಹಣ ಸಂಬಂಧಿಸಿದ ಸಂಸದರು, ಶಾಸಕರುಗಳು ತಮಗೆ ಮತ ನೀಡಿದವರು, ತಮ್ಮ ಬೆಂಬಲಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಾರಿಗೊಳಿಸುವ ಕಾಮಗಾರಿಗಳಿಗೆ ಬಳಕೆಯಾಗುತ್ತವೆ. ತಮಗೆ ಮತ ನೀಡದವರ ಮತ್ತು ವಿರೋಧಿಪಕ್ಷದವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗುವುದೇ ಇಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಲ್ಲದ ನಡೆಯಾಗುತ್ತದೆ. ಇವುಗಳನ್ನು ಸಾಮಾನ್ಯ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುವ ಕಾರ್ಯಕ್ರಮಗಳು ಎನ್ನಲಾಗದು. ಚುನಾಯಿತ ಪ್ರತಿನಿಧಿಗಳು ಹಣ ಮಾಡುವ ಸಲುವಾಗಿಯೇ ರಾಜಕೀಯ ಮಾಡುತ್ತಿರುವುದು ಮತ್ತು ಕೇವಲ ರಾಜಕೀಯ ಮಾಡಿಕೊಂಡಿದ್ದರೂ ಅವರ ಸಂಪತ್ತು ವೃದ್ಧಿಯಾಗುತ್ತಿರುವುದು ಜನಸಾಮಾನ್ಯರ ಕಣ್ಣಿಗೆ ಕಾಣುತ್ತಿರುವ ಸತ್ಯ. ಕೇವಲ ಮತಗಳಿಕೆ ದೃಷ್ಟಿಯಿಂದ ಅಗ್ಗದ ಜನಪ್ರಿಯ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದು, ಅವುಗಳಿಂದ ಸರ್ಕಾರದ ಬೊಕ್ಕಸದಿಂದ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನೈಜ ಫಲಾನುಭವಿಗಳಿಗೆ ತಲುಪುವುದರಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದದ್ದೇ.

     ದೇಶ ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ತಾಯಿಬೇರು ಭ್ರಷ್ಠಾಚಾರ. ಇದನ್ನು ತಡೆಗಟ್ಟಿದರೆ ಇತರ ಹಲವಾರು ಸಮಸ್ಯೆಗಳು ತಾವಾಗಿಯೇ ಕಣ್ಮರೆಯಾಗುತ್ತವೆ. ಜಾರಿಯಾಗುತ್ತಿರುವ ಅಭಿವೃದ್ಧಿ ಕಾರ್ಯಗಳೂ ಅಕ್ರಮ ಹಣ ಮಾಡುವ ಸಾಧನಗಳಾಗಿವೆ. ಪ್ರತಿ ಹಂತದಲ್ಲಿ ಹಣ ಸೋರಿಕೆಯಾಗಿ ಸಾಮಾನ್ಯ ಜನರವರೆಗೆ ತಲುಪುವ ಭಾಗ ಎಷ್ಟು ಎಂದು ಪರಿಶೀಲಿಸಿದರೆ ಗಾಬರಿಯಾಗುವ ಅಂಶಗಳು ಹೊರಬೀಳುತ್ತವೆ. ಸಾಮಾನ್ಯ ಜನರು ನಡೆಯುವ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳು ಮಂಜೂರಾಗಿ ಪೂರ್ಣವಾಗುವವರೆಗೆ ಗಮನಿಸಿ ಅವು ಸರಿಯಾದ ರೀತಿಯಲ್ಲಿ ಜಾರಿಯಾಗುತ್ತಿವೆಯೇ ಎಂದು ಗಮನಿಸುವ ಅಭ್ಯಾಸ ಬೆಳೆಸಿಕೊಂಡರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ. ನಮ್ಮ ಜನರು ಎಷ್ಟರಮಟ್ಟಿಗೆ ಜಾಗೃತರಾಗಿದ್ದಾರೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ ಸಾಕು. ಹಾಸನದ ಸ್ಟೇಡಿಯಮ್ಮಿನಲ್ಲಿ ಹಲವಾರು ಲಕ್ಷಗಳ ವೆಚ್ಚದಲ್ಲಿ ಒಂದು ಸುಂದರವಾದ ಸಾರ್ವಜನಿಕ ಶೌಚಾಲಯದ ಕಟ್ಟಡ ನಿರ್ಮಾಣವಾಗಿ ಹಲವಾರು ವರ್ಷಗಳೇ ಸಂದಿವೆ. ಪ್ರತಿನಿತ್ಯ ಸ್ಟೇಡಿಯಮ್ಮಿಗೆ ನೂರಾರು, ಕೆಲವೊಮ್ಮೆ ಸಾವಿರಾರು ಜನರು ಬಂದು ಹೋಗುತ್ತಾರೆ. ಅವರ ಪೈಕಿ ಯಾರಾದರೂ ಈ ಶೌಚಾಲಯಕ್ಕೆ ಎಷ್ಟು ವೆಚ್ಚ ಮಾಡಿದ್ದಾರೆ, ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಇದುವರೆವಿಗೂ ಏಕೆ ಬಿಟ್ಟುಕೊಟ್ಟಿಲ್ಲ ಎಂದು ಸ್ಟೇಡಿಯಮ್ಮಿನ ಕಟ್ಟಡದಲ್ಲೇ ಇರುವ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದ್ದಾರೆಯೇ? ಈ ಸುಂದರ ಶೌಚಾಲಯಕ್ಕಾಗಿ ಮಾಡಿದ ವೆಚ್ಚ ವ್ಯರ್ಥವೆಂದು ಯಾರಿಗಾದರೂ ಅನ್ನಿಸಿದೆಯೇ?

