ಅಪ್ಪ

ಅಪ್ಪ

           ಸ್ಪಂದನಳಿಗೆ, ಅಪ್ಪ ಇತ್ತೀಚಿಗೆ  ಕೆಂಗಣ್ಣಿನಲ್ಲಿ ಯಾಕೆ ಗದರಿಸುತ್ತಿದ್ದರು ಗೊತ್ತಿರಲಿಲ್ಲ, ಅಪ್ಪ ಅಂದರೆ ಅದೇನೋ ಭಯ ಆಕೆಗೆ, ಹಳ್ಳಿಯ ಶಾಲೆಗೇ ಹೋಗುವಾಗ ಕೈ ಹಿಡಿದು ನಗುತ್ತಾ ನಡೆಯುತ್ತಿದ್ದ ಅಪ್ಪ, ಬೆಂಗಳೂರು ಬಂದಾದ ಮೇಲೆ ಯಾಕೆ ಬದಲಾದರು?

           ಇದ್ದಕ್ಕಿದ್ದ ಹಾಗೆ ಅವರ ಮನಸ್ಥಿತಿ ಬದಲಾಗಿತ್ತು, ಸಣ್ಣ ವಿಷಯಕ್ಕೂ ಸಿಡಿ ಮಿಡಿ, ಅಮ್ಮ ಮಾಡದ ತಪ್ಪಿಗೆ ಅವರ ಮೇಲೆ ಸುಮ್ಮನೆ ಹರಿ-ಹಾಯುತ್ತಿದ್ದರು, ಯಾವಾಗಲೂ ನಗುತ್ತಿದ್ದ ಅಪ್ಪ ಹೀಗೆಕಾದರು? ಸ್ಪಂದನಳಿಗೆ ಬಿಡದೆ ಕಾಡುವ ಪ್ರಶ್ನೆ ಅದೇ, ಅದರಲ್ಲೂ ತಾನು ಏನು ಮಾಡದೆಯೂ ತನ್ನನ್ನು ಏಕಿಷ್ಟು ದ್ವೇಷದಿಂದಾ ಕಾಣುತ್ತಿದ್ದಾರೆ? ತಿಳಿಯದಾಯಿತು ಆಕೆಗೆ, ಮನೆಯಲ್ಲಿ ಯಾವಗಲು ಬಿಗು ವಾತವರಣ, ಕಾಲೇಜು ಮುಗಿಸಿ ಒಂದು ಕ್ಷಣ ತಡವಾಗಿ ಬಂದರೂ ಪ್ರಶ್ನೆಗಳ ಸುರಿಮಳೆ, ಬೆಳಿಗ್ಗೆ ಕಾಲೇಜಿಗೆ ಹೊರಟಾಗಲು ತನಗೆ ಅರಿಯದಂತೆ ಕಾಲೇಜಿನವರೆಗೆ ಅಪ್ಪ ಹಿಂಬಾಲಿಸುತ್ತಿದ್ದುದು ಆಕೆಯ ಅರಿವಿಗೆ ಬರದೆ ಇರಲಿಲ್ಲ,

