ಕನ್ನಡಿಯೊಳಗಿನ ನೆರಿಗೆಗಳು

ಕನ್ನಡಿಯೊಳಗಿನ ನೆರಿಗೆಗಳು

ಕನ್ನಡಿಯೊಳಗಿನ ನೆರಿಗೆಗಳು 
ನೆನಪುಗಳ ಬೆನ್ನೇರಿ ಹೊರಟಿದ್ದು 
ಕಳೆದ ಯವ್ವನದ ಮಧುರ ಸ್ಮೃತಿಗೆ

ಕನ್ನಡಿಯೇ ಇಲ್ಲವೆಂದರೆ 
ತನಗೆ ತಾನೇ ಚಿರ ಯವ್ವನಿ,
ಬೇರೆ ಯಾರು ಏನೆಂದುಕೊಂಡರೇನು

ಬೆಣ್ಣೆ ಕದಿಯುವ ಕಳ್ಳ 
ಚಿರ ಯವ್ವನದಲ್ಲೇ ಮಲಗಿಹನಲ್ಲ,,,,
ಅವನಿಗಿಲ್ಲದ್ದು ನನಗ್ಯಾಕೆ,

ಬದುಕು ನೀಡುವವ, 
ನಿಜವಾಗಿಯೂ ನೀಡಿದನೆ ?
ಅಥವಾ ಬರಿಯ ಛಾಯೆಯೇ ?

ಆತ್ಮದ ಅನಂತವನು
ದೇಹದಲ್ಲಿ ಪಯಣಿಸುವಂತೆ ಮಾಡಿ,
ಮೋಹ ಯಾಕೆ ಕೊಟ್ಟ ?

ಪ್ರಕೃತಿಯನು ನಲಿವಿಗೆ ಇಟ್ಟು
ಅದನ್ನೇ ಹರಿದು ತಿನ್ನುತ್ತಿದ್ದರೂ
ಕನ್ನಡಿಯಲಿ ಯಾಕೆ ಅಡಗಿ ಕುಳಿತ?

ಚಲಿಸುವ ಮೋಡಗಳು
ಬೇಕೆಂದರೆ ಮಳೆ ಸುರಿಯಬಲ್ಲವೇ ?
ಅಥವಾ ಅವನ ಆಜ್ಞೆ ಬೇಕೆ ?

ಮಾರುದ್ದ ಪ್ರಶ್ನೆಗಳಿಗೆ
ಅವನೇ ಉತ್ತರ !!!!

Comments