     ಶ್ರೀ ಎಸ್.ಎಮ್. ಕೃಷ್ಣರವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ ಜಲಸಂವರ್ಧಿನಿ ಯೋಜನೆಯನ್ನು ಉದ್ಘಾಟಿಸಿದ್ದ ಶ್ರೀ ಅಣ್ಣಾ ಹಜಾರೆಯವರು ಆ ಸಂದರ್ಭದಲ್ಲಿ ಮಾತನಾಡುತ್ತಾ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಎಂದರೆ ಏನು?" ಎಂದು ಪ್ರಶ್ನಿಸಿ ತಾವೇ ಕೊಟ್ಟಿದ್ದ ಉತ್ತರವೆಂದರೆ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಅನ್ನುವುದು ಸರಿಯಲ್ಲ; ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲುಗೊಳ್ಳುವುದು ಅನ್ನಬೇಕು." ಎಷ್ಟು ಸತ್ಯ! ಹೀಗಾಗಬೇಕೆಂದರೆ ಜನರು ಜಾಗೃತರಾಗಿರಬೇಕು. ರಾಜಕೀಯ ನಾಯಕರುಗಳು ಜನರ 'ನಾಯಕ'ರಾಗದೆ, 'ಸೇವಕ'ರಾಗಬೇಕು. ಸರ್ವಸಮ್ಮತ, ಮೂಲಭೂತ ಅತ್ಯಗತ್ಯ ಜನಪರ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷದ, ನೇತಾರರ ಕಾರ್ಯಕ್ರಮಗಳೆನಿಸದೆ ರಾಷ್ಟ್ರೀಯ ಕಾರ್ಯಕ್ರಮಗಳೆನಿಸಬೇಕು. ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲಾ ಪ್ರಜ್ಞಾವಂತರು ಮಾಡಬೇಕಿದೆ.

-ಕ.ವೆಂ.ನಾಗರಾಜ್.