         ಅಮ್ಮನನ್ನು ಕೇಳೋಣ ಎಂದರೆ, ಮುಗ್ಧ ಅಮ್ಮನಿಗೆ ಹೇಗೆ ಗೊತ್ತಾಗಬೇಕು ಎಂದು ಸುಮ್ಮನಾದಳು, ಆದರು ಪ್ರಶ್ನೆ ತಲೆ ಕೊರೆಯುವುದ ಬಿಡಲಿಲ್ಲ, ಅಂದೊಂದು ದಿನ ಅಪ್ಪನ ಕೋಣೆಯಲ್ಲಿ ಗುಡಿಸುವಾಗ, ಹಾಸಿಗೆ ಅಡಿಯ ಅಪ್ಪನ  ಡೈರಿ ಸ್ಪಂದನಳಾ ಕೈಗೆ ಸಿಕ್ಕಿತು, ಅಪ್ಪನಿಗೂ ಡೈರಿ ಬರೆಯುವ ಹವ್ಯಾಸವಿದೆ ಎಂದು ಆಕೆಗೆ ಗೊತ್ತಿರಲಿಲ್ಲ, ಮೊದಲ ಪುಟದಲ್ಲೇ, ದೊಡ್ಡ ಅಕ್ಷರಗಳಲ್ಲಿ "ನನ್ನ ಮುದ್ದಿನ ಮಗಳು ಸ್ಪಂದನಾ" ಎಂದು ಬರೆದಿತ್ತು, ಮುಂದಿನ ಪುಟ, ಎಲ್ಲವೂ ಸಾಮಾನ್ಯವಾಗಿತ್ತು, ಹಾಗೆ ಪುಟ ಮಗುಚಿದಂತೆ "ಒಂದು ಕರಾಳ ದಿನ" ಎನ್ನುವ ತಲೆ ಬರಹದೊಂದಿಗೆ ಕಪ್ಪು ಬಣ್ಣದ ಪೆನ್ನಿನಲ್ಲಿ ಬರೆದ ಅದೇನೋ ಇತ್ತು, ಕುತೂಹಲದಿಂದ ಓದಲಾರಂಬಿಸಿದಳು,  " ಅದ್ಯಾಕೆ ಹಾಗಯ್ತೋ ಗೊತ್ತಿಲ್ಲ, ಇಂದು ಮುಂಜಾನೆ ಎಂಟನೆ ತಿರುವಿನಾ ಪಾರ್ಕಿನಲ್ಲಿ ಕುಳಿತು ಹಕ್ಕಿಯನು ನೋಡುತ್ತಿದ್ದೆ, ಅಲ್ಲಿಯೇ ದೂರದಲ್ಲಿ ಒಂದು ಹುಡುಗ, ಜೊತೆಗೊಂದು ಹುಡುಗಿ, ನನ್ನ ಮಗಳ ವಯಸ್ಸಿನವಳೇ,   ಯಾರು ಹೆತ್ತ ಹುಡುಗಿಯೊ ಏನೋ, ಆಕೆಯ ಕೈಲೊಂದು ಬಟ್ಟೆಯ ಬ್ಯಾಗಿತ್ತು, ಹುಡುಗನ ಕೈಲೂ ಒಂದು ಬ್ಯಾಗು, ಅವರ ಮಾತುಕತೆ ಬಹಳ ಬಿರುಸಾಗಿತ್ತು, ಹುಡುಗಿ ಬೇಡುತ್ತಿದ್ದಳು, ಹುಡುಗ ಕಠೊರವಾಗಿ ಏನೇನೋ ಕಿರುಚುತ್ತಿದ್ದ, ಹುಡುಗಿ ಅಳುತ್ತಾ ಬಿಕ್ಕುತ್ತಿದ್ದಳು, ಬಹುಷಃ ಮನೆ ಬಿಟ್ಟು ಹುಡುಗನೊಂದಿಗೆ ಓಡಿ ಹೋಗುವ ತಯಾರಿಯೊಂದಿಗೆ ಬಂದಿರಬೇಕು ಎನಿಸಿತ್ತು ನನಗೆ, ಟಕ್ಕನೆ ನನ್ನ ಮಗಳ ನೆನಪಾಯಿತು ನನಗೆ, ಅಯ್ಯೋ ನನ್ನ ಮಗಳೂ ಹೀಗೆ ಮಾಡಿದರೆ!!! ಗೊಂದಲದ ಗೂಡಾಯ್ತು ಮನ, ಇಲ್ಲ ನನ್ನ ಮಗಳು ಅಂತವಳಲ್ಲ, ಆಗಲೇ ಬೂಟ್ಸಿನ ಶಬ್ದಗಳು, ಸುತ್ತಲು ಪೊಲೀಸರು, ಹುಡುಗನ ಬಂದನವಾಯಿತು, ಅಲ್ಲಿಯೇ ಇದ್ದ ಪೋಲಿಸ್ ಒಬ್ಬನನ್ನು ಕೇಳಿದೆ, "ಏನಾಯ್ತು ಸಾರ್" ಎಂದು ಆಟ ಉಸುರಿದ "ಸರ್ ಇವನು ದೊಡ್ಡ ಕ್ರಿಮಿನಲ್, ಹುಡುಗಿರನ್ನು ಬಲೆಗೆ ಬೀಳಿಸಿಕೊಂಡು, ಉಪಯೋಗಿಸಿಕೊಂಡು, ಕೊನೆಗೆ ಅವರೊಂದಿಗೆ ಓಡಿ ಹೋಗುವ ನಾಟಕ ಮಾಡಿ ಹೊರ ದೇಶದಲ್ಲೆಲ್ಲಾದರು ಮಾರಿ ಬಿಡುತ್ತಾನೆ ಸಾರ್, ನಾವು ಇವನನ್ನು ಹುಡುಕಲು ಶುರು ಮಾಡಿ ಒಂದು ವರ್ಷ ಆಯಿತು, ಆಗಲೇ ಎಂಟು ಜನ ಹುಡುಗಿಯರನ್ನು ಮಾರಿ ಬಂದಿದ್ದಾನೆ, ಇವತ್ತು ನಿಖರ ಮಾಹಿತಿಯೊಂದಿಗೆ ಬಂದೆವು, ಸಿಕ್ಕಿಬಿದ್ದ ಲೋಫರ್" ಎಂದು, ನನ್ನ ಕೈ ಕಾಲು ನಡುಗಲಾರಂಬಿಸಿತು, ಆ ಹುಡುಗಿಯ ಕಡೆ ನೋಡಿದೆ, ಅಳುತ್ತಾ ಅಲ್ಲೇ ಕುಸಿದಿದ್ದಳು, ಆ ಹುಡುಗಿಯ ತಂದೆ ತಾಯಿ ನೆನಪಾದರು ನನಗೆ, ಅಯ್ಯೋ ವಿದಿಯೇ, ಎಷ್ಟು ಕಷ್ಟ ಪಟ್ಟು ಸಾಕಿರಬಹುದು ಅವರು, ಬರಿಯ ಬಣ್ಣಕ್ಕೆ ಮರುಳಾಗಿ ಹೋದಳಲ್ಲ ಈ ಹುಡುಗಿ ಎಂದು, ಆಗ ಮತ್ತೊಮ್ಮೆ ನನ್ನ ಮಗಳ ನೆನಪಾಯಿತು, ಅದ್ಯಾಕೋ ಇಂದು ಸಂಜೆ ಕಾಲೇಜಿನಿಂದ ಬಂದ ನನ್ನ ಮಗಳ ಮುಖ ನೋಡಿದಾಗ ತಾನಾಗೆ ಕೋಪ ಉಕ್ಕಿ ಬಂದಿತ್ತು, ಚಿಕ್ಕ ಹೆಜ್ಜೆಗಳನ್ನಿತ್ತು ನನ್ನೊಂದಿಗೆ ನಡೆದ ನನ್ನ ಮಗಳು, ಯಾರದೋ ಬಲೆಗೆ ಬೀಳುತ್ತಾಳೋ ? ಭಯ ಆವರಿಸಿತು, ಆಕೆ ನನಗೆ ಮೋಸ ಮಾಡೇ ಮಾಡುತ್ತಾಳೆ ಎಂದು ಒಂದು  ಮನಸ್ಸು ಬಲವಾಗಿ ಹೇಳುತ್ತಿದೆ, ಇನ್ನೊಂದು ಮನಸ್ಸು ನಿನ್ನ ಮಗಳು ಅಂತವಳಲ್ಲ ಎಂದು ಒತ್ತಿ ಹೇಳುತ್ತಿತ್ತು, ಏನು ಮಾಡಲಿ ನಾನು, ಛೆ ಯಾಕೆ ಬಂತು ಈ ಕರಾಳ ದಿನ ನನ್ನ ಜೀವನದಲ್ಲಿ,?" ಓದಿದ ಸ್ಪಂದನ ಒಂದು ಕ್ಷಣ ಕಣ್ಮುಚ್ಚಿ ಅಪ್ಪನನ್ನು ನೆನಿಸಿಕೊಂಡಳು, ಅಪ್ಪನ ತುಮುಲ ಕಂಡು ಒಂದು ಕಡೆ ಚಿಕ್ಕ ಅಳು, ಇನ್ನೊಂದೆಡೆ ಮುಗುಳ್ನಗು ಆಕೆಗೆ,