Comments

Submitted by nageshamysore Sat, 06/07/2014 - 17:20

ಅಧಿಕಾರ ಶಾಹಿ ಮತ್ತು ರಾಜಕಾರಣದಲ್ಲಿ ನಡೆಯುವ ಬಹುತೇಕ ಅನೈತಿಕ ವ್ಯವಹಾರಗಳ ಮೂಲ ಭ್ರಷ್ಟಾಚಾರ ಮತ್ತು ಅದನ್ನು ಹಿಡಿತದಲ್ಲಿಡಬಲ್ಲ ಪ್ರಾಮಾಣಿಕತೆಯ ಕೊರತೆ. ಸೂಕ್ತ ಮನೋಭಾವದ ವ್ಯಕ್ತಿಗಳು ಅಧಿಕಾರದಲ್ಲಿದ್ದರೆ ಅರ್ಧ ಸಮಸ್ಯೆಯೆ ತೀರಿದಂತೆ. ಸಿಂಗಪುರದ ರಾಜಕೀಯದಲ್ಲೊಂದು ವಿಶಿಷ್ಟ ಪದ್ದತಿಯನ್ನು ಅನುಸರಿಸುತ್ತಾರೆ - ಪ್ರತಿ ರಾಜಕಾರಣಿಗು ಮಂತ್ರಿಗಳಿಗು ನಿಬ್ಬೆರಗಾಗಿಸುವಷ್ಟು ದೊಡ್ಡ ದೊಡ್ಡ ಅಂಕೆಯ ಸಂಬಳವನ್ನು ನಿಗದಿ ಮಾಡಿದ್ದಾರೆ - ಬಹುಶಃ ಆ ದೊಡ್ಡ ಸಂಬಳದ ಮುಂದೆ ಭ್ರಷ್ಟಾಚಾರ ಲಂಚದಂತಹ ಮತ್ತಾವ ಪ್ರಲೋಭನೆಯೂ ಕೆಲಸ ಮಾಡದಿರಲೆಂದು. ಅದು ಕೆಲಸ ಮಾಡುತ್ತಿರುವಂತೆಯೂ ಕಾಣುತ್ತದೆ - ಯಾಕೆಂದರೆ ಇಲ್ಲಿ ಭ್ರಷ್ಟಾಚಾರದ ಸುದ್ದಿಯೆ ಕೇಳುವುದಿಲ್ಲ, ಸರ್ವತೋಮುಖ ಪ್ರಗತಿ ಸದಾ ಸರ್ವದ ಕಾಣುತ್ತಲೆ ಇರುತ್ತದೆ. ನಮ್ಮಲ್ಲಿ ಸಂಬಳದ ಮಾತು ಬಿಡಿ - ಗಿಂಬಳ, ದುಡ್ಡು ಮಾಡುವ ಇರಾದೆಯಿಂದಲೆ ಸರ್ಕಾರಿ ಕೆಲಸಗಳಿಗೆ ಮತ್ತು ರಾಜಕೀಯ ಸೇವೆಗೆ ಬರುವ ಜನರೆ ಹೆಚ್ಚು. ಗಂಗಾ ಸ್ವಚ್ಛತೆ ಅನ್ನುವ ಹಾಗೆ ಈ ಕಲ್ಮಷವೂ ಸ್ವಚ್ಛವಾದರೆ ನಮ್ಮ ದೇಶ ಏಕಾಏಕಿ ಪ್ರಗತಿಯ ಹೆದ್ದಾರಿಯಲ್ಲಿ ಮುನ್ನುಗ್ಗುವುದು ನಿಸ್ಸಂದೇಹ.

Submitted by kavinagaraj Sat, 06/07/2014 - 21:16

In reply to by nageshamysore

ಸೂಕ್ತವಾದ ಅಭಿಪ್ರಾಯ. ಆದರೆ ಈಗ ಪರಿಸ್ಥಿತಿ ಹದಗೆಟ್ಟಿದೆ. ಕೋಟಿ ಕೋಟಿ ನುಂಗಿ ನೀರುಕುಡಿಯಲು ಮತ್ತು ಮುಂದಿನ ಚುನಾವಣೆಗೆ ಹಣ ಮಾಡಿಕೊಳ್ಳಲು ಅಧಿಕಾರದ ದುರ್ಬಳಕೆಯಾಗುತ್ತಿದೆ. ಪ್ರಧಾನ ಶಸ್ತ್ರ ಚಿಕಿತ್ಸೆಯೇ ಈ ಕಾಯಿಲೆಗೆ ಮದ್ದು! ಧನ್ಯವಾದ, ನಾಗೇಶರೇ.

Submitted by ಗಣೇಶ Mon, 06/09/2014 - 00:26

ಕವಿನಾಗರಾಜರೆ, ರಾಜಕಾರಣಿಗಳು "ತಮ್ಮ ಅಭಿವೃದ್ದಿ ಕಾರ್ಯ"ಗಳನ್ನು ಮಾಡುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಜನ ಜಾಗೃತಿಗೊಳ್ಳದಿದ್ದುದು ಅವರ ತಪ್ಪಲ್ಲ. ಇನ್ನೂ ಅನೇಕ ಎಮ್ ಎಲ್ ಎ ಗಳ ಹೆಸರಲ್ಲಿ ಮೆಡಿಕಲ್ ಕಾಲೇಜ್‌ಗಳು ಇಲ್ಲ. ತಾಲೂಕಿಗೊಂದು ಮೆಡಿಕಲ್ ಕಾಲೇಜ್(ಜನರ ಆರೋಗ್ಯಕ್ಕಾಗಿ) ಮಾಡಿದಾಗ ಎಲ್ಲಾ ರಾಜಕಾರಣಿಗಳ ಅಭಿವೃದ್ಧಿಯೂ ಆಗುವುದು. ಕಳೆದ ವರ್ಷ ನಮ್ಮ ಕರ್ನಾಟಕದಿಂದ ಗೆದ್ದ ರಾಜಕಾರಣಿಗಳು ಎಷ್ಟು ಕೋಟಿಯಲ್ಲಿ ತೂಗುತ್ತಿದ್ದರು(ಅವರ ವಿದ್ಯಾಭ್ಯಾಸದ ವಿವರವನ್ನೂ ಗಮನಿಸಿ) ಎಂಬ ಲಿಸ್ಟ್ ಇಲ್ಲಿದೆ- http://myneta.info/karnataka2013/index.php?action=show_winners&sort=default
ಈ ನಮ್ಮ ಸೇವಕರೇ ಕೋಟಿ-ಕೋಟಿ ಸಂಪಾದಿಸಿರುವಾಗ, ಮತದಾರ "ಪ್ರಭು"ಗಳಾದ ನಮ್ಮ ಹಣ ಇನ್ನೆಷ್ಟಿರಬಹುದು :)
ಭೃಷ್ಟ ವ್ಯವಸ್ಥೆ ಇರುವಾಗ ಯಾವ ಪಕ್ಷ ಗೆದ್ದು ಬಂದರೂ ಒಂದೇ. ಭೃಷ್ಟರ ನಿಷ್ಟೆ ಬದಲಾಗುವುದು ಅಷ್ಟೇ. ಆ ರಾಜಕೀಯ ನಾಯಕರ ಬದಲು ಈ ನಾಯಕರು..

Submitted by kavinagaraj Tue, 06/10/2014 - 10:10

In reply to by ಗಣೇಶ

ವ್ಯವಸ್ಥೆಯನ್ನು ಹಾಳುಗೆಡವುವಲ್ಲಿ ಶಿಕ್ಷಣ ಪ್ರಧಾನ ಪಾತ್ರ ವಹಿಸಿದೆ. ಈ 'ಶಿಕ್ಷಣ ಮಾಫಿಯಾ'ದವರನ್ನು ಗುರುತಿಸಿ ಚುನಾವಣೆಗಳಲ್ಲಿ ಬೆಂಬಲಿಸಬಾರದು. ಈ ಬಗ್ಗೆ ಆಂದೋಳನ ಆರಂಭಗೊಳ್ಳಬೇಕು. 'ಏನೋ ಬದಲಾವಣೆ ಬರಲಿ' ಎಂಬ ಆಶಯ ಜೀವಂತವಾಗಿರಲಿ. ಧನ್ಯವಾದ, ಗಣೇಶರೇ.