          ಅಂದು ಅಪ್ಪ ಬರುವವರೆಗೂ ಕಾಯುತ್ತಿದ್ದ ಸ್ಪಂದನಾ ಅಪ್ಪ ಬಂದೊಡನೆ, ಅಪ್ಪನನ್ನೆಳೆದು ಕುಳ್ಳಿರಿಸಿ ಅವರ ತೊಡೆಯ ಮೇಲೆ ತಲೆ ಇಟ್ಟು ಸುಮ್ಮನೆ ಮಲಗಿದಳು, ಅಪ್ಪನ ಕೈ ಆಕೆಯನ್ನು ನೇವರಿಸಿತು, ಮಾತುಕತೆ ಏನಿಲ್ಲ, ತುಂಬಾ ಹೊತ್ತಿನ ನಂತರ ಸ್ಪಂದನ ನಿಧಾನವಾಗಿ ಅಪ್ಪನ ಕೈ ಹಿಡಿದು "ಅಪ್ಪ ನಿನ್ನ ಜೀವನದಲ್ಲಿ ಎಂದಿಗೂ ಆ ಕರಾಳ ದಿನ ಬರಲಾರದು" ಎಂದಷ್ಟೇ ಹೇಳಿ ಸುಮ್ಮನಾದಳು, ಅಪ್ಪನ ಕಣ್ಣಂಚಲ್ಲಿ ನೀರು, ಮತ್ತೆ ಮಾತು ಕಥೆ ಇಲ್ಲ, ಅದೇ ಮೌನ, ಅಮ್ಮ ಊಟಕ್ಕೆ ಕರೆಯುವವರೆಗೂ, 

Comments

Submitted by ಗಣೇಶ Sun, 06/15/2014 - 22:48

ನವೀನರೆ, "ವಿಶ್ವ ಅಪ್ಪಂದಿರ ದಿನ"ಕ್ಕೆ ಉತ್ತಮ ಕತೆಯ ಕೊಡುಗೆ.
ವಿಜಯವಾಣಿ ಪತ್ರಿಕೆಯ ಲೇಡಿಸ್ ಡೈರಿಯಲ್ಲಿ "ಡಾ. ಕೆ ಎಸ್. ಚೈತ್ರ" ಅವರು "ವಿಶ್ವ ಅಪ್ಪಂದಿರ ದಿನ"ಕ್ಕಾಗಿ ಬರೆದ ಬರಹವೂ ನನಗೆ ಇಷ್ಟವಾಯಿತು- http://epapervijayavani.in/Details.aspx?id=14178&boxid=14338234

Submitted by naveengkn Mon, 06/16/2014 - 09:36

In reply to by ಗಣೇಶ

ಗಣೇಶ್ ಸರ್, ಕಥೆಯ ಮೆಚ್ಚುಗೆಗೆ ತುಂಬಾ ಧನ್ಯವಾದಗಳು, ಹಾಗು ಚೈತ್ರ ಅವರ ಬರಹ ಮನಮುಟ್ಟುವಂತಿತ್ತು, ಅದನ್ನು ಇಲ್ಲಿ ಹಂಚಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು.

Submitted by kavinagaraj Fri, 06/20/2014 - 07:02

ಅಪ್ಪನ ಸಹಜ ಆತಂಕ! ಮಗಳಿಗೆ ಅಪ್ಪನ ಡೈರಿ ಸಿಗದಿದ್ದರೆ?
ಒಟ್ಟಾರೆ ಸುಂದರ ಸಂದೇಶ!

Submitted by naveengkn Fri, 06/20/2014 - 14:05

In reply to by kavinagaraj

ಕವಿಗಳೇ ಪ್ರತಿಕ್ರಿಯೆಗೆ ಧನ್ಯವಾದಗಳು , ಡೈರಿ ಸಿಗದಿದ್ದರೆ !!!!! ಹೌದಲ್ಲವೇ, ಆಲೋಚಿಸಿಲ್ಲ ಕವಿಗಳೇ, ಹರೆಯದ ಮಗಳ ಅಪ್ಪನ ತಲ್ಲಣ ಮಾತ್ರ ಮನಸಿಗನ್ನಿಸಿತು,,, ಹಾಗಾಗಿ,,,,